ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲು ಮಾಡಲಾಗದ ಪರೀಕ್ಷಾ ವಿಧಾನಗಳಿಲ್ಲವೇ?

Last Updated 7 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಐಪಿಎಸ್ ಅಧಿಕಾರಿಯಾಗಿದ್ದ ಸಫೀರ್ ಕರೀಮ್ ಎಂಬಾತ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಹೈಟೆಕ್ ತಂತ್ರ ಬಳಸಿ ನಕಲು ಮಾಡಿ ಹೋಗಿ ಸಿಕ್ಕಿಬಿದ್ದದ್ದು ಸುದ್ದಿಯಾಗಿದೆ. ಈಗಾಗಲೇ ನಾಗರಿಕ ಸೇವೆಯೊಂದರ ಸದಸ್ಯನಾಗಿರುವ ಅದರಲ್ಲೂ ಪೊಲೀಸ್ ಸೇವೆಯಲ್ಲಿ ಇರುವ ಒಬ್ಬ ಇಂಥ ಅಪರಾಧವನ್ನು ಮಾಡಲು ಮುಂದಾದದ್ದೇ ಒಂದು ಅಸಂಗತ. ಈತನ ವಿರುದ್ಧ ಅಪರಾಧಿಕ ಪ್ರಕರಣವೊಂದು ದಾಖಲಾಗಿದೆ. ಅದರಂತೆ ಕ್ರಮಗಳೂ ಜರುಗಬಹುದು. ಇನ್ನು ಮುಂದೆ ಈ ಬಗೆಯ ಹೈಟೆಕ್ ನಕಲುಗಳು ನಡೆಯದಂತೆ ನೋಡಿಕೊಳ್ಳಲು ಬೇಕಿರುವ ಹೊಸ ನಿಯಮಾವಳಿಗಳನ್ನೂ ಯುಪಿಎಸ್‌ಸಿ ಮತ್ತು ಅಂಥದ್ದೇ ನೇಮಕಾತಿ ಮಂಡಳಿಗಳೆಲ್ಲವೂ ರೂಪಿಸಬಹುದು. ಇಷ್ಟೆಲ್ಲಾ ಆದರೂ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುವುದಿಲ್ಲ. ಏಕೆಂದರೆ ಹೈಟೆಕ್ ನಕಲು ಮಾಡುವವರಿಗೆ ಇನ್ನಷ್ಟು ಹೊಸ ತಂತ್ರಜ್ಞಾನಗಳೂ ಇದೇ ಬಗೆಯಲ್ಲಿ ಲಭ್ಯವಿರುತ್ತವೆ.

ಸಫೀರ್ ನಕಲು ಮಾಡಲು ಬಳಸಿದ ತಂತ್ರ ಬಹಳ ಸರಳವಾದುದು. ಚೆನ್ನೈಯಲ್ಲಿ ಪರೀಕ್ಷೆ ಬರೆಯುತ್ತಿದ್ದ ಈತ ತನ್ನ ಎದೆಯ ಮೇಲೆ ಬರುವಂತೆ ಒಂದು ಪುಟಾಣಿ ಕ್ಯಾಮೆರ ಅಂಟಿಸಿಕೊಂಡಿದ್ದ. ಅದು ತನ್ನೆದುರು ಇದ್ದ ಎಲ್ಲದರ ಚಿತ್ರ ತೆಗೆದು ಗೂಗಲ್ ಡ್ರೈವ್‌ಗೆ ಅಪಲೋಡ್ ಮಾಡುತ್ತಿತ್ತು. ಹೈದರಾಬಾದ್‌ನ ಕುಳಿತ ಈತನ ಪತ್ನಿ ಹಾಗೂ ಒಬ್ಬ ಗೆಳೆಯ ಹೀಗೆ ಲಭ್ಯವಾಗುವ ಪ್ರಶ್ನೆಗಳಿಗೆ ಉತ್ತರ ಹುಡುಕಿ ಹೇಳುತ್ತಿದ್ದರು. ಇದನ್ನು ತನ್ನ ಕಿವಿಯಲ್ಲಿಟ್ಟುಕೊಂಡಿದ್ದ ಪುಟಾಣಿ ಬ್ಲೂಟೂತ್ ಸ್ಪೀಕರುಗಳಲ್ಲಿ ಕೇಳಿಸಿಕೊಂಡು ಸಫೀರ್ ಉತ್ತರ ಪತ್ರಿಕೆಗೆ ಇಳಿಸುತ್ತಿದ್ದ.

ಈ ತಂತ್ರಜ್ಞಾನಕ್ಕಾಗಿ ಈತ ಇಂಟರ್ನೆಟ್‌ನ ಭೂಗತ ಜಗತ್ತಿನಲ್ಲಿ (ಡಾರ್ಕ್ ವೆಬ್) ಅಡ್ಡಾಡಿದ್ದ. ಕ್ಯಾಮೆರಾವನ್ನು ಅಲ್ಲಿಂದ ಖರೀದಿಸಿದ್ದ ಎಂದೆಲ್ಲಾ ಪೊಲೀಸರು ಹೇಳುತ್ತಿದ್ದಾರೆ. ಅವರು ಹೇಳಿರುವ ತಂತ್ರವನ್ನೇ ಆತ ಬಳಸಿದ್ದಾಗಿದ್ದರೆ ಅದಕ್ಕಾಗಿ ಆತ ಡಾರ್ಕ್ ವೆಬ್‌ನಲ್ಲಿ ಶೋಧಿಸಬೇಕಾಗಿಲ್ಲ. ಬೆಂಗಳೂರು, ಚೆನ್ನೈ ಮತ್ತು ಇಂಥ ಯಾವುದೇ ಮಹಾನಗರಗಳಲ್ಲಿರುವ ಎಲೆಕ್ಟ್ರಾನಿಕ್ಸ್ ಉಪಕರಣಗಳ ಅಂಗಡಿಗಳಿಗೆ ಹೋದರೂ ಪುಟಾಣಿ ಕ್ಯಾಮೆರಾ, ಬ್ಲೂಟೂತ್ ಹೆಡ್ ಸೆಟ್, ಕ್ಯಾಮೆರಾದಿಂದ ಗೂಗಲ್ ಡ್ರೈವ್‌ಗೆ ಅಪ್‌ಲೋಡ್ ಮಾಡಲು ಬೇಕಾದ ಮೊಬೈಲ್ ವೈಫೈ ಎಲ್ಲವೂ ಸಿಗುತ್ತವೆ. ಬೆಂಗಳೂರಿನಂಥ ನಗರಗಳಲ್ಲಿ ‘ಸ್ಪೈ ಕ್ಯಾಮೆರಾ’ದ ಜಾಹೀರಾತು ರಸ್ತೆ ಬದಿಯಲ್ಲಿರುವ ಮರಗಳಲ್ಲೂ ಕಾಣಸಿಗುತ್ತವೆ. ಅಷ್ಟೇ ಅಲ್ಲ ಅಮೆಝಾನ್ ಮತ್ತು ಫ್ಲಿಪ್‌ಕಾರ್ಟ್‌ನಂಥ ಆನ್‌ಲೈನ್ ಅಂಗಡಿಗಳಲ್ಲೂ ಇವೆಲ್ಲವೂ ಬಹಳ ಸುಲಭದಲ್ಲೇ ಲಭ್ಯ. ಈ ಉಪಕರಣಗಳಲ್ಲಿ ಯಾವ ಒಂದನ್ನು ಮಾರಾಟ ಮಾಡುವುದೂ ಕಾನೂನು ಬಾಹಿರವಲ್ಲ. ಇಂಥವುಗಳನ್ನು ಬಳಸಿಕೊಂಡು ಮಾಡಿದ ಅಪರಾಧಕ್ಕೂ ಡಾರ್ಕ್‌ವೆಬ್‌ಗೂ ಸಂಬಂಧ ಕಲ್ಪಿಸುವ ಪೊಲೀಸರು ಅರಿವಿನ ಮಟ್ಟವನ್ನೂ ಪ್ರಶ್ನಿಸಬೇಕಾಗಿದೆ.

ಜಿಆರ್‌ಇ, ಟಾಫೆಲ್‌ನಂಥ ಅಂತಾರಾಷ್ಟ್ರೀಯ ಪ್ರಾಮುಖ್ಯವಿರುವ ಪರೀಕ್ಷೆಗಳು ಸಂಪೂರ್ಣವಾಗಿ ಕಂಪ್ಯೂಟರ್ ಬಳಸಿಯೇ ನಡೆಯುತ್ತವೆ. ಅಷ್ಟೇಕೆ ಐಐಎಂಗಳ ಪ್ರವೇಶಕ್ಕಾಗಿ ನಡೆಯುವ ಕ್ಯಾಟ್ ಪರೀಕ್ಷೆ ಕೂಡಾ ಸಂಪೂರ್ಣ ಕಂಪ್ಯೂಟರನ್ನೇ ಅವಲಂಬಿಸಿದೆ. ನಕಲು ಮಾಡುವುದಕ್ಕೆ ಹೈಟೆಕ್ ತಂತ್ರಜ್ಞಾನ ಬಳಸುವವರಿಗೆ ಇಲ್ಲಿ ಹೇರಳ ಅವಕಾಶಗಳಿವೆ. ಅದು ಸಾಧ್ಯವಾಗದಂತೆ ಈ ಪರೀಕ್ಷಾ ವ್ಯವಸ್ಥೆಯನ್ನು ರೂಪಿಸಲಾಗಿದೆ. ಈ ದೃಷ್ಟಿಯಲ್ಲಿ ನೋಡಿದರೆ ಯುಪಿಎಸ್‌ಸಿ ಪರೀಕ್ಷೆಗಳಿಗೂ ಇಂಥದ್ದೊಂದು ವಿಧಾನವನ್ನು ಅಳವಡಿಸುವುದು ಸುಲಭ. ಈಗಾಗಲೇ ಇರುವ ‘ಕ್ಯಾಟ್’ ಮಾದರಿಯನ್ನು ಇಲ್ಲಿಗೂ ಅಳವಡಿಸಲು ಸಾಧ್ಯವಿದೆ. ಆದರೆ ನಮ್ಮ ಸರ್ಕಾರಿ ಇಲಾಖೆಗಳು ಈ ಬಗೆಯ ವಿಧಾನಗಳನ್ನು ಅಷ್ಟು ಬೇಗ ಅಳವಡಿಸಿಕೊಳ್ಳುತ್ತೇವೆ ಎಂದು ನಂಬುವುದಕ್ಕೆ ಯಾವುದೇ ಕಾರಣಗಳಿಲ್ಲ. ‘ಕ್ಯಾಟ್’ನ ಉದಾಹರಣೆ ಕಣ್ಣ ಮುಂದೆಯೇ ಇದ್ದರೂ ‘ನೀಟ್’ ಪರೀಕ್ಷೆಗೆ ಅದನ್ನು ಅಳವಡಿಸಿಕೊಂಡಿಲ್ಲ. ಬದಲಿಗೆ ಹೆಣ್ಣು ಮಕ್ಕಳು ಧರಿಸುವ ಓಲೆ, ಬಳೆಗಳಲ್ಲಿ ಹೈಟೆಕ್ ನಕಲಿಗೆ ಕಾರಣವಾಗಬಹುದಾದ ಉಪಕರಣಗಳನ್ನು ಊಹಿಸಿಕೊಂಡು ಸಿಬಿಎಸ್‌ಇ ಗಾಬರಿ ಬಿದ್ದಿದೆ. ಪರೀಕ್ಷಾ ಕೊಠಡಿಗೆ ನಗ್ನರಾಗಿ ಬನ್ನಿ ಎಂದು ಹೇಳುವುದನ್ನೊಂದು ಬಿಟ್ಟು ಉಳಿದೆಲ್ಲವನ್ನೂ ನೀಟ್ ಪರೀಕ್ಷೆ ನಡೆಸುವವರು ಮಾಡುತ್ತಿದ್ದಾರೆ.

ನಮ್ಮ ಪರೀಕ್ಷಾ ವ್ಯವಸ್ಥೆಯ ಮಿತಿಗಳೇ ಹೈಟೆಕ್ ನಕಲಿನ ಸಾಧ್ಯತೆಯೊಂದನ್ನು ತೆರೆದುಕೊಡುತ್ತಿವೆ ಎಂಬುದು ವಾಸ್ತವ. ಹಲವಾರು ಪುಸ್ತಕಗಳನ್ನು ಓದಿ ನಿರ್ದಿಷ್ಟ ವಿಷಯವೊಂದರಲ್ಲಿ ಪರಿಣತನಾಗಿದ್ದಾನೆಯೇ ಇಲ್ಲವೇ ಎಂಬುದರ ಮೌಲ್ಯ ಮಾಪನಕ್ಕಾಗಿ ನಡೆಸುವುದು ಹೆಚ್ಚೆಂದರೆ ಮೂರು ಗಂಟೆಗಳ ಅವಧಿಯ ಒಂದು ಪರೀಕ್ಷೆಯನ್ನು. ಇದರಲ್ಲಿ ಕೇಳುವ ಪ್ರಶ್ನೆಗಳೆಲ್ಲವೂ ಅಭ್ಯರ್ಥಿ ಎಂದೋ ಓದಿರಬಹುದಾದ ಯಾವುದೋ ಪುಸ್ತಕದ ಯಾವುದೋ ನಿರ್ದಿಷ್ಟ ಪುಟದಲ್ಲಿರುವ ಅಂಶವೊಂದಕ್ಕೆ ಸಂಬಂಧಿಸಿದ್ದಷ್ಟೇ ಆಗಿರುತ್ತದೆ. ಇದೊಂದು ಬಗೆಯಲ್ಲಿ  ನಾಲ್ಕು ಚಕ್ರದ ವಾಹನ ಚಲಾವಣೆಯ ಲೈಸನ್ಸ್ ನೀಡುವುದಕ್ಕೆ ಕುದುರೆ ಗಾಡಿ ಅಥವಾ ಎತ್ತಿನ ಗಾಡಿ ಓಡಿಸುವ ಪರೀಕ್ಷೆಯಲ್ಲಿ ಪಾಸಾಗುವುದು ಅಗತ್ಯ ಎಂದು ಹೇಳುವಂತಿದೆ. ಒಂದು ಕಾಲದಲ್ಲಿ ನೆನಪಿಟ್ಟುಕೊಳ್ಳುವುದೂ ನಿರ್ದಿಷ್ಟ ಪದವಿ ಪಡೆಯುವವನ ಅಥವಾ ಪದವಿಗೆ ಏರುವವನಿಗೆ ಬೇಕಾದ ಅರ್ಹತೆಗಳಲ್ಲಿ ಒಂದಾಗಿದ್ದಿರಬಹುದು. ಆದರೆ ಈಗಂತೂ ಅದು ಅಗತ್ಯವಿಲ್ಲ.

ಸಫೀರ್ ಪ್ರಕರಣವನ್ನೇ ನೋಡೋಣ. ಈತ ಬರೆಯುತ್ತಿದ್ದದ್ದು ನಾಗರಿಕ ಸೇವೆಯ ನೇಮಕಾತಿಗಾಗಿ ನಡೆಸುವ ಮುಖ್ಯ ಪರೀಕ್ಷೆಯನ್ನು. ಪ್ರಶ್ನೆಗಳನ್ನು ಯಾರಿಗಾದರೂ ಕಳುಹಿಸಿ ಅವರಿಂದ ಉತ್ತರ ಪಡೆದು ಲಭ್ಯವಿರುವ ಅವಧಿಯಲ್ಲಿ ಬರೆದು ಮುಗಿಸಲು ಸಾಧ್ಯ ಎಂದು ಆತ ಭಾವಿಸಿದ್ದರ ಹಿಂದೆ ತರ್ಕವಿರಲೇಬೇಕು. ಆತ ಹಿಂದೆ ಇದೇ ಪರೀಕ್ಷೆಯನ್ನು ಬರೆದು ಪೊಲೀಸ್ ಸೇವೆಗೆ ಸೇರಿದ್ದ. ಅಂದರೆ ಆತನಿಗೆ ಪರೀಕ್ಷೆಯ ಸ್ವರೂಪ ಮತ್ತು ಅದರ ಮಿತಿಗಳ ಅರಿವು ಚೆನ್ನಾಗಿಯೇ ಇದೆ. ಅದನ್ನು ಅನುಸರಿಸಿಯೇ ಆತ ಯೋಜನೆ ರೂಪಿಸಿದ್ದ ಎನ್ನಬಹುದು. ನಾಗರಿಕ ಸೇವೆಗೆ ಸರ್ಕಾರ ನೇಮಕ ಮಾಡಿಕೊಳ್ಳುವುದು ಇಷ್ಟೊಂದು ಸುಲಭದಲ್ಲಿ ನಕಲು ಮಾಡಿ ಉತ್ತರ ಬರೆಯಬಹುದಾದ ಪರೀಕ್ಷೆಯೊಂದರ ಮೂಲಕ ಎಂಬುದು ಗಾಬರಿ ಹುಟ್ಟಿಸುವ ಸಂಗತಿ.

ಇದು ಕೇವಲ ನಾಗರಿಕ ಸೇವೆಯ ಪರೀಕ್ಷೆಗೆ ಸೀಮಿತವಾದ ಪ್ರಶ್ನೆ ಅಲ್ಲ.  ಎಲ್ಲಾ ಬಗೆಯ ಪರೀಕ್ಷೆಗಳನ್ನು ‘ನೆನಪಿನ ಪರೀಕ್ಷೆ’ಯ ಆಚೆಗೆ ಕೊಂಡೊಯ್ಯಲೇಬೇಕಾದ ಅಗತ್ಯವೊಂದು ಸೃಷ್ಟಿಯಾಗುತ್ತಿದೆ. ಅರ್ಥಾತ್ ಈ ಕಾಲದಲ್ಲಿ ನಡೆಸಬಹುದಾದ ನಾಗರಿಕ ಸೇವೆಯ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮತ್ತು ಮೌಲ್ಯಮಾಪನ ವಿಧಾನ ಹೇಗಿರಬೇಕೆಂದರೆ ಇಡೀ ಗ್ರಂಥಾಲಯವೇ ಪರೀಕ್ಷೆ ಬರೆಯುವವರ ಬಳಿಯೇ ಇದ್ದರೂ ಅವರು ಬರೆಯುವ ಉತ್ತರಗಳು ಸ್ವಂತಿಕೆಯಿಂದಲೇ ಕೂಡಿರುವ ಅನಿವಾರ್ಯತೆಯನ್ನು ಸೃಷ್ಟಿಸಬೇಕು.

ಇದನ್ನು ಸಾಧಿಸುವುದಕ್ಕೆ ತಂತ್ರಜ್ಞಾನವನ್ನೂ ಬಳಸಿಕೊಳ್ಳಬಹುದು. ತಂತ್ರಾಂಶಗಳಲ್ಲಿರುವ ತಜ್ಞತೆಗೆ ಸಂಬಂಧಿಸಿ ನಡೆಸುವ ಪರೀಕ್ಷೆಗಳನ್ನು ಇದೇ ವಿಧಾನದಲ್ಲಿ ನಡೆಸಲಾಗುತ್ತದೆ. ಅಭ್ಯರ್ಥಿ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದಂತೆ ಆತನ ಉತ್ತರದ ಗುಣಮಟ್ಟಕ್ಕೆ ಅನುಗುಣವಾಗಿ ಮುಂದಿನ ಪ್ರಶ್ನೆಗಳು ಮೂಡುತ್ತವೆ. ಹೆಚ್ಚು ಸರಿಯಾದ ಉತ್ತರಗಳಿದ್ದಷ್ಟೂ ಪ್ರಶ್ನೆಗಳು ಹೆಚ್ಚು ಸೂಕ್ಷ್ವವಾಗುತ್ತಾ ಹೋಗುತ್ತವೆ. ಇಂಥದ್ದೊಂದು ವ್ಯವಸ್ಥೆಯನ್ನು ನಮ್ಮ ಆಡಳಿತ ವ್ಯವಸ್ಥೆಯ ಅತ್ಯುನ್ನತ ಸ್ಥಾನಕ್ಕೇರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದರೆ ಅದರ ಅರ್ಥವೇನು?

ಅದನ್ನು ಬಹಳ ಸುಲಭದಲ್ಲಿ ವಿವರಿಸಬಹುದು. ಕಳೆದ ಎರಡು ದಶಕಗಳಿಂದ ಸತತವಾಗಿ ವಿವಿಧ ಇಲಾಖೆಗಳ ಕಂಪ್ಯೂಟರೀಕರಣ ನಡೆಯುತ್ತಾ ಬಂದಿದ್ದರೂ ಅನೇಕ ಕಚೇರಿಗಳು ‘ಇ-ಕಚೇರಿ’ಗಳಾಗಿ ಮಾರ್ಪಾಡಾಗಿದ್ದರೂ ಇವತ್ತಿಗೂ ಕಾಗದವೇ ವಿಜೃಂಭಿಸುತ್ತಿದೆ. ಕಡತಗಳು ಇನ್ನೂ ‘ಟಪಾಲಿ’ನಲ್ಲೇ ಅತ್ತಿತ್ತ ಸಾಗುತ್ತವೆ. ಬಹಳ ದೊಡ್ಡ ಪ್ರಮಾಣದಲ್ಲಿ ಕಂಪ್ಯೂಟರೀಕರಣಗೊಂಡಿರುವ ಕಚೇರಿಗಳಲ್ಲೂ ಕಾಗದದ ಕಡತದ ಪ್ರತಿಯೊಂದನ್ನು ಇಟ್ಟುಕೊಳ್ಳುವುದರಲ್ಲಿ ಸರ್ಕಾರಿ ಇಲಾಖೆಗಳು ನೆಮ್ಮದಿ ಕಾಣುತ್ತವೆ. ಅದಿಲ್ಲವಾದರೆ ಕಾಗದದ ಎಲೆಕ್ಟ್ರಾನಿಕ್ ಸ್ವರೂಪವಾದ ಪಿಡಿಎಫ್ ಪ್ರತಿಗಳೇ ವಿಜೃಂಭಿಸುತ್ತವೆ.

ಪರೀಕ್ಷೆಗಳಲ್ಲಿ ನಡೆಸುವ ಹೈಟೆಕ್ ನಕಲು ಇದು ಹೊಸತೇನೂ ಅಲ್ಲ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಇಂಥದ್ದು ಹಲವು ಬಾರಿ ವರದಿಯಾಗಿವೆ. ನೇಮಕಾತಿ ಪರೀಕ್ಷೆಗಳಿಗೆ ಇದು ಆವರಿಸಿಕೊಂಡದ್ದು ಇತ್ತೀಚೆಗೆ. ಅಥವಾ ಅವುಗಳನ್ನು ಪತ್ತೆ ಹಚ್ಚಲು ತೊಡಗಿದ್ದು ಇತ್ತೀಚೆಗೆ ಎನ್ನುವುದು ಹೆಚ್ಚು ಸರಿ. ಇದನ್ನು ನಿವಾರಿಸುವುದಕ್ಕೆ ಅಗತ್ಯವಿರುವುದು ಕೇವಲ ನಕಲು ಮಾಡುವ ಪ್ರಕ್ರಿಯೆಯನ್ನು ತಡೆಯುವುದಕ್ಕೆ ಬೇಕಾದ ತಂತ್ರಗಳಲ್ಲ. ಇಡೀ ನಕಲು ಮಾಡುವ ಕ್ರಿಯೆಯನ್ನೇ ಅಪ್ರಸ್ತುತವಾಗಿರುವ ಪರೀಕ್ಷಾ ವಿಧಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT