ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಂದ್ವಮಯ ವ್ಯಾಖ್ಯಾನ, ಸಾಕಾರವಾಗದ ಸ್ವಾತಂತ್ರ್ಯ

Last Updated 21 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ರಾಷ್ಟ್ರಕ್ಕೆ ಸ್ವಾತಂತ್ರ್ಯ ಲಭಿಸಿ 70 ವರ್ಷಗಳು ಕಳೆದಿವೆ. ನಮ್ಮ ಸ್ವತಂತ್ರ ರಾಷ್ಟ್ರದಲ್ಲಿ ಮಹಿಳೆಯರು ಪೂರ್ಣಪ್ರಮಾಣದ ಸ್ವತಂತ್ರ ಪ್ರಜೆಗಳಾಗಿದ್ದಾರೆಯೆ? ಸ್ವಾವಲಂಬನೆ, ಸ್ವಾಯತ್ತತೆ, ಸ್ವಾತಂತ್ರ್ಯ ಪರಿಕಲ್ಪನೆಗಳ ಅನುಭವಗಳು ಮಹಿಳೆಗೆ ದಕ್ಕಿರುವುದೆಷ್ಟು? ಇತ್ತೀಚಿನ ದಿನಗಳ ವಿದ್ಯಮಾನಗಳು ಈ ಕುರಿತಂತೆ ನೀಡುವ ಚಿತ್ರಣ ಮಂಕಾದದ್ದು. ರಾತ್ರಿಯ ವೇಳೆ ಸಾರ್ವಜನಿಕ ರಸ್ತೆಯಲ್ಲಿ ಯಾವುದೇ ಅಳುಕಿಲ್ಲದೆ ಒಂಟಿಯಾಗಿ ನಡೆಯುವುದು ಅಥವಾ ವಾಹನ ಚಲಾಯಿಸುವುದು ಈಗಲೂ ಮಹಿಳೆಗೆ ಕಷ್ಟ. ಹಿಂಬಾಲಿಸುವಿಕೆ, ಚುಡಾಯಿಸುವಿಕೆ, ದೇಹ ಸ್ಪರ್ಶಿಸುವುದು ಮುಂತಾದ ಲೈಂಗಿಕ ದುರ್ವರ್ತನೆಗಳ ಭೀತಿ ಆಕೆಯನ್ನು ಕಾಡುತ್ತಲೇ ಇರುತ್ತದೆ. ಇತ್ತೀಚೆಗೆ ಚಂಡೀಗಡದಲ್ಲಿ ಐಎಎಸ್ ಅಧಿಕಾರಿಯ ಪುತ್ರಿಯನ್ನು ಹರಿಯಾಣದ ಬಿಜೆಪಿ ಅಧ್ಯಕ್ಷರ ಪುತ್ರ ಹಾಗೂ ಆತನ ಸ್ನೇಹಿತ ಹಿಂಬಾಲಿಸಿದ ಪ್ರಕರಣ ದೊಡ್ಡ ಸುದ್ದಿಯಾಯಿತು. 'ಹೊತ್ತಲ್ಲದ ಹೊತ್ತಿನಲ್ಲಿ ಆಕೆ ಬೀದಿಯಲ್ಲಿ ಇದ್ದದ್ದು ಏಕೆ' ಎಂಬಂತಹ ಯಥಾಪ್ರಕಾರದ ಆಕ್ಷೇಪಗಳಿಗೆ ಸಂತ್ರಸ್ತೆ ಗುರಿಯಾಗಬೇಕಾಯಿತು. ಸಂತ್ರಸ್ತೆ ಮಾಡಿದ್ದ ಆರೋಪಗಳನ್ನು ಗಂಭೀರವಾಗಿ ಪರಿಗಣಿಸದ ಪೊಲೀಸರು ಆರೋಪಿಗಳನ್ನು ಬಂಧಿಸಿ ಬಿಡುಗಡೆ ಮಾಡಿದ್ದರು. ನಂತರವಷ್ಟೇ ಇದು ವಿವಾದದ ರೂಪ ತಳೆದಾಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎರಡನೇ ಬಾರಿಗೆ ಆರೋಪಿಗಳನ್ನು ಬಂಧಿಸಿದ್ದನ್ನು ನೋಡಿದ್ದೇವೆ.

'ಎಲ್ಲಾ ಬಗೆಯ ದಮನಗಳಿಂದ ಮಹಿಳೆ ವಿಮೋಚನೆ ಪಡೆಯುವವರೆಗೆ ಸ್ವಾತಂತ್ರ್ಯವನ್ನು ಸಾಧಿಸಲಾಗದು' ಎಂಬುದು ವರ್ಣಭೇದ ನೀತಿ ವಿರೋಧಿ ಹೋರಾಟಗಾರ ಹಾಗೂ ದಕ್ಷಿಣ ಆಫ್ರಿಕಾ ಅಧ್ಯಕ್ಷರಾಗಿದ್ದ ನೆಲ್ಸನ್ ಮಂಡೇಲಾ ಅವರ ಮಾತು. ಈ ಆದರ್ಶ ಸ್ಥಿತಿಯನ್ನು ಸಾಧ್ಯವಾಗಿಸಿಕೊಳ್ಳಲು ನಮ್ಮ ಸಮಾಜ ಸಜ್ಜಾಗಿದೆಯೆ? ನಮ್ಮ ಸಂವಿಧಾನವೇನೊ ಮಹಿಳೆಗೆ ಸಮಾನತೆ ನೀಡಿದೆ. ಆದರೆ ವಾಸ್ತವದಲ್ಲಿ ಸಮಾನ ಹಕ್ಕುಗಳುಳ್ಳ ಸಹಜೀವಿಯಾಗಿ ಮಹಿಳೆಯನ್ನು ಪರಿಗಣಿಸಲಾಗುತ್ತಿದೆಯೆ?

ನಿಜ. ಹಲವು ನೆಲೆಗಳಲ್ಲಿ ಮಹಿಳಾ ಹಕ್ಕುಗಳನ್ನು ಗುರುತಿಸುವುದು ಸಾಧ್ಯವಾಗಿದೆ. ಆದರೆ ಇವು ಇನ್ನೂ ಗಂಭೀರವಾಗಿ ಪರಿಗಣನೆಗೊಳಗಾಗಬೇಕಿದೆ ಎಂಬುದು ದಿನನಿತ್ಯದ ಒಂದಲ್ಲ ಒಂದು ವಿದ್ಯಮಾನಗಳು ನೆನಪಿಸುತ್ತಲೇ ಇರುತ್ತವೆ ಎಂಬುದೂ ನಿಜ. ಅನೇಕ ಸಂದರ್ಭಗಳಲ್ಲಿ ಹಕ್ಕುಗಳ ಅಗತ್ಯ ಇರುವ ನಾಗರಿಕರನ್ನಾಗಿ ಮಹಿಳೆಯನ್ನು ಕಾಣುವುದೇ ಇಲ್ಲ ಎಂಬುದು ವಾಸ್ತವ. ಕುಟುಂಬವನ್ನು ಒಗ್ಗೂಡಿಸಿಕೊಂಡು ಇರಬೇಕಾದ ಅನಿವಾರ್ಯತೆಯ ಹೊರೆಯನ್ನು ಮಹಿಳೆಯ ಮೇಲೆ ಮಾತ್ರ ಹೊರಿಸಲಾಗಿದೆ.

ಇಂತಹದೊಂದು ದೃಷ್ಟಿಕೋನ, ಮಹಿಳೆ ಪುರುಷನ ಆಸ್ತಿ ಎಂಬುದನ್ನು ದೃಢೀಕರಿಸುವಂತಹದ್ದು. ಮದುವೆಯ ನಂತರ ಪತ್ನಿಯ ಮೇಲಿನ ಪತಿಯ ಯಜಮಾನಿಕೆಗೆ ಎಲ್ಲೆಗಳಿಲ್ಲ ಎಂಬುದನ್ನು ಧ್ವನಿಸುವಂತಹದ್ದು. ಈ ದೃಷ್ಟಿಕೋನವನ್ನು ಇತ್ತೀಚೆಗೆ ಕೋರ್ಟ್ ಗಳು ಸಹ ಅನುಮೋದಿಸುತ್ತಿರುವುದು ಹೊಸ ಬೆಳವಣಿಗೆ. 2005ರ ಕೌಟುಂಬಿಕ ಹಿಂಸಾಚಾರ ತಡೆ ಕಾಯಿದೆ ಹಾಗೂ ಸೆಕ್ಷನ್ 498 ಎ ಅಡಿ ದಾಖಲಾಗುವ ಪ್ರಕರಣಗಳನ್ನು ಸರ್ಕಾರ ರಚಿಸಲಿರುವ ಕುಟುಂಬ ಕಲ್ಯಾಣ ಸಮಿತಿ ಪರಿಶೀಲನೆಗೆ ಒಳಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದ್ದು ಮಹಿಳಾ ಹಕ್ಕುಗಳ ಪರವಾಗಿ ಈವರೆಗೆ ನಡೆಸಿಕೊಂಡು ಬರಲಾಗಿದ್ದ ಹೋರಾಟಕ್ಕೆ ದೊಡ್ಡ ಪೆಟ್ಟು ಎಂಬ ಭಾವನೆಯನ್ನು ಮಹಿಳಾ ಹೋರಾಟಗಾರು ವ್ಯಕ್ತಪಡಿಸಿದ್ದರು. ಈಗ ವೈವಾಹಿಕ ಅತ್ಯಾಚಾರವನ್ನು ಕ್ರಿಮಿನಲ್ ಕಾಯಿದೆಯಾಗಿ ಪರಿಗಣಿಸುವುದು ಸಾಧ್ಯವಿಲ್ಲ ಎಂಬಂತಹ ಮಾತನ್ನು ಸುಪ್ರೀಂ ಕೋರ್ಟ್ ಹೇಳಿದೆ.


ಐಪಿಸಿಯ ಸೆಕ್ಷನ್ 375ರ ಸೆಕ್ಷನ್ 2, ಸಂವಿಧಾನದ 14, 15 ಹಾಗೂ 21ನೇ ವಿಧಿಗಳ ಉಲ್ಲಂಘನೆಯಾಗಿದೆ ಎಂದು 'ಇಂಡಿಪೆಂಡೆಂಟ್ ಥಾಟ್' ಎಂಬ ಎನ್‌ಜಿಓ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನ ಈ ಅಭಿಪ್ರಾಯ ವ್ಯಕ್ತವಾಗಿದೆ. ಅತ್ಯಾಚಾರ ವಿರೋಧಿ ಕಾನೂನು ಬಲಗೊಳಿಸಲು 2013ರಲ್ಲಿ ಕೇಂದ್ರ ಸರ್ಕಾರ ರಚಿಸಿದ್ದ ನ್ಯಾಯಮೂರ್ತಿ ಜೆ.ಎಸ್. ವರ್ಮಾ ಸಮಿತಿಯಲ್ಲಿದ್ದ ಸುಪ್ರೀಂ ಕೋರ್ಟ್ ವಕೀಲ ಗೋಪಾಲ ಸುಬ್ರಮಣಿಯಮ್ ಅವರೂ ಈ ಅರ್ಜಿಯನ್ನು ಬರೆದ ವಕೀಲರಲ್ಲಿ ಒಬ್ಬರಾಗಿದ್ದಾರೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಂ.ಬಿ. ಲೋಕೂರ್ ಹಾಗೂ ದೀಪಕ್ ಗುಪ್ತ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಹೇಳಿರುವ ಮಾತುಗಳಿವು: ‘ವೈವಾಹಿಕ ಅತ್ಯಾಚಾರವನ್ನು ನಮ್ಮ ಸಂಸತ್ತು ವಿಸ್ತೃತವಾಗಿ ಚರ್ಚಿಸಿದೆ ಹಾಗೂ ಇದನ್ನು ಅತ್ಯಾಚಾರ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ಸಂಸತ್ತು ಹೇಳಿದೆ. ಹೀಗಾಗಿ ಇದನ್ನು ಕ್ರಿಮಿನಲ್ ಅಪರಾಧವಾಗಿ ಪರಿಗಣಿಸಲಾಗದು’.

ಸಂಸತ್ತಿನಲ್ಲಿ ನಡೆದ ಚರ್ಚೆಗಳ ಸಂದರ್ಭದಲ್ಲಿ ವಿವಾಹ ಎಂಬುದು ಪವಿತ್ರ ಬಂಧನ ಎಂಬಂಥ ಪರಿಕಲ್ಪನೆಗಳಿಗೆ ಒತ್ತು ನೀಡಿದ್ದು ಸ್ಪಷ್ಟವಿತ್ತು. ಗುಜರಾತ್‌ನ ಬಿಜೆಪಿ ಎಂಪಿ ಹಾಗೂ ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವ ಹರಿಭಾಯಿ ಪಾರ್ತಿಭಾಯಿ ಚೌಧರಿ ಅವರು ಹೀಗೆ ಹೇಳಿರುವುದು ದಾಖಲಾಗಿದೆ:

‘ಅಂತರರಾಷ್ಟ್ರೀಯ ನೆಲೆಯಲ್ಲಿ ಅರ್ಥ ಮಾಡಿಕೊಳ್ಳಲಾದ ವೈವಾಹಿಕ ಅತ್ಯಾಚಾರ ಪರಿಕಲ್ಪನೆಯನ್ನು ಭಾರತದ ಸಂದರ್ಭದಲ್ಲಿ ಸೂಕ್ತವಾಗಿ ಅನ್ವಯಿಸಲಾಗದು. ಇದಕ್ಕೆ ಹಲವಾರು ಕಾರಣಗಳಿವೆ. ಶಿಕ್ಷಣದ ಮಟ್ಟ, ಅನಕ್ಷರತೆ, ಬಡತನ, ಸಾಮಾಜಿಕ ಆಚಾರ ವಿಚಾರಗಳು, ಧಾರ್ಮಿಕ ನಂಬಿಕೆಗಳು, ವಿವಾಹವನ್ನು ಪವಿತ್ರ ಬಂಧನವಾಗಿ ಸ್ವೀಕರಿಸುವ ಸಮಾಜದ ಮನಸ್ಥಿತಿ – ಇವೆಲ್ಲಾ ಅಂಶಗಳು ಇಲ್ಲಿ ಮುಖ್ಯವಾಗುತ್ತವೆ’.

ವಿವಾಹ ಬಂಧನ ಪವಿತ್ರ ಎಂಬುದು ಸರಿ. ಆದರೆ ಅದರಿಂದ ವಿವಾಹ ಸಂಬಂಧದೊಳಗಿನ ಅಪರಾಧವೂ ಪವಿತ್ರವಾಗಿಬಿಡುತ್ತದೆಯೆ ಎಂಬುದು ಪ್ರಶ್ನೆ. ಮಹಿಳೆಯರನ್ನು ರಕ್ಷಿಸುವ ಕಾನೂನು ರಚಿಸದಿರಲು ಅನಕ್ಷರತೆ, ಬಡತನ ಹೇಗೆ ಆಧಾರಗಳಾಗುತ್ತವೆ? ಜೊತೆಗೆ ಅತ್ಯಾಚಾರದ ಬಗ್ಗೆ ನಮ್ಮ ಕಾನೂನುಗಳಲ್ಲಿರುವ ವಿರೋಧಾಭಾಸಗಳೂ ಎದ್ದು ಕಾಣಿಸುವಂತಹದ್ದು. ಬಾಲ್ಯ ವಿವಾಹವನ್ನು ಕಾನೂನು ನಿಷೇಧಿಸುತ್ತದೆ. ಆದರೆ ಪರೋಕ್ಷವಾಗಿ ಬಾಲ್ಯ ವಿವಾಹವನ್ನು ಬೆಂಬಲಿಸುವ ಅಂಶಗಳು ಕಾನೂನಿನಲ್ಲಿ ಇರುವಂತಹದ್ದು ನಮ್ಮ ಕಾನೂನು ವ್ಯವಸ್ಥೆಯ ಆಷಾಢಭೂತಿತನಕ್ಕೆ ದ್ಯೋತಕ. ಯಾರನ್ನು ಮಕ್ಕಳೆಂದು ಪರಿಗಣಿಸಬೇಕು? ಮಕ್ಕಳು ಲೈಂಗಿಕ ಸಂಬಂಧಗಳಿಗೆ ಸಮ್ಮತಿ ನೀಡಬಹುದೆ? ಎಂಬ ಪ್ರಶ್ನೆಗಳಿಗೆ ಕಾನೂನಿನಲ್ಲಿ ಸ್ಪಷ್ಟ ಉತ್ತರವಂತೂ ಇಲ್ಲ. 2012ರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೊಕ್ಸೊ) ಅನುಸಾರ 18 ವರ್ಷಗಳ ಒಳಗಿನವರನ್ನು ಮಕ್ಕಳೆಂದು ಪರಿಗಣಿಸಲಾಗುತ್ತದೆ. ಆದರೆ ಅತ್ಯಾಚಾರ ಅಪರಾಧವನ್ನು ವಿವರಿಸುವ ಐಪಿಸಿಯ ಸೆಕ್ಷನ್ 375ರಲ್ಲಿ ವಿನಾಯಿತಿಯೊಂದನ್ನು ಸೇರಿಸಲಾಗಿದೆ. ಹೀಗಾಗಿ, ಐಪಿಸಿಯ ಸೆಕ್ಷನ್ 375 (2) ಪ್ರಕಾರ, 15ರಿಂದ 17ನೇ ವಯಸ್ಸಿನ ಹೆಣ್ಣುಮಗಳ ಜೊತೆಗೆ ಪುರುಷ ವಿವಾಹವಾಗಿದ್ದಲ್ಲಿ ಆಕೆಯೊಂದಿಗೆ ಆತ ಲೈಂಗಿಕ ಸಂಬಂಧ ಹೊಂದುವುದು ಅತ್ಯಾಚಾರ ಎನಿಸಿಕೊಳ್ಳುವುದಿಲ್ಲ. ಇನ್ನೂ ಒಂದು ವಿಪರ್ಯಾಸವಿದೆ. ನಮ್ಮಲ್ಲಿ ವಿವಾಹದ ಕಾನೂನಾತ್ಮಕ ವಯಸ್ಸು ಹೆಣ್ಣುಮಗಳಿಗೆ 18 ವರ್ಷಗಳು. ಹೀಗಿದ್ದೂ ಚಿಕ್ಕ ವಯಸ್ಸಿನ ಹೆಂಡತಿ ಜೊತೆ ಲೈಂಗಿಕ ಸಂಬಂಧ ಹೊಂದಲು ಐಪಿಸಿಯ ಸೆಕ್ಷನ್ 375 (2) ಅವಕಾಶ ನೀಡುತ್ತದೆ. ವಿವಾಹ ಬಂಧನದೊಳಗಿರುವುದರಿಂದ ಇದು ಅತ್ಯಾಚಾರ ಎನಿಸಿಕೊಳ್ಳುವುದಿಲ್ಲ. ಆದರೆ ವಿವಾಹ ಬಂಧನವಿಲ್ಲದೆ ಪರಸ್ಪರ ಸಮ್ಮತಿ ಇದ್ದು ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳ ಜೊತೆ ಲೈಂಗಿಕ ಸಂಪರ್ಕ ಹೊಂದಿದರೆ ಅದು ಅತ್ಯಾಚಾರವಾಗುತ್ತದೆ. ಕಾನೂನಿನ ಪ್ರಕಾರ ಅದು ಅಪರಾಧ. ಈ ಅಪರಾಧ ವಿವಾಹ ಎಂಬ ಸಂಸ್ಥೆಯಲ್ಲಿ ಗೌಣವಾಗುತ್ತದೆ ಎಂಬುದು ವಿರೋಧಾಭಾಸ. ಇಲ್ಲಿ ಹೆಣ್ಣುಮಗುವಿನ ಆರೋಗ್ಯ, ಕ್ಷೇಮಕ್ಕಿಂತ ಸಂಪ್ರದಾಯವೇ ಮುಖ್ಯವಾಗುತ್ತದೆ.

ಐಪಿಸಿಯ ಸೆಕ್ಷನ್ 375 (2) ನ್ನು ಕೇಂದ್ರ ಸರ್ಕಾರ ತೀವ್ರವಾಗಿ ಸಮರ್ಥಿಸಿಕೊಂಡಿದೆ. ಭಾರತದಲ್ಲಿ ಬಾಲ್ಯ ವಿವಾಹ ವ್ಯಾಪಕವಾಗಿರುವುದರಿಂದ ವಿವಾಹ ಸಂಸ್ಥೆಯನ್ನು ರಕ್ಷಿಸಲು ಇದು ಅಗತ್ಯ ಎಂದು ಅದು ಹೇಳಿದೆ. ಆದರೆ ಬಾಲ್ಯ ವಿವಾಹ ತಡೆಗೆ ಸರ್ಕಾರ ನಡೆಸುತ್ತಿರುವ ಪ್ರಯುತ್ನಗಳು ಇಲ್ಲಿ ಮುಖ್ಯವಾಗುವುದಿಲ್ಲ. ಇಂತಹ ದ್ವಂದ್ವ ನೀತಿಗಳು ಎಷ್ಟು ಸರಿ? ವಿವಾಹ ಸಂಸ್ಥೆಯೊಳಗೆ ಮಹಿಳೆಯರನ್ನು ಜೈವಿಕ ಜೀವಿಗಳಾಗಿಯಷ್ಟೇ ಅಲ್ಲದೆ ನಾಗರಿಕರಾಗಿ ಅರ್ಥ ಮಾಡಿಕೊಳ್ಳುವಲ್ಲಿ ಪ್ರಮುಖ ಬದಲಾವಣೆಗೆ ಹೊಸ ಮಾರ್ಗ ತೆರೆಯಲು ಕೇಂದ್ರ ಸರ್ಕಾರ ಹಾಗೂ ಸುಪ್ರಿಂ ಕೋರ್ಟ್ ಸಿದ್ಧವಿಲ್ಲ ಎಂಬುದು ಸ್ಪಷ್ಟ. ಮಹಿಳೆಯ ದೇಹ, ಮನಸ್ಸು ಪೂರ್ಣ ಅಧೀನ ನೆಲೆಯದು ಎಂಬುದನ್ನು ಹೇಳಲು ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಯತ್ನಿಸುತ್ತಿದೆ ಎಂಬ ಭಾವನೆ ಇಲ್ಲಿ ಮೂಡುತ್ತದೆ. ಯಥಾಸ್ಥಿತಿ ವಾದವನ್ನು ಎತ್ತಿ ಹಿಡಿಯುವ ಧೋರಣೆ ಇಲ್ಲಿರುವುದು ಸ್ಪಷ್ಟ.

ಈ ಬಗೆಯಲ್ಲಿ ಲಿಂಗತ್ವ ಪಡಿಯಚ್ಚುಗಳನ್ನು ಎತ್ತಿ ಹಿಡಿಯುವ ಸಿದ್ಧಾಂತಗಳ ಮಂಡನೆ ಜಾಗತಿಕವಾದುದು. ತಂತ್ರಜ್ಞಾನ ಉದ್ಯಮದ ನಾಯಕತ್ವ ಸ್ಥಾನಗಳಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಾಗಲು ಅವರ ಜೈವಿಕ ಅಂಶಗಳು ಕಾರಣ ಎಂಬುದಾಗಿ ಗೂಗಲ್ ಸಂಸ್ಥೆಯ ಉದ್ಯೋಗಿ ಜೇಮ್ಸ್ ಡ್ಯಾಮೊರ್ ಇತ್ತೀಚೆಗೆ ಹೇಳಿದ್ದು ವಿವಾದವಾಗಿದ್ದನ್ನು ಸ್ಮರಿಸಬಹುದು. ಸಿಲಿಕಾನ್ ವ್ಯಾಲಿಯಲ್ಲಿ ಲಿಂಗ ಅಸಮಾನತೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ ಗೂಗಲ್‌ ಉದ್ಯೋಗಿಯ ಈ ಮಾತುಗಳು ಚರ್ಚೆಯ ತೀವ್ರತೆಯನ್ನು ಹೆಚ್ಚಿಸಿವೆ. ತಂತ್ರಜ್ಞಾನ ಉದ್ಯಮದಲ್ಲಿ ಬಹುತ್ವದ ಕೊರತೆ, ಕೆಲಸದ ಸಂಸ್ಕೃತಿ, ಲಿಂಗ ತಾರತಮ್ಯದ ಬಗೆಗಿನ ಚರ್ಚೆಯನ್ನು ಇದು ಮತ್ತೆ ಹುಟ್ಟುಹಾಕಿದೆ. ತಂತ್ರಜ್ಞಾನ ವಲಯದಲ್ಲಿ ಮಹಿಳೆಯರು ಎದುರಿಸುವ ಪೂರ್ವಗ್ರಹಗಳ ಅನುಭವ ಕಥನಗಳಿಗೆ ಧ್ವನಿ ನೀಡಿದಂತಾಗಿದೆ.

ಆದರೆ ಇಂತಹ ಪೂರ್ವಗ್ರಹಗಳನ್ನು ಬಿತ್ತಲು ಸ್ವತಃ ಹೆಣ್ಣುಮಕ್ಕಳೂ ಭಾಗಿಯಾಗುವುದಾದರೆ ಏನು ಮಾಡಬೇಕು? ಇತ್ತೀಚೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಗುಜರಾತ್‌ನ ಪ್ರವಾಹಪೀಡಿತ ಬನಾಸ್‌ಕಾಂತಾ ಜಿಲ್ಲೆಯಲ್ಲಿ ಶುಕ್ರವಾರ ಪ್ರವಾಸದಲ್ಲಿದ್ದ ವೇಳೆ ಅವರ ಕಾರಿನ ಮೇಲೆ ಸ್ಥಳೀಯ ಬಿಜೆಪಿ ಘಟಕದ ಮುಖಂಡರೆನಿಸಿಕೊಂಡವರೊಬ್ಬರು ಕಲ್ಲು ತೂರಾಟ ನಡೆಸಿದ್ದ ಅಹಿತಕರ ಘಟನೆ ವರದಿಯಾಗಿತ್ತು. ಆದರೆ ಇದಕ್ಕೆ ಅಲ್ಲಿನ ಮಹಿಳಾ ಕಾಂಗ್ರೆಸ್ ಘಟಕ ಪ್ರತಿಕ್ರಿಯಿಸಿದ ಬಗೆಯಾದರೂ ಯಾವ ಬಗೆಯದ್ದು?

‘ಸಂಕಷ್ಟಕ್ಕೆ ಸಿಲುಕಿದವರಿಗೆ ಸಾಂತ್ವನ ಹೇಳಲು ತೆರಳಿದ್ದವರ ಮೇಲೆ ಕಲ್ಲು ತೂರಾಟ ನಡೆಸಿರುವುದು ಹೇಡಿಗಳ ಕೃತ್ಯ. ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಭೀತಿ ಇಲ್ಲದೆ ಯಾರು ಎಲ್ಲಿಗೆ ಬೇಕಾದರೂ ಹೋಗಬಹುದು. ನಮ್ಮ ಮನೆಗಳಿಂದ ಸಂಗ್ರಹಿಸಿದ ಬಳೆಗಳನ್ನು ರಾಹುಲ್ ಗಾಂಧಿ ಅವರ ಕಾರಿನ ಮೇಲೆ ದಾಳಿ ನಡೆಸಿದವರಿಗೆ, ಪ್ರಧಾನಿಗೆ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರಿಗೆ ಕಳುಹಿಸುತ್ತೇವೆ’ ಎಂದು ಪ್ರದೇಶ ಮಹಿಳಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಪ್ರತಿಮಾ ಕುಟಿನೊ ಹೇಳಿದ್ದರು.

ಬಳೆ ಎಂಬುದು ಹೇಡಿತನವನ್ನು ಬಿಂಬಿಸುತ್ತದೆ ಎಂದಾದರೆ ಅದನ್ನು ಧರಿಸುವ ಹೆಣ್ಣನ್ನು ಅವಮಾನಿಸಿದಂತೆ ಎಂಬ ಪ್ರಾಥಮಿಕ ತಿಳಿವಳಿಕೆಯೂ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ಇಲ್ಲದಿರುವುದು ಆಶ್ಚರ್ಯಕರ. ರಾಜಕೀಯ ವಾದ ವಿವಾದಗಳಲ್ಲಿ ‘ನಾನೇನು ಬಳೆ ತೊಟ್ಟು ಕೂತಿಲ್ಲ’ ಎಂದು ಸವಾಲು ಹಾಕುವುದು ಮಾಮೂಲು. ಇಂತಹ ಮಾತುಗಳು ಹೆಣ್ಣಿನ ಅಧೀನ ನೆಲೆಯನ್ನು ಪುಷ್ಟೀಕರಿಸುತ್ತಿರುತ್ತಲೇ ಇರುತ್ತವೆ. ಭಾಷೆ, ನಡೆನುಡಿ, ಸರ್ಕಾರದ ನೀತಿಗಳು ಲಿಂಗತ್ವ ಪಡಿಯಚ್ಚುಗಳನ್ನೇ ಸ್ಥಿರೀಕರಿಸುತ್ತಾ ಸಾಗಿದರೆ ನಮ್ಮ ಸಂವಿಧಾನ ಮಹಿಳೆಗೆ ನೀಡಿರುವ ಸಮಾನತೆಗೆ ಅರ್ಥವಾದರೂ ಏನು? ಕಡೆಗೆ ನ್ಯಾಯಾಂಗವೂ ಹೆಣ್ಣಿನ ವೈಯಕ್ತಿಕ ಹಕ್ಕುಗಳನ್ನು ಎತ್ತಿ ಹಿಡಿಯದಿದ್ದಲ್ಲಿ ಸ್ವಾತಂತ್ರ್ಯ ಎಂಬ ಪರಿಕಲ್ಪನೆ ಹೆಣ್ಣಿಗೆ ಮರೀಚಿಕೆಯೇ ಆಗಿ ಉಳಿಯುತ್ತದೆಯೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT