ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಬಿಕೆಯ ಬಲ

Last Updated 19 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಅಲೆಕ್ಝಾಂಡರನ ಯುದ್ಧಯಾತ್ರೆ ನಡೆದಿತ್ತು. ಒಂದು ಯುದ್ಧದಿಂದ ಮತ್ತೊಂದಕ್ಕೆ, ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸತತವಾದ ಪ್ರಯಾಣ ನಡೆದೇ ಇತ್ತು. ಮನಸ್ಸಿನಲ್ಲಿ  ಎಷ್ಟೇ ಛಲವಿದ್ದರೂ ಈ ಸತತ ಪ್ರಯಾಣದ, ವಾತಾವರಣದ ಬದಲಾವಣೆಯ ಪ್ರಭಾವ ದೇಹದ ಮೇಲೆ ಆಗದೇ ಇರುತ್ತದೆಯೇ? ಅದೆಷ್ಟೇ ಬಲಿಷ್ಠ ದೇಹವಾದರೂ ಸತತವಾದ ಆಕ್ರಮಣವನ್ನು ಬಹುಕಾಲ ತಾಳಲಾರದು. ಅಲೆಕ್ಝಾಂಡರನ ಆರೋಗ್ಯವೂ ನಿಧಾನಕ್ಕೆ ಕೆಡಲಾರಂಭಿಸಿತು.

ಅವನ ಜೊತೆಗೇ ಬಂದಿದ್ದ ವೈದ್ಯರು ಚಿಕಿತ್ಸೆ ಪ್ರಾರಂಭಿಸಿದರು.  ಅವರೆಲ್ಲ ಬಹಳ ಪ್ರಸಿದ್ಧರಾದ ವೈದ್ಯರು.  ದಿನಕಳೆದಂತೆ ರಾಜನ ಆರೋಗ್ಯ ಕುಂದತೊಡಗಿತೇ ವಿನಃ ಸುಧಾರಣೆ ಕಾಣಲಿಲ್ಲ.  ಅವನಿಗೆ ಬಂದ ಜ್ವರ ಸನ್ನಿಯಾಗುವಂತೆ ತೋರಿತು.  ಯಾವ ಔಷಧಿಯೂ ಫಲ ನೀಡದಿದ್ದಾಗ ವೈದ್ಯರು ಕಂಗೆಟ್ಟರು. ಅವರನ್ನು ಭಯ ಕಾಡತೊಡಗಿತು.  ತಾವು ನೀಡಿದ ಔಷಧದಿಂದ ರಾಜ ಬದುಕದಿದ್ದರೆ ಅವರ ಜೀವಕ್ಕೂ ಅಪಾಯ.  ನಿಮ್ಮ ಔಷಧಿಯಿಂದಲೇ ರಾಜ ಮೃತನಾದ ಎಂಬ ಅಪಖ್ಯಾತಿಯೊಂದಿಗೆ ಅವನ ಹಿಂಬಾಲಕರು ಅವರನ್ನು ಕೊಂದೇ ಬಿಡಬಹುದು ಎಂಬ ಚಿಂತೆ.  ಇದು ಸರ್ವಾಧಿಕಾರಿಯೊಂದಿಗೆ ಬದುಕುವ ಎಲ್ಲರ ಪರಿಸ್ಥಿತಿ. ಸರ್ವಾಧಿಕಾರಿ ಬಲಿಷ್ಠನಾಗಿದ್ದಾಗ ಇವರಿಗೆಲ್ಲ ಬೇಕಾದ ಸವಲತ್ತು, ಮರ್ಯಾದೆ. ಒಮ್ಮೆ ಅವನು ಮರೆಯಾದನೋ ಇವರ ಪಾಡು ನಾಯಿಪಾಡು. ಯಾರು ಇವರಿಗೆ ಅತೀವ ಮರ್ಯಾದೆ ನೀಡುತ್ತಿದ್ದರೋ ಅವರೇ ಇವರ ಬಲಿ ತೆಗೆದುಕೊಳ್ಳಲು ಸಿದ್ಧರಾಗುತ್ತಾರೆ.  ರಾಜನ ವೈದ್ಯರು ಹೆದರಿ ಔಷಧಿ ಕೊಡುವುದನ್ನೇ ನಿಲ್ಲಿಸಿಬಿಟ್ಟು ಇದು ತಮ್ಮ ಶಕ್ತಿಯನ್ನು ಮೀರಿದ್ದು ಎಂದುಬಿಟ್ಟರು.

ರಾಜನ ಆತ್ಮೀಯ ಮಿತ್ರ ಫಿಲಿಪ್‌ನಿಂದ ಇದನ್ನು ನೋಡಲಾಗಲಿಲ್ಲ.  ತನ್ನ ರಾಜ, ಹಾಗೂ ಮಿತ್ರನಾದ ಅಲೆಕ್ಝಾಂಡರನನ್ನು ಹೇಗಾದರೂ ಉಳಿಸಿಕೊಳ್ಳಬೇಕು ಎಂಬುದು ಅವನ ಆಸೆ.  ಅವನಿಗೂ ಅಲ್ಪಸ್ವಲ್ಪ ಔಷಧಿ ವಿದ್ಯೆ ತಿಳಿದಿತ್ತು.  ಆತ ಹೋಗಿ ರಾಜನಿಗೆ ಕೇಳಿದ,  ಮಿತ್ರ, ಈ ಪರಿಸ್ಥಿತಿಯಲ್ಲಿ ಯಾವ ವೈದ್ಯರ ಔಷಧಿಯೂ ಫಲ ನೀಡುತ್ತಿಲ್ಲ.  ಅವರಿಂದ ಔಷಧಿಯೂ ನೀಡಲಾಗುತ್ತಿಲ್ಲ.  ನಾನೇ ಔಷಧಿಯನ್ನು ಮಾಡಿ ತರಲೇ?  ರಾಜ ಆಗಬಹುದೆಂದು ತಲೆ ಅಲ್ಲಾಡಿಸಿದ.

ಫಿಲಿಪ್‌ನಿಗೆ ಚೆನ್ನಾಗಿ ಗೊತ್ತಿತ್ತು,  ತಾನು ರಾಜವೈದ್ಯರಿಗಿಂತ ಹೆಚ್ಚು ತಿಳಿದವನಲ್ಲ.  ಅದಲ್ಲದೇ ಈ ಔಷಧಿ ಫಲ ನೀಡದೇ ರಾಜ ಮೃತನಾದರೆ ತನಗೆ ಆತ್ಮಹತ್ಯೆಯಲ್ಲದೇ ಬೇರಾವ ಮಾರ್ಗವೂ ಇಲ್ಲ.  ಆದರೂ ಸ್ನೇಹಿತನ ಮೇಲಿನ ಪ್ರೇಮದಿಂದ ಔಷಧಿಯನ್ನು ಮಾಡಲು ನಡೆದ.  ಹತ್ತು ನಿಮಿಷಗಳಲ್ಲಿ ಗುಪ್ತಚರ ವಿಭಾಗದ ಮುಖ್ಯಸ್ಥ ಅಲೆಕ್ಝಾಂಡರನ ಕಡೆಗೆ ಬಂದು ಒಂದು ಚೀಟಿಯನ್ನು ನೀಡಿದ.  ಅದರಲ್ಲೊಂದು ರಹಸ್ಯ ಸಂದೇಶ.  ಶತ್ರು ಪಕ್ಷದವರು ಅಪಾರ ಹಣ ನೀಡಿ ಫಿಲಿಪ್‌ನನ್ನು ಕೊಂಡುಕೊಂಡುಬಿಟ್ಟಿದ್ದಾರೆ.  ಈಗ ಆತ ಮಾಡಿ ತರುತ್ತಿರುವ ಔಷಧದಲ್ಲಿ ವಿಷ ಬೆರೆಸುವ ಸಾಧ್ಯತೆ ಇದೆ .  ಅದನ್ನು ಓದಿ ಕ್ಷಣಕಾಲ ಕಣ್ಣು ಮುಚ್ಚಿ ಚಿಂತಿಸಿದ ರಾಜ.  ರಾಜವೈದ್ಯರೂ ಕೈ ಚೆಲ್ಲಿದಾಗ ಫಿಲಿಪ್ ತಾನೇ ಔಷಧಿಯನ್ನು ಮಾಡಲು ತೋರಿದ ಆಸಕ್ತಿ ಅವನ ಮನದಲ್ಲಿ ಸುಳಿದಾಡಿತು.  ನಂತರ ಆ ಚೀಟಿಯನ್ನು ತಲೆದಿಂಬಿನ ಕೆಳಗಿಟ್ಟು ಕಣ್ಣುಮುಚ್ಚಿ ಮಲಗಿಕೊಂಡ.

ಫಿಲಿಪ್ ಔಷಧಿಯನ್ನು ತಂದುಕೊಟ್ಟಾಗ ರಾಜ ಎದ್ದು ಕುಳಿತು, ತನ್ನ ತಲೆದಿಂಬಿನ ಕೆಳಗಿದ್ದ ಚೀಟಿಯನ್ನು ತೆಗೆದು ಫಿಲಿಪ್‌ನ ಕೈಯಲ್ಲಿಟ್ಟು  ಅವನು ಅದನ್ನು ಓದುವುದರೊಳಗೆ ಔಷಧಿಯನ್ನು ಗಟಗಟನೇ ಕುಡಿದು ಮಲಗಿಬಿಟ್ಟ.  ಫಿಲಿಪ್ ಕಾಗದವನ್ನು ಓದಿ ಗಳಗಳನೇ ಅತ್ತು,  ಇಲ್ಲ ಮಿತ್ರ, ನಾನು ನಿನಗೆ ಮೋಸ ಮಾಡಿಲ್ಲ, ಮಾಡಲಾರೆ  ಎಂದು ಹೇಳಿ ಕೈ ಹಿಡಿದುಕೊಂಡ.  ನನಗೆ ಗೊತ್ತು, ನೀನೆಂದಿಗೂ ದ್ರೋಹ ಮಾಡಲಾರೆ. ಅದಕ್ಕೇ ನೀನು ಕೊಟ್ಟ ಔಷಧಿಯನ್ನು ಕುಡಿದುಬಿಟ್ಟೆ  ಎಂದ ಅಲೆಕ್ಝಾಂಡರ.

ಔಷಧಿಯಿಂದ ರಾಜನಿಗೆ ಗುಣವಾಗತೊಡಗಿತು.  ಬಹುಶ: ಔಷಧಿಗಿಂತ ಅವನಿಗೆ ಅದರ ಮೇಲಿದ್ದ ನಂಬಿಕೆಯಿಂದ ಹೆಚ್ಚಿನ ಪ್ರಯೋಜನವಾಗಿದ್ದಿರಬೇಕು.  ವೈದ್ಯರ ಮೇಲಿಟ್ಟ ಬಲವಾದ ನಂಬಿಕೆ ಔಷಧಿಯ ಪ್ರಭಾವವನ್ನು ಹೆಚ್ಚು ಮಾಡುತ್ತದೆ.  ಅದು ನಂಬಿಕೆಯ ಬಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT