ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಬಿಕೆ–ಅಪನಂಬಿಕೆಗಳ ನಡುವೆ ಮತಯಂತ್ರ

Last Updated 11 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ರಾಜಕೀಯ ಪಕ್ಷಗಳು ಮತ್ತೊಮ್ಮೆ ಎಲೆಕ್ಟ್ರಾನಿಕ್ ಮತ ಯಂತ್ರಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿದ್ದಾರೆ. ಹೌದು ಇದನ್ನು ‘ಮತ್ತೊಮ್ಮೆ’ ಎಂದು ಎಲ್ಲರಿಗೂ ನೆನಪಿಸಬೇಕಾದ ಅಗತ್ಯವಿದೆ. 2009ರ ಜುಲೈ 5ರಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಜೊತೆ ಮಾತನಾಡಿದ್ದ ಎಲ್.ಕೆ. ಅಡ್ವಾಣಿ ‘ಎಲೆಕ್ಟ್ರಾನಿಕ್ ಮತಯಂತ್ರಗಳ ವಿಶ್ವಾಸಾರ್ಹತೆಯನ್ನು ಸಂಪೂರ್ಣವಾಗಿ ಖಾತರಿ ಪಡಿಸಿಕೊಳ್ಳಬೇಕು ಇಲ್ಲವೇ ಕಾಗದದ ಮತಪತ್ರಗಳಿಗೆ ಹಿಂದಿರುಗಬೇಕು’ ಎಂದಿದ್ದರು.
 
ಅಷ್ಟೇ ಅಲ್ಲ ಅದೇ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿದ್ದ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿಯೇ ಇದು ಕಾರ್ಯರೂಪಕ್ಕೆ ಬರಬೇಕು ಎಂಬ ಧಾಟಿಯಲ್ಲಿ ಅವರ ಮಾತುಗಳಿದ್ದವು. ಆಗಲೂ ಚುನಾವಣಾ ಫಲಿತಾಂಶವೊಂದು ಹಿನ್ನೆಲೆಯಲ್ಲಿತ್ತು.
 
2009ರ ಲೋಕಸಭಾ ಚುನಾವಣೆಯಲ್ಲಿ ಅಡ್ವಾಣಿ ಅವರ ನೇತೃತ್ವದ ಎನ್‌ಡಿಎ ಸೋಲುಂಡಿತ್ತು. ಈ ಬಾರಿಯೂ ಮತಯಂತ್ರಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿರುವ ಮಾಯಾವತಿ, ಅರವಿಂದ ಕೇಜ್ರಿವಾಲ್ ಮತ್ತು ರಾಹುಲ್ ಗಾಂಧಿಯವರ ಮಾತಿಗೆ ಹಿನ್ನೆಲೆಯಾಗಿಯೂ ಒಂದು ಚುನಾವಣಾ ಸೋಲಿದೆ.
 
ಎಲೆಕ್ಟ್ರಾನಿಕ್ ಮತಯಂತ್ರಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವವರೆಲ್ಲಾ ಚುನಾವಣೆಯಲ್ಲಿ ಸೋಲುಂಡವರು ಎಂಬ ಸಿದ್ಧ ಮಾದರಿಯೊಂದು ಸೃಷ್ಟಿಯಾಗಿಬಿಟ್ಟಿರುವುದರಿಂದ ಈ ಯಂತ್ರಗಳ ಕುರಿತ ವಸ್ತುನಿಷ್ಠ ಚರ್ಚೆಯೇ ಕಷ್ಟವಾಗಿಬಿಟ್ಟಿದೆ.
 
ಈ ಮತಯಂತ್ರಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋದವರು ಈಗ ಎನ್‌ಡಿಎಯಲ್ಲಿರುವ ಸುಬ್ರಹ್ಮಣ್ಯನ್ ಸ್ವಾಮಿ. ಅವರು ತಮ್ಮ ಹೋರಾಟವನ್ನು ಸುಪ್ರೀಂ ಕೋರ್ಟ್ ತನಕವೂ ಒಯ್ದರು.

2013ರಲ್ಲಿ ಸುಪ್ರೀಂ ಕೋರ್ಟ್ ಈ ಕುರಿತಂತೆ ಒಂದು ಸ್ಪಷ್ಟ ಆದೇಶ ನೀಡಿ ಮತಯಂತ್ರಗಳು ಮತಚಲಾವಣೆಯನ್ನು ಖಾತರಿ ಪಡಿಸುವ ಮುದ್ರಿತ ಕಾಗದವೊಂದನ್ನು ನೀಡುವ ವ್ಯವಸ್ಥೆ ಮಾಡಬೇಕು ಎಂದಿತ್ತು. ಇದನ್ನೇ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರೇಲ್ (ವಿವಿಪಿಎಟಿ) ಎಂದು ಕರೆಯುತ್ತಾರೆ. 2019ರ ಮಹಾ ಚುನಾವಣೆಯ ಹೊತ್ತಿಗೆ ಇದು ದೇಶವ್ಯಾಪಿಯಾಗಿ ಕಾರ್ಯರೂಪಕ್ಕೆ ಬರಲಿದೆ.
 
ಮತಯಂತ್ರದ ವಿಶ್ವಾಸಾರ್ಹತೆಗೆ ಸಂಬಂಧಿಸಿದಂತೆ ಈ ತನಕ ಹಲವು ಸಂಶೋಧನೆಗಳು ನಡೆದಿವೆ. ಇದರಲ್ಲಿ ಬಹಳ ಮುಖ್ಯವಾದುದು 2010ರ ಏಪ್ರಿಲ್ ತಿಂಗಳಿನಲ್ಲಿ ಪ್ರಕಟವಾದ ‘ಸೆಕ್ಯುರಿಟಿ ಅನಲಿಸಿಸ್ ಆಫ್ ಇಂಡಿಯಾಸ್ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್’ (http://bit.ly/2ovHgMU).

ಈ ಸಂಶೋಧನಾ ಪ್ರಬಂಧವನ್ನು 2010ರಲ್ಲಿ ನಡೆದ ಅಸೋಸಿಯೇಷನ್ ಆಫ್ ಕಂಪ್ಯೂಟಿಂಗ್ ಮೆಷಿನ್‌ನ 17ನೇ ವಾರ್ಷಿಕ ಸಮಾವೇಶದಲ್ಲಿ ಮಂಡಿಸಲಾಗಿತ್ತು. ಡಾ. ಜೆ ಅಲೆಕ್ಸ್ ಹಾಲ್ಡರ್‌ಮನ್, ಹರಿ ಕೆ ಪ್ರಸಾದ್ ಮತ್ತು ರಾಪ್ ಗಾಂಗ್ರಿಜ್ ಎಂಬ ಮೂವರು ಎಲೆಕ್ಟ್ರಾನಿಕ್ ಮತಯಂತ್ರವನ್ನು ವಿಶ್ಲೇಷಣೆಗೆ ಒಳಪಡಿಸಿ ತಮ್ಮ ಪ್ರಬಂಧ ರಚಿಸಿದ್ದರು.
 
ಅಲೆಕ್ಸ್  ಎಲೆಕ್ಟ್ರಾನಿಕ್ ಮತಯಂತ್ರಗಳ ಭದ್ರತೆಯ ಕುರಿತಂತೆಯೇ ಅಧ್ಯಯನ ಮಾಡಿರುವ ಕಂಪ್ಯೂಟರ್ ತಜ್ಞ ಮತ್ತು ಮಿಷಿಗನ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಪ್ರೊಫೆಸರ್.  

ಹರಿ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದ ಉದ್ಯಮವೊಂದರಲ್ಲಿ ಕೆಲಸ ಮಾಡುವ ಹೈದರಾಬಾದ್‌ನ ತಂತ್ರಜ್ಞ, ರಾನ್ ಗಾಂಗ್ರಿಜ್ ನೆದರ್‌ನ್ಯಾಂಡ್‌ನಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ನಿಷೇಧಿಸುವುದರಲ್ಲಿ ಬಹುಮುಖ್ಯ ಪಾತ್ರವಹಿಸಿದ್ದ ಹೋರಾಟಗಾರ.
 
ಈ ಮೂವರು ತಮ್ಮ ಪ್ರಬಂಧದಲ್ಲಿ ಭಾರತದ ಎಲೆಕ್ಟ್ರಾನಿಕ್ ಮತಯಂತ್ರಗಳ ಕೊರತೆಗಳನ್ನು ಬಹಳ ವಿವರವಾಗಿ ಸಾಕ್ಷ್ಯಾಧಾರಗಳೊಂದಿಗೆ ಪಟ್ಟಿ ಮಾಡಿದ್ದಾರೆ.
 
ಈ ವಿಶ್ಲೇಷಣೆ ಹೇಳುವಂತೆ ಮತಯಂತ್ರವನ್ನು ದುರುಪಯೋಗಪಡಿಸಿಕೊಳ್ಳಲು ಹಲವು ಅವಕಾಶಗಳಿವೆ. ಮತದಾನ ಮುಗಿದ ಮೇಲೆ ಅದನ್ನು ಸಂಗ್ರಹಿಸಿಡುವ ಸ್ಥಳದಲ್ಲಿ ಫಲಿತಾಂಶವನ್ನು ಬದಲಾಯಿಸಬಹುದು. ಮತದಾನದ ಸಂದರ್ಭದಲ್ಲಿ ಎಲ್ಲವೂ ಸರಿಯಾಗಿರುವಂತೆ ತೋರಿದರೂ ಫಲಿತಾಂಶ ಮಾತ್ರ ವ್ಯತಿರಿಕ್ತವಾಗಿ ಕಾಣುವಂತೆ ಮಾಡಬಹುದು.

ಹಾಗೆಯೇ ಬ್ಲೂಟೂತ್ ಸಂದೇಶಗಳನ್ನು ಬಳಸಿ ತಮಗೆ ಬೇಕಿರುವವರಿಗೆ ಮತ ಚಲಾವಣೆಯಾಗುವಂತೆ ಮಾಡಬಹುದು. ಈ ಎಲ್ಲದಕ್ಕೂ ಚುನಾವಣಾ ಆಯೋಗ ಉತ್ತರ ನೀಡಿದ ಉತ್ತರ ಬಹಳ ವಿಚಿತ್ರವಾಗಿತ್ತು.

ಯಂತ್ರದ ತಯಾರಿಕೆಯಿಂದ ತೊಡಗಿ ಮತ ಎಣಿಕೆಯ ತನಕ ತಾನು ಅನುಸರಿಸುವ ವಿಧಾನಗಳ ಸಮರ್ಪಕತೆಯಿಂದ ಇಂಥದ್ದು ಸಂಭವಿಸಲು ಸಾಧ್ಯವಿಲ್ಲ ಎಂಬುದು ಆಯೋಗದ ವಾದವಾಗಿತ್ತು. ಇದನ್ನು ಕೆಲಮಟ್ಟಿಗೆ ಒಪ್ಪಬಹುದು.
 
ಪ್ರತಿಯೊಂದು ಮತಯಂತ್ರವನ್ನೂ ತೆರೆದು ಅದರಲ್ಲಿರುವ ಡಿಸ್‌ಪ್ಲೇ ಬದಲಾಯಿಸುವುದು ಅಥವಾ ಅದಕ್ಕೊಂದು ಬ್ಲೂಟೂತ್ ಗ್ರಾಹಕವನ್ನು ಅಳವಡಿಸುವುದು ಅಥವಾ ಅದರ ಚಿಪ್ ಅನ್ನು ಬದಲಾಯಿಸುವುದು ಇವೆಲ್ಲವೂ ಪ್ರಾಯೋಗಿಕವಾಗಿ ಕಷ್ಟ ಸಾಧ್ಯ. ಏಕೆಂದರೆ ಮತಯಂತ್ರಗಳ ಸಂಖ್ಯೆಯೇ ಬಹಳ ದೊಡ್ಡದು. ಅಷ್ಟೇ ಅಲ್ಲ ಇವು ಯಾವುದೇ ಒಂದು ನಿರ್ದಿಷ್ಟ ಕೇಂದ್ರೀಯ ಜಾಲದೊಂದಿಗೆ ಸಂಬಂಧ ಹೊಂದಿರುವುದಿಲ್ಲ.
 
ಆದರೆ ನಮ್ಮ ವ್ಯವಸ್ಥೆಯೊಳಗಿನ ಭ್ರಷ್ಟಾಚಾರದ ಆಳ ಮತ್ತು ಅಗಲಗಳನ್ನು ಅರಿತವರಿಗೆ ಈ ಯಾವುದು ಅಸಾಧ್ಯ ಎನ್ನಿಸಲು ಸಾಧ್ಯವಿಲ್ಲ ಎಂಬುದು ಮತ್ತೊಂದು ವಾಸ್ತವ. ಇಷ್ಟಕ್ಕೂ ಮತಯಂತ್ರದ ವಿಶ್ವಾಸಾರ್ಹತೆಯನ್ನು ಖಾತರಿ ಪಡಿಸಲು ಬೇಕಾದುದು ಬಹಳ ಸರಳ ವ್ಯವಸ್ಥೆ.
 
ಅಂದರೆ ಈಗ ಅಳವಡಿಸಲು ಹೊರಟಿರುವ ವಿವಿಪಿಎಟ್ ವ್ಯವಸ್ಥೆ. ಇದು ಸಾಧ್ಯವಾಗುವಂತೆ ಮಾಡುವುದಕ್ಕೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಚುನಾವಣಾ ಆಯೋಗಕ್ಕೆ ಹೇಳಬೇಕಾಯಿತು ಎಂಬಲ್ಲಿ ನಮ್ಮ ಎಲ್ಲಾ ಸಮಸ್ಯೆಗಳೂ ಇವೆ.
 
ತಂತ್ರಜ್ಞಾನದ ಮೇಲಿನ ಅತೀವ ಎನಿಸುವಂಥ ನಂಬಿಕೆಯೊಂದು ಎಲ್ಲಾ ಆಡಳಿತ ವ್ಯವಸ್ಥೆಗಳನ್ನೂ ಬಾಧಿಸುತ್ತಿದೆ. ಮನುಷ್ಯ ಸೃಷ್ಟಿಸುವ ತಾಂತ್ರಿಕ ಪರಿಕರವೊಂದು ಮನುಷ್ಯನ ಎಲ್ಲಾ ಮಿತಿಗಳಿಂದ ಮುಕ್ತವಾಗಿದೆ ಎಂದು ಮನುಷ್ಯನೇ ನಂಬುವ ಆಶ್ಚರ್ಯಕರ ವಿದ್ಯಮಾನವಿದು.
 
ಇದಕ್ಕಿಂತ ದೊಡ್ಡ ವಿಪರ್ಯಾಸವೆಂದರೆ ಪಾರದರ್ಶಕತೆಯನ್ನು ಸಾಬೀತು ಪಡಿಸುವ ಪರಿಕರಕ್ಕೆ ಬಳಸುವ ತಂತ್ರಜ್ಞಾನವನ್ನು ಸಂಪೂರ್ಣವಾಗಿ ರಹಸ್ಯವಾಗಿಡುವುದು. ಎಲೆಕ್ಟ್ರಾನಿಕ್ ಮತಯಂತ್ರಗಳ ವಿಷಯದಲ್ಲಿ ಸಂಭವಿಸಿರುವುದು ಇದುವೇ.
 
ಇದನ್ನು ತಯಾರಿಸುವ ಭಾರತ್ ಎಲೆಕ್ಟ್ರಾನಿಕ್ಸ್ ನಿಗಮದ ಬೆರಳೆಣಿಕೆಯ ಎಂಜಿನಿಯರುಗಳನ್ನು ಹೊರತು ಪಡಿಸಿದರೆ ಇದರಲ್ಲಿ ಬಳಕೆಯಾಗುವ ತಂತ್ರಾಂಶದ ಸೋರ್ಸ್ ಕೋಡ್ ಇನ್ಯಾರಿಗೂ ದೊರೆಯದು ಎಂಬುದೇ ಮತಯಂತ್ರದ ವಿಶ್ವಾಸಾರ್ಹತೆ ಖಾತರಿ ಪಡಿಸುತ್ತದೆ ಎಂಬಂತೆ ಚುನಾವಣಾ ಆಯೋಗ ವಾದಿಸುತ್ತಿದೆ.
 
ಪ್ರಜಾಪ್ರಭುತ್ವದ ಮೂಲನೆಲೆಗಟ್ಟು ಚುನಾವಣೆ. ಇಲ್ಲಿ ಚಲಾಯಿಸುವ ಒಂದೊಂದು ಮತವೂ ಪವಿತ್ರ ಮತ್ತು ಅಮೂಲ್ಯ. ಇದರ ಸಂಪೂರ್ಣ ಜವಾಬ್ದಾರಿಯನ್ನು ಬೆರೆಳೆಣಿಕೆಯ ಎಂಜಿನಿಯರುಗಳಿಗೆ ಬಿಟ್ಟು ಬಿಡುವುದು ಅದು ಹೇಗೆ ಸರಿ?
 
ಮತಯಂತ್ರದಲ್ಲಿ ಬಳಸುವ ತಂತ್ರಾಂಶವನ್ನು ಸಾರ್ವಜನಿಕ ಪರಿಶೀಲನೆಗೆ ಒಡ್ಡುವುದು ನಿಜಕ್ಕೂ ಅತ್ಯುತ್ತಮವಾದ ಮಾರ್ಗವಾಗಿತ್ತು. ಆಗ ಯಂತ್ರದ ಸ್ವತಂತ್ರ ವಿಶ್ಲೇಷಣೆ ಸಾಧ್ಯವಾಗುತ್ತಿತ್ತು.
 
ಯಂತ್ರದ ವಿಶ್ವಾಸಾರ್ಹತೆಯ ಬಗ್ಗೆ ದೊಡ್ಡ ಮಾತುಗಳನ್ನಾಡುವ ಚುನಾವಣಾ ಆಯೋಗ ತಂತ್ರಾಂಶದ ಸೋರ್ಸ್ ಕೋಡ್‌ಗಳನ್ನು ಮುಕ್ತ ವಿಶ್ಲೇಷಣೆಗೆ ಒಡ್ಡಲು ಬೌದ್ಧಿಕ ಆಸ್ತಿ ಹಕ್ಕಿನಂಥ ಸಬೂಬುಗಳನ್ನು ನೀಡುತ್ತದೆ. ಇಷ್ಟರ ಮೇಲೆ 18 ವರ್ಷಗಳ ಕಾಲ ಮತದಾರನಿಗೆ ತನ್ನ ಮತ ಹೇಗೆ ಚಲಾವಣೆಯಾಗಿದೆ ಎಂಬುದನ್ನು ಮರುಪರಿಶೀಲಿಸಿಕೊಳ್ಳುವ ಅವಕಾಶವನ್ನೂ ನೀಡಿಲ್ಲ. ಸುಪ್ರೀಂ ಕೋರ್ಟ್ ಹೇಳಿದ ನಂತರವಷ್ಟೇ ಅದನ್ನು ಕಾರ್ಯರೂಪಕ್ಕೆ ತರುತ್ತಿದೆ.
 
ಈಗಲೂ ಸಮಸ್ಯೆ ಸಂಪೂರ್ಣ ಪರಿಹಾರವಾಗಿದೆ ಎನ್ನುವಂತಿಲ್ಲ. ಈಗ ತರಲಾಗಿರುವ ವಿವಿಪಿಎಟಿ ವ್ಯವಸ್ಥೆಯ ಪ್ರಕಾರ ಮತ ಚಲಾವಣೆಯನ್ನು ಖಾತರಿ ಪಡಿಸುವ ಮುದ್ರಿತ ಕಾಗದ ಕೆಲವು ಸೆಕೆಂಡುಗಳ ಕಾಲವಷ್ಟೇ ಮತದಾರನಿಗೆ ಕಾಣಿಸಿಕೊಂಡು ಒಂದು ಪೆಟ್ಟಿಗೆಯೊಳಕ್ಕೆ ಸ್ವಯಂಚಾಲಿತವಾಗಿ ಬೀಳುತ್ತದೆ.

ಮತದಾರನೊಬ್ಬ ತಾನು ಮತ ಚಲಾಯಿಸಿದ್ದು ಮುದ್ರಿತ ಕಾಗದ ತೋರಿಸಿದ ಅಭ್ಯರ್ಥಿಗಲ್ಲ ಎಂದರೆ ಹೇಳಿದರೆ ಅದನ್ನು ಮತಗಟ್ಟೆ ಅಧಿಕಾರಿಗಳು ಹೇಗೆ ನಿರ್ವಹಿಸಬೇಕು. ಈ ಕುರಿತಂತೆಯೂ ಚುನಾವಣಾ ಆಯೋಗ ಒಂದು ನಿರ್ಧಾರಕ್ಕೆ ಬರಬೇಕು. ತಂತ್ರಜ್ಞಾನದ ಮೂಲಕ ಕೆಲವು ಸಮಸ್ಯೆಗಳು ಪರಿಹಾರವಾಗುವಂತೆಯೇ ಹೊಸ ಸಮಸ್ಯೆಗಳೂ ಹುಟ್ಟಿಕೊಳ್ಳುತ್ತವೆ.

ತಂತ್ರಜ್ಞಾನದ ಮೇಲಿನ ಅತೀವವಾದ ನಂಬಿಕೆ ಮತಯಂತ್ರಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವವರೆಲ್ಲಾ ಸೋತವರು ಎಂಬ ಸಿದ್ಧ ಮಾದರಿಯನ್ನು ಹುಟ್ಟು ಹಾಕಿದೆ. ಹಾಗೆಯೇ ಗೆದ್ದವರೆಲ್ಲರೂ ಮತಯಂತ್ರವನ್ನು ದುರುಪಯೋಗ ಪಡಿಸಿಕೊಂಡವರು ಎಂಬ ಸಿದ್ಧ ಮಾದರಿಗೂ ಕಾರಣವಾಗಿದೆ.
 
ತಂತ್ರಜ್ಞಾನದ ಮೇಲಿನ ಅತೀವವಾದ ನಂಬಿಕೆ ಮತ್ತು ಅತೀವ ಅಪನಂಬಿಕೆಗಳೆರಡನ್ನೂ ದೂರವಿಟ್ಟು ಪ್ರಾಯೋಗಿಕವಾಗಿ ಆಲೋಚಿಸಿದರಷ್ಟೇ ಈ ಸಮಸ್ಯೆಗಳಿಗೆ ಪರಿಹಾರ ಸಾಧ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT