ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಮೊಮ್ಮಗ ಬರ್ತಾನೆ...

Last Updated 4 ಜೂನ್ 2014, 19:30 IST
ಅಕ್ಷರ ಗಾತ್ರ

ಅದು ಮಾರಿಕಾಂಬ ಜಾತ್ರೆಗೆ ಪ್ರಸಿದ್ಧಿ ಪಡೆದ ಊರು. ನನ್ನ ಗೆಳೆಯ ಪ್ರತಿ ಸಲದ ಜಾತ್ರೆಗೂ ಬನ್ನಿ ಎಂದು ಕರೆಯುತ್ತಲೇ ಇದ್ದ. ನಾವು ಯಥಾ ಪ್ರಕಾರ ಕೈಕೊಟ್ಟಿದ್ದಕ್ಕೆ ಬೇಸರಗೊಂಡ ಅವನು ಕೊನೆಕೊನೆಗೆ ಆಹ್ವಾನಿಸುವುದನ್ನೇ ನಿಲ್ಲಿಸಿದ್ದ. ಈ ಸಲದ ಜಾತ್ರೆಗೆ ಅವನು ಕರೆಯದಿದ್ದರೂ ನಾವೇ ಮೇಲೆಬಿದ್ದು ಹೋಗಬೇಕೆಂದು ತೀರ್ಮಾನಿಸಿ ಯಾವ ಸೂಚನೆಯನ್ನೂ ಕೊಡದೆ ಅವನ ಊರಿಗೆ ಹೋದೆವು.

ಅವನು ನಮ್ಮನ್ನೆಲ್ಲಾ ಖುಷಿಯಿಂದ ಜಾತ್ರೆಗೆ ಕರೆದುಕೊಂಡು ಹೋದ. ಜಾತ್ರೆಯಲ್ಲಿ ಮಾರಾಟಕ್ಕೆ ಬಂದಿದ್ದ ಬಗೆಬಗೆಯ ಆಟದ ಸಾಮಾನುಗಳನ್ನು ನೋಡಿ ನನ್ನ ಮಗ ಮತ್ತು ಮಗಳು ಹಿಗ್ಗಿ ಕುಣಿದಾಡಿದರು. ಅವರು ಹೀಗೆ ಸಂಭ್ರಮಪಟ್ಟ ಸಂದರ್ಭಗಳಲ್ಲೆಲ್ಲಾ ನನ್ನ ಜೇಬು ಪಾಪರ್‌ಚೀಟಿಯ ಬಿರುದು ಗಳಿಸಿದೆ. 

ಇಬ್ಬರೂ ಹಟಕ್ಕೆ ಬಿದ್ದವರಂತೆ ಒಂದಾದ ಮೇಲೊಂದರಂತೆ ಗೊಂಬೆ ಮತ್ತು ಆಟದ ಸಾಮಾನುಗಳನ್ನು ಖರೀದಿಸಿದರು. ಎಷ್ಟು ಕೊಡಿಸಿದರೂ ಸಾಕೆಂಬ ಮಾತೇ ಅವರ ಬಾಯಿಂದ ಇಣುಕಲಿಲ್ಲ. ಮಕ್ಕಳಿಗೆ ಮೋಡಿ ಮಾಡುವ ಬಣ್ಣದ ಸಾಮ್ರ್ರಾಜ್ಯವೇ ಅಲ್ಲಿತ್ತು. ಕೆಲ ಮಕ್ಕಳಂತೂ, ಅಪ್ಪ ಅಮ್ಮ ಕೇಳಿದ ವಸ್ತುಗಳನ್ನು ಕೊಡಿಸಲಿಲ್ಲ ಎಂದು ರಚ್ಚೆ ಹಿಡಿದು ಅಳುತ್ತಿದ್ದವು.

ಅವರ ಕಾಟಕ್ಕೆ  ಸಾಕಾದವರು ಅವುಗಳನ್ನು ಆಯಾಯ ಜಾಗದಲ್ಲೇ ಹಿಡಿದು ಬಾರಿಸಿ ದರದರ ಎಂದು ಎಳೆದುಕೊಂಡು ಹೋಗುತ್ತಿದ್ದರು. ಇನ್ನೊಂದಿಷ್ಟು ಐಕಳಂತೂ ರಚ್ಚೆ ಹಿಡಿದು ಮಣ್ಣಿಗೆ ಬಿದ್ದು ಹೊರಳಾಡಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದವು. ಅವರಿಗಂತೂ ಬಂಪರ್ ಏಟುಗಳು.  ಇನ್ನೂ ಬೇಕು ಎನ್ನುತ್ತಿದ್ದ ನನ್ನ ಮಕ್ಕಳಿಗೆ ಬಂಪರ್ ಹೊಡೆತಗಳನ್ನು ತೋರಿಸಿ ಅದು ಬೇಕಾ ಎಂದೆ. ಆಗ ಅವರು ತಮ್ಮ ವ್ಯಾಪಾರವನ್ನು ಖೈದು ಮಾಡಿದರು.

ಇದರ ನಡುವೆ ಕೆಲ ಅಜ್ಜ ಅಜ್ಜಿಯರ ಜೊತೆ ಬಂದಿದ್ದ ಮೊಮ್ಮಕ್ಕಳು ಮಾತ್ರ ಲಾಟ್ರಿ ಹೊಡೆದಷ್ಟೇ ಸಂತಸದಲ್ಲಿದ್ದರು. ಮೊಮ್ಮಕ್ಕಳು ಕೇಳಿದ್ದನ್ನೆಲ್ಲಾ ತೆಗೆಸಿಕೊಟ್ಟು ಮುದ್ದು ಮಾಡುತ್ತಿದ್ದರು. ಮೊಮ್ಮಕ್ಕಳಷ್ಟೇ ಮುಗ್ಧತೆಯ ಸಂತೋಷ ಅನುಭವಿಸುತ್ತಿದ್ದರು. ದುಟ್ಟಿನ ತಾಪತ್ರಯದ ಪೋಷಕರು ಮಕ್ಕಳಿಗೆ ಮೊದಮೊದಲು ಒಂದಿಷ್ಟು ಕೊಡಿಸುವುದು; ಬೇಡಿಕೆ ಹೆಚ್ಚಾದಂತೆ ತಿಳಿಹೇಳುವುದು; ಅದಕ್ಕೆ ಒಪ್ಪದಿದ್ದಾಗ ಸಣ್ಣಗೆ ಗದರಿಸುವುದು; ಅದಕ್ಕೂ ಸೊಪ್ಪು ಹಾಕದಿದ್ದರೆ ಕೆನ್ನೆ ಮೇಲೆರಡು ಬಿಗಿಯುವುದು; ಅದಕ್ಕೂ ಕ್ಯಾರೆ ಎನ್ನದಿದ್ದರೆ ಮುಂದಿನದು ಮಹಾಭಾರತ ಯುದ್ಧ.

ಜೀವನದ ಈ ಚಿತ್ರಗಳನ್ನು ಜಾತ್ರೆಯಲ್ಲಿ ನೋಡಿಕೊಂಡು ಗೆಳೆಯನ ಮನೆ ತಲುಪಿದಾಗ ಊಟ ಕಾಯುತ್ತಿತ್ತು. ಹಬ್ಬದೂಟವ ಗಡದ್ದಾಗಿ ಬಾರಿಸಿದ ನಾನು ಗೆಳೆಯ ಗಾಳಿಗೆ ಮೈಯೊಡ್ಡಿಕೊಳ್ಳಲು ಬೀದಿಗೆ ಇಳಿದೆವು. ಅದೂ ಇದೂ ಮಾತಾಡುತ್ತಿದ್ದೆವು. ಅಷ್ಟರಲ್ಲಿ, ನಾವು ನಿಂತಿದ್ದ  ಕಡೆಗೆ ವಯಸ್ಸಾದ ಇಬ್ಬರು ದಂಪತಿಗಳು ನಿಧಾನವಾಗಿ, ಮೌನವಾಗಿ ನಡೆದು ಬರುತ್ತಿದ್ದರು.

ಅವರು ನಮ್ಮ ಹತ್ತಿರ ಬಂದಾಗ ಗೆಳೆಯ ಏಕೋ ಏಕಾಏಕಿ ತನ್ನ ಮಾತನ್ನು ನಿಲ್ಲಿಸಿದ. ಅವರು ನಮ್ಮ ಎದುರಿನಿಂದ ಮಾತು ಮರೆತವರಂತೆ ತಣ್ಣಗೆ ಹಾದು ಹೋದರು. ನಾನು, ಗೆಳೆಯನ ದಿಢೀರ್ ಮೌನ, ಅವರ ಗಾಂಭೀರ್ಯ ನಡಿಗೆ ಅರಿಯಲಾರದೆ ಕಂಗಾಲಾಗಿ ಆಶ್ಚರ್ಯದಿಂದ ನಿಂತೆ. ಅವರ ಕೈಯಲ್ಲಿ ಬಣ್ಣಬಣ್ಣದ ಹಲವಾರು ಗೊಂಬೆಗಳಿದ್ದವು.

ಅವುಗಳನ್ನು ಆಪ್ತವಾಗಿ ಎದೆಗವಚಿಕೊಂಡು ಅವರು ತಣ್ಣಗೆ ನಡೆಯುತ್ತಿದ್ದರು. ಅವರಿಬ್ಬರೂ ಪರಸ್ಪರ ಒಂದಿನಿತೂ ಮಾತಿಲ್ಲದೆ, ಅಪ್ಪಿ ತಪ್ಪಿಯೂ ಅತ್ತಿತ್ತ ನೋಡದೆ ನೆಲವನ್ನೇ ನೋಡುತ್ತಾ ನಡೆಯುತ್ತಿದ್ದರು. ನಾನು ಯಾರಯ್ಯ ಇವರು? ಎಂದು ಪ್ರಶ್ನಿಸಿ ಬಾಯಿ ಕಳೆದಾಗ ಗೆಳೆಯ ಶ್.. ಶ್.. ಸುಮ್ಮನಿರು ಎಂದು ಸಂಜ್ಞೆ ಮಾಡಿದ. 

ಅವರು ಕತ್ತಲೆ ಬೆಳಕಿನ ದಾರಿಯಲ್ಲಿ ನಡೆದರು. ಬೀದಿ ಕೊನೆಯಲ್ಲಿ ಅವರದು ದೊಡ್ಡ ಮನೆ. ನಿಧಾನದಲ್ಲಿ ಗೇಟು ತೆಗೆದು ಮನೆ ಸೇರಿ ಮನೆಯ ಮುಂದಿನ ದೀಪದ ಬೆಳಕ ಆರಿಸಿದರು. ಕುತೂಹಲ ಇನ್ನು ತಡೆಯಲಾಗದ ನಾನು ಏನೋ ಮಾರಾಯ? ಯಾಕೆ ಇದ್ದಕ್ಕಿದ್ದಂತೆ ಆ ಅಜ್ಜ ಅಜ್ಜಿ ನೋಡಿ ಸೈಲೆಂಟ್ ಆಗಿ ಬಿಟ್ಟೆ? ಯಾರಯ್ಯ ಅವರು? ಏನು ವಿಷಯ? ಎಂದು ಕೇಳಿದೆ. ಅಗವನು ಸಣ್ಣ ನಿಟ್ಟುಸಿರನ್ನು ಚೆಲ್ಲಿ ಅವರ ಕಥೆಯನ್ನು ಹೇಳುತ್ತಾ ಹೋದ. ಕಥೆ ಕೇಳುತ್ತಾ ನನ್ನ ರಕ್ತ ಹೆಪ್ಪುಗಟ್ಟತೊಡಗಿತು.

ಆ ದಂಪತಿಗಳಿಗೆ ಮದುವೆಯಾದ ಬಹಳ ವರ್ಷದ ನಂತರ ಮಗ  ಹುಟ್ಟಿದ. ಅವನಿಗೆ ಆಕಾಶ್ ಎಂದು ಹೆಸರಿಟ್ಟರು. ನೋಡಲು ಆತ ಬಲು ಸುಂದರನಾಗಿದ್ದ. ನಕ್ಕರೆ ಅವನ ಕೆನ್ನೆಯಲ್ಲಿ ಕುಳಿ ಬೀಳುತ್ತಿತ್ತು. ಗುಣ ಸ್ವಭಾವದಲ್ಲಿ ತುಂಬಾ ಒಳ್ಳೆಯವನು. ಮೇಲಾಗಿ ಚೂಟಿ. ಆತನನ್ನು ಅವರು ಎಲ್ಲರಂತೆ ಬಲು ಮುದ್ದಿನಿಂದ ಸಾಕಿದರು. ಇದೇ ಜಾತ್ರೆ ನಡೆಯುವಾಗ ಅವನು ಕೇಳಿದ ಗೊಂಬೆಗಳನ್ನು ತಪ್ಪದೆ ಕೊಡಿಸುತ್ತಿದ್ದರು. ಗೊಂಬೆಗಳೆಂದರೆ ಆ ಹುಡುಗನಿಗೆ ಅದೇನೋ ಬಲು ಪ್ರೀತಿ.

ಮುಂದೆ ಅವನು ಕಂಪ್ಯೂಟರ್ ಎಂಜಿನಿಯರಿಂಗ್ ಓದಿದ. ಒಳ್ಳೆ ಅಂಕ ಪಡೆದ. ಅವನ ಸಾಮರ್ಥ್ಯಕ್ಕೆ ತಕ್ಕ ಕೆಲಸವನ್ನು ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪೆನಿ ಕೊಟ್ಟಿತು. ತಂದೆ ತಾಯಿ ಆಶೀರ್ವಾದ ಪಡೆದ ಮಗ ಒಂದು ದಿನ ಬೆಂಗಳೂರಿನ ಬಸ್ಸು ಹತ್ತಿದ. ಇಲ್ಲಿನ ಮನೆ ಮಾರಿ ಬೆಂಗಳೂರಿನಲ್ಲಿ ನೆಲೆಸೋಣ, ಎಲ್ಲಾ ಒಟ್ಟಾಗಿರೋಣ ಎಂದು ಹೇಳಿದ.

ಅಪ್ಪ ಅಮ್ಮ ಬಹಳ ಸಂತೋಷದಲ್ಲಿದ್ದರು. ತಾವು ಪಟ್ಟ ಕಷ್ಟ ಸಾರ್ಥಕವಾಯಿತೆಂದು ಅವರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಆಕಾಶ್ ಒಂದು ಹುಡುಗಿಯನ್ನು ಮನಸಾರೆ ಪ್ರೀತಿಸುತ್ತಿದ್ದ. ಅವಳನ್ನು ನೋಡಿ ಮೆಚ್ಚಿಕೊಂಡು ತಮ್ಮ ಒಪ್ಪಿಗೆ ಸೂಚಿಸಿದರು. ಸ್ವಲ್ಪ ದಿನ ಕಳೆಯಲಿ, ಮದುವೆ ಮಾಡಿಸುತ್ತೇವೆ ಎಂದು ಇಬ್ಬರಿಗೂ ಮಾತು ಕೊಟ್ಟನು.

ಹೊಸ ಕನಸಿನೊಂದಿಗೆ ಬೆಂಗಳೂರು ಸೇರಿದ ಆಕಾಶ ಅಲ್ಲೊಂದು ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆ ಮನೆ ಹಿಡಿದ. ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗುವ ಆಕಾಶ್ ಸರಿರಾತ್ರಿಗೆ ಮನೆ ಸೇರುತ್ತಿದ್ದ. ಅಪ್ಪ ಅಮ್ಮನ ಜೊತೆಗೂ ಫೋನಿನಲ್ಲಿ ಹೆಚ್ಚು ಮಾತಾಡಲು ಅವಕಾಶವಾಗಲಿಲ್ಲ. ಹೊಸ ಕೆಲಸ, ಹೊಸ ಜನ, ಹೊಸ ಊರಿನಲ್ಲಿ ಆಕಾಶ ಇನ್ನೂ ಅಪರಿಚಿತನಾಗಿಯೇ ಇದ್ದ. 

ಮೊದಲ ವಾರ ಕೆಲಸದಲ್ಲಿ, ಓಡಾಟದಲ್ಲಿ ಕಳೆದ ಆಕಾಶ ಜೀವನದಲ್ಲಿ ಮೊದಲ ಭಾನುವಾರವೊಂದು ಸಿಕ್ಕಿತು. ಬೆಳಗ್ಗೆ ಎದ್ದು ಮುಖ ನೋಡಿಕೊಂಡರೆ ಗಡ್ಡ ಮೀಸೆ ವಿಪರೀತ ಬೆಳೆದು ನಿಂತಿರುವುದು ಕಂಡು ಕಟಿಂಗ್‌ ಶಾಪಿಗೆ ಹೋಗಿ ಸುಂದರನಾಗುವ ಮನಸ್ಸಾಯಿತು. ತನ್ನ ಅಪಾರ್ಟ್‌ಮೆಂಟ್‌ನಿಂದ ಇಳಿದು ಹೊಸ ಊರಿನಲ್ಲಿ ಸೆಲೂನ್ ಹುಡುಕುತ್ತಾ ಒಂದು ಸಣ್ಣ ಸರ್ಕಲ್‌ಗೆ ಆಕಾಶ್ ಬಂದು ತಲುಪಿದ.

ಭಾನುವಾರವಾದ ಕಾರಣ ಸೆಲೂನ್ ತುಂಬ ಗಡ್ಡ ಮೀಸೆ ತಲೆಕೂದಲು ಹೊತ್ತವರು ಸರದಿಗಾಗಿ ಕಾಯುತ್ತಿದ್ದರು. ಅಲ್ಲೇ ಪಕ್ಕದಲ್ಲಿದ್ದ ಟೀ ಕಾಯಿಸುತ್ತಿದ್ದರು. ಒಂದು ಕಪ್ ಟೀ ಕೊಂಡ ಆಕಾಶ್ ರಸ್ತೆ ತುದಿಯಲ್ಲಿ ಫುಟ್‌ಪಾತಿನ ಅಂಚಿನಲ್ಲಿ ಬಿದ್ದಿದ್ದ ಬಿಸಿಲಿಗೆ ಬಂದು ನಿಂತ.
ಆಗಿನ್ನೂ ಬೆಳಗಿನ ಎಂಟು ಗಂಟೆ. ಇವತ್ತು ಮನೆಗೆ ಹೋದವನೆ ಅಪ್ಪ ಅಮ್ಮನಿಗೆ ಮೊದಲು ಪತ್ರ ಬರೆಯಬೇಕು. ಒಂದು ವಾರವಾದರೂ ತನ್ನ ಸುದ್ದಿ ಏನೆಂದು ಅವರಿಗೆ ತಿಳಿಸೇ ಇಲ್ಲ. ಮನೆಯ ವಿಳಾಸ ತಿಳಿಸಿ ಇಲ್ಲಿಗೆ ಬಂದು ಹೋಗಿ ಎಂದು ಹೇಳಬೇಕು. 

ತನ್ನ ಹೊಸ ಕೆಲಸ ಹೊಸ ಮನೆ ತೋರಿಸಬೇಕು ಎಂದು ಆಲೋಚಿಸುತ್ತಾ ಮೈಮರೆತು ನಿಂತಿದ್ದ. ಅಷ್ಟರಲ್ಲಿ  ಹಿಂದಿನ ತಿರುವಿನಿಂದ ಹಾಲಿನ ವಾಹನವೊಂದು ಜೋರಾಗಿ ಬಂದು ಆಕಾಶನ ಪಕ್ಕದಿಂದ ಮತ್ತೊಂದು ರಸ್ತೆಗೆ ರೊಯ್ಯನೆ ತಿರುಗಿತು. ಆ ಕ್ಷಣದಲ್ಲಿ ಆ ವಾಹನದ ಹಿಂದಿನ ಕಬ್ಬಿಣದ ಬಾಗಿಲು ಚಿಲಕದ ಕೊಂಡಿ ಜಾರಿ ಛಕ್ಕನೆ ಪಕ್ಕಕ್ಕೆ ತೆರೆದುಕೊಂಡಿತು.

ಏನೂ ಅರಿಯದೆ ಆರಾಮಾಗಿ ನಿಂತಿದ್ದ ಆಕಾಶನ ತಲೆಗೆ ಹಿಂದಿನಿಂದ ರಪ್ಪೆಂದು ಬಂದಪ್ಪಳಿಸಿದ ಆ ಕಬ್ಬಿಣದ ಬಾಗಿಲು ಆಕಾಶನ ತಲೆಗೆ ಬಲವಾಗಿ ಬಡಿಯಿತು. ಹಾರಿ ನೆಲಕ್ಕೆ ಬಿದ್ದ ಆಕಾಶ್ ಮೇಲೇಳಲಿಲ್ಲ. ಅವನ ತಲೆ ಸೀಳಿ ಹೋಗಿತ್ತು. ಆಕಾಶನ ಬಿಸಿ ರಕ್ತ ಫುಟ್‌ಪಾತಿನಲ್ಲಿ ದಾರಿ ಹುಡುಕಿಕೊಂಡು ಜುಳುಜುಳು ಹರಿಯತೊಡಗಿತು.

ಅಲ್ಲಿದ್ದವರು ಹಿಡಿದೆತ್ತಿದರು. ಅವನ ದೇಹ ಸಣ್ಣಗೆ ಅಲುಗಾಡಿ ಆಮೇಲೆ ಶಾಂತವಾಯಿತು. ಆಕಾಶ್ ಯಾರೆಂಬುದು ಅಲ್ಲಿದ್ದ ಯಾರಿಗೂ ತಿಳಿದಿರಲಿಲ್ಲ. ಬೆಂಗಳೂರಿಗೆ ಅವನಿನ್ನೂ ಅಪರಿಚಿತನಾಗಿದ್ದ. ಆ ಸರ್ಕಲ್ಲಿನ  ಅಂಗಡಿಗಳು, ಹೋಟೆಲ್ಲು, ಸೆಲೂನ್ ಶಾಪ್, ಟೀ ಅಂಗಡಿ ಎಲ್ಲಿ ವಿಚಾರಿಸಿದರೂ ಇವನು ಯಾರೆಂಬುದು ಯಾರ್‍ಯಾರಿಗೂ ತಿಳಿಯಲಿಲ್ಲ.

ಈತನನ್ನು ತಾವೆಲ್ಲಾ ನೋಡುತ್ತಿರುವುದು ಇದೇ ಮೊದಲು ಎಂದು ಎಲ್ಲರೂ ಗೊಣಗಾಡಿದರು. ಕೊನೆಗೆ ಅವನ ಜೇಬುಗಳನ್ನು ತಡಕಾಡಿದರು. ಅಲ್ಲಿ ಒಂದಿಷ್ಟು ದುಡ್ಡು, ಮನೆ ಬೀಗದ ಕೈ ವಿನಃ ಪರಿಚಯ ಹೇಳುವ ಯಾವ ಗುರುತುಗಳೂ ಇರಲಿಲ್ಲ. ಹಾಕಿದ್ದ ಟೀ ಶರ್ಟಿನಲ್ಲಿ ವಿದೇಶಿ ಕಂಪನಿಯ ಹೆಸರು, ಸೈಜಿನ ಸಂಖ್ಯೆ ಮಾತ್ರ ಇದ್ದವು. ಪೋಲಿಸರು ಬಂದರು.

ಶವದ ಹೆಸರಿನ ಮಾಹಿತಿಗಾಗಿ ಸುತ್ತ ಮುತ್ತ ಕೇಳಿದರು. ಬೆಂಗಳೂರೆಂಬ ನಾಗರಿಕ ಊರು ಆಕಾಶನ ಪರಿಚಯದ ಬಾಯಿ ಬಿಡದಿದ್ದಾಗ ಅನಾಥ ಶವ ಎಂದು ಬರೆದು ಮಂಜುಗಡ್ಡೆಗಳ ಗೋಡೌನಿಗೆ ಎಸೆದು ಕೂತರು. ಆಕಾಶ್‌ನ ಹೆಣದ ಚಿತ್ರ ಪತ್ರಿಕೆಗಳಲ್ಲಿ ಬಂತು. ಸಣ್ಣಗೆ ವಿರೂಪಗೊಂಡ ಅವನ ಮುಖದ ಗುರುತು ಯಾರಿಗೂ ಸಿಗಲಿಲ್ಲ.

ಒಂದು ದಿನ ಆಕಾಶನ ತಂದೆ ಬಜಾರಿನಿಂದ ಹೆಂಡತಿಗಾಗಿ ಮಲ್ಲಿಗೆ ಹೂವನ್ನು ಪೇಪರಿನಲ್ಲಿ ಸುತ್ತಿಸಿಕೊಂಡು ತಂದರು. ತಾಯಿ ಹೂ ತೆಗೆಯುತ್ತಾ ಅದೇಕೋ ಆ ಚಿತ್ರವನ್ನು ದಿಟ್ಟಿಸಿ ನೋಡಿದರು. ಒಮ್ಮೆಗೆ ಕಿಟಾರಂತ ಕಿರುಚಿಕೊಂಡು ನೆಲಕ್ಕೆ ಬಿದ್ದರು.
ಅವತ್ತಿನಿಂದ ಅವರು ಊರಿನಲ್ಲಿ ಯಾರನ್ನೂ ಹೆಚ್ಚಾಗಿ ಮಾತಾಡಿಸುವುದಿಲ್ಲ. ತಾಯಿ ನನ್ನ ಮಗ ಆಕಾಶನ ಮದುವೆಯಾಗಿದೆ. 

ನನ್ನ ಮೊಮ್ಮಗ ಬರ್ತಾನೆ. ಅವನಿಗೆ ಬಣ್ಣಬಣ್ಣದ ಗೊಂಬೆಗಳೂಂದ್ರೆ ಇಷ್ಟ ಎಂದು ಹಲುಬುತ್ತಾರೆ. ಹೀಗಾಗಿ, ಪ್ರತಿ ಸಲ ಜಾತ್ರೆ ಕೂಡಿದಾಗ ಆ ಮೊಮ್ಮಗನಿಗಾಗಿ ಅಂತ ಹೊಸ ಗೊಂಬೆಗಳ ಕೊಳ್ತಾನೆ ಇರ್ತಾರೆ.  ಒಟ್ನಲ್ಲಿ ಇಪ್ಪತ್ತು ವರ್ಷದಿಂದ ದೇವರು ಇವರನ್ನ ಗೊಂಬೆ ಥರ ಆಡಿಸ್ತಾನೇ ಇದ್ದಾನೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT