ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ ಸ್ವಾತಂತ್ರ್ಯ ವೀರರು ಭಯೋತ್ಪಾದಕರಲ್ಲ

Last Updated 18 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಯಾವುದೇ ಪ್ರದೇಶದಲ್ಲಿ ವಿದೇಶಿ­ಯರು ಆಳಿದ್ದಾರೆಂದರೆ, ಆ ಪ್ರದೇಶದ ಸರ್ವ­ತೋ­ಮುಖ ಅಭಿವೃದ್ಧಿಗೆ ತಾವೇ ಕಾರಣ ಎಂದು ಆ ಆಡಳಿತಗಾರರು ಸದಾ ಬೀಗುವುದು ಸಾಮಾನ್ಯ. ಬ್ರಿಟಿಷರು ಕೂಡಾ ಇದರಿಂದ ಹೊರತಲ್ಲ. ಆದರೆ ಅವರು ನಡೆಸಿದ ದೌರ್ಜನ್ಯಗಳನ್ನು ಪರಿಗಣಿಸಿ­ದರೆ, ಅದು ಇನ್ನೊಂದು ಕ್ರೂರ ಮುಖದ ಪರಿ­ಚಯ ನೀಡುತ್ತದೆ ಬಿಡಿ.

ಈ ಮೂಲಕ ಒಂದೂ­ವರೆ ಶತಮಾನಕ್ಕೂ ಹೆಚ್ಚು ಕಾಲದ ಬ್ರಿಟಿಷರ ಆಳ್ವಿಕೆಯಲ್ಲಿನ ಸಕಾರಾತ್ಮಕ ಅಂಶ­ಗಳನ್ನೂ ಗೌಣ­ವಾಗಿ ಕಂಡಿದ್ದೇವೆಂದಲ್ಲ. ಇವೆ­­ಲ್ಲದರ ನಡು­ವೆಯೂ ಕಾಮನ್‌ವೆಲ್ತ್‌ ಒಕ್ಕೂಟ ವ್ಯವಸ್ಥೆಯ ಹೆಸರಲ್ಲಿ ಬ್ರಿಟನ್‌ ಮಹಾ­ರಾಣಿಯ ಪ್ರಭುತ್ವದ ಚಾವಣಿಯ ಅಡಿಯಲ್ಲಿ ಸಂಭ್ರಮಿಸುವುದು ಇದೆಯಲ್ಲಾ, ಇದನ್ನು ಒಗ್ಗಟ್ಟಿನ ಸಂಕೇತ ಎಂದೂ ಬ್ರಿಟನ್‌ ಮಂದಿ ಕರೆಯುತ್ತಾರೆ!

ಬ್ರಿಟಿಷರು ಮಾತ್ರ ಭಾರತೀಯರ  ವಿಶಾಲ ಮನೋಭಾವವನ್ನು ಯಾವತ್ತೂ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಭಾರತೀಯರು ಸುದೀರ್ಘ ಕಾಲ ನಡೆಸಿದ ಸ್ವಾತಂತ್ರ್ಯ ಸಂಗ್ರಾಮವನ್ನು ಆಂಗ್ಲರು ಕೇವಲವಾಗಿ ಕಾಣುತ್ತಲೇ ಬಂದಿ­ದ್ದಾರೆ. ಆ ಆಂದೋಲನದಲ್ಲಿ ಪಾಲ್ಗೊಂಡ ಮಹಾನ್‌ ಹೋರಾಟಗಾರರನ್ನು ಕಡೆಗಣ್ಣಿ­ನಿಂದಲೇ ಕಂಡಿದ್ದಾರೆ. ಇಂತಹದ್ದೊಂದು  ಧೋರ­­ಣೆಗೆ ಸ್ಪಷ್ಟ ನಿದರ್ಶನವೆಂದರೆ ಬ್ರಿಟಿಷ್‌ ಇತಿಹಾಸಕಾರರೊಬ್ಬರು ಈಚೆಗೆ ಭಾರತದ ಮಹ­ತ್ವದ ಕ್ರಾಂತಿಕಾರಿಗಳಾದ ಚಂದ್ರಶೇಖರ ಆಜಾದ್‌ ಮತ್ತು ಭಗತ್‌ ಸಿಂಗ್‌ ಅವರನ್ನು ಭಯೋತ್ಪಾದಕರು ಎಂಬುದಾಗಿ ಚಿತ್ರಿಸಿರುವುದು!

ಈ ನೆಲದಲ್ಲಿ ವಿದೇಶಿ ಆಡಳಿತದ ವಿರುದ್ಧ ಧ್ವನಿ ಎತ್ತಿದ, ಹೋರಾಡಿದ ಆಜಾದ್‌ ಮತ್ತು ಭಗತ್‌ ಸಿಂಗ್‌ ಅವರನ್ನು ಆಗಿನ ಸರ್ಕಾರ ನೇಣಿಗೆ ಹಾಕಿತ್ತು. ಆದರೆ ಇವತ್ತು ಬ್ರಿಟಿಷರಿಗೆ ಸ್ವಾತಂತ್ರ್ಯ ಹೋರಾಟಗಾರನಿಗೂ,  ಭಯೊತ್ಪಾದಕನಿಗೂ ಇರುವ ವ್ಯತ್ಯಾಸವೇ ಗೊತ್ತಾಗದಿ ರುವುದೊಂದು ವಿಪರ್ಯಾಸ. ನಿಜವಾಗಿಯೂ ಹೇಳುವುದಿದ್ದರೆ ನಮ್ಮ ನೆಲಕ್ಕೆ ಬಂದು ಸಾವಿರಾರು ಮಂದಿಯ ಕಗ್ಗೊಲೆಗೈದು ಹಲವು ದಶಕಗಳ ಕಾಲ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬ್ರಿಟಿಷರೇ ನಮ್ಮ ಪಾಲಿಗೆ ಭಯೋತ್ಪಾದಕರು. ಅಂದು, ವಿದೇಶಿ ಆಡಳಿತದ ವಿರುದ್ಧ ಹೋರಾಡಿದ ಪ್ರತಿಯೊ­ಬ್ಬರೂ ನಮಗೆಲ್ಲಾ ಸ್ಫೂರ್ತಿಯ ಚೇತನವೇ ಹೌದು.

ಈಗಿನ ಭಾರತ, ಪಾಕಿಸ್ತಾನ, ಬಾಂಗ್ಲಾ­ದೇಶಗಳಲ್ಲಿರುವ ಪ್ರತಿಯೊಬ್ಬರೂ ಅಂತಹ ಕ್ರಾಂತಿಕಾರಿಗಳ ಬಗ್ಗೆ ಹೆಮ್ಮೆಪಡುತ್ತೇವೆ. ಭಗತ್‌ ಸಿಂಗ್‌ ತಮ್ಮ ಬಾಲ್ಯದ ದಿನಗಳನ್ನು ಕಳೆದ ಮನೆ ಇವತ್ತು ಪಾಕಿಸ್ತಾನದ ವ್ಯಾಪ್ತಿಯಲ್ಲಿ ಬರುತ್ತದೆ. ಆ ಮನೆಯನ್ನು ಸುರಕ್ಷಿತವಾಗಿಡಲು, ಹೆಮ್ಮೆಯ ಸ್ಮಾರಕವಾಗಿ ಕಾಪಾಡಿಕೊಳ್ಳುವ ಉದ್ದೇಶದಿಂದ ಈಚೆಗೆ ಪಾಕಿಸ್ತಾನ ಸರ್ಕಾರ ಹಣ ಬಿಡುಗಡೆ ಮಾಡಿದೆ ಎಂದು ಗೊತ್ತಾದಾಗ ನನ್ನ ಹೃದಯ ತುಂಬಿ ಬಂದಿತ್ತು.

ಭಾರತೀಯರು, ಪಾಕ್‌ ಮತ್ತು ಬಾಂಗ್ಲಾದೇಶದ ಪ್ರಜೆಗಳೆಲ್ಲರೂ ಒಂದೇ ಇತಿಹಾಸವನ್ನು ಹೊಂದಿದ್ದೇವೆ. ಈಗ ನಾವು ಬೇರೆ ಬೇರೆಯಾಗಿರಬಹುದು, ಆದರೆ ಹಿಂದೆ ನಾವೆಲ್ಲರೂ ವಿದೇಶಿ ಆಡಳಿತಗಾರರ ಕಪಿಮು­ಷ್ಟಿಗೆ ಸಿಲುಕಿ ತತ್ತರಿಸಿದ್ದೆವು. ಅದರಿಂದ ತಪ್ಪಿಸಿ­ಕೊಳ್ಳಲು ಆ ದಿನಗಳಲ್ಲಿ ಬಲು ದೊಡ್ಡ ಸಂಗ್ರಾ­ಮವೇ ನಡೆದಿತ್ತಲ್ಲಾ, ಆ ಕಥೆಗಳು ಮೂರು ದೇಶಗಳದ್ದು ಎಂದು ಅನಿಸುವುದಿಲ್ಲ. ಒಂದೇ ಕುಟುಂಬದ ಕಥೆ ಎಂದು ಅನಿಸುತ್ತದೆ. ಆ ಕಥೆಗಳನ್ನು ನಾವೆಲ್ಲರೂ ಇಂದು ಒಗ್ಗೂಡಿ ನೆನಪಿಸಿಕೊಳ್ಳ­ಬೇಕಲ್ಲವೇ.

ಬ್ರಿಟಿಷರ ಕ್ರೌರ್ಯಕ್ಕೆ ಬಲು ದೊಡ್ಡ ನಿದರ್ಶ­ನವೆಂದರೆ 1919ರ ಏಪ್ರಿಲ್‌ 13ರಂದು ಜಲಿ­ಯನ್‌ವಾಲಾ ಬಾಗ್‌ನಲ್ಲಿ ಅವರು ನಡೆಸಿದ ನರಮೇಧ. ಅದು ಸುಗ್ಗಿಯ ಕಾಲ. ಹೊಲ ಗದ್ದೆಗಳಲ್ಲಿ ಬೆಳೆ ಮೈತುಂಬಿಕೊಂಡಿತ್ತು. ರೈತರು ಸಂಭ್ರಮದಲ್ಲಿದ್ದರು. ಅಂದು ಅಮೃತಸರದ ಸ್ವರ್ಣ ಮಂದಿರದಿಂದ ಕೂಗಳತೆಯ ದೂರದಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ಸಭೆ­ಯೊಂದು ನಡೆದಿತ್ತು. ಆ ದಿನಗಳಲ್ಲಿ ಬ್ರಿಟಿಷ್‌ ಸರ್ಕಾರ ಜಾರಿಗೆ ತಂದಿದ್ದ ರೌಲೆಟ್‌ ಕಾಯ್ದೆಯ ವಿರುದ್ಧ ಭಾರತದಾದ್ಯಂತ ಜನಸಾಮಾನ್ಯರಲ್ಲಿ ಅಸಮಾಧಾನ ಕುದಿಯುತ್ತಿತ್ತು. ಆ ಕಾನೂನಿನ ಅನ್ವಯ ಪೊಲೀಸರು ಯಾರನ್ನು ಬೇಕಿದ್ದರೂ, ಯಾವಾಗಲಾದರೂ ಬಂಧಿಸಬಹುದಿತ್ತು.

ವಿಚಾ­ರಣೆಯೇ ಇಲ್ಲದೆ ಜೈಲಿನಲ್ಲಿರಿಸಬಹು­ದಿತ್ತು. ಜಲಿಯನ್‌ವಾಲಾ­ಬಾಗ್‌­ನಲ್ಲಿ ಅಂದು ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿ ಸಭೆ ಸೇರಿದ್ದರು. ರೌಲೆಟ್‌ ಕಾಯ್ದೆ ಬೇಡ ಎಂದು ಆಗ್ರಹಿಸಿದ್ದರು. ಅಂದು ಡಯರ್‌ ಎಂಬ ಪೊಲೀಸ್‌ ಅಧಿಕಾರಿಯ ನೇತೃತ್ವದಲ್ಲಿ ಪೊಲೀಸರು ಆ ಮೈದಾನವನ್ನು ಸುತ್ತುವರಿದರು. ಆ ಮೈದಾನದ ಸುತ್ತಲೂ ಎತ್ತರದ ಆವರಣ ಗೋಡೆ ಇತ್ತು. ಆ ಮೈದಾನದ ಒಳ ಹೋಗಲು ಮತ್ತು ಹೊರ ಬರಲು ಇದ್ದ ಒಂದೇ ಒಂದು ದ್ವಾರವನ್ನು ಡಯರ್‌ ಉದ್ದೇಶಪೂರ್ವಕವಾಗಿಯೇ ಮುಚ್ಚಿ­ಸಿದ್ದ.

ಮೈದಾನದ ಒಳಗೆ ವಯಸ್ಸಾದ ಸಾವಿ­ರಾರು ಪುರುಷರು, ಮಹಿಳೆಯರಲ್ಲದೆ, ಯುವ­ಜನರು, ನೂರಾರು ಪುಟ್ಟ ಮಕ್ಕಳೂ ಇದ್ದರು. ಒಂದು ಹಂತದಲ್ಲಿ ಸುತ್ತಲೂ ಬಂದೂಕು ಹಿಡಿದು ನಿಂತಿದ್ದ ಪೊಲೀಸರು ಡಯರ್‌ನ ಆದೇಶದ ಮೇರೆಗೆ ಮೈದಾನದೊಳಗಿದ್ದ ಜನರತ್ತ ಸತತವಾಗಿ ಸುಮಾರು 1,650 ಸುತ್ತುಗಳಷ್ಟು ಗುಂಡು ಹಾರಿಸಿದರು. ಮೈದಾನದೊಳಗೆ ರಕ್ತ ಮಡುಗಟ್ಟಿತ್ತು. 

ನಾನೂರಕ್ಕೂ ಹೆಚ್ಚು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. 1,500ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಡಯರ್‌ನ ಆ ಕೌರ್ಯವನ್ನು ಕಂಡು ಇಡೀ ದೇಶವೇ ತತ್ತರಿಸಿಹೋಗಿತ್ತು. ಲಂಡನ್‌ಗೂ ಸುದ್ದಿ ತಲುಪಿ ಅಲ್ಲಿನ ಸರ್ಕಾರವೇ ಅಂದು ನಾಚಿ­ಕೊಂಡಿತ್ತು. ಡಯರ್‌ನನ್ನು ಸರ್ಕಾರ ವಾಪಸು ಕರೆ­ಸಿ­ಕೊಂಡಿತ್ತು. ಆತ ವಿಚಾರಣೆಯ ವೇಳೆ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸದೆ, ‘ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ’ ಎಂದು ನುಡಿದಿದ್ದ!

ಡಯರ್‌ಗೆ ಶಿಕ್ಷೆಯಾಗಲಿಲ್ಲ. ಬ್ರಿಟನ್‌ನ ರಾಜಕಾರಣಿಯೊಬ್ಬರು ಆ ದಿನಗಳಲ್ಲಿ ಮಾತ­ನಾಡಿ ‘ಪಂಜಾಬನ್ನು ಡಯರ್‌ ಅರಾಜಕ ಪರಿಸ್ಥಿತಿ­ಯಿಂದ ಪಾರು ಮಾಡಿದ್ದಾರೆ’ ಎಂದಿದ್ದರು. ಅದಾಗಿ ಕೆಲವು ವರ್ಷಗಳ ನಂತರ ಆಂಗ್ಲರು ಉತ್ತರ ಪ್ರದೇಶ ಮತ್ತು ಬಿಹಾರದ ಗಡಿಯಲ್ಲಿ­ರುವ ಬಲಿಯಾ ಎಂಬ ಪಟ್ಟಣದಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸಿ­ದ್ದರು. ಅವರ ದೇಹಗಳು ಹಲವು ದಿನಗಳ ಕಾಲ ಮರಗಳ ಮೇಲೆ ತೂಗಾಡುತ್ತಿದ್ದವು. ಆ ರೀತಿ ಮಾಡುವ ಮೂಲಕ ಸ್ವಾತಂತ್ರ್ಯ ಹೋರಾಟ­ಗಾರರಿಗೆ ಸರಿಯಾದ ಪಾಠ ಕಲಿಸಿದ್ದೇವೆ ಎಂದು ಅಂದು ಬ್ರಿಟಿಷರು ನಂಬಿಕೊಂಡಿದ್ದರು.

ಬ್ರಿಟಿಷ್‌ ಆಡಳಿತಗಾರರು ಗಾಂಧಿಯವರನ್ನು ಅರಾಜಕವಾದಿ ಎಂದು ಘೋಷಿಸಿದ್ದರು. ಅಂದು ಆಡಳಿತಗಾರರು ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕಲು ಯಾವುದೇ ಮಟ್ಟಕ್ಕೆ ಹೋಗಲು ಸಿದ್ಧರಿದ್ದರು. ಬೆಂಕಿಯ ಎದುರು ಸಣ್ಣಪುಟ್ಟ ಕೀಟಗಳು ಸುಟ್ಟು ಕರಕಲಾಗುವಂತಹ ಸ್ಥಿತಿ ಸ್ವಾತಂತ್ರ್ಯ ಹೋರಾಟಗಾರರದ್ದಾಗಿತ್ತು.

ಕ್ರಾಂತಿಕಾರಿ ಭಗತ್‌ ಸಿಂಗ್ ಆ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿಯಾಗಿ­ದ್ದರು. ಅವರು ತಮ್ಮ ನಿಲುವಿನ ಬಗ್ಗೆ ಬರೆ­ಯುತ್ತಾ ‘ನಮಗೆ ಮನುಷ್ಯ ಜೀವದ ಬಗ್ಗೆ ಅಪಾರ ಗೌರವವಿದೆ. ಪವಿತ್ರ ಭಾವನೆ ಇದೆ. ನಾವು ಯಾರಿಗೂ ನೋವುಂಟು ಮಾಡುವು­ದಿಲ್ಲ. ಆದರೆ ಮಾನವತೆಯ ಸೇವೆಯ ನಿಟ್ಟಿನಲ್ಲಿ ನಮ್ಮ ಜೀವವನ್ನೇ ಕೊಡಲು ನಾವು ಬದ್ಧರಾಗಿದ್ದೇವೆ’ ಎಂದಿದ್ದರು.

‘ನಾವು ಯಾರ ಮೇಲೆಯೂ ಸೇಡಿನ ಭಾವನೆ ಇರಿಸಿಕೊಂಡಿಲ್ಲ. ಹಗೆತನವೂ ಇಲ್ಲ. ಆದರೆ ನಮ್ಮ ಕ್ರಿಯೆ ಸ್ವಾತಂತ್ರ್ಯ ಹೋರಾಟದಂತಹ ಮಹತ್ವದ ಜ್ವಾಲೆಗೆ ಪೂರಕವಾಗಿರುತ್ತದೆ’ ಎಂದೂ ಭಗತ್‌ ಸಿಂಗ್‌ ಹೇಳಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಹಿಂಸಾ ಹಾದಿ­ಯನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಮಹಾತ್ಮ ಗಾಂಧಿಯವರು ಭಗತ್‌ ಸಿಂಗ್‌ ಅವರನ್ನು ಗಲ್ಲಿಗೇರಿಸಿದಾಗ ಬಹಳಷ್ಟು ನೊಂದಿದ್ದರು. 

‘ಭಗತ್‌ಸಿಂಗ್‌ ಹುತಾತ್ಮರಾಗಿದ್ದಾರೆ. ಈ ನಾಡಿನ ಹಲವರಿಗೆ ಭಗತ್‌ ಸಾವು ವೈಯಕ್ತಿಕ ನಷ್ಟ. ಭಗತ್‌ ಮತ್ತು ಅವರ ಜತೆಗಾರರ ಸಾವಿಗೆ ಕಂಬನಿ ಮಿಡಿಯುವ ಲಕ್ಷಾಂತರ ಮಂದಿಯಲ್ಲಿ ನಾನೂ ಒಬ್ಬ. ಆದರೂ ಯುವಜನರು ಮಾತ್ರ ಭಗತ್‌ ಹಾದಿಯನ್ನು ತುಳಿಯಬಾರದು ಎಂಬುದು ನನ್ನ ಸ್ಪಷ್ಟ ಅಭಿಪ್ರಾಯವಾಗಿದೆ. ಈ ದೇಶ ರಕ್ತ ಹರಿಸುವ ಮೂಲಕ ವಿಮೋಚನೆ­ಗೊಳ್ಳುವುದು ಬೇಡ’ ಎಂದು ಮಹಾತ್ಮ ಗಾಂಧಿಯವರು ಅಂದು ಹೇಳಿದ್ದರು.

ಯಾವುದೇ ತೆರನಾದ ಹಿಂಸೆಯನ್ನೂ ಮಹಾತ್ಮ ಗಾಂಧಿಯವರು ಒಪ್ಪುತ್ತಿರಲಿಲ್ಲ. 1920ರ ಸುಮಾರಿನಲ್ಲಿ ಅಸಹಕಾರ ಚಳವಳಿ ನಡೆಸಬೇಕೆಂದು  ಗಾಂಧೀಜಿ ಕರೆ ನೀಡಿದ್ದಾಗ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 30 ಸಾವಿರಕ್ಕೂ ಹೆಚ್ಚು ಮಂದಿ ಜೈಲು ಸೇರಿದ್ದರು. ವಿದ್ಯಾರ್ಥಿಗಳು ಶಾಲಾ, ಕಾಲೇಜು ಬಹಿಷ್ಕರಿ­ಸಿದ್ದರು. ವಕೀಲರು ಮತ್ತು ವೈದ್ಯರು ತಮ್ಮ ಕೆಲಸ ನಿಲ್ಲಿಸಿ ಚಳವಳಿಗಾರರ ಜತೆ ಸೇರಿದ್ದರು.

ಆದರೆ  ಚಳವಳಿ ನಿಲ್ಲಿಸಲು ಗಾಂಧೀಜಿ ಏಕಾಏಕಿ ಕರೆ ನೀಡಿದರು. ಇದರಿಂದ ಎಲ್ಲರೂ ಆಘಾತಕ್ಕೆ ಒಳಗಾಗಿದ್ದರು. ಉತ್ತರ ಪ್ರದೇಶದ ಗೋರಕ್‌­ಪುರದ ಬಳಿ ಚೌರಿಚೌರಾ ಎಂಬಲ್ಲಿ ನಡೆದ ಘಟನೆಯೊಂದು ಗಾಂಧೀಜಿ ಅಂತಹ ತೀರ್ಮಾನ ತೆಗೆದುಕೊಳ್ಳುವಂತೆ ಪ್ರೇರೇಪಿಸಿತ್ತು. 1921ರ ಫೆಬ್ರುವರಿ 12ರಂದು ಚೌರಿಚೌರಾದಲ್ಲಿ ಹೋರಾ­ಟ­ಗಾರರು ಪೊಲೀಸ್‌ ಠಾಣೆಯತ್ತ ಮೆರವಣಿಗೆಯಲ್ಲಿ ಸಾಗಿದರು. ಬ್ರಿಟಿಷ್‌ ಆಡಳಿ­ತದ ವಿರುದ್ಧ ಘೊಷಣೆಗಳನ್ನು ಕೂಗುತ್ತಿದ್ದರಷ್ಟೆ. ಎಲ್ಲವೂ ಶಾಂತಿಯುತವಾಗಿತ್ತು.

ಆದರೆ ಕೊನೆಯಲ್ಲಿ ಪೊಲೀಸರೇ ಪ್ರತಿಭಟನಾಕಾರರನ್ನು ಕೆರಳಿಸಿದ್ದರು. ಉದ್ರಿಕ್ತರಾದ ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲು ತೂರಿದ್ದರು. ಆಗ ಪೊಲೀಸರು ಜನರತ್ತ ಗುಂಡು ಹಾರಿಸಿದರು. ಮೂರು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಅನೇಕ ಮಂದಿಗೆ ಗಾಯಗಳಾದವು.

ಈ ಘಟನೆಯ ಬಗ್ಗೆ ಸುದ್ದಿ ಬಂದ ತಕ್ಷಣ ಮಹಾತ್ಮ ಗಾಂಧಿಯವರು ಅಸಹಕಾರ ಚಳವ­ಳಿಯ ಕರೆಯನ್ನು ಹಿಂತೆಗೆದುಕೊಂಡರು. ಆದರೆ ಪೊಲೀಸರನ್ನು ಖಂಡಿಸಿ ಒಂದು ಹೇಳಿಕೆಯನ್ನೂ ಅವರು ನೀಡಲಿಲ್ಲ! ಇಂತಹ ಅದೆಷ್ಟೋ ಘಟನೆ­-ಗಳು ಭಾರತದ ಸ್ವಾತಂತ್ರ್ಯ ಸಂಗ್ರಾಮದ ದಿನಗ­ಳಲ್ಲಿ ನಡೆದಿವೆ. ಈ ನಾಡಿನ ಮಂದಿ ಬ್ರಿಟಿಷರನ್ನು ಕ್ರೂರವಾಗಿ ಕಂಡಿಲ್ಲ. ತಮ್ಮ ಕೈಗೆ ಅನಗತ್ಯವಾಗಿ ಸರಪಳಿ ತೊಡಿಸಿದವರ ಎದುರು ಅತ್ಯಂತ ಸಭ್ಯತೆಯಿಂದ ನಡೆದುಕೊಂಡಿದ್ದಾರೆ. ಇದು ಈ ನೆಲದ ಸಂಸ್ಕೃತಿ. ಆದರೆ ಬ್ರಿಟಿಷರು ಇಷ್ಟು ಸೌಜನ್ಯದಿಂದ  ನಡೆದುಕೊಂಡಿದ್ದಾರೆಯೇ?

ನಮ್ಮ ಸ್ವಾತಂತ್ರ್ಯ ಆಂದೋಲನದಲ್ಲಿ ಸ್ಫೂರ್ತಿಯ ಚೇತನದಂತಿದ್ದ ಹುತಾತ್ಮ ಚಂದ್ರಶೇಖರ ಆಜಾದ್‌, ಭಗತ್‌ ಸಿಂಗ್‌ ಅವರ ಬಗ್ಗೆ ಬ್ರಿಟಿಷ್‌ ಬರಹಗಾರನೊಬ್ಬನ ನಿಲುವು ಅದೆಷ್ಟು ಸರಿ. ಅದರೆ ಅದಕ್ಕೆ ಬ್ರಿಟಿಷ್‌ ಸಮುದಾಯವೇ ಮೌನವಾಗಿದೆ ಎಂದರೆ ಅದರ ಅರ್ಥವಾದರೂ ಏನು?

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT