ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ಯಾನ ಮತ್ತು ಧಾವಂತ

Last Updated 7 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಧ್ಯಾನವೆಂದರೆ ಚಕ್ಕಂಬಕ್ಕಳೆ ಕುಳಿತು ಬಾಯಿ ಮುಚ್ಚಿ ಮೂಗಿನ ಹೊಳ್ಳೆಗಳಿಂದ ಪರ್ಯಾಯವಾಗಿ ಉಸಿರಾಡುವುದಲ್ಲ; ನಾವು ನೆಚ್ಚಿರುವ ಕೆಲಸವನ್ನು ತೀವ್ರ ಶ್ರದ್ಧೆಯಿಂದ ಸೂಕ್ಷ್ಮವಾಗಿ ಗ್ರಹಿಸಿ, ಆ ಕೆಲಸವು ಅಚ್ಚುಕಟ್ಟಾಗಿ ಮುಗಿಯಲು ಬಯಸುವಷ್ಟು ಸಮಯವನ್ನು ಮೀಸಲಿಟ್ಟು, ಅದನ್ನು ದೇಹ ಮತ್ತು ಮನಸ್ಸುಗಳಿಗಿರುವ ಚೈತನ್ಯವನ್ನು ಪೂರ್ಣವಾಗಿ ಬಳಸಿ ದಣಿವರಿಯದಂತೆ ಮುಗಿಸುವುದು.

ಅದು ಮಡಕೆ ಮಾಡುವ ಕುಂಬಾರನ ಕಾಯಕವಿರಬಹುದು, ಶಸ್ತ್ರಚಿಕಿತ್ಸೆ ಮಾಡುವ ವೈದ್ಯನ ಕೆಲಸವಿರಬಹುದು, ನೂರಾರು ಕಡತಗಳನ್ನು ವಿಲೇವಾರಿ ಮಾಡುವ ಅಧಿಕಾರಿ ಅಥವಾ ಮಂತ್ರಿಯ ಹೊಣೆಗಾರಿಕೆ ಇರಬಹುದು, ಪೈಲಟ್‌ನಿಂದ ಹಿಡಿದು ಗಾರೆ ಕೆಲಸದವನವರೆಗೆ, ಚಕ್ಕಡಿ ಹೊಡೆಯುವ ರೈತನಿಂದ ಚಂದ್ರಲೋಕಕ್ಕೆ ಹೊರಟ ಗಗನಯಾತ್ರಿಯವರೆಗೆ ಯಾವುದೂ ಇರಬಹುದು.

ಧ್ಯಾನವೆಂಬುದು ದೈನಂದಿನ ಬದುಕಿನ ಪ್ರತಿಯೊಬ್ಬರ ಮತ್ತು ಪ್ರತಿ ಚಟುವಟಿಕೆಯ ಅಗತ್ಯ. ಹೂ ಪೋಣಿಸುವ, ಬೀಡಿ ಕಟ್ಟುವ, ತೂರುವ, ಕೇರುವ, ಬೆಸುಗೆ ಹಾಕುವ, ಕೆತ್ತುವ, ಮೀನು ಹಿಡಿಯುವ, ಬೇಟೆ ಆಡುವ, ಗುರಿ ಇಡುವ, ದೋಣಿ ನಡೆಸುವ, ಮರ ಹತ್ತುವ, ಹಾಲು ಕರೆಯುವ, ಮೊಸರು ಕಡೆಯುವ, ತರಾವರಿ ರಿಪೇರಿ ಮಾಡುವ, ವಾಹನ ಚಾಲನೆ ಮಾಡುವ, ಪಾಠ ಮಾಡುವ, ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವ, ವಾದ ಮಂಡಿಸುವ, ತೀರ್ಪು ಬರೆಯುವ ಎಲ್ಲರಿಗೂ ಧ್ಯಾನವೆಂಬುದು ಜೀವಶಕ್ತಿ.

ಧ್ಯಾನಗೇಡಿ ಕೆಲಸ ಕೆಡಿಸುತ್ತಾನೆ. ಅವನನ್ನು ಅಡ್ಡಕಸುಬಿ ಎನ್ನುತ್ತಾರೆ. ಅರೆಮನಸ್ಸಿನಲ್ಲಿ ಕೆಲಸ ಮಾಡುವವರು ಅಡ್ಡಕಸುಬಿಗಳು. ಇದಕ್ಕೆ ಉದಾಹರಣೆಗಳು ಅಪರಿಮಿತ. ಭಾರತದಲ್ಲಂತೂ ಕಣ್ಣು ಬಿಟ್ಟೆಡೆ ಎಲ್ಲ ಅಡ್ಡಕಸುಬಿಗಳು ರಾರಾಜಿಸುತ್ತಾರೆ. ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಓಡಿಸುವವರು, ವಿವರವಾಗಿ ಪರಿಶೀಲಿಸದೆ ಕಡತಗಳಿಗೆ ಸಹಿ ಹಾಕುವ ಅಧಿಕಾರಿಗಳು-, ಮಂತ್ರಿಗಳು, ವಿಧಾನಸಭೆ- ಲೋಕಸಭೆಗಳಂಥ ಗುರುತರ ಜಾಗದಲ್ಲಿ ಕುಳಿತು ತೂಕಡಿಸುವವರು, ಗ್ರಾಹಕನ ಪ್ರಶ್ನೆಗೆ ಮತ್ತು ಬೇಡಿಕೆಗೆ ತಪ್ಪು ಉತ್ತರ ಅಥವಾ ತಪ್ಪು ಪದಾರ್ಥ ಕೊಟ್ಟು ಕಳುಹಿಸುವ ವ್ಯಾಪಾರಿಗಳು, ರೋಗಿಯ ಕಷ್ಟ ಕೇಳುವ ಮುನ್ನವೇ ಔಷಧ ಕೊಟ್ಟು ಬಿಡುವ ವೈದ್ಯರು, ತಯಾರಿ ಇಲ್ಲದೆ ತರಗತಿಗೆ ಬಂದು ವ್ಯರ್ಥ ಶಂಖ ಊದಿ ಕಾಲ ತುಂಬಿಸುವ ಶಿಕ್ಷಕರು, ಮೆಸೇಜು ಟೈಪು ಮಾಡುತ್ತಾ ರಸ್ತೆ ದಾಟುವವರು, ಸೀರಿಯಲ್ ನೋಡುತ್ತಾ ಅಡುಗೆ ಮಾಡುವ ಗೃಹಿಣಿ... ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು.

ಕಣ್ಣು ಒಂದು ಕಡೆ, ಮನಸ್ಸು ಇನ್ನೊಂದು ಕಡೆ, ಕೈಗಳು ಮತ್ತೊಂದು ಕಡೆ. ಏಕಾಗ್ರತೆ ಇಲ್ಲದ ಧ್ಯಾನಹೀನ ಮನುಷ್ಯ ಮಾಡುವ ಕೆಲಸ ವ್ಯರ್ಥ ಮಾತ್ರವಲ್ಲ; ಅಪಾಯಕಾರಿ ಕೂಡಾ. ಇದರಿಂದ ಅಪಘಾತ, ಅವಾಂತರ, ಜೀವಹಾನಿ, ಮಾನಹಾನಿ, ಅರ್ಥಹಾನಿ, ಕಾಲಹರಣ ಎಲ್ಲವೂ ಸಾಧ್ಯ. ಕಸ ಗುಡಿಸುವ ಕೆಲಸವನ್ನೂ ಧ್ಯಾನಸ್ಥ ಸ್ಥಿತಿಯಲ್ಲಿ ಮಾಡಿದರೆ ಬೀದಿಗಳು ಮಾತ್ರವಲ್ಲ ದೇಶವೇ ಚೊಕ್ಕಟವಾಗಿಬಿಡುತ್ತದೆ. ಈಗ ಇಲ್ಲಿ ಕಟ್ಟಕಡೆಯ ಮನುಷ್ಯನೂ, ಆಳುವ ಪ್ರಭುಗಳೂ ಒಟ್ಟಿಗೇ ಧ್ಯಾನ ನೀಗಿಕೊಂಡಿದ್ದಾರೆ.

ಇದಕ್ಕೆ ಕಾರಣವೇನು? ಕೆಲವರ ಪ್ರಕಾರ ಆಧುನಿಕ ಕಾಲದ ವೇಗದ ಮನೋಧರ್ಮ. ಇದು ಸ್ವಲ್ಪ ಮಟ್ಟಿಗೆ ಸರಿಯಾದ ಉತ್ತರ. ಓಡುವವನಿಗೆ ಧ್ಯಾನ ಅಸಂಭವ. ಓಡುವ ವೇಗಕ್ಕೆ ಎಡಬಲದವನ ಕಷ್ಟಕಾರ್ಪಣ್ಯಗಳು ಕಾಣಿಸಲಾರವು. ಗುರಿಮುಟ್ಟುವ ಧಾವಂತದಲ್ಲಿ ಅವನಿಗೆ ಅಂತಃಕರಣ ಆರ್ದ್ರಗೊಳ್ಳಲು ಪುರುಸೊತ್ತಿರುವುದಿಲ್ಲ. ಎಲ್ಲರಿಗೂ ಬದುಕುವ, ಮುಂದೆ ಬರುವ ಅವಕಾಶವಿದ್ದ ವ್ಯವಸ್ಥೆಯಲ್ಲಿ ಹೀನಾಯ ಸ್ಪರ್ಧೆಗಳಿರುವುದಿಲ್ಲ. ಒಂದು ಹುದ್ದೆ-ಗೆ ಲಕ್ಷ ಅರ್ಜಿಗಳು ಇದ್ದಾಗ ನೂಕು ನುಗ್ಗಲು, ಕಾಲ್ತುಳಿತ. ಹೀನಾಯ ಸ್ಪರ್ಧೆ- ಧ್ಯಾನದ ಪರಮಶತ್ರು. ನಾವು ಓಡುತ್ತ ಓಡುತ್ತ ಧ್ಯಾನ ಕಳೆದುಕೊಂಡೆವು.

ಈಗ ಧ್ಯಾನದ ಜಾಗಕ್ಕೆ ಧಾವಂತ ಬಂದು ಕುಳಿತಿದೆ. ಅದಕ್ಕೆ ಪೂರಕ ಸಲಕರಣೆಗಳು ಬಂದಿವೆ. ಸ್ವಿಚ್ ಹಾಕಿದ್ರೆ ಎಲ್ಲ ಅದೇ ಮಾಡುತ್ತೆ- ಅನ್ನುವ ಪರಿಕಲ್ಪನೆ ಈಗ ಎಲ್ಲರಿಗೂ ಇಷ್ಟ. ಮೊನ್ನೆ ನನ್ನ ಗೆಳೆಯ ನನಗೆ ಮಾರಲು ಒಂದು ಮೆಶೀನು ತಂದಿದ್ದ. ಅದಕ್ಕೆ ಕೊಳವೆ, ಚೀಲ, ಡಿಜಿಟಲ್ ರೀಡಿಂಗು ಏನೇನೋ ಇತ್ತು. ನಾನು ಅದು ಧೂಳು ಹೀರುವ ವ್ಯಾಕ್ಯೂಮ್ ಕ್ಲೀನರ್ ಇರಬೇಕು ಅಂತ ಭಾವಿಸಿದ್ದರೆ, ಅವನು ಹೇಳಿದ: ಇದು ಪ್ರಾಣಾಯಾಮ ಮಾಡುವ ಮೆಶಿನ್ನು. ನೀನು ಮೂಗಿಗೆ ತಗುಲಿ ಹಾಕ್ಕೊಂಡ್ರೆ ಸಾಕು ಅದೇ ಪ್ರಾಣಾಯಾಮ ಮಾಡಿಸುತ್ತೆ.

ನೀನು ಆಫೀಸ್ ಕೆಲ್ಸ ಮಾಡ್ತಾ ಇರಬಹುದು, ಸ್ವಿಚ್ ಹಾಕಿ ಬಿಟ್ರೆ ಆಯ್ತು. ಕಡೇಲಿ ತೋರ್ಸುತ್ತೆ... ನೀನು ಎಷ್ಟು ಆಕ್ಸಿಜನ್ ಕುಡಿದಿದ್ದೀಯಾ? ಅಂತ. ಬೇಡ ಮಾರಾಯಾ, ನನಗೆ ಗೊತ್ತಿರುವ ಪ್ರಾಣಾಯಾಮ ಸಾಕು ಎಂದು ವಾಪಸ್ ಕಳಿಸಿದೆ. ಅದು ನನಗೆ ಈ ಶತಮಾನದ ದೊಡ್ಡ ವಿಡಂಬನೆಯಂತೆ ಕಂಡಿತು. ಮುಂದೆ ಇದರಲ್ಲಿ ಏನೇನು ಸುಧಾರಿತ ಬ್ರಾಂಡುಗಳು ಬರಲಿವೆಯೋ. ಯಂತ್ರಗಳನ್ನು ದೇಹದ ಯಾವ ಯಾವ ಭಾಗಕ್ಕೆ ತಗುಲಿಸಿಕೊಂಡು ಓಡಾಡಬೇಕಾದೀತೋ.

ಯಂತ್ರಗಳದ್ದೇನೂ ತಪ್ಪಿಲ್ಲ. ಮನುಷ್ಯನ ಕಠಿಣ ದೈಹಿಕ ಶ್ರಮವನ್ನು ಕಳೆದು ಸರಳಗೊಳಿಸುವ ಯಂತ್ರಗಳು ಸ್ವಾಗತಾರ್ಹವೇ. ಕೆಮೆರಾ, ಕಂಪ್ಯೂಟರ್, ಮೊಬೈಲ್, ಟಿ.ವಿ ಮುಂತಾದವುಗಳಿಂದ ಬಹು ಉಪಯೋಗ ದಕ್ಕಿದೆ. ಅಪರಾಧ ಪತ್ತೆಗೆ, ಕಾರ್ಯಕ್ಷಮತೆಗೆ, ನಿಖರತೆಗೆ, ಮನರಂಜನೆಗೆ, ಅರಿವಿಗೆ ಇವು ನೆರವಾಗಿವೆ. ಆದರೆ ಮನುಷ್ಯನೇ ಒಂದು ಯಂತ್ರವಾಗಿಬಿಡಬಾರದು. ಮೊನ್ನೆ ಒಂದು ತಮಾಷೆ ಗಮನಿಸಿದೆ. ದೇವಸ್ಥಾನದಲ್ಲಿ ಘಂಟೆ ಬಾರಿಸಲು ಒಂದು ಮೆಶಿನ್ ಇಟ್ಟುಕೊಂಡಿದ್ದಾರೆ. ಭಕ್ತನೊಬ್ಬ ಕೈಯಿಂದ ಘಂಟೆ ಬಾರಿಸುವ ಮನೋಧರ್ಮಕ್ಕೂ, ಮೆಶಿನ್ ಘಂಟೆ ಬಾರಿಸುವುದಕ್ಕೂ ಎಷ್ಟೊಂದು ವ್ಯತ್ಯಾಸವಿದೆ! ಇದು ಯಂತ್ರ ಸಂಸ್ಕೃತಿಯ ದುರುಪಯೋಗ.

ನಿಮ್ಮ ಬೆರಳು ಗಂಟೆಗೆ ಸೋಂಕುವುದು, ಘಂಟಾನಿನಾದ ಹರಡುವುದು -ಆಸ್ತಿಕನೊಬ್ಬ ಈ ಅನುಭವವನ್ನು ಯಂತ್ರಕ್ಕೆ ಒಪ್ಪಿಸಿದರೆ ಭಕ್ತಶಿರೋಮಣಿಗೆ ಲುಕ್ಸಾನು ಅಲ್ಲವೆ ? ಇದು ಧ್ಯಾನ ಮರೆತು, ಧಾವಂತಕ್ಕೊಳಗಾದ ಯಾವನೋ ಅಡ್ಡಕಸುಬಿ ಭಕ್ತನ ತುರ್ತು ಸಂಶೋಧನೆ ಇರಬೇಕು. ಅಂತೆಯೇ ಎಲೆಕ್ಟ್ರಿಕಲ್ ಉಪಕರಣದಿಂದ ಶ್ರುತಿ ಮಾಡಿಕೊಳ್ಳುವ ಸಂಗೀತಗಾರರು. ತಂಬೂರದಿಂದ ಶ್ರುತಿ ಮಾಡಿದರೇನೇ ನಿಜವಾದ ಸೊಗಸು. ಇದು ಸಂಗೀತಗಾರ ಧ್ಯಾನಿಯಾದರೆ ಮಾತ್ರ ಸಾಧ್ಯ.

ಧ್ಯಾನವೆಂದರೆ ತೂಕಡಿಕೆ ಅಲ್ಲ ; ಆಲಸ್ಯವಲ್ಲ. ಒಂದು ಸಾವಧಾನ ಸ್ಥಿತಿ. ಸಾವಧಾನ ಸ್ಥಿತಿಯೊಂದನ್ನು ಕಾಯ್ದಿರಿಸಿಕೊಳ್ಳುವುದು ಇವತ್ತಿನ ಸಂದರ್ಭದಲ್ಲಿ ಕಷ್ಟ ಸಾಧ್ಯವಲ್ಲವೆ? ಪ್ರಜ್ಞಾ ಪೂರ್ವಕವಾಗಿ ಆ ಮನಸ್ಥಿತಿಯನ್ನು ಒಮ್ಮೆ ತಂದುಕೊಂಡು ಆನಂದಿಸಲು ಆರಂಭಿಸಿದರೆ- ಎಂಥ ವೇಗದ, ಒತ್ತಡದ ಸನ್ನಿವೇಶದಲ್ಲೂ ಒಳಗೆ ತಣ್ಣಗಿರಲು ಸಾಧ್ಯ. ಇದರಿಂದಾಗುವ ಪ್ರಯೋಜನಗಳು ಹಲವು.

 ೧. ಎಲ್ಲವನ್ನೂ ಅಂತರದಿಂದ, ನಿರ್ಲಿಪ್ತತೆಯಿಂದ ನೋಡಬಹುದು. ೨. ನಿರುದ್ವಿಗ್ನ ಮನಸ್ಥಿತಿಯಿಂದ ನಿರ್ಣಯಗಳನ್ನು ತೆಗೆದುಕೊಳ್ಳಬಹುದು. ೩. ಅನಗತ್ಯ ಸಂಘರ್ಷ, ವೈರ, ತಂತ್ರ, ಹುನ್ನಾರ, ಮೇಲಾಟಗಳಿಂದ ಮುಕ್ತಿ. ೪. ವಸ್ತು ವಿಷಯ ವ್ಯಕ್ತಿಗಳನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಮತ್ತು ನಿಯಂತ್ರಿಸುವ ಶಕ್ತಿ. ೫. ವಿಹಂಗಮ ನೋಟದ ವೈಶಾಲ್ಯತೆಯಿಂದ ಪ್ರಬುದ್ಧತೆ. ೬. ಪ್ರಶ್ನಾತೀತ ಸ್ಥಿತಿ ತಲಪುವ ಅಪೂರ್ವ ಅವಕಾಶ. ೭. ಒತ್ತಡರಾಹಿತ್ಯದಿಂದ ಲಭಿಸುವ ದೈಹಿಕ ಮತ್ತು ಮಾನಸಿಕ ಆರೋಗ್ಯ. ೮. ಹೆಚ್ಚು ಕೆಲಸ ಮಾಡುವ ಚೈತನ್ಯ ಪ್ರಾಪ್ತಿ. ೯. ಯೋಗ್ಯರಷ್ಟೇ ನಿಮ್ಮ ಜೊತೆ ಉಳಿಯುತ್ತಾರೆ ಎಂಬ ಸಮಾಧಾನ. ೧೦. ಪೂರ್ವಾಗ್ರಹವಿಲ್ಲದೆ ಬದುಕಬಲ್ಲ ಅಪೂರ್ವ ಮನಸ್ಥಿತಿ.

ವಿವಾಹ ವಿಚ್ಛೇದನಗಳು ಏಕೆ ಹೆಚ್ಚಾಗುತ್ತಿವೆ? ಮುಖ್ಯವಾದ ಕಾರಣ ಧಾವಂತಕ್ಕೆ ಬಿದ್ದ ಮನಸ್ಸು ಅಸಹನೆಯ ಕಾವಲಿಯ ಮೇಲೆ ಕೊತ ಕೊತ ಕುದಿಯುವುದು. ಸಹಯಾತ್ರಿಯನ್ನು ಅರ್ಥಮಾಡಿಕೊಳ್ಳುವ, ತಿದ್ದುವ, ಸಹಿಸಿಕೊಳ್ಳುವ ಧಾರಣ ಶಕ್ತಿಯು ಇಂಗಿ ಹೋಗಿರುವುದು. ನವದಂಪತಿಗಳಿಬ್ಬರು ಆಗಷ್ಟೇ ಬೆಳಗಲು ಇಟ್ಟ ಹಣತೆಗಳಂತಿರುತ್ತಾರೆ. ಅವರು ಪರಸ್ಪರ ಹಚ್ಚಿಕೊಂಡು ಬೆಳಗಬೇಕು. ಈಗ ಹಣತೆಗಳಿವೆ; ಹಚ್ಚುವವರಿಲ್ಲ. ಬೇರೆಯವರು ಬಂದು ಹಚ್ಚಲಿ ಎಂದು ಕಾಯುವುದು ಅಪಾಯ. ಅವರು ದೀಪ ಹಚ್ಚುವುದರ ಬದಲು ಬೆಂಕಿ ಹಚ್ಚಿಯಾರು.

ಈಗ ವಿಚ್ಛೇದನಗಳನ್ನು ನಿಭಾಯಿಸಲೆಂದೇ ಪ್ರತ್ಯೇಕ ನ್ಯಾಯಾಲಯ ಇರುವಷ್ಟು ಅಮಿತ ಸಂಖ್ಯೆಯಲ್ಲಿ ವಿಚ್ಛೇದನಗಳಾಗುತ್ತಿವೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ವಿಚ್ಛೇದನ ಅನಿವಾರ್ಯವಾಗಬೇಕು. ನಿತ್ಯ ಬೆಡ್ ಕಾಫಿ ಕೊಡುತ್ತಿಲ್ಲ ಎಂದು ಗಂಡ ವಿಚ್ಛೇದನಕ್ಕೆ ಅರ್ಜಿ ಹಾಕಿದ ಪ್ರಕರಣವೊಂದು ನನಗೆ ಗೊತ್ತು. ಹೀಗೆ ಧಾವಂತಕ್ಕೆ ಒಡ್ಡಿಕೊಂಡ ವ್ಯಕ್ತಿಗಳು ಈಗ ಮನೆಯೊಳಗೂ, ಸಮಾಜದಲ್ಲಿಯೂ ಹೆಚ್ಚುತ್ತಿದ್ದಾರೆ. ಇದು ಕೆಟ್ಟವರಲ್ಲದ ಜನ, ಕೆಟ್ಟದ್ದಾಗಿ ಬದುಕುವ ವಿಪರ್ಯಾಸ. ಸಣ್ಣ ತಿದ್ದುಪಡಿಯಿಂದ ನೇರ್ಪು ಮಾಡಿಕೊಳ್ಳಬಹುದಾದ ಸಂಗತಿಯನ್ನು ದುಡುಕು ಧಾವಂತಗಳಿಂದ ರಂಪ ರಾದ್ದಾಂತ ಮಾಡಿಕೊಳ್ಳುತ್ತಾರೆ.

ಧ್ಯಾನ ಮತ್ತು ಧಾವಂತ ಎರಡೂ ಒಂದೇ ನಾಣ್ಯದ ಎರಡು ಮುಖಗಳು ಎಂದು ಮೊನ್ನೆ ನಡೆದ ಪ್ರಸಂಗ ಒಂದರಿಂದ ವೇದ್ಯವಾಯಿತು. ನನ್ನ ಪರಮಪೂಜ್ಯ ಕವಿ ಮಿತ್ರರು ತಾವು ಕೊಂಡ ಹೊಸ ಕಾರಿನಲ್ಲಿ ಕೂರಿಸಿಕೊಂಡು ಹೊರಟಿದ್ದರು. ಮೆದುಮಾತಿಗೆ, ಸಂಪನ್ನತೆಗೆ, ಮುಗುಳ್ನಗೆಗೆ ಅವರು ಹೆಸರುವಾಸಿ. ಜೆಸಿ ರಸ್ತೆಯಲ್ಲಿ ಬೈಕಿನ ಹುಡುಗ ಓವರ್‌ಟೇಕ್ ಮಾಡಲು ಹೋಗಿ ಕಾರಿಗೆ ತುಸು ತಾಕಿಸಿದ. ಪೂಜ್ಯರು ಕಾರಿನಿಂದ ಇಳಿದು ಕೋಪಾತಿರೇಕದಿಂದ ಕೂಗಾಡಿದರು. ಕೋಗಿಲೆ, ಹಂಸ, ಮಳೆಬಿಲ್ಲು ಅಂತ ಪದ್ಯ ಬರೆಯುತ್ತಿದ್ದವರು ಅಶ್ಲೀಲ ಪದಗಳನ್ನು ಪುಂಖಾನುಪುಂಖವಾಗಿ ಉದುರಿಸಿದರು. ಅದು ಬೆಂಗಳೂರು ಟ್ರಾಫಿಕ್‌ನ ಮಹಿಮೆ. ಅದು ಎಂಥ ಧ್ಯಾನಿಯನ್ನೂ ಧಾವಂತಕ್ಕೆಳಸುತ್ತದೆ.

ಧ್ಯಾನ ಎಂದ ಕೂಡಲೇ ಹಲವರು ಹಿಮಾಲಯ, ತಪಸ್ಸು, ಮೋಕ್ಷ ಮುಂತಾದ ಪದಗಳು ನೆನಪಾಗಿ ಗಾಬರಿಯಾಗಿಬಿಡುತ್ತಾರೆ. ಸಾಮಾನ್ಯ ಮನುಷ್ಯರಾದ ನಾವೆಲ್ಲ ಲೌಕಿಕದಲ್ಲಿ ಮುಳುಗಿಯೂ ಧ್ಯಾನಸ್ಥರಾಗಬಹುದು. ಸರಳವಾಗಿ ಹೇಳಬೇಕೆಂದರೆ ಧ್ಯಾನವೆಂದರೆ ತಾಳ್ಮೆ. ತಾಳ್ಮೆಯು ಹೇಡಿತನವಾಗದಂತೆ ಸೂಕ್ಷ್ಮವಾಗಿ ಬದುಕನ್ನು ಗ್ರಹಿಸುವುದು. ಗೌತಮನಂತೆ ಮನೆ, ಮಠ, ಮಡದಿ ಮಗನನ್ನು ಬಿಟ್ಟು ಹೋಗುವುದು ನಮ್ಮಿಂದ ಆಗದಿರಬಹುದು. ಆದರೆ ಗೌತಮನ ಕೊನೆಯ ಬಿಂದು ನಮ್ಮ ಆರಂಭದ ಬಿಂದುವಾಗಬಹುದು. ಈಗ ಅಂಥ ಮೆಶಿನ್ನುಗಳೂ ಬಂದಿವೆ !

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT