ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಪ್ರೀತಿಯ ಅಂಬಾಜಿಡ್ರು

Last Updated 7 ಜೂನ್ 2014, 19:30 IST
ಅಕ್ಷರ ಗಾತ್ರ

(ಭಾಗ- 2)
ಅನುಭವ ದೊಡ್ಡ ಆಸ್ತಿ. ಅನುಭವವಿಲ್ಲದ ಕೆಲಸಕ್ಕೆ ಕೈ ಹಾಕುವುದು ತಪ್ಪು ಎನ್ನುವುದು ಎಲ್ಲರೂ ಕೊಡುವ ಉಪದೇಶ. ಆದರೆ ತಪ್ಪು ಮಾಡದೆ ಅನುಭವ ದಕ್ಕುವುದು ಕಷ್ಟ. ಆದ್ದರಿಂದಲೇ ಸಾಮಾನ್ಯನಿಂದ ಸಂತರವರೆಗೆ ಎಲ್ಲರೂ ತಾವು ಮಾಡುವ ತಪ್ಪುಗಳನ್ನು ಅನುಭವದ ಪಟ್ಟಿಗೆ ಪೇರಿಸುತ್ತಾ ಹೋಗುತ್ತಾರೆ. ಮೋಸ ಹೋಗಬೇಡಿ ಎಂದು ಭಾಷಣ ಮಾಡುವವನ ಬಳಿ ತಾನು ಮೋಸ ಹೋದ ಅಸಲಿ ಅನುಭವದ ಸರಕಿರುತ್ತದೆ. ಕೆಲವರು ತಾವು ಮೋಸ ಹೋದದ್ದನ್ನು ಹೇಳಿಕೊಳ್ಳಲು ನಾಚಿಕೆಪಟ್ಟುಕೊಂಡು ಅದನ್ನು ಬೇರೆಯವರ ಅನುಭವವನ್ನಾಗಿಸಿ ನಿರೂಪಿಸುತ್ತಾರೆ. ಸ್ವವಿಡಂಬನೆಯಲ್ಲಿ ನಂಬಿಕೆಯುಳ್ಳವರು ತಾವು ಬೇಸ್ತುಬಿದ್ದುದನ್ನು ಸ್ವಾರಸ್ಯಕರವಾಗಿ ಹೇಳಬಲ್ಲರು.

ಇಂಥ ಅನುಭವಗಳನ್ನು ಕೇಳಿಸಿಕೊಂಡು ತಲೆದೂಗಿದವರೂ ಹೇಗೆ ಮತ್ತೆ ಅಂಥದ್ದೇ ಮೋಸಕ್ಕೆ ಒಳಗಾಗುತ್ತಾರೆ? ಹಣ ದ್ವಿಗುಣ ಮಾಡುವವರು, ಲಾಟರಿ ಬಹುಮಾನ ನೀಡುವವರು, ಅಧಿಕ ಬಡ್ಡಿಯ ಆಮಿಷ ಒಡ್ಡುವವರು, ಕಡಿಮೆ ಕಂತಿಗೆ ಹೆಚ್ಚು ಮೌಲ್ಯದ ಮನೆಸಾಮಾನು ಕೊಡುವವರು, ಬಗೆಬಗೆಯ ವಂಚನೆಯಲ್ಲಿ ಯಶಸ್ವಿಯಾಗುತ್ತಿರುತ್ತಾರೆ. ರಸ್ತೆಗಳು, ಊರುಗಳು, ವ್ಯಕ್ತಿಗಳು ಬದಲಾಗುತ್ತವೆಯಷ್ಟೆ. ಮನುಷ್ಯ ಸಂತೋಷದಿಂದಿರಲು ಮಾತ್ರ ತವಕಿಸುವುದಿಲ್ಲ; ಗಳಗಳ ಅತ್ತು ಹಗುರಾಗಲು, ಪಿಗ್ಗಿ ಬಿದ್ದು ಒದ್ದಾಡಲು, ಸುಡುವುದನ್ನು ಸ್ಪರ್ಶಿಸಿ ಸುಟ್ಟುಕೊಳ್ಳಲು; ಒಂದು ಸಲ ಸಾವಿನ ಮನೆಯೊಳಗೆ ಇಣುಕಿ ವಾಪಸ್ ಬರಲು ಸರ್ವದಾ ಯತ್ನಿಸುತ್ತಿರುತ್ತಾನೆ. ಆದ್ದರಿಂದಲೇ ಈ ಜಗತ್ತು ಮೋಹಕ ತಪ್ಪುಗಳಿಂದ ಸ್ವಾರಸ್ಯಕರವಾಗಿದೆ.

I love my mistakes, And I want to learn from my own mistakes ಎನ್ನುತ್ತಾರೆ ಅಮೆರಿಕನ್ ಟೀನೇಜರ್‌ಗಳು. ಈ ಜಾಗತಿಕ ಉದಾಹರಣೆ ಏಕೆ? ತಪ್ಪು ಮಾಡುವವರ ಸಮಾಧಾನಕ್ಕಾಗಿ ಹಾಡಿಕೊಂಡು ಕುಣಿಯಲು ‘ತಪ್ಪು ಮಾಡದವ ಯಾರವ್ರೆ ?’ ಎಂಬ ಸ್ಥಳೀಯ ಹಾಡುಗಳೇ ಸಾಕು. ತಪ್ಪು ಮಾಡದೆಯೂ ಅನುಭವ ಗಳಿಸಲು ಸಾಧ್ಯವಿದೆ. ಆದರೂ ತಪ್ಪು ಮಾಡಲು ಕಾತರಿಸುವ ಮನುಷ್ಯ, ತಪ್ಪಿನ ಫಲದಂತೆಯೇ ಕಾಣಿಸುತ್ತಾನೆ. ಮೋಸ ಮಾಡುವವನಂತೆಯೇ ಮೋಸ ಹೋಗುವವನೂ ತಪ್ಪಿತಸ್ಥನೇ. ಯಾಕೆಂದರೆ ಇಬ್ಬರಿಗೂ ದುರಾಸೆ ಎಂಬ ದೌರ್ಬಲ್ಯವಿರುತ್ತದೆ.

ಮೊದಲ ತಿಂಗಳಿನಲ್ಲೇ ಹದಿನೈದು ಸಾವಿರ ಸಂಪಾದಿಸಿ ತಂದುಕೊಟ್ಟ ನನ್ನ ‘ಪ್ರಥಮ’ಳ ಬಗ್ಗೆಯೂ, ಹೂ ಹುಡುಗನ ಬಗ್ಗೆಯೂ ನನಗೆ ಅಪಾರವಾದ ಅಭಿಮಾನ ಉಕ್ಕಿ ಹರಿಯಿತು. ಆದರೆ ಅವನು ಕೂಡಲೇ ಒಂಬತ್ತು ಸಾವಿರ ವಾಪಸ್ ಕೇಳಿದ. ಕಾರಿಗೆ ಏನೇನೋ ಅಲಂಕಾರ ಮಾಡಬೇಕಾಗಿದೆ, ಗಿರಾಕಿಗಳನ್ನು ಆಕರ್ಷಿಸಬೇಕಿದೆ ಎಂದ. ಗಿರಾಕಿ, ಆಕರ್ಷಣೆ ಎಂಬ ಪದಗಳು ನನಗೇಕೋ ಅಶ್ಲೀಲ ಅನ್ನಿಸಿದುವು. ‘ಕಾರನ್ನು ಎಷ್ಟು ಚೆನ್ನಾಗಿ ನೋಡಿಕೊಳ್ತೀವೋ ಅದೂ ನಮ್ಮನ್ನು ಅಷ್ಟೇ ಚೆನ್ನಾಗಿ ನೋಡಿಕೊಳ್ತದೆ ಸಾರ್... ಒಂದೇ ವರ್ಷದಲ್ಲಿ ಸಾಲ ತೀರ್ಸಿ ಎರಡು ಕಾರ್ ತಗತೀರ. ಒಂದ್ ಟ್ಯಾಕ್ಸಿಗೆ, ಇನ್ನೊಂದು ಸ್ವಂತಕ್ಕೆ’ ಎಂದ. ಮನೆಯ ಮುಂದೆ ಪ್ರಥಮ, ದ್ವಿತೀಯ ಎಂಬ ಹೆಸರಿನ ಕಾರುಗಳು ನಿಂತಿರುವಂತೆ ಕನಸಾಯಿತು. ನೂರನೆ ಕಾರು ಕೊಂಡರೆ ಶತಕ ಎಂದು ಹೆಸರಿಡಬೇಕಾದೀತೇನೋ. ಆಗ ಅವುಗಳನ್ನು ಎಲ್ಲಿ ನಿಲ್ಲಿಸುವುದು ಎಂಬ ಆತಂಕವೂ ಉಂಟಾಯಿತು. ಅವನಿಗೆ ಒಂಬತ್ತು ಸಾವಿರ ಕೊಟ್ಟು ಆರು ಸಾವಿರದಲ್ಲಿ ತೃಪ್ತನಾದೆ.

ಅದನ್ನು ಕಾರುಗಳ ಪರಮವೈರಿಯಾದ ಪತ್ನಿಯ ಮುಂದೆ ಬಡಿದು, ನೋಡು ನಮ್ಮಿಬ್ಬರ ಸಂಬಳಕ್ಕಿಂತಾ ಜಾಸ್ತಿ ದುಡಿದಿದೆ ಎಂದು ಜಂಭ ಕೊಚ್ಚಿಕೊಂಡೆ. ಅವಳು ಸಣ್ಣ ಮೆಚ್ಚುಗೆಯನ್ನೂ ಸೂಚಿಸದೆ ‘ಮುಂದೈತೆ ಮಾರಿ ಹಬ್ಬ’ ಎಂಬಂತೆ ತಿರಸ್ಕಾರದ ನಗೆ ನಕ್ಕು ಪುಸ್ತಕದಲ್ಲಿ ಮುಖ ಹುದುಗಿಸಿದಳು. ಮುಂದಿನ ತಿಂಗಳ ಗಳಿಕೆ ಮೂರು ಸಾವಿರಕ್ಕಿಳಿಯಿತು. ಆತಂಕಕ್ಕೀಡಾದೆ. ಧರಿಸಿಕೊಂಡು ಹೋದ ಆಭರಣಗಳನ್ನು ಅಂಬಾಸಡರಿಣಿ ರಸ್ತೆಯಲ್ಲೆಲ್ಲೋ ಉದುರಿಸಿಕೊಂಡು ಬರುತ್ತಿದ್ದಳು. ಪತ್ತೆಗೆ ಅನುಕೂಲವಾಗಲಿ ಎಂದು ಸೀತಾದೇವಿ ಹೀಗೇ ಆಭರಣ ಉದುರಿಸಿಕೊಂಡು ಹೋಗುತ್ತಿದ್ದಳಂತೆ. ಇದರ ಹೆಸರನ್ನು ಪ್ರಥಮ ಬದಲಾಗಿ ಸೀತೆ ಎಂದು ಬದಲಿಸಿ ಎಂದೂ ಹೆಂಡತಿ ಸಲಹೆ ಮಾಡಿದಳು. ವೈದೇಹಿ ಏನಾದಳೋ? ಎಂದು ರಾಮ ದುಃಖಿಸುವಂತೆ, ಕಾರಿನ ಕನ್ನಡಿ ಏನಾಯಿತೋ ಎಂದು ನಾನು ಗೋಳಾಡುವಂತಾಯಿತು. ಗಳಿಕೆ ಶೂನ್ಯವಾಯಿತು. ‘ಏನಯ್ಯ ಕಾರಣ? ಅಂದರೆ, ಹೊಸ ಸಂಶೋಧನೆ ಮಾಡಿದ ಉತ್ಸಾಹದಲ್ಲಿ ಹೂ ಹುಡುಗ, ಕಾರಿಗೊಂದು ಏಸಿ ಮತ್ತೆ ಸ್ಟೀರಿಯೊ ಹಾಕಿಸಿದರೆ ತುಂಬಾ ಡಿಮ್ಯಾಂಡ್ ಬರ್ತದೆ ಸಾರ್’ ಎಂದು ಆಸೆ ಹುಟ್ಟಿಸಿದ. ಆಮೇಲೆ ಸೈಲೆನ್ಸರ್ರು, ಸ್ಪ್ರಿಂಗ್‌ಪ್ಲೇಟು, ಟಯರು, ಟ್ಯೂಬು, ಬ್ರೇಕ್ ಪ್ಯಾಡು... ಎಂಜಿನ್ನೊಂದನ್ನು ಬಿಟ್ಟು ಎಲ್ಲವನ್ನೂ ಒಂದೊಂದಾಗಿ ಬದಲಿಸುವುದೇ ಆಯಿತು. ಕಷ್ಟಗಳು ಬಂದರೆ ಸಿಟಿ ಬಸ್ಸಿನಂತೆ ಒಂದರ ಹಿಂದೊಂದು ಸಾಲಾಗಿ ಬರುತ್ತವೆ. ಬರದಿದ್ದರೆ ಒಂದೂ ಬರುವುದೇ ಇಲ್ಲ.

ಈ ಕಷ್ಟಗಳ ನಡುವೆ ನನ್ನ ‘ಪ್ರಥಮ’ಳು ಕನ್ನಡಮ್ಮನ ಸೇವಾ ಕೈಂಕರ್ಯವನ್ನೂ ಕೈಗೊಂಡಳು. ಕೆಲವು ಕ್ರಾಂತಿಕಾರಿ ಸಾಹಿತಿಗಳು ಭಾಷಣಕ್ಕೆ, ತಮ್ಮ ಪುಸ್ತಕಗಳ ಕಟ್ಟುಗಳನ್ನು ಹೇರಿಕೊಂಡು ಸಮಾವೇಶಗಳಿಗೆ ಹೋಗಲು ಬುಕ್ ಮಾಡುತ್ತಿದ್ದರು. ಆದರೆ ಬಾಕಿಯನ್ನೇ ಕೊಡುತ್ತಿರಲಿಲ್ಲ. ರಿಪೇರಿಯ ಬಾಬ್ತು ಒಂದು ಕಡೆ ; ಬಾಕಿಯ ವ್ಯಥೆ ಇನ್ನೊಂದು ಕಡೆ. ಅಷ್ಟೊಂದು ಸಮಾರಂಭಗಳಿಗೆ ಕ್ರಾಂತಿಕಾರಿ ಸಾಹಿತಿಗಳನ್ನು ಹೊತ್ತೊಯ್ದ ನನ್ನ ಕಾರಿಗೆ ಘನ ಸರ್ಕಾರ ಒಂದು ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಟ್ಟು ಗೌರವಿಸಬೇಕಿತ್ತು. ಆಗಲೇ ಅರಿವಾದದ್ದು ಇವಳು ಘನತೆವೆತ್ತ ಮಹಾರಾಣಿಯಲ್ಲ. ಸಂಪಾದನೆಯೇ ಇಲ್ಲದ ಕೂಲಿಯಾಳು ಎಂದು. ಒಂದು ದಿನ ಇಣುಕಿ ನೋಡಿದರೆ ಏಸಿಯೂ ಇಲ್ಲ; ಸ್ಟೀರಿಯೊನೂ ಇಲ್ಲ. ಹೂ ಹುಡುಗನನ್ನು ಕೇಳಿದರೆ ‘ನಿಮ್ಗೆ ಬಾಣಾವರ ಗೊತ್ತಲ್ಲ ಸಾರ್... ಬಸ್‌ಸ್ಟ್ಯಾಂಡತ್ರ ನಿಲ್ಸಿ ಊಟಕ್ಕೋಗಿದ್ದೆ. ಬರೋ ಹೊತ್ಗೆ ಬಿಚ್ಕೊಂಡ್ ಹೋಗಿದ್ರು’ ಎಂದು ಉಡಾಫೆಯಿಂದ ಹೇಳಿದ. ಹೂವಿನ ಮೃದುತ್ವ ಮಾಯವಾಗಿ ಉದ್ದಟತನ ಎದ್ದು ಕಾಣುತ್ತಿತ್ತು. ‘ನಾಳೆಯಿಂದ ಬರಬೇಡ ’ಎಂದೆ. ಅವನೂ ರೋಸಿ ಹೋಗಿದ್ದನೆಂದು ಕಾಣುತ್ತದೆ. ನಿರಾಳವಾಗಿ ಹೊರಟುಹೋದ.

ಸಾಹಿತಿಯೊಬ್ಬ ಅನುಭವಗಳನ್ನು ಶೋಧಿಸಬೇಕು. ಅನುಭವಜನ್ಯವಾದ ಅಭಿವ್ಯಕ್ತಿ ಶ್ರೇಷ್ಠ ದರ್ಜೆಯದ್ದಾಗಿರುತ್ತದೆ ಎಂದು ಗಂಗೋತ್ರಿಯ ಗುರುಗಳು ಹೇಳಿಕೊಟ್ಟಿದ್ದ ಮಾತು ಹೊಸಜಾಗೃತಿ ಉಂಟುಮಾಡಿತು. ನನ್ನ ದಶಾವತಾರಗಳಲ್ಲೊಂದು ಟ್ಯಾಕ್ಸಿ ಚಾಲಕನಾದದ್ದು. ದಿನಕ್ಕೆರಡು ಗಂಟೆ ಪಾರ್ಟ್‌ಟೈಂ ಪಾಠ ಮುಗಿಸಿ ನನ್ನ ಟ್ಯಾಕ್ಸಿ ನಾನೇ ಓಡಿಸತೊಡಗಿದೆ. ಏಕವಚನದಲ್ಲಿ ಮಾತನಾಡಿಸುವವರು, ಸೌಜನ್ಯಕ್ಕೂ ಕಾಫಿ, ಊಟಗಳಿಗೆ ಆಹ್ವಾನಿಸದವರು, ನಡುರಾತ್ರಿ ಎಲ್ಲೋ ನಿಲ್ಲಿಸಿ ವೃಥಾ ಕಾಯಿಸುವವರು, ಬಾಡಿಗೆ ಕೊಡಲು ಸತಾಯಿಸುವವರು, ಕುಡಿದು ತಟ್ಟಾಡುವವರು, ಕಾರೊಳಗೆ ಕರ್ಕಶ ಮಾತನಾಡಿ ತಲೆ ಚಿಟ್ಟು ಹಿಡಿಸುವವರು- ಒಟ್ಟಿನಲ್ಲಿ ಅದೊಂದು ವಿಲಕ್ಷಣ ಅನುಭವ. ಹೂ ಮಾರುವ ಹುಡುಗನಿಗೂ ಇಂಥ ಅವಮಾನಗಳಾಗಿರಬೇಕು. ಕೆಲವರು ಅವಮಾನಗಳಿಂದ ಜಡ್ಡುಗಟ್ಟಿ ಬೇಸತ್ತು ಅಸೂಕ್ಷ್ಮರೂ, ವಿಕೃತರೂ ಆಗಿಬಿಡುತ್ತಾರೆ. ಅಂಬಾಸಡರಿಣಿ ನನ್ನ ಹೃದಯಕ್ಕೆ ಹಲವು ವಿವೇಕಗಳನ್ನು ತಿಳಿಸಿಕೊಟ್ಟಳು. ಶ್ರಮಿಕನನ್ನು ಗೌರವದಿಂದ ಕಾಣುವುದು ಅದರಲ್ಲೊಂದು. ಮನುಷ್ಯ ಮನುಷ್ಯನಿಗೆ ವರ್ಗಾಯಿಸ ಬಾರದ ಬಹು ಮುಖ್ಯ ಅನುಭವಗಳಲ್ಲೊಂದು ಈ ಅವಮಾನ.

ಒಂದು ದಿನ ಮೈಸೂರಿಗೆ ಸುಖೀ ವಿಹಾರಕ್ಕೆ ಹೊರಟಿದ್ದಾಗ ನಡುರಸ್ತೆಯಲ್ಲಿ ಸಣ್ಣಹಂಪಿಗೆ ಹೆದರಿ ತನ್ನೆಲ್ಲ ಸ್ಪ್ರಿಂಗ್‌ಪ್ಲೇಟು ಗಳನ್ನುದುರಿಸಿ ಅಂಬಾಸಡರಿಣಿ ಘೋರ ಅವಮಾನ ಮಾಡಿಬಿಟ್ಟಳು. ‘ಈ ಕಾರನ್ನು ಮಾರುತ್ತೇನೆ’ ಎಂದು ಗಟ್ಟಿಯಾಗಿ ಹೇಳಿದೆ. ‘ತಾಕತ್ತಿದ್ದರೆ ಮಾರು’ ಎಂದು ಕಾರು ನನ್ನನ್ನು ದುರುಗುಟ್ಟಿಕೊಂಡು ನೋಡಿತು. ಕೊಂಡಿದ್ದವನ ಬಳಿಗೆ ಹೋದೆ. ನಾನೀಗ ಆ ದಂಧೆ ಬಿಟ್ಟಿದ್ದೇನೆ, ಡಿಟಿಎಸ್ ಸ್ಟುಡಿಯೊ ಇಟ್ಟಿದ್ದೇನೆ, ಆ ಕಾರು ಅರ್ಧ ಬೆಲೆಗೂ ಬೇಡ ಎಂದ. ಏನನ್ನಾದರೂ ಕೊಳ್ಳುವುದು ಸುಲಭ; ಮಾರುವುದು ಕಷ್ಟ ಎಂಬ ಕಟುಸತ್ಯ ಆಗಲೇ ಹೊಳೆದದ್ದು. ನಾಸ್ತಿಕರ ಬಗ್ಗೆಯೂ ದೇವರಿಗೆ ವಿಶೇಷ ಪ್ರೀತಿ ಇರುತ್ತದೆ ಎಂಬಂತೆ ವ್ಯಕ್ತಿಯೊಬ್ಬ ಪ್ರತ್ಯಕ್ಷವಾಗಿ ಕಾರು ಕೊಳ್ಳಲು ಬಂದ. ಹಣೆ ತುಂಬಾ ಕುಂಕುಮ, ವಿಭೂತಿ. ನನ್ನದೇ ಹೆಸರಿನವ. ಅವನನ್ನೊಮ್ಮೆ ಕರುಣೆಯಿಂದ ನೋಡಿದೆ. ಈ ದೈವಭಕ್ತ ಹಣತೆತ್ತು ನನ್ನ ಕಷ್ಟಪರಂಪರೆಯನ್ನೇ ಕೊಂಡುಕೊಳ್ಳಲು ಬರುತ್ತಿದ್ದಾನೆ. ಅರ್ಧಬೆಲೆಗೆ ಕೇಳಿದ. ಕಳಚಿಕೊಂಡರೆ ಸಾಕೆಂದು ಒಪ್ಪಿಕೊಂಡೆ. ‘ಟೋಕನ್ ಅಡ್ವಾನ್ಸ್ ಐದು ನೂರು ಇಟ್ಕೊಳ್ಳಿ. ಡಾಕ್ಯುಮೆಂಟ್ಸ್ ನಿಮ್ಮತ್ರಾನೇ ಇರ್ಲಿ. ಈಗ ಕಾರು ಕೊಡಿ. ಶಬರಿಮಲೈಗೆ ಬುಕ್ಕಿಂಗ್ ಬಂದಿದೆ.

ಮುಂದಿನ ವಾರ ಫುಲ್ ಸೆಟಲ್ ಮಾಡಿ ರಿಜಿಸ್ಟರ್ ಮಾಡಿಸ್ಕೊಳ್ತೀನಿ’ ಎಂದ. ಕಾರು ಕೊಟ್ಟೆ.     ಆರು ತಿಂಗಳಾದರೂ ಅವನ ಪತ್ತೆ ಇಲ್ಲ. ಪೊಲೀಸರ ಮೊರೆ ಹೊಕ್ಕೆ. ‘ದುಡ್ಡು ಪೂರ್ತಿ ಈಸ್ಕೊಂಡು, ರಿಜಿಸ್ಟ್ರು ಮಾಡಿ ಕಾರು ಕೊಡೋದಲ್ವಾ? ಅವನು ಕೊಲೆ ಮಾಡೋದಿಕ್ಕೋ, ಗಂಧದ ಮರ ಸಾಗಿಸೋಕೋ ಕಾರು ಬಳಸಿದ್ರೆ ನೀವ್ ತಾನೆ ಜೈಲಿಗೆ ಹೋಗೋದು’ ಅಂತ ಹೆದರಿಸಿದರು. ದೊಡ್ಡ ಅಧಿಕಾರಿಗಳ ಮೊರೆ ಹೊಕ್ಕ ಮೇಲೆ ನನ್ನ ಅಂಬಾಸಡರಿಣಿ ಕೇರಳದಲ್ಲಿ ಪತ್ತೆಯಾದಳು. ಠಾಣೆಗೆ ಬಂದ ಚಂದ್ರಶೇಖರನ ಕುಂಕುಮ, ವಿಭೂತಿ ಅಳಿಸಿ ಗಡ್ಡ ಬೆಳೆದಿತ್ತು. ‘ನಿಮ್ ದಮ್ಮಯ್ಯ ಸಾರ್, ಈ ಕಾರ್ ಬೇಡ. ನೀವೇ ಇಟ್ಕೊಳ್ಳಿ. ಭಾಳಾ ಕಾಟ ಕೊಟ್‌ಬಿಡ್ತು. ಅಯ್ಯಪ್ನಾಣೆಗೂ ಸಂಪಾದ್ನೆ ಮಾಡಿಲ್ಲ’ ಎಂದು ಗೋಳಿಟ್ಟ. ‘ನನಗೆ ಕಾರು ಬೇಡವೇ ಬೇಡ’ ಎಂದೆ. ಕೊಟ್ಟಷ್ಟು ಪಡೆದು ಕಾಗದಕ್ಕೆ ಸಹಿ ಹಾಕಿದೆ. ಇನ್ಸ್‌ಪೆಕ್ಟರ್ ನನಗೆ ವಿವೇಕ ಹೇಳುತ್ತಾ ‘ನೀವು ಯಾರನ್ನು ಬೇಕಾದ್ರೂ ನಂಬಿ, ಈ ಚಂದ್ರಶೇಖರ್ ಅನ್ನೋ ಹೆಸರಿನೋರ್‍ನ ನಂಬಬೇಡಿ ಸಾರ್. ಆ ಕಂಬಿ ಒಳಗಿರೋ ಕ್ರಿಮಿನಲ್ ಹೆಸ್ರೂ ಚಂದ್ರಶೇಖರ್ ಅಂತಾನೆ’ ಎಂದ. ನನ್ನ ಹೆಸರಿನ ಉತ್ತರಾರ್ಧವೂ ಅದೇ ಎಂಬುದನ್ನು ಆತ ಮರೆತಿದ್ದ. ಇದು ನನ್ನ ಅಂಬಾಜಿಡ್ರು ಮಾಡಿದ ಕೊನೆಯ ಅವಮಾನ. ಠಾಣೆಯ ಹೊರ ಬಂದಾಗ ಅಲ್ಲೇ ಹ್ಯಾಪು ಮೋರೆ ಹಾಕಿಕೊಂಡು ಪ್ರಥಮ ನಿಂತಿದ್ದಳು.

ಇಷ್ಟಾದರೂ ಕಾರಿನ ಮೋಹ ನನ್ನನ್ನು ಬಿಡಲಿಲ್ಲ. ‘ನನ್ನ ಪ್ರೀತಿಯ ಹುಡುಗಿ’ ಚಿತ್ರಕ್ಕೆ ‘ಕಾರ್ ಕಾರ್ ಎಲ್ನೋಡಿ ಕಾರ್’ ಎಂಬ ಹಾಡು ಬರೆದು, ಜಗತ್ತಿನ ಆಟೋಮೊಬೈಲ್ ರಾಜಧಾನಿ ಡೆಟ್ರಾಯಿಟ್‌ನಲ್ಲಿ ಸಾವಿರಾರು ಕಾರುಗಳನ್ನು ಚಿತ್ರೀಕರಿಸಿದೆ. ಯಾರೋ ನಗಣ್ಯ ವ್ಯಕ್ತಿ ಮಾಡಿದ ಚಿಕ್ಕದೊಂದು ಅವಮಾನಕ್ಕೆ ಉತ್ತರಿಸಲು ದೊಡ್ಡದೊಂದು ಕಾರು ಕೊಂಡೆ. ಇದೆಲ್ಲ ಹುಚ್ಚಿಗೆ ಸಂಬಂಧಿಸಿದ್ದು. ನನಗೆ ಕಾರೆಂದರೆ ಯಂತ್ರವಲ್ಲ; ಚಲಿಸುವ ಜೀವಂತ ಮನೆ. ಜಗತ್ತಿನ ಪ್ರತಿಷ್ಠಿತ ಕಾರುಗಳನ್ನು ಓಡಿಸಿ ಖುಷಿಪಟ್ಟಿದ್ದರೂ ಅಂಬಾಸಿಡರ್ ಬಗ್ಗೆ ಇದ್ದುದು ಪ್ರೀತಿ ಮತ್ತು ಭಯ. ಐವತ್ತೇಳರ ಹರೆಯದಲ್ಲೇ ತೀರಿಕೊಂಡ ಈ ಮುದಿರಾಣಿಯ ಬಗ್ಗೆ ಈಗ ಉಳಿದಿರುವುದು ಭಯವಲ್ಲ, -ಪ್ರೀತಿ ಮಾತ್ರ. ಅವಳು ಕೊಟ್ಟ ಕಿರುಕುಳವನ್ನು ಮರೆತು, ಕಲಿಸಿಕೊಟ್ಟ ಮಾನವೀಯ ಪಾಠವನ್ನು ನೆನೆಯುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT