ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಮುಂದೆ ಕರ್ನಾಟಕ ತಲೆತಗ್ಗಿಸುವಂತಾಗಿದೆ

Last Updated 13 ಜನವರಿ 2011, 9:45 IST
ಅಕ್ಷರ ಗಾತ್ರ

ಪ್ರಿಯ ಕನ್ನಡಿಗರೇ, ಕರ್ನಾಟಕದಿಂದ ಹೊರ ರಾಜ್ಯಗಳಿಗೆ ಪ್ರವಾಸ ಹೋಗುವ ಕಾರ್ಯಕ್ರಮಗಳೇನಾದರೂ ಇದ್ದರೆ ಸದ್ಯಕ್ಕೆ ರದ್ದುಪಡಿಸಿ. ಹೋಗಲೇ ಬೇಕಾಗಿದ್ದರೆ ತಪ್ಪಿಯೂ ನೀವು ಕನ್ನಡಿಗರೆಂದು ಎಲ್ಲಿಯೂ ಹೇಳಿಕೊಳ್ಳಬೇಡಿ.

ಇದು ನನ್ನ ಅನುಭವ ಪ್ರೇರಿತ ಸಲಹೆ. ಕ್ಷಮಿಸಿ, ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಬಿಜೆಪಿಯನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ತಂದಿದ್ದಕ್ಕಾಗಿ ಇಷ್ಟು ತ್ಯಾಗವನ್ನು ಕನ್ನಡಿಗರು ಮಾಡಲೇಬೇಕಾಗಿದೆ. ದೆಹಲಿ ಬಿಟ್ಟುಬಂದ ನಂತರ ಎರಡು ವಾರಗಳ ಹಿಂದೆ ಮೊದಲ ಬಾರಿ ಅಲ್ಲಿಗೆ ಹೊರಟಾಗ ಮನಸ್ಸಲ್ಲಿದ್ದದ್ದು ಹಳೆಯ ಗೆಳೆಯರನ್ನು ಕಾಣುವ ಸಂಭ್ರಮ ಮಾತ್ರ.

ಆದರೆ ಅಲ್ಲಿಗೆ ಹೋದಾಗ ಆದ ಅನುಭವವೇ ಬೇರೆ. ಎದುರಾದ ಪರಿಚಯದವರ್ಯಾರೂ ಉಭಯ ಕುಶಲೋಪರಿ ವಿಚಾರಿಸಲಿಲ್ಲ. ಅವರಿಂದ ತೂರಿಬರುತ್ತಿದ್ದದ್ದು ಯಡಿಯೂರಪ್ಪನವರನ್ನು ಗುರಿಯಾಗಿಟ್ಟುಕೊಂಡ ಪ್ರಶ್ನೆಗಳ ಬಾಣಗಳು. ‘ಯೆ ಯಡಿಯೂರಪ್ಪಕಾ ಕ್ಯಾ ಗೋಟಾಲಾ ಹೈ ಯಾರ್?’...... ಆಪ್‌ಕಾ ಕರ್ನಾಟಕ್ ಬಿಹಾರ್‌ಕೋ ಬಿ ಪೀಚೆ ಚೋಡ್ ದಿಯಾ..... ಯೇ ಯಡಿಯೂರಪ್ಪ ಕ್ಯಾ ಅನ್‌ಪಡ್ ಹೈ, ಸಬ್‌ಕುಚ್ ಇತ್ನಾ ನಂಗಾನಾಚ್ ಕರ್ ರಹಾ ಹೈ?... ವೋ ಬಾರ್‌ಬಾರ್ ರೋತಾ ಕ್ಯೋಂ ಹೈ ಯಾರ್? ಇತ್ಯಾದಿ ಪ್ರಶ್ನೆಗಳ ಬಾಣಗಳಿಂದ ದೆಹಲಿಯ ಜನ ಮುಖ್ಯವಾಗಿ ಪತ್ರಕರ್ತರು ಚುಚ್ಚಿಚುಚ್ಚಿ (ವಿಕೃತ?) ಆನಂದ ಅನುಭವಿಸತೊಡಗಿದ್ದರು. 

ಇವರ ಸಹವಾಸವೇ ಬೇಡ ಎಂದು ದೆಹಲಿಯಲ್ಲಿರುವ ಕನ್ನಡಿಗರನ್ನು ಮಾತನಾಡಿಸಲು ಹೋದರೆ ಅವರು ಆಗಲೇ ಜೀವನದಲ್ಲಿಯೇ ಜುಗುಪ್ಸೆ ಬಂದವರಂತೆ ಮಾತನಾಡುತ್ತಿದ್ದರು.

 ಕಚೇರಿಯಲ್ಲಿದ್ದ ಯುಪಿ-ಬಿಹಾರ್-ಪಂಜಾಬ್‌ನ ಸಹದ್ಯೋಗಿಗಳನ್ನು ಅವರ ರಾಜ್ಯಗಳ ರಾಜಕಾರಣಿಗಳ ಭ್ರಷ್ಟಾಚಾರವನ್ನೆತ್ತಿಕೊಂಡು ಕೆಣಕುತ್ತಾ, ಗೇಲಿಮಾಡುತ್ತಾ ಮಜಾ ತೆಗೆದುಕೊಳ್ಳುತ್ತಿದ್ದ ಕನ್ನಡಿಗರ ವಿರುದ್ಧ ಅವರೆಲ್ಲ ಈಗ ಕೂಡಿ ಸೇಡು ತೀರಿಸಿಕೊಳ್ಳುವವರಂತೆ ಮೂರೂ ಹೊತ್ತು, ಯಡಿಯೂರಪ್ಪ ಹೆಸರೆತ್ತಿ ಚುಚ್ಚುತ್ತಿದ್ದಾರೆ. ರಾಷ್ಟ್ರಮಟ್ಟದ ಪತ್ರಿಕೆಗಳಲ್ಲಿ ಭೂ ಹಗರಣಗಳ ಧಾರಾವಾಹಿ ಪ್ರಕಟವಾಗತೊಡಗಿದ ನಂತರವಂತೂ ಹೊರ ರಾಜ್ಯಗಳ ಕನ್ನಡಿಗರ ಪರಿಸ್ಥಿತಿ ಚಿಂತಾಜನಕವಾಗಿದೆ.

ಕರ್ನಾಟಕದೊಳಗಿನ ಹುಳುಕುಗಳೇನೇ ಇರಲಿ, ಹೊರ ರಾಜ್ಯಗಳಲ್ಲಿ ಕನ್ನಡಿಗರು ತಲೆತಗ್ಗಿಸಿ, ಮುಖತಪ್ಪಿಸಿಕೊಂಡು ಅಡ್ಡಾಡುವಂತಹ ಇಂದಿನ ಪರಿಸ್ಥಿತಿ ಎಂದೂ ಇರಲಿಲ್ಲ. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಮುಂಬೈನಲ್ಲಿ ಕನ್ನಡಿಗರೆಂದರೆ ವಿಶ್ವಾಸ, ಅಭಿಮಾನ ಜತೆಗೆ ಸ್ವಲ್ಪ ಅಸೂಯೆ ಇದೆ. 

 ಹೋಟೆಲ್, ಬ್ಯಾಂಕಿಂಗ್, ಚಿತ್ರರಂಗ, ಉದ್ಯಮ ಸೇರಿದಂತೆ ಸರ್ವಾಂತರಯಾಮಿಗಳಾಗಿ (ಮಿಸ್‌ವರ್ಲ್ಡ್‌ನಿಂದ ಅಂಡರ್ ವರ್ಲ್ಡ್‌ವರೆಗೆ) ಮೆರೆಯುತ್ತಿರುವ (ದಕ್ಷಿಣ)ಕನ್ನಡಿಗರು ಇದಕ್ಕೆ ಕಾರಣ. ದೆಹಲಿಯಲ್ಲಿ ಮುಂಬೈ ರೀತಿಯ ವಿಶೇಷ ಗೌರವ ಇಲ್ಲದೆ ಇದ್ದರೂ ಕನ್ನಡಿಗರ ಬಗ್ಗೆ ಕೀಳು ಭಾವನೆ ಎಂದೂ ಇರಲಿಲ್ಲ. ಕನ್ನಡಿಗರೆಂದರೆ ಜಗಳಗಂಟರು (ನೆರೆ ರಾಜ್ಯಗಳ ಜತೆಗಿನ ನದಿನೀರಿನ ಜಗಳ) ಮತ್ತು ಭಾಷಾಂಧರು (ಬೆಳಗಾವಿ ಗಡಿ ತಂಟೆ, ಇಂಗ್ಲಿಷ್ ಶಾಲೆಗಳಿಗೆ ವಿರೋಧ) ಎಂಬ ಆರೋಪ ಆಗಾಗ ದೆಹಲಿಯಲ್ಲಿ ಕೇಳಿಬರುವುದುಂಟು.

ಹೆಚ್ಚು ಹುರುಳಿಲ್ಲದ, ಅರ್ಧ ತಿಳುವಳಿಕೆಯ, ಸ್ವಲ್ಪ ಪೂರ್ವಗ್ರಹದ ಈ ಆರೋಪವನ್ನು ಸಮರ್ಥ ವಾದದೊಂದಿಗೆ ಎದುರಿಸುವುದು ಕಷ್ಟದ ಕೆಲಸವೇನಲ್ಲ. ಇದನ್ನು ಹೊರತುಪಡಿಸಿದರೆ ಕನ್ನಡಿಗರನ್ನು ಕೆಣಕಲು ದೆಹಲಿ ಮಂದಿ ಬಳಸುತ್ತಾ ಬಂದಿರುವುದು ಎಚ್.ಡಿ.ದೇವೇಗೌಡರನ್ನು. ಗೌಡರ ಬಗೆಗಿನ ಕನ್ನಡಿಗರೇತರರ ದುರಭಿಪ್ರಾಯದಲ್ಲಿ ಸತ್ಯಾಂಶ ಸ್ವಲ್ಪ ಇದ್ದರೂ, ಹೆಚ್ಚಿನದ್ದು ಪೂರ್ವಗ್ರಹ.

 ಪಂಚೆ ತೊಟ್ಟ ದಕ್ಷಿಣ ಭಾರತೀಯನೊಬ್ಬ ಪ್ರಧಾನಿಯಾಗಿಬಿಟ್ಟರಲ್ಲಾ ಎಂಬ ಅನೇಕರ ಹೊಟ್ಟೆ ಉರಿ ಇನ್ನೂ ತಣ್ಣಗಾಗಿಲ್ಲ. ಗೌಡರ ಶತ್ರುಗಳಾದ ಐಟಿ-ಬಿಟಿ ಉದ್ಯಮಿಗಳು, ದಿವಂಗತ ರಾಮಕೃಷ್ಣ ಹೆಗಡೆ, ಎಸ್.ಎಂ.ಕೃಷ್ಣ ಮೊದಲಾದವರೆಲ್ಲ ದೆಹಲಿಯ ಇಂಗ್ಲಿಷ್ ಮಾಧ್ಯಮಗಳ ಪತ್ರಕರ್ತರ ಕಣ್ಮಣಿಗಳಾಗಿರುವುದು ಕೂಡಾ ಇದಕ್ಕೆ ಕಾರಣ.

ಆದರೆ ಹೊರರಾಜ್ಯಗಳಲ್ಲಿ ಕರ್ನಾಟಕದ ಬಗ್ಗೆ ಒಟ್ಟಭಿಪ್ರಾಯ ಯಾವತ್ತೂ ಕೆಟ್ಟದಾಗಿರಲಿಲ್ಲ. ಎಸ್.ಎಂ.ಕೃಷ್ಣ ಅವರ ಬಗ್ಗೆ ರಾಜ್ಯದ ಜನರಲ್ಲಿ ಏನೇ ಅಭಿಪ್ರಾಯಗಳಿರಬಹುದು, ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷ ಸೋತಿರಲೂ ಬಹುದು,  ಭ್ರಷ್ಟಾಚಾರ, ಸ್ವಜನಪಕ್ಷಪಾತದ ಆರೋಪಗಳೂ  ಅಲ್ಲಿ ಇಲ್ಲಿ ಕೇಳಿಬಂದಿರಬಹುದು.

ಆದರೆ ರಾಷ್ಟ್ರಮಟ್ಟದಲ್ಲಿ ಕೃಷ್ಣ ಅವರು ಕರ್ನಾಟಕಕ್ಕೆ ಒಂದು ಇಮೇಜ್ ತಂದುಕೊಟ್ಟಿದ್ದರು ಎನ್ನುವುದು ಸುಳ್ಳಲ್ಲ. ಇದರಿಂದಾಗಿ 1999ರಿಂದ 2004ರ ವರೆಗಿನ ಅವಧಿಯಲ್ಲಿ ಹೊರರಾಜ್ಯಗಳಲ್ಲಿ ಕನ್ನಡಿಗರೆಂದಾಕ್ಷಣ ಜನರ ಮುಖ ಅರಳುತ್ತಿತ್ತು. ಕರ್ನಾಟಕ ಎಂದರೆ ಬೆಂಗಳೂರು ಮಾತ್ರವೇನೋ ಎಂದು ತಿಳಿದುಕೊಂಡ ಹೊರರಾಜ್ಯದ ಜನರ ಅಜ್ಞಾನವೂ ಇದಕ್ಕೆ ಕಾರಣ ಇರಬಹುದು.

 ಬೆಂಗಳೂರು ಬಗ್ಗೆ ಇದ್ದ   ‘ಐಟಿ ಕ್ಯಾಪಿಟಲ್’  ‘ಸಿಲಿಕಾನ್ ಸಿಟಿ’ ಎಂಬಿತ್ಯಾದಿ ಬಿರುದಾವಲಿಗಳೂ ಕನ್ನಡಿಗರ ಬಗ್ಗೆ ಇತರರು ಹೊಂದಿರುವ ಅಸೂಯೆಭರಿತ ಅಭಿಮಾನಕ್ಕೆ ಕಾರಣವಾಗಿತ್ತು. ಅದರ ನಂತರದ ದಿನಗಳಲ್ಲಿ ಮಂಕಾಗುತ್ತಾ ಬಂದ ಕರ್ನಾಟಕದ ಇಮೇಜ್ ಈಗ ಪಾತಾಳಕ್ಕೆ ಬಿದ್ದಿದೆ.

‘ಭಾರತದ ಅತ್ಯಂತ ಭ್ರಷ್ಟ ರಾಜ್ಯ -ಕರ್ನಾಟಕ’ ಎಂದು ಕೆಲವು ವಾರಗಳ ಹಿಂದೆ ಔಟ್‌ಲುಕ್ ಇಂಗ್ಲಿಷ್ ವಾರಪತ್ರಿಕೆ ಮುಖಪುಟದ ವರದಿ ಮಾಡಿದಾಗ ದೇಶದ ಜನ ಮಾತ್ರವಲ್ಲ, ಕರ್ನಾಟಕದ ಜನ ಕೂಡಾ ಬೆಚ್ಚಿಬಿದ್ದಿದ್ದರು. (ಕನ್ನಡಿಯಲ್ಲಿ ನಮ್ಮದೇ ಮುಖ ನೋಡಿದಾಗ ಒಮ್ಮೊಮ್ಮೆ ಹಾಗಾಗುತ್ತದೆ). ಆ ವಾರಪತ್ರಿಕೆಯ ಸಂಪಾದಕರು ಕನ್ನಡಿಗರಾಗಿರುವುದು ಕರ್ನಾಟಕದ ಬಗ್ಗೆ ಅದರಲ್ಲಿ ಪ್ರಕಟವಾಗಿರುವ ವರದಿಗಳಿಗೆ ಹೆಚ್ಚಿನ ವಿಶ್ವಾಸಾರ್ಹತೆಯನ್ನು ತಂದುಕೊಟ್ಟಿತ್ತು.

ಕರ್ನಾಟಕದ ಹಿಂದಿನ ಮುಖ್ಯಮಂತ್ರಿಗಳು ಯಾರೂ ಭ್ರಷ್ಟರಾಗಿರಲಿಲ್ಲವೇ? ದೇವರಾಜ ಅರಸು ಅವರಿಂದ ಹಿಡಿದು ಎಸ್.ಎಂ.ಕೃಷ್ಣ ಅವರವರೆಗೆ ಎಲ್ಲರ ವಿರುದ್ಧವೂ ಭ್ರಷ್ಟಾಚಾರದ ಆರೋಪಗಳಿದ್ದವು ನಿಜ. ಆದರೆ ಯಡಿಯೂರಪ್ಪನವರ ಬಗ್ಗೆ ವಿಚಾರಿಸುವವರೆಲ್ಲರೂ ಭ್ರಷ್ಟಾಚಾರದ ಜತೆಯಲ್ಲಿ ‘ಅವರು ಅಷ್ಟೊಂದು ದಡ್ಡನಾ?’ ಎನ್ನುವ ಪ್ರಶ್ನೆಯನ್ನು ತಪ್ಪದೆ ಕೇಳುತ್ತಾರೆ.

ಸತ್ಯ ಹೇಳುವುದಕ್ಕೆ, ಪ್ರಾಮಾಣಿಕವಾಗಿ ಬದುಕುವುದಕ್ಕೆ ಬಹಳ ಬುದ್ದಿವಂತಿಕೆಯೇನು ಬೇಕಾಗಿಲ್ಲ. ಆದರೆ ಸುಳ್ಳು ಹೇಳುವುದಕ್ಕೆ, ಅಪ್ರಮಾಣಿಕರಾಗಿ ಬದುಕುವುದಕ್ಕೆ, ಭ್ರಷ್ಟಾಚಾರದಲ್ಲಿ ತೊಡಗುವುದಕ್ಕೆ ಬುದ್ದಿವಂತಿಕೆ ಬೇಕಾಗುತ್ತದೆ. ಯಾಕೆಂದರೆ ಆತ ಸದಾ ಸಿಕ್ಕಿಬೀಳುವ ಅಪಾಯದಿಂದ ತಪ್ಪಿಸಿಕೊಳ್ಳುವ ದಾರಿಯ ಹುಡುಕಾಟದಲ್ಲಿರಬೇಕಾಗುತ್ತದೆ. 

ಹಗರಣಗಳಲ್ಲಿ ಸಿಕ್ಕಿಹಾಕಿಕೊಂಡ ಭ್ರಷ್ಟರನ್ನೆಲ್ಲ ಒಮ್ಮೆ ನೆನಪು ಮಾಡಿಕೊಳ್ಳಿ, ಅವರೆಲ್ಲರೂ ಬುದ್ದಿವಂತರೇ ಆಗಿರುತ್ತಾರೆ. ಆದ್ದರಿಂದಲೇ ಬಹಳಷ್ಟು ಭ್ರಷ್ಟರು ಬೇನಾಮಿ ಆಸ್ತಿ ಮಾಡಿಕೊಂಡಿರುತ್ತಾರೆ. ಇದರಿಂದ ಗಳಿಸಿದ್ದನ್ನು ಕಳೆದುಕೊಳ್ಳುವ ಅಪಾಯ ಇದೆ ನಿಜ, ಆದರೆ ಸಿಕ್ಕಿಬೀಳುವ ಅಪಾಯ ಕಡಿಮೆ.

ಇಂತಹ ಬುದ್ದಿವಂತ ಭ್ರಷ್ಟರು ಮನಸ್ಸು ಮಾಡಿದರೆ ಸಮಾಜಕ್ಕೆ ಒಳ್ಳೆಯದನ್ನು ಮಾಡಬಲ್ಲರು, ಉತ್ತಮ ಆಡಳಿತವನ್ನೂ ಕೊಡಬಲ್ಲರು. ಇದಕ್ಕೆ ಉತ್ತಮ ಉದಾಹರಣೆ-ಲಾಲುಪ್ರಸಾದ್. ಭ್ರಷ್ಟನೆಂದು ಬಿಹಾರದಿಂದ ಹೊರದೂಡಲ್ಪಟ್ಟ ಲಾಲುಪ್ರಸಾದ್ ರೈಲು ಸಚಿವ ಖಾತೆಯನ್ನು ದೇಶ-ವಿದೇಶದ ಜನ ಬೆರಗಾಗಿ ನೋಡುವಂತೆ ಸಮರ್ಥವಾಗಿ ನಿರ್ವಹಿಸಿದರು.

ಇನ್ನಷ್ಟು ಉದಾಹರಣೆಗಳು ಬೇಕಿದ್ದರೆ ಶರದ್ ಪವಾರ್, ಕರುಣಾನಿಧಿ,ಜಯಲಲಿತಾ, ಮಾಯಾವತಿ ಮೊದಲಾದವರನ್ನು ಹೆಸರಿಸಬಹುದು. ಇವರೆಲ್ಲರಿಗೂ ಎರಡೆರಡು ಮುಖಗಳಿವೆ. ಒಂದು-ಉತ್ತಮ ಆಡಳಿತಗಾರರದ್ದು, ಇನ್ನೊಂದು ಭ್ರಷ್ಟಚಾರಿಯದ್ದು. ಒಳ್ಳೆಯ ಆಡಳಿತ ಕೊಟ್ಟಾಗ ಜನ ಉದಾರಿಗಳಾಗಿ ಆಡಳಿತಗಾರರ ಭ್ರಷ್ಟತೆಯನ್ನು ಮನ್ನಿಸುವುದುಂಟು.

ಪವಾರ್, ಕರುಣಾನಿಧಿ, ಮಾಯಾವತಿ ಮೊದಲಾದವರೆಲ್ಲ ಮತ್ತೆಮತ್ತೆ ಚುನಾವಣೆಯಲ್ಲಿ ಆರಿಸಿಬರುವುದಕ್ಕೆ ಇದು ಕೂಡಾ ಕಾರಣ.

ಆದರೆ ಈ ಗುಂಪಿನಲ್ಲಿ ಯಡಿಯೂರಪ್ಪನವರು ಹೊಂದಿಕೊಳ್ಳುವುದಿಲ್ಲ.  ಸೈಕಲ್, ಸೀರೆ ಹಂಚಿದ, ಮಠ-ಮಂದಿರಗಳಿಗೆ ದುಡ್ಡು ವಿತರಿಸಿದಂತಹ ಕೆಲವು ಜನಪ್ರಿಯ ಕಾರ್ಯಕ್ರಮಗಳನ್ನು ಹೊರತುಪಡಿಸಿದರೆ ಎರಡೂವರೆ ವರ್ಷಗಳ ಸಾಧನೆಯೆಂದು ಹೇಳಿಕೊಳ್ಳಲು ಯಡಿಯೂರಪ್ಪನವರ ಬಳಿ ಏನೂ ಇಲ್ಲ. ತನ್ನ ಹುಳುಕುಗಳನ್ನೆಲ್ಲ ಮುಚ್ಚಿಕೊಳ್ಳುವಂತಹ ಮಾತುಗಾರಿಕೆಯೂ ಅವರಿಗಿಲ್ಲ.

ಲಾಲು, ಮಾಯಾವತಿ, ಜಯಲಲಿತಾ ಅವರ ಬಗ್ಗೆ ಜನರು ಸಿಟ್ಟು ಮಾಡಿಕೊಂಡಿರಬಹುದು, ಆದರೆ ಅವರನ್ನು ನೋಡಿ ಜನ ನಗುತ್ತಿರಲಿಲ್ಲ. ಆದರೆ  ಯಡಿಯೂರಪ್ಪನವರು  ನಡೆ-ನುಡಿಗಳ ಮೂಲಕ ತಮ್ಮನ್ನು ತಾವೇ ನಗೆಪಾಟಲಿಗೀಡು ಮಾಡಿಕೊಂಡಿದ್ದಾರೆ. ಅವರು ಪ್ರತಿ ಬಾರಿ ಬಾಯಿಬಿಟ್ಟಾಗಲೂ ತಮ್ಮ ತಲೆ ಮೇಲೆ ತಾವೇ  ಕಲ್ಲನ್ನು ಹಾಕಿಕೊಳ್ಳುತ್ತಾರೆ.

‘ಹಿಂದಿನವರು ಮಾಡಿಲ್ಲವೇ?... ನಾನಿನ್ನೂ ಅಳುವುದಿಲ್ಲ... ಮಗನ ತಪ್ಪಿಗೆ ಅಪ್ಪನಿಗೆ ಶಿಕ್ಷೆ ಕೊಡುವುದು ಯಾವ ನ್ಯಾಯ?...ನಂಜುಂಡೇಶ್ವರನ ಮೇಲಾಣೆ ಇನ್ನು ಮುಂದೆ ಅಕ್ರಮಗಳಿಗೆ ಅವಕಾಶ ನೀಡುವುದಿಲ್ಲ....ಹಗರಣಗಳಿಗೆ ಕಾರಣವಾಗಿರುವ ನಿವೇಶನಗಳನ್ನು ಹಿಂದಿರುಗಿಸಿದ್ದೇವೆ... ಎಂಬಿತ್ಯಾದಿ ಹೇಳಿಕೆಗಳೇ ಇದಕ್ಕೆ ಸಾಕ್ಷಿ.

ಇದನ್ನೆಲ್ಲ ಕೇಳಿದ ನಂತರ  ‘ಹಿಂದಿನವರು ಎಸೆದ ಅಕ್ರಮಗಳನ್ನು ಇಲ್ಲಿಯ ವರೆಗೆ ಯಾಕೆ ನೀವು ಬಯಲಿಗೆಳೆದಿಲ್ಲ? ದೇವೇಗೌಡ, ಕೃಷ್ಣ, ಧರ್ಮಸಿಂಗ್ ಮುಖ್ಯಮಂತ್ರಿಗಳಾಗಿದ್ದಾಗ ನೀವು ವಿರೋಧಪಕ್ಷದ ನಾಯಕರಾಗಿ ಇದ್ದಿರಲಿಲ್ಲವೇ? ಅಂದರೆ ಮುಖ್ಯಮಂತ್ರಿಗಳಾಗಿ ಮಾತ್ರವಲ್ಲ ವಿರೋಧಪಕ್ಷದ ನಾಯಕರಾಗಿಯೂ ನೀವು ವಿಫಲರಾಗಿದ್ದೀರಿ ಎಂದರ್ಥವೇ? ಇನ್ನು ಮುಂದೆ ಅಕ್ರಮಗಳಿಗೆ ಅವಕಾಶ ನೀಡುವುದಿಲ್ಲವೆಂದರೆ ಹಿಂದೆ ನೀವು ಅಕ್ರಮಗಳನ್ನು ಎಸಗಿದ್ದೀರಿ ಎನ್ನುವುದನ್ನು ಒಪ್ಪಿಕೊಂಡಂತಾಗಲಿಲ್ಲವೇ, ತಪ್ಪು ಒಪ್ಪಿಕೊಂಡ ಮೇಲೆ ಶಿಕ್ಷೆಯಾಗುವುದು ಬೇಡವೇ? ಎಂದೆಲ್ಲ ಜನ ಮರುಪ್ರಶ್ನೆ ಮಾಡಿದರೆ ಯಡಿಯೂರಪ್ಪನವರಲ್ಲಿ ಏನು ಉತ್ತರ ಇದೆ.

ಈ ರೀತಿ ಪ್ರಶ್ನೆ ಕೇಳುವವರೆಲ್ಲರೂ ತಮ್ಮ ಶತ್ರುಗಳೆಂದು ಅವರು ತಿಳಿದುಕೊಂಡಿದ್ದಾರೆ. ನಾನು ಯಾರಿಗೂ ಉತ್ತರ ಕೊಡಬೇಕಾಗಿಲ್ಲ, ಆರು ಕೋಟಿ ಜನ ನನ್ನ ಬೆಂಬಲಕ್ಕೆ ಇದ್ದಾರೆ, ಇನ್ನು ಇಪ್ಪತ್ತು ವರ್ಷಗಳ ಕಾಲ ನಾನು ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಆಗಾಗ ಅವರು ಎದೆ ತಟ್ಟಿಕೊಳ್ಳುತ್ತಾರೆ.

ಈ ಆತ್ಮವಿಶ್ವಾಸಕ್ಕೆ ತಮ್ಮ ಸರ್ಕಾರದ ಸಾಧನೆಯ ಬಗೆಗಿನ ನಂಬಿಕೆ ಕಾರಣವಾಗಿದ್ದರೆ ಶಹಭಾಸ್ ಅನ್ನಲೇ ಬೇಕು. ಆದರೆ ನಿಜವಾದ ಕಾರಣ ಅದಲ್ಲ, ಅವರು ನಂಬಿರುವುದು ತಮ್ಮ ಜಾತಿ ಜನರ ಬೆಂಬಲವನ್ನು ಮತ್ತು ಕಳೆದೆರಡು ವರ್ಷಗಳಲ್ಲಿ ಹೆಚ್ಚಿಸಿಕೊಂಡ ಆರ್ಥಿಕ ಸಂಪನ್ಮೂಲವನ್ನು. ಅಧಿಕಾರ ಉಳಿಸಿಕೊಳ್ಳಲು ಮತ್ತು ಅಗತ್ಯವೆನಿಸಿದರೆ ಕಳೆದುಕೊಂಡ ಅಧಿಕಾರವನ್ನು ಮರಳಿ ಪಡೆಯಲು ಜಾತಿ ಬೆಂಬಲ ಮತ್ತು ಹಣದ ಬಲ ಸಾಕು ಎಂದು ಅವರು ಈಗಲೂ  ತಿಳಿದುಕೊಂಡಂತಿದೆ.

ಈ ತಪ್ಪುಗ್ರಹಿಕೆಯೇ ಯಡಿಯೂರಪ್ಪನವರ ಹಾದಿ ತಪ್ಪಿಸಿರುವುದು.ಬಿಹಾರದಲ್ಲಿ  ಲಾಲು ಪ್ರಸಾದ್ ಕೂಡಾ ಹೀಗೆಯೇ ತಿಳಿದುಕೊಂಡಿದ್ದರು. ಅವರಿಗೂ ಒಂದು ಕಾಲದಲ್ಲಿ ಜನಸಂಖ್ಯೆಯಲ್ಲಿ ಶೇಕಡಾ ಹದಿನೈದರಷ್ಟಿರುವ ತಮ್ಮದೇ ಜಾತಿಯ ಯಾದವರು ಮತ್ತು ಶೇ ಹನ್ನೆರಡರಷ್ಟಿರುವ ಮುಸ್ಲಿಮರ ಅಖಂಡ ಬೆಂಬಲ ಇತ್ತು.

ಹಣ ಮತ್ತು ತೋಳ್ಬಲ ಕೂಡಾ ಎಡಬಲದಲ್ಲಿದ್ದವು. ಈಗ ಅವರ ಗತಿ ಏನಾಗಿದೆ ನೋಡಿ. ಈ ಬಾರಿಯೂ ಅವರ ಪಕ್ಷ ಮಣ್ಣುಮುಕ್ಕಲಿರುವುದು ಖಂಡಿತ. ಅಧಿಕಾರ ಕಳೆದುಕೊಂಡ ಮೇಲೆ ಸಿಗುವ ಪುರುಸೊತ್ತಿನಲ್ಲಿ  ಯಡಿಯೂರಪ್ಪನವರು ಈ ಬಗ್ಗೆ ಯೋಚಿಸುವುದು ಒಳಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT