ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮನಿರಪೇಕ್ಷತೆಗೆ ಹೊಸ ವ್ಯಾಖ್ಯಾನ

Last Updated 20 ಮೇ 2017, 20:42 IST
ಅಕ್ಷರ ಗಾತ್ರ

ಮುಸ್ಲಿಂ ಮಹಿಳೆಯರಿಗೆ ಅನ್ವಯಿಸುವ ತ್ರಿವಳಿ ತಲಾಖ್‌ ವಿವಾದಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ದೇಶದಲ್ಲಿ ನಡೆದಿರುವ ಬೌದ್ಧಿಕ ಮತ್ತು ತತ್ವಜ್ಞಾನ ಧ್ರುವೀಕರಣವು (ನಾನು ಇಲ್ಲಿ ಉದ್ದೇಶಪೂರ್ವಕವಾಗಿಯೇ ರಾಜಕೀಯವನ್ನು ಹೊರಗೆ ಇಟ್ಟಿರುವೆ) ತುಂಬ ಸಂಕೀರ್ಣ ವಿಷಯವಾಗಿದೆ.

ಟೆಲಿವಿಷನ್‌ಗಳಲ್ಲಿ ನಡೆಯುತ್ತಿರುವ ಚರ್ಚೆ, ವ್ಯಕ್ತವಾಗುತ್ತಿರುವ ಸಲಹೆಗಳು, ಸುಪ್ರೀಂಕೋರ್ಟ್‌ನಲ್ಲಿ ನಡೆದ ವಿಚಾರಣೆಗಿಂತ ಇದು ಹೆಚ್ಚು ಜಟಿಲವಾಗಿದೆ. ದೇಶದ ಪ್ರಮುಖ ವಾಹಿನಿಯಲ್ಲಿ ಇರುವ ರಾಜಕೀಯ ಪಕ್ಷಗಳೆಲ್ಲ ವಿವಾದದಿಂದ ದೂರ ಸರಿದಿರುವುದು ಇದೊಂದು ಅತ್ಯಂತ ಕಠಿಣ ಸ್ವರೂಪದ ಸಂಕೀರ್ಣ ವಿಷಯವಾಗಿರುವುದಕ್ಕೆ ನಿದರ್ಶನವಾಗಿದೆ.

ಬಹುತೇಕ ರಾಜಕೀಯ ಪಕ್ಷಗಳು ಒಂದೆಡೆ ಇದ್ದರೆ, ಬಿಜೆಪಿಯಂತಹ ಕೆಲ ಪಕ್ಷಗಳು, ಏಳು ದಶಕಗಳ ಓಲೈಕೆ ರಾಜಕಾರಣಕ್ಕೆ ಕೊನೆ ಹಾಡುವ ಸಾಮಾಜಿಕ ಸುಧಾರಣೆಯ ಈ ಪ್ರಕ್ರಿಯೆಯಲ್ಲಿ ತುಂಬ ಉತ್ಸಾಹ ತೋರಿಸುತ್ತಿವೆ. ಮುಸ್ಲಿಂ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡುವ ಅನಿವಾರ್ಯತೆ ಕುರಿತು ಕೆಲವು ಪಕ್ಷಗಳು ಆಷಾಡಭೂತಿತನ ಪ್ರದರ್ಶಿಸುತ್ತಿವೆ. ಪ್ರಮುಖ ರಾಜಕೀಯ ಪಕ್ಷಗಳ ಪೈಕಿ ಯಾವುದೂ ಕೂಡ ಅಸಮ್ಮತಿ ತೋರುವ ಧೈರ್ಯ ಪ್ರದರ್ಶಿಸುತ್ತಿಲ್ಲ.  ಯಾರೊಬ್ಬರಿಗೂ ಅದು ಬೇಕಾಗಿಯೂ ಇಲ್ಲ.

ತ್ರಿವಳಿ ತಲಾಖ್‌ ವಿಷಯ ಈಗ ಪಾಕಿಸ್ತಾನ, ಕಾಶ್ಮೀರ ಅಥವಾ ಭ್ರಷ್ಟಾಚಾರದಂತಹ ವಿಷಯವಾಗಿದೆ. ಅದೊಂದು ಅತಿಶಯೋಕ್ತಿಯ ಅಥವಾ ತುಂಬ ಸರಳೀಕರಣಗೊಳಿಸಿದ ಹೇಳಿಕೆ ಇಲ್ಲವೇ ಎರಡೂ ಆಗಿರಬಹುದು. ಅದೊದು ಕೃತಕವಾಗಿ ಸೃಷ್ಟಿಸಿದ, ಕೈಚಳಕ ತೋರಿದ ಅಥವಾ ತಪ್ಪಿಸಿಕೊಳ್ಳಲಾಗದ  ವಿವಾದವಾಗಿದೆ ಎಂದು ಯಾರಾದರೂ ಕರೆಯಬಹುದು. ಆದರೆ ಅದು ಇಂದಿನ ರಾಜಕೀಯದ ವಾಸ್ತವ ಸಂಗತಿಯಾಗಿದೆ. ಕಪಿಲ್‌ ಸಿಬಲ್‌ ಅವರು ಮುಸ್ಲಿಂ ಸಂಪ್ರದಾಯವಾದಿ ಸಂಘಟನೆ ಪರ ವಾದ ಮಂಡಿಸಿದಾಗೊಮ್ಮೆ ಕಾಂಗ್ರೆಸ್‌ ಮುಖಂಡರು ಅದಕ್ಕೆ ಪ್ರತಿಕ್ರಿಯಿಸಲು ಹಿಂಜರಿಕೆ ತೋರಿದ್ದನ್ನು ನೀವು ಗಮನಿಸಿರಬಹುದು.

ಎಡಪಕ್ಷಗಳ ಮುಖಂಡರೂ ಸೇರಿದಂತೆ ಪ್ರಗತಿಪರರೂ ಈ ವಿವಾದದಿಂದ ದೂರ ಇರಲು ಬಯಸಿದ್ದಾರೆ. ಬದಲಾವಣೆಯನ್ನು ಯಾವತ್ತೂ ವಿರೋಧಿಸದ  ಸೀಮಿತ ಸಂಖ್ಯೆಯಲ್ಲಿ ಇರುವ ಕಟ್ಟಾ ಉದಾರವಾದಿಗಳಿಂದ ಮಾತ್ರ ಇಂತಹ ಪ್ರಯತ್ನವನ್ನು ವಿರೋಧಿಸಲು ಇಲ್ಲವೆ ಪ್ರಶ್ನಿಸಲು ಸಾಧ್ಯ.

ತಲಾಖ್‌ ಆಚರಣೆಯನ್ನು ಮುಂದುವರೆಯಿಸಿಕೊಂಡು ಹೋಗುವುದನ್ನು ಸಮರ್ಥಿಸಿಕೊಳ್ಳಲು ಅವರು ಕೂಡ ಧೈರ್ಯ ತೋರಲಾರರು. ಉದ್ದೇಶಪೂರ್ವಕವಾದ, ದುರುದ್ದೇಶದಿಂದಲೇ ಬಿಜೆಪಿಯು ಇದಕ್ಕೆ ಆದ್ಯತೆ ನೀಡುತ್ತಿದೆ ಎಂದು ಅವರು ಬಿಜೆಪಿಯನ್ನು ಮೂದಲಿಸುತ್ತಿದ್ದಾರೆ.

ಈ ಬಗ್ಗೆ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್‌) ತಲೆಕೆಡಿಸಿಕೊಂಡಿಲ್ಲ. ಅವರಿಗೆ ಅದರ ಅಗತ್ಯವೂ ಇಲ್ಲ. ಸರಿಸುಮಾರು 17 ಕೋಟಿಗಳಷ್ಟಿರುವ ಅಲ್ಪಸಂಖ್ಯಾತರು ತಮ್ಮ ವಿರುದ್ಧ ಮತಚಲಾಯಿಸುತ್ತ ಬಂದಿದ್ದರೂ ಸಂಘ ಪರಿವಾರವು ತನ್ನ ಅತ್ಯಂತ ಪ್ರಮುಖವಾದ ಸೈದ್ಧಾಂತಿಕ ಗೆಲುವಿನ ಹೊಸ್ತಿಲಲ್ಲಿ ಇದೆ. ರಾಜಕೀಯವಾಗಿ ಸರಿಯಾದ, ಸಾಮಾಜಿಕ ಸುಧಾರಣೆಯ ಈ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶಿಸಲು ರಾಜಕೀಯ ಪಕ್ಷಗಳಲ್ಲಿ ಹಿಂಜರಿಕೆ ಕಂಡು ಬರುತ್ತಿದೆ.

ಸುಪ್ರೀಂಕೋರ್ಟ್‌ ಯಾವುದೇ ತೀರ್ಪು ನೀಡಲಿ, ತ್ರಿವಳಿ ತಲಾಖ್‌ ವಿವಾದವು ಹಿಂದುತ್ವವಾದಿಗಳ ಪಾಲಿಗೆ ಗೆಲುವಿನ ವಿಷಯವಾಗಿರಲಿದೆ. ಇದೊಂದೇ ಕಾರಣಕ್ಕೆ ಆರೆಸ್ಸೆಸ್‌, ನರೇಂದ್ರ ಮೋದಿ ಮತ್ತು ಅಮಿತ್‌ ಷಾ ಅವರನ್ನು ಗರ್ಭಗುಡಿಯಲ್ಲಿ ಇಟ್ಟು  ಪೂಜಿಸಲಿದೆ.  ಸಂಘ ಪರಿವಾರದವರು ಅಟಲ್‌ ಬಿಹಾರಿ ವಾಜಪೇಯಿ  ಪ್ರಧಾನಿ ಹುದ್ದೆಯಲ್ಲಿದ್ದಾಗ ಅವರನ್ನು ಅನುಮಾನದಿಂದಲೇ ನೋಡುತ್ತ ಬಂದಿದ್ದರು. 

ವಾಜಪೇಯಿ ಅವರು ನೆಹರೂ ಅವರ ಚಿಂತನೆಯ ಜಾಡಿನಲ್ಲಿಯೇ ಸಾಗಿದ್ದರು. ಪ್ರತಿಯೊಬ್ಬರನ್ನೂ ಜತೆಯಾಗಿಯೇ ಕರೆದುಕೊಂಡು ಹೋಗುವುದು,  ಯಾವುದೇ ಸಾಮಾಜಿಕ ಸಮೂಹದ ಹಿತಾಸಕ್ತಿಗೆ ಯಾವುದೇ ಬಗೆಯಲ್ಲಿ ಧಕ್ಕೆ ಒದಗಿಸದಿರುವುದು, ಬದಲಾವಣೆಯು ನಿಧಾನವಾಗಿ ಒಳಗಿನಿಂದಲೇ ಬರಲಿ, ಬಾಹ್ಯ ಒತ್ತಡ ಬೇಡವೇ ಬೇಡ ಎನ್ನುವ ಧೋರಣೆಯಲ್ಲಿ ವಾಜಪೇಯಿ ಅವರೂ ನಂಬಿಕೆ ಇಟ್ಟಿದ್ದರು.

ಇದನ್ನು ಇನ್ನಷ್ಟು ವಿವರಿಸಿ ಹೇಳುವುದಾದರೆ, ವಾಜಪೇಯಿ ಅವರು ಪಕ್ಷದ ಸಿದ್ಧಾಂತ ಮತ್ತು ವೋಟ್‌ ರಾಜಕೀಯವನ್ನು ಆಡಳಿತದಿಂದ ದೂರ ಇಟ್ಟಿದ್ದರು.  ಇದೇ ಕಾರಣಕ್ಕೆ ಆರೆಸ್ಸೆಸ್‌ ಮತ್ತು ಹಿಂದುತ್ವವಾದಿಗಳು ಅವರ ಸರ್ಕಾರವನ್ನು ಬಿಜೆಪಿ ಸರ್ಕಾರ ಎಂದು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡಿರಲಿಲ್ಲ. ಒಂದರ್ಥದಲ್ಲಿ ಅವರ ನಿಲುವೂ ಸರಿಯಾಗಿತ್ತು. ಅವರ ಪ್ರಕಾರ, ಸದ್ಯಕ್ಕೆ ಮೋದಿ ಮತ್ತು ಷಾ ಜೋಡಿಯು ನಿಜವಾದ ಬಿಜೆಪಿ ಸರ್ಕಾರವನ್ನು ಮುನ್ನಡೆಸುತ್ತಿದೆ.

ಮುಸ್ಲಿಂ ವೈಯಕ್ತಿಕ ಕಾನೂನು, ಅದರಲ್ಲೂ ವಿಶೇಷವಾಗಿ ಮದುವೆ ಮತ್ತು ವಿಚ್ಛೇದನ ವಿಷಯದಲ್ಲಿನ ಹಿಂದುತ್ವವಾದಿಗಳ ಗೀಳು, 60 ವರ್ಷಗಳ ಹಿಂದೆ ನಡೆದ ಘಟನಾವಳಿಗಳಿಂದ ಪ್ರಭಾವಿತವಾಗಿದೆ. ಅಂದು ಜನಪ್ರಿಯತೆಯ ಉತ್ತುಂಗದಲ್ಲಿದ್ದ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ದೂರಗಾಮಿ ಪ್ರಭಾವ ಬೀರಲಿದ್ದ ಹಿಂದೂ ಸಂಹಿತೆ ಜಾರಿಗೆ ತರಲು ಮುಂದಾಗಿದ್ದರು.

ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ರಾಜಕೀಯ ಬಣ್ಣ ಪಡೆದ ಸಾಮಾಜಿಕ ಸುಧಾರಣಾ ಕ್ರಮ ಅದಾಗಿತ್ತು. ಕೌಟುಂಬಿಕ ಕಾನೂನುಗಳಲ್ಲಿ  ಮಹಿಳೆಯರಿಗೆ ಸಂವಿಧಾನಾತ್ಮಕ ಸಮಾನತೆ ನೀಡುವ ಉದ್ದೇಶವನ್ನು ಈ ಕಾಯ್ದೆ ಒಳಗೊಂಡಿತ್ತು. ಇದರ ಪರಿಣಾಮವಾಗಿ ವಿಚ್ಛೇದನ, ಉತ್ತರಾಧಿಕಾರತ್ವ, ದತ್ತು, ವಿಧವಾ ವಿವಾಹ, ಏಕಪತ್ನಿತ್ವ ವಿಷಯಗಳಲ್ಲಿ ಉತ್ತಮ ಕಾಯ್ದೆಗಳು ರೂಪುಗೊಳ್ಳಲು ಇದು ಕಾರಣವಾಗಿತ್ತು. ಅದನ್ನು ಬಹುತೇಕ ಹಿಂದೂಗಳೂ ಒಪ್ಪಿಕೊಂಡಿದ್ದರು. 60ರ ದಶಕದ ಮಧ್ಯಭಾಗದಲ್ಲಿ ಅದೊಂದು ರಾಜಕೀಯ ವಿಷಯವಾಗಿ ತನ್ನ ಮಹತ್ವ ಕಳೆದುಕೊಂಡಿತ್ತು.

ಈ ವಿಷಯದ ಕುರಿತು ಆ ದಿನಗಳಲ್ಲಿ ನಡೆದಿದ್ದ ಚರ್ಚೆಗಳನ್ನು ಓದಿದರೆ, ಕಾಂಗ್ರೆಸ್‌ನಲ್ಲಿನ ಸಂಪ್ರದಾಯವಾದಿಗಳೇ ಅದನ್ನು ವಿರೋಧಿಸಿದ್ದರು. ನೆಹರೂ ಅವರ ಕಟ್ಟಾ ಜಾತ್ಯತೀತವಾದಕ್ಕೆ ಆರಂಭದಲ್ಲಿ ಕೆಲ ಮಟ್ಟಿಗೆ ಪ್ರತಿರೋಧವೂ ಕಂಡುಬಂದಿತ್ತು. ತಮ್ಮ ವಾದದಲ್ಲಿ ಸೋತವರು ಹೆದರಿಕೆ ಮತ್ತು ಕಹಿ ಭಾವನೆಯಿಂದಲೇ ಹಿಂದೆ ಸರಿದಿದ್ದರು. ಕಾಲ ಗತಿಸಿದಂತೆ, ಹಳೆಯ ಸಂಪ್ರದಾಯಗಳನ್ನು ಮರು ಸ್ಥಾಪಿಸಬೇಕು ಎನ್ನುವವರ ದನಿ ಕ್ಷೀಣಿಸುತ್ತಲೇ ಹೋಯಿತು.

ಆದರೆ, ಒಂದು ವಾದ ಮಾತ್ರ ತಣ್ಣಗಾಗದೇ ಹಾಗೆಯೇ ಉಳಿದುಕೊಂಡಿದೆ.  ಒಂದು ವೇಳೆ ಹಿಂದೂ ಸಂಹಿತೆಯು ಅಮೃತವಾಗಿದ್ದರೆ, ನಮ್ಮ ಮುಸ್ಲಿಂ ಸೋದರರು ಅದನ್ನೇಕೆ ಸ್ವೀಕರಿಸಲಿಲ್ಲ. ಅದೊಂದು ವಿಷವಾಗಿದ್ದರೆ, ಸೇವಿಸಲು ಕೇವಲ ಹಿಂದೂಗಳಿಗೇಕೆ ಒತ್ತಾಯಿಸಲಾಗುತ್ತಿದೆ ಎಂದು ಸಾರ್ವಜನಿಕ ಸಭೆಗಳಲ್ಲಿ ಪ್ರಶ್ನಿಸಲಾಗುತ್ತಿತ್ತು. ದೇಶದಲ್ಲಿ ಮೊದಲ ಚುನಾವಣೆ ನಡೆದಾಗ, ನಾನು ಆರು ವರ್ಷದ ಬಾಲಕನಾಗಿದ್ದೆ.

ನಮ್ಮ ಪುಟ್ಟ ಊರಿನಲ್ಲಿ ನಡೆದಿದ್ದ ಜನಸಂಘ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ನಾನು ಶಾಲೆಗೆ ಚಕ್ಕರ್‌ ಹಾಕಿ  ಭಾಗವಹಿಸಿದ್ದೆ. ಭಾಷಣಕಾರರಿಂದ ನಾನು ಈ ಅರ್ಥದ ಮಾತುಗಳನ್ನು ಕೇಳಿದ್ದೆ. ಕಾಲ ಗತಿಸಿದಂತೆ, ಇಂತಹ ಕಹಿ ಭಾವನೆ ಹುಣ್ಣಾಗಿ ವ್ಯಾಪಕವಾಗಿ ಭಯದ ಭಾವನೆ ಮೂಡಿಸಿದೆ.

ಒಬ್ಬರಿಗಿಂತ ಹೆಚ್ಚು ಸ್ತ್ರೀಯರನ್ನು ಮದುವೆಯಾಗಲು ಮುಸ್ಲಿಮರಿಗೆ ಅವಕಾಶ ಕಲ್ಪಿಸಲಾಗಿದೆ. ಅವರು ತಮಗಿಷ್ಟ ಬಂದಂತೆ ಸಂತಾನ ಅಭಿವೃದ್ಧಿ ಮಾಡಲು ಮುಕ್ತ ಅವಕಾಶ ನೀಡಲಾಗಿದೆ. ಕುಟುಂಬ ನಿಯಂತ್ರಣ ಪಾಲಿಸುವಂತೆ ನಮಗೆ ಬೋಧಿಸಲಾಗುತ್ತಿದೆ ಎನ್ನುವ ಭಾವನೆ ಹಿಂದೂಗಳಲ್ಲಿ ಮನೆ ಮಾಡಿದೆ.

‘ನಾವು ಐದು ಜನ, ನಮಗೆ ಇಪ್ಪತ್ತೈದು ಮಕ್ಕಳು’ (ಗಂಡ, ನಾಲ್ವರು ಪತ್ನಿಯರು ಮತ್ತು ಅವರಿಗೆ 25 ಮಕ್ಕಳು– ಹಮ್‌ ಪಾಂಚ್‌, ಹಮಾರೆ ಪಚೀಸ್‌) –  ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ 2002ರ ಸೆಪ್ಟೆಂಬರ್‌ನಲ್ಲಿ ಆಡಿದ ಮಾತು ಇದು.

ಜಿಹಾದಿ ಭಯೋತ್ಪಾದಕರು ಮತ್ತು ಶಂಕಿತ ಸಂಪ್ರದಾಯವಾದಿ ಮುಸ್ಲಿಮರ ಸಂಖ್ಯೆ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿದ್ದಂತೆ ಬಹುಸಂಖ್ಯಾತ ಹಿಂದೂಗಳಲ್ಲಿ ಹೊಂದಾಣಿಕೆ ಭಾವನೆ ಹೆಚ್ಚತೊಡಗಿತು. ಇನ್ನೊಂದೆಡೆ ಪಾಕಿಸ್ತಾನ ಜತೆಗಿನ ಬಾಂಧವ್ಯ  ಹದಗೆಡುತ್ತಿದೆ. ವಾಜಪೇಯಿ – ಅಡ್ವಾಣಿ ಅವರ ಉತ್ತರಾಧಿಕಾರಿಗಳಾಗಿರುವ ಮೋದಿ ಮತ್ತು ಷಾ ಅವರ ಬಿಜೆಪಿಯು ಈ ಪರಿಸ್ಥಿತಿಯನ್ನು ತನ್ನ ರಾಜಕೀಯ ಅನುಕೂಲಕ್ಕೆ ಬಳಸಿಕೊಳ್ಳಲು ಹವಣಿಸುತ್ತಿದೆ.

ಈ ಕಾರ್ಯತಂತ್ರಕ್ಕೆ ‘ಸ್ಮಶಾನ’ ಮತ್ತು ಖಬರಸ್ತಾನ’ ರೂಪಾಲಂಕಾರಗಳು ತುಂಬ ಸೂಕ್ತವಾಗಿ ಅನ್ವಯವಾಗಲಿವೆ.  ಇದು ಅವರ ರಾಜಕೀಯ ತಂತ್ರಗಾರಿಕೆಗೆ ನಿದರ್ಶನವಾಗಿದೆ.  ಅವರು ಈಗ ಇಸ್ಲಾಂ ಭಯವನ್ನೇ ಬಂಡವಾಳವನ್ನಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ. ಈ ಮೂಲಕ, ಮುಸ್ಲಿಂ ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದ ಉದಾರವಾದ ಸಾಮಾಜಿಕ ಸುಧಾರಣಾ ವಿಷಯದಲ್ಲಿ ಒಮ್ಮತ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.

ನೆಹರೂ ಅವರ ವಿಚಾರಸರಣಿಗೆ ಮುಖಭಂಗ ಮಾಡುವ ಯತ್ನವೂ ಇದಾಗಿದೆ. ಜಾತ್ಯತೀತವಾದಕ್ಕೆ ಯಶಸ್ವಿಯಾಗಿ ಹೊಸ ವ್ಯಾಖ್ಯೆ ಬರೆಯುವುದಕ್ಕೆ ನೆಹರೂ ಸ್ವತಃ ಬೀಜ ಬಿತ್ತಿದ್ದರೆ?

ಎನ್ನುವ ಪ್ರಶ್ನೆಯೂ ಇಲ್ಲಿ ಎದುರಾಗುತ್ತದೆ. ಅವರು ತಮ್ಮ ರಾಜಕೀಯ ಅಧಿಕಾರ ಬಳಸಿಕೊಂಡು ಕೇವಲ ಬಹುಸಂಖ್ಯಾತರಿಗೆ ಅನ್ವಯವಾಗುವ ಸಾಮಾಜಿಕ ಮತ್ತು ಕೌಟುಂಬಿಕ ಕಾನೂನುಗಳ ಸುಧಾರಣೆಗೆ ಮುಂದಾಗಿದ್ದರೆ?

ಅಲ್ಪಸಂಖ್ಯಾತರನ್ನು ಅವರದ್ದೇ ಆದ ಧರ್ಮ ಗುರುಗಳ ನಿಯಂತ್ರಣದಲ್ಲಿ ಇರಲು ಅವಕಾಶ ಮಾಡಿಕೊಟ್ಟರೆ? ಅಥವಾ ಅವರ ಒಳಗಿನಿಂದಲೇ ಸುಧಾರಣೆಯ ಪ್ರಯತ್ನ ನಡೆಯಲಿ ಎಂದು ಸುಮ್ಮನಾಗಿದ್ದರೆ ಎನ್ನುವ ಪ್ರಶ್ನೆಗಳೂ ಇಲ್ಲಿ ಏಳುತ್ತವೆ.

ಇಸ್ಲಾಂ, ಕ್ರೈಸ್ತ , ಸಿಖ್‌  ಮತ್ತು ಸಣ್ಣ ಪ್ರಮಾಣದ ಧಾರ್ಮಿಕ ಪಂಥಗಳಾದ ದಾವೂದಿ ಬೋರ್ಹಾ, ಅವರವರ ಪುರೋಹಿತ ವರ್ಗದ ನಿಯಂತ್ರಣದಲ್ಲಿ ಇರುವಂತೆ ನೋಡಿಕೊಳ್ಳಲಾಗಿತ್ತು ಎನ್ನುವ ಟೀಕೆಯೂ ಇದೆ.

ಧರ್ಮನಿರಪೇಕ್ಷ ಸಂಸತ್ತು, ಹಿಂದೂಗಳಲ್ಲಿನ ಬಹುಪತ್ನಿತ್ವ ಪದ್ಧತಿ ನಿಷೇಧಿಸಿ ಮಸೂದೆ ಅಂಗೀಕರಿಸುವುದಾದರೆ, ಮುಸ್ಲಿಮರಲ್ಲಿ ಬಳಕೆಯಲ್ಲಿ ಇರುವ ಸುನ್ನತಿಯನ್ನೇಕೆ ನಿರ್ಬಂಧಿಸಲಿಲ್ಲ. ಭಾರತದ ಅಪರಾಧ ದಂಡ ಸಂಹಿತೆಯ (ಐಪಿಸಿ) ಕಲಂ 320ರ ಅನ್ವಯ ಗಂಭೀರ ಸ್ವರೂಪದ ಗಾಯಕ್ಕೆ ಕಾರಣವಾದ ಅಪರಾಧ ಅಥವಾ ಕೊಲ್ಲುವ ಯತ್ನ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲು ಅವಕಾಶ ನೀಡುವ ಕಾಯ್ದೆಯನ್ನೇಕೆ ರೂಪಿಸಲು ಮುಂದಾಗಿಲ್ಲ ಎನ್ನುವ ಪ್ರಶ್ನೆಯೂ ಇಲ್ಲಿ ಉದ್ಭವಿಸುತ್ತದೆ.

ನೆಹರೂ ಅವರು ಇಂತಹ ಕ್ರಮಗಳನ್ನು ಕೈಗೊಳ್ಳಲು ಮುಂದಾಗಲಿಲ್ಲ ಏಕೆ ಎನ್ನುವುದರ ಬಗ್ಗೆ ಸಾಕಷ್ಟು ವಿಶ್ಲೇಷಣೆಗಳೂ ನಡೆದಿವೆ.  ಹಿಂದೂಗಳಲ್ಲಿ ಒಡಕು ತರುವ ಮತ್ತು ಮುಸ್ಲಿಮರ ಓಲೈಕೆಯ ಕ್ರಮಗಳ ಮೂಲಕ ಅವರು ‘ವೋಟ್‌ ಬ್ಯಾಂಕ್‌’ ರಾಜಕೀಯಕ್ಕೆ ತಳಹದಿ ಹಾಕಿದರು ಎಂದು ಅವರ ಟೀಕಾಕಾರರು ಹೇಳುತ್ತಾರೆ. ದೇಶ ವಿಭಜನೆ ನಂತರದ ಆದರ್ಶವಾದ ಮತ್ತು ತಪ್ಪಿತಸ್ಥ ಮನೋಭಾವದ ಫಲವಾಗಿ ಅವರು ಈ ಧೋರಣೆ ಅನುಸರಿಸಿದರು ಎಂದು ಅವರ ಬೆಂಬಲಿಗರು ಪ್ರತಿಪಾದಿಸುತ್ತಾರೆ.

ಮುಸ್ಲಿಮರಲ್ಲಿ ವೈಯಕ್ತಿಕ ಕಾನೂನು ಜಾರಿಗೆ ತರಲು ಬಲವಂತ ಮಾಡಿದ್ದರೆ  ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗುವುದನ್ನು ಮುಂದುವರೆಸುತ್ತಿದ್ದರು. ಅವರಲ್ಲಿ ಮರು ಭರವಸೆ ಮೂಡಿಸುವ ಪ್ರಯತ್ನದ ಭಾಗವಾಗಿಯೇ ಅವರಿಗೆ ಕೆಲ ಸ್ವಾತಂತ್ರ್ಯ ನೀಡಲಾಗಿತ್ತು ಎಂದು ಅವರು ಸಕಾರಣ ನೀಡುತ್ತಾರೆ.

ನೆಹರೂ ಅವರ  ಮೇಧಾವಿತನ, ನೈತಿಕತೆ, ಜಾತ್ಯತೀತ ಸಿದ್ಧಾಂತ ಕುರಿತ ಬದ್ಧತೆ ಹೊಂದಿರದ ಅವರ ಉತ್ತರಾಧಿಕಾರಿಗಳು ಅಲ್ಪಸಂಖ್ಯಾತರ ಓಲೈಕೆ ನೀತಿಯನ್ನು ಇನ್ನಷ್ಟು ಬಲಪಡಿಸಿದರು. ಇಂದಿರಾ ಗಾಂಧಿ ಅವರ ಆಸ್ಥಾನದಲ್ಲಿ ಬಾಬಾ, ಸಾಧು ಮತ್ತು ತಾಂತ್ರಿಕ ಯೋಗಿಗಳ ಪ್ರಭಾವ ಹೆಚ್ಚಿತ್ತು.

ಶಹಬಾನೊ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ ತೀರ್ಪನ್ನು ರಾಜೀವ್‌ ಗಾಂಧಿ ಅವರು ತಿರುವುಮುರುವುಗೊಳಿಸಿದರು. ಇದರಿಂದಾಗಲಿದ್ದ ಅನಾಹುತ ತಪ್ಪಿಸಲು ಅಯೋಧ್ಯೆಯಲ್ಲಿ ಪೂಜೆ  ನಡೆಸಲು ಅವಸರದಲ್ಲಿ ಅನುಮತಿ ನೀಡಿದರು. 1989ರಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡುವಾಗ ರಾಮ ರಾಜ್ಯ ನಿರ್ಮಾಣದ ಭರವಸೆಯನ್ನೂ ನೀಡಿದ್ದರು.

ಯುಪಿಎ ಸರ್ಕಾರ ಇದನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಯಿತು. ಭಯೋತ್ಪಾದನೆ ನಿರ್ಬಂಧ ಕಾಯ್ದೆಯು (ಪೋಟಾ), ಮುಸ್ಲಿಮರ ವಿರೋಧಿ ಎನ್ನುವ ಕಾರಣ ನೀಡಿ ರದ್ದುಗೊಳಿಸಿತು. ಬಾಟ್ಲಾ ಹೌಸ್‌ ಎನ್‌ಕೌಂಟರ್‌ ಸೇರಿದಂತೆ ಸರ್ಕಾರವೇ ನಡೆಸಿದ್ದ ಭಯೋತ್ಪಾದನೆ ವಿರೋಧಿ ಯಶಸ್ವಿ ಕಾರ್ಯಾಚರಣೆಗಳ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿತು.  ಮುಂಬೈನಲ್ಲಿ ನಡೆದ 26/11ರ ದಾಳಿಗೆ ಆರೆಸ್ಸೆಸ್ ಸಂಚು ಕಾರಣ ಎನ್ನುವ ಮೂರ್ಖತನದ ಹೇಳಿಕೆ ಬೆಂಬಲಿಸಿದ ಪಕ್ಷದ ಮುಖಂಡರನ್ನು ನಿಯಂತ್ರಿಸಲು ವಿಫಲವಾಯಿತು.

ನೆಹರೂ ಅವರ ನಾಸ್ತಿಕತೆ ಮತ್ತು ಎಲ್ಲ ಧಾರ್ಮಿಕ ಆಚರಣೆ ಹಾಗೂ ಧರ್ಮಾಧಾರಿತ ರಾಜಕೀಯ ವಿರೋಧಿಸುವ ಧೋರಣೆಯಿಂದಾಗಿ   ಅವರು ಪಾಲಿಸಿಕೊಂಡು ಬಂದಿದ್ದ ಜಾತ್ಯತೀತ ಧೋರಣೆಗೆ ಅದರದ್ದೇ ಆದ ಹೊಳಪಿತ್ತು. ಅವರ ಉತ್ತರಾಧಿಕಾರಿಗಳಲ್ಲಿ ಇಂತಹ ಗುಣವಿಶೇಷಗಳೇ ಇದ್ದಿರಲಿಲ್ಲ.
ಕಾಂಗ್ರೆಸ್‌ ಪಕ್ಷವು ಅದರಲ್ಲೂ ವಿಶೇಷವಾಗಿ 1985ರಿಂದೀಚೆಗೆ ರಾಜಕಾರಣದಲ್ಲಿ ಧರ್ಮನಿರಪೇಕ್ಷತೆಗೆ ಹೊಸ ರೂಪ ಕೊಟ್ಟಿದೆ.

2015ರ ನವೆಂಬರ್‌ನಲ್ಲಿ ನಾನು ಬರೆದ ಅಂಕಣದಲ್ಲಿ, ಜಿನ್ನಾ ನಂತರ ಭಾರತದ ಮುಸ್ಲಿಮರು, ಮುಸ್ಲಿಂ ವ್ಯಕ್ತಿಯನ್ನು ತಮ್ಮ ನಾಯಕನೆಂದು ಯಾವತ್ತೂ ನಂಬಿಕೊಂಡು ಬಂದಿಲ್ಲ ಎನ್ನುವುದನ್ನು ಉಲ್ಲೇಖಿಸಿರುವೆ.

ತಮ್ಮೊಂದಿಗೆ ಮಾತನಾಡುವ, ವಿಶ್ವಾಸಕ್ಕೆ ತೆಗೆದುಕೊಳ್ಳುವ, ತಮ್ಮ ಜೀವನ ವಿಧಾನದಲ್ಲಿ ಹಸ್ತಕ್ಷೇಪ ನಡೆಸದ ಜಾತ್ಯತೀತ ಹಿಂದೂ ಮುಖಂಡನಲ್ಲಿಯೇ ಮುಸ್ಲಿಮರು ಉದ್ದಕ್ಕೂ ವಿಶ್ವಾಸ ಇರಿಸುತ್ತ ಬಂದಿದ್ದಾರೆ. ಅಂತಹ ರಾಜಕೀಯ ಭಾವನೆಯನ್ನು ನರೇಂದ್ರ ಮೋದಿ ಮತ್ತು ಅಮಿತ್‌ ಷಾ ಅವರು ಕೊಂದು ಹಾಕಿದ್ದಾರೆ. ಅದನ್ನು ಸಮಾಧಿ ಮಾಡಬೇಕೆ ಅಥವಾ ದಹನ ಮಾಡಬೇಕೆ ಎನ್ನುವ  ಆಯ್ಕೆ ನಿಮಗೆ ಬಿಟ್ಟಿದ್ದು.
(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT