ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡದ ‘ವಾಲ್ಮಿ’ಗೆ ಶಕ್ತಿ ತುಂಬುವ ಕೆಲಸವಾಗಲಿ

Last Updated 23 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ನೀರಾವರಿ ಕ್ಷೇತ್ರಕ್ಕೆ ಸರ್ಕಾರ ಹಲವು ದಶಕಗಳಿಂದ ಆದ್ಯತೆ ನೀಡುತ್ತಲೇ ಬಂದಿದೆ. ಜಲಮೂಲಗಳಿಂದ ರೈತರ ಜಮೀನಿಗೆ ನೀರು ತರಲು ಸಹಸ್ರಾರು ಕೋಟಿ ರೂಪಾಯಿ ವಿನಿಯೋಗಿಸಿದೆ. ಆದರೆ ಹಾಗೆ ತಂದಿರುವ ನೀರಿನ ಬಳಕೆ ಮಾತ್ರ ಪರಿಣಾಮಕಾರಿ ಆಗಿಲ್ಲ. ನೀರು ಪೋಲಾಗುವುದನ್ನು ತಡೆಗಟ್ಟಲೂ ಸಾಧ್ಯವಾ­ಗಿಲ್ಲ. ಈ ನಿಟ್ಟಿನಲ್ಲಿ ರೈತರಿಗೆ, ಕೃಷಿ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನದಟ್ಟು ಮಾಡಿಕೊಡುವ ಉದ್ದೇಶದಿಂದಲೇ  80ರ ದಶಕದಲ್ಲಿ ಆರಂಭಿಸಿದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯನ್ನು (ವಾಲ್ಮಿ) ಸರ್ಕಾರವೇ ಉಪಯೋಗಕ್ಕೆ ಬಾರದಂತೆ ಮಾಡಿದೆ.

ದೇಶದ 11 ರಾಜ್ಯಗಳಲ್ಲಿ ಇಂಥ ಸಂಸ್ಥೆಗಳಿವೆ. ಅದರಲ್ಲಿ ಮಹಾರಾಷ್ಟ್ರದ ಔರಂಗಾಬಾದ್‌­ನಲ್ಲಿರುವ ವಾಲ್ಮಿ (water and land management institute) ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದು, ಆಂಧ್ರಪ್ರದೇಶದ ಹೈದರಾ­ಬಾದ್‌­ನಲ್ಲಿರುವ ಸಂಸ್ಥೆ ಕೂಡ ಅದೇ ದಿಕ್ಕಿನಲ್ಲಿ ಹೆಜ್ಜೆ ಹಾಕಿದೆ. ಅಧಿಕಾರಿಗಳು ಮತ್ತು ರೈತರಿಗೆ ತರಬೇತಿ ನೀಡಲು ಅಗತ್ಯ ಅಧ್ಯಾಪಕ ವರ್ಗವೂ ಅಲ್ಲಿದೆ. ಔರಂಗಾಬಾದ್‌ ಸಂಸ್ಥೆ­ಯಂತೂ ಇಡೀ ವರ್ಷ ನಡೆಯುವ ಕಾರ್ಯಕ್ರ­ಮದ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಅಲ್ಲಿ ಸಂಶೋಧನೆ­ಗಳೂ ನಡೆಯುತ್ತಿವೆ.

ಒಟ್ಟಾರೆ ಅದು ಒಂದು ವಿಶ್ವವಿದ್ಯಾಲಯದಂತೆ ಕಾರ್ಯ­ನಿರ್ವಹಿಸುತ್ತಿದೆ. ಆದರೆ ಧಾರವಾಡದಲ್ಲಿರುವ ವಾಲ್ಮಿಗೆ ಮೂಲ ಅಗತ್ಯವಾದ ಅಧ್ಯಾಪಕ ವರ್ಗವೇ ಇಲ್ಲ. ಈಗಲೂ ಆಗೊಮ್ಮೆ ಈಗೊಮ್ಮೆ ಎಂಬಂತೆ ಏರ್ಪ­ಡಿ­ಸುವ ತರಬೇತಿ ಶಿಬಿರಗಳಿಗೆ ಹೊರಗಿ­ನಿಂದ ಮಾರ್ಗದರ್ಶಕರನ್ನು ಕರೆಸಲಾಗುತ್ತಿದೆ. ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ?

ನೀರಾವರಿ ಯೋಜನೆ ಅನುಷ್ಠಾನಕ್ಕೆ ಸಾಲ ನೀಡುವಾಗ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ ಸ್ಥಾಪಿಸಬೇಕು ಎಂದು ವಿಶ್ವಬ್ಯಾಂಕ್‌ ಷರತ್ತು ವಿಧಿಸಿತ್ತು. ಅಲ್ಲದೇ ಅದಕ್ಕೆ ಅನುದಾನವನ್ನೂ ನೀಡಿತು. ಪರಿಣಾಮವಾಗಿ ಕಟ್ಟಡ ಎದ್ದು ನಿಂತಿತು. ತರಬೇತಿ ಕೊಠಡಿಗಳು, ವಸತಿ ಸಮು­ಚ್ಚಯ ಎಲ್ಲವೂ ಬಂದವು. ಆರಂಭದ ದಿನಗಳಲ್ಲಿ  ಈ ಸಂಸ್ಥೆಯಲ್ಲೂ ಚಟುವಟಿಕೆಗಳು ಚೆನ್ನಾಗಿ ನಡೆಯುತ್ತಿದ್ದವು. ಆದರೆ, ಬರು­ಬರುತ್ತಾ ಸಂಸ್ಥೆ ಜಾಡುತಪ್ಪಿತು. ಸಂಸ್ಥೆಯ ನಿರ್ದೇಶಕ ಹುದ್ದೆಗೆ ಮುಖ್ಯ ಎಂಜಿನಿಯರ್‌ ದರ್ಜೆ ಅಧಿಕಾರಿಯನ್ನು ನೇಮಿಸಲಾಗುತ್ತಿದೆ. ಆದರೆ ಈ ಹುದ್ದೆಗೆ ಬರು­ವವರು ಅದನ್ನು ಶಿಕ್ಷೆ ಎಂದು ಭಾವಿಸತೊಡಗಿ­ದ್ದರಿಂದ ಸಮಸ್ಯೆ ಉಲ್ಬಣಿಸತೊಡಗಿದೆ.

ವಾಲ್ಮಿ, ನೀರಾವರಿ ಇಲಾಖೆ ಅಧೀನದ­ಲ್ಲಿಯೇ ಇದೆ. ಸರ್ಕಾರ ನೀರಾವರಿ ಇಲಾಖೆಗೆ ಪ್ರತಿ ವರ್ಷ ಸರಾಸರಿ ₨ 10,000 ಕೋಟಿ ಅನುದಾನ ಒದಗಿಸುತ್ತದೆ. ಅದರಲ್ಲಿ ಒಂದು ₨ 5–6 ಕೋಟಿಯನ್ನು ವಿನಿಯೋಗಿಸಿದರೂ ಅದನ್ನು ಸದೃಢಗೊಳಿಸಬಹುದು. ವಾಲ್ಮಿ ಯಾರಿಗೂ ಬೇಡವಾದ ಕೂಸಾಗಿದ್ದು, ಅದರ ಅಭಿವೃದ್ಧಿಗೆ ರಾಜಕೀಯ ಇಚ್ಛಾಶಕ್ತಿ ಕೊರತೆ ಅಗಾಧವಾಗಿದೆ. ಈ ಸಂಸ್ಥೆಗೆ ಸ್ವಯಂ ಸಂಪ­ನ್ಮೂಲ ಕ್ರೋಡೀಕರಣ ಸಾಧ್ಯವಿಲ್ಲ. ಆದ್ದ­ರಿಂದ ಸರ್ಕಾರವೇ ಅನುದಾನ ಒದಗಿಸಬೇಕು.

ನೀರು ಅತ್ಯಮೂಲ್ಯ ವಸ್ತು. ಜಲ ಮೂಲಗಳು ಕಡಿಮೆ ಇವೆ. ಲಭ್ಯವಿರುವ ನೀರಲ್ಲಿ ಒಂದು ಹನಿಯೂ ವ್ಯರ್ಥವಾಗದಂತೆ ಎಚ್ಚರವಹಿಸ­ಬೇಕಾದ ಜರೂರು ಈಗ ಬಹಳ ಇದೆ. ಆದ್ದರಿಂದ ರೈತರಿಗೆ ಈ ಬಗ್ಗೆ ಮಾರ್ಗದರ್ಶನ ಮಾಡ­ಬೇಕಿದೆ. ಕೃಷಿ ಮತ್ತು ನೀರಾವರಿ ಇಲಾಖೆ ಅಧಿಕಾರಿ­-ಗಳಿಗೂ ಈ ಬಗ್ಗೆ ಮಾಹಿತಿ ನೀಡಿ ಅದನ್ನು ರೈತರಿಗೆ ತಲುಪಿಸುವ ಕಾರ್ಯವನ್ನು ಮಾಡಬೇಕು. ಹರಿ ನೀರಾವರಿ (ನಾಲೆ ಮೂಲಕ) ಸೌಲಭ್ಯವಿರುವ ಎಲ್ಲೆಡೆ ರೈತರು ಭತ್ತ ಅಥವಾ ಕಬ್ಬು ಬೆಳೆಯುತ್ತಾರೆ. ಈ ಎರಡು ಬೆಳೆಗಳಿಗೂ ಹೆಚ್ಚು ನೀರು ಬೇಕು.

ಈ ಕುರಿತು ನೀರು ಬಳಕೆದಾರರಲ್ಲಿ ಜಾಗೃತಿ ಮೂಡಿಸಬೇಕು. ನಾಲೆಯ ಆರಂಭದ ರೈತರೆಲ್ಲರೂ ಭತ್ತ ಅಥವಾ ಕಬ್ಬಿನ ಗದ್ದೆಗೆ ನೀರು ಹಾಯಿಸಿಕೊಂಡರೆ ಕಾಲುವೆಯ ತುದಿಯಲ್ಲಿ­ರುವ ರೈತರ ಹೊಲಕ್ಕೆ ನೀರು ಹರಿಯುವುದೇ ಇಲ್ಲ. ಕಾಲುವೆ ಇದ್ದರೂ ನೀರು ಇಲ್ಲ ಎಂಬ ಸ್ಥಿತಿ ಆ ಭಾಗದವರದ್ದು. ನಾಲೆಯ ತುದಿಯ ಭಾಗದಲ್ಲಿ ಅರೆ ನೀರಾವರಿ ಕೃಷಿಯೂ ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ರೈತರ ಮನೋಭಾವವನ್ನು ಬದಲಿಸ­ಬೇಕು. ಬೆಳೆ ಪದ್ಧತಿ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡುವ ಹೊಣೆಗಾರಿಕೆಯನ್ನು ವಾಲ್ಮಿ ನಿಭಾಯಿಸುವಂತಾಗಬೇಕು.

ಬಳಕೆದಾರರಿಗೆ ನೀರಾವರಿ ಸೌಕರ್ಯ ಕಲ್ಪಿಸಿ­ಕೊಟ್ಟ ಮೇಲೆ ಕಾಲುವೆ, ನಾಲೆ, ವಿತರಣಾ ನಾಲೆ­ಗಳ ನಿರ್ವಹಣೆ ಕೂಡ ಸಮರ್ಪಕವಾಗಿರಬೇಕು. ನೀರು ಬಳಸುವವರಿಂದ ಪಡೆದ ಶುಲ್ಕವನ್ನು ಕ್ರೋಡೀಕರಿಸಿ ನಾಲೆಗಳನ್ನು ನೀರಾವರಿ ಇಲಾಖೆ ದುರಸ್ತಿಪಡಿಸಬೇಕು. ಪಡೆಯುವ ಶುಲ್ಕ ಕಡಿಮೆ ಎನಿಸಿದರೆ ರೈತರಿಗೆ ಮನವರಿಕೆ ಮಾಡಿಕೊಟ್ಟು ಸ್ವಲ್ಪ ಹೆಚ್ಚಿಗೆ ಶುಲ್ಕ ಸಂಗ್ರಹಿಸಬೇಕು.

ಮಹಾ-­ರಾಷ್ಟ್ರ­ದಲ್ಲಿ ನೀರು ದರ ನಿಯಂತ್ರಣ ಪ್ರಾಧಿಕಾ­ರವಿದೆ. ನಮ್ಮಲ್ಲಿ  ವಿದ್ಯುತ್‌ ದರ ಏರಿಕೆ ಕುರಿತು ತೀರ್ಮಾನಿಸುವ ವಿದ್ಯುತ್‌ ದರ ನಿಯಂತ್ರಣ ಪ್ರಾಧಿಕಾರದಂತೆಯೇ ಮಹಾರಾಷ್ಟ್ರದಲ್ಲಿ ಈ ನೀರು ದರ ನಿಯಂತ್ರಣ ಪ್ರಾಧಿಕಾರ ಕೆಲಸ ಮಾಡುತ್ತಿದೆ. ಬೆಳೆ ಹಂಗಾಮಿಗೆ ಅನುಗುಣವಾಗಿ ಪ್ರಾಧಿಕಾರ ದರ ನಿಗದಿಪಡಿಸುತ್ತದೆ. ಅಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ಆದರೆ ಅಂಥ ವ್ಯವಸ್ಥೆ ಇಲ್ಲಿ ಇಲ್ಲ. ರೈತರಿಗೆ ಸಮರ್ಪಕವಾಗಿ ನೀರು, ವಿದ್ಯುತ್‌ ಒದಗಿಸಿ ಅವರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿದರೆ ನಿಗದಿತ ಶುಲ್ಕ ನೀಡಲು ಅವರೇನು ಹಿಂದೇಟು ಹಾಕುವುದಿಲ್ಲ. ನಮ್ಮಲ್ಲಿ ಸೌಕರ್ಯ ಕಲ್ಪಿಸದೇ ಶುಲ್ಕ ವಿಧಿಸಲು ಮುಂದಾಗುವ ಪದ್ಧತಿ ಇರುವುದರಿಂದ ರೈತರೂ ವಿರೋಧಿಸುತ್ತಾರೆ ಎಂಬುದನ್ನು ಸರ್ಕಾರ ಗಮನಿಸಬೇಕು.

ನೀರಾವರಿ ಯೋಜನೆಗಳ ಮೂಲಕ ಲಭ್ಯವಿರುವ ನೀರಿನಲ್ಲಿ ನಾವು ಬಳಸುತ್ತಿರುವುದು ಕೇವಲ ಶೇ 40 ರಷ್ಟು ಮಾತ್ರ. ಉಳಿದ ನೀರು ವ್ಯರ್ಥವಾಗುತ್ತಿದೆ. ಅಲ್ಲದೇ ಭೂಮಿಯೂ ಜವಳು ಆಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಕಪ್ಪು ಮಣ್ಣಿನ ಪ್ರದೇಶ ಹೆಚ್ಚು. ಇಲ್ಲಿ ಜವಳು ಪ್ರಮಾಣವೂ ಹೆಚ್ಚು. ನೀರು ಭೂಮಿಯ ಫಲವತ್ತತೆಯನ್ನು ನಾಶ ಮಾಡುತ್ತಿದೆ. ನಾಲೆ ಮೂಲಕ ನೀರನ್ನು ಹರಿಸುವಾಗ ಎಚ್ಚರ ವಹಿಸದ ಕಾರಣ ಆಗುತ್ತಿರುವ ಹಾನಿ ಇದು. ಹೆಚ್ಚು ಪ್ರಮಾಣದಲ್ಲಿ ನೀರು ಜಮೀನಿಗೆ ಹರಿಯು­ವುದನ್ನು ತಪ್ಪಿಸಿದರೆ ಕಾಲುವೆಯ ತುದಿಯಲ್ಲಿ­ರುವ ರೈತರ ಹೊಲಕ್ಕೂ ನೀರು ಹರಿಸಬಹುದು. ಆ ಭಾಗದಲ್ಲೂ ಕೃಷಿ ಚಟುವಟಿಕೆ ಗರಿಗೆದರುತ್ತದೆ. ಈ ಬಗ್ಗೆ ಅಧ್ಯಯನ ಮಾಡಲು ಎಂಜಿನಿಯರುಗಳನ್ನು ತಯಾರು ಮಾಡುವ ಹೊಣೆಯನ್ನು ವಾಲ್ಮಿಗೆ ವಹಿಸಬೇಕು.

ಇದಕ್ಕೆ ಮುಖ್ಯವಾಗಿ ಬೇಕಿರುವುದು ಶಾಶ್ವತ ಪರಿಣತ ಸಿಬ್ಬಂದಿ ವರ್ಗ. ಮೂರು ದಶಕಗ­ಳಾದರೂ ಸಂಸ್ಥೆಯ ಹಿತ ಕಾಯುವ ಕೆಲಸ­ವಾಗಿಲ್ಲ ಎಂಬುದನ್ನು ಅಲ್ಲಿ ಕಾರ್ಯನಿರ್ವ­ಹಿಸುತ್ತಿರುವ ಸಿಬ್ಬಂದಿ ಸಂಖ್ಯೆ­ಯನ್ನು ನೋಡಿ­ದಾಗ ತಿಳಿಯುತ್ತದೆ. ಧಾರವಾ­ಡದ ವಾಲ್ಮಿ­ಯಲ್ಲೂ ಔರಂಗಾಬಾದ್‌ನ ಸಂಸ್ಥೆ ಮಾದರಿ­ಯಲ್ಲಿಯೇ ಸಂಶೋಧನೆಗಳು ನಡೆಯು­ವಂತಾಗ­ಬೇಕು. ಅಧ್ಯಾಪಕ ವರ್ಗದವರು ಸುಧಾರಣೆಗೆ ಅಗತ್ಯವಿ­ರುವ ಸಲಹೆಗಳನ್ನು ಕೊಡಬೇಕು. ಅದಕ್ಕೂ ಮೊದಲು ಅವರು ಅಧ್ಯಯನ ಮಾಡಬೇಕು. ಈ ಕಾರಣದಿಂದಲೇ ಸಾಲ ಕೊಡಲು ಮುಂದೆ ಬಂದ ವಿಶ್ವಬ್ಯಾಂಕ್‌ ವಾಲ್ಮಿ ಸ್ಥಾಪಿಸಲು ಷರತ್ತು ಹಾಕಿದ್ದು. ಅದನ್ನು ಸರ್ಕಾರ ಅರ್ಥ ಮಾಡಿಕೊಳ್ಳ­ಬೇಕು. ವಿಶ್ವದ ವಿವಿಧೆಡೆ ಇಂದು ವಾಲ್ಮಿಗೆ ಹೆಚ್ಚು ಆದ್ಯತೆ ದೊರೆಯುತ್ತಿದೆ. ಅನೇಕ ದೇಶಗಳಲ್ಲಿ ಇಂಥ ಸಂಸ್ಥೆಗಳು ಪರಿಣಾಮಕಾರಿಯಾಗಿ ಕಾರ್ಯ­­ನಿರ್ವ­ಹಿ­ಸುತ್ತಿವೆ.

ನೀರಿನ ಸದ್ಬಳಕೆಗೆ ಇಸ್ರೇಲ್‌ ವಿಶ್ವಕ್ಕೇ ಮಾದರಿಯಾಗಿದೆ. ಆದರೆ ನಮ್ಮಲ್ಲಿ ಆ ಮನೋಭಾವ ಇಲ್ಲ. ಈಗಲೂ ವಾಲ್ಮಿಗೆ ಒಬ್ಬರು ದಕ್ಷ ನಿರ್ದೇಶಕರನ್ನು ನಿಯೋ­ಜಿಸಿ, ಅಗತ್ಯ ಅಧ್ಯಾಪಕ ಸಿಬ್ಬಂದಿಯನ್ನು ಒದಗಿ­ಸಬೇಕು. ಯಾರನ್ನೋ ತಂದು ಹಾಕಿ ಲೆಕ್ಕ ತೋರಿ­ಸುವ ಕೆಲಸವಾಗಬಾರದು. ಈ ಕೆಲಸದಲ್ಲಿ ಆಸಕ್ತಿ ಇರುವವರನ್ನು ನೇಮಕ ಮಾಡುವ ಮೂಲಕ ಧಾರವಾಡದ ವಾಲ್ಮಿಯನ್ನು ಬಲಪಡಿ­ಸುವ ಗಂಭೀರ ಪ್ರಯತ್ನಕ್ಕೆ ಸರ್ಕಾರ ಕೈ ಹಾಕಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT