ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡ ಕಾಡಿನ ಮನೆ

Last Updated 9 ಅಕ್ಟೋಬರ್ 2016, 7:51 IST
ಅಕ್ಷರ ಗಾತ್ರ

ನಮ್ಮನ್ನು ರೂಪಿಸಿದ ಆ ಮನೆಯ ಕತೆಯನ್ನೊಮ್ಮೆ ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕು. ನಮ್ಮ ಬಹಳಷ್ಟು ಅನುಭವಗಳು ಈ ಮನೆಯ ಪರಿಸರದೊಂದಿಗೆ ಹೆಣೆದುಕೊಂಡಿರುವುದರಿಂದ ಇದು ಅನಿವಾರ್ಯ.

ತೇಗದ ಮರದ ದಿಮ್ಮಿ, ಹಲಗೆಗಳಿಂದ ಕಟ್ಟಿದ್ದ ಯಾವುದೋ ಕಾಲದ ಆ ಬಂಗಲೆ ದೊಡ್ಡ ಕಾಡಿನ ನಟ್ಟನಡುವೆ ಒಂಟಿಯಾಗಿ ನಿಂತಿತ್ತು. ಎಲ್ಲ ಋತುಗಳಲ್ಲು ಕಾಡಾನೆಗಳು ಅಲ್ಲಿ ಅಂಡಲೆಯುತ್ತಿದ್ದರಿಂದ ಸಂಜೆಯ ಬೆಳಕು ಮಾಸಿದ ಬಳಿಕ ಮನುಷ್ಯರಾರೂ ಅತ್ತ ಬರುತ್ತಿರಲಿಲ್ಲ. ಆಗ ನಾಗರಿಕ ಪ್ರಪಂಚದಿಂದ ಹಿಂದೆ ಸರಿದು ಆ ಮನೆ ಕಾಡಿನ ನಿಗೂಢ ಪ್ರಪಂಚದ ಭಾಗವಾಗುತ್ತಿತ್ತು.

ಸಂಜೆ ಕಾಡಿನಿಂದ ವಾಪಾಸಾಗುವ ವೇಳೆಗೆ ಕೆಲವೊಮ್ಮೆ ಛಾವಣಿಯ ಒಂದೆರಡು ಹೆಂಚುಗಳು ಮಾಯವಾಗಿರುತ್ತಿದ್ದವು. ಯಾರೋ ಕಳ್ಳರು ಬಂದು ಹೋಗಿರಬಹುದೆಂದು ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಪರೀಕ್ಷಿಸುವಾಗ ಪುಸ್ತಕ, ಬೈನಾಕ್ಯುಲರ್, ಕ್ಯಾಮೆರಾಗಳೆಲ್ಲ ಇದ್ದ ಸ್ಥಳದಲ್ಲೇ ಇರುತ್ತಿದ್ದವು. ಹೆಂಚುಗಳನ್ನು ಸರಿಸಿ ಮನೆಯೊಳಗಿಳಿದ ಕಳ್ಳರು ಏನನ್ನೂ ಕೊಂಡುಹೋಗದ ಕಾರಣ ಒಗಟಾಗಿ ಉಳಿಯುತ್ತಿದ್ದವು. ಇದಲ್ಲದೆ, ಪ್ರತಿ ಸಂಜೆ ಕತ್ತಲು ಆವರಿಸಿದ ಬಳಿಕ ಭಯ ಹುಟ್ಟಿಸುವ ವಿಚಿತ್ರ ಸದ್ದುಗಳು ಬಂಗಲೆಯೊಳಗೆ ಮೂಡುತ್ತಿದ್ದವು. ವಿಜ್ಞಾನಿಗಳೇ ಅಲ್ಲಿ ನೆಲೆಸಿದ್ದರಿಂದ ಈ ಪ್ರಸಂಗಗಳು ಅವರ ಧೃತಿಗೆಡಿಸಿರಲಿಲ್ಲ.

ಆದರೆ ಮುಂದೊಂದು ದಿನ ಮುಂಜಾನೆಯಲ್ಲಿ ಕಿಟಕಿಯ ಗಾಜಿನ ಮೇಲೆ ಮೂಡಿದ್ದ ಹೆಜ್ಜೆಗಳು ಎಲ್ಲರನ್ನು ದಿಗ್ಭ್ರಮೆಗೊಳಿಸಿದವು. ಮನುಷ್ಯನ ಹೆಜ್ಜೆಗಳಂತಿದ್ದ ಆ ಗುರುತುಗಳು, ಮೇಲ್ಮುಖವಾಗಿ ಸರಿದು, ಮತ್ತೆ ಇಳಿದು ಬಂದಿರಲಿಲ್ಲ. ಆದರೆ ಅವು ಮನುಷ್ಯನ ಹೆಜ್ಜೆಗಳಾಗಿರಲಿಲ್ಲ.

ಅಲ್ಲಿ ನೆಲೆಸಿದ್ದವರೆಲ್ಲ ಬುದ್ಧಿವಂತ ವಿಜ್ಞಾನಿಗಳೆ. ಯುವಕರಾದ ಅವರಿಗೆ ವಿಷಯಗಳನ್ನು ಪ್ರಶ್ನಿಸುವ, ಅವಲೋಕಿಸುವ ಮನೋಭಾವವಿತ್ತು. ಆದರೂ ಗಾಜಿನ ಮೇಲೆ ಮೂಡಿದ್ದ ಹೆಜ್ಜೆಗಳು ಯಾವುದೇ ತರ್ಕಕ್ಕೆ ನಿಲುಕದಾದಾಗ ಅವರ ವೈಜ್ಞಾನಿಕ ದೃಷ್ಟಿಕೋನಗಳು ಸ್ವಲ್ಪ ಮಟ್ಟಿಗೆ ಅದುರಿದ್ದವು.

ದೊಡ್ಡ ಇತಿಹಾಸವಿಲ್ಲದ್ದಿದ್ದರೂ ಆ ಬಂಗಲೆಗೆ ಅದರದ್ದೇ ಆದ ಹಿನ್ನೆಲೆ ಇತ್ತು. ಎರಡನೇ ಮಹಾಯುದ್ಧದ ಸಮಯದಲ್ಲಿ, ಯೋಧರಿಗೆ ಕಾಡಿನ ಕಾಳಗದ ತರಬೇತಿ ನೀಡಲು ಇಲ್ಲಿ ಠಿಕಾಣಿ ಹೂಡಿದ್ದ ಬ್ರಿಟಿಷರು ಆ ಬಂಗಲೆಯನ್ನು ನಿರ್ಮಿಸಿದ್ದರು. ನೆಲೆಸಿದಲ್ಲೆಲ್ಲ ತಮ್ಮ ಸಂಸ್ಕೃತಿಯ ನೆರಳನ್ನು ಬಿಟ್ಟುಹೋಗುವ ವಸಾಹತುಶಾಹಿಗಳ ಸಂಪ್ರದಾಯದಂತೆ ಬ್ರೆಡ್ ತಯಾರಿಸುವ ಓವನ್ ಒಲೆ, ಕುದುರೆಗಳಿಗೆ ಕುಡಿಯುವ ನೀರು ಒದಗಿಸಲು ಕಟ್ಟಿದ್ದ ಹತ್ತಾರು ತೊಟ್ಟಿಗಳು ಬಂಗಲೆಯ ಬಳಿ ಇದ್ದವು. ಮಾನವ ಸಂಸ್ಕೃತಿಯ ಕುರುಹುಗಳನ್ನು ಅಳಿಸಿ ಹಾಕುವ ಪ್ರಯತ್ನದಲ್ಲಿ ಗಿಡ–ಬಳ್ಳಿಗಳು ಆ ತೊಟ್ಟಿಗಳನ್ನು ಸಂಪೂರ್ಣವಾಗಿ ಆವರಿಸಿದ್ದರಿಂದ ಹೊರನೋಟಕ್ಕೆ ಅದ್ಯಾವುದೂ ಗೋಚರಿಸುತ್ತಿರಲಿಲ್ಲ. ತುಸು ದೂರದಲ್ಲಿ ಮದ್ದು–ಗುಂಡು, ಆಹಾರಗಳನ್ನೆಲ್ಲ ಶೇಖರಿಸಿಡುವ ಉಗ್ರಾಣ ಅವಶೇಷವಾಗಿ ಉಳಿದಿತ್ತು. ಕೆಲವೆಡೆ ಕಾಡನ್ನು ಸವರಿ ಅವರು ನೆಟ್ಟಿದ್ದ ಸಾಗುವಾನಿ ಸಸಿಗಳು ಮರಗಳಾಗಿ ಬೆಳೆದಿದ್ದವು. ಬಂಗಲೆಯ ಪಕ್ಕದಲ್ಲೆ ಫಲ ಬಿಡುವ ಮೂರು ಮಾವಿನ ಮರಗಳಿದ್ದವು. ಬಹುಶಃ ಯೋಧನೊಬ್ಬ ತಿಂದು ಬಿಸಾಡಿದ್ದ ಮಾವಿನ ಹಣ್ಣಿನ ಓಟೆಗಳು ಹೆಮ್ಮರಗಳಾಗಿ ಬೆಳೆದಿದ್ದಿರಬಹುದು.

ಆ ಬಂಗಲೆಯನ್ನು ಅರಣ್ಯ ಇಲಾಖೆ, ‘ಮುಂಬೈ ನ್ಯಾಚುರಲ್ ಹಿಸ್ಟರಿ ಸೊಸೈಟಿ’ ಆನೆಗಳ ಸಂಶೋಧನೆಗೆ ಆಗಮಿಸಿದಾಗ ಅವರಿಗೆ ಉದಾರವಾಗಿ ನೀಡಿತ್ತು.

ಆ ಬಂಗಲೆ ಸುಸ್ಥಿತಿಯಲ್ಲಿರಲಿಲ್ಲ. ನಾಲ್ಕು ದಶಕಗಳ ಕಾಲ ಯಾರೂ ವಾಸಿಸದಿದ್ದರಿಂದ ಅದರ ಮೇಲೆ ಪ್ರಕೃತಿ ತನ್ನ ಹಿಡಿತವನ್ನು ಸಂಪೂರ್ಣವಾಗಿ ಸಾಧಿಸಿತ್ತು. ಕಾಡಿನಲ್ಲಿ ಏಕಾಂತವಾಗಿದ್ದ ಬಂಗಲೆಯ ಮೇಲೆ ಕುಳಿತ ಆಲದ ಮರಗಳು ಭೂಮಿಗೆ ಬೇರಿಳಿಸಿ ತಮ್ಮ ಅಧಿಪತ್ಯವನ್ನು ಸ್ಥಾಪಿಸಲು ಸಿದ್ಧವಾಗಿದ್ದವು. ಇದರ ಜೊತೆಗೆ ಹಿಂದೊಮ್ಮೆ ಅಲ್ಲಿ ಯಾರೋ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಅಲ್ಲಿ ಬೇರೆಯವರು ನೆಲೆಸುವ ಧೈರ್ಯ ಮಾಡಿರಲಿಲ್ಲ.

ನಾಲ್ಕಾರು ತಿಂಗಳ ಪರಿಶ್ರಮದ ಬಳಿಕ ಆ ಪಾಳುಬಂಗಲೆ ಮನೆಯ ರೂಪ ಪಡೆದುಕೊಂಡಿತ್ತು. ಸ್ಥಳಾವಕಾಶಕ್ಕೇನೂ ಕೊರತೆ ಇಲ್ಲದಷ್ಟು ವಿಶಾಲವಾಗಿದ್ದ ಆ ಮನೆಯಲ್ಲಿ ಸಂಶೋಧಕರೊಂದಿಗೆ ನಾವು ಕೂಡ ಸೇರಿಕೊಂಡೆವು. ಆದರೆ ಬಂಗಲೆಗೆ ಸೇರಿಕೊಳ್ಳುವ ಮುನ್ನ ಅಲ್ಲಿನ ಮೂಲ ವಾರಸುದಾರರ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ.

ದೀರ್ಘ ಕಾಲ ಪಾಳುಬಿದ್ದಿದ್ದ ಬಂಗಲೆಯನ್ನು ಕರಡಿಯೊಂದು ಮನೆ ಮಾಡಿಕೊಂಡಿತ್ತು. ಹೊಸ ಕಿಟಕಿ, ಬಾಗಿಲುಗಳೆಲ್ಲ ಬಂದ ಬಳಿಕ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಲು ಅದು ಆಗೊಮ್ಮೆ ಈಗೊಮ್ಮೆ ಭೇಟಿ ನೀಡುತ್ತಿತ್ತು.

ಒಂದು ದಿನ ಭೀಕರ ಮಳೆಯೊಂದಿಗೆ ಬೀಸುತ್ತಿದ್ದ ಗಾಳಿಗೆ ಗಾಜಿನ ಕಿಟಕಿಗಳನ್ನು ಮುಚ್ಚಲಾಗಿತ್ತು. ಬಹುಶಃ ಕರಡಿಗೆ ಆ ಚಳಿಯಲ್ಲಿ ತನ್ನ ಹಳೆಯ ಬೆಚ್ಚನೆಯ ಮನೆಯ ನೆನಪಾಗಿರಬಹುದು. ಮನೆಯತ್ತ ಧಾವಿಸಿ ಹಿಂದೊಮ್ಮೆ ತನ್ನ ಹೆಬ್ಬಾಗಿಲಾಗಿದ್ದ ಕಿಟಕಿಯ ಮೇಲೆ ಮುಂಗಾಲನ್ನಿಟ್ಟು ಒಳಬರಲು ಪ್ರಯತ್ನಿಸಿರಬಹುದು. ಆ ಯತ್ನದಲ್ಲಿ ಮಣ್ಣಾಗಿದ್ದ ಪಾದಗಳ ಹೆಜ್ಜೆ ಗಾಜಿನ ಮೇಲೆ ಮೂಡಿದ್ದವು. ಕಿಟಕಿಯ ಗಾಜಿನ ಮೇಲೆ ಏಕಾಏಕಿ ನಡೆದುಹೋಗಿದ್ದ ಆ ಹೆಜ್ಜೆಗಳು ಆದಿಮಾನವನ ಪಾದಗಳಂತೆ ಕಂಡಿದ್ದವು.

ಮತ್ತೊಮ್ಮೆ ಆಗಮಿಸಿದ್ದ ಕರಡಿ ತೆರೆದಿದ್ದ ಕಿಟಕಿಯಲ್ಲಿ ಇಣಕಿತ್ತು. ಸಹಜವಾದ ಸೊಳ್ಳೆಪರದೆಯಂತೆ ಹರಡಿದ್ದ ಜೇಡರಬಲೆಗಳನ್ನೆಲ್ಲ ಗುಡಿಸಿ, ಮೇಜು, ಕುರ್ಚಿ, ಪುಸ್ತಕ, ಹಾಸಿಗೆ, ದಿಂಬುಗಳನ್ನೆಲ್ಲ ಜೋಡಿಸಿ ಮನೆಯ ಚೆಂದವನ್ನೆಲ್ಲಾ ಹಾಳುಗೆಡವಿದ್ದಾರೆಂದು ಬಹುಶಃ ಅದಕ್ಕೆ ಬೇಸರವಾಗಿರಬಹುದು. ಜೊತೆಗೆ ಅಂದು ಆಗಮಿಸಿದ್ದ ಅತಿಥಿಗಳೊಬ್ಬರು ವಿಶೇಷವಾಗಿ ತಯಾರಿಸಿದ್ದ ಕೇಸರಿಬಾತ್ ಮತ್ತು ಬೆಂಡೆಕಾಯಿ ಪಲ್ಯಗಳೆಲ್ಲ ಕರಡಿಗೆ ದುರ್ವಾಸನೆ ಬೀರಿರಬಹುದು. ‘ಥುತ್, ಎಂಥಾ ಗಲೀಜು ಜನ. ಈ ಮಂದಿಗೆ ಬದುಕುವ ಅಭಿರುಚಿಯೇ ಇಲ್ಲವಲ್ಲ’ ಎಂದು ವ್ಯಥೆಪಟ್ಟು ಮನೆಯತ್ತಬರುವುದನ್ನೆ ನಿಲ್ಲಿಸಿತು. ಆದರೆ ಮಾಯವಾಗುತ್ತಿದ್ದ ಮೇಲ್ಛಾವಣಿಯ ಹೆಂಚುಗಳ ಕಾರಣ ತಿಳಿಯಲು ಸಾಕಷ್ಟು ಸಮಯವೇ ಹಿಡಿಯಿತು.

ಯಾರೂ ಇಲ್ಲದಿದ್ದಾಗ ಲಂಗೂರ್ ಕೋತಿಗಳ ಗುಂಪು ಮನೆಯ ಮೇಲೆಲ್ಲ ಕುಣಿದು ಕುಪ್ಪಳಿಸಿ ಒಂದೆರಡು ಹೆಂಚುಗಳನ್ನು ಬಿಸಾಡಿ ಹೋಗುತ್ತಿದ್ದವು. ಆ ಕಿಂಡಿಗಳಿಂದ ನುಸುಳುತ್ತಿದ್ದ ಅಸಂಖ್ಯಾತ ಪ್ರಾಣಿಗಳು ಅಟ್ಟದಲ್ಲಿ ಸೇರಿಕೊಳ್ಳುತ್ತಿದ್ದವು. ರಾತ್ರಿಯಾದೊಡನೆ ಆ ಬಂಗಲೆ ಬೆಂಗಳೂರಿನ ಪಬ್‌ಗಳಂತಾಗುತ್ತಿತ್ತು. ಇಲಿ, ಗೂಬೆ, ಪುನುಗು ಬೆಕ್ಕು, ಬಾವಲಿಗಳೆಲ್ಲ ನಾನಾ ಬಗೆಯ ಸದ್ದು ಹೊರಡಿಸುತ್ತ ಬೇಟೆಯಲ್ಲೋ ಬೇಟದಲ್ಲೋ ತೊಡಗಿಸಿಕೊಳ್ಳುತ್ತಿದ್ದವು.

ಇನ್ನೇನು ಮನೆಯ ಎಲ್ಲ ಹಕ್ಕುದಾರರ ಪರಿಚಯವಾಯಿತು ಎಂದು ನಿರಾಳವಾದೆವು.
ಆದರೆ... ಬೇಸಗೆಯ ಒಂದು ಮಧ್ಯರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಧಡಾರ್–ಬಡಾರ್ ಎಂಬ ಭೀಕರ ಸದ್ದಾಯಿತು. ಆ ಭಯಂಕರ ಗಲಾಟೆಗೆ ಎಚ್ಚರಗೊಂಡೆವು. ಸ್ವಲ್ಪ ಸಮಯದ ನಂತರ ಈ ಸದ್ದುಗಳು ಮನೆಯೊಳಗಿನಿಂದಲೇ ಮೂಡಿಬರುತ್ತಿರುವ ಅರಿವುಂಟಾಯಿತು. ಗಡಿಬಿಡಿಯಿಂದ ಎದ್ದು ಟಾರ್ಚ್ ಹಾಕಿದ ಕೂಡಲೇ ಸದ್ದುಗಳು ನಿಂತುಹೋದವು. ಮೆಲ್ಲನೆ, ಶಬ್ದ ಬರುತ್ತಿದ್ದ ಊಟದ ಮನೆಯ ಕಡೆಗೆ ಹೋಗುತ್ತಿದ್ದಂತೆ ಗೋಡ್ರೇಜ್ ಕುರ್ಚಿಯೊಂದು ಹಾರಿಬಂದು ಬಾಗಿಲಿನಿಂದಾಚೆ ಬಿತ್ತು. ಬೆಚ್ಚಿನಿಂತಾಗ, ಊಟದ ಮೇಜು ಪಲ್ಟಿಹೊಡೆದು ಬಿದ್ದ ಭಾರಿ ಸದ್ದು.

ಮತ್ತೆ ಬಹಳ ಕಾಲ ನಿಶ್ಶಬ್ದ.
ಊಟದ ಮನೆಯ ಒಳಗೆ ಹೋದಾಗ ಅದು ರಣರಂಗದಂತಾಗಿತ್ತು. ಚೆಲ್ಲಾಪಿಲ್ಲಿಯಾಗಿದ್ದ ಕುರ್ಚಿ ಮೇಜಿನ ಜೊತೆಗೆ ಅಲ್ಲಿ ಮುರಿದ ಕಿಟಕಿಯೊಂದು ಸಹ ಬಿದ್ದಿತ್ತು. ಏನಾಗಿದೆ ಎಂದು ಹೊಳೆಯಲಿಲ್ಲ. ಅಲುಗದೆ ನಿಂತು ಅತ್ತಿತ್ತ ನೋಡುತ್ತಿದ್ದೆವು. ಒಮ್ಮೆಲೆ, ಅಡುಗೆಮನೆಯ ಪಾತ್ರೆಗಳೆಲ್ಲ ಹಾರಾಡತೊಡಗಿದವು. ನಂತರ ಏನೋ ಕೂಗಿದ ಸದ್ದು. ಗಾಬರಿಯಲ್ಲಿ ಹಿಂದೆ ತಿರುಗಿ ನೋಡಿದಾಗ ಆನೆಯ ಸೊಂಡಿಲೊಂದು ಕಿಟಕಿಯಿಂದ ಒಳಗೆಬಂದು ಅಡ್ಡಾದಿಡ್ಡಿ ಬೀಸುತ್ತಿತ್ತು. ಹೇಗೋ ಜೀವ ಉಳಿದರೆ ಸಾಕೆಂದು ನಡುಮನೆಗೆ ಓಡಿಹೋದೆವು. ಕೂಗಾಡುತ್ತಿದ್ದ ಆನೆಗಳ ಸದ್ದು ನಿಲ್ಲುವ ಹೊತ್ತಿಗೆ ಯುಗಗಳೇ ಕಳೆದಂತಾಗಿತ್ತು.
ಬೆಳಗ್ಗೆ ನಮ್ಮ ‘ಶೆರ್ಲಾಕ್ ಹೋಮ್ಸ್’, ಚೆನ್ನ ಬರುವವರೆಗೆ ಆದದ್ದೇನೆಂದು ತಿಳಿಯಲಿಲ್ಲ.

ಹಿಂಬಾಗಿಲನ್ನು ಮೆದುವಾಗಿ ತಳ್ಳಿ ಚಿಲಕ ಮುರಿದಿದ್ದ ತಾಯಿ ಆನೆ, ಅಡಿಗೆಮನೆಯ ತೊಟ್ಟಿಗೆ ಸೊಂಡಿಲು ಬಿಟ್ಟು ನೀರು ಕುಡಿದಿದೆ. ಅದರ ಮಡಿಲಲ್ಲಿದ್ದ ಮರಿ, ನೀರಿನ ಶಬ್ದ ಕೇಳಿ ಆತುರದಿಂದ ಬಾಗಿಲ ಒಳಗೆ ನುಗ್ಗಿದೆ. ಆದರೆ, ತಾಯಿಯ ಸೊಂಡಿಲು ಆಚೆ ಸರಿದ ನಂತರ ಬಾಗಿಲು ಮುಚ್ಚಿಕೊಂಡಿದೆ. ಮರಿಗೆ ಹೊರಗೆ ಹೋಗುವ ದಾರಿ ತಿಳಿದಿಲ್ಲ. ಒಳಗಿನಿಂದ ಅದು ಕೂಗಾಡಲಾರಂಭಿಸಿದಾಗ ಗಾಬರಿಯಾದ ತಾಯಿ ಅಕ್ಕಪಕ್ಕದ ಕಿಟಕಿಗಳನ್ನೆಲ್ಲ ಮುರಿದು ಸೊಂಡಿಲನ್ನು ಒಳಗೆ ಹಾಕಿ ಮರಿಯನ್ನು ರಕ್ಷಿಸಲೆತ್ನಿಸಿದೆ. ಅದರ ಏಟಿಗೆ ಸಿಕ್ಕ ಕುರ್ಚಿ ಮೇಜುಗಳೆಲ್ಲ ಹಾರಾಡಿ ನೆಲಕಚ್ಚಿವೆ. ನಂತರ, ತಾಯಿ ಬಾಗಿಲನ್ನು ಮುರಿದು ಮರಿಯನ್ನು ಕರೆದುಕೊಂಡು ಹೋಗಿತ್ತು.

ಆನೆಗಳ ಸಂಶೋಧನಾ ಕೇಂದ್ರವಾಗಿ ಪರಿವರ್ತನೆಗೊಂಡ ಆ ಬಂಗಲೆಯಲ್ಲಿ ನಾಲ್ಕು ಮಂದಿ ಯುವ ವಿಜ್ಞಾನಿಗಳಿದ್ದರು. ಇಂದಿನ ವಿಶ್ವದ ಅಗ್ರಗಣ್ಯ ಜೀವಪರಿಸರ ವಿಜ್ಞಾನಿಗಳಲ್ಲೊಬ್ಬರಾದ ಬೆಳಗಾವಿ ಮೂಲದ ಅಜಯ್ ದೇಸಾಯಿ ಅವರಲ್ಲೊಬ್ಬರಾಗಿದ್ದರು. ತಮಿಳುನಾಡಿನ ಪಶುವೈದ್ಯ ಇಲಾಖೆಯ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದ್ದ ಕೃಷ್ಣಮೂರ್ತಿ ಆ ಯೋಜನೆಯ ಸಂಯೋಜಕರಾಗಿದ್ದರು. ಇವರ ಹೊರತಾಗಿ ಕಾಡಿನಲ್ಲಿ ವಿಜ್ಞಾನಿಗಳ ಸಹಾಯಕ್ಕೆ ಕಾಡುಕುರುಬರಾದ ಕೃಷ್ಣ, ಬೊಮ್ಮ ಮತ್ತು ಜೇನುಕುರುಬ ಚೆನ್ನ ನೇಮಕಗೊಂಡಿದ್ದರು. ಆನೆಗಳ ಸಂಶೋಧನೆಗೆ ಇದು ಪರಿಪೂರ್ಣ ತಂಡವಾಯಿತು. ಬುಡಕಟ್ಟು ಜನರ ಸ್ಥಳೀಯ ಜ್ಞಾನ, ಸಂಶೋಧನಾ ವಿದ್ಯಾರ್ಥಿಗಳ ಓದು, ಆನೆ ವೈದ್ಯರ ಎಣೆ ಇಲ್ಲದ ಅನುಭವಗಳೆಲ್ಲ ಒಂದೆಡೆ ಸೇರಿ ಸಂಶೋಧನೆಗೆ ಪೂರಕವಾದ ವಾತಾವರಣ ನಿರ್ಮಾಣಗೊಂಡಿತ್ತು.

ಆನೆಗಳ ಬದುಕು ಮತ್ತು ಸ್ವಭಾವವನ್ನು ಗಂಭೀರವಾಗಿ ಅಧ್ಯಯಿಸಲು ಕಾಡಿನಲ್ಲಿ ಕಾಲ್ನಡಿಗೆಯಲ್ಲೇ ಸಾಗಬೇಕು. ಮುಂಜಾನೆಯಿಂದ ಸಂಜೆಯವರೆಗೆ ಗುಂಪನ್ನು ಹಿಂಬಾಲಿಸಬೇಕು. ಮರೆಯಲ್ಲಿ ನಿಂತು ನಮ್ಮ ಇರುವಿಕೆಯ ಸುಳಿವು ನೀಡದೆ ಗಮನಿಸಿದ ವಿವರಗಳನ್ನೆಲ್ಲ ದಾಖಲಿಸಬೇಕು. ಈ ಕೆಲಸದಲ್ಲಿ ಮಗ್ನರಾಗಿ ಆನೆಗಳನ್ನು ಹಿಂಬಾಲಿಸುವಾಗ ನಡೆದುಬಂದ ದಾರಿ ಯಾವುದೆಂದು ನೆನಪಾಗುವುದೇ ಇಲ್ಲ. ಈ ಸನ್ನಿವೇಶವನ್ನು ಮೊದಲೇ ಊಹಿಸಿ, ನೆನಪಿನಲ್ಲಿಟ್ಟಿಕೊಂಡಿದ್ದ ಮರಗಳೆಲ್ಲಾ ಒಂದೇ ರೀತಿ ಕಾಣಲಾರಂಭಿಸುತ್ತವೆ. ಅಷ್ಟೇ ಅಲ್ಲ, ಕಾಡಿನ ಯಾವ ಭಾಗದಲ್ಲಿದ್ದೇವೆಂಬುದೇ ತಿಳಿಯುವುದಿಲ್ಲ. ಆಗ ಬಂದ ದಾರಿ, ಹೋಗಬೇಕಿರುವ ದಿಕ್ಕು, ಎಲ್ಲವೂ ಹಿಂದುಮುಂದಾಗಿ ಗೊಂದಲ ಉಂಟಾಗುವುದು ಸಾಮಾನ್ಯ.

ಆದರೆ ಕಾಡುಕುರುಬರಿಗೆ ಇದ್ಯಾವುದೂ ಸಮಸ್ಯೆಯೇ ಅಲ್ಲ. ವಿಧಾನಸೌಧ, ಹೈಕೋರ್ಟ್, ಅರಮನೆಗಳನ್ನು ನಾವು ಸರಳವಾಗಿ ನೆನಪಿನಲ್ಲಿಟ್ಟುಕೊಳ್ಳುವಂತೆ ಅವರಿಗೆ ಕಾಡಿನ ಅಸಂಖ್ಯಾತ ಮರಗಳೆಲ್ಲ ಬಿಡಿಬಿಡಿಯಾಗಿ ನೆನಪಿರುತ್ತವೆ. ಪ್ರತಿ ಮರಗಳು ಕಾಂಪಾಸ್‌ನ ದಿಕ್ಸೂಚಿಯಂತೆ ಅವರ ನೆರವಿಗೆ ಬರುತ್ತವೆ. ಹಾಗಾಗಿ ಕಾಡಿನಲ್ಲಿ ಗೊತ್ತುಗುರಿಯಿಲ್ಲದೆ ಹತ್ತಾರು ಮೈಲು ಸುತ್ತಾಡಿ ಮತ್ತೆ ಹೊರಟಿದ್ದ ಸ್ಥಳಕ್ಕೆ ಮರಳುವುದು ಅವರಿಗೆ ಸವಾಲಿನ ಕೆಲಸವೇ ಅಲ್ಲ.

ಕಾಡನ್ನು ಚೆನ್ನಾಗಿ ಬಲ್ಲ ಕೃಷ್ಣ ಮತ್ತು ಚೆನ್ನ ಈ ಕೆಲಸವನ್ನು ಮಾಂತ್ರಿಕರಂತೆ ನಿರ್ವಹಿಸುತ್ತಿದ್ದರು. ತೊಂದರೆಗಳು ಎದುರಾದಾಗ ಕ್ಷಣದಲ್ಲಿ ಮರವೇರಿಬಿಡುವುದು ಅವರ ಸ್ವಭಾವ ಸಿದ್ಧ ಗುಣವಾದರೂ ನಗರ ಮೂಲದ ಸಂಶೋಧಕರನ್ನು ಜೋಪಾನ ಮಾಡುವ ಹೊಣೆಗಾರಿಕೆಯನ್ನು ಅವರು ಬಹಳ ಬೇಗ ಕಲಿತಿದ್ದರು. ಆನೆಗಳು ಎದುರಾದರೆ ನಮ್ಮ ವಾಸನೆ ಅವುಗಳಿಗೆ ಸಿಗದಂತೆ ಸಮೀಪಿಸುವುದು ಹೇಗೆ? ಅಥವಾ ಸಂಜೆಗತ್ತಲಿನಲ್ಲಿ ಮನೆಗೆ ಹಿಂದಿರುಗುವಾಗ ಚದುರಿದ ಆನೆಗಳ ಗುಂಪು ನಮ್ಮ ಕಾಲುದಾರಿಯಲ್ಲಿದ್ದರೆ, ಅವುಗಳಿಗೆ ನಮ್ಮ ಸುಳಿವು ಸಿಗದಂತೆ ದಾಟಿ ನಡೆಯುವ ಕಲೆ ಅವರಿಗೆ ಕರಗತವಾಗಿತ್ತು.

ಆದರೆ ಬೊಮ್ಮನೊಂದಿಗೆ ಕಾಡಿಗೆ ತೆರಳಿದವರು ಸಾಮಾನ್ಯವಾಗಿ ತಾಪತ್ರಯಕ್ಕೆ ಸಿಕ್ಕಿಕೊಳ್ಳುತ್ತಿದ್ದರು. ಪದೇ ಪದೇ ದಾರಿ ತಪ್ಪಿ ಅಲೆಯುತ್ತಾ ಮನೆಗೆ ಮರಳುವ ಹೊತ್ತಿಗೆ ರಾತ್ರಿಯಾಗಿರುತ್ತಿತ್ತು. ಒಂದೆರಡು ಬಾರಿ, ತಪ್ಪು ದಾರಿ ಹಿಡಿದು ಹೊತ್ತುಮುಳುಗಿದಾಗ ಮರಗಳನ್ನು ಏರಿ ಊಟ ನಿದ್ರೆಗಳಿಲ್ಲದೆ ರಾತ್ರಿಕಳೆದ ಪ್ರಸಂಗಗಳಿಗೇನೂ ಕೊರತೆಯಿರಲಿಲ್ಲ. ಆನೆ, ಕರಡಿಗಳು ಹತ್ತಿರದಲ್ಲೆ ಹಠಾತ್ ಪ್ರತ್ಯಕ್ಷಗೊಂಡು ಅಪಾಯದ ಸನ್ನಿವೇಶಗಳು ಸೃಷ್ಟಿಯಾದಾಗ ಜೊತೆಯಲ್ಲಿದ್ದವರನ್ನು ಮರೆತು ಬೊಮ್ಮ ನಾಪತ್ತೆಯಾಗುತ್ತಿದ್ದ. ಅಂದರೆ ಜೊತೆಯಲ್ಲಿದ್ದವರ ಬಗ್ಗೆ ಅವನಿಗೆ ಕಾಳಜಿ ಇರಲಿಲ್ಲವೆಂದಲ್ಲ. ಅವನ ಕಾಲುಗಳು, ಆತನ ಮಿದುಳಿನ ಅಪರಿಚಿತ ಆಜ್ಞೆಗಳನ್ನು ಪಾಲಿಸಲು ಇನ್ನೂ ಕಲಿತಿರಲಿಲ್ಲ, ಅಷ್ಟೆ. ಈ ಎಲ್ಲಾ ಕಾರಣಗಳಿಂದ ಬೊಮ್ಮನೊಂದಿಗೆ ಕಾಡಿಗೆ ಹೋಗುವುದೇ ಗಂಡಾಂತರವೆಂಬುದು ವಿಜ್ಞಾನಿಗಳ ಒಮ್ಮತದ ಅಭಿಪ್ರಾಯವಾಗಿತ್ತು.

ಆದರೆ ಬೊಮ್ಮನನ್ನು ಎಲ್ಲರೂ ಇಷ್ಟಪಡುತ್ತಿದ್ದರಿಂದ ಅಪ್ರಯೋಜಕನೆಂದು ಕೆಲಸದಿಂದ ತೆಗೆಯಲು ಯಾರ ಮನಸ್ಸೂ ಒಪ್ಪಲಿಲ್ಲ. ಹಾಗಾಗಿ ಕಾಡಿನ ಜಾಡು ತೋರುವ ಕೆಲಸಕ್ಕೆ ನೇಮಕಗೊಂಡ ಬೊಮ್ಮ ಸಂಶೋಧನಾ ಕೇಂದ್ರದಲ್ಲಿ ಅಡಿಗೆಯವನಾಗಿ ಅಂತ್ಯಗೊಂಡ. ಆದರೆ ಬೊಮ್ಮನಿಗೆ ಅಡುಗೆ ಕೆಲಸದಲ್ಲಿ ಕಿಂಚಿತ್ತೂ ಆಸಕ್ತಿ ಇರಲಿಲ್ಲ. ಆತ ನಿಜಕ್ಕೂ ಅತ್ಯಂತ ಸರಳ ಮನುಷ್ಯ. ಪ್ರತಿ ಮುಂಜಾನೆ ಅನ್ನ ಮತ್ತು ಬೇಳೆಯನ್ನು, ರಾತ್ರಿಗೆ ಬೇಳೆ ಮತ್ತು ಅನ್ನವನ್ನು ಸಿದ್ಧಪಡಿಸುತ್ತಿದ್ದ. ಕೆಲವೊಮ್ಮೆ ಬಸಿದ ಅನ್ನದ ಗಂಜಿಗೆ ಉಪ್ಪು ಸೇರಿಸಿ ಸೂಪ್ ಮಾಡಿಕೊಡುತ್ತಿದ್ದ. ಇದು ಸಂಶೋಧನಾ ಕೇಂದ್ರದ ಏಕೈಕ ಮೆನುವಾಗಿ ಮುಂದುವರಿದಿತ್ತು. ಮುಂಜಾನೆಯಿಂದ ಕಾಡಿನಲ್ಲಿ ಅಲೆದು ದಣಿದು ಬರುತ್ತಿದ್ದರಿಂದ ಬೊಮ್ಮನ ಅಡುಗೆ ರುಚಿಕರವೆನಿಸುತ್ತಿತ್ತು.

ಕ್ರಮೇಣ ಆತ ದಾಲ್‌ಗೆ ಬೆಳ್ಳುಳ್ಳಿ, ಈರುಳ್ಳಿ, ಟೊಮೆಟೊ, ಮೆಣಸಿನಕಾಯಿಗಳನ್ನು ಬಳಸಲು ಕಲಿತ. ಆದರೆ  ಅಡುಗೆಯನ್ನು ಸುಧಾರಿಸಲು ಪ್ರಯತ್ನಿಸಿದ್ದು ಸಮಸ್ಯೆಯಾಗಿ ಕಾಡತೊಡಗಿತು. ಎಂದೂ ಆತ ಅಡಿಗೆ ಮನೆಯ ದಿನಸಿ ದಾಸ್ತಾನುಗಳ ಬಗ್ಗೆ ಗಮನಹರಿಸುತ್ತಿರಲಿಲ್ಲ.

ಈ ಕಾಡುಕುರುಬರೇ ಹೀಗೆ. ಮುಂದಿನ ದಿನಗಳಿಗಾಗಿ, ಮುಂಬರುವ ಮಕ್ಕಳು, ಮರಿಮಕ್ಕಳಿಗಾಗಿ ಶೇಖರಿಸಿಡುವುದು ಅವರಿಗೆ ಅರ್ಥವಾಗದ ವಿಷಯ. ನಾಳೆಗಳಿಗಾಗಿ ಯೋಚಿಸುತ್ತಾ ವರ್ತಮಾನವನ್ನು ಕಳೆದುಕೊಳ್ಳುವ ಜಾಯಮಾನ ಅವರ ಸಂಸ್ಕೃತಿಯಲ್ಲೇ ಇಲ್ಲ. ಸ್ಥಳೀಯ ಜ್ಞಾನ ಮತ್ತು ಕೌಶಲ್ಯಗಳೇ ಅವರ ಸಂಪತ್ತಾಗಿರುವುದರಿಂದ ಅವರು ಹೀಗೆ ಯೋಚಿಸಲು, ಜೀವಿಸಲು ಸಾಧ್ಯವಾಗಿರಬಹುದು. ಬಹುಶಃ ಅವರ ಜೀವನ ಶೈಲಿ ಮತ್ತು ಅವರು ಬದುಕಿ ಬಾಳಿದ ಕಾಡಿನ ಪರಿಸರ ಅವರನ್ನು ಹೀಗೆ ರೂಪಿಸಿರಬಹುದು. ಹಾಗೆ ನೋಡಿದರೆ ನಮ್ಮ ನಿಮ್ಮೆಲ್ಲರ ಚಿಂತನೆಗಳು ಸಾಮ್ರಾಜ್ಯಶಾಹಿ ಚಿಂತನೆಗಳಿಗೆ ಅಧೀನವಾದಂತೆ ಕಾಣುತ್ತವೆ.

ರಾತ್ರಿ ಕತ್ತಲಾದಾಗ ಇಲ್ಲದ ಉಪ್ಪು, ಬೇಳೆ, ಈರುಳ್ಳಿಗಳಿಗಾಗಿ ಬೊಮ್ಮ ಚಡಪಡಿಸುತ್ತಿದ್ದ. ಅವಶ್ಯ ಬಿದ್ದಾಗಲೆಲ್ಲ  ರೇಂಜರ್ ಮನೆಗೆ ತೆರಳಿ ಪದಾರ್ಥಗಳನ್ನು ಎರವಲು ಪಡೆಯುತ್ತಿದ್ದ. ಪ್ರತಿನಿತ್ಯ ಅವರ ಮನೆಗೆ ಹೋಗುವುದು ಸರಿಯಲ್ಲವೆಂದು ಹೇಳಿದಾಗ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಹೊಸ ದಾರಿ ಹಿಡಿದ.

ಅಲ್ಲೇ ಹತ್ತಿರದಲ್ಲಿದ್ದ ರೇಂಜರ್ ಮನೆಗೆ ಎರಡು ದಿನಗಳಿಗೊಮ್ಮೆ ಯಾರಾದರೂ ಸಿಬ್ಬಂದಿ ತರಕಾರಿ ಮತ್ತಿತ್ತರ ಪದಾರ್ಥಗಳನ್ನು ತಂದುಕೊಡುವ ವಾಡಿಕೆ ಇತ್ತು. ಗುಡಲೂರಿನಿಂದ ಸಂಜೆ ಆರಕ್ಕೆ ಬಸ್‌ನಲ್ಲಿ ಬರಬೇಕಿದ್ದ ಅವರು ಮತ್ತೆ ಎರಡು ಕಿ.ಮೀ. ಕಾಡಿನಲ್ಲಿ ನಡೆದು ರೇಂಜರ್ ಮನೆ ಸೇರಬೇಕಿತ್ತು.

ಕತ್ತಲಾಗುತ್ತಿರುವುದರಿಂದ ಆನೆಗಳಿಗೆ ಹೆದರಿ ಅವರೆಲ್ಲ ಅವಸರದಲ್ಲಿರುತ್ತಿದ್ದರು. ಮನೆಯ ಹತ್ತಿರ ಬರುವುದನ್ನು ಗಮನಿಸುತ್ತಿದ್ದ ಬೊಮ್ಮ ಮೆಲ್ಲನೆ ಅಕ್ಕಪಕ್ಕದ ಪೊದರುಗಳಲ್ಲಿ ಅಡಗಿ ಆನೆಯಂತೆ ಕೂಗಿ ಸದ್ದು ಮಾಡುತ್ತಿದ್ದ. ಬೆಚ್ಚಿದ ಸಿಬ್ಬಂದಿ ಕೈಯಲ್ಲಿದ್ದ ಬ್ಯಾಗ್‌ಗಳನ್ನೆಲ್ಲ ಬಿಸಾಡಿ ಹಿಂದಿರುಗಿ ನೋಡದೆ ಮನೆಯತ್ತ ಓಡುತ್ತಿದ್ದರು. ಆಗ ಆ ಹೊತ್ತಿನ ಅಡುಗೆಗೆ ಬೇಕಾದ ಒಂದೆರಡು ಪದಾರ್ಥಗಳನ್ನು ತೆಗೆದಿಟ್ಟುಕೊಂಡು ಉಳಿದದ್ದನ್ನೆಲ್ಲ ಚೀಲದಲ್ಲಿರಿಸಿ ಅವರ ಮನೆಗೆ ತಲುಪಿಸುತ್ತಿದ್ದ. ನಡುನಡುವೆ ಬೊಮ್ಮ ಈ ಸಂಚನ್ನು ಪುನರಾವರ್ತಿಸುತ್ತಿದ್ದರೂ, ಸಂಶಯಪಡದ ರೇಂಜರ್ ತನ್ನ ಸಿಬ್ಬಂದಿಯ ನೆರವಿಗೆ ಧಾವಿಸಿದ್ದಕ್ಕಾಗಿ ಧನ್ಯವಾದಗಳನ್ನು ಹೇಳಿ ಕೃತಜ್ಞತೆಯಿಂದ ಕಾಣುತ್ತಿದ್ದರು.

ಬೊಮ್ಮ ಅಡುಗೆ ಮನೆಯಲ್ಲಿ ಬಂಧಿತನಾಗಿದ್ದರೂ ಕಾಡು ಸುತ್ತುವ ಚಪಲದಿಂದ ಮುಕ್ತನಾಗಿರಲಿಲ್ಲ. ಆನೆಗಳನ್ನು ಹಿಂಬಾಲಿಸುವ ಕೆಲಸಕ್ಕೆ ಆತನನ್ನು ಪರಿಗಣಿಸಿದಿದ್ದರೂ ಸಣ್ಣಪುಟ್ಟ ಕೆಲಸಗಳಿಗೆ ಕೆಲವೊಮ್ಮೆ ಕರೆದೊಯ್ಯುತ್ತಿದ್ದರು.

ಇದೇ ಸಮಯದಲ್ಲಿ ನಾವು ಹಕ್ಕಿಗಳ ಬದುಕನ್ನು ಅರಿಯಲು ಕಾಡು ಸುತ್ತುತ್ತಿದ್ದಾಗ, ನಮ್ಮೊಂದಿಗೆ ಸೇರಿಕೊಳ್ಳುತ್ತಿದ್ದ ಬೊಮ್ಮ, ಸಮಯಾಂತರದಲ್ಲಿ ಹಲವಾರು ಹಕ್ಕಿಗಳ ಹೆಸರನ್ನು ಕಲಿತಿದ್ದ. ಸಿಕ್ಕವರ ಕಾಲೆಳೆಯಲು ಈ ತಿಳಿವಳಿಕೆಯನ್ನು ಅಸ್ತ್ರವಾಗಿ ಬಳಸುತ್ತಿದ್ದ.

ಕಾಡಿನಲ್ಲಿ ಕೃಷ್ಣ ಮತ್ತು ಚೆನ್ನ ಅತಿಮಾನವರಂತೆ ಕಾಣುತ್ತಿದ್ದರು. ಕಾಡಿನ ಜಾಡುಗಳಲ್ಲಿ ಅಸಹಜವಾಗಿ ಮುರಿದುಬಿದ್ದ ಹುಲ್ಲುಕಡ್ಡಿಗಳು, ದಾಖಲಾಗಿರುತ್ತಿದ್ದ ಸಣ್ಣ ಪುಟ್ಟ ಗುರುತುಗಳನ್ನೆಲ್ಲ ಕಲೆಹಾಕಿ, ಒಂದುಗೂಡಿಸಿ ಜರುಗಿರುವ ಘಟನೆಗಳನ್ನು ಪುನರ್‌ರಚಿಸುತ್ತಿದ್ದರು. ಆಗ ನಮಗೆ ಶೆರ್ಲಾಕ್ ಹೋಮ್ಸ್‌ನೊಂದಿಗೆ ಸುತ್ತಾಡಿದ ಅನುಭವವಾಗುತ್ತಿತ್ತು, ರೋಮಾಂಚನವಾಗುತ್ತಿತ್ತು. ಪ್ರತಿಬಾರಿ ಅವರೊಂದಿಗೆ ಕಾಡಿನಲ್ಲಿ ಅಲೆದಾಡುವಾಗ ಹೊಸ ಹೊಸ ಅಧ್ಯಾಯಗಳು ತೆರೆದುಕೊಳ್ಳುತ್ತಿದ್ದವು. ಅವರಿಂದ ಕಾಡಿನ ಭಾಷೆಗಳನ್ನು ಅರ್ಥೈಸಲು ಕಲಿತೆವು. ಅಸ್ತವ್ಯಸ್ತಗೊಂಡು ಬಿದ್ದಿರುವ ವಿವರಗಳನ್ನು ಹೆಕ್ಕಿ ಮಾಸಿದ ಹೆಜ್ಜೆಗಳಿಗೆ ಜೀವಕೊಟ್ಟು, ಘಟಿಸಿಹೋದ ಘಟನೆಗಳನ್ನೆಲ್ಲ ಪುನರ್‌ರಚಿಸಿ ನೋಡುವ ತಿಳಿವಳಿಕೆ ದೊರೆತದ್ದೆ ಇವರಿಂದ.

ಆರಂಭದ ದಿನಗಳಲ್ಲಿ ಯಾವ ಉದ್ದೇಶಗಳೂ ಇಲ್ಲದೆ ಕಾಡುಮೇಡುಗಳಲ್ಲಿ ಅಲೆಯುತ್ತಿದ್ದ ನಮ್ಮನ್ನು ರೂಪಿಸಿದ್ದೇ ಈ ಮನೆ. ಆ ಮನೆಯಲ್ಲಿದ್ದ ವಿಶೇಷ ವಾತಾವರಣ – ಅಲ್ಲಿದ್ದ ವಿಜ್ಞಾನಿಗಳ, ಕಾಡಿನ ಬುಡಕಟ್ಟು ಜನರೊಂದಿಗಿನ ಹರಟೆ, ಚರ್ಚೆ, ತಮಾಷೆ, ಸಮಾಲೋಚನೆಗಳೆಲ್ಲ ನಮ್ಮ ಜ್ಞಾನದ ದಿಗಂತವನ್ನು ವಿಸ್ತರಿಸಿದ್ದವು.

ಆ ಮನೆಯಲ್ಲಿ ಎಲ್ಲವೂ ಇತ್ತು... ಅಲ್ಲಿರುವಾಗ ನಮ್ಮಷ್ಟು ಶ್ರೀಮಂತರು ಈ ಪ್ರಪಂಚದಲ್ಲೆ ಇಲ್ಲವೇನೊ ಎನಿಸುತ್ತಿತ್ತು.
ಒಮ್ಮೆ ಗುಡಲೂರಿನಿಂದ ದಿನಸಿ ಕೊಂಡು ಬರುವಾಗ ದಾರಿಯಲ್ಲಿ ನಮ್ಮ ಮಿತ್ರರ ಮಿತ್ರರೊಬ್ಬರು ಎದುರಾದರು. ಊಟಿಗೆ ಹೋಗಿದ್ದ ಅವರು ಪತ್ನಿ, ನಾದಿನಿಯೊಂದಿಗೆ ಬೆಂಗಳೂರಿಗೆ ವಾಪಸಾಗುತ್ತಿದ್ದರು. ಗ್ರಾನೈಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಅವರು ಕಾರಿನಿಂದಿಳಿದಾಗ ಅವರು ಗಂಡಸರೋ ಹೆಂಗಸರೋ ಎಂದು ತೀರ್ಮಾನಿಸಲು ತುಸುಹೊತ್ತೇ ಹಿಡಿಯಿತು. ಹಗ್ಗಗಳಂತೆ, ಸರಪಳಿಗಳಂತೆ, ಪೊಲೀಸರು ತೊಡಿಸುವ ಬೇಡಿಗಳಂತೆ ಬಗೆಬಗೆಯ ಚಿನ್ನದ ಸರಗಳು ಅವರ ಕೊರಳು, ಬೆರಳು, ಕೈಗಳನ್ನೆಲ್ಲ ತುಂಬಿಕೊಂಡಿದ್ದವು. ನಮ್ಮ ಕಾಡಿನ ಮನೆಯನ್ನು ನೋಡಬೇಕೆಂದು ಅವರು ವಿನಂತಿಸಿದಾಗ ಸಾಧ್ಯವಿಲ್ಲವೆಂದು ಹೇಳಲಾಗಲಿಲ್ಲ.

ಮನೆಗೆ ಬಂದಕೂಡಲೇ ‘ಓ! ಈ ಮನೆಗೆ ಕಾಂಪೌಂಡ್ ಇಲ್ಲವಲ್ಲ’ ಎಂದು ಅಚ್ಚರಿ ವ್ಯಕ್ತಪಡಿಸಿದರು. ಸಂಶೋಧನಾ ತಂಡದ ಸಂಯೋಜಕರಾಗಿದ್ದ ಚೆನ್ನೈನ ಡಾ. ಕೃಷ್ಣಮೂರ್ತಿ ಆರಂಭದಲ್ಲಿ ಬಿದಿರಿನ ಗೋಡೆಯನ್ನು, ಗೇಟನ್ನು ಆ ಮನೆಗೆ ಹಾಕಿಸಿದ್ದರು. ಅದೇಕೋ ಕಾಡಾನೆಗಳಿಗೆ ಆ ಪರಿಕಲ್ಪನೆ ಇಷ್ಟವಾಗಲಿಲ್ಲ. ಹದಿನೈದು ದಿನಗಳಲ್ಲಿ ಎಲ್ಲವನ್ನೂ ಮುರಿದು ಬಿಸಾಡಿದ್ದವು.

ಒಳಬಂದ ಅವರು ಮನೆಯೊಳಗಿನ ವಸ್ತುಗಳನ್ನು, ಕಟ್ಟಡದ ವಿವರಗಳನ್ನು ನೋಡುತ್ತಾ ಕುಳಿತರು. ಸ್ವಲ್ಪ ಹೊತ್ತಿನಲ್ಲಿ ಅವರ ಪತ್ನಿ ‘ಇಲ್ಲಿ ಫ್ಯಾನ್ ಇಲ್ಲವೇ?’ ಎಂದರು. ನಂತರ ‘ಟಿ.ವಿ ಸಹಿತ ಇಲ್ಲವಾ’ ಎಂದಾಗ, ‘ಇಲ್ಲಿ ಫ್ರಿಡ್ಜ್, ಮೈಕ್ರೋವೇವ್, ವಾಷಿಂಗ್ ಮೆಷಿನ್ ಯಾವುದೂ ಇಲ್ಲ’ವೆಂದು ಹೇಳಿದೆವು. ಅವರ ವಿಚಾರಣೆ ಅಲ್ಲಿಗೆ ನಿಲ್ಲಲಿಲ್ಲ. ‘ಅಯ್ಯೋ! ಅಲ್ಲಿ ನೋಡಿ ಕಿಟಕಿಗಳಿಗೆ ಗ್ರಿಲ್‌ಗಳೇ ಇಲ್ಲ’ ಎಂದು ಪತಿಗೆ ಕಿಟಕಿಗಳನ್ನು ತೋರಿಸಿದರು.

ನಂತರ ಪತಿಯ ಸರದಿ. ಈ ಬೆತ್ತದ ಕುರ್ಚಿಗಳೆಲ್ಲ ಹಳೆಯ ಕಾಲದ ಫ್ಯಾಷನ್. ನಾನು ಒಳ್ಳೆಯ ಸೋಫಾ ಕಳಿಸಿಕೊಡುವುದಾಗಿ ಹೇಳಿದರು. ನಾವೇನೂ ಮಾತನಾಡಲಿಲ್ಲ. ಬಳಿಕ ಕಾಂಕ್ರೀಟ್ ನೆಲದತ್ತ ಮುಖಮಾಡಿ, ಪಿಂಕ್ ಗ್ರಾನೈಟ್ ಕಳಿಸಿಕೊಡುವುದಾಗಿಯೂ ತಿಳಿಸಿದರು. ಮತ್ತೆ ಮುಂದುವರೆದು ಗೋಡೆಯ ಮೂಲೆಗಳಲ್ಲಿ ಬಲೆಗಳನ್ನು ಬಿಡಿಸಿ ಕುಳಿತಿದ್ದ ಜೇಡಗಳನ್ನು, ನೆಲದ ಮೂಲೆಯಲ್ಲಿ ಸುರಂಗ ಕೊರೆದು ಓಡಾಡುತ್ತಿದ್ದ ಇರುವೆಗಳನ್ನು ನೋಡಿ ಪರಿಣಾಮಕಾರಿಯಾದ ಕೀಟನಾಶಕಗಳನ್ನು ಮುಂದಿನ ಬಾರಿ ತರುವುದಾಗಿ ಹೇಳುವ ಹೊತ್ತಿಗಾಗಲೇ ತಲೆ ಚಿಟ್ಟು ಹಿಡಿದಂತಾಗಿತ್ತು. ಬದುಕಿನಲ್ಲಿ ಒಮ್ಮೆಲೇ ಯಶಸ್ಸು ಕಂಡವರ ದೊಡ್ಡ ಸಮಸ್ಯೆ ಎಂದರೆ, ಜಗತ್ತಿಗೆಲ್ಲ ತಿಳಿವಳಿಕೆ ಹೇಳುವ ಚಾಳಿಯನ್ನು ಮೈಗೂಡಿಸಿಕೊಂಡು ತಮ್ಮ ಅವಿವೇಕತನವನ್ನು ಪ್ರದರ್ಶನಕ್ಕಿಡುವುದು.

ಇದೇ ವೇಳೆಗೆ ಸ್ನಾನದ ಮನೆಯಿಂದ ಎದ್ದಿದ್ದ ಹೊಗೆ ಮನೆಯನ್ನೆಲ್ಲ ತುಂಬಿಕೊಂಡಿತು. ಈ ಮನೆಯಲ್ಲಿ ಗೀಜ಼ರ್ ಇಲ್ಲವೆಂದು ಕೂಡಲೆ ತಿಳಿಸಿದೆವು. ‘ಏನೋ ಇಷ್ಟೊಂದು ಹೊಗೆ?’ ಎಂದಾಗ, ‘ಅದು ಹಂಗೆ ಸಾ... ಕ್ಯಾಶಿಯಾ ಫಿಸ್ತುಲಾ ಸಾ...’ ಎಂದು ಹೊಗೆಯೊಳಗಿಂದ ಬೊಮ್ಮ ಉತ್ತರಿಸಿದ. ಅತಿಥಿಗಳಿಗೆ ಏನೂ ಅರ್ಥವಾಗಲಿಲ್ಲ. ನಾವು ಕಾಡುಕುರುಬರ ಭಾಷೆಯಲ್ಲಿ ಏನೋ ಮಾತನಾಡಿಕೊಂಡೆವೆಂದು ತಿಳಿದರೇನೋ ಗೊತ್ತಿಲ್ಲ. ವಿಜ್ಞಾನಿಗಳ ಬಳಗದಲ್ಲೇ ಇರುತ್ತಿದ್ದ ಬೊಮ್ಮ ಕಕ್ಕೆಯ ಮರವನ್ನು ‘ಲ್ಯಾಟಿನ್’ ಭಾಷೆಯಲ್ಲಿ ಹೇಳಿದ್ದ.

ಬಳಿಕ ಅವರು ಹೋಗಿಬರುತ್ತೇವೆಂದು ತೆರಳಿದರು. ಅಲ್ಲಿಯವರೆಗೆ ಕಂಟಕಗಳೆಂದರೆ ಏನೆಂದು ನಮಗೆ ತಿಳಿದಿರಲಿಲ್ಲ. ಬಹುಶಃ ಇಂತಹ ಕಂಟಕಗಳಿಂದ ಪಾರಾಗಲೇನೋ ಹಳ್ಳಿಗಳಲ್ಲಿ ಮನೆಯ ಬಾಗಿಲಿಗೆ ‘ನಾಳೆ ಬಾ’ ಎಂದು ಶಾಶ್ವತವಾಗಿ ಬರೆದಿರಬಹುದೆನಿಸಿತು.

ಆ ಮನೆಗೆ ಹತ್ತಾರು ಕಿಟಕಿಗಳಿದ್ದವು. ಅವು ನಮಗೆ ಪ್ರಕೃತಿ ವಿಜ್ಞಾನದ ಮಹಾದ್ವಾರಗಳಂತೆ ಕಾಣುತ್ತಿದ್ದವು. ಬದಲಾಗುವ ಗಾಳಿಗೆ ನಮ್ಮನ್ನೊಡ್ಡಿ ನಮ್ಮ ಚಿಂತನಾಕ್ರಮವನ್ನು ರೂಪಿಸುವ ಬೆಳಕಿನ ಕಿಂಡಿಗಳಂತಿದ್ದವು. ವೈಜ್ಞಾನಿಕ ಚಿಂತನೆಗಳನ್ನು ಪ್ರಚೋದಿಸುವ ಪ್ರಕ್ರಿಯೆಗಳಿಗೆ ಗ್ರಿಲ್–ಕಾಂಪೌಂಡ್ ಹಾಕಿಸಲು ನಾವು ತಯಾರಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT