ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರೆಯ ದುಷ್ಟರ ನಡುವೆ ಜಾಣನಾಗಲು ಕಲಿಸು

ಅಕ್ಷರ ಗಾತ್ರ

ಚೂಡಿದಾರ್ ಖ್ಯಾತಿಯ ರಾಮ್‌ದೇವ್, ಚಿಲ್ಲರೆ ರಾಜಕಾರಣಿಯಂತೆ ಮಾತನಾಡಿ, ದೇಶದ ಉದ್ದಗಲಕ್ಕೂ ದಲಿತರಿಂದ ಪ್ರತಿಭಟನೆ ಎದುರಿಸುತ್ತಿದ್ದಾರೆ. ತನ್ನ ಬತ್ತಳಿಕೆಯ ಸಕಲ ಮೋಹನಾಸ್ತ್ರಗಳನ್ನು ಬಿಟ್ಟು ದಲಿತರನ್ನು, ಅಲ್ಪಸಂಖ್ಯಾತರನ್ನು ಆಲಂಗಿಸಿಕೊಳ್ಳಲು ಮೋದಿ ಸರ್ಕಸ್ಸು ಮಾಡುತ್ತಿದ್ದರೆ, ಯೋಗಗುರು ಎಡವಟ್ಟು ಮಾಡಿಕೊಂಡಿದ್ದಾರೆ.  ಬಿಜೆಪಿಯಲ್ಲಿರುವ ಸುರೇಶ್‌ಕುಮಾರ್‌ರಂಥ ಸೂಕ್ಷ್ಮಜ್ಞರಾದರೂ ರಾಮ್‌ದೇವ್ ಅವರ ಹನಿಮೂನ್ ಮಾತುಗಳನ್ನು ಖಂಡಿಸಬೇಕಿತ್ತು.

ರಾಜಕಾರಣಿಗಳು ನಿಂದೆ - ಪ್ರತಿನಿಂದೆಗಳಲ್ಲಿ ತೊಡಗುವುದು ಹೊಸತೇನೂ ಇಲ್ಲ. ಆದರೆ ಸರ್ವರಿಗೂ ಬೇಕಾದ ಯೋಗಗುರು, ಧರ್ಮಗುರುಗಳು ಸುಮ್ಮನಿರಬಾರದೆ? ಆತ್ಮಶುದ್ಧಿ ಇಲ್ಲದ ಇವರು ಯಾವ ಸೀಮೆ ಗುರುಗಳು? ತಾವೇ ಮನೋರೋಗಿಗಳಂತೆ ನಡೆದುಕೊಳ್ಳುವವರು, ಸಮಾಜದ ರೋಗವನ್ನು ಹೇಗೆ ವಾಸಿ ಮಾಡುತ್ತಾರೆ? ಹೊರಗಿನ ಕಣ್ಣು ಮಾತ್ರವಲ್ಲ - ಒಳಗಣ್ಣೂ ಐಬು. ದೃಷ್ಟಿಹೀನ ಗುರು, ಲೋಕಕ್ಕೆ ಯಾವ ಬೆಳಕು ಕೊಡುತ್ತಾನೆ?

ಇಲ್ಲಿ ಅಪ್ರಸ್ತುತ ಅನ್ನಿಸಬಹುದು. ಆದರೂ ಈ ನಿಂದೆ - ಪ್ರತಿನಿಂದೆಗಳ ಗದ್ದಲದಿಂದ ಕೂಡಿದ ಮೀನಿನ ಮಾರುಕಟ್ಟೆಯಿಂದ ಹೊರಬಂದು ಭಿನ್ನವಾದುದನ್ನು ಧ್ಯಾನಿಸಬೇಕೆನಿಸುತ್ತಿದೆ. ಅದು ಗುರುವಂದನೆಗೆ ಸಂಬಂಧಿಸಿದ್ದು. ಪ್ರಾಚೀನರಿಂದ ಆಧುನಿಕರವರೆಗೆ ಎಲ್ಲ ಕಲಾಕಾರರು, ಚಿಂತಕರು, ಬರಹಗಾರರು ಗುರುವನ್ನು ನಮಿಸಿ ಮುಂದೆ ಸಾಗಿದ್ದಾರೆ. ಅದು ಔಪಚಾರಿಕತೆ ಮಾತ್ರವಲ್ಲ. ಗುರುವಿನಿಂದ ತಾವು ಪಡೆದ ಅರಿವು ಹೇಗೆ ತಮ್ಮನ್ನು ಭಿನ್ನವಾಗಿ ರೂಪಿಸಿತು ಎಂಬ ಕೃತಕೃತ್ಯತೆಯಿಂದ.

ಶಿಲ್ಪಿ, ಕುಶಲಕರ್ಮಿ, ಸಂಗೀತಗಾರ, ಸಾಹಿತಿ, ವಿಜ್ಞಾನಿ ಗುರುವನ್ನು ನೆನೆದು ಮುಂದೆ ಹೋಗುತ್ತಾನೆ. ಗುರುದೇವೋಭವ ಎನ್ನುವಂತೆಯೇ ಶಿಷ್ಯದೇವೋಭವವೂ ಈಗಿನ ಕೆಲವರ ಬದುಕಿನಲ್ಲಿ ನಿಜ. ಗುರು-ಶಿಷ್ಯರ ನಡುವೆ ವೈಚಾರಿಕ ಸಂಘರ್ಷಗಳೂ ಇರಬಹುದು. ಗುರು ಕೊಟ್ಟ ಗಟ್ಟಿ ತಳಪಾಯದ ಮೇಲೆ ಶಿಷ್ಯ ಭಾರೀ ಸೌಧವನ್ನೇ ಕಟ್ಟಿ ಸಾಧಕನಾಗಿ ಮೆರೆಯಬಹುದು. ಇದು ಪೂರ್ವದಲ್ಲೂ, ಪಶ್ಚಿಮದಲ್ಲೂ ; ಪುರಾಣ, ಜನಪದ, ಚರಿತ್ರೆ ಮತ್ತು ವರ್ತಮಾನಗಳಲ್ಲೂ ನಡೆದು ಬಂದಿದೆ. ನಾನು ತುಂಬಾ ಇಷ್ಟಪಡುವ, ಬೇರೆ ಬೇರೆ ಸಂದರ್ಭಗಳಲ್ಲಿ ಉಲ್ಲೇಖಿಸಿರುವ ಕವಿತೆಯನ್ನು ಇಲ್ಲಿ ಕೊಡುತ್ತಿದ್ದೇನೆ:

ಕಲಿಸು ಗುರುವೇ ಕಲಿಸು
ಕಲಿಸು ಸದ್ಗುರುವೇ ನೀ ಕಲಿಸು
ಸುಳ್ಳಿನ ನಡುವೆ ಸತ್ಯವನಾಡಲು ಕಲಿಸು
ಸ್ವಾರ್ಥದ ನಡುವೆ ನಿಸ್ವಾರ್ಥಿಯಾಗಲು ಕಲಿಸು
ಅಂಜಿ ನಡೆವರ ನಡುವೆ ಧೀರನಾಗಲು ಕಲಿಸು
ಧರೆಯ ದುಷ್ಟರ ನಡುವೆ ಜಾಣನಾಗಲು ಕಲಿಸು
ಜಾಣನಾಗಲು ಕಲಿಸು ನಾ ಜಾಣನಾಗಲು ಕಲಿಸು
ಬೆವರಿಳಿಸಿ ಗಳಿಸಿದಾ ಒಂದು ಕಾಸು
ಸಿಕ್ಕ ಹತ್ತಕ್ಕಿಂತ ಮಿಗಿಲೆಂಬುದ ಕಲಿಸು
ಸೋಲು ಗೆಲುವಿನಲಿ ಸಮಚಿತ್ತದಿಂದಿರಲು
ಶತ್ರುಗಳಿಗೂ ಸನ್ಮಿತ್ರನಾಗಿರಲು ಕಲಿಸು
ಹಸಿರು ಮಲೆ ಹೂವಲಿ ನಾ ಧ್ಯಾನಿಸುವುದ ಕಲಿಸು
ಜಾಣನಾಗಲು ಕಲಿಸು ನಾ ಜಾಣನಾಗಲು ಕಲಿಸು
ಜಗವೆಲ್ಲಾ ಒಂದಾಗಿ ಜರಿದರೂ ಸರಿಯೆ
ನನ್ನನೆ ನಾ ನಂಬುವ ಬಗೆ ಕಲಿಸು
ಅಳುವಿನಲಿ ಅವಮಾನ ಇಲ್ಲೆಂಬುದ ನೀ ಕಲಿಸು
ನನ್ನನೆ ನಾ ನೋಡಿ ನಗುವುದನು ಕಲಿಸು
ಮಾನವೀಯತೆಯಲಿ ನಾ ಮೆರೆಯುವುದನು ಕಲಿಸು
ಮಾನವೀಯತೆಯಲಿ ನಾ ಕರಗುವುದನು ಕಲಿಸು
ಜಾಣನಾಗಲು ಕಲಿಸು ನಾ ಜಾಣನಾಗಲು ಕಲಿಸು

ಅಬ್ರಹಾಂ ಲಿಂಕನ್ ತನ್ನ ಮಗನನ್ನು ಗುರುವಿನ ಸನ್ನಿಧಿಗೆ ಹಾಕುವಾಗ ರಚಿಸಿದ ಈ ಪತ್ರವನ್ನು ರಾಮನಾಥ್ ಕನ್ನಡಕ್ಕೆ ಭಾವಾನುವಾದ ಮಾಡಿದ್ದಾರೆ. ಇದನ್ನು ಓದುವಾಗ, ಹಾಡುವಾಗ ನನ್ನ ಹೃದಯ ದ್ರವಿಸುವುದು ಏಕಾಗಿ? ನೋಡಲು ಸರಳವಾದ ನೀತಿ ಪಾಠದಂತಿರುವ ಈ ಸಾಲುಗಳು, ಆ ಸರಳ ಮಾತುಗಳಲ್ಲಿಯೇ ಜೀವನ ಮೀಮಾಂಸೆಯನ್ನಿಟ್ಟುಕೊಂಡಿವೆ.

ಇಲ್ಲಿನ ಪ್ರತಿ ಮಾತೂ ವೈಯಕ್ತಿಕ ಮತ್ತು ಸಾರ್ವತ್ರಿಕ. ಇದು ಕಲಿಸುವ ನೀತಿಬೋಧೆಯಲ್ಲ. ಗುರುವನ್ನು ಶಿಷ್ಯನೇ ಕೇಳಿಕೊಳ್ಳುತ್ತ ತನಗೆ ‘ಇದನ್ನು ಕಲಿಸು’ ಎಂದು ಪ್ರಾರ್ಥಿಸುವ ಮೊರೆ. ಇಲ್ಲಿ ‘ಕಲಿಸು’ ಎಂದು ಗುರುವಿಗೆ ಪ್ರಾರ್ಥನೆ ಮಾಡುವ ಮಗುವಿನ ಮನಸ್ಸು, ಅಂಥ ಉತ್ತಮಿಕೆಯ ಹಂಬಲದ ಸಂಕೇತ. ಉತ್ತಮಿಕೆಗೆ ಹಂಬಲಿಸದವ ಪಿಳ್ಳೆನೆವ ಹುಡುಕುತ್ತಾನೆ. ಸಮಾಜ ಸರಿ ಇಲ್ಲ, ಆದ್ದರಿಂದ ಕಳ್ಳನಾದೆ, ಲಂಚ ಹೊಡೆದೆ, ಹೇಡಿಯಾದೆ, ಸ್ವಾರ್ಥಿಯಾದೆ ಎನ್ನುತ್ತಾನೆ.  

ಪಲಾಯನವಾದಿಗಳಿಗಾಗಿ ಯಾರೂ ಪದ್ಯ ಬರೆಯಬಾರದು. ಕಾವ್ಯದ ಕೆಲಸ, ಯಾವುದು ಸರಿ ಎಂದು ನಿಚ್ಚಳವಾಗಿ ತೋರುವಂಥದ್ದು. ಒಣ ಉಪದೇಶಗಳೆಲ್ಲ ಉತ್ತಮ ಪದ್ಯವಾಗಲಾರವು. ಪದ್ಯದ ಒಳಗೆ ಜೀವ-ತೇವ ಇರಬೇಕು. ‘ಕಲಿಸು ಗುರುವೆ’ ಹಾಡುವಾಗ, ಹಾಡುವುದನ್ನು ಕೇಳುವಾಗ ಹೃದಯವಂತರು ತೇವಗೊಳ್ಳುತ್ತಾರೆ.

ಎಲ್ಲರ ಕೊರಳಿಗೆ ಧರಿಸಿಕೊಳ್ಳಬಹುದಾದ ರಾಗ ಮತ್ತು ತಾಳದಲ್ಲಿ ರಾಜು ಅನಂತಸ್ವಾಮಿ ಮತ್ತು ರಂಗಾಯಣದ ಚೀನಿ, ಈ ಕವಿತೆಗೊಂದು ರಾಗಸಂಯೋಜನೆಯನ್ನು ಮಾಡಿದ್ದಾರೆ. ಹಳ್ಳಿಯ ಕನ್ನಡ ಶಾಲೆಯ ಮಕ್ಕಳಿಗಂತೂ ಹೇಳಿ ಮಾಡಿಸಿದಂತಿದೆ. ಈ ಕವಿತೆಯನ್ನು ಬರೆದಿಟ್ಟುಕೊಂಡು ಶಾಲೆಗಳಲ್ಲಿ, ಗುಂಪುಗಳಲ್ಲಿ, ಸಮಾರಂಭಗಳಲ್ಲಿ ಹಾಡಬೇಕೆಂದು, ಹಾಡಿಸಬೇಕೆಂದು ಶಿಕ್ಷಕರಲ್ಲಿ ನನ್ನ ಪ್ರಾರ್ಥನೆ.

ತಮ್ಮ ಮಹಾಕೃತಿ ಶ್ರೀರಾಮಾಯಣದರ್ಶನಂ ಬೃಹದ್‌ಗಾನವನ್ನು ಗುರುವಿನ ಸಿರಿಯಡಿಗೆ ಒಪ್ಪಿಸುವ ಕುವೆಂಪು ಅವರು, ತಮ್ಮ ಗುರು ವೆಂಕಣ್ಣಯ್ಯನವರಿಗೆ ‘ಓ ಪ್ರಿಯಗುರುವೆ ಕರುಣಿಸಿಂ ನಿಮ್ಮ ಹರಕೆಯ ಬಲದ ಶಿಷ್ಯನಂ, ಕಾವ್ಯಮಂ ಕೇಳ್ವೊಂದು ಕೃಪೆಗೆ ಕೃತಕೃತ್ಯನಂ ಧನ್ಯನಂ ಮಾಡಿ’  ಎನ್ನುತ್ತಾರೆ. ಗುರು ಉದಯರವಿಗೆ ಬಂದು ಶಿಷ್ಯನ ಕಿರುಗವನಗಳನ್ನು ಕೇಳಿ ಹೋದರು. ಅಷ್ಟರಲ್ಲೇ ಸಂಜೆಯಾಯಿತು. ಶಿಷ್ಯನಿಗೋ ರಾಮಾಯಣವನ್ನು ಓದುವ ತವಕ.

‘ಮತ್ತೊಮ್ಮೆ ಬರುವೆ. ದಿನವೆಲ್ಲಮುಂ ಕೇಳ್ವೆನೋದುವೆಯಂತೆ; ರಾಮಾಯಣಂ ಅದು ವಿರಾಮಾಯಣಂ ಕಣಾ!’
ಎನ್ನುತ್ತಾರೆ ವೆಂಕಣ್ಣಯ್ಯ. ಆದರೆ ಮತ್ತೆ ಅವಕಾಶವೇ ಬರುವುದಿಲ್ಲ. ಇಲ್ಲವಾದ ಗುರುವನ್ನು ನೆನೆಯುತ್ತಾ ‘ಮನೆಗೈದಿದಿರಿ ದಿಟಂ ; ದಿಟದ ಮನೆಗೈದಿದಿರಿ!’ ಎಂದು ಕುವೆಂಪು ನೋವಿನಿಂದ ಹೇಳುತ್ತಾರೆ. ಇದು ಕುವೆಂಪು ರಚಿಸಿದ್ದಲ್ಲ; ಕುವೆಂಪುವನ್ನೇ ಸೃಜಿಸಿದ ಜಗದ್ಭವ್ಯ ರಾಮಾಯಣ ಎನ್ನುತ್ತಾರೆ. ಮೊದಲ ಸಂಚಿಕೆ ‘ಕವಿಕ್ರತು ದರ್ಶನಂ’ನಲ್ಲಿ ಕುವೆಂಪು ಸ್ಮರಿಸದ ಚೇತನಗಳೇ ಇಲ್ಲ.

ಹೋಮರ್, ವರ್ಜಿಲ್, ಡಾಂಟೆ, ಮಿಲ್ಟನ್, ನಾರಣಪ್ಪ, ಪಂಪ, ವ್ಯಾಸ, ಭಾಸ, ಭವಭೂತಿ, ಕಾಳಿದಾಸ, ತುಲಸಿದಾಸ... ಈ ಪಟ್ಟಿಯಲ್ಲಿ ಹಳಬರು, ಹೊಸಬರು, ಹಿರಿಯರು, ಕಿರಿಯರು ಮತ್ತು ಜಗತ್ತಿನ ಕಲಾಚಾರ್ಯರೆಲ್ಲರೂ ಸೇರುತ್ತಾರೆ. ಜ್ಞಾತಾಜ್ಞಾತರಿಂದ ಪಡೆದ ಮೂರ್ತಾಮೂರ್ತಗಳನ್ನು ನೆನೆದು, ಮುಡಿಬಾಗಿ ಮಣಿದು, ಕೈಜೋಡಿಸುತ್ತಾರೆ. ಗುರು ಶಿಷ್ಯ ಸಂಬಂಧದ ಈ ಗಾಢತೆ, ಭವ್ಯತೆ ಮಹಾಕಾವ್ಯಕ್ಕೆ ಒಂದು ಪೌರಾಣಿಕ ಪ್ರವೇಶಿಕೆಯಂತಿದೆ. ಅಸಮಾನತೆಯ ಬಗ್ಗೆ ಅಪಾರ ಸಿಟ್ಟುಳ್ಳ ಕುವೆಂಪು ಅವರ ಆ ಮುಖವೇ ಬೇರೆ.

ಗುರುಗಳಿಗೆ ನಮಿಸುವ ನಿಷ್ಕಳಂಕ ಸೌಜನ್ಯದ ಈ ಮುಖವೇ ಬೇರೆ. ಒಂದು ಆತ್ಮಪ್ರತ್ಯಯದ ಮುಖ; ಮತ್ತೊಂದು ವಿನಯವಂತಿಕೆಯ ಮುಖ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಕ್ಲೀಷೆಯ ಮಾತೊಂದಿದೆ. ಗುರುವಿನ ಗೆಳೆಯನಾಗಿಯೂ ಗುರಿ ಮುಟ್ಟಲು ಸಾಧ್ಯ. ಗುಲಾಮಗಿರಿ ಅನಿವಾರ್ಯವೇನಲ್ಲ. ನಿಜವಾದ ಗುರು ಅದನ್ನು ಬಯಸುವುದೂ ಇಲ್ಲ. ಅನೇಕ ಶಿಷ್ಯರು ತಮ್ಮ ಅಜ್ಞಾನ ಮುಚ್ಚಿಡಲು ಗುರುವಿಗೆ ಡೈವ್ ಹೊಡೆಯುತ್ತಾರೆ. ಅಸಲಿ ಗುರು, ಡೈವ್ ಹೊಡೆಯುವ ಶಿಷ್ಯೋತ್ತಮರನ್ನು ಕಂಡು ಮುಜುಗರಕ್ಕೊಳಗಾಗುತ್ತಾನೆ.

ಆದರೆ ಸೆಟೆದು ನಿಲ್ಲುವ ಸ್ವಾಭಿಮಾನಿ ಶಿಷ್ಯರನ್ನು ಮೆಚ್ಚಿಕೊಳ್ಳುತ್ತಾನೆ. ಶಿಷ್ಯನಲ್ಲಿ ಸ್ವೋಪಜ್ಞ ಚಿಂತನೆಗಳನ್ನು, ಮುಕ್ತದಾರಿಗಳನ್ನು ತೆರೆದಿಡುವವನೇ ನಿಜವಾದ ಗುರು. ಕುವೆಂಪು ರಾಮಕೃಷ್ಣಾಶ್ರಮದಲ್ಲಿ ಓದಿದವರು. ಗುರು ಪರಂಪರೆಯಲ್ಲಿ ನಂಬಿಕೆ ಉಳ್ಳವರು. ಆದರೆ ಇದು ಮೌಢ್ಯದ ಇಳಿಜಾರಿಗೆ ಎಳೆಯದೆ ವಿಚಾರದ ಶೃಂಗಕ್ಕೆ ಏರಿಸಿಕೊಂಡು ಹೋಯಿತು. ಕಂದಾಚಾರಗಳಿಗೆ ಕಟ್ಟಿಹಾಕದೆ ವಿಜ್ಞಾನದ ಬೆಳಕಿನತ್ತ ಕರೆದೊಯ್ದಿತು. ಅವರಿಂದ ಪ್ರಭಾವಿತರಾದ ಶಿಷ್ಯರು ಅಸಂಖ್ಯ. ಕುವೆಂಪು ತನ್ನ ಗುರು ವೆಂಕಣ್ಣಯ್ಯನವರನ್ನು ಹಾಗೆ ಸ್ಮರಿಸಿದರೆ, ಜಿಎಸ್‌ಎಸ್ ತನ್ನ ಗುರು ಕುವೆಂಪುವನ್ನು ಹೀಗೆ ಸ್ಮರಿಸುತ್ತಾರೆ:

ನಿಶ್ಶಬ್ದದಲ್ಲಿ ನಿಂತು ನೆನೆಯುತ್ತೇನೆ
ನಿಮ್ಮಿಂದ ನಾ ಪಡೆದ ಹೊಸ ಹುಟ್ಟುಗಳ, ಗುಟ್ಟುಗಳ.
ನೀವು ಕಲಿಸಿದಿರಿ ನನಗೆ ತಲೆ ಎತ್ತಿ ನಿಲ್ಲುವುದನ್ನು,
ಕಿರುಕುಳಗಳಿಗೆ ಜಗ್ಗದೆ ನಿರ್ಭಯವಾಗಿ ನಡೆಯುವುದನ್ನು,
ಸದ್ದಿರದೆ ಬದುಕುವುದನ್ನು.
ಎಷ್ಟೊಂದು ಕೀಲಿ ಕೈಗಳನು ದಾನ ಮಾಡಿದ್ದೀರಿ
ವಾತ್ಸಲ್ಯದಿಂದ ; ನಾನರಿಯದನೇಕ
ಬಾಗಿಲುಗಳನು ತೆರೆದಿದ್ದೀರಿ ನನ್ನೊಳಗೆ ;
ಕಟ್ಟಿ ಹರಸಿದ್ದೀರಿ ಕನ್ನಡದ ಕಂಕಣವನ್ನು ಕೈಗೆ.
ಸದ್ದುಗದ್ದಲದ ತುತ್ತೂರಿ ದನಿಗಳಾಚೆಗೆ ನಿಂತು
ನಿಶ್ಶಬ್ದದಲ್ಲಿ ನೆನೆಯುತ್ತೇನೆ
ಗೌರವದಿಂದ.
ನಕ್ಷತ್ರ ಖಚಿತ ನಭವಾಗಿ ತಬ್ಬಿಕೊಂಡಿದ್ದೀರಿ
ನನ್ನ ಸುತ್ತ
ಪಟ ಬಿಚ್ಚಿ ದೋಣಿಯನ್ನೇರಿ ಕುಳಿತಿದ್ದೇನೆ
ನೀವಿತ್ತ ಹೊಸ ಹುಟ್ಟುಗಳ ಹಾಕುತ್ತ.

ಗುರು-ಶಿಷ್ಯರಿಬ್ಬರೂ ರಾಷ್ಟ್ರಕವಿಗಳು. ಎಲ್ಲ ಅರ್ಥದಲ್ಲೂ ಜಿಎಸ್‌ಎಸ್, ಕುವೆಂಪು ಅವರ ನಿಜವಾದ ಶಿಷ್ಯ. ಅವರ ಮೌಲ್ಯಗಳ ಉತ್ತರಾಧಿಕಾರಿ.
                                                       ***
ಯೋಗ ಕಲಿತವರು, ಯೋಗ ಕಲಿಸುವವರೆಲ್ಲ ಗುರುಗಳಲ್ಲ. ಈಗ ಯೋಗ ಲೋಕದೆಲ್ಲೆಡೆ ವ್ಯಾಪಾರ. ಪವರ್ ಯೋಗವೂ ಬಂದಿದೆ! ತಲೆಕೆಳಗಾಗಿ ನಿಲ್ಲುವುದು, ಕರುಳನ್ನು ಕಿವುಚುವುದು, ದೇಹವನ್ನು ಹಾವಿನಂತೆ ಬಗ್ಗಿಸುವುದು ಮುಂತಾದವುಗಳು ಬರಿಯ ದೈಹಿಕ ಚಮತ್ಕಾರಗಳಾಗಿ ಉಳಿಯುವ ಸಾಧ್ಯತೆ ಇರುತ್ತದೆ.

ಮೂಲಭೂತವಾದ ಒಳ್ಳೆಯತನ, ಮನೋಶುದ್ಧಿ, ಎಲ್ಲರೊಂದಿಗಿನ ಸಹಜ ಪ್ರೀತಿ, ಅಂತಃಕರಣ ಮತ್ತು ನಿರಾಡಂಬರತೆ  ಇಲ್ಲದವರು ಮಾಡುವ ಯೋಗ, ಅಂಗಚೇಷ್ಟೆ ಮಾತ್ರ. ಜಿಮ್‌ ಮಾಡಿ ಸಿಕ್ಸ್‌ಪ್ಯಾಕು ಗಳಿಸಿಕೊಳ್ಳುವ ಯುವಕನಿಗೂ, ಅಧ್ಯಾತ್ಮದ ಹುಸಿಭಾರ ಹೊತ್ತ ಯೋಗಪಟುವಿಗೂ ಯಾವ ವ್ಯತ್ಯಾಸವೂ ಇಲ್ಲ. ಅವರು ಇನ್‌ಸ್ಟ್ರಕ್ಟರ್ ಎಂದರೆ, ಇವರು ಯೋಗಗುರು ಎಂದು ಕರೆದು ಬೀಗುತ್ತಾರೆ, ಅಷ್ಟೆ. ಪರಿಣಾಮಗಳು ಒಂದೇ. ಆಡುವ ಆಟಗಳು ಬೇರೆ ಬೇರೆ.

ಮೋದಿಯೂ ದಿನಾ ಯೋಗ ಮಾಡುತ್ತಾರಂತೆ; ಮಾಡಲಿ. ಪ್ರಧಾನಿ ಆಗಬಹುದಂತೆ; ಆಗಲಿ. ಜನರೂ change ಕೇಳುತ್ತಿದ್ದಾರೆ! ಆದರೆ ದಿನಾ ಯೋಗ ಮಾಡುವ ಈ ಮನುಷ್ಯನ ಒಂದೇ ಒಂದು ನಡೆ-ನುಡಿಯಲ್ಲಿ ಯೋಗಿಯ ಚಿಕ್ಕದೊಂದು ಚಹರೆಯೂ ಇಲ್ಲ. ನುಡಿಯಲ್ಲಿ ಪ್ರೌಢಿಮೆ ಇಲ್ಲ. ಆಳವಾದ ಚಿಂತನೆಗಳಿಲ್ಲ. ದಾರ್ಶನಿಕತೆ ಬಹು ದೂರ.

ತತ್‌ಕ್ಷಣದ ಚಮಕ್ಕುಗಳು, ಕಿಚಾಯಿಸುವ ಪ್ರಾಸಬದ್ಧ ಮಾತುಗಳು, ಯುದ್ಧಾಕಾಂಕ್ಷಿ ಕಣ್ಣುಗಳು, ಮುಖದಲ್ಲಿ ಕಾಠಿಣ್ಯ, ಹಿರಿಯರನ್ನು ಮಣಿಸುವ ಅಹಂ, ಈಗಲೂ ರೈಲಿನಲ್ಲಿ ಚಾ ಮಾರುವವನಂತೆ ದನಿ ಎತ್ತರಿಸಿಯೇ ಮಾತನಾಡುವ ಯಜಮಾನಿಕೆ... ಇವುಗಳೆಲ್ಲ ಯೋಗಕ್ಕೂ- ಮೋದಿಗೂ, ಯೋಗಕ್ಕೂ-ರಾಮ್‌ದೇವರಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿ ಹೇಳಬಹುದಾದ ಸೂಕ್ಷ್ಮಗಳು. ನಿಜವಾದ ಗುರು ಮಾತ್ರ ನಿಜವಾದ ಯೋಗಿಯಾಗಿರುತ್ತಾನೆ.

ಆದಷ್ಟು ಮೌನಿಯಾಗಿರುತ್ತಾನೆ. ಬೆಲೆಯುಳ್ಳ ಮಾತನಾಡುತ್ತಾನೆ. ಸತ್ಯಕ್ಕೆ ಹತ್ತಿರವಾಗಿರುತ್ತಾನೆ. ಎಲ್ಲಕ್ಕಿಂತ ಮುಖ್ಯವಾಗಿ ಮನುಷ್ಯರನ್ನು ಮನುಷ್ಯರಂತೆ ನೋಡುತ್ತಾನೆ. ಉಳಿದವರು ಯೋಗಾಸನ ಎಂಬ ದೈಹಿಕ ವ್ಯಾಯಾಮ ಕಲಿತ ಪಟುಗಳು ಮಾತ್ರವಾಗಿರುತ್ತಾರೆ.

ಈಗ ನಮಗಿರುವುದು ನಾಯಕನ ಕೊರತೆ ಮಾತ್ರವಲ್ಲ ; ಗುರುವಿನ ಕೊರತೆ ಕೂಡ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT