ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗುವಿನಂತೆಯೇ ಅಳುವೂ...

Last Updated 31 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ಸಾರ್‌ ನಿಮಗೆ ಪ್ರೇಮದಲ್ಲಿ ಸೋತ ಅನುಭವ ಇದೆಯೇ?’ ಎಂದು ಗಂಭೀರ ಮುಖಹೊತ್ತು ಕೇಳಿದ ಒಬ್ಬ ಹುಡುಗ. ‘ನಿನ್ನ ಸಮಸ್ಯೆ ಏನಪ್ಪಾ’ ಎಂದು ಕೇಳಿದೆ. ‘ಲವ್‌ ಫೇಲ್ಯೂರ್‌ ಸಾರ್‌. ಸಹಿಸಕ್ಕಾಗ್ತಾ ಇಲ್ಲ. ನನಗೆ ಬದುಕೋಕೇ ಇಷ್ಟ ಇಲ್ಲ ಸಾರ್‌... ಆದ್ರೆ ಅವಳು ಮಾತ್ರ ಸಂತೋಷವಾಗಿ ಇನ್ನೊಬ್ಬನನ್ನು ಮದ್ವೆ ಮಾಡ್ಕೊಂಡು ಹೋಗ್ಬಿಟ್ಳು ಸಾರ್‌. ಆತ್ಮಹತ್ಯೆ ಮಾಡ್ಕೊಳೋಣ ಅಂತ ಹೋದೆ. ಅದ್ರಲ್ಲೂ ಫೇಲ್ಯೂರ್‌ ಸಾರ್‌. ನೀವು ನಿಮ್ಮ ಎಷ್ಟೋ ಪ್ರೇಮಗಳ ಬಗ್ಗೆ ಹೇಳ್ತಾ ಇರ್ತೀರಿ. ನೀವು ಪ್ರೇಮದಲ್ಲಿ ಎಂದೂ ಸೋತೇ ಇಲ್ವಾ ಸಾರ್‌?’ ಎಂದು ವಿರಕ್ತಿಯಿಂದಲೋ ಅಸೂಯೆಯಿಂದಲೋ ಕೇಳಿದ.

ನನಗೆ ನಗು ಬಂತು. ಪ್ರೇಮಗಳ ಬಗ್ಗೆ ನಾನು ಇಷ್ಟೆಲ್ಲ ಮಾತನಾಡುತ್ತಿದ್ದೇನೆ ಎಂದರೆ ಅಷ್ಟು ವಿಫಲ ಪ್ರೇಮಗಳು ನನ್ನ ಹಿಂದೆ ಇವೆ ಎಂದಲ್ಲವೇ ಅರ್ಥ?

ಗಂಡಸರು ತಮ್ಮ ಪ್ರೇಮದಲ್ಲಿನ ಸೋಲುಗಳನ್ನು ಗುಂಡು ಹಾಕಿ, ಯಾರ ಬಳಿಯಾದರೂ ಹೇಳಿಕೊಂಡು ಸಾಂತ್ವನ ಪಡೆಯುತ್ತಾರೆ. ಆದರೆ ಹೆಣ್ಣುಮಕ್ಕಳ ಪರಿಸ್ಥಿತಿ ತುಂಬ ಮೋಸ. ಅವರ ಬಿಕ್ಕಳಿಕೆ ಯಾರ ಕಿವಿಗೂ ಬೀಳುವುದಿಲ್ಲ. ಹಸೆಮಣೆಯಲ್ಲಿ ತಲೆತಗ್ಗಿಸಿ ತಾಳಿ ಕಟ್ಟಿಸಿಕೊಳ್ಳುವ ಹೆಣ್ಣುಮಕ್ಕಳ ಕಣ್ಣಂಚಿನಲ್ಲಿ ಹೆಪ್ಪುಗಟ್ಟಿದ ಕಣ್ಣೀರನ್ನು ಸುತ್ತಲೂ ಅಷ್ಟು ಜನವಿದ್ದೂ ಯಾರೂ ನೋಡುವುದೇ ಇಲ್ಲ.

ಯಾವ ಪತ್ರಿಕೆಯನ್ನು ಬಿಡಿಸಿದರೂ ಭಗ್ನಪ್ರೇಮದಿಂದಾಗಿ ಆತ್ಮಹತ್ಯೆಗಳಾದ ಸುದ್ದಿಗಳು ಕಣ್ಣಿಗೆ ರಾಚುತ್ತವೆ. ಪ್ರೀತಿಸಿದವರನ್ನು ಮದುವೆಯಾಗಲಿಲ್ಲ ಎನ್ನುವುದು ಪ್ರೇಮದ ಸೋಲಾದರೆ ನಾನೊಂದು ದೊಡ್ಡ ಪಟ್ಟಿಯನ್ನೇ ಹಾಕಬೇಕಾಗುತ್ತದೆ. ಅಲಕ್ಷ್ಯದಿಂದಾಗಿ, ಅಜಾಗರೂಕತೆಯಿಂದಾಗಿ, ಮುಂಗೋಪದಿಂದಾಗಿ, ದ್ರೋಹದಿಂದಾಗಿ, ಪರಿಸ್ಥಿತಿಗಳಿಂದಾಗಿ, ಅಮಾಯಕತೆಯಿಂದಾಗಿ, ಮೂರ್ಖತನದಿಂದಾಗಿ... ಹೀಗೆ ಯಾವ ಯಾವ ಕಾರಣಗಳಿಗೋ, ಪ್ರತಿಯೊಂದು ಪ್ರೇಮ ಮದುವೆಯಲ್ಲಿ ಮುಗಿದಿರುವುದಿಲ್ಲ. ಒಂದು ಪ್ರೇಮ ನೆರವೇರದೇ ಹೋದಾಗ ಎಷ್ಟು ದೊಡ್ಡ ನೋವಾಗಿ ಉಳಿಯುವುದೆಂಬ ಅನುಭವದ ಹಲವು ಉದಾಹರಣೆಗಳು ನನ್ನೊಳಗೇ ಇವೆ. ಪ್ರೇಮ ಬದುಕುವುದಕ್ಕೆ, ಜೀವಿಸುವುದಕ್ಕೆ ಕಾರಣವಾಗಿರುವುದರಿಂದಲೇ ಅದಕ್ಕೆ ಅರ್ಥ ಮತ್ತು ಗೌರವ. ಸತ್ತು ಹೋದ ಪ್ರೇಮಿಗಳ ಕಥೆಗಳು ಸಾಯದೇ ಇರುವುದು ಇತಿಹಾಸದ ಉದಾಹರಣೆಗಳಾಗಿರಬಹುದು. ಆದರೆ ಎಲ್ಲರ ಬದುಕೂ ಇತಿಹಾಸವಾಗುವುದಿಲ್ಲವಲ್ಲ.

ನಾವು ನಾಳೆ ಇತಿಹಾಸವಾಗುತ್ತೇವೋ ಇಲ್ಲವೋ, ಇಂದು ಜೀವಿಸಿಬಿಡಬೇಕು– ಬದುಕಿಬಿಡಬೇಕು ಎನ್ನುವುದು ನನ್ನ ಪಾಲಿಸಿ. ನನ್ನ ಬದುಕಿನಲ್ಲಿ ಬಹಳ ಪ್ರೇಯಸಿಯರು ಬದಲಾಗಿದ್ದಾರೆ. ಆದರೆ ನನ್ನೊಳಗಿನ ಪ್ರೇಮ ಹಾಗೆಯೇ ಇದೆ. ಪ್ರೇಮಿಸುವ ಗುಣವನ್ನು ಕಳೆದುಕೊಂಡರೆ ಜೀವನವೇ ಶೂನ್ಯವಾಗಿಬಿಡುತ್ತದೆ. ನಾವು ಬದುಕನ್ನು ಪ್ರೇಮಿಸಲು ತೊಡಗಿದರೆ, ಸಿಗುವ ಪ್ರೇಮ ಎಷ್ಟೇ ನೋವು ತರುವ ಅನುಭವವಾದರೂ ಬದುಕು ನಮ್ಮನ್ನು ಕಾಪಾಡುತ್ತದೆ.

ಹಿಂದೆ ಪ್ರೇಮಿಸಿದ ಅದೇ ತೀವ್ರತೆಯಿಂದ ಮತ್ತೆ ಮತ್ತೆ ಇನ್ನೊಬ್ಬಳನ್ನು ಪ್ರೇಮಿಸಲು ನನ್ನಿಂದ ಸಾಧ್ಯವಾಗಿದೆ. ಮುಖದಲ್ಲಿ ಮೀಸೆ ಮೂಡುವುದಕ್ಕೆ ಮೊದಲೇ ಮನಸಲ್ಲಿ ಪ್ರೇಮ ಹುಟ್ಟಿದೆ. ಪ್ರೇಮದಿಂದ ಆರಂಭಗೊಂಡ ಸಂಬಂಧ ಕಾಮದಲ್ಲಿ ಮುಗಿದಿದೆ. ಕಾಮದಿಂದ ಆರಂಭಗೊಂಡ ಸಾನ್ನಿಧ್ಯ ಪ್ರೇಮವಾಗೂ ಅರಳಿದೆ. ವರ್ಷಗಟ್ಟಲೆ ಸಾಗಿಬಂದ ಪ್ರೇಮ ಕೆಲವೇ ಕ್ಷಣಗಳಲ್ಲಿ ಕೈಜಾರಿಬಿದ್ದ ಗಾಜಿನಂತೆ ನುಚ್ಚು ನೂರಾಗಿದೆ. ಎಷ್ಟು ತುಂಡುಗಳಾಗಿ ಪ್ರೇಮ ಒಡೆದಿತ್ತೋ ಅದರ ನೂರು ಪಟ್ಟು ತುಂಡುಗಳಾಗಿ ನನ್ನ ಮನಸ್ಸೂ ಒಡೆದಿದೆ.

ಕೆಲವೇ ದಿನಗಳ ಸ್ನೇಹದಲ್ಲಿ ನೂರು ವರ್ಷದ ಸಾನ್ನಿಧ್ಯ ತಂದಳು ಒಬ್ಬಳು. ಎಲ್ಲಿಂದಲೋ ಬಂದವಳು. ಗೆಳೆಯನೊಬ್ಬನ ಮೂಲಕ ನನಗೆ ಪರಿಚಯವಾಗಿದ್ದವಳು. ಕಣ್ಣಲ್ಲೇ ನಗುವಳು. ಮಾತು ಕವಿತೆಯಂತಿರುತ್ತಿತ್ತು. ಅವಳ ಪ್ರತಿ ಹಾವಭಾವ ಹುಚ್ಚು ಹಿಡಿಸುತ್ತಿತ್ತು. ನೋಟದಿಂದಲೇ ಎಲ್ಲರನ್ನೂ ಸೆಳೆಯುವ ವಶೀಕರಣ ಶಕ್ತಿ ಅವಳಲ್ಲಿತ್ತು. ಆ ಅಪರಿಚಿತಳನ್ನು ಮಾತನಾಡಿಸಿದರೇ ಸಾಕೆಂದು ನನ್ನ ಗೆಳೆಯರ ಬಳಗದಲ್ಲಿ ದೊಡ್ಡ ಪೈಪೋಟಿಯೇ ಇತ್ತು.

ನನ್ನೊಂದಿಗೆ ತುಂಬ ಆಪ್ತವಾಗಿ ಮಾತನಾಡುತ್ತ ಹತ್ತಿರವಾದಳು ಇವಳು. ಒಂದೆರಡು ದಿನ ಉಳಿಯಲು ಸ್ಥಳ ಹುಡುಕುತ್ತಿದ್ದಾಗ ನನ್ನ ಮನೆಗೇ ಕರೆದುಕೊಂಡು ಹೋದೆ. ನನ್ನ ತಾಯಿ ಅವಳನ್ನು ಮಹಾರಾಣಿಯಂತೆ ನೋಡಿಕೊಂಡಳು. ಅಷ್ಟು ಆಪ್ತಳಾಗಿದ್ದವಳು ದಿಢೀರೆಂದು ಒಂದು ದಿನ ಕಾಣೆಯಾದಳು. ಎಲ್ಲಿ ಹುಡುಕುವುದೆಂದು ದಿಕ್ಕು ತೋಚದೆ ಅಲೆದಾಡಿದೆ. ಗೆಳೆಯರು ನೂರಾರು ಕಥೆಗಳನ್ನು ಕಟ್ಟಿ ತಲೆಕೆಡಿಸಿದರು. ಕೆಲವು ವಾರಗಳ ನಂತರ ಅವಳನ್ನು ನೋಡಿದೆ. ಇನ್ನೊಬ್ಬನೊಡನೆ ನಗುತ್ತ ಮಾತನಾಡುತ್ತಿದ್ದಳು. ನನ್ನೊಂದಿಗೆ ನಕ್ಕಾಗ ಅವಳ ನಗೆಯಲ್ಲೊಂದು ಸೆಳೆತವಿತ್ತಲ್ಲ, ಆ ಸೆಳೆತ ಹಾಗೆಯೇ ಇದೆ. ನಾನು ಅವಳ ಮುಂದೆ ಎಷ್ಟು ನೀರಾಗಿ ನಿಂತಿದ್ದೆನೋ ಅದರ ಎರಡು ಪಟ್ಟು ನೀರಾಗಿ ನಿಂತಿದ್ದಾನೆ ಯಾರೋ ಒಬ್ಬ. ಯಾರೋ ಒಬ್ಬಳು ನಗುತ್ತ ಬಂದುನಿಂತರೆ ಸಾಕು, ಅದನ್ನು ಪ್ರೇಮ ಎಂದು ಯಾಮಾರಿಸುವ ಎಷ್ಟೊಂದು ಗಂಡಸರು ಸಿದ್ಧರಾಗಿರುವಾಗ ಅವಳಲ್ಲಿ ನಾನು ಹೇಗೆ ತಪ್ಪು ಕಂಡುಹಿಡಿಯಲಿ?

ಇನ್ನೊಬ್ಬಳು ರಂಗಭೂಮಿಯಲ್ಲಿ ಪರಿಚಯವಾದಳು. ಹಾಗೆಯೇ ಗೆಳೆತನವಾಯಿತು. ಆಮೇಲೆ ಅದುವೇ ಪ್ರೇಮವಾಯಿತು. ನನ್ನೊಳಗಿದ್ದ ಪ್ರೇಮವನ್ನು ಅಗೆದು ಹೊರತಂದಳು. ಅವಳನ್ನು ಮದುವೆಯಾಗಲು ನಿರ್ಧಾರ ತೆಗೆದುಕೊಳ್ಳುತ್ತಿದ್ದಂತೆಯೇ ‘ಸಾರಿ ಪ್ರಕಾಶ್‌, ನೀನಂದ್ರೆ ನಂಗೆ ತುಂಬ ಇಷ್ಟ. ಆದ್ರೆ ನಿನ್ನ ಸಂಪಾದನೆಯಿಂದ ನನಗೆ ಹಿಡಿಸುವ ಬದುಕನ್ನು ಕಟ್ಟಿಕೊಳ್ಳಲಾಗುವುದಿಲ್ಲ. ಅದು ನಮ್ಮಿಬ್ಬರನ್ನೂ ಸಂಕಷ್ಟದಲ್ಲಿ ದೂಡುತ್ತದೆ. ಬೇಡ, ನನಗೀಗಾಗಲೇ ಮನೆಯಲ್ಲಿ ಗಂಡು ಹುಡುಕುತ್ತಿದ್ದಾರೆ. ಕ್ಷಮಿಸು’ ಎಂದು ಪ್ರಾಕ್ಟಿಕಲ್‌ ಆಗಿ ಹೇಳಿ ಹೋಗಿಯೇ ಬಿಟ್ಟಳು.

ಕೋಪಿಸಿಕೊಂಡು ಮನೆಬಿಟ್ಟು ಹೋದ ಅಪ್ಪ ಬಳ್ಳಾರಿಯ ಹಾಸ್ಟೆಲ್‌ ಒಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾನೆಂದು ಗೊತ್ತಾದಾಗ, ಅವನನ್ನು ಕಂಡು ಬರಹೇಳಲು ಅಪ್ಪನಿಗೆ ಒಂದು ಜೊತೆ ಹೊಸ ಬಟ್ಟೆ ಕೊಂಡು ನನ್ನ ಕೈಯಲ್ಲಿಟ್ಟು ಕಳಿಸಿದ್ದಳು ಅಮ್ಮ. ಆ ಬಳ್ಳಾರಿಯಲ್ಲಿ ನಾನು ಪ್ರೀತಿಸಿದ ಗೆಳತಿ ಇದ್ದಳು. ಚರ್ಚಾ ಸ್ಪರ್ಧೆಗಳಲ್ಲಿ ಪರಿಚಯವಾದವಳು. ಯಾವ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದರೂ ನನ್ನ ಕಣ್ಣುಗಳು ಅವಳನ್ನೂ ಅವಳ ಕಣ್ಣುಗಳು ನನ್ನನ್ನೂ ಹುಡುಕುತ್ತಿದ್ದವು. ಪ್ರತಿಸಲ ಭೇಟಿಯಾದಾಗಲೂ ಹೇಳಲು ತವಕಿಸುವ ಅಂಶಗಳು ತುಟಿಯಂಚಿನಲ್ಲಿ ನಿಂತುಬಿಡುತ್ತಿದ್ದವು.

ಈ ಸಲ ಅವಳನ್ನು ಅವಳ ಊರಿನಲ್ಲಿಯೇ ಭೇಟಿಯಾಗಿ ಹೇಳಿಯೇಬಿಡಬೇಕೆಂದು ಅಪ್ಪನನ್ನು ಕರೆತರುವ ನೆಪದಲ್ಲಿ ಹೋದೆ. ಅಪ್ಪನನ್ನು ಕಂಡು ವಿಷಯ ಮುಟ್ಟಿಸಿ, ಅವಳಿದ್ದ ವಿಳಾಸದ ಜಾಡು ಹಿಡಿದು ಮನೆಯ ಮುಂದೆ ಹೋಗಿ ನಿಂತಾಗ ಅವಳ ಮದುವೆಯಾಗಿ, ಕುಟುಂಬವೂ ಮನೆ ಖಾಲಿ ಮಾಡಿ ಊರು ಬಿಟ್ಟು ವಾರವಾಗಿತ್ತು. ನಾನೂ ಅವಳೂ ಕೊನೆಯವರೆಗೂ ನಮ್ಮ ಪ್ರೇಮವನ್ನು ಒಬ್ಬರಿಗೊಬ್ಬರು ತೋಡಿಕೊಳ್ಳಲೇ ಇಲ್ಲ. ನಾಲಿಗೆಯ ತುದಿಯಲ್ಲಿ ನಿಂತ ರಾಗ ಮರೆತ ಮೆಚ್ಚಿನ ಹಾಡಿನಂತೆ ನಮ್ಮೊಳಗೇ ಉಳಿದುಬಿಟ್ಟಿತ್ತು ನಮ್ಮಿಬ್ಬರ ಹಾಡು.

ಹೀಗೆ ಹೇಳುತ್ತಲೇ ಹೋಗಬಹುದು. ಈ ಪ್ರೇಮಗಳೆಲ್ಲ ಸೋಲೇ ಎಂದು ಕೇಳಿದರೆ ‘ಖಂಡಿತ ಇಲ್ಲ’ ಎಂದು ಹೇಳುವೆ ನಾನು. ಯಾವ ಪ್ರೇಮವೂ ಸೋಲೂ ಅಲ್ಲ, ಗೆಲುವೂ ಅಲ್ಲ. ಯಾಕೆಂದರೆ ಅದು ಸಂತೋಷವೋ, ದುಃಖವೋ, ತಪಸ್ಸೋ, ವರವೋ, ಶಾಪವೋ... ಪ್ರೇಮ ಒಂದು ಅನುಭವ.

ನಮ್ಮ ಈ ಬದುಕಿನಲ್ಲಿ ಕೆಲವು ವಿಷಯಗಳನ್ನು ನಾವು ತಪ್ಪಿಸಲು ಸಾಧ್ಯವೇ ಇಲ್ಲ. ಮರಣದಂತೆ ಪ್ರೇಮ– ಕಾಮ ಎಲ್ಲವೂ ಜೀವಿಸುವುದಕ್ಕೆ, ಜೀವಿಸುತ್ತಿರುವುದಕ್ಕೆ ಕಾರಣಗಳು. ನಮ್ಮ ಕೆಲವು ದಿನಗಳ ಬದುಕಿನಲ್ಲಿ ಸಿಗುವ ನೋವುಗಳೆಲ್ಲ ಸಹಿಸಲೇಬೇಕಾದ ಮತ್ತು ದಾಟಿ ಹೋಗಲೇಬೇಕಾದ ಸತ್ಯಗಳು. ಎಲ್ಲ ಮನುಷ್ಯರೂ ಹೆತ್ತವರಿಗೆ ನೋವು ಕೊಟ್ಟು ಹುಟ್ಟುವವರೇ ಅಲ್ಲವೇ? ಹಾಗಿದ್ದಾಗ ನೋವನ್ನು ಮಾತ್ರ ಎದುರುಗೊಳ್ಳಲಾರೆ ಎಂದು ಆತ್ಮಹತ್ಯೆಗೆ ದಾರಿ ಹುಡುಕುವುದು ನ್ಯಾಯವೇ? ನೋವಿಲ್ಲದ ಬದುಕೂ ಒಂದು ಬದುಕೇ?

ನಾನು ತುಂಬಾ ಪ್ರೀತಿಸಿದ ನನ್ನ ಮಗ ವಿನಾಕಾರಣ ದಿಢೀರೆಂದು ತೀರಿಹೋದ. ಅದು ಕ್ಷಣಗಳಲ್ಲಿ ಸಂಭವಿಸಿದ ವಿಪತ್ತು. ಯಾರನ್ನೂ ದೂಷಿಸಲಾಗದ ನೋವಿದೆಯಲ್ಲ, ಅದನ್ನು ಹೇಗೆ ವಿವರಿಸಲಿ? ಹಾಗೆಂದು ನಾನವನ ಮೇಲಿಟ್ಟಿದ್ದ ಪ್ರೀತಿಯ ಕುರುಹಾಗಿ ಅವನನ್ನು ಪೆಟ್ಟಿಗೆಯಲ್ಲಿರಿಸಿ ನನ್ನೊಂದಿಗೆ ಇರಿಸಿಕೊಳ್ಳಲು ಸಾಧ್ಯವೇ? ಆದರೆ ಅವನನ್ನು ಮಣ್ಣಿನಲ್ಲಿ ಹೂತ ಮೇಲೂ ಅವನ ನೆನಪು ನನ್ನೊಳಗಿನ್ನೂ ಜೀವಂತವಾಗಿದೆ. ಅವನ ಹುಟ್ಟು ನನ್ನ ಗೆಲುವಾಗಿ, ಅವನ ಸಾವು ನನ್ನ ಸೋಲಾಗಲಾರದು. ಅವನು ಬದುಕಿದ್ದಾಗ ಅನುಭವವಾಗಿದ್ದ, ಸಾಯುವಾಗಲೂ ಅನುಭವವಾಗಿದ್ದ. ಅವನಿಲ್ಲದೇ ನಾನೀಗ ಬದುಕುತ್ತಿರುವಾಗಲೂ ಅನುಭವವಾಗಿಯೇ ಇದ್ದಾನೆ. ನನ್ನ ಮಗನ ಮೇಲೆ ನಾನಿಟ್ಟಿದ್ದೂ ಪ್ರೇಮವೇ.

ನೋವಿನಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆಯ ಮೊರೆಹೋಗುವುದು, ಅದಕ್ಕೆ ಪ್ರೇಮವನ್ನು ಕಾರಣವೆಂದು ಹೇಳುವುದಕ್ಕಿಂತ ದೊಡ್ಡ ಅರ್ಥಹೀನ ಮಾತು ಬೇರೊಂದಿಲ್ಲ. ಗಂಡೋ ಹೆಣ್ಣೋ ಯಾರೇ ಆದರೂ ಬದುಕನ್ನು ಪ್ರೇಮಿಸಬೇಕು. ಹಾಗಿದ್ದಾಗಲೇ ನೋವು, ಓಡಿ ಅವಿತುಕೊಳ್ಳುವ ವಿಷಯವಾಗದೆ ದಾಟಿ ಹೋಗಲೇಬೇಕಾದ ಅನುಭವವಾಗಿ ಇರುತ್ತದೆ. ನಗುವಿನಂತೆಯೇ ಅಳುವೂ ಒಂದು ಅನುಭವ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT