ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿಯರಿಗೇಕೆ ರಾಜಕೀಯ ಮೋಹ

Last Updated 22 ಮಾರ್ಚ್ 2012, 19:30 IST
ಅಕ್ಷರ ಗಾತ್ರ

ನಾಯಿ ಹಸಿದಿತ್ತು, ಅನ್ನ ಹಳಸಿತ್ತು ಎಂಬ ಗಾದೆ ಮಾತೊಂದಿದೆ. ಈಗ ರಾಜಕೀಯಕ್ಕೆ ಧುಮುಕುತ್ತಿರುವ ಚಿತ್ರ ನಟನಟಿಯರನ್ನು ಕಂಡಾಗ ಈ ಗಾದೆ ಪದೇಪದೇ ನೆನಪಾಗುತ್ತದೆ. ಎಲ್ಲ ರಾಜಕೀಯ ಪಕ್ಷಗಳೂ ಇಂದು ನೈತಿಕತೆ ಕಳೆದುಕೊಂಡಿವೆ. ಭ್ರಷ್ಟಾಚಾರವನ್ನೇ ಉಸಿರಾಡುತ್ತಿವೆ. ಆಚಾರ ವಿಚಾರಗಳೆಲ್ಲಾ ಮಾಯವಾಗಿವೆ.

ಎಲ್ಲ ಪಕ್ಷಗಳೂ ಜನರ ನಂಬಿಕೆಯನ್ನೇ ಕಳೆದುಕೊಂಡು ಅತಂತ್ರವಾಗಿವೆ. ರಾಜಕೀಯ ಪಕ್ಷಗಳ ನಾಯಕರು ಹೇಗೆ ದಿಕ್ಕೆಟ್ಟವರಾಗಿದ್ದಾರೋ ಹಾಗೆಯೇ ಸಿನಿಮಾಕ್ಷೇತ್ರದಲ್ಲಿನ ಕೆಲವು ನಾಯಕ-ನಾಯಕಿಯರೂ ದಿಕ್ಕುಕಾಣದೆ ಪರಿತಪಿಸುತ್ತಿದ್ದಾರೆ. ಎರಡೂ ಕ್ಷೇತ್ರಗಳಲ್ಲೂ ಅಧಿಕಾರ ದಾಹ, ಆಶ್ರಯ ತಾಣಕ್ಕಾಗಿ ತಹತಹ ಎದ್ದು ಕಾಣುತ್ತಿದೆ.

ಎಲ್ಲ ರಾಜಕೀಯ ಪಕ್ಷಗಳೂ ಈಗ ಮುಳುಗುತ್ತಿದ್ದು, ನಾಯಕರಿಗೀಗ ತೇಲಲು ಒಂದು ಹುಲ್ಲುಕಡ್ಡಿಯಾದರೂ ಬೇಕಾಗಿದೆ. ಅದು ಏನಾದರೂ ಆಗಿರಬಹುದು, ಅವರು ತೇಲಬೇಕು. ಚಿತ್ರರಂಗದಲ್ಲಿ ಈಗ ದಿನಕ್ಕೊಬ್ಬರಂತೆ ಹೊಸಬರ ಆಗಮನವಾಗುತ್ತಿದೆ. ಹೀಗಾಗಿ ಅವಕಾಶ ವಂಚಿತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಒಮ್ಮೆ ಸಿನಿಮಾರಂಗಕ್ಕೆ ನುಗ್ಗಿದರೆ ಸಾಕು, ಕಲಾವಿದರಿಗೆ ಬೇರೆ ಕಡೆ ಏನಿದೆ ಎನ್ನುವುದೂ ಗೊತ್ತಿರುವುದಿಲ್ಲ.

 ಕೆಲಸ ಮಾಡಿಯೂ ಗೊತ್ತಿರುವುದಿಲ್ಲ. ಹೀಗೆ ಅಕಾಲ ನಿವೃತ್ತಿ ಅನುಭವಿಸಬೇಕಾಗಿ ಬಂದವರೂ ಚಿತ್ರರಂಗದಲ್ಲಿ ಮುಳುಗುತ್ತಿದ್ದಾರೆ. ಅವರಿಗೂ ತೇಲಲು ಏನಾದರೊಂದು ಬೇಕು. ಹೀಗಾಗಿ ಯಾವುದೇ ರಾಜಕೀಯ ಪಕ್ಷಗಳು ಕರೆದರೂ ಅವರು ಹಿಂದೆ ಮುಂದೆ ನೋಡದೆ ನುಗ್ಗುತ್ತಿದ್ದಾರೆ.

ಕಳೆದ ಒಂದೂವರೆ ತಿಂಗಳಲ್ಲಿ  ಸಿನಿಮಾ ನಟನಟಿಯರು ಸಮೂಹಸನ್ನಿಗೆ ಒಳಗಾದವರಂತೆ ರಾಜಕೀಯ ಪಕ್ಷಗಳತ್ತ ನುಗ್ಗಿದರು. ಈ ಎಲ್ಲ ನಟ-ನಟಿಯರಿಗೆ ಇದ್ದಕ್ಕಿದ್ದಂತೆ ರಾಜಕೀಯ ಪ್ರಜ್ಞೆ ಮೂಡಿ ಬಂತೇ? ರಾತ್ರೋರಾತ್ರಿ ಸಮಾಜ ಸೇವೆ ಮಾಡಬೇಕೆಂಬ ಜ್ಞಾನೋದಯವಾಯಿತೇ? ಖಂಡಿತಾ ಇಲ್ಲ.
 
ಶ್ರುತಿ, ತಾರಾ, ಜಗ್ಗೇಶ್, ಶ್ರೀನಾಥ್, ಉಮಾಶ್ರೀ,ಅನಂತನಾಗ್, ನಾಗಾಭರಣ ಮೊದಲಾದವರಿಗೆಲ್ಲಾ ದೊರಕಿದ ರಾಜಕೀಯ ಲಾಭ, ಅಧಿಕಾರ, ಆಮಿಷಗಳೇ ಕಾರಣ. ರಾಜಕಾರಣಿಗಳ ಬಳಿ ಇರುವ ಅಕ್ರಮ ಗಣಿ ದುಡ್ಡಿನ ಮೇಲೆ ಚಿತ್ರರಂಗದವರು ಕಣ್ಣು ಹಾಕಿದಂತೆ ಕಾಣುತ್ತದೆ. ಇಲ್ಲದಿದ್ದರೆ ಶ್ರೀರಾಮುಲು ಸ್ಥಾಪಿಸಿದ ಬಿಎಸ್‌ಆರ್ ಕಾಂಗ್ರೆಸ್ ಪಕ್ಷಕ್ಕೆ ರಕ್ಷಿತಾ ಏಕೆ ಸೇರಬೇಕಿತ್ತು?

ಅಕ್ರಮ ಗಣಿ ದೋಷಾರೋಪದಿಂದ ರಾಜೀನಾಮೆ ನೀಡಿ, ಕಾಡಿಬೇಡಿದರೂ ಸಚಿವ ಸ್ಥಾನ ಕೊಡದ ಬಿಜೆಪಿಗೆ ಪಾಠ ಕಲಿಸಲೆಂದೇ ಪಕ್ಷ ರಚನೆ ಮಾಡಿದ ಶ್ರೀರಾಮುಲು ಅವರಿಗೆ ರಾಜಕೀಯವಾಗಿ ಯಾವುದೇ ಸಿದ್ಧಾಂತ ಇಲ್ಲ.

ಅವರ ಪಕ್ಷಕ್ಕೂ ಯಾವುದೇ ತತ್ವ, ಸಿದ್ಧಾಂತಗಳಿಲ್ಲ. ಅಂತಹ ಪಕ್ಷಕ್ಕೆ ರಕ್ಷಿತಾ ಆಕರ್ಷಿತರಾದದ್ದು, ಶ್ರೀರಾಮುಲು ನಡೆಸಿದ ಉಪವಾಸ ಸತ್ಯಾಗ್ರಹದಲ್ಲಿ ಕುಳಿತದ್ದು ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಲ್ಲದೆ ಮತ್ತೇನಲ್ಲ. ಖೇಣಿ ಜನ್ಮದಿನ ಆಚರಿಸಿಕೊಂಡರೆ, ಬಹುತೇಕ ಕಲಾವಿದರು ಕೆಲಸ ಕಾರ್ಯ ಬದಿಗೊತ್ತಿ, ಅಲ್ಲಿ ಹೋಗಿ ಸಂಭ್ರಮಿಸುತ್ತಾರೆ. ಎಲ್ಲಿಂದೆಲ್ಲಿಯ ಸಂಬಂಧ?

ಚುನಾವಣೆ ಬಂದಾಗಲೆಲ್ಲಾ ಈ ರೀತಿಯ ಚಟುವಟಿಕೆಗಳು ನಡೆಯುತ್ತವೆ. ಈಗ ಚಿಕ್ಕಮಗಳೂರು ಉಪಚುನಾವಣೆ ಸಮಯದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಪೈಪೋಟಿಯಿಂದ ಸಿಕ್ಕಸಿಕ್ಕ ನಟನಟಿಯರನ್ನೆಲ್ಲಾ ಎಳೆದುಕೊಂಡವು. (ಚಿಕ್ಕಮಗಳೂರಿನಲ್ಲಿ ಇಂದಿರಾಗಾಂಧಿ ಸ್ಪರ್ಧಿಸಲು ಬಂದಾಗ ರಾಜ್‌ಕುಮಾರ್ ಅವರನ್ನು ಸೆಳೆಯಲು ಪ್ರತಿಪಕ್ಷಗಳು ಕಸರತ್ತು ನಡೆಸಿದ್ದವು).
 
ಇದೆಲ್ಲಾ ಆರಂಭವಾದದ್ದು ರಮ್ಯಾ ಮಾಡಿದ ಗಿಮಿಕ್‌ನಿಂದ. ಯೂತ್ ಕಾಂಗ್ರೆಸ್ ಕ್ರಿಯಾಶೀಲ ಮಾಡಬೇಕು, ಆ ಮೂಲಕ ತೇಜಸ್ವಿನಿಗೆ ಪಾಠ ಕಲಿಸಬೇಕು ಎನ್ನುವ ಉದ್ದೇಶದಿಂದ ಡಿ.ಕೆ.ಶಿವಕುಮಾರ್ ರಮ್ಯಾರನ್ನು ರಾಹುಲ್‌ಗಾಂಧಿ ಕಾರ್ಯಕ್ರಮಕ್ಕೆ ಕರೆದೊಯ್ದರು. ಯುವ ಕಾಂಗ್ರೆಸ್ಸಿಗೆ ಚೇತನ ತರಲು ಯತ್ನಿಸಿದರು.

ನಂತರ ಯೂತ್ ಕಾಂಗ್ರೆಸ್ ಅಧ್ಯಕ್ಷತೆಗೂ ರಮ್ಯಾ ಸ್ಪರ್ಧಿಸುವ ತಯಾರಿಯೂ ನಡೆದಿತ್ತು. ಅದೇಕೋ ಬಹುನಿರೀಕ್ಷೆಯ ಸಿನಿಮಾ ತೋಪಾಗುವಂತೆ ರಮ್ಯಾ ರಾಜಕೀಯ ಪ್ರವೇಶವೂ ದಂತಭಗ್ನವಾಯಿತು. ರಾಹುಲ್ ಒವ್ಮೆು ರಮ್ಯಾರತ್ತ ತಿರುಗಿನೋಡಿದ್ದರೆ ಅದರ ಕತೆಯೇ ಬೇರೆ ಆಗುತ್ತಿತ್ತು. ಆಶ್ಚರ್ಯವೆಂದರೆ ಈಗ ಕಾಂಗ್ರೆಸ್ಸಿಗರು ನಟಿ ಭಾವನಾ ಹಾಗೂ ಆದಿ ಲೋಕೇಶ್ ಅವರ ಕೈಗೆ ಕಾಂಗ್ರೆಸ್ ಬಾವುಟ ಕೊಟ್ಟು, ಚಿಕ್ಕಮಗಳೂರಿಗೆ ಕರೆದೊಯ್ದಿರುವುದು!

ಬಿಜೆಪಿಯಲ್ಲಿ ಹೇಮಾಮಾಲಿನಿ ಇರಬೇಕಾದರೆ, ನಮ್ಮಲ್ಲಿ ಪೂಜಾಗಾಂಧಿ ಏಕಿರಬಾರದು ಎಂದು ಕುಮಾರಸ್ವಾಮಿಗಳು ಪೂಜಾಗಾಂಧಿಯ ತಲೆಯ ಮೇಲೆ ಹುಲ್ಲಿನ ಹೊರೆ ಹೊರಿಸಿದ್ದು ಒಂದು ಪ್ರಹಸನದ ರೀತಿ ಕಾಣುತ್ತದೆ. ಚಿತ್ರರಂಗದಲ್ಲಿ ಪರಭಾಷಾ ನಟಿಯರ ಆಮದನ್ನು ವಿರೋಧಿಸುವ ಒಂದು ಚಳವಳಿಯೇ ನಡೆಯುತ್ತಿರುವ ಸಂದರ್ಭದಲ್ಲಿ ದಳದವರು ಪರಭಾಷಾ ನಟಿಯರನ್ನು ತಲೆಯಮೇಲೆ ಕೂರಿಸಿಕೊಂಡು ಮೆರೆಯುತ್ತಿರುವುದು ತಮಾಷೆಯಾಗಿಯೇ ಕಾಣುತ್ತದೆ.

ಕನ್ನಡ ಭಾಷೆಯೇ ಬಾರದ ಹೇಮಾಮಾಲಿನಿಗೆ ಬಿಜೆಪಿ ಮಣೆಹಾಕಿದ್ದು ಎಷ್ಟು ತಪ್ಪೋ, ಅರೆಬರೆ ಕನ್ನಡ ಮಾತನಾಡುವ ಪೂಜಾಗಾಂಧಿಯನ್ನು ಮಣ್ಣಿನ ಮಕ್ಕಳು ಹಳ್ಳಿಹಳ್ಳಿಗೆ ಕರೆದೊಯ್ದು ಭಾಷಣ ಮಾಡಿಸುತ್ತಿರುವುದು ಅಷ್ಟೇ ಅಭಾಸದ ಸಂಗತಿ. (ಕುಮಾರಸ್ವಾಮಿ ಬೆಂಗಳೂರಿನಲ್ಲಿ ನನಗೆ ಮನೆ ಮಾಡಿಕೊಟ್ಟಿದ್ದಾರೆ ಎಂದು ಈ ನಟಿ, ತಪ್ಪುತಪ್ಪು ತೊದಲ್ಗನ್ನಡದಲ್ಲಿ ಹೇಳಿ ವಿವಾದ ಸೃಷ್ಟಿಸಿರುವುದನ್ನು ಗಮನಿಸಿ).

ಕಿರುತೆರೆ ನಟಿ ಮಾಳವಿಕಾ ಕೂಡ ಜನತಾದಳ ಸೇರಿದ್ದಾರೆ. ಈಗ ಎಲ್ಲ ಪಕ್ಷಗಳಲ್ಲೂ ತಾರೆಯರಿದ್ದಾರೆ. ಇನ್ನೂ ಒಂದು ಸ್ವಾರಸ್ಯವೆಂದರೆ ಮಾರುಕಟ್ಟೆ ಕಳೆದುಕೊಂಡಿರುವ ನಟನಟಿಯರೇ ಹೆಚ್ಚಾಗಿ ರಾಜಕೀಯ ಪಕ್ಷಗಳ ಆಶ್ರಯಶಿಬಿರಗಳನ್ನು ಪ್ರವೇಶಿಸುತ್ತಿದ್ದಾರೆ.

ಸಿನಿಮಾ ನಟ ನಟಿಯರಿಗೆ ಗೌರವ ಸಲ್ಲಿಸುವ ಸಲುವಾಗಿ ಅವರನ್ನು ಮೇಲ್ಮನೆಗೆ ನೇಮಕ ಮಾಡುವ ಒಂದು ಸಂಪ್ರದಾಯವಿತ್ತು. ಬಿ.ಜಯಮ್ಮ ಅಂತಹ ಸ್ಥಾನ ತುಂಬಿದ್ದರು. ಗುಂಡೂರಾವ್ ಕಾಲದಲ್ಲಿ ಸಿನಿಮಾನಟರು ಗುಂಡೂರಾವ್ ಅವರ ಹಿಂದೆ ಬಿದ್ದಿದ್ದರು.

ಗುಂಡೂರಾವ್ ಅವರಿಗೂ ಸಿನಿಮಾನಟರ ಮೋಹವಿತ್ತು. ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಕೂಡ ಜಯಂತಿ, ಅನಂತನಾಗ್, ಆರತಿ ಮೊದಲಾದವರು ರಾಜಕೀಯ ಪ್ರವೇಶಿಸಿದ್ದರು. ಆದರೆ ಆ ಕಾಲದಲ್ಲಿ ಜನರನ್ನು ಪ್ರಚಾರ ಸಭೆಗೆ ಸೆಳೆಯುವ ಸಲುವಾಗಿ ಯಾರೂ ಬಳಸಿಕೊಳ್ಳಲಿಲ್ಲ.

ಆದರೆ ಈಗ ಪ್ರಚಾರ ಸಭೆಗೆ ಜನರನ್ನು ಸೆಳೆಯಲು, ಸಿನಿಮಾನಟರನ್ನು ಮುಂದೊಡ್ಡಲಾಗುತ್ತಿದೆ. ಅಂಬರೀಷ್ ಅವರೂ ಕೂಡ ಮಂಡ್ಯದಲ್ಲಿ ಪ್ರಚಾರ ನಡೆಸುವಾಗ ತಾರಾದಂಡನ್ನೇ ಕರೆದೊಯ್ದಿದ್ದರು. ಈ ಗಿಮಿಕ್‌ಗಳೆಲ್ಲಾ ಜನರಿಗೆ ಹಳೆಯದಾಗಿದೆ. ಈಗ ಮತದಾರರು ಸಿನಿಮಾದವರನ್ನೂ ನಂಬುವುದಿಲ್ಲ. ರಾಜಕಾರಣಿಗಳನ್ನಂತೂ ಮೊದಲೇ ನಂಬುವುದಿಲ್ಲ.

ಸಿನಿಮಾದಿಂದ ರಾಜಕೀಯರಂಗವನ್ನು ಆಕ್ರಮಿಸಬಹುದು ಎಂಬುದನ್ನು ಎಂಜಿಆರ್ ತೋರಿಸಿಕೊಟ್ಟರು. ಎನ್‌ಟಿಆರ್ ಅದನ್ನು ಅನುಸರಿಸಿದರು. ಚಿರಂಜೀವಿಯೂ ಅದನ್ನು ಅನುಸರಿಸಲು ಹೋಗಿ ಮುಗ್ಗರಿಸಿದರು. ಚಿತ್ರನಟರನ್ನು ಜನ ಎಲ್ಲ ಕಾಲಕ್ಕೂ ನಂಬುವುದಿಲ್ಲ.

ಎಲ್ಲ ಜನರೂ ತಾನು ಹೇಳಿದಂತೆ ಕೇಳುತ್ತಾರೆ ಎಂದು ಭಾವಿಸುವುದೂ ಒಂದು ಭ್ರಮೆ. ಚಿತ್ರನಟರ ಅಂತಹ ಭ್ರಮೆಗಳ ಗುಳ್ಳೆಗಳನ್ನು ಇತ್ತೀಚಿನ ತಮಿಳುನಾಡಿನ ಚುನಾವಣೆಯಲ್ಲಿ ಜನ ಒಡೆದುಹಾಕಿದ್ದಾರೆ. ಕರ್ನಾಟಕದಲ್ಲಿ ರಾಜಕೀಯ ಪ್ರವೇಶಿಸುವ ಮುನ್ನ ನಟನಟಿಯರು ತಮ್ಮ ನಿಜಬಣ್ಣವನ್ನು ಸ್ವಲ್ಪ ಅರಿಯಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT