ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಮನೆಯ ದೊಡ್ಡಮನುಷ್ಯ

Last Updated 8 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಅವರು ನಮ್ಮೂರ ಗೇಟಿನಲ್ಲಿ ಬಸ್ಸಿಳಿದು ಸೂಟುಬೂಟು ಧರಿಸಿ ಗತ್ತಿನಿಂದ ಮಾರಮ್ಮನ ಗುಡಿ ಬಳಸಿ, ಮಳೆಕೂನಿ ಹಳ್ಳದೊಳಗಾಸಿ ಹೆರಗನಹಳ್ಳಿಗೆ ಹೋಗುತ್ತಿದ್ದುದನ್ನು ಹುಡುಗರಾಗಿದ್ದ ನಾವೆಲ್ಲ ಭಯದಿಂದ ಅವಿತು ನೋಡುತ್ತಿದ್ದೆವು.

ಅವರ ಒಳಮುಖೀ ಮೌನ ಮತ್ತು ದೇಹಾಕೃತಿಗಳು ಭಯ ಹುಟ್ಟಿಸುತ್ತಿದ್ದವು. ನಮ್ಮ ಇಡೀ ಪ್ರಾಂತ್ಯಕ್ಕೆ ಅವರು ಮೊಟ್ಟಮೊದಲ ದುಪ್ಟೀ ಕಮೀಸನರ್ರು ಆದ್ದರಿಂದ ಭಯ ಸಹಜವಾಗಿತ್ತು. ಇದರ ಜತೆಗೆ ಪುಸ್ತಕಾನೂ ಬರೀತಾರಂತೆ ಅನ್ನುವ ಮಾತೂ ಸೇರಿಕೊಂಡು ಭಯದ ಜತೆ ಗೌರವವೂ ಸೇರಿಕೊಂಡಿತ್ತು.

ಹೆರಗನಹಳ್ಳಿ ನಮ್ಮ ಪಕ್ಕದ ಗ್ರಾಮ. ಎರಡು ಮೈಲು ಅಂತರವಿರುವ ಈ ಪುಟ್ಟ ಗ್ರಾಮಕ್ಕೆ ತುಂಬಿದ ಕೆರೆ, ನಳನಳಿಸುವ ಗದ್ದೆಗಳಿವೆ. ಈ ಊರಿನ ದೊಡ್ಡಮನೆಯಲ್ಲಿ ಜನಿಸಿದವರು ನಾಗೇಗೌಡರು. ಅವರು ಮಾಡಿರುವ ಸಾಧನೆಗಳನ್ನು ನೋಡಿದರೆ ದೊಡ್ಡಮನೆಯ ದೊಡ್ಡಮನುಷ್ಯ ಅನ್ನಬಹುದು. ಈ ಮನುಷ್ಯ ತನ್ನ ಚೈತನ್ಯವನ್ನು ಏಕಕಾಲಕ್ಕೆ ಮೂರು ಬಗೆಯಲ್ಲಿ ಹರಡಿಕೊಂಡರು.

ಒಂದು ಕಡೆ ಜಿಲ್ಲಾಧಿಕಾರಿಯಾಗಿ ಒಳ್ಳೆಯ ಕೆಲಸ ಮಾಡಿದರು. ಇನ್ನೊಂದು ಕಡೆ ಜಾನಪದ ಸಂಗ್ರಹಕಾರರಾಗಿ ದೈತ್ಯವಾಗಿ ದುಡಿದರು. ಮೊದಲಿನೆರಡು ಕೆಲಸಗಳ ನಡುವೆ ತಮ್ಮೊಳಗಿನ ಲೇಖಕನನ್ನು ಕಾಯ್ದುಕೊಂಡು ಸೃಜನಶೀಲ ಮತ್ತು ಸೃಜನೇತರ ಬರವಣಿಗೆಯನ್ನು ಅಷ್ಟೇ ಪ್ರಖರವಾಗಿ ಮುಂದುವರಿಸಿದರು. ಜಿಲ್ಲಾಧಿಕಾರಿಯ ಜವಾಬ್ದಾರಿಯ ನಡುವೆ ಗಾತ್ರ ಮತ್ತು ಗುಣಗಳೆರಡರಲ್ಲೂ ಹೀಗೆ ಗಮನಾರ್ಹವಾದ ಕೆಲಸ ಮಾಡಿದ ಮತ್ತೊಬ್ಬರಿಲ್ಲ. ಅವರ ಪ್ರಧಾನ ಆಸಕ್ತಿ ಜಾನಪದ. ಹಾಗಾಗಿ ಅವರ ಎಲ್ಲ ಬರವಣಿಗೆಗಳಲ್ಲೂ ಜನಪದವೆಂಬುದು ಹಾಸುಹೊಕ್ಕಾಗಿದೆ.

ಪ್ರವಾಸ ಕಥನ ನಾ ಕಂಡ ಪ್ರಪಂಚ ಓದುವಾಗಲೂ ನೂರಾರು ಗಾದೆಗಳು ನುಸುಳುತ್ತವೆ. ದೊಡ್ಡಮನೆ, ಸೊನ್ನೆಯಿಂದ ಸೊನ್ನೆಗೆ, ಭೂಮಿಗೆ ಬಂದ ಗಂಧರ್ವ  ಓದುವಾಗಲೂ ವಿಪುಲವಾದ ಜಾನಪದ ವಿವರಗಳು ಕಾಣಸಿಗುತ್ತವೆ. ನಾಗೇಗೌಡರ ಬರವಣಿಗೆಯ ಜೀವಾಳವೇ ಜಾನಪದ. ಜಾನಪದಕ್ಕೆ ಇನ್ನೊಂದು ಹೆಸರು ಅವರು. ಒಂದು ನಂಬಿಕೆಗೆ, ಒಂದು ದರ್ಶನಕ್ಕೆ ಇಡಿಯಾಗಿ ಒಡ್ಡಿಕೊಂಡ   ಹೆಚ್. ಎಲ್. ನಾಗೇಗೌಡರು ಹೊರಬದುಕಿನಲ್ಲಿ ಅಮಲ್ದಾರ್ರು, ಡಿಸಿ ಸಾಹೇಬ್ರು, ಲೋಕಸೇವಾ ಆಯೋಗದ ಸದಸ್ಯರು, ಲೇಬರ್ ಕಮೀಶನರ್... ಹೀಗೆ ಏನೆಲ್ಲಾ ಆಗಿದ್ದರೂ ಒಳಬದುಕಿನಲ್ಲಿ ಧ್ಯಾನಿಸಿದ್ದು ಮಾತ್ರ ಜಾನಪದವೇ.

ಈಗ ಜಾನಪದ ಅಕಾಡೆಮಿ, ಜನಪದ ಅಧ್ಯಯನಕ್ಕೇ ಒಂದು ಪ್ರತ್ಯೇಕ ವಿಶ್ವವಿದ್ಯಾನಿಲಯ ಏನೆಲ್ಲಾ ಇವೆ. ಇವಾವೂ ಇಲ್ಲದ ಕಾಲದಲ್ಲಿ ನಾಗೇಗೌಡರು ತಮ್ಮ ಇಚ್ಛಾಶಕ್ತಿಯಿಂದ ಅಮೂಲ್ಯವಾದ ಜಾನಪದ ಸಂಪತ್ತನ್ನು ಸಂಗ್ರಹಿಸಿದ್ದರು.

ಅದರಲ್ಲಿ ಬಹುಮುಖ್ಯವಾದದ್ದು ಹೆರಗನಹಳ್ಳಿಯ ಸೋಬಾನೆ ಚಿಕ್ಕಮ್ಮನ ಹಾಡುಗಳ ಸಂಗ್ರಹ. ಈ ಸಂಗ್ರಹವನ್ನು ಅಮೂಲ್ಯನಿಧಿ ಎನ್ನಬೇಕು. ನಾಗೇಗೌಡರು ನಾಡಿನ ಮೂಲೆ ಮುಡುಕುಗಳನ್ನು ಶೋಧಿಸಿ ಅಜ್ಞಾತ ಕಲಾವಿದರನ್ನು ಕಂಡು ಅವರ ಪ್ರತಿಭೆಯನ್ನು ಶ್ರವ್ಯ ಮಾಧ್ಯಮದಲ್ಲೂ, ದೃಶ್ಯ ಮಾಧ್ಯಮದಲ್ಲೂ ದಾಖಲಿಸಿದ ಸಾಹಸಿ. ಸಾವಿರಾರು ಗಂಟೆ ಕೇಳಬಹುದಾದ, ನೋಡಬಹುದಾದ ಜನಪದ ಸಿರಿಯನ್ನು ಸಂಗ್ರಹಿಸಿಟ್ಟು ಹೋದ ನಾಗೇಗೌಡರು ಒಬ್ಬ ವ್ಯಕ್ತಿಯಲ್ಲ, ಒಂದು ಜನಪದ ಪರಂಪರೆಯಂತೆ ಕಾಣಿಸುತ್ತಾರೆ.

ರಾಮನಗರದ ಬಳಿ ಇರುವ ಜಾನಪದ ಲೋಕ ನಾಗೇಗೌಡರ ಒಂದು ಸಾರ್ಥಕ ಕನಸು. ಈ ಲೋಕದೊಳಗೆ ಇಣುಕಿ ಬಂದವರಿಗೆ ನಾಗೇಗೌಡರ ಘನ ವ್ಯಕ್ತಿತ್ವದ ಕಿರುಪರಿಚಯ ವಾದರೂ ಆಗುತ್ತದೆ. ಮಹಾದ್ವಾರವನ್ನು ಪ್ರವೇಶಿಸಿದೊಡನೆ ದೊಡ್ಡಮನೆ ಸ್ವಾಗತಿಸುತ್ತದೆ. ಬಯಲು ರಂಗಮಂದಿರ, ಲೋಕನಿವಾಸ, ಸರಸ್ವತೀ ಮಂದಿರ, ಚಿತ್ರಕುಟೀರ, ಕಿನ್ನರಿ-ಕಂಸಾಳೆ, ಜನಪದ ಮಂಟಪಗಳಿವೆ. ತಾನು ಶ್ರಮವಹಿಸಿ ಸಂಗ್ರಹಿಸಿದ ಎಲ್ಲ ಜನಪದೀಯ ವಸ್ತುವೈವಿಧ್ಯಗಳನ್ನು ಮುಂದಿನ ತಲೆಮಾರಿಗಾಗಿ ಇಲ್ಲಿ ನಾಗೇಗೌಡರು ಕಾಯ್ದಿರಿಸಿ ಹೋಗಿದ್ದಾರೆ. ಅನೇಕ ಶಿಬಿರ, ಕಾರ್ಯಾಗಾರ, ತರಬೇತಿ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ ಗಳಿಗೆ ಜಾನಪದ ಲೋಕ ಸದಾ ತೆರೆದುಕೊಂಡಿದೆ.

ನಾಗೇಗೌಡರ ಪರಂಪರೆಗೆ ಸೇರಿದ ಮತ್ತೊಬ್ಬ ಮಹನೀಯರು ಜಿ ನಾರಾಯಣ. ಅವರು ನಾಗೇಗೌಡರು ನಿವೃತ್ತರಾದಾಗ ಅರ್ಪಿಸಿದ ಲಕ್ಷ ರೂಪಾಯಿಗಳ ನಿಧಿಯನ್ನು ಒಂದು ಟ್ರಸ್ಟ್‌ಗೆ ವರ್ಗಾಯಿಸಿ, ಆ ಸಂಸ್ಥೆ ಕರ್ನಾಟಕ ಜಾನಪದ ಪರಿಷತ್ತು ಆಗಿ, ಇಂದು ಬಹಳ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಯಾವ ಘನ ಉದ್ದೇಶದಿಂದ ನಾಗೇಗೌಡರು ಈ ಪರಿಷತ್ತನ್ನು ಆರಂಭಿಸಿದರೋ ಆ ಎಲ್ಲಾ ಉದ್ದೇಶಗಳನ್ನು ನಿಜಗೊಳಿಸುವ ಪ್ರಯತ್ನವನ್ನು ಈ ಪರಿಷತ್‌ನಲ್ಲಿ ಕಾಣಬಹುದು. ಇದೀಗ ನಿವೃತ್ತ ಐಎಎಸ್ ಅಧಿಕಾರಿ ಟಿ. ತಿಮ್ಮೇಗೌಡರು ಈ ಪರಿಷತ್ತಿನ ಅಧ್ಯಕ್ಷರಾಗಿ ಅವರೊಟ್ಟಿಗೆ ಉತ್ಸಾಹ ಮತ್ತು ಶ್ರದ್ಧೆಯಿಂದ ದುಡಿಯುವ ಪಡೆಯೊಂದಿಗೆ ಹತ್ತಾರು ಯೋಜನೆಗಳನ್ನು ಹಾಕಿಕೊಂಡು ಕೆಲಸ ಮಾಡುತ್ತಿದ್ದಾರೆ.

ಕರ್ನಾಟಕ ಜಾನಪದ ಪರಿಷತ್ತು ಮತ್ತು ಜಾನಪದ ಲೋಕ ಇವೆರಡರ ಸಂಸ್ಥಾಪಕರಾದ ನಾಡೋಜ ಹೆಚ್. ಎಲ್. ನಾಗೇಗೌಡರ ಜನ್ಮ ಶತಮಾನೋತ್ಸವದ ಈ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಫೆಬ್ರುವರಿ ೨೦೧೪ ರಿಂದ ೨೦೧೫ ರವರೆಗೆ ಒಂದು ವರ್ಷವಿಡೀ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅವರ ಹುಟ್ಟೂರು ಹೆರಗನಹಳ್ಳಿಯಲ್ಲಿ ಫೆಬ್ರುವರಿ ೧೧ರಂದು ನಾಗೇಗೌಡರ ಜನ್ಮ ಶತಮಾನೋತ್ಸವ ಆರಂಭಗೊಳ್ಳಲಿದೆ.

ಅದರ ಆದರ್ಶಗಳ ಕಿರಿಯ ಟಿಸಿಲುಗಳಂತೆ ಕಾಣಿಸುವ ಹೆಚ್. ಟಿ. ಕೃಷ್ಣಪ್ಪ, ಹೆಚ್. ಎಲ್. ಕೇಶವಮೂರ್ತಿ ಇವರುಗಳು ಮತ್ತು ನಾಡಿನ ಅನೇಕ ಜನಪದ ವಿದ್ವಾಂಸರು, ಆಸಕ್ತರು ಎಲ್ಲ ಕೂಡಿ ಈ ಉತ್ಸವವನ್ನು ಅರ್ಥಪೂರ್ಣಗೊಳಿಸಲು ಶ್ರಮಿಸುತ್ತಿದ್ದಾರೆ. ನಾಗೇಗೌಡರ ಕೃತಿಗಳನ್ನೂ ಅವರ ಸಂಗ್ರಹಗಳನ್ನೂ ಕಂಡಾಗ ಒಬ್ಬ ವ್ಯಕ್ತಿ ಇಷ್ಟು ಕೆಲಸವನ್ನು ಮಾಡಲು ಸಾಧ್ಯವಾಯಿತೆ ಎಂದು ಅಚ್ಚರಿಯಾಗುತ್ತದೆ.

ಕುವೆಂಪು ಅವರ ನೆನಪಿನ ದೋಣಿಯನ್ನು ಬಿಟ್ಟರೆ ವಿಸ್ತಾರವಾದ ಆತ್ಮಕಥನ ಬರೆದಿರುವವರು ನಾಗೇಗೌಡರು. ನಿರ್ದಾಕ್ಷಿಣ್ಯತೆ, ಅಪಾರ ಜ್ಞಾಪಕಶಕ್ತಿ, ಹಾಸ್ಯಪ್ರಜ್ಞೆ ಎಲ್ಲ ಮಿಳಿತಗೊಂಡಿರುವ ಅವರ ೫೦ ಕೃತಿಗಳು ಅವರ ಗ್ರಹಿಕೆಯ ವಿಸ್ತಾರವನ್ನೂ ಅವರ ಸೃಜನಶೀಲ ಶಕ್ತಿಯನ್ನೂ ಸಾರುತ್ತವೆ. ಅವರ ‘ಪ್ರವಾಸಿ ಕಂಡ ಇಂಡಿಯಾ’ದ ಎಂಟು ಸಂಪುಟಗಳನ್ನು ಕುರಿತು ಕುವೆಂಪು : ಇದು ಕನ್ನಡ ಸಾಹಿತ್ಯಕ್ಕೆ  ಅಪೂರ್ವ ಅದ್ವಿತೀಯ ಕೊಡುಗೆ. ಎರಡೂವರೆ ಸಾವಿರ ವರ್ಷಗಳ ಬಹು ವರ್ಣರಂಜಿತವೂ ನಾನಾ ವಿಧ ಮನೋಧರ್ಮ, ಸಂಪ್ರದಾಯ ಸಮೃದ್ಧವೂ ಆದ ಭಾರತೀಯ ಜೀವನದ ಇತಿಹಾಸ ಪುನರ್ ಸೃಷ್ಟಿ ಇಲ್ಲಿ ನಡೆದಿದೆ. ಇತಿಹಾಸಕಾರರಿಗೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೃಷಿ ಮಾಡುವವರಿಗೆ, ಸಮಾಜ ಹಾಗೂ ಜನಾಂಗ ವಿಜ್ಞಾನಿಗಳಿಗೆ, ಜಾನಪದ ವಿದ್ವಾಂಸರಿಗೆ ಹಾಗೂ ಪುರಾತತ್ವ ಸಂಶೋಧಕರಿಗೆ, ಸಾಹಿತಿಗಳಿಗೆ ಇದೊಂದು ತವನಿಧಿ ರೂಪದ ಆಕರ ಗ್ರಂಥ ಎನ್ನುತ್ತಾರೆ.

ನಾಗೇಗೌಡರು ಚಿಕ್ಕಮಗಳೂರಿನಲ್ಲಿ ಜಿಲ್ಲಾಧಿಕಾರಿಗಳಾಗಿದ್ದಾಗ ಬೆಟ್ಟದಿಂದ ಬಟ್ಟಲಿಗೆ ಎಂಬ ಶೀರ್ಷಿಕೆಯ ಕಾಫಿ ಕತೆಯನ್ನು ಲೇಖನವಾಗಿ ಪ್ರಜಾವಾಣಿಗೆ ಬರೆದರು. ಅನಂತರ ಅದೂ ಪುಸ್ತಕವಾಗಿ ಬೆಳೆಯಿತು. ಸರ್ ವಾಲ್ಟರ್ ಸ್ಕಾಟ್‌ನ ೮೦೦ ಪುಟಗಳ ಕೆನಿಲ್‌ವರ್ತ್ ಕಾದಂಬರಿಯನ್ನು ಸಂಗ್ರಹಿಸಿ ಕನ್ನಡಕ್ಕೆ ಅನುವಾದಿಸಿದರು. ದೊಡ್ಡಮನೆಯ ಈ ಜೀವ ಸ್ಪರ್ಶಿಸಿದ್ದೆಲ್ಲಾ, ಸಂಗ್ರಹಿಸಿದ್ದೆಲ್ಲಾ, ಸೃಷ್ಟಿಸಿದ್ದೆಲ್ಲಾ ದೊಡ್ಡದೆ. ಹತ್ತಿರದಲ್ಲಿರಲಿ, ದೂರದಲ್ಲೂ  ಇಂದಿನ ದಿನಮಾನದ ವೇಗದಲ್ಲಿ ಇಂಥ ದೈತ್ಯ, ವಿಪುಲ ವೈವಿಧ್ಯ ವಸ್ತುಗಳನ್ನು ನಿಭಾಯಿಸುವ ಇನ್ನೊಬ್ಬ ಲೇಖಕ ಕಾಣಿಸುತ್ತಿಲ್ಲ.

ಅವರು ದಂತಕಥೆಯಾಗಿಯೂ ಬದುಕಿದ್ದರು. ಹಳ್ಳಿಗರು ಊಟಕ್ಕೆ ಕರೆದರೆ ಅವರ ಮನೆಯ ಅಟ್ಟ ಹತ್ತಿ ಹಳೆಯ ವಸ್ತುಗಳನ್ನು ಹುಡುಕುತ್ತಿದ್ದರಂತೆ. ಹಿಂಗೋಳಿ ಮತ್ತು ಮುಂಗೋಳಿ ಕೂಗುವ ಸಮಯ ಮತ್ತು ಕೂಗು ಬೇರೆ ಬೇರೆಯಾದ್ದರಿಂದ ಮುಂಜಾನೆಯೇ ಟೇಪ್‌ರೆಕಾರ್ಡರ್ ಹಿಡಿದು ಹೊರಡುತ್ತಿದ್ದರಂತೆ. ಸಂಗ್ರಹ ಮತ್ತು ಸಂಶೋಧನೆಗಳ ಹಿಂದೆ ಸಾವಿರಾರು ರೋಚಕ ಕಥೆಗಳಿವೆ.

ಅವರು ಚುನಾವಣೆಗೆ ನಿಂತದ್ದೂ ಸೋತದ್ದೂ ಅಷ್ಟೇ ಸ್ವಾರಸ್ಯಕರ. ಚುನಾವಣಾ ಪ್ರಚಾರ ಭಾಷಣ ಮಾಡುತ್ತಾ ನನ್ನ ವಿರುದ್ಧ ಸ್ಪರ್ಧಿಸಿರುವ ಮಾದೇಗೌಡರು ತುಂಬಾ ಒಳ್ಳೆಯ ವ್ಯಕ್ತಿ, ದಕ್ಷ ಕೆಲಸಗಾರ. ಎರಡು ಓಟು ನೀಡುವ ಅವಕಾಶವಿದ್ದರೆ ನನಗೊಂದು, ಅವರಿಗೊಂದು ಕೊಡಿ ಎನ್ನುತ್ತಿದ್ದೆ. ಆದರೆ ಇರುವುದು ಒಂದೇ ಓಟು. ಅದನ್ನು ನನಗೇ ಕೊಡಿ. ಈ ಸಲ ಮಾದೇಗೌಡರಿಗೆ ವಿಶ್ರಾಂತಿ ಕೊಡೋಣ ಎನ್ನುತ್ತಾರೆ. ಆದರೆ ಮತದಾರ ನಾಗೇಗೌಡರಿಗೆ ವಿಶ್ರಾಂತಿ ಸೂಚಿಸುತ್ತಾನೆ !

ಈಗ ಏನಾಗುತ್ತಿದೆ ಎಂದು ಎಲ್ಲ ಬಲ್ಲೆವು. ಸಮೂಹ ಮಾಧ್ಯಮಗಳು, ಜಾಗತೀಕರಣ, ನಗರೀಕರಣ, ಔದ್ಯಮೀಕರಣ ಈ ಎಲ್ಲವುಗಳ ದಾಳಿಯಿಂದ ಜನಪದ, ಗ್ರಾಮಬದುಕು, ನೆಲಮೂಲ ನಂಬಿಕೆ ಆಚರಣೆಗಳು ಎಲ್ಲವೂ ಘಾಸಿಗೊಂಡು ಕಣ್ಮರೆಯಾಗುತ್ತಿವೆ. ಹನ್ನೆರಡು ಪಥದ ರಸ್ತೆ ಬಂದರೆ ಜಾನಪದ ಲೋಕವೂ ನೆಲಸಮವಾಗುತ್ತದೆ. ನಾಗೇಗೌಡರು ಮತ್ತು ಅಂಥ ಹಿರಿಯರು ಯೋಚಿಸಿದ್ದು, ಮಾಡಿದ್ದು ಎಂಥ ಘನವಾದ ಕಾಯಕ ಎಂದು ನಮಗೆ ಅರ್ಥವಾಗಬೇಕು.

ಶಾಸ್ತ್ರೀಯ ಕಲಾವಿದರಿಗೆ ಲಕ್ಷಾಂತರ ರೂಪಾಯಿ ಸಂಭಾವನೆ ಕೊಡುತ್ತಾ ಜನಪದ ಕಲಾವಿದರಿಗೆ ಚಿತ್ರಾನ್ನ ಕೊಟ್ಟು ಛತ್ರದಲ್ಲಿ ಮಲಗಿಸುವ ಉಪೇಕ್ಷೆ ಈಗಲೂ ನಮ್ಮ ಸರ್ಕಾರದ ಆಲೋಚನೆಯ ಭಾಗವಾಗಿದೆ. ಇನ್ನೊಂದು ಕಡೆ ನಿಜವಾದ ಜನಪದ ಕಲೆ, ಕಲಾವಿದರು ಮೂಲೆಗುಂಪಾಗಿ ಲೆಟರ್‌ಹೆಡ್ ಕಲಾವಿದರು, ನವಜಾನಪದ ಕಲಾವಿದರು ಮಿಂಚುತ್ತಿರುತ್ತಾರೆ. ಜನಪದ ಎನ್ನುವುದು ಹೊಟ್ಟೆಪಾಡಲ್ಲ; ಅದು ವಿಜ್ಞಾನ. ಕೃಷಿ, ಜನಪದ ವಿಜ್ಞಾನದ ಬಹುಮುಖ್ಯ ಭಾಗ ಎನ್ನುತ್ತಾರೆ ಡಾ. ಹಿ.ಶಿ. ರಾಮಚಂದ್ರೇಗೌಡ ತಮ್ಮ ‘ಜನಪದ ವಿಜ್ಞಾನ’ ಎಂಬ ಕೃತಿಯಲ್ಲಿ. ಈ ವಿಜ್ಞಾನ ಅನೇಕ ಶತಮಾನಗಳಿಂದ ನಮ್ಮ ಹಿರಿಯರು ಪ್ರಾಯೋಗಿಕವಾಗಿ ಕಂಡುಕೊಂಡ ಸತ್ಯವಾಗಿದೆ.

ನಾಗೇಗೌಡರು ಓದಿದ ನಮ್ಮೂರಿನ ಕೂಲಿಮಠದಲ್ಲೇ ನಾನೂ ಓದಿದ್ದು ಎಂಬುದು ನನಗಿರುವ ಹೆಮ್ಮೆ. ಆದರೆ ನಾನು ಓದುವ ವೇಳೆಗೆ ಬ್ರಿಟಿಷರು ನಮ್ಮ ಹಳ್ಳಿಯಲ್ಲಿ ಹೊಸ ಮಾದರಿಯ ಶಾಲೆಯನ್ನು ಆರಂಭಿಸಿದ್ದರು. ನಮ್ಮ ಊರಿನಲ್ಲಿ ಸರ್ಕಾರಿ ಶಾಲೆ ೧೯೨೫ರಲ್ಲೇ ಆರಂಭವಾಗಿತ್ತು. ಹೆಚ್.ಎಲ್. ನಾಗೇಗೌಡರಿಂದ ವೈಯಕ್ತಿಕವಾಗಿ ನಾವೆಲ್ಲ ಬಹಳಷ್ಟನ್ನು ಪಡೆದಿದ್ದೇವೆ. ನಮ್ಮ ಗ್ರಾಮಮುಖೀ ಚಿಂತನೆಗಳು ಹರಳುಗಟ್ಟಲು, ನಾವು ಗೆಳೆಯರೆಲ್ಲ ಹಳ್ಳಿಯಲ್ಲಿ ವಿವಿಧ ಪ್ರಯೋಗಗಳನ್ನು ನಮ್ಮ ಶಕ್ತ್ಯಾನುಸಾರ ಮಾಡಲು, ನಾಗೇಗೌಡರಂಥವರ ಚಿಂತನೆಗಳು, ಸಿಜಿಕೆಯವರಂಥವರ ಸಲಹೆಗಳು ಕಾರಣ. ಹತ್ತು ವರ್ಷಗಳ ಹಿಂದೆ ನಾಗತಿಹಳ್ಳಿ ಸಂಸ್ಕೃತಿ ಹಬ್ಬ ಎಂಬ ಪರಿಕಲ್ಪನೆಯನ್ನು ನಿಜಗೊಳಿಸಿದಾಗ ಅದನ್ನು ಉದ್ಘಾಟಿಸಲು ಬಂದ ನಾಗೇಗೌಡರು ಹೇಳಿದ ಮಾತುಗಳು ಈಗಲೂ ನನ್ನ ಕಿವಿಯಲ್ಲಿವೆ :

ಹಳ್ಳಿಗಳೇ ತಾಯಿಬೇರು. ನಮ್ಮ ಚಂದ್ರಶೇಖರ್ ಅಮೆರಿಕಾ, ಪ್ಯಾರಿಸ್, ಲಂಡನ್ ಎಂದು ಹಾರಾಡುವಾಗಲೂ ತನ್ನ ಹಳ್ಳಿಯನ್ನು ಮರೆತಿಲ್ಲ ಎಂದು ನನಗೆ ಸಮಾಧಾನವಾಗಿದೆ. ಬೇರೆ ಯಾರೂ ಹೊರಗಿನಿಂದ ಬಂದು ನಮ್ಮ ಹಳ್ಳಿಗಳನ್ನು ಕಾಪಾಡಲಾರರು. ತಾಯಂದಿರನ್ನು ನೋಡಿಕೊಂಡಂತೆ ನಾವೇ ನಮ್ಮ ಹಳ್ಳಿಗಳನ್ನು ನೋಡಿಕೊಳ್ಳಬೇಕು. ಈ ಕೆಲಸವನ್ನು ಎಲ್ಲ ಗ್ರಾಮಗಳ ಯುವಕರೂ ಆರಂಭಿಸಬೇಕು ಮತ್ತು ನಿರಂತರವಾಗಿ ಮುಂದುವರಿಸಿಕೊಂಡು ಹೋಗಬೇಕು. ಈ ಕ್ಷಣದವರೆಗೂ ನಾಗೇಗೌಡರ ಮಾತನ್ನು ನಾವೆಲ್ಲ ನಂಬಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT