ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮವೀರ ಆಯೋಗದ ಅರ್ಥಪೂರ್ಣ ವರದಿ

Last Updated 13 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಕೆಲವು ಪದವೀಧರ ಪೊಲೀಸರು ಕೂಡ ತಾವೇ ಬಯಸಿ `ಆರ್ಡರ್ಲಿ~ಗಳಾಗುತ್ತಾರೆ. ಹೆಚ್ಚಿನ ಓದಿಗಾಗಿಯೋ, ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುವುದಕ್ಕಾಗಿಯೋ ಅವರಿಗೆ ಅಧ್ಯಯನಕ್ಕೆ ಕಾಲಾವಕಾಶ ಬೇಕಿರುತ್ತದೆ.

ಎಲ್ಲರಂತೆ ಅವರೂ ಠಾಣೆಗಳಲ್ಲಿ ಕೆಲಸ ಮಾಡುವುದಾದರೆ ಓದಲು ಹೆಚ್ಚಿನ ಸಮಯ ಸಿಗುವುದಿಲ್ಲ. ಹಾಗಾಗಿ ಅಂಥವರು ತಾವೇ ಬಯಸಿ `ಆರ್ಡರ್ಲಿ~ಗಳಾಗುತ್ತಾರೆ. ಆಮೇಲೆ ಅಲ್ಲಿ ಹೀನಾಯ ಕೆಲಸಗಳನ್ನು ಮಾಡುವ ಅನಿವಾರ್ಯತೆ ಎದುರಾದಾಗ ಸಂಕಟ ಪಡುತ್ತಾರೆ.

ನನ್ನ ಪ್ರಕಾರ ಜೀತಪದ್ಧತಿ ಇರುವ ಸರ್ಕಾರದ ಏಕೈಕ ಇಲಾಖೆ ಪೊಲೀಸ್. ಮಿಲಿಟರಿಯಲ್ಲಿ `ಆರ್ಡರ್ಲಿ~ ವ್ಯವಸ್ಥೆ ಇದ್ದರೂ ಅದಕ್ಕೂ ಒಂದು ಘನತೆ ಇದೆ. ಅಲ್ಲಿ ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು, ನಾಯಿ ಸಾಕುವುದು ಮೊದಲಾದ ಕೆಲಸಗಳನ್ನು `ಆರ್ಡರ್ಲಿ~ಗಳಿಂದ ಮಾಡಿಸುವುದಿಲ್ಲ.

ಕರ್ನಾಟಕದಲ್ಲಿ `ಆರ್ಡರ್ಲಿ~ ಪದ್ಧತಿ ಬೇಡ ಎಂಬ ಭಾವನೆ ಇದ್ದ ಅಧಿಕಾರಿಗಳು ಬೆರಳೆಣಿಕೆ ಯಷ್ಟು. ದಿನಕರನ್, ಚಂದೂಲಾಲ್, ಹರ್ಲಂಕರ್ ತರಹದ ಕೆಲವರಷ್ಟೇ ಅದನ್ನು ವಿರೋಧಿಸುತ್ತಿದ್ದರು. ಆದರೆ, ಬಹುಪಾಲು ಅಧಿಕಾರಿಗಳಿಗೆ ಅದು ಪ್ರತಿಷ್ಠೆಯ ಸಂಕೇತ ಎಂಬಂತಾಗಿತ್ತು. ಈಗಲೂ ಪರಿಸ್ಥಿತಿ ಭಿನ್ನವಾಗಿಯೇನೂ ಇಲ್ಲ.

ಬ್ರಿಟಿಷರಿಂದ ಎರವಲು ಪಡೆದುಕೊಂಡ ಈ ವ್ಯವಸ್ಥೆಯ ಬಗ್ಗೆ ವ್ಯಾಪಕ ಚರ್ಚೆ ನಡೆಯ ತೊಡಗಿದ್ದು `ತುರ್ತುಪರಿಸ್ಥಿತಿ~ಯ (1975-77) ನಂತರ. ಬಿಹಾರದ ಆಗಿನ ಸಂಸದ ರಮಾನಂದ ತಿವಾರಿ ಎಂಬುವರು `ಸಿಪಾಹಿಯೋಂ ಕಿ ಕಹಾನಿ ಆಂಕ್ರೋಂ ಕಿ ಜುಬಾನಿ~ ಎಂಬ ಹಿಂದಿ ಪುಸ್ತಕವನ್ನು ಬರೆದರು.
 
ಪೊಲೀಸ್ ತರಬೇತಿಯಲ್ಲಿ ಖುದ್ದು ಚಾಂಪಿಯನ್ ಆಗಿದ್ದ ಅವರಿಗೆ `ಆರ್ಡರ್ಲಿ~ಯಾಗಿ ಕೆಲಸ ಮಾಡುವ ಕಷ್ಟಗಳು ಗೊತ್ತಾಗಿದ್ದವು. ಆ ಕಷ್ಟಗಳನ್ನೇ ಅವರು ಪುಸ್ತಕದ ರೂಪದಲ್ಲಿ ಬರೆದರು. ಬರೆದು ಸುಮ್ಮನಾಗಲಿಲ್ಲ. ಖುದ್ದು ಸಂಸದರಾಗಿದ್ದ ಅವರು ಅವಕಾಶ ಸಿಕ್ಕಲ್ಲೆಲ್ಲಾ ಈ ವಿಷಯವಾಗಿ ಹೆಚ್ಚು ಮಾತನಾಡತೊಡಗಿದರು. ಇದರಿಂದ `ಆರ್ಡರ್ಲಿ~ ವ್ಯವಸ್ಥೆ ಕುರಿತ ಚರ್ಚೆ ಕಾವು ಪಡೆಯಿತು.

ಸರ್ಕಾರವು ಪೊಲೀಸ್ ವ್ಯವಸ್ಥೆ ಸುಧಾರಣೆಗೆಂದು ಶಿಫಾರಸುಗಳನ್ನು ಪಡೆಯುವ ಸಲುವಾಗಿ `ಧರ್ಮವೀರ ಆಯೋಗ~ವನ್ನು ರಚಿಸಿತು. ನಿವೃತ್ತ ರಾಜ್ಯಪಾಲರಾದ ಧರ್ಮವೀರ ಅದರ ಅಧ್ಯಕ್ಷರಾಗಿದ್ದರು.

ಮದ್ರಾಸ್‌ನ ನಿವೃತ್ತ ನ್ಯಾಯಮೂರ್ತಿ ಎನ್.ಕೆ.ರೆಡ್ಡಿ, ಮಧ್ಯಪ್ರದೇಶದ ನಿವೃತ್ತ ಐಜಿಪಿ ಕೆ.ಎಫ್.ರುಸ್ತುಂಜಿ, ಕೇಂದ್ರ ಮೀಸಲು ಪೊಲೀಸ್ ಪಡೆಯ ನಿವೃತ್ತ ಡಿಜಿಪಿ ಎನ್.ಎಸ್.ಸಕ್ಸೇನ, ಬಾಂಬೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್‌ನ ಪ್ರೊಫೆಸರ್ ಎಂ.ಎಸ್. ಗೋರೆ ಹಾಗೂ ಸಿಬಿಐನ ನಿರ್ದೇಶಕ ಸಿ.ವಿ.ನರಸಿಂಹ ಆ ಆಯೋಗದಲ್ಲಿದ್ದ ಇತರೆ ಸದಸ್ಯರು.

ಸಾಕಷ್ಟು ಅಧ್ಯಯನ ನಡೆಸಿದ ನಂತರ ಈ ಆಯೋಗವು ಫೆಬ್ರುವರಿ 7, 1979ರಂದು ಮೊದಲ ವರದಿಯನ್ನೂ, ನವೆಂಬರ್ 15, 1979ರಂದು ಅಂತಿಮ ವರದಿಯನ್ನೂ ಸರ್ಕಾರಕ್ಕೆ ಸಲ್ಲಿಸಿತು.
 
`ಧರ್ಮವೀರ ಕಮಿಷನ್ ರಿಪೋರ್ಟ್~ ಎಂದು ಅದು ಈಗಲೂ ಇಲಾಖೆಯ ಪ್ರಜ್ಞಾವಂತರ ಚರ್ಚೆಯಲ್ಲಿ ಆಗೀಗ ಕೇಳಿಬರುತ್ತದೆ. ಆ ವರದಿಯ ಆರನೇ ಅಧ್ಯಾಯವು `ಆರ್ಡರ್ಲಿ~ ವ್ಯವಸ್ಥೆಯ ಉಲ್ಲೇಖಕ್ಕೇ ಮೀಸಲಾಗಿತ್ತು. ಅದರಲ್ಲಿ ಕೂಡ ರಮಾನಂದ ತಿವಾರಿ ಬರೆದ ಪುಸ್ತಕದ ಪ್ರಸ್ತಾಪವಿತ್ತು.

ಕಚೇರಿ ಕೆಲಸದ ನಿರ್ವಹಣೆಗಷ್ಟೇ `ಆರ್ಡರ್ಲಿ~ಗಳ ಅಗತ್ಯವಿದೆ. ಆದರೆ, ಅದಕ್ಕೆ ತರಬೇತಿ ಪಡೆದ ಪೊಲೀಸರನ್ನು ನಿಯೋಜಿಸುವುದು ಸರಿಯಲ್ಲ. ಪೊಲೀಸ್ ಅಧಿಕಾರಿಗಳಿಗೆ ಅವರ ಭತ್ಯೆಯಲ್ಲೇ ಅಂಥ ಕೆಲಸಗಳನ್ನು ಮಾಡಲು ಒಬ್ಬರನ್ನು ನೇಮಿಸಿಕೊಳ್ಳುವ ಅವಕಾಶವನ್ನು ಸರ್ಕಾರ ನೀಡಬೇಕು. ಪೊಲೀಸ್ ಅಧಿಕಾರಿಯೇ ತಮಗೆ ಬೇಕಾದ ವ್ಯಕ್ತಿಯನ್ನು `ಆರ್ಡರ್ಲಿ~ ಕೆಲಸಕ್ಕೆ ನೇಮಿಸಿಕೊಳ್ಳಬೇಕು.
 
1948ರ `ಕನಿಷ್ಠ ವೇತನ ಕಾಯ್ದೆ~ಯಲ್ಲಿ ನುರಿತರಲ್ಲದ ನೌಕರರಿಗೆ (ಅನ್‌ಸ್ಕಿಲ್ಡ್ ವರ್ಕರ್ಸ್) ಎಷ್ಟು ಕನಿಷ್ಠ ವೇತನವನ್ನು ನಿಗದಿ ಮಾಡಲಾಗಿತ್ತೋ ಅಷ್ಟು ಸಂಬಳವನ್ನು ನೀಡಬಹುದು ಎಂದು `ಧರ್ಮವೀರ ಆಯೋಗ~ವು ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು.

ಅನೇಕ ಪೊಲೀಸ್ ಅಧಿಕಾರಿಗಳು `ಆರ್ಡರ್ಲಿ~ ವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳುತ್ತಿದ್ದರು. ತರಬೇತಿ ಪಡೆದ ಪೊಲೀಸರು ತಮ್ಮ ಜೊತೆ ನಿರಂತರವಾಗಿ ಒಡನಾಡುವುದರಿಂದ ವೃತ್ತಿಕೌಶಲ್ಯ, ಶಿಸ್ತು, ಸೂಕ್ಷ್ಮ ಗ್ರಹಿಕೆ ಇವೆಲ್ಲವನ್ನೂ ಕಲಿಯುತ್ತಾರೆ ಎಂದು ವಾದ ಹೂಡುತ್ತಿದ್ದರು.

`ಆರ್ಡರ್ಲಿ~ಗಳ ಬಳಕೆ ಕಚೇರಿಗೆ ಸಂಬಂಧಿಸಿದ ಕೆಲಸಕ್ಕಷ್ಟೇ ಸೀಮಿತವಾಗಿದ್ದರೆ ಈ ವಾದವನ್ನು ಒಪ್ಪಬಹುದಿತ್ತು. ಆದರೆ, ವಸ್ತುಸ್ಥಿತಿಯೇ ಬೇರೆ. ತಮ್ಮ ಹಾಗೂ ತಮ್ಮ ಮಕ್ಕಳ ಬೂಟಿನ ಲೇಸ್ ಕಟ್ಟುವಂತೆ `ಆರ್ಡರ್ಲಿ~ಗಳಿಗೆ ಹುಕುಂ ಮಾಡಿದ ಅಧಿಕಾರಿಗಳಿದ್ದಾರೆ.

`ಧರ್ಮವೀರ ಆಯೋಗ~ಕ್ಕೂ `ಆರ್ಡರ್ಲಿ~ಗಳ ನಿಜವಾದ ಪರಿಸ್ಥಿತಿ ಏನು ಎಂಬುದು ಗೊತ್ತಾಯಿತು. ಅದಕ್ಕೇ ಅದು ತನ್ನ ವರದಿಯಲ್ಲಿ `ಆರ್ಡರ್ಲಿ~ಗಳ ಕೆಲಸದ ಸ್ವರೂಪ ಹೇಗಿರಬೇಕು ಎಂಬುದನ್ನು ವಿಸ್ತೃತವಾಗಿ ಬರೆಯಿತು.

ಲಭ್ಯ ವ್ಯವಸ್ಥೆಯನ್ನು ಅಧಿಕಾರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಹೇಗೆ ಬಳಸಿಕೊಳ್ಳುತ್ತಿದ್ದಾರೆ ಎಂಬುದನ್ನೂ ತಿಳಿಸಿತು. ಪೊಲೀಸ್ ತರಬೇತಿಗೆಂದು ಕೋಟ್ಯಂತರ ರೂಪಾಯಿ  ಖರ್ಚು ಮಾಡುತ್ತಾರೆ. ಈ ಕೆಲಸಕ್ಕೆ ಬೇಕಾದ ಪರಿಣತಿ ದೊರಕಲಿ ಎಂಬ ಕಾರಣಕ್ಕೆ ಇರುವ ತರಬೇತಿ ಇದು.

ಅಲ್ಲಿ ಕಲಿತು ಬಂದವರು ಪೊಲೀಸ್ ಅಧಿಕಾರಿಗಳ ಗುಲಾಮರಂತೆ ಇರುವುದು ಎಷ್ಟು ಸರಿ ಎಂಬ ಚರ್ಚೆಗೆ `ಧರ್ಮವೀರ ಆಯೋಗ~ದ ವರದಿ ಪುಷ್ಟಿ ಕೊಟ್ಟಿತು. ಆದರೆ, ಆ ವರದಿಯ ಶಿಫಾರಸನ್ನು ಇದುವರೆಗೂ ಜಾರಿಗೆ ತರಲೇ ಇಲ್ಲ.

`ಆರ್ಡರ್ಲಿ~ ವ್ಯವಸ್ಥೆ ಬೇಕು ಎನ್ನುವ ಅಧಿಕಾರಿಗಳೇ ನಮ್ಮಲ್ಲಿ ಹೆಚ್ಚಾಗಿರುವುದರಿಂದ ಹಾಗೂ `ಆರ್ಡರ್ಲಿ~ ಆಗಿರುವುದೇ ಎಷ್ಟೋ ವಾಸಿ ಎಂಬ ಧೋರಣೆಯ ಮೈಗಳ್ಳ ಪೊಲೀಸರು ಇರುವುದರಿಂದ `ಧರ್ಮವೀರ ಆಯೋಗ~ ಹೇಳಿದ ಸತ್ಯ ಅನೇಕರಿಗೆ ಅಪ್ರಿಯವಾಯಿತು ಎನ್ನಿಸುತ್ತದೆ.

ದೂರು ಕೊಟ್ಟವರಿಗೆ ಎಫ್‌ಐಆರ್‌ನ ಪ್ರತಿ ನೀಡಲೇಬೇಕು ಎಂಬುದು ನಿಯಮದಲ್ಲಿದೆ. ಆದರೆ, ಇದನ್ನು ಪಾಲಿಸುವವರು ಅತಿ ವಿರಳ. ಇಂಥ ಅನೇಕ ಹುಳುಕುಗಳು ಪೊಲೀಸ್ ಇಲಾಖೆಯಲ್ಲಿವೆ. ಪೊಲೀಸರ ವರ್ತನೆಯ ಬಗ್ಗೆ ಬರುವ ದೂರುಗಳ ಬಗ್ಗೆ ಕ್ರಮ ತೆಗೆದುಕೊಳ್ಳುವ ಅಗತ್ಯ ಕೂಡ ಇದೆ. ಇದೂ ಲಾಗಾಯ್ತಿನಿಂದ ಚರ್ಚೆಯಾಗುತ್ತಿರುವ ಸಂಗತಿ. `ಧರ್ಮವೀರ ಆಯೋಗ~ದ ವರದಿಯಲ್ಲಿ ಈ ಅಂಶಗಳ ಪ್ರಸ್ತಾಪವೂ ಇತ್ತು.

1970ರ ದಶಕಕ್ಕೆ ಹೋಲಿಸಿದರೆ ಈಗ ಪೊಲೀಸ್ ವ್ಯವಸ್ಥೆಯು ತಾಂತ್ರಿಕವಾಗಿ ಸಾಕಷ್ಟು ಸುಧಾರಿಸಿದೆ. ಕಚೇರಿಯ ಕಾರ್ಯವೈಖರಿ ಯಲ್ಲಿಯೂ ಗಣನೀಯ ಬದಲಾವಣೆಗಳಾಗಿವೆ. ಸಂವಹನ ಜಾಲ ಅದ್ಭುತ ಎನ್ನುವಂತಿದೆ. ಮೊಬೈಲ್‌ನಿಂದಾಗಿ ಎಷ್ಟೋ ಅಪರಾಧ ಪ್ರಕರಣಗಳನ್ನು ಬಯಲಿಗೆಳೆಯುವುದೂ ಸಾಧ್ಯ ವಾಗಿದೆ. ಇವೆಲ್ಲಾ ಆದ ನಂತರವೂ `ಆರ್ಡರ್ಲಿ~ಗಳ ಸ್ಥಿತಿ ಮಾತ್ರ ಹಾಗೆಯೇ ಇದೆ.

ಮೈಸೂರು ಜಿಲ್ಲೆಯಲ್ಲಿ ಒಬ್ಬ ಐಪಿಎಸ್ ಅಧಿಕಾರಿ ಇದ್ದರು. ಅವರಿಗೆ `ಆರ್ಡರ್ಲಿ~ಯಾಗಿ ಕಾನ್‌ಸ್ಟೇಬಲ್ ಒಬ್ಬರನ್ನು ನಿಯೋಜಿಸಲಾಗಿತ್ತು. ನಂತರ ಅವರಿಗೆ ಬೆಂಗಳೂರಿಗೆ ವರ್ಗಾವಣೆಯಾಯಿತು. ಆಗಲೂ ಅದೇ ಕಾನ್‌ಸ್ಟೇಬಲ್ `ಆರ್ಡರ್ಲಿ~ಯಾಗಿ ಬೇಕೆಂದು ಇಲ್ಲಿಗೆ ಕರೆಸಿಕೊಂಡರು. `ಆರ್ಡರ್ಲಿ~ ಕುರಿತ ಅವರ ಈ ಧೋರಣೆ ಅವರ ಸೇವಾವಧಿಯ ಕಾಲವಿಡೀ ಮುಂದುವರಿಯಿತು.

ಆ ಕಾನ್‌ಸ್ಟೇಬಲ್ ಎಎಸ್‌ಐ ಆಗಿದ್ದಾಗ ಆ ಅಧಿಕಾರಿ ಡಿಜಿ ಆಗಿದ್ದರು. ಆಗಲೂ ಕಚೇರಿಯ ಕೆಲಸದ ನಡುವೆಯೇ ಬಿಡುವು ಮಾಡಿಕೊಂಡು ಡಿಜಿ ಮನೆಗೆ ಹೋಗಿ ಆ ಎಎಸ್‌ಐ ಅಡುಗೆ ಮಾಡಿಟ್ಟು ಬರುತ್ತಿದ್ದರು.

ಅಧಿಕಾರಿಗಳು ಹಾಗೂ ಸಿಬ್ಬಂದಿ ತಂತಮ್ಮ ಅನುಕೂಲಕ್ಕೆ ಮಾಡಿಕೊಂಡಿರುವ ಇಂಥ ನಿಯಮಬಾಹಿರ `ಆರ್ಡರ್ಲಿ~ ವ್ಯವಸ್ಥೆಗೆ ಅನೇಕ ಉದಾಹರಣೆಗಳು ಸಿಗುತ್ತವೆ. ಇತ್ತೀಚೆಗೆ ಬೇರೆ ಊರಿನಲ್ಲಿ ಕೆಲಸ ಮಾಡುತ್ತಿರುವ ಐಜಿಪಿ ಬೆಂಗಳೂರಿನಲ್ಲಿರುವ ತಮ್ಮ ಮನೆಗೆ ಕೆಲಸಕ್ಕೆಂದು `ಆರ್ಡರ್ಲಿ~ಗಳನ್ನು ಕಳುಹಿಸಿದ್ದು ಸುದ್ದಿಯಾಗಿತ್ತು.

ಕೆಲವು ನಿವೃತ್ತ ಪೊಲೀಸ್ ಅಧಿಕಾರಿಗಳು ಕೈತುಂಬಾ ಪಿಂಚಣಿ ಸಿಕ್ಕರೂ ಹೇರ್‌ಕಟ್ ಮಾಡಿಸಿಕೊಳ್ಳಲು, ಆಸ್ಪತ್ರೆಗೆ ಕರೆದುಕೊಂಡು ಹೋಗಲು, ಕಾರು ಓಡಿಸಲು, ನಾಯಿಗೆ ಚಿಕಿತ್ಸೆ ಕೊಡಿಸಲು `ಆರ್ಡರ್ಲಿ~ ಬೇಕು ಎಂದು ಪಟ್ಟು ಹಿಡಿಯುತ್ತಾರೆ. ಇದಂತೂ ನಮ್ಮ ವ್ಯವಸ್ಥೆಯ ದುರಂತ.

ಅನೇಕ `ಆರ್ಡರ್ಲಿ~ಗಳಿಗೆ ತಾವು ಮಾಡುತ್ತಿರುವ ಕೆಲಸದ ಬಗ್ಗೆ ಹೇಸಿಗೆ ಹುಟ್ಟಿದೆ. ಕೆಲವರು ಪ್ರತಿಭಟನೆಯ ದನಿ ಎತ್ತಿದ್ದೂ ಉಂಟು. ಆದರೆ, ಬಹುತೇಕರು ಈ ವ್ಯವಸ್ಥೆಗೆ ಒಗ್ಗಿಕೊಂಡಿದ್ದಾರೆ.
 
ಅಧಿಕಾರಿಗಳನ್ನು ಎದುರು ಹಾಕಿಕೊಂಡರೆ ತೊಂದರೆಯಾದೀತು ಎಂಬುದು ಅವರ ಆತಂಕ. ಮತ್ತೆ ಕೆಲವು ಅನುಕೂಲಸಿಂಧು `ಆರ್ಡರ್ಲಿ~ಗಳು ತಾವು ಅಧಿಕಾರಿಗಳಿಗೆ ಹತ್ತಿರವಿರುವುದನ್ನೇ ದೊಡ್ಡ ಅರ್ಹತೆ ಎಂಬಂತೆ ಬಿಂಬಿಸಿಕೊಂಡು ಹಣ ಮಾಡುವ `ಉಪಕಸುಬು~ಗಳನ್ನೂ ಪ್ರಾರಂಭಿಸಿದ್ದಾರೆ.

 ಜೀತದಾಳುಗಳನ್ನು ಮುಕ್ತವಾಗಿಸುವ, ಗುಲಾಮಗಿರಿ ಕಂಡಲ್ಲಿ ಸಿಡಿದೇಳುವ ಪೊಲೀಸರ ಕಥೆಗಳನ್ನು ಕೇಳಿರುವ ಜನರಿಗೆ ಅದೇ ಇಲಾಖೆ ಯಲ್ಲಿಯೇ `ಆರ್ಡರ್ಲಿ~ಗಳ ರೂಪದಲ್ಲಿ ಜೀತ ದಾಳುಗಳಿದ್ದಾರೆ ಎಂಬುದು ಅಚ್ಚರಿ ಹುಟ್ಟಿಸದೇ ಇರದು.

ಮುಂದಿನ ವಾರ: ಪೊಲೀಸರ ಇನ್ನಷ್ಟು ಬವಣೆಗಳುಶಿವರಾಂ ಅವರ ಮೊಬೈಲ್ ನಂಬರ್94483 13066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT