ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟರಾಜ: ಪ್ರತಿಮೆ ಮತ್ತು ತತ್ವ

Last Updated 25 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಹೋದ ಬುಧವಾರ ವಿಶ್ವದ ಅತ್ಯಂತ ಹೆಸರಾಂತ ಮತ್ತು ಪ್ರತಿಷ್ಠಿತ ಕಲಾ ಸಂಸ್ಥೆಯಾದ ಪ್ಯಾರಿಸ್ಸಿನ ರೂದಾ ಮ್ಯೂಜಿಯಮ್ಮಿನಲ್ಲಿ ನಮ್ಮ ನಟರಾಜನನ್ನು ಕುರಿತಾದ ಒಂದು ಮಹತ್ವಾಕಾಂಕ್ಷಿ  ಸಮಾರಂಭ ಏರ್ಪಡಿಸಿದ್ದರು.

ರೂದಾ ಮ್ಯೂಜಿಯಂ ಮತ್ತು ಪ್ಯಾರಿಸ್-8 ವಿಶ್ವವಿದ್ಯಾಲಯದ ಜಂಟಿ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಸದರಿ ಸಮಾರಂಭದಲ್ಲಿ ಎರಡು ಮಗ್ಗುಲುಗಳು: ಒಂದು ವಿಚಾರಗೋಷ್ಠಿ ಮತ್ತು ನಟರಾಜನ ಸುತ್ತ ಕಟ್ಟಲಾದ ಒಂದು ಬಹುಶೈಲಿಯ ನೃತ್ಯಪ್ರಸ್ತುತಿ.

ನಟರಾಜ ಪ್ಯಾರಿಸ್‌ನಲ್ಲಿ ಹೇಗೆ, ಯಾಕೆ ಬಂದ?
1913. ಯೂರೋಪಿನಾದ್ಯಂತ ಶಿಲ್ಪಕಲೆಯಲ್ಲಿ ಬಹುದೊಡ್ಡ ಹೆಸರಾಗಿದ್ದ ಇಳಿವಯಸ್ಸಿನ ಅಗಸ್ತೆ ರೂದಾಗೆ ಆತನ ರಷ್ಯನ್ ಗೆಳೆಯನಾಗಿದ್ದ ಗೊಲುಬೇವ್ ತಮಿಳುನಾಡಿನ ಚೋಳಯುಗದ ನಟರಾಜನ ಕಂಚುಪ್ರತಿಮೆಯ ಫೋಟೋಗಳಿದ್ದ ಪುಸ್ತಕವೊಂದನ್ನು ಕಳುಹಿಸಿದ. ಆ ಪ್ರತಿಮೆಯ ಚೆಲುವು ರೂದಾನನ ಮನಸ್ಸನ್ನು ಇಡಿಯಾಗಿ ಹೀರಿಕೊಂಡುಬಿಟ್ಟಿತು.

ನಟರಾಜನ ಧಾರ್ಮಿಕ, ಪೌರಾಣಿಕ, ಸಾಂಸ್ಕೃತಿಕ ಅರ್ಥಗಳ ಯಾವುದೇ ಪರಿವೆ ಇಲ್ಲದ ರೂದಾ ಅದನ್ನು ಕೇವಲ ಕಲಾಕೃತಿಯನ್ನಾಗಿ ಕಂಡು ತನ್ನ ಪ್ರತಿಕ್ರಿಯೆಯನ್ನು ಗಾಢವಾದ, ಕಾವ್ಯಾತ್ಮಕವಾದ ಗದ್ಯದಲ್ಲಿ ಉತ್ಕಟವಾದ ರೀತಿಯಲ್ಲಿ ಬಣ್ಣಿಸಿದ. ಜಗತ್ತಿನ ಶಿಲ್ಪಕಲೆಯ ಈ ಹಿರೇಕನ ಹೆಸರಿನಲ್ಲಿ ಫ್ರಾನ್ಸಿನಲ್ಲಿ ಸ್ಥಾಪಿತವಾಗಿರುವ ಸಂಸ್ಥೆಯಲ್ಲಿ ಅವನ ಮನಸ್ಸನ್ನು ಈ ಮಟ್ಟಿಗೆ ಪ್ರಭಾವಿಸಿದ ಕಲಾಕೃತಿಯ ಬಗ್ಗೆ ಆ ಘಟನೆಯ ಶತಮಾನೋತ್ಸವವಾಗಿ ಸದರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
 
ಇದರ ಮುಂಚೂಣಿಯಲ್ಲಿದ್ದವರು ಪ್ಯಾರಿಸ್-8 ವಿಶ್ವವಿದ್ಯಾಲಯದ ಪ್ರದರ್ಶನಕಲೆಗಳ ವಿಭಾಗದ ಮುಖ್ಯಸ್ಥೆಯೂ 34 ವರ್ಷಗಳಿಂದ ಭರತನಾಟ್ಯದ ನೃತ್ಯಾಂಗನೆಯಾಗಿ ಮಂಗಳೂರಿನ ಮುರಳೀಧರರಾವ್ ಅವರ ಶಿಷ್ಯೆಯೂ ಆದ ಪ್ರೊಫೆಸರ್ ಕಾತ್ಯಾ ಲೆಜರೆ ಅವರು.
 
ಅವರ ಪ್ರಯತ್ನದ ಫಲವಾಗಿ ಇಡೀ ಸಮಾರಂಭ ವಿಭಿನ್ನ ಸಂಸ್ಕೃತಿಗಳ ವಿನಿಮಯ ಸ್ವರೂಪದ ಬಗೆಗಿನ ತಲಸ್ಪರ್ಶಿ ಆಲೋಚನೆಯಾಗಿ, ಹೃದ್ಯ ಅಭಿವ್ಯಕ್ತಿಯಾಗಿ ಮಾರ್ಪಟ್ಟಿತು.
ತನ್ನ ವಿಪುಲ ಶಿಲ್ಪಸೃಷ್ಟಿಯಲ್ಲಿ ರುದಾ ಪರಂಪರಾನುಗತ ದಾರಿಯನ್ನು ಬಿಟ್ಟು ತನ್ನ ಯುಗದ ಹಿರಿಯ ಯೂರೋಪಿಯನ್ ಕಲಾಕಾರರಾದ ವ್ಯಾನ್ ಗೋ, ಗಾಗಿನ್, ರೆಂಬ್ರಾಂಟ್‌ರ ಹಾಗೆ ತನ್ನದೇ ಮಾರ್ಗವನ್ನು ಕಟ್ಟಿಕೊಂಡ.

  ನಿಶ್ಚೇತವಾದ, ನಿಶ್ಚಲವಾದ ಕಲ್ಲಿನಲ್ಲಿ ಜೀವದ ಉಸಿರನ್ನು ಚಲನೆಯನ್ನು ತರುವುದರಲ್ಲಿ ಆತನದು ಎತ್ತಿದ ಕೈಯಾಗಿತ್ತು. ಆತ ಚೋಳನಟರಾಜ ಪ್ರತಿಮೆಗಳ ಫೋಟೋದಲ್ಲಿ ಕಂಡದ್ದು ಒಬ್ಬ ದೇವರನ್ನಲ್ಲ. ಅಥವಾ ಸಂಚಿತಾರ್ಥಗಳ ಸಂಕೇತವನ್ನಲ್ಲ. ಅಥವಾ ಯಾವ ಪೌರ್ವಾತ್ಯಕಲೆಗಳನ್ನು ಬಿಳೀ ತೊಗಲಿನ ಪಡುವಣದ ವಿದ್ವಾಂಸರು ಬರ್ಬರವಾಗಿ ಕಂಡಿದ್ದರೋ ಅದನ್ನೂ ಅಲ್ಲ.

ಅಥವಾ ಯಾವುದನ್ನು ಆನಂದಕುಮಾರಸ್ವಾಮಿಯವರಂಥ ಪೌರ್ವಾತ್ಯವಾದಿಗಳು ವಿಶ್ವತತ್ವದ ದಾರ್ಶನಿಕ ಪ್ರತಿಮೆಯನ್ನಾಗಿ ಕಂಡರೋ ಅದನ್ನೂ ಅಲ್ಲ. ಅಥವಾ ಕುಮಾರಸ್ವಾಮಿಯವರಂಥವರ ನಿಂದಕರಾದ ಇಂದಿನ `ಉತ್ತರ~  ಮೀಮಾಂಸಕರು ಯಾವುದನ್ನು ಆಳುವ ಕೋಮು-ವರ್ಗಗಳ ರಾಜಕೀಯ ಬಲದ ನಿಶಾನೆಯಾಗಿ ಕಾಣುತ್ತಾರೋ ಅದನ್ನೂ ಅಲ್ಲ.

ರೂದಾನಿಗೆ ಅದೊಂದು ಅಪೂರ್ವ ಕಲಾತ್ಮಕ ಅಭಿವ್ಯಕ್ತಿ. ಸರ್ವಜೀವ ಕಾರಣವಾದ ಚಲನಾಶಕ್ತಿಯ ಅಪ್ರತಿಮ ಸಾಕಾರರೂಪ. ಅದನ್ನು ಬಣ್ಣಿಸುವ ತಹತಹದಲ್ಲಿ ಆತ ಹೇಳುತ್ತಾನೆ: `ಶಬ್ದಗಳು ಸಾಲದೆ ಹೋಗುತ್ತವೆ.~

ಆದ್ದರಿಂದ ತನ್ನ ದಾಖಲಿತ ಪ್ರತಿಕ್ರಿಯೆಯಲ್ಲಿ ರುದಾ ಶಬ್ದಗಳನ್ನು ಸುತ್ತಿಗೆಯೋಪಾದಿಯಲ್ಲಿ ಮತ್ತು ಅರ್ಥಗಳನ್ನು ಉಳಿಯೋಪಾದಿಯಲ್ಲಿ ಬಳಸುತ್ತಾ ತನ್ನ ಚಿತ್ತಶಿಲ್ಪಶಾಲೆಯಲ್ಲಿ ಮೂಡಿದ ಪ್ರತಿ ನಟರಾಜನನ್ನು ತನ್ನದೇ ಆದ ರೀತಿಯಲ್ಲಿ ನಿರ್ಮಿಸಿಕೊಳ್ಳುತ್ತಾನೆ.

ಆತನ ಪ್ರತಿಕ್ರಿಯೆಯನ್ನು ತಾತ್ಪರ್ಯರೂಪದಲ್ಲಿ ಸಂಗ್ರಹಿಸುವ ಪ್ರಯತ್ನ ಆತನ ಮೇರುಶಿಲ್ಪಕೃತಿಗಳ ಸಾರಾಂಶ ಹೇಳುವ ಪ್ರಯತ್ನದಷ್ಟೇ ವ್ಯರ್ಥ. ಆದ್ದರಿಂದ ಅವನ ಕೆಲವು ಮುಖ್ಯವಾಕ್ಯಗಳನ್ನು ಅನುವಾದಿಸಿಕೊಡುವುದೇ ಮೇಲು.

ಉದಾಹರಣೆಗೆ, ನಟರಾಜನ ತುಟಿಯನ್ನು ರೂದಾ ಹೀಗೆ ರೂಪಿಸುತ್ತಾನೆ:
`ಈ ತುಟಿಗಳು: ಶ್ರೇಷ್ಠವಾದ ಆಹ್ಲಾದಕರವಾದ ನಾಸಾಪುಟಗಳಿಂದ ಆವೃತವಾದ ಆನಂದಸರೋವರಗಳು. ಸರಸರ ಸರ್ಪನಂತೆ ಆರ್ದ್ರ ಆನಂದದಿಂದ ಏರಿಳಿಯುವ ಬಾಯಿ. ರೆಪ್ಪೆಗಳ ಮೇಲುಹೊದಿಕೆಯಡಿ ಮುಚ್ಚಿರುವ ಉಬ್ಬು ಕಣ್ಣುಗಳು..ತುಂಬುಮೊಗದ ಭಿತ್ತಿಯ ಮೇಲೆ ನಯವಾಗಿ ರಚಿತವಾದ ಮೂಗಿನ ಹೊಳ್ಳೆಗಳು..~

ಇಂಥ ಮಾತುಗಳಲ್ಲಿ ನಟರಾಜಮೂರ್ತಿಯ ಒಡಲ ಭಾಗಗಳನ್ನು ಬಣ್ಣಿಸಿದ ನಂತರ ಆ ಎಲ್ಲವುಗಳ ನಡುವಿನ ಐಕ್ಯತೆಯ ಬಗ್ಗೆ ಹೀಗೆನ್ನುತ್ತಾನೆ:

`ಒಟ್ಟಿನಲ್ಲಿ ಗಾಢತೆಯ, ವೈರುಧ್ಯಗಳ, ಹಗುರತೆಯ, ಶಕ್ತಿಯ ಗುಣಗಳೇ ಇಲ್ಲಿನ ಹುರುಳು.. ಆದರೆ ಅವುಗಳಲ್ಲಿ ಯಾವುದೂ ತನ್ನಷ್ಟಕ್ಕೆ ತಾನೇ ಮೌಲಿಕವಲ್ಲ: ಮೂಲಚಲನೆಯ ಜೊತೆಗೆ ಹೊಂದಿಕೆ ಇರದಿದ್ದರೆ ಅವೆಲ್ಲವೂ ಅರ್ಥಹೀನ ಅಲಂಕಾರಗಳಾಗುತ್ತಿದ್ದವು.~
ಆತನ ಕಾಲದಲ್ಲಿ ಪಡುವಣದ ಪೌರ್ವತ್ಯವಾದಿಗಳು ನಟರಾಜನಂಥ ಭಾರತೀಯ ಸಂಸ್ಕೃತಿಯ ಕುರುಹುಗಳನ್ನು ಬರ್ಬರ ಸಂಸ್ಕೃತಿಯ ವಿಕೃತಮೂರ್ತಿಗಳನ್ನಾಗಿ ಬಹುಮಟ್ಟಿಗೆ ಕಾಣುತ್ತಿದ್ದರೆಂಬುದನ್ನು ಪಾರ್ಥಮಿತ್ತರ್‌ರಂತ ವಿದ್ವಾಂಸರು ಗುರುತಿಸಿದ್ದಾರೆ.

ಒಂದು ರೀತಿಯಲ್ಲಿ ಒಂದು ವರ್ಗದ ಭಾರತೀಯರಿಗೆ ಆರಾಧ್ಯಸ್ವರೂಪವಾಗಿರುವ ಮ್ಯೋಕ್ಸ್‌ಮುಲ್ಲರ್‌ರಂಥವರೂ ಭಾರತೀಯ ಸಂಸ್ಕೃತಿಯನ್ನು ಮೆಚ್ಚಿದರೂ ಅದನ್ನು ಪಶ್ಚಿಮದ ಸಂಸ್ಕೃತಿಗೆ ಹೋಲಿಸಿದರೆ  ಕೆಳಮಟ್ಟದ್ದೆಂದು ಭಾವಿಸಿದ್ದರು. ಈ ರೀತಿಯ ಗೃಹೀತಗಳಿಗೆ ಬಲಿಯಾಗದೆ ಪೌರ್ವಾತ್ಯ ಕಲೆಗಳನ್ನು ಕುರಿತು ರುದಾ ಹೀಗೆನ್ನುತ್ತಾನೆ:

`ಮೂರ್ಖನ ಗ್ರಹಿಕೆ ಸ್ಥೂಲವಾದುದರಿಂದ ಆತ ಎಲ್ಲವನ್ನೂ ಅತಿಯಾಗಿ ಸರಳೀಕರಿಸುತ್ತಾನೆ; ಉತ್ತಮ ಕಲೆಗಳಿಂದ ಹಿಂಜರಿದು ಅಧಮವಾದುದನ್ನು ಪ್ರೀತಿಸುತ್ತಾನೆ. ಅವನಿಗೇನೂ ಅರ್ಥವಾಗುವುದಿಲ್ಲ. ಹೆಚ್ಚು ಆಸಕ್ತಿಯನ್ನು ಬಳಸಿಕೊಳ್ಳಲು, ಸೂಕ್ಷ್ಮವಾಗಿ ನೋಡಿ ಅರ್ಥಮಾಡಿಕೊಳ್ಳಲು ನಾವು ಇನ್ನೂ ತಲಸ್ಪರ್ಶಿಯಾಗಿ ಪರಿಶೀಲಿಸಬೇಕು.~

ರೂದಾನ ತೆರೆದ ದೃಷ್ಟಿ ಪೂರ್ವಗ್ರಹಪೀಡಿತವಾದ ಯೂರೋಪಿನ ಸಾಮ್ರಾಜ್ಯವಾದಿ ಏಜೆಂಟುಗಳ ದೃಷ್ಟಿಗಿಂತ ಬೇರೆ ಥರದ್ದು.ಆತನ ಅರ್ಥೈಸುವಿಕೆ ಲಾಗಾಯ್ತಿನ, ಇಂದಿನ ಭಾರತೀಯರ ದೃಷ್ಟಿಗಿಂತಲೂ ಭಿನ್ನ. ಶಿವಭಕ್ತರು ನಟರಾಜನಲ್ಲಿ ತಮ್ಮ ಭಕ್ತಿಗೆ ತುಡಿಯುವ ಚೈತನ್ಯವನ್ನು ಕಂಡರು. ಪರಿಪರಿಯಾಗಿ ವರ್ಣಿಸಿದರು.

6ನೆ ಶತಮಾನದ ತಮಿಳು ಭಕ್ತಕವಯತ್ರಿ ಕಾರೈಕ್ಕಾಲ್ ಅಮ್ಮಯಾರ್ ಸುಡುಗಾಡಿನ ಭೀಕರದೃಶ್ಯ ಮತ್ತು ಕರ್ಕಶ ಶಬ್ದಗಳ ಹಿನ್ನೆಲೆಯಲ್ಲಿ ನಟರಾಜನ ಎಗ್ಗಿರದ ಆನಂದದ ಕುಣಿತವನ್ನು ಅತ್ಯಂತ ಮೂರ್ತವಾಗಿ ಬಣ್ಣಿಸಿದ್ದಾಳೆ ತನ್ನ  `

ತಿರುವಲಂಗಾಡು ಪದಿಗಂ~ ಎಂಬ ಕವಿತೆಯಲ್ಲಿ. ರಾವಣ ತನ್ನ ದ್ರಾವಿಡ ಸಂಸ್ಕೃತದ ಡಮರು ಲಯದ ಶಿವತಾಂಡವ ಸ್ತೋತ್ರದಲ್ಲಿ ಸರ್ವಾಂಗಗಳನ್ನು ಕುಣಿತಕ್ಕೆ ಹಚ್ಚುವ ಬಗೆಯಲ್ಲಿ ನಟರಾಜನ ಪ್ರದೋಶನೃತ್ಯವನ್ನು ಕೀರ್ತಿಸಿದ್ದಾನೆ.

ಶಿವನನ್ನು ಬಹುಮಟ್ಟಿಗೆ ಲಿಂಗರೂಪದಲ್ಲಿ ಕಾಣುವ ಬಸವಣ್ಣನವರೂ  `ದಶಭುಜಗಳತ್ತತ್ತ, ಬ್ರಹ್ಮಾಂಡವಿತ್ತಿತ್ತ~  ಎಂದು ಶಿವನೃತ್ಯವನ್ನು ಚಿತ್ರಿಸಿದ್ದಾರೆ. ಉತ್ಕಟ ಶಿವಭಕ್ತಕವಿ ಹರಿಹರ ನಟರಾಜನನ್ನು ಅರಮನೆ, ದೇವಸ್ಥಾನಗಳ ಗೋಡೆಗಳ ಹೊರಗೆ ಕರೆತಂದು ಕುಂಬಾರಗುಂಡಯ್ಯನ ಕುಂಬಾರಿಕೆಯ ಜಾಗದಲ್ಲಿ ಹೀಗೆ ಕುಣಿಯುವಂತೆ ಮಾಡಿದ್ದಾನೆ:
ಒಂದು ಪದಂ ಬ್ರಹ್ಮಾಂಡವ ಮುಟ್ಟಲ್

ಒಂದು ಪದಂ ಪಾತಾಳವ ಮೆಟ್ಟಲ್
ಭಕ್ತರಲ್ಲದ ಆಧುನಿಕ ಕವಿಗಳು ನಟರಾಜನಲ್ಲಿ  ಧಾರ್ಮಿಕೇತರ ಕಾವ್ಯಾರ್ಥಗಳನ್ನು ಕಂಡಿದ್ದಾರೆ. ಕುವೆಂಪು ನಟರಾಜನನ್ನು ಕನ್ನಡ ಕಲಾಚೇತನದ ಪ್ರತೀಕವನ್ನಾಗಿಸಿದ್ದಾರೆ:  `ಬಾರಿಸು ಕನ್ನಡ ಡಿಂಡಿಮವ/ ಓ ಕರ್ನಾಟಕ ಹೃದಯ ಶಿವ `. ಕವಿ ರವೀಂದ್ರರು ತಮ್ಮಂದು ಕವಿತೆಯಲ್ಲಿ ನಟರಾಜನನ್ನು ಪ್ರಳಯದ ತರುವಾಯದ ಪುನಃಸೃಷ್ಟಿಯ ಕುರುಹಾಗಿ ನೋಡಿದ್ದಾರೆ:

ಪ್ರೋಲಯ್ ನಾಚೂನ್ ನಾಚೂಲೆ ಜೊಖೊನ್
ಅಪೊನೊ ಭೂಲೆ ಹೇ ನಟರಾಜ್ ನಟರಾಜ್
ಜೊಟಾರ್ ಬೊಂಧೊನ್ ಪೊಡ್ಲೆ ಖುಲೆ

ನಾಟ್ಯಶಾಸ್ತ್ರಿಗಳು, ನಾಟ್ಯಾಚಾರ್ಯರು ನರ್ತನಕಲೆಯ ಮೌಲ್ಯಗಳ ಸಾಕಾರವನ್ನು ಕಂಡರು. ನಾಟ್ಯಶಾಸ್ತ್ರದಲ್ಲಿ ಶಿವನೇ ನಾಟ್ಯಕಲೆಯ ಕರ್ತೃ.ದಾರ್ಶನಿಕರೂ ನಟರಾಜನನ್ನು ತಮ್ಮರಿವಿನ ಮಿತಿಯಲ್ಲಿ ಗ್ರಹಿಸಲೆಳೆಸಿದ್ದಾರೆ. ತಮಿಳು ಸಿದ್ಧ ಪರಂಪರೆಯಲ್ಲಿ ನಟರಾಜ ಬ್ರಹ್ಮಾಂಡ ಚಾಲಕ ಶಕ್ತಿಯ ಸಂಕೇತ.

ಚಿದಂಬರ ನಟರಾಜಮೂರ್ತಿಯ ದೇಹದ ಐದು ಅಂಗಗಳು ಪರಶಿವನ ಸೃಷ್ಟ್ಯಾದಿ ಪಂಚಕ್ರಿಯೆಗಳು; ನ-ಮ-ಶಿ ವಾ-ಯ ಮಂತ್ರದ ಐದಕ್ಷರಗಳು; ಭೂಮ್ಯೋದಿ ಪಂಚಭೂತಗಳು.

ಅವನ ಸುತ್ತಲ ಬೆಂಕಿಯ ಚಕ್ರ ಕಾಲದ ಸಂಕೇತವಾದ ಅಲಾತ ಚಕ್ರ. ಅವನ ಕಾಲಡಿಯ ತುಳಿತಕ್ಕೆ ಸಿಕ್ಕಿದ ಕುಬ್ಜ ವ್ಯಕ್ತಿ ಅಜ್ಞಾನಕ್ಕರೂಪಿಯಾದ ಅಪಸ್ಮಾರಮೂರ್ತಿ; ಅವನ ಇಡೀದೇಹ ಅಕಾರಾದಿಯಾಗಿ ಕ್ಷಕಾರಾಂತವಾದ ಅಕ್ಷರಮಾಲೆಯ ಮಾತೃಕೆ.

ಬಹುಮಟ್ಟಿಗಿನ ನಟರಾಜನ ವರ್ಣನೆ ಚಿದಂಬರದ ದೇಗುಳದಲ್ಲಿರುವ ನಟರಾಜಮೂರ್ತಿಯ ಪ್ರಭೇದವಾದ ಆನಂದತಾಂಡವಮೂರ್ತಿಯನ್ನೇ ಆಶ್ರಯಿಸಿವೆ. ಆದರೆ ಅಷ್ಟೇ ಅರ್ಥಗರ್ಭಿತವಾದ ಐಹೊಳೆ, ಬದಾಮಿ, ಪಟ್ಟದಕಲ್ಲು, ಎಲ್ಲೋರ, ಎಲಿಫೆಂಟಾದ ನಟರಾಜಮೂರ್ತಿಗಳು ಈ ಬಗೆಯ ಚಿಂತನೆ, ವರ್ಣನೆಗಳಿಗೆ ಆ ಮಟ್ಟಿಗೆ ಆಹಾರವಾಗಿಲ್ಲ. ಅದೇ ರೀತಿ `ಮಲೆಮಾದೇಶ್ವರ~ ಕಾವ್ಯದಲ್ಲಿ ವರ್ಣಿತವಾಗಿರುವ ಶಿವನನಾಟ್ಯದ ಕಲ್ಪನೆಯ ಜಾನಪದೀಯತೆ ಮೇಲಿನ ಮಾರ್ಗೀಯ ದೃಷ್ಟಿಗಳಿಗಿಂತ ಭಿನ್ನ ನೆಲೆಯದು.

ಚೋಳರ ಯುಗದಲ್ಲಿ ಚಿದಂಬರ ನಟರಾಜಮೂರ್ತಿ ಅವರ ಸಾಮ್ರೋಜ್ಯ ಶಕ್ತಿಯ ಸಂಕೇತವಾದ್ದರಿಂದ ಆ ಮೂರ್ತಿಪ್ರಬೇಧಕ್ಕೆ ಮಿಗಿಲಾದ ಜನಪ್ರಿಯತೆ ದೊರಕಿತೆಂದು ಇಂದಿನ ಇತಿಹಾಸಕಾರರ ವಾದ. ಇದು ನಿಜವೂ ಇರಬಹುದು. ಆದರೆ ಇಂದು ಜಗತ್ತಿನಾದ್ಯಂತ ಹರಡಿರುವ ಇದರ ಜನಪ್ರಿಯತೆಯ ಕಾರಣಗಳನ್ನು ಕೇವಲ ರಾಜಕೀಯ ಅಥವಾ ಸಾಂಸ್ಕೃತಿಕ ಯಜಮಾನಿಕೆ ಚೌಕಟ್ಟಿನಲ್ಲಿ ನೋಡುವುದು ಕಷ್ಟ.
 
ಇಂದು ನಟರಾಜಮೂರ್ತಿ ಭಾರತೀಯ ಸಂಸ್ಕೃತಿಯ ಒಂದು ಕ್ಲಿಷೆಯಾಗಿ ಪ್ರಸಿದ್ಧ ಹೋಟೆಲುಗಳ, ಆಫೀಸುಗಳ, ಪೋಸ್ಟರುಗಳ, ಸಿರಿವಂತರ ಮನೆಗಳ ಅಲಂಕಾರವಾಗಿರುವುದೂ ನಿಜ. ಆದರೆ ಇವೆಲ್ಲವುಗಳ ಹೊರಗೆ ಭಿನ್ನ ಸಂಸ್ಕೃತಿಯ ಸೂಕ್ಷ್ಮ ಮನಗಳು ನಟರಾಜಮೂರ್ತಿಯಲ್ಲಿ ಹೊಸ ಅರ್ಥಗಳನ್ನು ಕಾಣುತ್ತಲೇ ಬಂದಿವೆ.

ಇದರ ಒಂದು ಉದಾಹರಣೆ ಭೌತಶಾಸ್ತ್ರಜ್ಞ ಫ್ರಿತೋಫ್ ಕಾಪ್ರಾ. ಆತ ನಟರಾಜನಲ್ಲಿ ವಿಜ್ಞಾನ-ಕಲೆಗಳನ್ನು ಒಗ್ಗೂಡಿಸುವ ಉಪಮೆಯನ್ನು ಕಂಡ ಕಾರಣ ನಟರಾಜ ಮೂರ್ತಿ ಇಂದು ಸ್ವಿಟ್ಜರ್ಲೆಂಡಿನ ಪ್ರಸಿದ್ಧ ವೈಜ್ಞಾನಿಕ ಕೇಂದ್ರವಾದ ಸಿಇಆರ್‌ಎನ್‌ನ ಆವರಣದಲ್ಲಿ ಸ್ಥಾಪಿಸಲ್ಪಟ್ಟಿದೆ. ರೂದಾ ನಟರಾಜನಲ್ಲಿ ತನ್ನ ಜರೂರಿಗಳಿಗನುಗುಣವಾಗಿ ಶುದ್ಧ ಕಲಾತ್ಮಕ ಅರ್ಥಗಳನ್ನು ಗ್ರಹಿಸಿದ.
 
ಅವನ ಗ್ರಹಿಕೆಯ ಬಗೆ ತನ್ನ ಯುಗದ ಚಾರಿತ್ರಿಕ ಮಿತಿಗಳ ಮಧ್ಯೆಯೂ ಅವುಗಳಿಂದ ಮುಕ್ತನಾಗಿ ಕಲಾವಿದನ ಮುಗ್ಧತೆಯಿಂದ ಹೊಸ ಅರ್ಥಗಳನ್ನು ಕಲ್ಪಿಸಿ, ಪ್ರಭಾವರಹಿತವಾದ, ಸ್ವಾರ್ಥವಿಹೀನವಾದ ಪರಸ್ಪರ ಸಾಂಸ್ಕೃತಿಕ ಅರ್ಥೈಸುವಿಕೆಗಳ ಒಂದು ಒಳ್ಳೆಯ ಮಾದರಿಯಾಗಿದ್ದಾನೆ. ಅವನು ನಟರಾಜನನ್ನು ನೋಡಿದ ಮುಕ್ತದೃಷ್ಟಿಯಿಂದ ಆತ ಅದರಲ್ಲಿ ಕಂಡ ಕಲಾತ್ಮಕ ದರ್ಶನವನ್ನೂ ನಾವೂ ಅರ್ಥಮಾಡಿಕೊಳ್ಳುವ ಅಗತ್ಯವಿದೆ.

ಇಂತಹ ಸಾಂಸ್ಕೃತಿಕ ವಿನಿಮಯಗಳನ್ನೇ ವಸಾಹತುಶಾಹಿಯ ಕಟುವಿರೋಧಿಯಾದ ಕಪ್ಪು ಚಿಂತಕ ಆಮಿ ಸೀಜರ್ ಅಸಮಾನ ವಿನಿಮಯಕ್ಕಿಂತ ಭಿನ್ನವಾದ ಆರೋಗ್ಯಕರವಾದ, ಸೃಜನಶೀಲವಾದ ಕೊಡುಕೊಳೆಯೆಂದು ಕರೆದದ್ದು.

ನಿಮ್ಮ ಅನಿಸಿಕೆ ತಿಳಿಸಿ: (editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT