ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರ್ಮಿಕ ಬಾಬಾಗಳ ಅಭಿಶಾಪ

Last Updated 26 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ದೇಶದ ಯಾವ ಭಾಗದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಪ್ರಭಾವಿ ಧರ್ಮ ಗುರುಗಳು ನೆಲೆಸಿದ್ದಾರೆ ಎನ್ನುವ ಪ್ರಶ್ನೆಗೆ, ಪಂಜಾಬ್‌ ಮತ್ತು ಹರಿಯಾಣ ರಾಜ್ಯಗಳು ಎನ್ನುವ ಸಿದ್ಧ ಉತ್ತರ ಸಿಗುತ್ತದೆ. ಧಾರ್ಮಿಕ ಪ್ರಭಾವ, ಅಧ್ಯಾತ್ಮ ಮತ್ತು ಸ್ವಯಂ ಘೋಷಿತ ದೇವಮಾನವರು ಈ ಎರಡೂ ರಾಜ್ಯಗಳಲ್ಲಿ ವ್ಯಾಪಕ ಪ್ರಭಾವ ಹೊಂದಿದ್ದಾರೆ. ಈ ಧಾರ್ಮಿಕ ಮುಖಂಡರಲ್ಲಿ ಎಲ್ಲರೂ ದಗಾಕೋರರಲ್ಲ. ಅವರಲ್ಲಿ ಅನೇಕರು ತಮ್ಮದೇ ಆದ ಅಧ್ಯಾತ್ಮ ಚಿಂತನೆಯ ಪ್ರಚಾರ ಕಾರ್ಯದಲ್ಲಿ ಸದ್ದಿಲ್ಲದೆ ತೊಡಗಿಕೊಂಡಿದ್ದಾರೆ. ನೆಲದ ಕಾನೂನು ಪಾಲಿಸುತ್ತ, ದಾನ ಧರ್ಮ ಕಾರ್ಯಗಳನ್ನು ನೆರವೇರಿಸುತ್ತ, ಸಾಮಾಜಿಕ ಸೇವೆಗಳನ್ನು ಸಲ್ಲಿಸುತ್ತ ತಮ್ಮ ಪಾಡಿಗೆ ತಾವಿದ್ದಾರೆ. ಆದರೆ, ಉಳಿದ ಧಾರ್ಮಿಕ ಮುಖಂಡರಲ್ಲಿ ಅನೇಕರು ಭೂ ಕಬಳಿಕೆ, ರಾಜಕಾರಣ, ಅಧಿಕಾರದ ದಲ್ಲಾಲಿ ಮತ್ತು ವಂಚಕ ಉದ್ಯಮಿಗಳ ರೂಪದಲ್ಲಿ ಸಮಾಜದ ಪಾಲಿಗೆ ಕಂಟಕವಾಗಿ ಪರಿಣಮಿಸಿದ್ದಾರೆ.

ಹಿಂದಿ ಚಲನಚಿತ್ರ ಶೋಲೆಯ ಖಳನಾಯಕ ಗಬ್ಬರ್‌ ಸಿಂಗ್‌ನಂತೆ ಫ್ಯಾನ್ಸಿ ಬಟ್ಟೆ ಧರಿಸಿ, ತಮ್ಮ ಆಸ್ಥಾನದಲ್ಲಿ ಭಕ್ತರಿಂದ ಬಹುಪರಾಕ್‌ ಕೇಳುತ್ತ ಹೊಗಳಿಕೆಯ ಸಂತಸದಲ್ಲಿ ತೇಲುವ ಈ ದೇವಮಾನವರು ಹೇಳಿದ್ದಕ್ಕೆಲ್ಲ ಸ್ಥಳೀಯ ರಾಜಕಾರಣಿಗಳು ‘ಅರೆ ಹೋ ಸಾಂಭಾ’ ಎಂದು ಜೈಕಾರ ಕೂಗುತ್ತಲೇ ಇರುತ್ತಾರೆ.

ಲಕ್ಷಾಂತರ ಕಟ್ಟಾ ಬೆಂಬಲಿಗರನ್ನು ಹೊಂದಿರುವ ಈ ಗುರ್ಮೀತ್‌ ರಾಂ ರಹೀಂ ದೇವಮಾನವನನ್ನು ಶೋಲೆ ಚಿತ್ರದ ಗಬ್ಬರ್‌ಸಿಂಗ್‌ಗೆ ಹೋಲಿಕೆ ಮಾಡುವುದಕ್ಕೆ ಸಾಕಷ್ಟು ಎಚ್ಚರಿಕೆಯನ್ನೂ ನಾವಿಲ್ಲಿ ವಹಿಸಬೇಕು. ಅಂತಹ ಸ್ವಾತಂತ್ರ್ಯವೇ ಇಲ್ಲದಂತಾಗಿದೆ. ತಪ್ಪಿತಸ್ಥ ಅತ್ಯಾಚಾರಿ ಎಂದು ಕೋರ್ಟ್‌ ನೀಡಿದ ತೀರ್ಪಿನಿಂದ ಬಾಬಾನ ಭಕ್ತರು ನಡೆಸಿದ ಹಿಂಸಾಚಾರದಿಂದ ಹರಿಯಾಣ ನಲುಗಿ ಹೋಗಿದೆ. ಬಾಬಾನ ವಿರುದ್ಧ ಇನ್ನೊಂದು ಅತ್ಯಾಚಾರ ಮತ್ತು ಸ್ಥಳೀಯ ದಿಟ್ಟ ಪತ್ರಕರ್ತನ ಕೊಲೆ ಪ್ರಕರಣದ ವಿಚಾರಣೆ ಇನ್ನೂ ಬಾಕಿ ಇದೆ.

ಭಾರಿ ಸಂಖ್ಯೆಯ ಅನುಯಾಯಿಗಳನ್ನು ಹೊಂದಿರುವ ಬಾಬಾ ಗುರ್ಮೀತ್‌ ರಾಂ ರಹೀಂ ಸಿಂಗ್‌ ಇನ್ಸಾನ್‌ , ಸಿರ್ಸಾದಲ್ಲಿ ಸುತ್ತಲೂ ಗೋಡೆಯಿಂದ ಆವೃತವಾಗಿರುವ ಗರಿಷ್ಠ ಭದ್ರತೆಯ ಪುಟ್ಟ ನಗರ ಡೇರಾ ಈತನ ನೆಲೆಯಾಗಿದೆ. ಪಕ್ಕದಲ್ಲಿಯೇ ಇರುವ ಹಿಸ್ಸಾರ್‌ನಲ್ಲಿ ಬಾಬಾ ರಾಂ ಪಾಲ್‌ ಎಂಬುವವನ ನೆಲೆ ಇದೆ. ಗಂಭೀರ ಸ್ವರೂಪದ ಆರೋಪಗಳಿಗಾಗಿ ವಿಚಾರಣಾಧೀನ ಕೈದಿಯಾಗಿ ಸೆರೆಮನೆಯಲ್ಲಿ ಇರುವ ಬಾಬಾ ರಾಂ ಪಾಲ್‌ನ ವಿರುದ್ಧದ ಆರೋಪಗಳು ಸಾಬೀತಾಗಿ ಕಠಿಣ ಶಿಕ್ಷೆಯಾದರೆ ತನ್ನ ಬದುಕಿನ ಉಳಿದ ಅವಧಿಯನ್ನು ಈತನೂ ಜೈಲಿನಲ್ಲಿಯೇ ಕಳೆಯಬೇಕಾಗುತ್ತದೆ. ಈತನ ಇತಿಹಾಸ ಇತ್ತೀಚಿನದು. 2014ರ ನವೆಂಬರ್‌ ತಿಂಗಳಿನಲ್ಲಿ ಹರಿಯಾಣ ಪೊಲೀಸರು ಈತನನ್ನು ಬಂಧಿಸಲು ತೆರಳಿದಾಗ ಆತನ ಹಿಂಬಾಲಕರಿಂದ ತೀವ್ರ ಪ್ರತಿರೋಧ ಎದುರಿಸಿದ್ದರು. ಭಾರಿ ಭದ್ರತೆಯ ಗೋಡೆ ಭೇದಿಸಿ ಒಳಗೆ ನುಗ್ಗಲು ನಡೆಸಿದ ಪ್ರಯತ್ನದಲ್ಲಿ ಅನೇಕರು ಸಾವನ್ನಪ್ಪಿದ್ದರು. ‘ರಾಮ್‌ ಪಾಲ್‌ನ ಖಾಸಗಿ ಸೇನೆಯಿಂದ ಪೊಲೀಸರು ಭಾರಿ ಪ್ರತಿರೋಧ ಎದುರಿಸಬೇಕಾಯಿತು’ ಎಂದು ಹರಿಯಾಣದ ಅಂದಿನ ಪೊಲೀಸ್‌ ಮಹಾ ನಿರ್ದೇಶಕ ಎಸ್‌. ಎನ್‌. ವಸಿಷ್ಠ ಹೇಳಿಕೊಂಡಿದ್ದರು. ಬಾಬಾಗಳು ತಮ್ಮ ಸುತ್ತಲೂ ನಿರ್ಮಿಸಿಕೊಂಡಿರುವ ಭದ್ರತಾ ಪಡೆಗಳ ರಕ್ಷಣಾ ಗೋಡೆಯ ಬಗ್ಗೆ ಇದು ಬೆಳಕು ಚೆಲ್ಲುತ್ತದೆ.

ಪಂಜಾಬ್‌ ಮತ್ತು ಹರಿಯಾಣದಲ್ಲಿನ ಎಲ್ಲ ಡೇರಾ ಅಥವಾ ಪಂಥಗಳಲ್ಲಿ ವ್ಯಕ್ತಿಗತ ಪಂಥಗಳೂ ಇರುವುದು ಸಾಮಾನ್ಯ ಸಂಗತಿಯಾಗಿದೆ. ಹರಿಯಾಣದ ಹಿಸ್ಸಾರ್‌ ಮತ್ತು ಸಿರ್ಸಾದಿಂದ ಪಶ್ಚಿಮದತ್ತ ಕಣ್ಣು ಹಾಯಿಸಿದ ಉದ್ದಕ್ಕೂ ಪಂಜಾಬ್‌ ಗಡಿಯಲ್ಲಿ ಇರುವ ಎಂಟು ಜಿಲ್ಲೆಗಳಲ್ಲಿ ಈ ಇಬ್ಬರೂ ಬಾಬಾಗಳಿಗೆ ಲಕ್ಷಾಂತರ ಅನುಯಾಯಿಗಳಿದ್ದಾರೆ. ಇವರಿಬ್ಬರ ಧಾರ್ಮಿಕ ಪ್ರಭಾವಳಿ ಸದ್ಯಕ್ಕೆ ಸಾಕಷ್ಟು ಮಸುಕಾಗಿದ್ದರೂ ಪ್ರಭಾವವೇನೂ ಕಡಿಮೆಯಾಗಿಲ್ಲ, ಈ ಪ್ರದೇಶದಲ್ಲಿನ ಇತರ ಧಾರ್ಮಿಕ ಮುಖಂಡರು ಇವರಂತೆ ಜನರ ಪೀಡಕರಾಗಿ ಕುಖ್ಯಾತಿಗೆ ಒಳಗಾಗಿಲ್ಲ. ಆದರೆ, ಅವರ ಬದುಕು ಮತ್ತು ಸಾವಿನ ಕುರಿತು ವರ್ಣರಂಜಿತ ಘಟನೆಗಳಿಗೇನೂ ಕೊರತೆ ಇಲ್ಲ.

ಪಂಜಾಬ್‌ನಲ್ಲಿ ರಾಧಾ ಸೋಆಮಿ ಮತ್ತು ನಿರಂಕಾರಿ ಪಂಥಗಳಿವೆ. ಈ ಎರಡೂ ಪಂಥಗಳಿಗೆ ಅಪಾರ ಭಕ್ತರಿದ್ದಾರೆ. ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಈ ಪಂಥಗಳ ಪ್ರಭಾವ ವ್ಯಾಪಕವಾಗಿದೆ. ರಾಧಾ ಸೋಆಮಿ ಪಂಥವು ವಿವಾದಗಳಿಂದ ದೂರ ಇದೆ. ಇದರ ಸದ್ಯದ ಮುಖ್ಯಸ್ಥ ಕ್ಯಾನ್ಸರ್‌ ಪೀಡಿತರಾಗಿದ್ದಾರೆ. ಪಂಜಾಬ್‌ನಲ್ಲಿ ಗುರು ಎಂದು ಬಣ್ಣಿಸುವುದು ಸಿಖ್‌ರ ಪಾಲಿಗೆ ಧರ್ಮವಿರೋಧಿಯಾಗಿ ಕಾಣುವುದರಿಂದ ಧರ್ಮ ಗುರುಗಳನ್ನು ನಾನು ಇಲ್ಲಿ ಬಾಬಾಜಿ ಅಥವಾ ಆಧ್ಯಾತ್ಮಿಕ ಮುಖ್ಯಸ್ಥ ಎಂದೇ ಕರೆಯಲು ಇಷ್ಟಪಡುವೆ.
ಹತ್ತನೇ ಗುರು, ಗುರು ಗೋವಿಂದ್‌ ಸಿಂಗ್‌ ತಮ್ಮನ್ನು ಸಿಖ್‌ರ ಪವಿತ್ರ ಧರ್ಮ ಗ್ರಂಥ ‘ಗುರು ಗ್ರಂಥ ಸಾಹಿಬ್‌’ ಪ್ರಕಾರ, ತಾವು ಸಿಖ್‌ರ ಶಾಶ್ವತ ಗುರು ಎಂದು ಘೋಷಿಸಿಕೊಂಡಿದ್ದಾರೆ.

ಜಲಂಧರ ಮತ್ತು ಅಮೃತಸರದ ಮಧ್ಯೆ ಬಿಯಾಸ್‌ ನದಿ ಸಮೀಪ ರಾಧಾ ಸೋಆಮಿ ಪಂಥದ ಪ್ರಧಾನ ಕೇಂದ್ರ ಇದೆ. ಸದ್ಯಕ್ಕೆ ಈ ಪಂಥಕ್ಕೆ ವಂಶಪರಂಪರೆಯ ಉತ್ತರಾಧಿಕಾರಿ ಇಲ್ಲ. ಭಾಯಿ ಶಿವಿಂದರ್‌ ಮೋಹನ್‌ ಸಿಂಗ್ ಅವರು ಈ ಪಂಥವನ್ನು ಮುನ್ನಡೆಸುತ್ತಿದ್ದಾರೆ.

ನಿರಂಕಾರಿಗಳು ಕುತೂಹಲಕಾರಿ ಇತಿಹಾಸ ಹೊಂದಿದ್ದಾರೆ. ದೀರ್ಘಕಾಲದವರೆಗೆ ಇವರ ಮುಖ್ಯಸ್ಥರಾಗಿದ್ದ ಬಾಬಾ ಗುರುಬಚನ್‌ ಸಿಂಗ್‌ ಅವರನ್ನು ಜರ್ನೆಲ್‌ ಸಿಂಗ್‌ ಭಿಂದ್ರನ್‌ವಾಲೆ ಬೆಂಬಲಿಗರು ಬಹಳ ಹಿಂದೆಯೇ ಹತ್ಯೆ ಮಾಡಿದ್ದಾರೆ. ತಾವೊಬ್ಬ ಗುರು ಎಂದು ಘೋಷಿಸಿಕೊಂಡಿದ್ದೇ ಅವರ ಅಪರಾಧವಾಗಿತ್ತು.

1973ರ ಏಪ್ರಿಲ್‌ 13ರಂದು ವೈಶಾಖ ದಿನ ಭಿಂದ್ರನ್‌ವಾಲೆ ಬೆಂಬಲಿಗರು ನಿರಂಕಾರಿಗಳ ಒಗ್ಗೂಡುವಿಕೆ ವಿರೋಧಿಸಲು ಹೋದಾಗ ಬಾಬಾ ಬೆಂಬಲಿಗರು ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ 16 ಜನ ಮೃತಪಟ್ಟಿದ್ದರು. ಆಗ,  ಸಿಖ್‌ರ ಉನ್ನತ ಮಟ್ಟದ ನೀತಿ ನಿರ್ಧಾರಕ ಸಮಿತಿಯಾಗಿರುವ ಸುವರ್ಣ ಮಂದಿರದ ಅಕಾಲ್‌ ತಖ್ತ್‌, ನಿರಂಕಾರಿಗಳ ಜತೆಗಿನ ಸಾಮಾಜಿಕ ಸಂಪರ್ಕ ನಿಷೇಧಿಸಿ ಆದೇಶ ಹೊರಡಿಸಿತ್ತು. ಪಂಜಾಬಿ ಭಾಷೆಯಲ್ಲಿಯೇ ಹೇಳುವುದಾದರೆ ‘ರೋಟಿ – ಬೇಟಿ ಕಾ ಸಂಬಂಧ’ ಕಡಿದುಕೊಳ್ಳಲು ಸೂಚಿಸಲಾಗಿತ್ತು. ಅಂದರೆ ನಿರಂಕಾರಿಗಳ ಜತೆ ಮದುವೆ ಸಂಬಂಧ ನಡೆಸುವುದು ಮತ್ತು ಅವರ ಜತೆಗೂಡಿ ಊಟ ಮಾಡುವುದನ್ನು ನಿರ್ಬಂಧಿಸಲಾಗಿತ್ತು.

ಬಿಳಿ ಪೇಟಾ ಧರಿಸುವ ನಾಮಧಾರಿಗಳು, ಸಿಖ್‌ರಲ್ಲಿಯೇ ಅತ್ಯಂತ ಸ್ನೇಹಮಯಿ ಮತ್ತು ಸೌಮ್ಯ ಸ್ವಭಾವದವರಾಗಿ ಗಮನ ಸೆಳೆಯುತ್ತಾರೆ. ಅವರ ಮುಖ್ಯಸ್ಥರಾಗಿದ್ದ ಜಗಜಿತ್‌ ಸಿಂಗ್‌ ಅವರಿಗೆ ಮಕ್ಕಳು ಇದ್ದಿರಲಿಲ್ಲ. ಹೀಗಾಗಿ ಅವರು ತಮ್ಮ ಇಬ್ಬರು ಸೋದರ ಸಂಬಂಧಿಗಳಿಗೆ ಈ ಪಂಥದ ನಾಯಕತ್ವದ ಹೊಣೆ ಒಪ್ಪಿಸಿದ್ದರು. ಅವರಲ್ಲೊಬ್ಬರಾದ ಉದಯ್ ಸಿಂಗ್‌ ಅವರು, ಎಲ್ಲರ ಪ್ರೀತಿ ಮತ್ತು ಗೌರವಾದರಗಳಿಗೆ ಪಾತ್ರರಾಗಿದ್ದ ಜಗಜಿತ್‌ ಸಿಂಗ್‌ ಅವರ ಪತ್ನಿ ‘ಬಾಬಾ’ ಚಾಂದ್‌ ಕೌರ್‌ ಅವರ ನೇತೃತ್ವದಲ್ಲಿ ಪಂಥವನ್ನು ಮುನ್ನಡೆಸುತ್ತಿದ್ದರು. 2016ರ ಏಪ್ರಿಲ್‌ 4ರಂದು ಮೋಟಾರ್‌ ಬೈಕ್‌ನಲ್ಲಿ ಬಂದಿದ್ದ ಬಂದೂಕುಧಾರಿಗಳು ಚಾಂದ್‌ ಕೌರ್‌ ಅವರನ್ನು ಗುಂಡಿಕ್ಕಿ ಸಾಯಿಸಿದ್ದರು. ಇಬ್ಬರೂ ಸೋದರ ಸಂಬಂಧಿಗಳು ಇದಕ್ಕೆ ಪರಸ್ಪರರ ವಿರುದ್ಧ ಆರೋಪ ಹೊರಿಸಿದ್ದರು.

ಪಂಜಾಬ್‌ನ ರೂಪ್‌ನಗರ ಜಿಲ್ಲೆಯ ನುರ್ಪುರ ಬೇಡಿಯಲ್ಲಿ ಇರುವ ಭನಿಆರಾ ಬಾಬಾ ಪಂಥವು, ಇತರ ಪಂಥಗಳಿಗೆ ಹೋಲಿಸಿದರೆ ಗಾತ್ರದಲ್ಲಿ ಚಿಕ್ಕದಾಗಿದೆ. ಈ ಪಂಥದ ಅನುಯಾಯಿಗಳ ಪೈಕಿ ಕಾಂಗ್ರೆಸ್ ಮುಖಂಡ ಬೂಟಾ ಸಿಂಗ್‌ ಪ್ರಮುಖರಾಗಿದ್ದಾರೆ. ಈ ಬಾಬಾನ ಕೃಪೆಯಿಂದಲೇ ತಮ್ಮ ಪತ್ನಿಯ ಗಂಭೀರ ಕಾಯಿಲೆ ವಾಸಿಯಾಗಿದೆ ಎಂದು ಬೂಟಾ ಸಿಂಗ್‌ ಬಲವಾಗಿ ನಂಬಿದ್ದರು. ಆದರೆ, 2001ರಲ್ಲಿ ಈ ಬಾಬಾ ತನ್ನ ಪವಾಡಗಳ ಕುರಿತು ‘ಭವಸಾಗರ ಗ್ರಂಥ’ ಹೊರ ತಂದಾಗ, ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದರು. ಅವರನ್ನು ಧರ್ಮ ವಿರೋಧಿ ಮತ್ತು ಸ್ವಧರ್ಮ ಪರಿತ್ಯಾಗಿ ಎಂದು ಬೆಂಬಲಿಗರೇ ಘೋಷಿಸಿದ್ದರು. ಹರಿಯಾಣದಲ್ಲಿ ಕೋರ್ಟ್‌ ವಿಚಾರಣೆಗೆ ಹಾಜರಾಗಲು ಹೋಗುತ್ತಿದ್ದಾಗ ಬಬ್ಬರ್‌ ಖಾಲ್ಸಾದ ಹಂತಕನು ಇವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದನು.

ಇನ್ನೊಬ್ಬ ಬಾಬಾ, ‘ಮಂಜಿನಪೆಟ್ಟಿಗೆಯ ಬಾಬಾ’ ಎಂದೇ ಖ್ಯಾತಿ ಪಡೆದಿದ್ದಾನೆ. ಬಿಹಾರದಿಂದ ಪಂಜಾಬ್‌ಗೆ ಬಂದಿದ್ದ ಅಶುತೋಷ್‌ಗೆ, ಲಕ್ಷಾಂತರ ಅನುಯಾಯಿಗಳಿದ್ದರು. 2014ರಲ್ಲಿ ಈತ ಮೃತಪಟ್ಟ. ಆದರೆ, ಬೆಂಬಲಿಗರ ಪ್ರಕಾರ ತಮ್ಮ ಬಾಬಾ ಸಮಾಧಿಗೆ ತೆರಳಿದ್ದು, ಮತ್ತೆ ಮರಳಿ ಬರಲಿದ್ದಾನೆ ಎಂದೇ ಅವರೆಲ್ಲ ಬಲವಾಗಿ ನಂಬಿದ್ದಾರೆ. ಇದೇ ಕಾರಣಕ್ಕೆ ಅವರು ಬಾಬಾನ ಮೃತ ದೇಹದ ಅಂತ್ಯಸಂಸ್ಕಾರ ನಡೆಸದೆ ಶವವನ್ನು ಮಂಜಿನಪೆಟ್ಟಿಗೆಯಲ್ಲಿ ಜೋಪಾನವಾಗಿ ಇಟ್ಟಿದ್ದಾರೆ. ಬಾಬಾ ಜೀವಂತವಾಗಿ ಮರಳಿ ಬರಲಿದ್ದಾನೆ ಎಂಬುದು ಅವರ ದೃಢ ನಂಬಿಕೆಯಾಗಿದೆ.

ಹೈಕೋರ್ಟ್‌ನಲ್ಲಿ ಮೂರು ವರ್ಷಗಳಿಂದ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಏಕ ವ್ಯಕ್ತಿ ಪೀಠವು ಅಂತ್ಯಸಂಸ್ಕಾರಕ್ಕೆ ಆದೇಶಿಸಿದ್ದರೂ, ವಿಭಾಗೀಯ ಪೀಠ ಅದನ್ನು ತಳ್ಳಿ ಹಾಕಿದೆ. ಭಕ್ತಾದಿಗಳು ಈಗಲೂ ‘ಅಶು ಬಾಬಾ ಆಯೇಂಗೆ’ (ಬಾಬಾ ಮರಳಿ ಬಂದೇ ಬರುತ್ತಾನೆ) ಎಂಬ ಮಂತ್ರ ಪಠಿಸುತ್ತಲೇ ಇದ್ದಾರೆ.

ಈ ಪ್ರದೇಶವು ಹಲವಾರು ಬಾಬಾಗಳ ಪ್ರಭಾವಕ್ಕೆ ಒಳಗಾಗಿರುವುದು ಸಮಾಜ ಶಾಸ್ತ್ರಜ್ಞರ ಅಧ್ಯಯನಕ್ಕೆ ಹೆಚ್ಚು ಅರ್ಹವಾಗಿದೆ. ಇದಕ್ಕೆ ಹಲವಾರು ವಿವರಣೆಗಳನ್ನು ನೀಡಲಾಗುತ್ತಿದೆ. ಆದರೆ, ಅವುಗಳ ಪೈಕಿ ನಾನು ತುಂಬ ಗಂಭೀರವಾಗಿ ತೆಗೆದುಕೊಂಡ ಕಾರಣವು ಹೆಚ್ಚು ಆಸಕ್ತಿಕರವಾಗಿದೆ. ಇತರ ಪ್ರಮುಖ ಧರ್ಮಗಳಿಗೆ ಹೋಲಿಸಿದರೆ, ಸಿಖ್‌ ಧರ್ಮವು ಕೇವಲ 500 ವರ್ಷಗಳಷ್ಟು ಹಳೆಯದಾಗಿದ್ದು, ಇನ್ನೂ ಪರಿವರ್ತನೆ ಹೊಂದುತ್ತಲೇ ಇದೆ ಎನ್ನುವುದು ನನಗೆ ಹೆಚ್ಚು ಸಮಂಜಸವಾಗಿ ಕಾಣುತ್ತಿದೆ.

ಇದೊಂದು ಧರ್ಮ ಗ್ರಂಥಗಳಿಗೆ ಬದ್ಧವಾದ ಧರ್ಮವಾಗಿದೆ. ವಿವಿಧ ಪಂಥಗಳ ಬಾಬಾಗಳು ಮೂರು ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಬದುಕಿಗೆ ಸಂಬಂಧಿಸಿದಂತೆ ಸೀಮಿತ ಸಂಖ್ಯೆಯ ನಿರ್ಬಂಧಗಳನ್ನು ವಿಧಿಸಿ ಧರ್ಮಗ್ರಂಥಗಳ ಪಾಲನೆಯನ್ನು ಸರಳಗೊಳಿಸುತ್ತಾರೆ. ಸಿಖ್‌ ಮತ್ತು ಹಿಂದೂ ಧರ್ಮಪಾಲನೆಯು ಒಂದರ ಮೇಲೊಂದು ಪ್ರಭಾವ ಬೀರಿರುವುದರಿಂದ ಬಾಬಾಗಳು ಎರಡೂ ಧರ್ಮಗಳಿಂದ ತಮಗಿಷ್ಟದ ನಿಯಮಗಳನ್ನು ಆಯ್ಕೆ ಮಾಡಿಕೊಂಡು ಜನರಿಗೆ ಇಷ್ಟವಾಗುವ ಹೈಬ್ರಿಡ್‌ ಸಲಹೆ ನೀಡುತ್ತಾರೆ.
ಚಲನಚಿತ್ರ, ಹಾಡು, ಮೋಟಾರ್‌ ಸೈಕಲ್‌ ಪ್ರೀತಿ, ಆಡಂಬರದ ಬದುಕಿನಿಂದಾಗಿ ಎಲ್ಲ ಬಾಬಾಗಳ ಪೈಕಿ ರಾಂ ರಹೀಂ ಹೆಚ್ಚು ಜನಪ್ರಿಯನಾಗಿದ್ದಾನೆ. ಇದೇ ಕಾರಣಕ್ಕೆ 35 ವರ್ಷಗಳ ಹಿಂದೆ ನಿರಂಕಾರಿಗಳ ವಿರುದ್ಧ ಅಕಾಲ್‌ ತಖ್ತ್‌  ತಾನೇ ಜಾರಿ ಮಾಡಿದ್ದ ಸಾಮಾಜಿಕ ಬಹಿಷ್ಕಾರ ಹಿಂತೆಗೆದುಕೊಂಡು ರಾಂ ರಹೀಂ ಅನುಯಾಯಿಗಳ ಜತೆ ಸಂಬಂಧ ಕುದುರಿಸಬಹುದು ಎಂದು ಹೊಸ ಆದೇಶ ಹೊರಡಿಸುತ್ತದೆ.

ಈತನ ಬೆಂಬಲಿಗರ ವೋಟಿನ ಮೇಲೆ ಕಣ್ಣಿಟ್ಟಿದ್ದ ಅಕಾಲಿ – ಬಿಜೆಪಿ ಸರ್ಕಾರ, ಈತನ ‘ವಿಡಿಯೊ ಕ್ಷಮಾಪಣೆ’ ಪರಿಗಣಿಸಿ ಆತನನ್ನು ಕ್ಷಮಿಸುತ್ತದೆ. ಇದಕ್ಕೆ ಬೆಂಬಲಿಗರಿಂದ ಪ್ರತಿಭಟನೆ ಕಂಡು ಬಂದಾಗ ಸರ್ಕಾರವು ಕ್ಷಮೆಯನ್ನು ವಾಪಸ್‌ ಪಡೆಯುತ್ತದೆ. ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅಕಾಲಿ – ಬಿಜೆಪಿ ಮೈತ್ರಿಕೂಟ ಬೆಂಬಲಿಸಬೇಕು ಎಂದು ಈತ ತನ್ನ ಬೆಂಬಲಿಗರಿಗೆ ಅಪ್ಪಣೆ ಕೊಡಿಸಿದ್ದ. ಆತನ ವಿರುದ್ಧದ ಹಲವು ಪ್ರಕರಣಗಳ ಪೈಕಿ ಒಂದು ಪ್ರಕರಣದಲ್ಲಿ ಆತ ತಪ್ಪಿತಸ್ಥ ಎಂಬುದು ಈಗ ಸಾಬೀತಾಗಿದೆ.
ಬಾಬಾಗಳ ಇಂತಹ ವೋಟ್ ಬ್ಯಾಂಕ್‌ ಮತ್ತು ರಾಜಕಾರಣಿಗಳ ದುರಾಸೆಯು ಪಂಜಾಬ್‌ ಮತ್ತು ಹರಿಯಾಣ ರಾಜ್ಯಗಳ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಕಾಂಗ್ರೆಸ್‌, ಬಿಜೆಪಿ ಈ ಬಾಬಾಗಳಿಂದ ಸಾಕಷ್ಟು ರಾಜಕೀಯ ಪ್ರಯೋಜನ ಪಡೆದಿವೆ. ಅಕಾಲಿಗಳೂ ಈ ಪಂಥವನ್ನು ನಿರಂತರವಾಗಿ ಪೋಷಿಸಿಕೊಂಡೇ ಬಂದಿದ್ದಾರೆ.

ಸಿರ್ಸಾದಿಂದ ಪ್ರಕಟವಾಗುವ ‘ಪೂರಾ ಸಚ್‌’ ಪತ್ರಿಕೆಯ ದಿಟ್ಟ ಪತ್ರಕರ್ತ ರಾಂ ಚಂದರ್‌ ಛತ್ರಪತಿ ಅವರು, ರಾಂ ರಹೀಂ ಎಸಗಿದ್ದ ಅತ್ಯಾಚಾರ ಪ್ರಕರಣದ ಬೆನ್ನತ್ತಿ, ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಇದೇ ಕಾರಣಕ್ಕೆ ಅವರನ್ನು ಕೊಲೆ ಮಾಡಿ ದಕ್ಕಿಸಿಕೊಳ್ಳಲಾಗಿತ್ತು. ಅಲ್ಲಿಂದಾಚೆಗೆ ಕೆಲ ಬಾಬಾಗಳು ತಾವು ಕಾನೂನಿಗೆ ಅತೀತರು ಎಂದೇ ಪರಿಗಣಿಸುತ್ತ ಬಂದಿದ್ದಾರೆ. ಸಿಬಿಐ ಕೋರ್ಟ್‌ನ ನ್ಯಾಯಮೂರ್ತಿ ಜಗದೀಪ್‌ ಸಿಂಗ್‌ ಅವರು ಅತ್ಯಾಚಾರ ಪ್ರಕರಣದಲ್ಲಿ ರಾಂ ರಹೀಂ ತಪ್ಪಿತಸ್ಥ ಎಂದು ತೀರ್ಪು ನೀಡಿರುವುದು ಇಂತಹ ಬಾಬಾಗಳ ಭವಿಷ್ಯಕ್ಕೆ ಹೊಸ ತಿರುವು ನೀಡಲಿದೆ. ಬಾಬಾಗಳ ಸ್ವಯಂ ಘೋಷಿತ ದೇವಮಾನವ ಧೋರಣೆಗೂ ಈ ತೀರ್ಪು ಹೊಸ ಭಾಷ್ಯ ಬರೆದಿದೆ.

(ಲೇಖಕ ಮೀಡಿಯಾಸ್ಕೇಪ್‌ ಪ್ರೈ.ಲಿ.ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT