ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಣ್ಣನ ದರ್ಪಕ್ಕೆ ಪೆಟ್ಟುಕೊಟ್ಟ ಗಟ್ಟಿಗ

Last Updated 25 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಮೊನ್ನೆ ಆಗಸ್ಟ್ 13ರಂದು ಕ್ಯೂಬಾದ ಸರ್ವೋಚ್ಚ ನಾಯಕ ಫಿಡೆಲ್ ಕ್ಯಾಸ್ಟ್ರೊ ತಮ್ಮ 90ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಇತ್ತೀಚಿನ ವರ್ಷಗಳಲ್ಲಿ ಕ್ಯಾಸ್ಟ್ರೊ ಎಂಬ ಬಂಡಾಯದ ಕಿಡಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಕಡಿಮೆಯೆ. 2008ರಲ್ಲಿ ಅನಾರೋಗ್ಯದ ಕಾರಣದಿಂದ ಕ್ಯೂಬಾ ಅಧ್ಯಕ್ಷ ಹುದ್ದೆ ತೊರೆದು, ಸಕ್ರಿಯ ರಾಜಕೀಯಕ್ಕೆ ವಿದಾಯ ಘೋಷಿಸಿ, ತಮ್ಮ ತಮ್ಮನಿಗೆ ದೇಶದ ಚುಕ್ಕಾಣಿ ಒಪ್ಪಿಸಿದ ಮೇಲೆ ಕ್ಯಾಸ್ಟ್ರೊ ಸಾರ್ವಜನಿಕವಾಗಿ ಮುಖ ತೋರಿಸಿದ್ದು ಆಗೊಮ್ಮೆ ಈಗೊಮ್ಮೆ ಮಾತ್ರ. ಮಾತನಾಡಿದ್ದಂತೂ ಅಪರೂಪ.

ಆದರೆ ಇದೇ ಏಪ್ರಿಲ್‌ನಲ್ಲಿ ನಡೆದ ಕಮ್ಯುನಿಸ್ಟ್‌ ಪಾರ್ಟಿ ಸಭೆಯಲ್ಲಿ ಕ್ಯಾಸ್ಟ್ರೊ ಆಸಕ್ತಿಯಿಂದ ಮಾತನಾಡಿದ್ದರು, ಭಾವುಕಗೊಂಡಿದ್ದರು. ‘ಇನ್ನು ಕೆಲವು ದಿನಗಳಲ್ಲಿ ನನಗೆ 90 ವರ್ಷ ಆಗಲಿದೆ. ಜೀವನದ ಇಷ್ಟು ವರ್ಷಗಳನ್ನು ನಾನು ನೋಡುತ್ತೇನೆಂದು ಅಂದುಕೊಂಡಿರಲಿಲ್ಲ. ಈ ದೇಶವನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ತಮ್ಮ ಮಾತು ಮುಗಿಸಿದ್ದರು. ಕ್ಯೂಬಾದೊಂದಿಗಿನ ಕ್ಯಾಸ್ಟ್ರೊ ನಂಟು ಎಂತಹದು ಎಂಬುದಕ್ಕೆ ಅವರ ಮಾತು ಸಾಕ್ಷಿಯಾಗಿತ್ತು. ಬಿಡಿ, ಕ್ಯಾಸ್ಟ್ರೊ ಅವರನ್ನು ಪಕ್ಕಕ್ಕಿಟ್ಟು ಕ್ಯೂಬಾವನ್ನು ನೋಡಲು ಸಾಧ್ಯವೇ ಇಲ್ಲ. ಕ್ಯೂಬಾ ಇತಿಹಾಸದ ನೂರು ಪುಟಗಳನ್ನು ಸರಿಸಿದರೆ, ತೊಂಬತ್ತು ಪುಟಗಳಲ್ಲಿ ಉದ್ದ ತೋಳಿನ, ಎರಡು ಜೇಬಿನ ಮಿಲಿಟರಿ ಸಮವಸ್ತ್ರ ತೊಟ್ಟ, ಸಿಗಾರ್ ಎಳೆಯುತ್ತಿರುವ ಗಡ್ಡದಾರಿ ಕ್ಯಾಸ್ಟ್ರೊ ಮುಖವೇ ಕಾಣುತ್ತದೆ.

ಹಾಗೆ ನೋಡಿದರೆ, ಸ್ಪ್ಯಾನಿಷ್- ಅಮೆರಿಕನ್ ಯುದ್ಧದ ಬಳಿಕ ಕ್ಯೂಬಾ ಸ್ವತಂತ್ರಗೊಂಡರೂ ಅದರ ಮೇಲಿನ ತನ್ನ ಹಿಡಿತವನ್ನು ಅಮೆರಿಕ ಸಂಪೂರ್ಣವಾಗಿ ಬಿಟ್ಟುಕೊಡಲಿಲ್ಲ. ತನ್ನ ಸೇನೆಯನ್ನು ಹಿಂದಿರುಗಿಸಲು ಏಳು ಷರತ್ತುಗಳನ್ನು ವಿಧಿಸಿತ್ತು. ಆ ಮೂಲಕ ಪರೋಕ್ಷವಾಗಿ ಕ್ಯೂಬಾವನ್ನು ನಿಯಂತ್ರಿಸುವ ಕೆಲಸಕ್ಕೆ ಅಮೆರಿಕ ಮುಂದಾಯಿತು. 1933ರಲ್ಲಿ ಗೆರಾರ್ಡೋ ಮಚ್ಯಾಡೋ ಆಡಳಿತದ ವಿರುದ್ಧ ಬಂಡಾಯ ಎದ್ದ ಮಿಲಿಟರಿ ನಾಯಕ ಫುಲ್ಗೆನ್ಸಿಯೋ ಬತಿಸ್ತಾ, ಕ್ರಾಂತಿಯ ಮಾತುಗಳನ್ನಾಡುತ್ತಾ ಅಧಿಕಾರ ಹಿಡಿದದ್ದೇನೋ ನಿಜ. ಆದರೆ ಕೆಲವು ವರ್ಷಗಳಲ್ಲೇ ಅವರ ಕ್ರಾಂತಿಯ ಹುಮ್ಮಸ್ಸು ತಣ್ಣಗಾಗಿತ್ತು. ಬತಿಸ್ತಾ ಸರ್ವಾಧಿಕಾರಿಯಾಗಿ ಬದಲಾಗಿದ್ದರು. ಆಡಳಿತ ಹಳಿ ತಪ್ಪಿತು. ಭ್ರಷ್ಟಾಚಾರ ಬೆಳೆದು ನಿಂತಿತು. ಆಗ ಮತ್ತೊಂದು ಕ್ರಾಂತಿಯ ಮಾತನಾಡಿದ್ದು ಅಂದಿನ ತರುಣ, ಫಿಡೆಲ್ ಕ್ಯಾಸ್ಟ್ರೊ.

1953ರ ಜುಲೈನಲ್ಲಿ ಫಿಡೆಲ್ ಮತ್ತು ರೌಲ್ ಕ್ಯಾಸ್ಟ್ರೊ, ಬತಿಸ್ತಾ ವಿರುದ್ಧ ಸೇನಾ ಬಂಡಾಯಕ್ಕೆ ಯೋಜನೆ ರೂಪಿಸಿದರು. ಆ ಪ್ರಯತ್ನ ಯಶ ಕಾಣಲಿಲ್ಲ. ಫಿಡೆಲ್ 15 ವರ್ಷದ ಸಜೆಗೆ ಒಳಗಾಗಿ, ಜೈಲು ಸೇರಿದರು. ಆದರೆ ಕ್ಷಮಾದಾನ ನೀಡಿ ಆತನನ್ನು 2 ವರ್ಷದಲ್ಲೇ ಬಿಡುಗಡೆಗೊಳಿಸಲಾಯಿತು. ಅದು ಕ್ಯಾಸ್ಟ್ರೊ ಪಾಲಿಗೆ ವರವಾಯಿತು. ಕ್ಯಾಸ್ಟ್ರೊ ಅಮೆರಿಕಕ್ಕೆ ತೆರಳಿದರು. ಅಲ್ಲಿಂದ ಮೆಕ್ಸಿಕೊದತ್ತ  ನಡೆದರು. ಬತಿಸ್ತಾ ವಿರುದ್ಧ ಗೆರಿಲ್ಲಾ ಹೋರಾಟಕ್ಕೆ ನೀಲನಕ್ಷೆ ತಯಾರಿಸಿದರು. ಕಮ್ಯುನಿಸ್ಟ್‌ ನಾಯಕ ಚೆಗೆವಾರ ತನ್ನ ಕೈ ಜೋಡಿಸಿದ್ದು ಅವರ ಬಲ ಹೆಚ್ಚಿಸಿತ್ತು.

ಮೂರು ವರುಷಗಳ ತರುವಾಯ ಅಂದರೆ 1956ರಲ್ಲಿ ಕ್ಯಾಸ್ಟ್ರೊ ನೇತೃತ್ವದ ಸುಮಾರು 82 ಮಂದಿ ಕ್ರಾಂತಿಕಾರಿಗಳು ಕ್ಯೂಬಾಕ್ಕೆ ಬಂದಿಳಿದರು. ಗಿರಿಕಂದರಗಳಲ್ಲಿ ಅಡಗುತಾಣ ನಿರ್ಮಿಸಿಕೊಂಡರು. ಆ ಅಡಗುತಾಣದಿಂದಲೇ ಬತಿಸ್ತಾ ವಿರುದ್ಧ ಜನಾಭಿಪ್ರಾಯ ರೂಪಿಸುವ, ತರುಣರನ್ನು, ವಿದ್ಯಾರ್ಥಿಗಳನ್ನು ಚಳವಳಿಗೆ ಜೋಡಿಸಿಕೊಳ್ಳುವ, ಅವರಿಗೆ ಬಂದೂಕು ಸರಬರಾಜು ಮಾಡುವ ಕೆಲಸಗಳು ನಡೆದವು. ಬತಿಸ್ತಾ ದುರಾಡಳಿತದಿಂದ ರೋಸಿಹೋಗಿದ್ದ ಕ್ಯೂಬಾದ ಜನ ಕ್ಯಾಸ್ಟ್ರೊ ಕ್ರಾಂತಿಯಲ್ಲಿ ಹೊಸಬೆಳಕನ್ನು ಕಂಡರು. ಪರಿಣಾಮ 1958ರ ಹೊತ್ತಿಗೆ ಕ್ಯಾಸ್ಟ್ರೊ ಬೆನ್ನಿಗೆ ದೊಡ್ಡ ಪಡೆಯೊಂದು ಸಿದ್ಧವಾಗಿತ್ತು. ಆಯುಧಗಳೊಂದಿಗೆ ಕ್ಯಾಸ್ಟ್ರೊ ಪಡೆ ಬೀದಿಗೆ ಇಳಿಯಿತು. ದೇಶದಲ್ಲಿ ಅರಾಜಕತೆ ಸೃಷ್ಟಿಯಾಯಿತು. ಬತಿಸ್ತಾ ಬೆನ್ನಿಗೆ ಕಳಂಕ ಅಂಟಿಕೊಂಡಿತ್ತಾದ್ದರಿಂದ ಅಮೆರಿಕವೂ ಮೌನ ವಹಿಸಿತು. ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಬತಿಸ್ತಾ 1959ರ ಜನವರಿ 1ರಂದು ಕ್ಯೂಬಾ ತೊರೆದು ಅಮೆರಿಕ ಸೇರಿಕೊಂಡಿದ್ದ.

ಬತಿಸ್ತಾ ದೇಶಬಿಟ್ಟು ಪರಾರಿಯಾದ ಬಳಿಕ ಕ್ಯಾಸ್ಟ್ರೊ1959ರಲ್ಲಿ ಕ್ಯೂಬಾದ ಚುಕ್ಕಾಣಿ ಹಿಡಿದರು. ಅದಾಗ ಅವರಿಗೆ ಕೇವಲ 33 ವರ್ಷ! ಅಧಿಕಾರ ಕೈಗೆ ಬರುತ್ತಲೇ ಮಾರ್ಕ್ಸ್ ಮತ್ತು ಲೆನಿನ್ ಮಾರ್ಗದಲ್ಲಿ ನಡೆಯುವುದಾಗಿ ಘೋಷಿಸಿದರು. ಕ್ಯೂಬಾದ ಆರ್ಥಿಕತೆಯ ಮೇಲಿದ್ದ ಅಮೆರಿಕದ ಹಿಡಿತ ಸಡಿಲಾಗುವಂತೆ ನೋಡಿಕೊಂಡರು. ಅಮೆರಿಕನ್ನರ ಒಡೆತನದಲ್ಲಿದ್ದ ಎಲ್ಲ ಉದ್ದಿಮೆಗಳನ್ನು ರಾಷ್ಟ್ರೀಕರಣಗೊಳಿಸಿದರು. ಅಮೆರಿಕದ ಭೂಮಾಲೀಕರನ್ನು ಕ್ಯೂಬಾದಿಂದ ಹೊರದಬ್ಬಲಾಯಿತು. ಉಳುವವನಿಗೆ ಭೂಮಿ ದಕ್ಕಿತು. ಉದ್ದಿಮೆಗಳು ಗಳಿಸಿದ ಲಾಭದಲ್ಲಿ ಶೇಕಡ 30ನ್ನು ನೌಕರರಿಗೆ ಹಂಚಬೇಕು ಎಂಬುದು ಕಾನೂನಾಯಿತು. ಆದರೆ ಅಮೆರಿಕದ ನಂಟು ತೊರೆದು ಅರ್ಥವ್ಯವಸ್ಥೆಯನ್ನು ಎತ್ತಿಹಿಡಿಯುವುದು ಸುಲಭವೇನೂ ಆಗಿರಲಿಲ್ಲ.

ಬ್ರಿಟಿಷ್ ಇತಿಹಾಸತಜ್ಞ ಹ್ಯೂ ಥಾಮ್ಸನ್ ‘Cuba or The pursuit of Freedom’ ಕೃತಿಯಲ್ಲಿ, ಕ್ಯಾಸ್ಟ್ರೊ ಆಡಳಿತ ಮೊದಲ ಹತ್ತು ವರ್ಷಗಳಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಬರೆದಿದ್ದಾರೆ. ಕ್ಯೂಬಾದ ರಾಜಕೀಯ ಅಸ್ಥಿರತೆಯಿಂದ ಕಳವಳಗೊಂಡು ವೈದ್ಯರು, ತಾಂತ್ರಿಕ ನಿಪುಣರು, ಶಿಕ್ಷಣ ತಜ್ಞರು, ಉದ್ಯಮಿಗಳು 90 ಮೈಲಿಯಾಚೆಗಿನ ದೊಡ್ಡಣ್ಣನ ಅಂಗಳಕ್ಕೆ ತಲುಪಿ, ನಿರಾಶ್ರಿತರ ಶಿಬಿರ ಸೇರಿಕೊಂಡರು. ಕ್ಯೂಬಾದ ಜನತೆ ಭವಿಷ್ಯದ ಬಗ್ಗೆ ಕಳವಳಗೊಂಡು ಕುಳಿತಿತ್ತು. ಅಮೆರಿಕದ ವೈರತ್ವ ಕಟ್ಟಿಕೊಂಡಿದ್ದ ಕ್ಯಾಸ್ಟ್ರೊ, ಕ್ಯೂಬಾವನ್ನು ಪುನರ್ ನಿರ್ಮಿಸುವ ಕೆಲಸಕ್ಕೆ ರಷ್ಯಾವನ್ನು ಬಳಸಿಕೊಂಡರು. 
ಇದರಿಂದ ಅಮೆರಿಕ ಮತ್ತಷ್ಟು ಕೆರಳಿತು. ತನ್ನ ಬಗಲಲ್ಲೇ ಕಮ್ಯುನಿಸ್ಟ್‌ ರಾಷ್ಟ್ರವೊಂದು ಉದಯವಾಗುವುದು ಅಮೆರಿಕಕ್ಕೆ ಬೇಕಿರಲಿಲ್ಲ.

ರಷ್ಯಾದೊಂದಿಗಿನ ಕ್ಯೂಬಾ ಸ್ನೇಹವನ್ನು ಅಮೆರಿಕ ಸಹಿಸಲಿಲ್ಲ. ಕ್ಯಾಸ್ಟ್ರೊ ಹಿಡಿತದಿಂದ ಕ್ಯೂಬಾವನ್ನು ಮುಕ್ತಗೊಳಿಸಲು ಅಮೆರಿಕ ಹವಣಿಸಿತು. ಅಂದಿನ ಅಮೆರಿಕ ಅಧ್ಯಕ್ಷ ಐಸೆನ್ ಹೋವರ್, ಸುಮಾರು 87.10 ಕೋಟಿ ರೂಪಾಯಿಯಷ್ಟನ್ನು ಕ್ಯಾಸ್ಟ್ರೊ ಪದಚ್ಯುತಗೊಳಿಸಲು ತೆಗೆದಿರಿಸಿದ್ದರು. ಕೆನಡಿ ಅವಧಿಯಲ್ಲಿ ಅದಕ್ಕೆ ಅಧಿಕೃತ ಮುದ್ರೆಬಿತ್ತು. ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿಐಎ, ಕ್ಯಾಸ್ಟ್ರೊ ಆಡಳಿತವನ್ನು ವಿರೋಧಿಸುತ್ತಿದ್ದ ಕ್ರಾಂತಿಕಾರಿ ಪಡೆಗಳನ್ನು ಒಟ್ಟುಮಾಡಿ ಅವರಿಗೆ ಹಣ, ಶಸ್ತ್ರ ಪೂರೈಸಿತು. ಈ ಗುಂಪುಗಳನ್ನು ಹುರಿದುಂಬಿಸಿ ‘ಬೇ ಆಫ್ ಪಿಗ್ಸ್ ದಾಳಿ’ಗೆ ಪ್ರಚೋದಿಸಿತು. ಅಮೆರಿಕ ಬೆಂಬಲದಿಂದ ಬ್ರಿಗೇಡ್ 2506 ಎಂಬ 1400 ಜನರ ಪಡೆ, ಐದು ತಂಡಗಳಾಗಿ 1961ರ ಏಪ್ರಿಲ್ 17ರಂದು ಕ್ಯೂಬಾದ ಮೇಲೆ ದಾಳಿ ಮಾಡಿತು. ಆದರೆ ಈ ಗುಂಪು ನಾಲ್ಕನೆಯ ದಿನಕ್ಕೆ ತನ್ನ ಹೋರಾಟವನ್ನು ಮುಂದುವರಿಸುವಷ್ಟು ಶಕ್ತವಾಗಿರಲಿಲ್ಲ. ಕ್ಯೂಬಾದ ಮಿಲಿಟರಿ ಮೇಲುಗೈ ಸಾಧಿಸಿತು.

ಅಮೆರಿಕ ಈ ದಾಳಿಯ ಹಿಂದಿದೆ ಎಂಬ ಸುದ್ದಿ ಜಗಜ್ಜಾಹೀರಾಗುತ್ತಲೇ ಕೆನಡಿ ದೂರ ಸರಿದು ನಿಂತರು. ಆದರೆ ದೊಡ್ಡಣ್ಣನ ದರ್ಪಕ್ಕೆ ಕ್ಯೂಬಾ ಪೆಟ್ಟುಕೊಟ್ಟಿತ್ತು. ಕ್ಯಾಸ್ಟ್ರೊ ಜನಪ್ರಿಯತೆ ಮತ್ತಷ್ಟು ಹೆಚ್ಚಿತು. ಕ್ಯೂಬಾ ಮತ್ತು ರಷ್ಯಾ ಸ್ನೇಹ ತಂತುಗಳು ಇನ್ನಷ್ಟು ಗಟ್ಟಿಯಾದವು. ‘ಬೇ ಆಫ್ ಪಿಗ್ಸ್ ದಾಳಿ’, ‘ಕ್ಯೂಬನ್ ಮಿಸೈಲ್ ಕ್ರೈಸಿಸ್’ಗೆ ಮುನ್ನುಡಿ ಬರೆಯಿತು.

ಬಿಡಿ, ಆ ಹತ್ತು ದಿನಗಳಂತೂ ಅಮೆರಿಕದ ಪಾಲಿಗೆ ಆತಂಕದ ದಿನಗಳು. 1962ರ ಅಕ್ಟೋಬರ್ 14ರಿಂದ ಹತ್ತು ದಿನಗಳ ಕಾಲ ಇಡೀ ಜಗತ್ತು ಗಾಬರಿಯಿಂದ ಕ್ಯೂಬಾದತ್ತ ನೋಡುತ್ತಿತ್ತು. ಸೋವಿಯತ್ ರಷ್ಯಾ, ಕ್ಯೂಬಾ ಸಹಕಾರ ಪಡೆದು ಅಮೆರಿಕದ ದೊಡ್ಡ ನಗರಗಳ ಮೇಲೆ ದಾಳಿ ಮಾಡಲು ಅಣ್ವಸ್ತ್ರ ಕ್ಷಿಪಣಿಗಳನ್ನು ಕ್ಯೂಬಾದಲ್ಲಿ ನೆಟ್ಟಿತ್ತು. ಯುದ್ಧ ನಡೆದರೆ ಕ್ಯೂಬಾ ಸೇನೆ ಮುನ್ನಡೆಸಲು ಚೆಗೆವಾರ ಸನ್ನದ್ಧವಾಗಿದ್ದರು. ಈ ವಿಷಯ ತಿಳಿದೊಡನೆ ಕೆನಡಿ, ಸೋವಿಯತ್ ಯೂನಿಯನ್ ನಾಯಕ ಕ್ರುಶ್ಚೇವ್ ಜೊತೆಗೆ ಮಾತುಕತೆಗೆ ಕುಳಿತರು. ಕೊಡುಕೊಳ್ಳುವ ಮಾತುಕತೆಗಳಾಗಿ, ಕೊನೆಗೆ ಅಮೆರಿಕ ಟರ್ಕಿಯಲ್ಲಿ ಅಣಿಗೊಳಿಸಿದ್ದ ಅಣ್ವಸ್ತ್ರ ಕ್ಷಿಪಣಿಗಳನ್ನು ತೆಗೆಯಿತು. ಸೋವಿಯತ್, ಕ್ಯೂಬಾದಿಂದ ಹೊರ ನಡೆಯಿತು. ಸೋವಿಯತ್-ಅಮೆರಿಕ ಕೈ ಕುಲುಕಿದ್ದರಿಂದ ಕ್ಯಾಸ್ಟ್ರೊಅಸಮಾಧಾನಗೊಂಡರು. ‘ಒಂದೊಮ್ಮೆ ಕ್ಷಿಪಣಿಗಳು ನಮ್ಮ ಹಿಡಿತದಲ್ಲಿದ್ದರೆ, ಕತೆ ಬೇರೆಯೇ ಇರುತ್ತಿತ್ತು’ ಎಂದು ಚೆಗೆವಾರ ಪ್ರತಿಕ್ರಿಯಿಸಿದ್ದರು.

ನಂತರ ಅಮೆರಿಕ ಸಿಐಎ ಮೂಲಕ ಕ್ಯಾಸ್ಟ್ರೊ ಪದಚ್ಯುತಗೊಳಿಸಲು ಹಲವು ಬಾರಿ ಪ್ರಯತ್ನಿಸಿದ್ದಲ್ಲದೆ, ಕೊಲ್ಲುವ ಯೋಜನೆಯನ್ನೂ ರೂಪಿಸಿತ್ತು ಎಂಬ ಆರೋಪ ಇದೆ. ಸಿಗಾರ್ ಮೋಹಿಯನ್ನು ಸಿಗಾರ್ ಸ್ಫೋಟಿಸಿ ಕೊಲ್ಲುವ, ವಿಷ ಪ್ರಾಶನದ ಮೂಲಕ ಹತ್ಯೆ ಮಾಡುವ ಪ್ರಯತ್ನಗಳು ನಡೆದಿವೆ. ಸ್ವತಃ ಕ್ಯಾಸ್ಟ್ರೊ ಈ ಬಗ್ಗೆ ಹಲವು ವೇದಿಕೆಗಳಲ್ಲಿ ಮಾತನಾಡಿದ್ದರು. ಆದರೆ ಸಿಐಎ ಆರೋಪವನ್ನು ನಿರಾಕರಿಸಿತ್ತು.

ಮುಂದೆ ಕ್ಯಾಸ್ಟ್ರೊ ನಾಯಕತ್ವದಲ್ಲಿ ಕ್ಯೂಬಾ ಒಳಿತು ಕೆಡುಕು ಎರಡನ್ನೂ ಕಂಡಿತು. ಸರ್ವಾಧಿಕಾರ ಒಡ್ಡುವ ಎಲ್ಲ ಅಪಾಯಗಳಿಗೆ ಕ್ಯೂಬಾ ಸಾಕ್ಷಿಯಾಯಿತು. ಮಾನವ ಹಕ್ಕುಗಳ ಉಲ್ಲಂಘನೆ ಆಯಿತು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಮೊಳಕೆಯಲ್ಲೇ ಚಿವುಟಲಾಯಿತು. ಮಾಧ್ಯಮಗಳು ಸರ್ಕಾರದ ಅಧೀನಕ್ಕೆ ಒಳಪಟ್ಟವು. ಆರ್ಥಿಕವಾಗಿ ಕೂಡ ಕ್ಯೂಬಾ ಕುಸಿಯಿತು. ಎಷ್ಟೆಂದರೆ ಒಂದು ಹಂತದಲ್ಲಿ ಕ್ಯೂಬಾ ತನ್ನ ಎಲ್ಲ ಅಗತ್ಯಗಳಿಗೂ ರಷ್ಯಾವನ್ನು ಅವಲಂಬಿಸುವ ಸ್ಥಿತಿ ತಲುಪಿತ್ತು. ಮಾಸ್ಕೋದ ಆರ್ಥಿಕ ನೆರವಿಗೆ ಹವಾನಾ ಕಾಯುತ್ತಿತ್ತು. ಆದರೆ 91ರ ಸೋವಿಯತ್ ಪತನದ ನಂತರ ಕ್ಯೂಬಾ ಜಾಗೃತವಾಯಿತು. ನವಚೈತನ್ಯ ಪಡೆದುಕೊಂಡಿತು. ಅಮೆರಿಕದ ಆರ್ಥಿಕ ದಿಗ್ಬಂಧನ ಇದ್ದರೂ, ರಷ್ಯಾ ಹೋಳಾದರೂ ಕ್ಯೂಬಾದ ಜನ ಧೃತಿಗೆಡಲಿಲ್ಲ. ತಮ್ಮಲ್ಲಿ ಉಪಲಬ್ಧವಿದ್ದ ವಸ್ತುಗಳನ್ನೇ ಸೃಜನಾತ್ಮಕವಾಗಿ ಬಳಸಿ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟರು. ಹೊಸ ಅನ್ವೇಷಣೆಗಳಾದವು. ಇಂತಹ ಉಪಾಯಗಳನ್ನು ಒಟ್ಟುಮಾಡಿ 1992ರಲ್ಲಿ ಕ್ಯೂಬಾ ಸರ್ಕಾರ ‘With Our Own Efforts’ ಎಂಬ ಕಿರುಹೊತ್ತಿಗೆಯನ್ನು ಮುದ್ರಿಸಿ ಜನರಿಗೆ ಹಂಚಿತ್ತು. ‘Cuban home became a laboratory for inventions and survival’ ಎಂದು ಇತರ ದೇಶಗಳ ಪತ್ರಿಕೆಗಳು ಬರೆದವು.

ಕೊನೆಗೆ ಸಿದ್ಧಾಂತವಾದಿ ಕ್ಯಾಸ್ಟ್ರೊ ಕೂಡ ಬದಲಾದರು! ಮೊದಮೊದಲು ‘Socialism Or Death’ ಎನ್ನುತ್ತಿದ್ದ ಕ್ಯಾಸ್ಟ್ರೊ, ನಂತರ ಕಮ್ಯುನಿಸಂನತ್ತ ಹೊರಳಿ ರಷ್ಯಾ ಮಾದರಿ ಎನ್ನುತ್ತಿದ್ದ ಕ್ಯಾಸ್ಟ್ರೊ, ತೊಂಬತ್ತರ ದಶಕದಿಂದೀಚೆಗೆ ರಾಷ್ಟ್ರೀಯವಾದ, ಸಮಾಜವಾದ ಮತ್ತು ಕಮ್ಯುನಿಸಂ ಎಂಬ ಮೂರು ಸಿದ್ಧಾಂತಗಳೂ ಕೂಡುವ ವೃತ್ತದೊಳಗೆ ನಿಂತು ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ತಂದರು.

ಇಷ್ಟರ ಹೊರತಾಗಿ, ಕ್ಯಾಸ್ಟ್ರೊ ಬದುಕು ವೈರುಧ್ಯಗಳ ಮೂಟೆ. ವ್ಯಕ್ತಿ ಆರಾಧನೆ ವಿರೋಧಿಸಿ ಬಂಡಾಯ ಎದ್ದ ಕ್ಯಾಸ್ಟ್ರೊ, ತಾನೇ ವ್ಯಕ್ತಿಪೂಜೆ ಭಾಗವಾದರು. ಸರ್ವಾಧಿಕಾರ ಕೂಡದೆಂದು ಸೆಟೆದು ನಿಂತವರು, ಸೈದ್ಧಾಂತಿಕ ವಿರೋಧಿಗಳನ್ನು ಬಂಧಿಸಿಟ್ಟು 49 ವರ್ಷ ತನ್ನಿಚ್ಛೆಯಂತೆ ಆಡಳಿತ ನಡೆಸಿದರು. ವಂಶಪಾರಂಪರ್ಯ ಆಡಳಿತ ಕೂಡದು ಎಂದಿದ್ದೇನೋ ಖರೆ, ತಾವು ಬದಿಗೆ ಸರಿಯುವಾಗ 84 ವರ್ಷದ ತಮ್ಮನಿಗೆ ಕ್ಯೂಬಾ ಚುಕ್ಕಾಣಿ ನೀಡಿದರು. ಕ್ಯಾಸ್ಟ್ರೊ ಅವರಿಗಿದ್ದ ಇತರ ಖಯಾಲಿಗಳನ್ನು ‘ಡಬಲ್ ಲೈಫ್ ಆಫ್ ಕ್ಯಾಸ್ಟ್ರೊ’ ಕೃತಿ ಅನಾವರಣಗೊಳಿಸಿತ್ತು.

ಬಿಡಿ, ಅದೇನೇ ಇದ್ದರೂ ಒಂದು ದೇಶವನ್ನು ಸರಿಸುಮಾರು ಐದು ದಶಕಗಳ ಕಾಲ ಆಳುವುದೆಂದರೆ ಸುಲಭದ ಮಾತಲ್ಲ. ಇಂಗ್ಲೆಂಡಿನ ರಾಣಿಯನ್ನು ಹೊರತು ಪಡಿಸಿದರೆ, ಬಹುಶಃ ಬೇರಾವ ರಾಷ್ಟ್ರವೂ ಒಬ್ಬ ನಾಯಕನಿಗೆ ತನ್ನನ್ನು ಇಷ್ಟು ವರ್ಷಗಳ ಕಾಲ ಒಪ್ಪಿಸಿಕೊಳ್ಳಲಿಲ್ಲ. ಅಮೆರಿಕದಲ್ಲಿ ಐಸೆನ್ ಹೋವರ್ ಮೊದಲಾಗಿ ಒಬಾಮವರೆಗೆ ಹಲವು ಅಧ್ಯಕ್ಷರು ಈ ಕಾಲಘಟ್ಟದಲ್ಲಿ ಆಗಿ ಹೋದರು. ಆದರೆ ಕ್ಯಾಸ್ಟ್ರೊ ಮಾತ್ರ ಕ್ಯೂಬಾದಲ್ಲಿ ಅಗ್ರ ನಾಯಕನಾಗಿ ಜಗ್ಗದೆ ಕುಳಿತುಬಿಟ್ಟಿದ್ದಾರೆ. ಬಹುಶಃ ‘ಶೀತಲ ಸಮರ’ ಎಂಬ ವಿಶ್ವದ ರಾಜಕೀಯ ಚದುರಂಗದಾಟದಲ್ಲಿ ಕಾಯಿ ನಡೆಸಿದ ಆಟಗಾರರ ಪೈಕಿ ಜೀವಂತ ಇರುವುದು ಕ್ಯಾಸ್ಟ್ರೊ ಒಬ್ಬರೇ ಎನಿಸುತ್ತದೆ. ಈ ಒಂಬತ್ತು ದಶಕಗಳ ಕ್ಯಾಸ್ಟ್ರೊ ಬದುಕಿನಲ್ಲಿ ಇಣುಕಿದರೆ, ಕ್ಯೂಬಾ ಎಂಬ ಪುಟ್ಟ ರಾಷ್ಟ್ರ ಮುದುಡಿದ, ಕೆರಳಿದ, ಅರಳಿದ ಕತೆ ತೆರೆದುಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT