ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ರಾವಿಡ್ ಮಹಿಮೆ ತಿಳಿಸಿದ ಚರ್ಚೆ...

Last Updated 8 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಈ ವರ್ಷದ ಆದಿಯಲ್ಲಿ ಇದೇ ಅಂಕಣದಲ್ಲಿ ಲೇಖನವೊಂದನ್ನು ಬರೆದಿದ್ದೆ. ಭಾರತ ತಂಡವು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡ ಸಂದರ್ಭ. ಆಗ ರಾಹುಲ್ ದ್ರಾವಿಡ್ ಹಾಗೂ ವಿಜಯ್ ಹಜಾರೆ ಅವರನ್ನು ಹೋಲಿಕೆ ಮಾಡಿದ್ದ ಬರಹವದು.
 
ಕ್ರಿಕೆಟ್ ಪ್ರೇಮಿಗಳು ಹಾಗೂ ವಿಮರ್ಶಕರ ನಿರೀಕ್ಷೆಯನ್ನು ಮೀರಿದಂಥ ಕೊಡುಗೆ ನೀಡಿದ ಹಾಗೂ ಸಾಧನೆ ಮಾಡಿದ ಕ್ರಿಕೆಟಿಗರ ವಿಷಯ ವಿಶ್ಲೇಷಣೆಯಿತ್ತು ಅದರಲ್ಲಿ. ನನ್ನ ಅಂಕಣ ಪ್ರಕಟವಾದ ಮರುದಿನವೇ ಆಂಧ್ರ ಪ್ರದೇಶದಲ್ಲಿ ನೆಲೆಸಿರುವ ಕ್ರಿಕೆಟ್ ಲೇಖಕರೊಬ್ಬರಿಂದ ಬಿಸಿ ಇ-ಮೇಲ್ ಸಂದೇಶವೊಂದು ಬಂದಿತು.

ಈ ವ್ಯಕ್ತಿಯ ಜೊತೆಗೆ ವರ್ಷದುದ್ದಕ್ಕೂ ಅನೇಕ ವಿಷಯಗಳಲ್ಲಿ ಚರ್ಚೆ ನಡೆಯುತ್ತಲೇ ಇರುತ್ತದೆ. ಅಂಥ ಆತ್ಮೀಯವಾದ ಮುಕ್ತ ಮನಸ್ಸಿನ ಸ್ನೇಹ. ಅವನು ನನಗೆ, `ನಿಜವಾಗಿ ಹೇಳುತ್ತೇನೆ, ದ್ರಾವಿಡ್ ಅಭಿಪ್ರಾಯ ವಿಷಯ ಹಾಗೂ ವಸ್ತು ನಿಸ್ತೇಜ ಹಾಗೂ ಕಳಾಹೀನ ಎನಿಸಬಾರದು. ಆಯ್ಕೆ ಮಾಡಿದ ಅಂಶವು ನೀರಸವಾದದ್ದು. ಹಜಾರೆ ಹಾಗೂ ದ್ರಾವಿಡ್ ಇಬ್ಬರ ವಿಷಯದಲ್ಲಿಯೂ ಈ ಮಾತು ಅನ್ವಯ..~ ಎಂದು ಬರೆದಿದ್ದ.

ನನ್ನ ಆತ್ಮೀಯ ಗೆಳೆಯ ಮುಂದುವರಿದು `ದ್ರಾವಿಡ್ ಅಪಾರ ಅಭಿಮಾನಿ ನಾನಲ್ಲ. ದೇಶದ ತಂಡಕ್ಕಾಗಿ ಈ ಕ್ರಿಕೆಟಿಗ ಅನೇಕ ಮಹತ್ವದ ಇನಿಂಗ್ಸ್‌ಗಳನ್ನು ಆಡಿದ್ದು ನಿಜ. ಆದರೆ ನೋಡುವುದಕ್ಕೆ ಬೋರ್ ಆಗುವಂಥ ಆಟ ಅವರದ್ದು.

ಡೊಮಿನಿಕಾದಲ್ಲಿ ನಡೆದ ಕೊನೆಯ ಟೆಸ್ಟ್ ಡ್ರಾ ಆಗುವುದಕ್ಕೆ ಇದೇ ಬ್ಯಾಟ್ಸ್‌ಮನ್ ಹೊಣೆ (89 ಎಸೆತಗಳಲ್ಲಿ 34 ರನ್). ಎದುರಾಳಿ ಬೌಲರ್‌ಗಳು ಪ್ರಬಲವಾಗುವುದಕ್ಕೆ ಅವಕಾಶ ಮಾಡಿಕೊಡುವಂಥ ಬ್ಯಾಟಿಂಗ್ ಶೈಲಿ. ಅವರ ಜೊತೆಗೆ ಇನ್ನೊಂದು ಕೊನೆಯಲ್ಲಿ ಆಡಿದಂಥ ವಿ.ವಿ.ಎಸ್. ಲಕ್ಷ್ಮಣ್, ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ವೇಗವಾಗಿ ರನ್ ಗಳಿಸಿದ್ದಿದೆ. ಒಂದು ಅಂಶ ಗಮನಿಸಬೇಕು.
 
ರಾಹುಲ್ ಉತ್ತಮ ಇನಿಂಗ್ಸ್ ಬಂದಿದ್ದು ಇನ್ನೊಂದು ಕೊನೆಯಲ್ಲಿ ಆಡಿದ್ದ ಈ ಎಲ್ಲ ಆಟಗಾರರೊಂದಿಗಿನ ಉತ್ತಮ ಜೊತೆಯಾಟಗಳು ಬೆಳೆದಾಗ ಮಾತ್ರ. ಮಂದಗತಿಯ ಕಾರಣದಿಂದಾಗಿ ದ್ರಾವಿಡ್ ಬ್ಯಾಟಿಂಗ್ ವಯಲಿನ್ ಸಂಗೀತ ಗೋಷ್ಠಿಯಂತೆ. ಟ್ವೆಂಟಿ-20 ಯುಗಕ್ಕೆ ಕಾಲಿಟ್ಟ ಸಂದರ್ಭದಲ್ಲಿಯೂ ಈ ರೀತಿಯಲ್ಲಿ ಆಡುತ್ತಿರುವ ಏಕಮಾತ್ರ ಬ್ಯಾಟ್ಸ್‌ಮನ್. ಭವಿಷ್ಯದಲ್ಲಿ ಯಾವೊಬ್ಬ ಕ್ರಿಕೆಟಿಗ ಹೀಗೆ ಆಡಲು ಬಯಸಲಿಕ್ಕಿಲ್ಲ.

ಮಂದಗತಿಯಲ್ಲಿ ಆಡುತ್ತಲೇ ಹದಿನೈದು ವರ್ಷ ಕಾಲ ಟೆಸ್ಟ್ ಆಡುವುದಕ್ಕೆ ಕೂಡ ಇನ್ನು ಮುಂದೆ ಯಾರೂ ಇಷ್ಟಪಡುವುದಿಲ್ಲ. ಅಷ್ಟೊಂದು ಬಾರಿ ಚೆಂಡನ್ನು ತಡೆಯುವ ಬ್ಯಾಟ್ಸ್‌ಮನ್‌ಗಳು ಕಡಿಮೆ ಆಗುವುದು ಖಚಿತ. ಟೆಸ್ಟ್ ಕ್ರಿಕೆಟ್ ಪ್ರಚಾರಕ್ಕೆ ಇಂಥ ಬ್ಯಾಟ್ಸ್‌ಮನ್ ಕೆಟ್ಟ ಮಾದರಿ. ರನ್ ಕ್ರೋಡೀಕರಿಸುವ ಮಂದಗತಿಯ ಚಾರ್ಜರ್ ಎಂದು ದ್ರಾವಿಡ್ ಅವರನ್ನು ಕರೆಯಬಹುದು. ಹಜಾರೆ ಕೂಡ ಅದೇ ರೀತಿಯ ಆಟಗಾರರಾಗಿದ್ದರು~.

ಹೀಗೆ ಪದಗಳನ್ನು ಜೋಡಿಸಿಟ್ಟು ಆ ಗೆಳೆಯ ತನ್ನ ಇ-ಮೇಲ್ ಕೊನೆಗೊಳಿಸಿದ್ದ. `ಗುಹಾ ಅವರಂಥ ರಸಿಕ ದ್ರಾವಿಡ್ ಆಗುವುದು ಬೇಡ. ಆ ನೀರಸ ಮಾರ್ಗ ಹಿಡಿಯುವುದೂ ಬೇಡ~ ಎನ್ನುವ ಒಕ್ಕಣೆಯೂ ಅಲ್ಲಿತ್ತು. ಇಷ್ಟೆಲ್ಲಾ ಬರೆದು ಕೊನೆಗೆ `ನನ್ನ ಮಿತಿಯನ್ನು ದಾಟಿದ್ದರೆ ಕ್ಷಮಿಸಿ~ ಎಂಬ ಒಗ್ಗರಣೆ ಬೇರೆ.

ಸಂದೇಶ ಸಂಜೆ ಹೊತ್ತಿಗೆ ಬಂದಿತ್ತು; ಮರುದಿನ ನಾನು ಉತ್ತರವನ್ನೂ ಬರೆದೆ. `ಕ್ರಿಕೆಟ್ ಆಟದ ವಿದ್ಯಾರ್ಥಿಯಂತೆ ತಂತ್ರಗಳನ್ನು ಸೂಕ್ಷ್ಮವಾಗಿ ಅರಿಯುವುದು ತಂತ್ರಜ್ಞಾನದ ಸೂತ್ರಗಳನ್ನು ಸಂಗ್ರಹಿಸಿಡುವ ಸಾಧನ ಶೋಧಿಸಿದಷ್ಟೇ ಬೆಲೆಯುಳ್ಳ ಕೆಲಸ. ಮಾರ್ಗಗಳ ವಿಶ್ಲೇಷಣೆಯೂ ಅಷ್ಟೇ ಮುಖ್ಯ~ ಎಂದು ತಿಳಿಸಿ `ಭಾರತವನ್ನು ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಮೊದಲ ಕ್ರಮಾಂಕಕ್ಕೆ ಏರಿಸಲು ಬೇರೆಯವರು ಯಾವ ಮಟ್ಟದ ಕೊಡುಗೆ ನೀಡಿದರೂ ಅದಕ್ಕಿಂತ ಉನ್ನತವಾದ ಕೊಡುಗೆಯನ್ನು ದ್ರಾವಿಡ್ ನೀಡಿದ್ದಾರೆ.

ಅನೇಕ ಅದ್ಭುತ ಇನಿಂಗ್ಸ್ ಆಡಿದ್ದನ್ನು ಮರೆಯುವಂತಿಲ್ಲ. ಪಾಕಿಸ್ತಾನ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ (ಹೆಡಿಂಗ್ಲೆಯಲ್ಲಿ ಅವರು ಗಳಿಸಿದ್ದ 148 ರನ್‌ಗಳ ಇನಿಂಗ್ಸ್ ಮೆಚ್ಚುಗೆಗೆ ಅರ್ಹ. ವಿದೇಶಿ ನೆಲದಲ್ಲಿ ಭಾರತೀಯ ಆಟಗಾರನೊಬ್ಬ ಆಡಿದ ವಿಶಿಷ್ಟವಾದ ಆಟವದು), ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್‌ನಲ್ಲಿ ನಿರಾತಂಕವಾಗಿ ಬ್ಯಾಟಿಂಗ್ ಮಾಡಿದ್ದು ಸ್ಮರಣೀಯ.

ಇದಕ್ಕಿಂತ ಇನ್ನೂ ಹೆಚ್ಚೇನು ನಿರೀಕ್ಷಿಸಲು ಸಾಧ್ಯ? ನಿಮ್ಮ ಮೇಲ್ ನೋಡಿದಾಗ ನನಗೆ ಅದರಲ್ಲಿ ನಿಜವಾದ ಕ್ರಿಕೆಟ್‌ಪ್ರಿಯನ ಹಾಗೂ ಕ್ರಿಕೆಟ್ ಲೇಖಕನ ತುಡಿತದ ಕೊರತೆ ಎದ್ದು ಕಾಣಿಸಿತು~ ಎಂದು ವಿವರಿಸಿದ್ದೆ.

ಮತ್ತಷ್ಟು ರಾಹುಲ್ ಕುರಿತ ವಿವರ ನೀಡುತ್ತಾ `ಈ ಕ್ರಿಕೆಟಿಗ ಇನ್ನೊಂದು ರೀತಿಯಲ್ಲಿಯೂ ತಂಡದ ಯಶಸ್ಸಿಗೆ ಕಾರಣರಾಗಿದ್ದಾರೆ. ಕ್ಷೇತ್ರ ರಕ್ಷಣೆಯಲ್ಲಿ ತೋರಿದ ಚುರುಕು. ಅದೇ ಕಾರಣಕ್ಕಾಗಿ ದಾಖಲೆ ಸಂಖ್ಯೆಯಲ್ಲಿ ಕ್ಯಾಚ್ ಪಡೆದ ಹಿರಿಮೆಯ ಗರಿ ಅವರ ಕಿರೀಟವನ್ನು ಅಲಂಕರಿಸಿದೆ~ ಎಂದು ಆ ಗೆಳೆಯನಿಗೆ ಬರೆದೆ.

ಪ್ರತಿಕ್ರಿಯೆ ನೀಡಿದ ನಂತರ ಸುಮಾರು ಒಂದು ವಾರದ ತನಕ ಆ ಗೆಳೆಯನಿಂದ ಉತ್ತರ ಬರಲೇ ಇಲ್ಲ. ಮತ್ತೊಂದು ಸಂದೇಶ ಕಳುಹಿಸಿದೆ. ಆ ಹೊತ್ತಿಗೆ ಇಂಗ್ಲೆಂಡ್ ವಿರುದ್ಧದ ಪ್ರಥಮ ಟೆಸ್ಟ್‌ನಲ್ಲಿ ದ್ರಾವಿಡ್ ಮೆಚ್ಚುವಂಥ ಶತಕ ಗಳಿಸಿಯಾಗಿತ್ತು. ಲಾರ್ಡ್ಸ್‌ನಲ್ಲಿ ಅವರು ಆಡಿದ್ದ ರೀತಿ ಎಂಥವರಿಗೂ ಪ್ರಿಯವೆನಿಸುವಂಥದ್ದು (ಅದೇ ರೀತಿಯ ತಂತ್ರಗಾರಿಕೆಯನ್ನು ಇನ್ನೂ ಎರಡು ಮೂರು ಆಟಗಾರರು ಪ್ರದರ್ಶಿಸಿದ್ದರೆ ಆ ಪಂದ್ಯದಲ್ಲಿ ಭಾರತ ಖಂಡಿತವಾಗಿ ಸೋಲುತ್ತಿರಲಿಲ್ಲ.

ಎರಡನೇ ಟೆಸ್ಟ್‌ನಲ್ಲಿ ಸಂಪೂರ್ಣವಾಗಿ ಮಾನಸಿಕವಾಗಿ ಒತ್ತಡಕ್ಕೊಳಗಾಗುವ ಪರಿಸ್ಥಿತಿಯೂ ಇರುತ್ತಿರಲಿಲ್ಲ). ಆ ಸಂದರ್ಭದಲ್ಲಿ ಅದೇ ಸ್ನೇಹಿತನಿಗೆ `ನೀನು ಅಸಮಂಜಸವಾಗಿ ದ್ರಾವಿಡ್ ಬಗ್ಗೆ ಬರೆದಿದ್ದ ಎಲ್ಲ ಪದಗಳನ್ನು ಹಿಂದಕ್ಕೆ ಪಡೆಯಲೇಬೇಕು. ರಾಹುಲ್ ತಂಡಕ್ಕೆ ಆಸರೆಯಾದ ರೀತಿ ಸಾಕ್ಷಿಯಾಗಿ ಮುಂದಿದೆ.

ಈ ಹಿಂದೆಯೂ ಅದೆಷ್ಟೋ ಬಾರಿ ಇಂಥ ಆಟವಾಡಿದ್ದಿದೆ. ತಕ್ಷಣದ ಸಾಕ್ಷಿ ಎದುರಿಗೆ ಇದ್ದರೂ ಇನ್ನೂ ದ್ರಾವಿಡ್ ಆಟ ನೀರಸವೆಂದು ಭಾವಿಸಿದರೆ ಟ್ವೆಂಟಿ-20 ಆಟವನ್ನು ಮಾತ್ರ ನೋಡಿಕೊಂಡು ಇರಬಹುದು. ನನ್ನ ಮಟ್ಟಿಗೆ ಈ ಬ್ಯಾಟ್ಸ್‌ಮನ್ ಶೈಲಿ ವಿಶಿಷ್ಟವೆನಿಸುತ್ತದೆ. ಸುನಿಲ್ ಗಾವಸ್ಕರ್ ರೀತಿಯಲ್ಲಿಯೇ ವಿಭಿನ್ನ. ಲಾರ್ಡ್ಸ್‌ನಲ್ಲಿ ಆಡಿದ ಇನಿಂಗ್ಸ್ ಕ್ರಿಕೆಟ್ ಪ್ರೇಮಿಗಳಿಗೆಲ್ಲ ಪ್ರಿಯವೆನಿಸಿತು. ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.
 
ತಾವು ಸ್ವಾರ್ಥಭಾವದ ಕ್ರಿಕೆಟಿಗ ಅಲ್ಲವೆನ್ನುವುದನ್ನು ಮತ್ತೊಮ್ಮೆ ವಿಶ್ವಕ್ಕೆ ತೋರಿಸಿದ್ದಾರೆ. 38 ವರ್ಷ ವಯಸ್ಸಿನಲ್ಲಿಯೂ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತಿದ್ದೇ ವಿಶಿಷ್ಟ~ವೆಂದು ವಾದ ಮುಂದಿಟ್ಟು ಪದಗಳ ಬಾಣ ಬಿಟ್ಟೆ.

ಮೂರು ದಿನಗಳ ನಂತರ ಆ ಗೆಳೆಯ ತನ್ನೆಲ್ಲ ಪೂರ್ವಗ್ರಹವನ್ನು ಬದಲಿಸಿಕೊಂಡು ಉತ್ತರ ಬರೆದ. `ದಯಮಾಡಿ ಕ್ಷಮೆ ಇರಲಿ. ಕೆಲವು ದಿನಗಳಿಂದ ಮೇಲ್ ನೋಡಲು ಆಗಿರಲಿಲ್ಲ. ನಾನೇ ನಿಮಗೆ ಕ್ಷಮೆ ಕೋರಿ ಸಂದೇಶ ಕಳುಹಿಸಲು ಇಷ್ಟಪಟ್ಟಿದ್ದೆ.

ನಾನು ಹಿಂದೆ ಬರೆದಿದ್ದ ಎಲ್ಲ ಪದಗಳನ್ನು ಹಿಂದೆ ಪಡೆಯುವ ಮನಸ್ಸು ಕೂಡ ಮಾಡಿದ್ದೆ. ಲಾರ್ಡ್ಸ್‌ನಲ್ಲಿ ದ್ರಾವಿಡ್ ಆಡಿದ ಇನಿಂಗ್ಸ್ ನೋಡಿದ ನಂತರ ಮನದಲ್ಲಿನ ಪೂರ್ವಗ್ರಹದ ಕೊಳೆಯೆಲ್ಲ ತೊಳೆದು ಹೋಗಿದೆ~ ಎಂದು ಮನದಟ್ಟು ಮಾಡುವ ರೀತಿಯಲ್ಲಿ ಬರೆದಿದ್ದ.

ಆ ಗೆಳೆಯ ಎರಡು ವಿಷಯಗಳನ್ನು ನನಗೆ ಸ್ಪಷ್ಟವಾಗಿಸಬೇಕಿತ್ತು. `ದ್ರಾವಿಡ್ ಅವರನ್ನು ಇಷ್ಟಪಡುವುದಿಲ್ಲ ಎನ್ನುವ ಅಭಿಪ್ರಾಯ ದೂರಮಾಡುವುದು ನನ್ನ ಮೊದಲ ಉದ್ದೇಶ. ಇನ್ನೊಂದು ನಾನೂ ಕೂಡ ಅಪಾರವಾಗಿ ಟೆಸ್ಟ್ ಕ್ರಿಕೆಟ್ ಪ್ರಕಾರವನ್ನು ಪ್ರೀತಿಸುವವನು. ಚುಟುಕು ಕ್ರಿಕೆಟ್ ಎಂದರೆ ನನಗೂ ಇಷ್ಟವಾಗದು.  ಕೆಲವು ವರ್ಷಗಳ ಹಿಂದೆ `ಆಂಧ್ರ ಜ್ಯೋತಿ~ಯಲ್ಲಿ ಲೇಖನವೊಂದನ್ನು ಬರೆದಿದ್ದೆ.

ಅದರಲ್ಲಿ ದ್ರಾವಿಡ್ ಅವರನ್ನು `ಗ್ರೇಟ್ ವಾಲ್~ ಎಂದು ಮತ್ತು ಸಚಿನ್ ಅವರನ್ನು `ತಾಜ್~ ಎಂದು ಹೋಲಿಸಿದ್ದೆ. ಅಷ್ಟೇ ಅಲ್ಲ, ಡಾನ್ ಬ್ರಾಡ್ಮನ್ ಛಾಯೆಯಲ್ಲಿ ಸ್ಟ್ಯಾನ್ ಮೆಕ್‌ಕೇಬ್ ಹೇಗೆ ಮರೆಯಾದ ಎನ್ನುವುದನ್ನು ವಿವರಿಸಿ ಹೇಳುವ ಪ್ರಯತ್ನವೂ ಇತ್ತು.
 
ಹೀಗೆ ಆಗಬಾರದೆನ್ನುವುದೇ ನನ್ನ ಆಶಯ. ರಾಹುಲ್ ಆಟದಲ್ಲಿ ನನಗೆ ಇಷ್ಟವಾಗದಿರುವ ಕೆಲವು ಅಂಶಗಳು ಖಂಡಿತವಾಗಿಯೂ ಇವೆ. ಅವರು ತೀರ ಕಳಪೆ ಬೌಲರ್‌ಗೂ ಕೆಲವೊಮ್ಮೆ ಅಪಾರ ಗೌರವಿಸುವಂತೆ ಆಡುತ್ತಾರೆ.

ಸಾಂದರ್ಭಿಕ ಬೌಲರ್‌ಗಳ ಎದುರೂ ರಕ್ಷಣಾತ್ಮಕವಾಗುತ್ತಾರೆ. ಎದುರಾಳಿಗಳ ಎದೆಯಲ್ಲಿ ಭಯ ಹುಟ್ಟಿಸುವಂತೆ ಅಬ್ಬರ ಮಾಡುವುದೇ ಕಡಿಮೆ (ಇನ್ನೊಂದು ಕೊನೆಯಲ್ಲಿನ ಬ್ಯಾಟ್ಸ್‌ಮನ್ ಬಿರುಸಿನ ಆಟವಾಡಿದಾಗ ಮಾತ್ರ ತಾವೂ ಆಕ್ರಮಣಕಾರಿ ಆಗುತ್ತಾರೆ)~ ಎಂದು ಅವನು ವಿವರಿಸಿದ್ದ.

ಇಂಥ ಕೆಲವು ಆಕ್ಷೇಪಗಳನ್ನು ಎತ್ತಿದ್ದರೂ ಗೆಳೆಯ `ದ್ರಾವಿಡ್ ಸ್ವಾರ್ಥಕ್ಕಾಗಿ ಅಲ್ಲ, ದೇಶಕ್ಕಾಗಿ ಮಾತ್ರ ಆಡುವಂಥ ಆಟಗಾರ~ ಎನ್ನುವುದನ್ನು ಮರು ಮಾತಿಲ್ಲದೆಯೇ ಒಪ್ಪಿಕೊಂಡಿದ್ದ. ರಾಹುಲ್ ದೈಹಿಕ ಸಾಮರ್ಥ್ಯ ಕಾಯ್ದುಕೊಂಡ ರೀತಿಯನ್ನೂ ಕೊಂಡಾಡಿದ್ದ. `ಗಾಯದ ಕಾರಣದಿಂದ ಆಡುವ ಅವಕಾಶ ಕಳೆದುಕೊಂಡಿದ್ದು ತೀರ ವಿರಳ.

ಆದ್ದರಿಂದ ನನಗಂತೂ ಅಂಥ ಕ್ಷಣಗಳ ನೆನಪು ಇಲ್ಲ~ ಎನ್ನುವ ಮಾತು ಕೂಡ ಸಂದೇಶದಲ್ಲಿತ್ತು.

ರಾಹುಲ್ ವಿಷಯವಾಗಿ ಬರೆದು ಮುಗಿಸಿದ್ದ ಅದೇ ಗೆಳೆಯ ಆನಂತರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿರುದ್ಧ ಕಿಡಿಯಾಗಿದ್ದ. `ನಾನೂ ಟಿ-20 ಪಂದ್ಯ ನೋಡುತ್ತೇನೆ. ಆದರೆ ಅದಕ್ಕೇ ಅತಿಯಾಗಿ ಮಹತ್ವ ನೀಡುತ್ತಿರುವ ರೀತಿಯನ್ನು ನೋಡಿದಾಗ ಕೋಪ ಬರುತ್ತದೆ. ದೇಶದ ಎಲ್ಲ ಆಟಗಾರರು ಐಪಿಎಲ್‌ನಲ್ಲಿ ಆಡಿದರು.
 
ಆದರೆ ವಿಂಡೀಸ್ ಪ್ರವಾಸದಿಂದ ಕೆಲವು ಪ್ರಮುಖರು ಹೊರಗೆ ಉಳಿದರು. ನನಗೆ ನೆನಪಿದೆ, ನೀವೇ ಒಮ್ಮೆ 1978ರ ಭಾರತ ಪ್ರವಾಸಕ್ಕೆ ಪಾಕಿಸ್ತಾನದವರು ಹೇಗೆ ತಯಾರಿ ಮಾಡಿಕೊಂಡಿದ್ದರೆಂದು. ಭಾರತದ ವಿರುದ್ಧದ ಸರಣಿಯಲ್ಲಿ ಆಡಬೇಕಾದ್ದರಿಂದ ಇಂಗ್ಲೆಂಡ್ ಎದುರು ಅತಿಯಾಗಿ ವೇಗದಿಂದ ಬೌಲಿಂಗ್ ಮಾಡಿ ಗಾಯ ಮಾಡಿಕೊಳ್ಳಬೇಡಿ ಎಂದು ಆಗ ಪಾಕ್ ತಂಡದ ಆಟಗಾರರಿಗೆ ಸಲಹೆ ನೀಡಲಾಗಿತ್ತಂತೆ.

ಆದರೆ ನಮ್ಮವರು ಇಂಗ್ಲೆಂಡ್ ವಿರುದ್ಧದ ಮಹತ್ವದ ಸರಣಿಗೆ ಸಜ್ಜಾಗಿದ್ದು ಹೇಗೆ? ಐಪಿಎಲ್‌ಗೆ ಮಹತ್ವ ನೀಡಿ ಇಂಗ್ಲೆಂಡ್ ಪ್ರವಾಸದ ಹೊತ್ತಿಗೆ ಗಾಯಾಳುಗಳು ಸಾಲುಗಟ್ಟಿದರು~ ಎಂದು ಅಸಮಾಧಾನವನ್ನು ಹೊರಹಾಕಿದ್ದ.

ತಾನು ಈಗಲೂ ಇಂಡಿಯನ್ ಪ್ರೀಮಿಯರ್ ಲೀಗ್ ನೋಡಲು ಹೋಗುವುದಾಗಿ ಸ್ಪಷ್ಟವಾಗಿ ತಿಳಿಸಿದ್ದ ಗೆಳೆಯ `ಟಿ-20 ನೋಡಲು ಹೋಗುತ್ತೇನೆ. ಅದೂ ನಿಮ್ಮಂತೆ ಹಾಗೂ ಮುಕುಲ್ ಕೇಶವನ್ ಅವರಂತೆ ಸಂಭ್ರಮಿಸಲು. ಅಲ್ಲಿ ಲೀಗ್ ನೋಡುವ ಉತ್ಸಾಹ ಇರುವುದಿಲ್ಲ~ ಎಂದು ಹೇಳಿ `ನೀವೇ ಒಮ್ಮೆ ಬರೆದಿದ್ದು ನೆನಪಿದೆ.
 
ಅದೇ ಸಾಲಿನಂತೆ ಟೆಸ್ಟ್ ಕ್ರಿಕೆಟ್ `ಸ್ಕಾಚ್~, ಏಕದಿನ ಪಂದ್ಯಗಳು `ಐಎಂಎಫ್‌ಎಲ್~  (ಸ್ವದೇಶಿ ನಿರ್ಮಿತ ವಿದೇಶಿ ಮದ್ಯ) ಹಾಗೂ ಟ್ವೆಂಟಿ-20 ಎಂದರೆ ದೇಸಿ ಸರಾಯಿ. ನನಗೂ ಎಲ್ಲರಂತೆ ದೇಸಿ ಸರಾಯಿ ಬೇಗ ನೆತ್ತಿಗೆ ಏರುತ್ತದೆ. ನಾನು ಎಲ್ಲ ಪ್ರಕಾರದ ಕ್ರಿಕೆಟ್ ಆನಂದಿಸುತ್ತೇನೆ. ಆದರೆ ಚುಟುಕು ಕ್ರಿಕೆಟ್ ಟೀಕೆ ಮಾಡಲು ಸಿಗುವ ಎಲ್ಲ ಅವಕಾಶ ಬಳಸಿಕೊಳ್ಳುತ್ತೇನೆ. ಆದರೂ ಆಟ ನೋಡುತ್ತೇನೆ.

ಅದಕ್ಕೆ ಕಾರಣ ಕ್ರಿಕೆಟ್ ಪ್ರೀತಿ. ಟಿ-20 ಕೂಡ ಕ್ರಿಕೆಟ್ ಆಟವೇ ಆಗಿದೆ. ಈ ವಿಷಯದಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಒಂದು ರೀತಿಯಲ್ಲಿ ಇದು ಸಿನಿಮಾದಲ್ಲಿನ ಅಸಭ್ಯತೆಯನ್ನು ಟೀಕೆ ಮಾಡುವ ಜನರೇ ಕದ್ದು ಮುಚ್ಚಿ ಅದೇ ಸಿನಿಮಾದ ಬಿಸಿ ಏರಿಸುವ ದೃಶ್ಯಗಳನ್ನು ನೋಡುವಂತೆ. ಟೆಸ್ಟ್ ವಿಷಯದಲ್ಲಿ ಹಾಗೆ ಅಲ್ಲ. ಮನಸ್ಸು ಯಾವುದೇ ಕ್ಷಣದಲ್ಲಿಯೂ ಮುಕ್ತವಾಗಿರುತ್ತದೆ...~

ಹೀಗೆ ಆಂಧ್ರದ ಗೆಳೆಯನ ನಡುವೆ ಸಂದೇಶ ವಿನಿಮಯ ಆಗುತ್ತಿದ್ದ ಕಾಲದಲ್ಲಿಯೇ ರಾಹುಲ್ ಎರಡನೇ ಹಾಗೂ ನಾಲ್ಕನೇ ಟೆಸ್ಟ್‌ನಲ್ಲಿ ಶತಕ ಗಳಿಸಿಯಾಗಿತ್ತು. ಅದೇ ಸಂದರ್ಭದಲ್ಲಿ ನನ್ನ ಸ್ನೇಹಿತ ಸಂಸಾರದ ಜೊತೆಗೆ ತಿರುಪತಿಗೆ ಹೋಗಿದ್ದ ಎನ್ನುವ ವಿಷಯ ತಿಳಿಯಿತು.

ಅಲ್ಲಿಂದಲೇ ಮತ್ತೊಂದಿಷ್ಟು ಸಾಲುಗಳನ್ನು ಬರೆದು ಕಳುಹಿಸಿದ. `ವಿಷಯ ಗೊತ್ತಾಯಿತು ಮಿಸ್ಟರ್ ಡಿಪೆಂಡೆಬಲ್ ಮತ್ತೊಂದು ಶತಕ ಗಳಿಸಿದ. ಆಡಿದ ಮಾತುಗಳನ್ನು ಹಿಂದೆಪಡೆಯುವುದರಲ್ಲಿಯೂ ಕೆಲವೊಮ್ಮೆ ಸಂತೋಷ ಇರುತ್ತದೆ~ ಎನ್ನುವ ಸಾಲೂ ಅಲ್ಲಿತ್ತು.

ಈ ಎಲ್ಲ ಸಂದೇಶ ವಿನಿಮಯದ ವಿವರವನ್ನು ಓದುಗರೊಂದಿಗೆ ಹಂಚಿಕೊಂಡಿರುವುದಕ್ಕೆ ಕಾರಣಗಳಿವೆ. ಮೊದಲ ಅಂಶವೆಂದರೆ ಯಾವ ಹಾಗೂ ಎಂಥ ಕ್ರಿಕೆಟಿಗನನ್ನು ಮೆಚ್ಚಿ ಮಾತನಾಡಬಹುದು ಎನ್ನುವುದು. ಇದು ಯಾವುದೇ ಸೈಬರ್ ಚಾಟ್ ರೀತಿಯ ವೈಯಕ್ತಿಕ ಟೀಕೆಯಲ್ಲ. ಇಲ್ಲಿ ಮುಕ್ತ ಮಾತಿದೆ. ಅಷ್ಟೇ ಅಲ್ಲ ಅಷ್ಟೇ ಅರ್ಥವತ್ತಾದ ವಿಶ್ಲೇಷಣೆಯೂ ಇದೆ.

ಕೊನೆಯ ಕಾರಣವೆಂದರೆ ಆಧುನಿಕ ವಿಜಯ್ ಹಜಾರೆ ಎನಿಸಿರುವ ರಾಹುಲ್ ದ್ರಾವಿಡ್ ತಮ್ಮ ಖ್ಯಾತಿಯ ವಿಸ್ತಾರ ಹೆಚ್ಚಿಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಈ ಬ್ಯಾಟ್ಸ್ ಮನ್ ಮಾತ್ರ ತಂಡವು ಕುಸಿದು ಹೋಗದಂತೆ ತಡೆಯುವ ಪ್ರಯತ್ನವನ್ನು ಮನಸಾರೆ ಮಾಡಿದ್ದು. ಆದ್ದರಿಂದ ಮೆಚ್ಚಲೇ ಬೇಕು.


(ನಿಮ್ಮ ಅನಿಸಿಕೆಗಳನ್ನು ಇಲ್ಲಿಗೆ ಕಳಿಸಿ:
editpage feedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT