ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೌಲತ್‌ಪುರದ ದೌರ್ಭಾಗ್ಯ ..!

ಅಕ್ಷರ ಗಾತ್ರ

ನಾವು ಅಂದು ಭೋಪಾಲದಿಂದ ಪೂರ್ವದತ್ತ ಇರುವ ಹಾಡಿಯನ್ನು ತಲುಪಲು ಸುಮಾರು ಎರಡು ತಾಸು ಪ್ರಯಾಣ ಬೆಳೆಸಿದ್ದೆವು. ರಾಜ್ಯ ಹೆದ್ದಾರಿ...ಜಿಲ್ಲಾ ರಸ್ತೆ...ಕೊನೆಗೆ ಮಣ್ಣಿನ ರಸ್ತೆಯಲ್ಲಿ ಕ್ರಮಿಸಿದೆವು. ಆ ಮಣ್ಣು ರಸ್ತೆಯು ಕಣಿವೆಯೊಂದರ ತುತ್ತ ತುದಿಗೆ ಕೊನೆಗೊಂಡಂತೆ ಇತ್ತು. ಅಲ್ಲೇ ಅನತಿ ದೂರದಲ್ಲಿ ಸಾತ್‌ಪುರ ಬೆಟ್ಟಸಾಲು ನಮ್ಮನ್ನು ಕೈಬೀಸಿ ಕರೆಯುತ್ತಿತ್ತು. ನಾನು ಹಾಗೂ ಗ್ರಾಮಲೆಕ್ಕಾಧಿಕಾರಿ ಇಕ್ಬಾಲ್ ಖಾನ್ ಇಬ್ಬರೂ ಅಲ್ಲಿಯೇ ನಮ್ಮ ಮೋಟಾರ್‌ಬೈಕ್ ನಿಲ್ಲಿಸಿದೆವು.

ಸುಂಯ್...ಎಂದು ಬೀಸುವ ಗಾಳಿಯ ಹೊರತಾಗಿ ಇಡೀ ಪರಿಸರವೇ ಮೌನ! ಅಲ್ಲಿಂದ ಮುಂದೆ ಕಾಲ್ನಡಿಗೆಯಲ್ಲಿ ಸುಮಾರು ಒಂದು ಮೈಲುದೂರ ಹೋದೆವು. ಅದೊಂದು ಹಾಡಿ. ದೌಲತ್‌ಪುರವೆಂಬ ಹೆಸರಿನ ಈ ಹಾಡಿಯಲ್ಲಿ ಸುಮಾರು 40 ಗುಡಿಸಲುಗಳು ಇವೆ. ಒಂದಿಬ್ಬರು ಪುಟಾಣಿಗಳನ್ನು ಹೊರತು ಪಡಿಸಿದರೆ ಅಲ್ಲಿ ಯಾವ ನರಪಿಳ್ಳೆಯೂ ಕಾಣಸಿಗಲಿಲ್ಲ. ಎಲ್ಲರೂ ಕೆಲಸಕ್ಕೆಂದು ಹೋಗಿದ್ದರು. ಇಕ್ಬಾಲ್ ಆ ಮಕ್ಕಳನ್ನು ಮಾತನಾಡಿಸಿದ. ಹೀಗೆ ಕೆಲ ಸಮಯ ಕಳೆದ ಬಳಿಕ ಕೆಲಸಕ್ಕೆ ಹೋಗಿದ್ದವರೆಲ್ಲ ಒಬ್ಬೊಬ್ಬರಾಗಿ ಮನೆಗೆ ಮರಳತೊಡಗಿದ್ದು ಕಂಡುಬಂತು.

ಅಸಲಿಗೆ ನಾವು ಅಲ್ಲಿ ಹೋಗಿದ್ದುದು ಅಲ್ಲಿನವರಿಗೆ ನೀರಿನ ವ್ಯವಸ್ಥೆಯನ್ನು ಸುಧಾರಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಸಲುವಾಗಿ. ಈ ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದೆವು. ಅವರಲ್ಲಿ ಫಿರ್ಣಿ ಎಂಬಾತ ಮಾತಿಗೆ ಶುರುವಿಟ್ಟ. ಬಿಗಿದುಕೊಂಡಿದ್ದ ಆತನ ಮುಖಭಾವವನ್ನು ನೋಡಿದರೆ ಆತ ತನ್ನ ವಯಸ್ಸಿಗಿಂತಲೂ ದೊಡ್ಡವನಂತೆ ಕಾಣುತ್ತಿದ್ದ. ಆತನಿಗೆ ಸುಮಾರು 30 ವರ್ಷಗಳು ಆಗಿರಬಹುದೇನೋ!

`ನಮಗೆ ನೀವು ನೆರವು ನೀಡುತ್ತೀರಾ?~ ಎಂತಾದ ಕೇಳಿದ. ತನ್ನ ಜನರಿಗೆ ಏನು ಬೇಕು ಎಂಬುದು ಆತನಿಗೆ ಚೆನ್ನಾಗಿ ಗೊತ್ತಿತ್ತು. ಪೂರ್ವದತ್ತ ಹಬ್ಬಿರುವ ಸಾತ್‌ಪುರ ಬೆಟ್ಟಶ್ರೇಣಿಯುದ್ದಕ್ಕೂ ಹರಿಯುವ ನಾಲೆಯ ಸನಿಹ ಅವರೊಂದು ನೀರಿನ ಸೆಲೆಯನ್ನು ಕಂಡುಕೊಂಡಿದ್ದರು. ಮತ್ತು ಅಲ್ಲೊಂದು ಸಣ್ಣ ಹೊಂಡವನ್ನು ನಿರ್ಮಿಸಿಕೊಂಡು ನೀರಿನ ಅಗತ್ಯವನ್ನು ಪೂರೈಸಿಕೊಳ್ಳಲು ಮುಂದಾಗಿದ್ದರು. `ಸುಮಾರು 30 ಅಡಿ ಆಳಕ್ಕೆ ಗುಂಡಿ ತೋಡಿದರೆ ನೀರು ಸಿಗುತ್ತದೆ.

ನಾವು ಎಂಟು ಮಂದಿ ಈ ಕೆಲಸ ಮುಗಿಸುವುದಕ್ಕೆ 30 ದಿನಗಳು ಬೇಕು. ಒಬ್ಬೊಬ್ಬರಿಗೂ ತಲಾ  50 ರೂಪಾಯಿ ದಿನಗೂಲಿಯಂತೆ ಒಟ್ಟು ಒಂದು ತಿಂಗಳಿಗೆ 12,000 ರೂಪಾಯಿ ಆಗುತ್ತದೆ~ ಎಂದು ಫಿರ್ಣಿ ಹೇಳಿದ. ತಕ್ಷಣವೇ ನಾನು ಇಕ್ಬಾಲ್ ಮುಖ ನೋಡಿದೆ. ಆತ ಇದಕ್ಕೆ ಮನಸ್ಸು ಮಾಡುವಂತೆ ತೋರಲಿಲ್ಲ. ಭೋಪಾಲ್ ಮೂಲದ ಸರ್ಕಾರಿ ಸ್ವಾಮ್ಯದ ಎನ್‌ಜಿಒ ಮಂಜೂರು ಮಾಡಿರುವ ಹಣವನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬೇಕೆಂಬ ವಿವೇಚನೆಯಲ್ಲಿ ಆತನಿದ್ದ. ಇಕ್ಬಾಲ್‌ನ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಇಂಥ 8 ಹಳ್ಳಿಗಳಿಗಾಗಿ 30 ಲಕ್ಷ ರೂಪಾಯಿ ಮಂಜೂರಾಗಿತ್ತು.

ಈ ಹಣ ಹಂಚಿಕೆ ಮಾಡಲು ಇಕ್ಬಾಲ್ ಕೆಲವು ಅಧಿಕಾರಿಗಳಿಗೆ ಲಂಚ ಕೊಡಬೇಕಾಗಿತ್ತು. ಆದರೆ ಇದಕ್ಕೆ ಆತನ ಮನಸ್ಸು ಹಿಂದೇಟುಹಾಕುತ್ತಿತ್ತು.
ಈ ಹಾಡಿಯ ಹೆಸರೇನೋ ದೌಲತ್‌ಪುರ! ಆದರೆ ವಿಪರ್ಯಾಸ ನೋಡಿ, ಇಲ್ಲಿನವರು ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ. ಸರ್ಕಾರದಿಂದ ಏನೂ ಪ್ರಯೋಜನವಿಲ್ಲ; ನಮ್ಮ ಕಷ್ಟಗಳಿಗೆ ನಾವೇ ಆಗಬೇಕು ಎನ್ನುವ ಸತ್ಯ ಇರವಿಗೆ ತಿಳಿದಿದೆ.

ನೀರಿನ ಸೆಲೆ ಇರುವ ಜಾಗದಲ್ಲಿ ಹೊಂಡ ನಿರ್ಮಿಸುವ ಹಾಡಿಯ ಜನರ ಪ್ರಯತ್ನಕ್ಕೆ ನಾವು 12,000 ರೂಪಾಯಿ ಕೊಡುವುದಾಗಿ ಹೇಳಿದೆವು. ಆದರೆ ಇಕ್ಬಾಲ್‌ಗೆ ಈ ಬಗ್ಗೆ ವಿಶ್ವಾಸವಿದ್ದಂತಿರಲಿಲ್ಲ. ಹೊಂಡವನ್ನು ನಿರ್ಮಿಸಿದರೆ ಈ ಹಾಡಿಯ ಜನರ ಕುಡಿಯುವ ನೀರಿನ ಬವಣೆ ನೀಗುತ್ತದೆ. ಅಲ್ಲಿಯವರೆಗೂ ಇವರಿಗೆ ನಾಲೆಯಲ್ಲಿ ಹರಿಯುವ ಮಣ್ಣುಮಿಶ್ರಿತ ನೀರೇ ಗತಿ. ಉಸುಕಿನ ಮಡಿಯಲ್ಲಿ ನಿಂತ ನೀರನ್ನು ಅಂಗೈಯಲ್ಲಿ ಮೊಗೆಮೊಗೆದು ಬಿಂದಿಗೆ ತುಂಬಿಸುವ ಕಷ್ಟವನ್ನು ಹಾಡಿಯ ಹೆಂಗಸರು ಮಾತ್ರವೇ ಬಲ್ಲರು! ಹೀಗೆ ಸಂಗ್ರಹಿಸಿದ ನೀರನ್ನು ಅವರು ಬಟ್ಟೆಯಲ್ಲಿ ಶೋಧಿಸಿಕೊಂಡು ಬಳಸುತ್ತಾರೆ. ಒಂದು ಮನೆಗೆ ಏನಿಲ್ಲವೆಂದರೂ ದಿನಕ್ಕೆ ಎರಡು ಬಿಂದಿಗೆ ನೀರು ಬೇಕು.
ಸಣ್ಣ ಹೊಂಡವನ್ನು ತೋಡುವ ಮೂಲಕ ಕುಡಿಯುವ ನೀರಿನ ಸಮಸ್ಯೆಯೇನೋ ಬಗೆಹರಿಯಬಹುದು. ಆದರೆ ಉಳುಮೆಗೆ ಎಲ್ಲಿಂದ ನೀರು ತರಬೇಕು? ಇದು ಹಾಡಿಯ ಜನರನ್ನು ಕಾಡುವ ಬಹುದೊಡ್ಡ ಪ್ರಶ್ನೆ. `ನಾನು ಚಿಕ್ಕವನಿದ್ದಾಗ ಹೂ ಹಾಗೂ ತರಕಾರಿ ಬೆಳೆಯಲು ನನ್ನ ತಂದೆಗೆ ನೆರವಾಗುತ್ತಿದ್ದೆ. ಹೀಗೆ ಬೆಳೆದದ್ದನ್ನು ಸ್ಥಳೀಯ ಮಂಡಿಯಲ್ಲಿ ಮಾರಾಟ ಮಾಡುತ್ತಿದ್ದೆವು~ ಎಂದು ಹಾಡಿಯ ಹಣ್ಣು ಹಣ್ಣು ಮುದುಕ ರಾಮ್‌ಧನ್ ಹಳೆಯ ದಿನಗಳಿಗೆ ಜಾರುತ್ತಾನೆ. ಹಾಗೆ ನೋಡಿದರೆ ಹಾಡಿಯ ಜನರಿಗೆ ಪಟ್ಟಣವು ಒಂದೆರಡು ತಾಸಿನ ಹಾದಿ ಮಾತ್ರ.
 
ಹಿಂಗಾರು ಹಾಗೂ ಮುಂಗಾರಿನಲ್ಲಿ ಬೆಳೆ ಬೆಳೆದರೆ ಈ ಜನರ ಬದುಕು ಹಸನಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಈಗ ಇವರು ಮುಂಗಾರು ಬೆಳೆಯನ್ನು ಮಾತ್ರವೇ ನೆಚ್ಚಿಕೊಂಡಿದ್ದಾರೆ. ವರ್ಷದ ಮೂರ್ನಾಲ್ಕು ತಿಂಗಳು ಹೇಗೋ ನಡೆಯುತ್ತವೆ. ಕೊನೆಗೆ ಶ್ರೀಮಂತರ ಹೊಲಗದ್ದೆಗಳಲ್ಲಿ ಕೂಲಿ ಮಾಡುವುದು ಇವರಿಗೆ ಅನಿವಾರ್ಯ ಕರ್ಮ! ಕೆಲವರು ಹೋಶಾಂಗಾಬಾದ್ ಅಥವಾ ಭೋಪಾಲ್‌ಗೆ ಕಟ್ಟಡ ನಿರ್ಮಾಣ ಕೆಲಸ ಮಾಡಲು ಹೋಗುತ್ತಾರೆ. ಯುವಕರೇನೋ ಪಟ್ಟಣಗಳಲ್ಲಿ ಕೆಲಸ ಹುಡುಕಿ ಹೇಗೋ ಜೀವನ ಸಾಗಿಸಬಹುದು. ಆದರೆ ಗ್ರಾಮದ ವಯೋವೃದ್ಧರ ಕಥೆ ಏನು? ಊರು ಬಿಟ್ಟು ಪಟ್ಟಣಕ್ಕೆ ಹೋಗಿ ಅವರಿಗೆ ಕೆಲಸ ಮಾಡಲು ಹೇಗೆ ತಾನೆ ಸಾಧ್ಯ ಹೇಳಿ. ಇದು ದೌಲತ್‌ಪುರ ಮಾತ್ರವಲ್ಲ; ಭಾರತದ ಎಲ್ಲ ಹಳ್ಳಿಗಳ ಕಥೆ ಹೆಚ್ಚು ಕಡಿಮೆ ಇದೇ ಹಾದಿಯಲ್ಲಿ ಸಾಗುತ್ತಿದೆ.

ಸರ್ಕಾರ ಪ್ರತಿ ವರ್ಷವೂ ಅಭಿವೃದ್ಧಿ ಯೋಜನೆಗಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಮಂಜೂರು ಮಾಡುತ್ತದೆ. ಆದರೆ ಯೋಜನೆಗಳ ಹಣೆಬರವನ್ನು ನಿರ್ಧರಿಸುವವರು ಅಧಿಕಾರಿಗಳು. ಇವರಿಗೇನು ಗೊತ್ತು ಹಸಿದವರ ಕಷ್ಟ. ಮಗಳ ಮದುವೆ, ಬಡ್ತಿ, ನಿವೃತ್ತಿ ನಂತರದ ಹಸನಾದ ಬದುಕು...ಇವೇ ತಾನೆ ಅವರಿಗೆ ಮುಖ್ಯವಾಗುವುದು.

ಜನರ ಕಷ್ಟಗಳನ್ನು ಆಲಿಸುವ, ಸ್ಥಳೀಯ ಯೋಜನೆಗಳಲ್ಲಿ ಅಲ್ಲಿನ ಜನರ ನಿರ್ಧಾರಕ್ಕೆ ಬೆಲೆಕೊಡುವ ಸರ್ಕಾರ ನಮ್ಮಲ್ಲಿ ಎಲ್ಲಿದೆ? ಸರ್ಕಾರವನ್ನು ನಂಬಿಕೊಂಡರೆ ಆಗದು ಎನ್ನುವ ಸತ್ಯ ಫಿರ್ಣಿಗೇನೋ ಗೊತ್ತಿದೆ. ಅದೇನು ದೊಡ್ಡ ವಿಷಯವಲ್ಲ. ಆದರೆ ಈಗಿರುವ ವ್ಯವಸ್ಥೆಯಲ್ಲಿ ಪ್ರಾಮಾಣಿಕ ಗ್ರಾಮಲೆಕ್ಕಾಧಿಕಾರಿಯೂ ಏನೂ ಮಾಡುವ ಹಾಗೆ ಇಲ್ಲ. ಇಂಥ ಸ್ಥಿತಿಯಲ್ಲಿ ಗಾಂಧಿಜೀ `ಸಂಪೂರ್ಣ ಸ್ವರಾಜ್ಯ~ ಕನಸು ಹೇಗೆ ತಾನೇ ಸಾಕಾರಗೊಳ್ಳುತ್ತದೆ?

ಕನಿಷ್ಠಪಕ್ಷ ಮುಂದಿನ ಎರಡು ತಲೆಮಾರುಗಳ ತನಕ ನಾವು ಇವುಗಳನ್ನೆಲ್ಲ ಅಸಹಾಯಕತೆಯಿಂದ ನೋಡಬೇಕಾ? ಕರ್ನಾಟಕದಲ್ಲಿಯೂ ದೌಲತ್‌ಪುರದಂಥ ನೂರಾರು ಹಳ್ಳಿಗಳು ಇವೆ. ಗಣತಿಪ್ರಕಾರ ಸುಮಾರು 37,000 ಹಳ್ಳಿಗಳು ಹಾಗೂ 54,0000 ವಸತಿ ನೆಲೆಗಳು ಇಲ್ಲಿವೆ. ಪಂಚಾಯ್ತಿ ಆಡಳಿತ ವ್ಯವಸ್ಥೆ ಸಮರ್ಥವಾಗಿರುವ ನಮ್ಮ ರಾಜ್ಯವು, ಇಂಥ ಆಡಳಿತ ನಿರ್ವಹಣೆಯನ್ನು ಜಾರಿಗೆ ತಂದ ಕೆಲವೇ ಕೆಲವು ರಾಜ್ಯಗಳಲ್ಲಿ ಒಂದು. ಆದರೂ, ಕರ್ನಾಟಕದಲ್ಲಿ ದುಃಸ್ಥಿತಿಯಲ್ಲಿರುವ ಅದೆಷ್ಟೋ ದೌಲತ್‌ಪುರಗಳು ಇವೆ ಎನ್ನುವುದು ಮಾತ್ರ ವಿಪರ್ಯಾಸ!

(ಲೇಖಕರನ್ನು 56767 ಸಂಖ್ಯೆಗೆ ZED ಎಂದು ಎಸ್ಎಂಎಸ್ ಮಾಡುವ ಮೂಲಕ ಇಲ್ಲವೇ 9901054321 ಕರೆ ಮಾಡಿ ಸಂಪರ್ಕಿಸಬಹುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT