ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಬಿಕೆಗಳನ್ನು ಅಲುಗಾಡಿಸಿದ ‘ಸರಿತಾ ಚರಿತೆ’

Last Updated 31 ಜುಲೈ 2014, 19:30 IST
ಅಕ್ಷರ ಗಾತ್ರ

ನಾನು ನನ್ನ ಜರ್ಮನಿ ವಾಸವನ್ನು ಕೊನೆ­ಗೊಳಿಸಿ ದೆಹಲಿಗೆ ಮರಳಿದ ಮೇಲೆ ನನ್ನ ಓಡಾಟಕ್ಕಾಗಿ ಒಂದು ಕಾರನ್ನು ಕೊಂಡೆ. ನನಗೆ ಡ್ರೈವಿಂಗ್ ಬರುವುದಿಲ್ಲವಾದ್ದರಿಂದ  ಮೊದಲೇ ನನ್ನ ವಿಭಾಗದ ಸಿಬ್ಬಂದಿ ಗೆಳೆಯರಿಗೆ ‘ಒಬ್ಬ ಒಳ್ಳೆ ಡ್ರೈವರನನ್ನು ಹುಡುಕಿಕೊಡಿ’ ಎಂದು ಕೇಳಿಕೊಂಡಿದ್ದೆ.

ನನ್ನ ಮತ್ತು ಡ್ರೈವರ್‌ಗಳ ಸಂಬಂಧ ಎಂದೂ ಅಷ್ಟು ಸುಗಮವಾಗಿರಲಿಲ್ಲ. ನಾನವರಿಗೆ ಅತಿ ಸಲುಗೆ ಕೊಡುತ್ತೇನೆಂದು ನನ್ನ ಗೆಳೆಯರೆಲ್ಲರ ಆಪಾದನೆ. ‘ಓನರ್ರು ಓನರ್‌ ಹಾಗಿದ್ದರೆ ಡ್ರೈವರ್ರೂ ಡ್ರೈವರ್‌ ಹಾಗೆ ಇರುತ್ತಾನೆ, ಇಲ್ಲ­ದಿದ್ದರೆ ತಲೆ ಮೇಲೆ ಕೂಡುತ್ತಾನೆ’- ಇದು ನನ್ನ ಬಹು­ತೇಕ ಗೆಳೆಯರ ಅಮೃತವಾಣಿ. ಆದರೆ ಎಷ್ಟು ಪ್ರಯತ್ನ ಪಟ್ಟರೂ ನನಗೆ ಹಾಗಿರ­ಲಾಗು­ವುದಿಲ್ಲ. ಅವರನ್ನು ಮನೆ ಮಕ್ಕಳಂತೆ ನೋಡಿ­ಕೊಳ್ಳು­ತ್ತೇನೆ. ಇದರಿಂದ ಹಲವು ಸಲ ಏಟು ತಿಂದದ್ದೂ ಉಂಟು.

ಬೇರೆಯವರಿಂದ ಭಿನ್ನವಾಗಿ ನಡೆಸಿ­ಕೊಂಡ ಕೂಡಲೇ ಡ್ರೈವರುಗಳು ಸದರ­ವಾಗಿ ನಡೆದುಕೊಳ್ಳತೊಡಗುತ್ತಾರೆ. ಕೊನೆ­ಗೊಮ್ಮೆ ಇದು ವಿಕೋಪಕ್ಕೆ ಬಂದು ಬಿಡುತ್ತದೆ.  ನನ­ಗೇನೂ ವ್ಯಸನವಿಲ್ಲ. ನನ್ನ ಸ್ವಭಾವ­ಕ್ಕನು­ಗುಣ­ವಾಗಿ ನಡೆದುಕೊಂಡರೆ ಮಾತ್ರ ನನಗೆ ಸುಖ­ನಿದ್ದೆ. ಇಲ್ಲದಿದ್ದರೆ ಅಶಾಂತಿ, ನಿದ್ರಾನಾಶ. ಬರುವ ಮುಂದಿನವನು ಒಂದಷ್ಟು ದಿನ ಸರಿಯಾಗಿದ್ದು ಮತ್ತೆ ಬಾಲ ಬಿಚ್ಚುತ್ತಾನೆ. ಅವನಾದ ಮೇಲೆ ಮತ್ತೊಬ್ಬ-. ಇದೊಂದು ಧಾರಾವಾಹಿ.

‘ಈ ಸಲ ಒಬ್ಬ ಒಳ್ಳೆ ಡ್ರೈವರ್‌ನನ್ನು ಹುಡುಕಿ­ಟ್ಟಿ­ದ್ದೇನೆ’ ಅಂತ ಸ್ನೇಹಿತರು ಮೊದಲೇ ತಿಳಿಸಿ­ದ್ದರು. ಬಹಳ ಅನುಭವಿಗಳೂ ನನ್ನ ಹಿತೈಷಿಗಳೂ ಆಗಿ­ರುವ ಸ್ನೇಹಿತರ ಮೇಲೆ ನನಗೆ ಪೂರ್ತಿ ನಂಬಿಕೆ. ಒಂದು ದಿನ ಹೊಸ ಡ್ರೈವರ್‌ರನ್ನು ಕರೆ­ತಂದರು. ಆಕೆ ಇಪ್ಪತ್ತರ ಹರೆಯದ ಹುಡುಗಿ ಎಂದು ನಾನು ನಿರೀಕ್ಷಿಸಿರಲಿಲ್ಲ. ಆ ಸ್ನೇಹಿತರ ಸಲ­ಹೆಗೆ ಇಲ್ಲವೆನ್ನಲು ಮನಸ್ಸು ಬರಲಿಲ್ಲ. ಒಬ್ಬ ಹುಡುಗಿ­ಯನ್ನು ಡ್ರೈವರಾಗಿ ನೇಮಕ ಮಾಡಿ­ಕೊಳ್ಳು­ವುದು ನನಗೆ ಊಹಿಸಲೂ ಸಾಧ್ಯವಿರ­ಲಿಲ್ಲ. ನನ್ನ ತೀರ್ಮಾನವನ್ನು ಎರಡು ದಿನಗಳ ನಂತರ ತಿಳಿಸುವುದಾಗಿ ಜಾರಿಕೊಂಡೆ. ‘ಗಂಡು ಡ್ರೈವರುಗಳು ಯಾಕೆ ಸಿಗಲಿಲ್ಲ’ ಎಂದು ವಿಚಾರಿಸಲಾಗಿ  ಒಬ್ಬ ಗಂಡು ಡ್ರೈವರನ್ನೂ ಅವರು ಹುಡುಕಿದ್ದರಾದರೂ ಆಮೇಲೆ ಅವನು ಪೆಟ್ರೋಲ್ ಕಳ್ಳನೂ ಗುಂಡು ಮಾಸ್ಟರನೂ ಆಗಿರುವುದು ತಿಳಿದುಬಂತಂತೆ.

ನನ್ನ ಎಲ್ಲ ಆತ್ಮೀಯರಿಗೆ ಫೋನಾಯಿಸಿದೆ. ಎಲ್ಲ­ರದೂ ಏಕಾಭಿಪ್ರಾಯ: ‘ಹುಡುಗಿಯನ್ನು ಖಂಡಿತಾ ನೇಮಕ ಮಾಡಿಕೊಳ್ಳಬೇಡಿ. ಇಳಿ­ವಯಸ್ಸಿನಲ್ಲಿ ನೆಮ್ಮದಿ ಬೇಕಾದ ಸಮಯದಲ್ಲಿ ನಿಮ­ಗೇಕೆ ಈ ಉಸಾಬರಿ? ಹೆಚ್ಚುಕಮ್ಮಿಯಾದರೆ ಜವಾಬು­ದಾರಿ ಯಾರದು? ಅಲ್ಲದೆ ನೀವು ಮೊದಲೇ ಮೊದ್ದು. ಆ ಹುಡುಗಿ ಎಂಥ ಪ್ರಚಂಡ­ಳಿ­ದ್ದಾಳೋ ನಿಮಗೇನು ಗೊತ್ತು? ನೀವು ಮನೆಗೆ ಬರುವುದು ಲೇಟಾದರೆ ಅವಳನ್ನು ತಿರುಗಿ ಕಳಿಸುವುದು ದೊಡ್ಡ ಸಮಸ್ಯೆ. ಮೊದಲೇ ದೆಹಲಿ ಮಾನಭಂಗದ ಮಹಾನಗರ. ತಡವಾದಾಗ,   ನೀವು ಪಾರ್ಟಿಯಲ್ಲಿರುವ ಸಮಯದಲ್ಲಿ ಆ ಹುಡುಗಿ ನಿಮ್ಮ ದುರುಪಯೋಗ ಮಾಡಿ ಕೊಂ­ಡರೆ? ಅಥವಾ ನೀವೇ ಮತ್ತಿನಲ್ಲಿ ಬಾಯಿಗೆ ಬಂದ­ದ್ದನ್ನು ಮಾತಾಡಿದರೆ? ನೂರು ಬಾರಿ ಯೋಚಿಸಿ’.

ಇನ್ನೂ ಹೈಸ್ಕೂಲು ಹುಡುಗಿಯ ಹಾಗೆ ಕಾಣುವ ಆ ಮುಗ್ಧ ಮುಖದ ಹುಡುಗಿ ನನಗೆ ಮೋಸ ಮಾಡುವಳೆಂಬ ಮಾತು ಸರಿ ಕಾಣಲಿಲ್ಲ. ಅಥವಾ ಗುಂಡಿನ ಅಮಲಲ್ಲಿ  ಅವ್ಯವಹಾರ ಮಾಡುವ ಭೀತಿಯೂ ನನ್ನನ್ನು ಕಾಡಲಿಲ್ಲ. ಗುಂಡು ನನ್ನ ಮಟ್ಟಿಗೆ ಶೆರೆಯಲ್ಲ, ಶಂಕರಿ. ಆದರೆ ನನ್ನನ್ನು ಕಾಡಿದ ಸಮಸ್ಯೆಗಳಿವು: ರಾತ್ರಿ ಲೇಟಾ­ದರೆ ಅವಳನ್ನು ಸುರಕ್ಷಿತವಾಗಿ ದೂರದಲ್ಲಿ­ರುವ ಮನೆ ತಲುಪುವಂತೆ ನೋಡಿಕೊಳ್ಳುವುದು ಹೇಗೆ? ಮೊದಲೇ ನಾನು ನಾಟಕ ನೋಡಲು ಹೋಗುವವನು. ರಾತ್ರಿ ಹತ್ತರ ನಂತರ ನಾನು ನಾಟಕ ನೋಡುತ್ತ ಕೂತಿದ್ದಾಗ ಹೊರಗೆ ಪಾರ್ಕಿಂಗ್‌­ನಲ್ಲಿ ಆಕೆ ಒಬ್ಬಳೇ ಕಾರಿನಲ್ಲಿರುವಾಗ ಏನಾದರೂ ಅಚಾತುರ್ಯ ಸಂಭವಿಸಬಹುದು- ಇತ್ಯಾದಿ. ಆಯಿತು, ನನ್ನ ಆತ್ಮೀಯ ಸ್ನೇಹಿತರ ಮನಸ್ಸಿಗೆ ನೋವಾಗದಂತೆ ಅವಳನ್ನು ಒಂದೆಡೆ  ನೇಮಿಸಿಕೊಂಡ ಶಾಸ್ತ್ರ  ಮಾಡಿ ಯಾವು­ದಾ­ದರೂ ನೆಪ ಹೇಳಿ ಕೈಬಿಡುವುದೆಂದು ತೀರ್ಮಾನಿಸಿದೆ. ಮರುದಿವಸ ಅವಳನ್ನು ಬರ ಹೇಳಿರೆಂದು ತಿಳಿಸಿದೆ.

ಅವಳನ್ನು ನನ್ನ ಆ ಸ್ನೆಹಿತರು ಮಾರನೆ ದಿನವೇ ಮನೆಗೆ ಕರೆತಂದರು. ಆ ಹುಡುಗಿ ಸುಂದರಿ­ಯೇ­ನಲ್ಲ. ಈ ಹಿಂದೆ ನನಗೆ ಪರಿಚಿತರಾದ ಒಬ್ಬ ವಿದ್ವಾಂಸೆಯ ಡ್ರೈವರಾಗಿ ಒಂದು ವರ್ಷ ಕೆಲಸ ಮಾಡಿದ್ದಳು. ಆ ವಿದ್ವಾಂಸೆ ಮಹಾನ್ ತಲೆ ತಿರುಕಿ, ಪರಪೀಡನಪರಾಯಣೆ. ‘ಅವಳ ಬಳಿ ಯಾಕೆ ಕೆಲಸ ಬಿಟ್ಟೆ’ ಎಂದು ಕೇಳಿದ್ದಕ್ಕೆ ಆ ಹುಡುಗಿ- ಸರಿತಾ ದೀಕ್ಷಿತ್- ಒಂದು ಎನ್‌ಜಿಒ ಸಂಸ್ಥೆಯ ಮೂಲಕ ಆಕೆಯ ಬಳಿ ಕೆಲಸಕ್ಕೆ ಸೇರಿ­ದ್ದಾಗಿಯೂ ಒಂದು ವರ್ಷದ ಒಪ್ಪಂದದ ಪ್ರಕಾರ ಅವಳ ಜೊತೆ ಕೆಲಸ ಮಾಡಿದ್ದಾಗಿಯೂ ಆನಂತರ ವಿದ್ವಾಂಸೆ ಹಲವು ಮಾಸ ವಿದೇಶ­ಯಾನ ಹೊರಟದ್ದರಿಂದಲೂ ತನ್ನ ಕೆಲಸದ ಅವಧಿ ಮುಗಿದಿದ್ದರಿಂದಲೂ ಕೆಲಸ ಬಿಟ್ಟೆ­ನೆಂದಳು. ತನ್ನ ಹಿಂದಿನ ಮಾಲೀಕಳ ಬಗ್ಗೆ ಕೆಟ್ಟ ಮಾತನ್ನಾಡದಿರಲು ಆಕೆ ಪ್ರಯತ್ನಿಸುತ್ತಿದ್ದಳು.

‘ಯಾಕೆ, ಈ ವಯಸ್ಸಲ್ಲಿ ಓದನ್ನು ಬಿಟ್ಟು ಕೆಲಸ ಮಾಡಹೊರಟಿದ್ದೀಯ’ ಎಂದು ಕೇಳಿ­ದಾಗ, ‘ಓದಿಗಾಗಿ ಕೆಲಸ ಮಾಡುತ್ತಿದ್ದೀನಿ’ ಎಂದಳು. ‘ವಾರವೆಲ್ಲಾ ದುಡಿದು ಭಾನುವಾರ ಕ್ಲಾಸಿಗೆ ಹೋಗುತ್ತೀನಿ’ ಅಂದಳು. ಇದುವರೆಗೂ ಉಪ­ಚಾರಕ್ಕಾಗಿ ಕೇಳಿಸಿಕೊಳ್ಳುತ್ತಿದ್ದ ನನ್ನ ಮನಸ್ಸಿ­ನಲ್ಲ್ಲಿ ಅನುಕಂಪ ಮೂಡಿತು. ‘ಸರ್, ಹನ್ನೊಂ­ದನೆ ವಯಸ್ಸಿನಿಂದ ದುಡಿದುಕೊಂಡೇ ಓದುತ್ತಾ ಬಂದಿದೀನಿ’ ಅಂದಾಗ ತಲ್ಲೀನನಾಗಿ ಕೇಳಿಸಿ­ಕೊಳ್ಳತೊಡಗಿದೆ.

ಮೂಲತಃ ಅವಳ ಹಿರೀಕರು ಕಾನ್ಪುರ ಪಕ್ಕದ ಹಳ್ಳಿಯವರು. ಪೂಜಾರಿಗಳ ಕುಟುಂಬ. ತಾತ ಜೀವನವಿಡೀ ಪೂಜೆ ಪುನಸ್ಕಾರ ಮಾಡುತ್ತಾ ಕುಟುಂಬವನ್ನು ಅಲಕ್ಷ್ಯ ಮಾಡಿದ್ದ. ತಾತನ ಮೇಲಿನ ಸಿಟ್ಟಿನಿಂದ ಅಪ್ಪ ಕುಡಿತದ ದಾಸನಾದ. ಹಳ್ಳಿಯಲ್ಲಿ ಕೈಸಾಗದೆ ದೆಹಲಿಗೆ ಬಂದರು. ಅಪ್ಪನಿಗೆ ಯಾವ ಕೆಲಸವೂ ಕೈಹತ್ತಲಿಲ್ಲ. ತಾಯಿ ಅಲ್ಲಲ್ಲಿ ದುಡಿದು ಸಂಪಾದಿಸಿ ಮಕ್ಕಳನ್ನು ಸಾಕಿದಳು. ಹಿರಿಯ ಮಗಳಿಗೆ ಮದುವೆಯನ್ನೂ ಮಾಡಿ­ದಳು. ಅವಳಿಗೊಂದು ಗಂಡು ಮಗು­ವಾ­ಯಿತು. ಕೆಲವೇ ದಿನಗಳಲ್ಲಿ ಅಕ್ಕ–ಭಾವ ಅಪಘಾತದಲ್ಲಿ ಸತ್ತುಹೋಗಿ ಮಗು ಅನಾಥ­ವಾಯಿತು.

ಮಗು ಸಾಕಲು ತಾಯಿ ಮನೆ­ಯಲ್ಲೇ ಉಳಿಯುವಂತಾಯಿತು. ಆಗ ಸರಿತಾಗೆ ಹನ್ನೊಂದು. ಮೂರನೇ ಕ್ಲಾಸಿನಲ್ಲಿ ಓದು­ತ್ತಿದ್ದಳು. ಅಪ್ಪ ಕಾಸು ಕೀಳುವನೇ ಹೊರತು ತರುವ­ವನಲ್ಲ. ಅಮ್ಮನಿಗೆ ಮಗು ಸಾಕುವ ಪೂರ್ಣಾವಧಿ ಹೊಣೆ. ತನಗಿಂತ ಕಡಿಮೆ ಕ್ಲಾಸಿನವರಿಗೆ ಪಾಠ ಹೇಳಿ ಸರಿತಾ ತನ್ನ ಓದಿಗೂ ಮನೆಯವರಿಗೂ ದುಡಿಯತೊಡಗಿದಳು. ಒಬ್ಬ ಅಣ್ಣನಿದ್ದರೂ ಅವನೂ ಅಪ್ಪನ ಹಾಗೆ ಉಂಡಾಡಿ­ಗುಂಡ. ಆ ಕಿರಿಯ ವಯಸ್ಸಿನಿಂದ ಇಂದಿನವರೆಗೆ ಈ ಹುಡುಗಿ ದುಡಿದು, ಮನೆ­ಯನ್ನೂ  ಮಗುವನ್ನೂ ಸಾಕುತ್ತಾ ತನ್ನ ಓದನ್ನೂ ಸಾಗಿಸಿಕೊಂಡು ಬಿ.ಎ. ಮೊದಲ ವರ್ಷದವರೆಗೆ ಬಂದಿದ್ದಾಳೆ.

‘ನನಗೆ ಗೊತ್ತು ಸರ್, ನಾನಿನ್ನೂ ಚಿಕ್ಕವಳು. ಹೆಚ್ಚಿನ ಸಂಬಳ ಕೇಳಬಾರದು. ಆದರೆ ನನ್ನ ಅಗತ್ಯ ನನ್ನ ಯೋಗ್ಯತೆಗಿಂತಾ ದೊಡ್ಡದು. ಎಷ್ಟು ಸಾಧ್ಯವೋ ಅಷ್ಟು ಹೆಚ್ಚಿಗೆ ಸಂಬಳ ಕೊಡಿ ಸರ್’ ಎಂದು  ನಿರ್ಭಾವುಕಳಾಗಿ ಹೇಳಿದಳು. ‘ಅಲ್ಲಮ್ಮ, ಎಷ್ಟು ದಿವಸ ಹೀಗೆ?’ ಅಂತ ಕೇಳಲಾಗಿ, ‘ಸರ್, ಕಾಲ ಹೀಗೇ ಇರಲ್ಲ. ನಾನು ಡಿಗ್ರಿ ಮಾಡಿದ ಮೇಲೆ ಲಾಯರಾಗಬೇಕು. ನನಗೆ ಬಡತನ ಸಾಕಾಗಿದೆ.  ಒಂದು ಉನ್ನತಸ್ಥಾನಕ್ಕೆ ಹೋಗ­ಬೇಕು ಸರ್, ನಿಮ್ಮಂಗೆ’ ಅಂದಳು. ಅವಳ ದನಿ­ಯಲ್ಲಿ ನೋವಿತ್ತು; ಆದರೆ ಅಧೀರತೆ­ಯಿರಲಿಲ್ಲ. ‘ಸರ್ ನಾನು ಅದೆಷ್ಟೋ ಪೂಜೆಗಳನ್ನು  ಮಾಡಿದೆ. ಆದರೆ ಅಕ್ಕ ಸತ್ತ ಮೇಲೆ ನಂಬಿಕೆ ಹೋಗಿ ಎಲ್ಲಾ ಬಿಟ್ಟೆ. ಈಗ ನನಗೆ ನನ್ನ ಬಗ್ಗೆ ಮಾತ್ರ ವಿಶ್ವಾಸ. ನೀವೇ ನೋಡುವಿರಂತೆ, ನಾನು ಎಷ್ಟು ನಿಷ್ಠೆಯಿಂದ ಕೆಲಸ ಮಾಡುತ್ತೀನಿ ಅನ್ನೋ­ದನ್ನ’ ಎಂದು ದೃಢವಾಗಿ ನುಡಿದಳು. ‘ಸರಿ ಒಂದಷ್ಟು ದಿನ ಕೆಲಸ ಮಾಡಮ್ಮ ನೋಡೋಣ’ ಎಂದೆ.

ಅವಳ ಡ್ರೈವಿಂಗ್‌ನಲ್ಲಿ ತಪ್ಪು ಕಂಡು ಹಿಡಿಯು­ವುದೇ ಕಷ್ಟವಾಯಿತು. ಬೇಕಾಗಿಯೇ ಸೌತ್ ದೆಹಲಿಯ  ಟ್ರಾಫಿಕ್ ಜಾಗಗಳಲ್ಲಿ, ಇಕ್ಕಟ್ಟು ಗಲ್ಲಿಗಳಲ್ಲಿ ಕಾರು ಓಡಿಸೆಂದು ಹೇಳಿ ಪರೀಕ್ಷಿಸಿದೆ. ಎಲ್ಲದರಲ್ಲೂ ಅವಳು ಪಾಸಾದಳು. ಅವಳನ್ನು ಬೇಡವೆನ್ನುವುದಕ್ಕೆ ಒಂದೂ ಕಾರಣ ಸಿಗಲಿಲ್ಲ. ಅವಳ ಬಗ್ಗೆ ನನಗೆ ಮೆಚ್ಚುಗೆ ಮೂಡತೊಡಗಿತು. ‘ಸರ್ ನಿಮಗೆ ದೋಹಾ ಗೊತ್ತಾ?’ ಎಂದು ಕೇಳಿದಳು. ‘ಗೊತ್ತಿಲ್ಲ, ಹೇಳು’ ಎಂದೆ. ಕಬೀರ್, ರಸಖಾನ್,  ರಹೀಂ ಅವರ  ದೋಹಾಗಳನ್ನು ರಸ­ವತ್ತಾಗಿ ಹಾಡತೊಡಗಿದಳು. ಒಗಟಿನ ಪ್ರಶ್ನೆ­ಗಳನ್ನು ಕೇಳತೊಡಗಿದಳು: ‘ಸರ್ ನೀರಿಗಿಂತ ನಿರ್ಮಲ­ವಾದುದು ಯಾವುದು?’ ‘ಗೊತ್ತಿಲ್ಲ, ನೀನೇ ಹೇಳು’. ‘ಸದ್ಗುಣ ಸರ್’. ‘ಸರ್ ಹಿಂದೆ ಮನುಷ್ಯ ಮಾಡಿದ ಮುಂದೆ ದೇವರು ಮಾಡಿದ ಗಾಡಿ ಯಾವುದು?’ ‘ಗೊತ್ತಿಲ್ಲ ತಾಯಿ, ನೀನೇ ಹೇಳು’? ‘ಎತ್ತಿನ ಗಾಡಿ. ದೇವರು ಎತ್ತನ್ನು ಮಾಡಿದ, ಮನುಷ್ಯ ಗಾಡಿಯನ್ನು ಮಾಡಿದ’ ಎಂದಳು.

ಆ ಪುಟ್ಟ ಹುಡುಗಿಯ ಬಗ್ಗೆ ನನಗಿದ್ದ ದಯೆ ಈಗ ಮೆಚ್ಚುಗೆಯಾಗಿ ಮಾರ್ಪಟ್ಟಿದೆ. ‘ನಿನಗೆ ಬೀಳುವ ಕನಸುಗಳು ಯಾವುವು’ ಅಂತ ಕೇಳಿದಾಗ ಅವಳೆಂದಳು: ‘ಹಾವಿನ ಕನಸು ಸರ್. ಅದು ಕಚ್ಚಲು ಬಂದಾಗ ನಾನು ಓಟ ಕೀಳುತ್ತೀನಿ. ಇನ್ನೊಂದು ಮತ್ತೆ ಮತ್ತೆ ಬರುವ ಕನಸು, ನಾನು ಕುದುರೆ ಸವಾರಿ ಮಾಡೋದು. ಹೌದು ಸರ್, ನಿಮ್ಮಂಥವರು ದಾರಿ ತೋರಿಸಿದರೆ ನಾನೂ ದೊಡ್ಡ ಸ್ಥಾನಕ್ಕೆ ಹೋಗುತ್ತೀನಿ. ನನ್ನ ಅಕ್ಕನ ಮಗನನ್ನು ಚೆನ್ನಾಗಿ ಓದಿಸುತ್ತೀನಿ. ಅಮ್ಮನಿಗೆ ಕಡೆ ವಯಸ್ಸಲ್ಲಿ ಚೆನ್ನಾಗಿ ನೋಡಿಕೊಳ್ತೀನಿ. ಜೊತೆಗೆ ನನ್ನ ಹಾಗೇ ಕಷ್ಟದಲ್ಲಿರುವ ಹೆಣ್ಣುಮಕ್ಕಳಿಗೆ ಧೈರ್ಯ ತುಂಬಿ ಸಹಾಯ ನೀಡುತ್ತೀನಿ’.

‘ಅಲ್ಲಮ್ಮ, ಇಪ್ಪತ್ತು ದಾಟಿದೀಯ. ಪ್ರೇಮ-ಗೀಮ ಇಲ್ಲವೋ?’ ಎಂದರೆ, ‘ಅದೆಲ್ಲಾ ಸಿನಿಮಾ,- ಟೀವೀಲಿ. ನನಗೆ ಅದಕ್ಕೆಲ್ಲಾ ಸಮಯವೇ ಇಲ್ಲ ಸರ್. ನನ್ನ ಪ್ರೀತಿಯೆಲ್ಲ ಆ ಮಗುವಿಗೆ ಮೀಸಲು’ ಎನ್ನುತ್ತಾಳೆ. ಈ ದಿಟ್ಟ, ನೇರವಂತಿಕೆ  ಹೆಣ್ಣುಮಗಳು ನನಗೆ ಹೆಣ್ಣುಮಕ್ಕಳ ಬಗೆಗಿದ್ದ ಅಪ್ರಜ್ಞಾಪೂರ್ವಕ ನಂಬಿ­ಕೆ­ಗಳನ್ನು ಕದಲಿಸಿದ್ದಾಳೆ. ಹೆಣ್ಣುಮಕ್ಕಳು ದುರ್ಬ­ಲರು, ಆದ್ದರಿಂದ ಅವರನ್ನು ನಮ್ಮಂಥ ಜಗ­ದೋ­ದ್ಧಾರರು ಕಾಪಾಡಬೇಕು ಎಂಬ ಗಂಡುನಂಬಿಕೆ ನನ್ನ ಮನದಾಳದಲ್ಲಿತ್ತು. ಇದಕ್ಕೆ ವಿರುದ್ಧವಾದ ಇನ್ನೊಂದು ಭಾವನೆ: ಹೆಣ್ಣು­ಮಕ್ಕಳು ಏನೇ ಆದರೂ ಅಪಾಯಕಾರಿಗಳು. ಈ ಕಾರಣ ದಿಂ­ದಲೇ ಅವಳನ್ನು ನೌಕರಿಗಿಟ್ಟುಕೊಳ್ಳಬಾರ­ದೆಂದು ನನ್ನ ಗಂಡು ಸ್ನೇಹಿತರು ಎಚ್ಚರಿಕೆ ನೀಡುತ್ತಿದ್ದದ್ದು.

ನನ್ನ ಆತ್ಮೀಯ ವಿದ್ಯಾರ್ಥಿನಿ ದೇವಪ್ರಿಯಾಗೆ ಈ ಬಗ್ಗೆ ಹೇಳಿದಾಗ ಅವಳು ರೇಗಿದಳು: ‘ಏನು ಸರ್, ನಿಮ್ಮಂಥವರು ಆ ದಿಟ್ಟ ಹುಡುಗಿಗೆ   ಸಹಾಯ ನೀಡದಿದ್ದರೆ, ಎಲ್ಲ ಗಂಡಸರೂ ಹೀಗೇ ಯೋಚಿಸಿದರೆ ಅವಳ ಅದಮ್ಯ ಕನಸು ನನಸಾ­ಗು­ವುದು ಹೇಗೆ? ನಿಮ್ಮ ಗಂಡು ಡ್ರೈವರು­ಗಳು ನಿಮಗೆ ಕೊಟ್ಟ ತೊಂದರೆಗೆ ನಾನೇ ಸಾಕ್ಷಿ. ಹುಡುಗಿ ಅನ್ನುವ ಕಾರಣಕ್ಕೆ ಅವಳಿಗೆ ಅವಕಾಶ ನೀಡ­ದಿದ್ದರೆ ನೀವೂ ಎಲ್ಲ ಗಂಡಸರ ಹಾಗೇ ಅಂತ ಅರ್ಥ’.

‘ಏನಮ್ಮಾ, ರಾತ್ರಿ ಲೇಟಾಗಿ ಮನೆಗೆ ಹೋಗುವಾಗ ಭಯವಾಗುವುದಿಲ್ಲವೆ?’ ಎಂದು ಕೇಳಿದಾಗ ಸರಿತಾ ಉತ್ತರಿಸುತ್ತಾಳೆ:  ‘ಸರ್ ನನ್ನ ಹೆಸರು ಸರಿತಾ. ಅಂದರೆ ನದಿ. ಹರಿಯುವ ನೀರಿಗೆ ಕಳಂಕವಿಲ್ಲ. ನಾನು ಸದಾ ನನ್ನ ಗುರಿ­ಯಲ್ಲಿ ಮನಸಿಟ್ಟಿರುವುದರಿಂದ ನನಗೆ ಯಾವ ಭಯವೂ ಇಲ್ಲ. ನಮ್ಮಪ್ಪ ನೆನ್ನೆ ಕುಡಿದು ಕೂಗಾಡುತ್ತಿದ್ದ. ಬಾಯಿ ಮುಚ್ಚದಿದ್ದರೆ ಕಪಾಳಕ್ಕೆ ಕೊಡುತ್ತೇನೆ ಅಂತ ರೇಗಿದಾಗ ತೆಪ್ಪಗಾದ’.
ಮೀಡಿಯಾ ತುಂಬ ರೇಪಿನ ದಾರುಣ ದೃಶ್ಯ­ಗಳು, ವರ್ಣನೆಗಳು. ಅವು ಮಹಿಳೆಯರ ಅಸಹಾ­ಯಕತೆಯ ಚಿತ್ರಗಳನ್ನು ಬಲಪಡಿಸುತ್ತಿವೆ.   ಆದರೆ ಇಂದಿನ ಯುವತಿಯರೆಂದರೆ ಬರೀ ರೇಪಿನ ಶಿಕಾರಿಗಳಲ್ಲ. ಸ್ವಗೌರವಕ್ಕಾಗಿ ಸದಾ ಹೋರಾ­ಡುತ್ತಿರುವ ಸರಿತಾಳಂಥವರೂ ಇದ್ದಾರೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT