ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಅಪ್ಪಾಜಿ

Last Updated 28 ಜನವರಿ 2012, 19:30 IST
ಅಕ್ಷರ ಗಾತ್ರ

ಲಂಡನ್‌ನಲ್ಲಿರುವ `ಗ್ರೇಟ್ ಆರ್ಮಂಡ್ ಸ್ಟ್ರೀಟ್ ಹಾಸ್ಪಿಟಲ್~ (ಗೋಶ್)ಗೆ ಭೇಟಿ ಕೊಡುವುದು ನನ್ನ ಬಹುದಿನಗಳ ಹಂಬಲ. 2011ರ ಸೆಪ್ಟೆಂಬರ್‌ನಲ್ಲಿ ಆ ಸುವರ್ಣಾವಕಾಶ ಕೂಡಿಬಂತು. ಪ್ರಸ್ತುತ ಅಲ್ಲಿಯೇ ಉಸಿರಾಟ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ನನ್ನ ಹಳೆಯ ವಿದ್ಯಾರ್ಥಿ ಡಾ.ಅನಿಲ್ ಕುಮಾರ್ ಸಪಾರೆ ಅವರ ಸಹಯೋಗವೂ ಲಭ್ಯವಾಯಿತು.

ನನ್ನ ಮತ್ತೊಬ್ಬ ವಿದ್ಯಾರ್ಥಿ ಡಾ.ಕಲಾ ಷಣ್ಮುಗಾನಂದಮ್ ಅಲ್ಲಿನ ನರಶಾಸ್ತ್ರ ವಿಭಾಗದಲ್ಲಿ ಕೆಲಸ ಮಾಡುತ್ತ್ದ್ದಿದಾರೆ. ನನ್ನ ಸೋದರ ಸಂಬಂಧಿ ದಿನೇಶ್ ಬಾಬು ಅಲ್ಲಿನ ಜೀವವಿಜ್ಞಾನ ವಿಭಾಗದಲ್ಲಿ ಎಂಜಿನಿಯರ್. ಹೀಗಾಗಿ `ಗೋಶ್~ನಲ್ಲಿ ಮಿನಿ ಕರ್ನಾಟಕವೇ ಸೃಷ್ಟಿಯಾಗಿದೆ!

`ಗೋಶ್~ ಬಗ್ಗೆ ನನಗೆ ವಿಪರೀತ ವ್ಯಾಮೋಹ. ಅದಕ್ಕೆ ಕಾರಣ, ನನ್ನ ತಂದೆ (ಅಪ್ಪಾಜಿ) ಡಾ. ಡಿ.ಜಿ. ಬೆನಕಪ್ಪ ಮಕ್ಕಳ ತಜ್ಞರಾಗಿ ತರಬೇತಿ ಪಡೆದದ್ದು ಅಲ್ಲಿಯೇ. ನನ್ನ ಬಾಲ್ಯದುದ್ದಕ್ಕೂ `ಗೋಶ್~ ಕುರಿತು ಹಲವಾರು ಕಥೆ ಕೇಳಿದ್ದೆ. `ಗೋಶ್~ ಸ್ಥಾಪನೆಯಾಗಿದ್ದು 1852ರಲ್ಲಿ. ಚಾರ್ಲ್ಸ್ ವೆಸ್ಟ್ ಈ ಆಸ್ಪತ್ರೆ ಸ್ಥಾಪಿಸಿದಾಗ ಅಲ್ಲಿ ಇದ್ದದ್ದು 10 ಹಾಸಿಗೆಗಳು. ಈಗ ಇದು ವಿಶ್ವದ ಅತ್ಯಂತ ಪ್ರಮುಖ ಮಕ್ಕಳ ಆಸ್ಪತ್ರೆಗಳಲ್ಲಿ ಒಂದಾಗಿದ್ದು, 2012ರಲ್ಲಿ ತನ್ನ 160ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. `ಮಗುವೇ ಮೊದಲು ಮತ್ತು ಎಂದಿಗೂ~ ಎನ್ನುವುದು ಆಸ್ಪತ್ರೆಯ ಧ್ಯೇಯ ವಾಕ್ಯ.

ಅರವತ್ತರ ದಶಕದಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ `ಮಕ್ಕಳ ವಿಭಾಗ~ ಔಷಧ ವಿಭಾಗದ ಒಂದು ಭಾಗವಾಗಿದ್ದರೆ, `ನವಜಾತ ಶಿಶು ವಿಭಾಗ~ವು ವಾಣಿ ವಿಲಾಸ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದೊಂದಿಗೆ ಸೇರಿಕೊಂಡಿತ್ತು. ಅಪ್ಪಾಜಿ ಅವರ ಗುರುಗಳು ಮತ್ತು ಪೂರ್ವಾಧಿಕಾರಿಯಾಗಿದ್ದ ಡಾ. ಸಂಪತ್ ಲೋಕನಾಥನ್ ಮತ್ತು ಡಾ.ಪಿ.ಸಿ. ಬೋಪಯ್ಯ ಲಂಡನ್‌ನಲ್ಲಿ ಉನ್ನತ ಶಿಕ್ಷಣ ಪಡೆಯುವಂತೆ ಅಪ್ಪಾಜಿ ಅವರನ್ನು ಉತ್ತೇಜಿಸಿದ್ದರು.

ಅವರೆಲ್ಲರೂ ಔಷಧ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್‌ಗಳಾಗಿ ಸೇವೆ ಸಲ್ಲಿಸಿದವರು. ಔಷಧ ವಿಭಾಗದೊಂದಿಗೆ ಮಕ್ಕಳ ವೈದ್ಯಶಾಸ್ತ್ರವನ್ನೂ ಬೋಧಿಸಿದವರು. ವಯಸ್ಕ ರೋಗಿಗಳ ವಿಭಾಗದ ಭಾಗವಾಗಿ ಅಷ್ಟೇನೂ ಸಂತೃಪ್ತರಾಗದ ಅಪ್ಪಾಜಿ ಡಾ. ಸಂಪತ್ ಲೋಕನಾಥನ್ ಅವರ ಸೂಚನೆಯಂತೆ ದೂರ ತೀರವಾದ ಲಂಡನ್‌ನತ್ತ ಮುಖಮಾಡಿದರು.

ಹೊನ್ನಾಳಿ ತಾಲ್ಲೂಕಿನ ಬೆನಕನಹಳ್ಳಿಯಿಂದ ಬಂದು, `ಪಿ~ ಮತ್ತು `ಓ~ ವಿಮಾನದಲ್ಲಿ ಬಾಂಬೆಗೆ ಹಾರಿದರು. ಬಾಂಬೆಯಿಂದ ಸ್ಟ್ರೆಥೆಡನ್ ಹಡಗಿನಲ್ಲಿ ಲಂಡನ್‌ಗೆ ತೆರಳಿದರು. ಹಡಗಿನ ಮೂರು ವಾರದ ಪ್ರಯಾಣದಲ್ಲಿ ಗೃಹವಿರಹ ಅವರನ್ನು ತೀವ್ರವಾಗಿ ಕಾಡಿತು. ಸೌಥಂಪ್ಟನ್‌ನಲ್ಲಿ ಅಪ್ಪಾಜಿಯವರ ಸ್ನೇಹಿತ ಷರೀಫ್ ಅವರನ್ನು ಬರಮಾಡಿಕೊಂಡು `ಗೋಶ್~ಗೆ ಕರೆದೊಯ್ದರು.

`ಗೋಶ್~ನಲ್ಲಿ ಮಕ್ಕಳ ವಿಭಾಗದ ಡಿಸಿಎಚ್ ಮತ್ತು ಡಿಟಿಎಂ ಹಾಗೂ ಎಚ್ (ಲಿವರ್‌ಪೂಲ್ ಮತ್ತು ಗ್ಲಾಸ್ಗೋಗಳಲ್ಲಿ) ಪದವಿಗಾಗಿ ಅಪ್ಪಾಜಿ ತಮ್ಮ ಹೆಸರು ನೋಂದಾಯಿಸಿಕೊಂಡರು. ಅಪರಿಚಿತ ನಾಡಿನಲ್ಲಿ ಮೂರು ಪರೀಕ್ಷೆಗಳಲ್ಲಿ ಯಶಸ್ಸು ಪಡೆಯುವುದು ಸುಲಭದ ಮಾತಾಗಿರಲಿಲ್ಲ. ಆರಂಭದಲ್ಲಿ ಅಪ್ಪಾಜಿ ಯಶಸ್ಸು ಗಳಿಸಲಾಗದೆ, ತಮ್ಮ ಓದನ್ನು ಅರ್ಧಕ್ಕೆ ಬಿಟ್ಟು ತಾಯ್ನಾಡಿಗೆ ಹಿಂತಿರುಗಲು ಯೋಚಿಸಿದ್ದರು. ತಮ್ಮ ವೈಫಲ್ಯಗಳಿಗೆ ಕೆಟ್ಟ ಕೈಬರಹವೇ ಕಾರಣ ಎನ್ನುವುದು ಅವರ ಅನಿಸಿಕೆಯಾಗಿತ್ತು.

ನನ್ನ ಅಜ್ಜ, ಅಂದರೆ ಅಮ್ಮನ ತಂದೆ ದಿವಂಗತ ಎಲ್. ಸಿದ್ದಪ್ಪ ಆಗ ಕರ್ನಾಟಕ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದರು. ಅವರಿಗೆ ಅಳಿಯನ ವೈಫಲ್ಯ ಸಹಿಸಲು ಸಾಧ್ಯವಾಗದೆ, ತಮ್ಮ ಮಗಳಾದ ಸುವರ್ಣ ಬೆನಕಪ್ಪ ಅವರನ್ನು ಪತಿಗೆ ಸಹಾಯ ಮಾಡಲು ಲಂಡನ್‌ಗೆ ಕಳುಹಿಸಿದರು. ಅಮ್ಮ ನನ್ನ ಜವಾಬ್ದಾರಿಯನ್ನು ಅಪ್ಪ ಮತ್ತು ತನ್ನ ಕಡೆಯ ಹಿತೈಷಿಗಳಿಗೆ ಒಪ್ಪಿಸಿ ಹೊರಟರು.

ಆಗ ನಾನು ಕೇವಲ ಒಂದು ವರ್ಷದ ಬಾಲಕಿ. `ಗೋಶ್~ಗೆ ಅಂಟಿಕೊಂಡಂತೆ ಇದ್ದ ಕ್ವೀನ್ ಎಲಿಜಬೆತ್ ಆಸ್ಪತ್ರೆಯಲ್ಲಿ ಅಪ್ಪಾಜಿ ಕೆಲಸ ಮಾಡುತ್ತಿದ್ದರು. ಕ್ಲಾಪಾಮ್ ಕಾಮನ್‌ನ ಸಣ್ಣ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ಅಪ್ಪ-ಅಮ್ಮನಿಗೆ ವಾರಾಂತ್ಯದಲ್ಲಿ ಮಾತ್ರ ಜೊತೆಯಾಗಿ ಕಳೆಯಲು ಸಾಧ್ಯವಾಗುತ್ತಿತ್ತು. ಅಪ್ಪಾಜಿಗೆ ಬರುತ್ತಿದ್ದ 120 ಪೌಂಡ್ ತಿಂಗಳ ಸಂಬಳದಲ್ಲಿ ಜೀವನ ಸಾಗಿಸುವುದು ತುಂಬಾ ಕಷ್ಟವಾಗಿತ್ತು.

ನಾನು ಲಂಡನ್ ಮತ್ತು `ಗೋಶ್~ ಬಗ್ಗೆ ನನ್ನೊಳಗಿನ ಆಸೆಗಳನ್ನು ಹೊರಗೆಡವಿದಾಗ, ಅವರಿಬ್ಬರೂ ಲಂಡನ್‌ನಲ್ಲಿನ ತಾವು ಅನುಭವಿಸಿದ ನೋವು ಮತ್ತು ಸಂಕಟವನ್ನು ಉತ್ಸಾಹದಿಂದಲೇ ಮೆಲುಕು ಹಾಕತೊಡಗಿದರು. ಪ್ರತಿನಿತ್ಯ ಸಸ್ಯಾಹಾರ ಅಡುಗೆ ಮಾಡುವುದು ಅಲ್ಲಿ ಬಲು ತುಟ್ಟಿ. ಅಮ್ಮ ಸಮುದಾಯ ಅಡುಗೆ ಮನೆಯಲ್ಲಿ (ಕಮ್ಯುನಿಟಿ ಕಿಚನ್) ವಾರದಲ್ಲಿ ಒಮ್ಮೆ ಅಡುಗೆ ಮಾಡುತ್ತಿದ್ದರು. ಒಮ್ಮೆ ಪೂರಿ ಮತ್ತು ಪಲ್ಯ ಮಾಡಿ ಅದನ್ನು ರೆಫ್ರಿಜರೇಟರ್‌ನಲ್ಲಿ ಇಟ್ಟರೆ ವಾರವಿಡೀ ಅದೇ ತಿನಿಸು. ಅದನ್ನು ಮತ್ತೆ ಬಿಸಿ ಮಾಡುವುದಕ್ಕೂ ಪುನಃ ಹಣ ತೆರಬೇಕಾಗಿತ್ತು!

ಅಪ್ಪಾಜಿ ಡಾ. ವಿಲ್‌ಫ್ರೆಡ್ ಶೆಲ್ಡನ್ (ಅವರ ಹಸ್ತಾಕ್ಷರದ ಪುಸ್ತಕವೊಂದನ್ನು ಅಪ್ಪಾಜಿ ಇಂದಿಗೂ ಜತನದಿಂದ ಕಾಪಿಟ್ಟುಕೊಂಡಿದ್ದಾರೆ), `ಗೋಶ್~ನ ನಿರ್ದೇಶಕರಾಗಿದ್ದ ಡಾ. ಅಲೆನ್ ಮಾಂಕ್ರಿಫ್, ರೋಗಶಾಸ್ತ್ರಜ್ಞ ಡಾ. ಬೊನ ಹ್ಯಾಮ್‌ಕಾರ್ಟರ್ ಮತ್ತು ಡಾ. ಲೈಟ್‌ವುಡ್‌ರಂತಹ ಶ್ರೇಷ್ಠ ಮಕ್ಕಳ ತಜ್ಞರೊಂದಿಗೆ ಕೆಲಸ ಮಾಡಿ ತರಬೇತಿ ಪಡೆದಿದ್ದರು.
ನನ್ನ ಸಹೋದರ ನವೀನ್ ಬೆನಕಪ್ಪ 1962ರ ಸೆಪ್ಟೆಂಬರ್ 5ರಂದು ಮದರ್ಸ್ ಆಸ್ಪತ್ರೆಯಲ್ಲಿ ಜನಿಸಿದ. ಆಗ `ಗೋಶ್~ನಲ್ಲಿ ಪ್ರಸೂತಿ ವಿಭಾಗವಿರಲಿಲ್ಲ.

ಗರ್ಭಿಣಿಯಾಗಿದ್ದಾಗಿನಿಂದ ಮಗು ಹೆತ್ತ ನಂತರವೂ ವಾರಾಂತ್ಯದವರೆಗಿನ ಎಲ್ಲಾ ಕೆಲಸಗಳನ್ನೂ ಅಮ್ಮ ಒಬ್ಬರೇ ಮಾಡಬೇಕಿತ್ತು. ಕಷ್ಟಗಳು ಹೆಚ್ಚುತ್ತಲೇ ಇದ್ದವು. ಜೀವನ ನಿರ್ವಹಣೆ ದೊಡ್ಡ ಪ್ರಶ್ನೆಯಾಗಿತ್ತು. ಚಳಿಗಾಲವನ್ನು ಸಹಿಸುವುದು ಕಷ್ಟಕರವಾಗಿತ್ತು. ಥರಗುಡುವ ದೇಹವನ್ನು ಬಿಸಿ ಮಾಡಿಕೊಳ್ಳುವುದೂ ವೆಚ್ಚದಾಯಕ ಸಂಗತಿಯಾಗಿತ್ತು.
 
ಅಮ್ಮ ಪ್ರತಿನಿತ್ಯ ಒಂದು ಶಿಲ್ಲಿಂಗ್‌ಗೆ ಟಿಕೆಟ್ ತೆಗೆದುಕೊಂಡು ಬೆಚ್ಚಗೆ ಇರುತ್ತಿದ್ದ ವಿದ್ಯುತ್‌ಚಾಲಿತ ರೈಲಿನ ಒಳಭಾಗದಲ್ಲಿ ಮಗುವಿನೊಂದಿಗೆ ಇಡೀ ದಿನ ಕಳೆಯುತ್ತಿದ್ದರು.
ಇಂಗ್ಲಿಷ್ ಸುಲಲಿತವಾಗಿಲ್ಲದ ಅವರಿಗೆ ತಮ್ಮ ಭಾವನೆ ಹಂಚಿಕೊಳ್ಳುವ ಬೇರಾವ ಜೀವವೂ ಅಲ್ಲಿ ಇರದಿದ್ದರಿಂದ ಅದಕ್ಕಾಗಿ ವಾರಾಂತ್ಯದವರೆಗೂ ಕಾಯಬೇಕಾಗಿತ್ತು. ಅಪ್ಪಾಜಿಯ ಅಧ್ಯಯನ ಮತ್ತು ಅಭ್ಯಾಸಕ್ಕೆ ಅವರು ನೆರವಾಗುತ್ತಿದ್ದರು. ಕೊನೆಗೂ ತಮ್ಮ ಮೂರನೇ ಪ್ರಯತ್ನದಲ್ಲಿ ಅಪ್ಪಾಜಿ ಯಶಸ್ವಿಯಾದರು.

`ನಿಮ್ಮ ಕೆಲಸವನ್ನು ನೀವೇ ಮಾಡಿ~ ಎನ್ನುವ ಬ್ರಿಟಿಷರ ನೀತಿಯನ್ನು ಮೆಚ್ಚಿಕೊಂಡಿದ್ದ ಅಪ್ಪಾಜಿಗೆ ತಮ್ಮ ವಿಭಾಗದಲ್ಲಿ ಅನುಕರಣೀಯ ತರಬೇತಿಯೂ ಸಿಕ್ಕಿತ್ತು. ಒಂದು ದಿನ ಅವರು ಕರ್ತವ್ಯದಲ್ಲಿದ್ದಾಗ- ಮೂತ್ರಪಿಂಡ ವೈಫಲ್ಯದಿಂದ ಕೊನೆ ಕ್ಷಣಗಳನ್ನು ಎಣಿಸುತ್ತಿದ್ದ ಚಿಕ್ಕ ಮಗು ಡಯಾನಾ, ಆಗಿನ ಖ್ಯಾತ ಪಾಪ್ ಗಾಯಕ ಕ್ಲಿಫ್ ರಿಚರ್ಡ್ ತನಗಾಗಿ ಹಾಡು ಹೇಳಬೇಕೆಂದು ಭಾರತೀಯ ಯುವ ವೈದ್ಯರ ಬಳಿ ಆಸೆ ವ್ಯಕ್ತಪಡಿಸಿದಳು.
 
ಅಪ್ಪಾಜಿ ಪ್ರಾಮಾಣಿಕವಾಗಿ ಅದಕ್ಕೆ ವ್ಯವಸ್ಥೆ ಕಲ್ಪಿಸಿದರು. `ರೈನ್ ಡ್ರಾಪ್ಸ್ ಕೀಪ್ ಫಾಲಿಂಗ್ ಆನ್ ಮೈ ಹೆಡ್...~ ಎನ್ನುವ ಕ್ಲಿಫ್‌ನ ಹಾಡು ಕೇಳುತ್ತಾ ಆ ಮಗು ಅಪ್ಪಾಜಿ ಕೈಯಲ್ಲೇ ಕೊನೆಯುಸಿರು ಎಳೆಯಿತು. ರೋಗಿಗಳ ಆಸೆ ಈಡೇರಿಸುವುದು `ಗೋಶ್~ನ ಒಂದು ಧ್ಯೇಯ.

ಇಂಗ್ಲೆಂಡ್‌ನಲ್ಲಿನ ಅನುಭವದೊಂದಿಗೆ ಅಪ್ಪ-ಅಮ್ಮ `ಸ್ಟ್ರೆಥ್‌ಮೋರ್~ ಹಡಗಿನಲ್ಲಿ ಭಾರತಕ್ಕೆ ಹಿಂದಿರುಗಿದರು. ಭಾರತದ ಮಣ್ಣಿಗೆ ಕಾಲಿಟ್ಟೊಡನೆ ಇಬ್ಬರೂ ನೆಮ್ಮದಿಯ ಉಸಿರಾಡಿದರು. ಆಗ ನನಗೆ ಆರು ವರ್ಷ. `ಫಾರಿನ್~ ಅಪ್ಪ ಅಮ್ಮ ಮತ್ತು ಸಹೋದರನ ಬರಮಾಡಿಕೊಳ್ಳಲು ನಾನೂ ಹೋಗಿದ್ದೆ.

ಭಾರತಕ್ಕೆ ಹಿಂದಿರುಗಿದ ಕೂಡಲೇ ಅಪ್ಪಾಜಿ ತಮ್ಮ ಗುರುಗಳ ಜೊತೆ ಸೇರಿವಾಣಿ ವಿಲಾಸ ಆಸ್ಪತ್ರೆಯಲ್ಲಿ ಮಕ್ಕಳ ಪ್ರತ್ಯೇಕ ಚಿಕಿತ್ಸಾ ವಿಭಾಗ ತೆರೆಯಲು ಸತತ ಪರಿಶ್ರಮ ನಡೆಸಿದರು. ಅದರಲ್ಲಿ ಯಶಸ್ವಿಯಾದರೂ ಅವರಿಗೆ ವಿಶ್ರಾಂತಿ ಇರಲಿಲ್ಲ. ಏಕೆಂದರೆ ಇಲ್ಲೂ ಒಂದು `ಗೋಶ್~ ಸ್ಥಾಪಿಸುವುದು ಅವರ ಹಂಬಲವಾಗಿತ್ತು. ರಾಜಕಾರಣಿಗಳು ಮತ್ತು ಮಾನವತಾವಾದಿಗಳ ಸಹಕಾರದಿಂದ ರಾಜ್ಯದಲ್ಲಿ 250 ಹಾಸಿಗೆಗಳುಳ್ಳ, ಸುಸಜ್ಜಿತ, ವಿಶೇಷ ತಜ್ಞರ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ (ಐಜಿಐಸಿಎಚ್) ಸ್ಥಾಪನೆಯಾಯಿತು.

ಕನಸು ನನಸಾದರೂ 82ರ ಹರೆಯದ ಅಪ್ಪಾಜಿಗೆ ಐಜಿಐಸಿಎಚ್ `ಗೋಶ್~ ಆಗಿ ಬೆಳೆಯಲಿಲ್ಲವೆಂಬ ಬೇಸರವಿದೆ. ಇತ್ತೀಚಿನವರೆಗೂ ಅಪ್ಪಾಜಿಗೆ ಇಂಗ್ಲೆಂಡಿನಿಂದ ಪಿಂಚಣಿ ಹಣ ಬರುತ್ತಿತ್ತು. 2-3 ವರ್ಷಗಳ ಹಿಂದೆ ಅಪ್ಪಾಜಿ, `ನಿಮ್ಮ ದೇಶ ಆರ್ಥಿಕ ಹಿಂಜರಿತ ಎದುರಿಸುತ್ತಿದೆ. ದಯವಿಟ್ಟು ನನ್ನ ಪಿಂಚಣಿ ಹಣವನ್ನು ದತ್ತಿಸಂಸ್ಥೆಗಳಿಗೆ ಬಳಸಿಕೊಳ್ಳಿ~ ಎಂದು ಪತ್ರಬರೆದರು. `ಗೋಶ್~ನ ನಿರ್ದೇಶಕರು ಅಪ್ಪಾಜಿಯ ಈ ನಿರ್ಧಾರದ ಬಗ್ಗೆ ತುಂಬಾ ಸಂತಸ ವ್ಯಕ್ತಪಡಿಸಿದರು.

ಮಕ್ಕಳ ವೈದ್ಯರಾಗಲು ಹೊರಟ ವಿದ್ಯಾರ್ಥಿಗಳು, ಅದರಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ಬೋಧಿಸುವುದು ಅಪ್ಪಾಜಿಗೆ ತುಂಬಾ ಇಷ್ಟ. ಅದಕ್ಕಾಗಿ 1960ರಿಂದಲೂ ತಮ್ಮ ಅತ್ಯಲ್ಪ ಆದಾಯದ ನಡುವೆಯೂ `ಟಾಕ್~ (ಕಡಿಮೆ ವೆಚ್ಚದಲ್ಲಿ ಬೋಧನಾ ಸಾಮಗ್ರಿ) ಎಂದು ಕರೆಯುವ ಬೋಧನಾ ವಸ್ತುಗಳನ್ನು ಅಪಾರ ಪ್ರಮಾಣದಲ್ಲಿ ತರುತ್ತಿದ್ದರು.

ಈಗಲೂ ಅಪ್ಪಾಜಿ ಪ್ರತಿನಿತ್ಯವೂ ವಾಣಿ ವಿಲಾಸ ಆಸ್ಪತ್ರೆ ರೋಗಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಬಗ್ಗೆ ವಿಚಾರಿಸುತ್ತಾರೆ. ಈ ಆಸ್ಪತ್ರೆಯ ಬ್ರಿಟಿಷ್ ವಾಸ್ತುಶಿಲ್ಪ ಶೈಲಿಯನ್ನು ಯಾವಾಗಲೂ ಹೊಗಳುತ್ತಿರುತ್ತಾರೆ. ತಮ್ಮ ಆತ್ಮ ವಾಣಿ ವಿಲಾಸಕ್ಕೆ ಸೇರಿದ್ದು, `ಐಜಿಐಸಿಎಚ್~ ಸ್ಥಾಪಿಸಿದ್ದರೂ ಅದು ತಮ್ಮ ಮೊದಲ ಪ್ರೀತಿಯ ಮುಂದೆ ಸರಿಸಮವಲ್ಲ ಎನ್ನುತ್ತಾರೆ.

ಅಪ್ಪಾಜಿ ನನಗೆ ಬೋಧಿಸಿದ್ದು ಮೂರು ಧರ್ಮಗಳನ್ನು- ಸರಳತೆ, ನಮ್ರತೆ ಮತ್ತು ಮಾನವೀಯತೆ. ನನಗೆ ವ್ಯವಹಾರ ಕೌಶಲ್ಯದ ಕೊರತೆ ಇದೆ ಎನ್ನುವುದು ಅವರ ಪ್ರೀತಿಯ ದೂರು.

ಅಪ್ಪಾಜಿಯೊಂದಿಗೆ ಮಾತನಾಡುವ ಕೆಲವರು, `ನಿಮಗೆ ಪದ್ಮಶ್ರೀ ಗೌರವ ಕೊಡಿಸುವ ಪ್ರಯತ್ನದಲ್ಲಿದ್ದೇವೆ~ ಎಂದು ಹೇಳುವುದುಂಟು. ಆಗೆಲ್ಲಾ ಅಪ್ಪಾಜಿ ಮುಖದಲ್ಲಿ ತಮ್ಮ ಸಾಧನೆಯ ಬಗ್ಗೆ ತೃಪ್ತಿ ಕಾಣಿಸುತ್ತದೆ.

ನನ್ನೊಂದಿಗಿನ ಮಾತುಕತೆ ಮುಗಿದ ನಂತರ ಈಗಲೂ ಅಪ್ಪಾಜಿ ಕೇಳುತ್ತಾರೆ- `ನಾನು ಈಗಲಾದರೂ ಕ್ಲಬ್‌ಗೆ ಹೋಗಬಹುದಾ?~. ಕ್ಲಬ್, ಅವರ ಏಕೈಕ ಸಾಮಾಜಿಕ ಚಟುವಟಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT