ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಒಳ್ಳೆಯ ಮತ್ತು ಕೆಟ್ಟ ಪ್ರಧಾನಿಗಳು

Last Updated 16 ಜೂನ್ 2018, 9:16 IST
ಅಕ್ಷರ ಗಾತ್ರ

ಇತ್ತೀಚಿನ ಪತ್ರಿಕಾಗೋಷ್ಠಿಯೊಂದರಲ್ಲಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದ ಅವಧಿಯನ್ನು ಅಳೆಯುವ ನಿರ್ಧಾರವನ್ನು ಇತಿಹಾಸ ಮತ್ತು ಇತಿಹಾಸ­ಕಾರ­ರಿಗೆ ಬಿಡುವುದಾಗಿ ಹೇಳಿದರು. ಆದರೆ, ಈ ಅಂಕಣ­ದಲ್ಲಿ ಅವರ ಸಾಧನೆಯನ್ನು ಪ್ರಧಾನಿ ಹುದ್ದೆ­ಯಲ್ಲಿ ಕುಳಿತ ಇತರ ಪುರುಷರು ಮತ್ತು ಮಹಿ­ಳೆಯರ ಸಾಧನೆಯ ಜತೆ ತುಲನಾತ್ಮಕ­ವಾಗಿ ಹೋಲಿಸಿ ಮಧ್ಯಂತರ ತೀರ್ಪು ನೀಡ­ಲಾಗಿದೆ.

ಅತಿ ದೀರ್ಘ ಕಾಲ ಈ ಹುದ್ದೆಯಲ್ಲಿ ಕುಳಿತಿದ್ದ ಪ್ರಥಮ ಪ್ರಧಾನಿಯಿಂದ ಆರಂಭಿಸೋಣ. ಜವಾ­ಹರಲಾಲ್‌ ನೆಹರೂ ಅವರ ಅಧಿಕಾರ ಅವಧಿ­ಯನ್ನು ಸ್ಪಷ್ಟವಾಗಿ ಮೂರು ಭಾಗವಾಗಿ ವಿಭಾಗಿ­ಸಬಹುದು. 1947–52, 1952–57, 1957–64. ದೇಶ ವಿಭಜನೆಯ ಭಯಾನ­ಕತೆಯ ನಂತರ ಸಾಮಾಜಿಕ ಮತ್ತು ಧಾರ್ಮಿಕ ಶಾಂತಿ ಸ್ಥಾಪಿಸುವುದು; ನಿರಾಶ್ರಿತರಿಗೆ ಪುನ­ರ್ವಸತಿ ಕಲ್ಪಿಸುವುದು; ಆರ್ಥಿಕ ಪ್ರಗತಿಯ ಪ್ರಕ್ರಿಯೆಗೆ ಬುನಾದಿ ಹಾಕುವುದು; ವೈವಿಧ್ಯ ಮತ್ತು ವಿಭಜಿತ ದೇಶದಲ್ಲಿ ರಾಷ್ಟ್ರೀಯ ಭಾವೈಕ್ಯ ಸ್ಥಾಪಿಸುವುದು ಸೇರಿದಂತೆ ಅವರ ಸರ್ಕಾರದ ಮುಂದೆ ಅಪಾರ ಸವಾಲುಗಳು ಇದ್ದವು. ವಲ್ಲಭ­ಭಾಯಿ ಪಟೇಲ್‌ ಮತ್ತು ಬಿ.ಆರ್‌. ಅಂಬೇಡ್ಕರ್‌ ಅವರಂತಹ ಅತಿಶ್ರೇಷ್ಠ ಸಹೋದ್ಯೋಗಿಗಳ ನೆರವಿನಿಂದ ನೆಹರೂ ಈ ಸವಾಲುಗಳನ್ನು ಸಮರ್ಥ­ವಾಗಿಯೇ ಎದುರಿಸಿದರು.

ಪಟೇಲ್‌ 1950ರಲ್ಲಿ ನಿಧನರಾದರು. ಅಂಬೇಡ್ಕರ್‌ 1951ರಲ್ಲಿ ಸಂಪುಟ ತೊರೆದರು. ನಾಲ್ಕು ಮುಖ್ಯ ವಿಷಯಗಳನ್ನು ಇಟ್ಟುಕೊಂಡು ನೆಹರೂ  1952ರ ಸಾರ್ವತ್ರಿಕ ಚುನಾವಣೆ­ಯನ್ನು ಎದುರಿಸಿದರು. ಎರಡು ವಿಚಾರಧಾರೆ­ಗಳು ಅವರನ್ನು ಕಟ್ಟಾ ಎಡಪಂಥೀಯರಿಂದ ಬೇರೆಯಾಗಿಸಿದ್ದವು. ಒಂದು ಬಹು ಪಕ್ಷಗಳುಳ್ಳ ಪ್ರಜಾಪ್ರಭುತ್ವ. ಮತ್ತೊಂದು ಹಂತಹಂತವಾಗಿ ಸಮಾನತೆಯ ಸಮಾಜ ನಿರ್ಮಿಸುವುದು.
ಮತ್ತೆರಡು ವಿಚಾರಧಾರೆಗಳು ಅವರನ್ನು ಕಟ್ಟಾ ಬಲಪಂಥೀಯರಿಂದ ಬೇರ್ಪಡಿಸಿದ್ದವು. ಅಲ್ಪಸಂಖ್ಯಾತರಿಗೆ ಸಮಾನ ಹಕ್ಕುಗಳನ್ನು ನೀಡುವುದು (ಮೊದಲ ಚುನಾವಣಾ ಭಾಷಣ­ದಲ್ಲಿ ಅವರು ಕೋಮುವಾದದ  ವಿರುದ್ಧ ಉಗ್ರ­ವಾಗಿ ಮಾತನಾಡಿದ್ದರು) ಹಾಗೂ ಬಹು­ಸಂಖ್ಯಾತ ಸಮುದಾಯದ ಸನಾತನ ವೈಯಕ್ತಿಕ ಕಾನೂನು ಬದಲಿಸಿ ಹಿಂದು ಮಹಿಳೆಗೆ ಹೆಚ್ಚಿನ ಘನತೆ ಮತ್ತು ಸ್ವಾತಂತ್ರ್ಯ ಕಲ್ಪಿಸುವುದು.

1952ರಿಂದ 1957ರವರೆಗಿನ ಕಾಲ ನೆಹರೂ ಆಡಳಿತದ ಅತ್ಯುತ್ತಮ ಅವಧಿ­ಯಾಗಿತ್ತು. ಪ್ರಜಾಸತ್ತಾತ್ಮಕವಾದ, ವಿವಿಧತೆಯ ಆಧುನಿಕ ಸಮಾಜಕ್ಕೆ ಆಗ ಅಡಿಪಾಯ ಹಾಕ­ಲಾಯಿತು. ಸ್ವತಂತ್ರವಾದ ವಿದೇಶಾಂಗ ನೀತಿ­ಯನ್ನು ರೂಪಿಸ­ಲಾಯಿತು. ವಿಜ್ಞಾನ ಮತ್ತು ತಂತ್ರ­ಜ್ಞಾನ ಆಧರಿಸಿದ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲಾಯಿತು.

ತಮ್ಮ ಎರಡನೆಯ ಅವಧಿಯ ನಂತರ ನೆಹರೂ ಅಧಿಕಾರ ತ್ಯಜಿಸಿದ್ದಲ್ಲಿ ಅವರನ್ನು ನಾವು ದೇಶ ಕಂಡ ಅತ್ಯುತ್ತಮ ಪ್ರಧಾನಿ ಎಂದು ನೆನ­ಪಿಟ್ಟುಕೊಳ್ಳುತ್ತಿದ್ದೆವು. 1958ರಲ್ಲಿ ರಜಾದಿನ­ಗಳನ್ನು ಕಳೆಯಲು ಅವರು ಕಾಶ್ಮೀರಕ್ಕೆ ತೆರಳಿ­ದ್ದರು. ತಾವು ಇನ್ನು ನಿವೃತ್ತರಾಗಬೇಕು ಎಂಬ ನಿರ್ಧಾರ ಅವರಲ್ಲಿ ಮೂಡಿತ್ತು. ಆದರೆ, ದೆಹ­ಲಿಗೆ ಮರಳಿದ ಕೂಡಲೇ ಹುದ್ದೆಯಲ್ಲಿ ಮುಂದು­ವರಿಯುವಂತೆ ಅವರ ಮನವೊಲಿಸಲಾಯಿತು. ಅಲ್ಲಿಂದ ಅವರ ಸಮಸ್ಯೆಗಳೂ ಶುರುವಾದವು. ಪ್ರಧಾನಿ ಅವಧಿಯ ಕೊನೆಯ ಕೆಲ ವರ್ಷಗಳಲ್ಲಿ ಹೆಚ್ಚಿದ ಭ್ರಷ್ಟಾಚಾರ (ಮುಂಧ್ರಾ ವ್ಯವ­ಹಾರ), ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ (ಕೇರಳ ಸರ್ಕಾರ ವಜಾ) ಹಾಗೂ ಯುದ್ಧ­ಭೂಮಿ­ಯಲ್ಲಿನ ಅವಮಾನ (1962­ರಲ್ಲಿ ಚೀನಾ ವಿರುದ್ಧ ಸೋಲು) ಇತ್ಯಾದಿಗಳಿಂದ ಅವರು ಅಪಖ್ಯಾತಿಗೂ ಪಕ್ಕಾಗಬೇಕಾಯಿತು.

ಪ್ರಧಾನಿ ಸ್ಥಾನದಲ್ಲಿ ಕುಳಿತ ಅವಧಿಯನ್ನು ಗಣನೆಗೆ ತೆಗೆದುಕೊಂಡರೆ ನೆಹರೂ ನಂತರದ ಸ್ಥಾನ ಇಂದಿರಾ ಗಾಂಧಿ ಅವರಿಗೆ ದೊರಕುತ್ತದೆ. 1966–1977 ಹಾಗೂ 1980–1984ರ ಅವಧಿಯಲ್ಲಿ ಅವರು ಪ್ರಧಾನಿಯಾಗಿದ್ದರು. ಅವರ ಸಾಧನೆಗಳು ಏನು? ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಗೆ ಸತತ ಉತ್ತೇಜನ ನೀಡಿದ್ದು (ಆರಂಭದ ದಿನಗಳಲ್ಲಿ ಇಂದಿರಾ ಪ್ರೋತ್ಸಾಹದಿಂದಲೇ ನಮ್ಮ ಬಾಹ್ಯಾಕಾಶ ಯೋಜನೆಗಳಿಗೆ ಚಾಲನೆ ದೊರಕಿತ್ತು) ಹಾಗೂ ಬಾಂಗ್ಲಾ ವಿಮೋಚನೆಯ ಸಂದರ್ಭದಲ್ಲಿ ದಿಟ್ಟ ಮತ್ತು ಸೂಕ್ತ ನಿರ್ಧಾರ ತೆಗೆದುಕೊಂಡಿದ್ದು. ಹಾಗೆಯೇ ತಂದೆಯಂತೆಯೇ ಆಕೆಗೆ ಭಾರತದ ಕುರಿತು ವಿಶಾಲವಾದ, ಎಲ್ಲವನ್ನೂ ಒಳ­ಗೊಳ್ಳುವ, ಎಲ್ಲರನ್ನೂ ಸಹಭಾಗಿಯಾಗಿಸುವ ದೃಷ್ಟಿಕೋನವಿತ್ತು. ಧರ್ಮ ಅಥವಾ ಭಾಷೆಯ  ಆಧಾರದಲ್ಲಿ ಅವರು ತಾರತಮ್ಯ ಮಾಡಲಿಲ್ಲ (ದಕ್ಷಿಣ ಭಾರತದಲ್ಲಿ ಇಂದಿರಾ ಅವರ ಕುರಿತು ಇದ್ದ ಆದರ, ಗೌರವ ಭಾವನೆಗಳಿಗೆ ಇದೂ ಒಂದು ಕಾರಣ).

ಇಂದಿರಾ ಗಾಂಧಿ ಕಟ್ಟಾ ದೇಶಭಕ್ತೆಯಾಗಿ­ದ್ದರು. ಅದೇ ಕಾಲಕ್ಕೆ ಅನಿಶ್ಚಿತ ಪ್ರಜಾಪ್ರಭುತ್ವ ವಾದಿ­ಯಾಗಿದ್ದರು. ನೆಹರೂ ಅವರ ಅವಧಿ­ಯಲ್ಲಿ ನಾಗರಿಕ ಸೇವೆಗಳು ಮತ್ತು ನ್ಯಾಯಾಂಗದ ಸ್ವಾಯತ್ತತೆಯನ್ನು ಹುಷಾರಾಗಿ ಕಾಯ್ದುಕೊಳ್ಳ­ಲಾಗಿತ್ತು. ಇಂದಿರಾ ಗಾಂಧಿ ಬದ್ಧತೆ­­ಯುಳ್ಳ ಅಧಿಕಾರಿಗಳು ಹಾಗೂ ನ್ಯಾಯಾ­ಧೀಶರ ಪರಿಕಲ್ಪನೆಯನ್ನು ಪರಿಚಯಿಸಿದರು. 1969ರ­ವರೆಗೆ ಸಕ್ರಿಯವಾದ ಪ್ರಾದೇಶಿಕ ಘಟಕಗಳನ್ನು ಹಾಗೂ ಆಂತರಿಕ ಪ್ರಜಾ­ಪ್ರಭುತ್ವವನ್ನು ಹೊಂದಿದ್ದ ಕಾಂಗ್ರೆಸ್‌ ಪಕ್ಷವನ್ನು ಅವರು ಕೌಟುಂಬಿಕ ಸಂಸ್ಥೆಯಾಗಿ ಬದಲಾ­ಯಿಸಿದರು. ಅವರ ಈ ಸರ್ವಾಧಿಕಾರಿ ಧೋರಣೆ 1975–77ರ ತುರ್ತು ಪರಿಸ್ಥಿತಿಗೆ ಕಾರಣ­ವಾಯಿತು. ಈ ಅವಧಿಯಲ್ಲಿ ವಿರೋಧ ಪಕ್ಷಗಳ ನಾಯಕರನ್ನು ಜೈಲಿಗೆ ಅಟ್ಟಲಾಯಿತು. ಮಾಧ್ಯಮ­­ಗಳ ಮೇಲೆ ಸೆನ್ಸಾರ್‌ಷಿಪ್ ಹೇರ­ಲಾಯಿತು. ಸಾಮಾನ್ಯ ನಾಗರಿಕರ ಹಕ್ಕು, ಸ್ವಾತಂತ್ರ್ಯಗಳನ್ನು ಮೊಟಕುಗೊಳಿಸಲಾಗಿತ್ತು.

ಆರ್ಥಿಕ ಸುಧಾರಣೆ ಕೈಗೊಳ್ಳಲು ಆಸಕ್ತಿ ತೋರದೇ ಇದ್ದುದು ಇಂದಿರಾ ಗಾಂಧಿ ಅವರ ಬಹುದೊಡ್ಡ ವೈಫಲ್ಯ. ಐವತ್ತರ ದಶಕದಲ್ಲೇ ದೇಶದ ದೊಡ್ಡ ಉದ್ಯಮಿಗಳೆಲ್ಲ ಆರ್ಥಿಕ ಅಭಿ­ವೃದ್ಧಿಯಲ್ಲಿ ಸರ್ಕಾರ ಪ್ರಮುಖ ಪಾತ್ರ ವಹಿಸ­ಬೇಕು ಎಂಬ ಅಭಿಪ್ರಾಯ ಹೊಂದಿದ್ದರು. ಅರವ­ತ್ತರ ದಶಕದ ಕೊನೆಯ ಭಾಗದ ಹೊತ್ತಿಗೆ ದೇಶದ­ ಕೈಗಾರಿಕೋದ್ಯಮ ದೊಡ್ಡದಾಗಿ ಬೆಳೆ­ದಿತ್ತು. ಲೈಸನ್ಸ್‌ ರಾಜ್‌ (ಪರವಾನಗಿ ವ್ಯವಸ್ಥೆ) ಪದ್ಧ­ತಿಗೆ ಅಂತ್ಯ ಹಾಡಿ ರಫ್ತಿಗೆ ಉತ್ತೇಜನ ನೀಡುವ ಸಮಯ ಬಂದಿತ್ತು. ಅದರ ಬದಲಾಗಿ ಇಂದಿರಾ ಗಾಂಧಿ ಮತ್ತೊಂದು ಸುತ್ತಿನ ರಾಷ್ಟ್ರೀಕರಣಕ್ಕೆ ಮುಂದಾದರು.

ಇಂದಿರಾ ಗಾಂಧಿ ಮತ್ತು ಮನಮೋಹನ್‌ ಸಿಂಗ್‌ ನಡುವಿನ ಕಾಲದಲ್ಲಿ  ಮೂರು ಜನ ಪೂರ್ಣಾ­ವಧಿ ಪ್ರಧಾನಿಗಳು ಆಗಿಹೋಗಿದ್ದಾರೆ. ಆರಂಭದ ದಿನಗಳಲ್ಲಿ ರಾಜೀವ್‌ ಗಾಂಧಿ ಸಾಕಷ್ಟು ಭರವಸೆ ಮೂಡಿಸಿದ್ದರು. ಯುವ ಪ್ರತಿಭೆಗಳಿಗೆ ಮನ್ನಣೆ ನೀಡಿದ್ದರು. ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆಗೆ ಮುಂದಾಗಿದ್ದರು. ಮುಕ್ತ ಆರ್ಥಿಕತೆಯತ್ತ ಮುಖ ಮಾಡಿದ್ದರು. ಮಿಜೋ ಹಾಗೂ ಪಂಜಾಬಿನ ಪ್ರತ್ಯೇಕತಾ­ವಾದಿಗಳ ಜತೆ ಶಾಂತಿ ಒಪ್ಪಂದ ರೂಪಿಸುವತ್ತ ಹೆಜ್ಜೆ ಇಟ್ಟಿದ್ದರು. ಆದರೆ, ಮಧ್ಯದಲ್ಲಿಯೇ ಅವರು ಎಡವಿದರು. ಹಿಂದೂ ವೈಯಕ್ತಿಕ  ಕಾನೂನಿನಲ್ಲಿ ಸುಧಾರಣೆ ತಂದ ಅಂಬೇಡ್ಕರ್‌ ಮತ್ತು ನೆಹರೂ , ಕಾಲ ಪಕ್ವವಾದಾಗ ಮುಸ್ಲಿಂ ಕಾನೂನಿನಲ್ಲೂ ಈ ಸುಧಾರಣೆ ತರಬೇಕೆಂದು ಬಯಸಿದ್ದರು. ಶಹಬಾನೊ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪು ಇದಕ್ಕೆ ಸಂಪೂರ್ಣ ಅವಕಾಶ ಒದಗಿಸಿತ್ತು. ತಮ್ಮ ಜತೆ 400 ಸಂಸದರು ಹಾಗೂ ಪ್ರಗತಿಪರ ಧೋರಣೆಯ ಮುಸ್ಲಿಂ ಸಚಿವರು (ಅರೀಫ್‌ ಮಹಮ್ಮದ್‌ ಖಾನ್‌) ಇದ್ದರೂ ಮುಲ್ಲಾಗಳ ಮಾತು ಕೇಳಿದ ರಾಜೀವ್‌ ಗಾಂಧಿ ಆ ತೀರ್ಪು ರದ್ದಾಗುವಂತೆ ಶಾಸನ ರೂಪಿಸಿದರು. ಅದೇ ಸಮಯದಲ್ಲಿ ಅವರು ಅಯೋಧ್ಯಾ ದೇವಾಲ­ಯದ ಬೀಗ ತೆಗೆಸಿದರು. ಲಾಲ್‌ ಕೃಷ್ಣ ಅಡ್ವಾಣಿ ಮತ್ತು ರಾಮಜನ್ಮಭೂಮಿ ಚಳವಳಿಯಿಂದಾಗಿ ನೆಹರೂ ಅವರ ಈ ಮೊಮ್ಮಗ ಭಾರತವನ್ನು ಮುಂದಿನ ಎರಡು ದಶಕಗಳ ವ್ಯರ್ಥ ಕೋಮು­ಗಲಭೆಗಳಿಗೆ ದೂಡಿದರು.

1991ರಲ್ಲಿ ಹತ್ಯೆಯಾಗದೇ ಇದ್ದಲ್ಲಿ ರಾಜೀವ್‌ ಎರಡನೇ ಅವಧಿಗೆ ಪ್ರಧಾನಿಯಾಗು­ತ್ತಿದ್ದರೋ ಏನೋ. ಆಗ ಅವರ ಆಡಳಿತ ಹೇಗಿ­ರುತ್ತಿತ್ತು ಎಂಬುದನ್ನು ನಾವು ಹೇಳಲು ಸಾಧ್ಯವಿಲ್ಲ. ನಂತರ ಪ್ರಧಾನಿಯಾದ ಪಿ.ವಿ. ನರಸಿಂಹರಾವ್‌ ಎಲ್ಲರ ನಿರೀಕ್ಷೆಯನ್ನು ಮೀರಿ (ಸ್ವಂತ ನಿರೀಕ್ಷೆಯೂ ಸೇರಿ) ಕೆಲಸ ಮಾಡಿದರು. ಅವರು ಉದ್ಯಮಶೀಲತೆಗೆ ಪ್ರೋತ್ಸಾಹ ನೀಡಿ­ದರು. ರಫ್ತಿಗೆ ಉತ್ತೇಜನ ನೀಡಿದರು. ಆರ್ಥಿಕತೆ­ಯನ್ನು ಮುಕ್ತಗೊಳಿಸಿ ವಿದೇಶಗಳೊಂದಿಗೆ ಸ್ಪರ್ಧಿ­ಸು­­ವಂತೆ ಮಾಡಿದರು. ಅದೇ ಸಮಯದಲ್ಲಿ ಪಶ್ಚಿಮದ ದೇಶಗಳೆಡೆ ಒಲವು ಹೊಂದಿದ್ದ ಭಾರತದ ವಿದೇಶಾಂಗ ನೀತಿಯ ದಿಕ್ಕು ಬದಲಿಸಿ ಏಷ್ಯಾ ದೇಶಗಳೊಂದಿಗೆ ಉತ್ತಮ ಸಂಬಂಧ ಸ್ಥಾಪಿ­ಸಲು ಮುಂದಾದರು. ಹಿಂದೂ ಮೂಲ­ಭೂತ­ವಾದಿಗಳನ್ನು ಓಲೈಸಿದ್ದು ಹಾಗೂ ಸಂಸತ್ತಿ­ನಲ್ಲಿ ಮತಗಳನ್ನು ಮಾರಲು, ಖರೀದಿಸಲು ಅನುವು ಮಾಡಿಕೊಟ್ಟಿದ್ದು ಅವರ ಅಧಿಕಾರಾ­ವಧಿಯ ಋಣಾತ್ಮಕ ಸಂಗತಿಗಳು.

ಕಾಂಗ್ರೆಸ್‌ ಪಕ್ಷದ ಹೊರಗಿ­ನವರಾದ ಅಟಲ್‌ ಬಿಹಾರಿ ವಾಜಪೇಯಿ 1999ರಲ್ಲಿ ಪ್ರಧಾನಿಯಾದರು.  ಎರಡು ಬಾರಿ ಈ ಸ್ಥಾನದಲ್ಲಿ ಅವಧಿ ಪೂರೈಸಲು ಅವರು ವಿಫಲರಾಗಿದ್ದರು. ಮೂರನೇ ಬಾರಿ ಪ್ರಧಾನಿಯಾದಾಗ ಐದು ವರ್ಷಗಳ ಅವಧಿ ಪೂರೈಸಿದ್ದು ಅವರ ಅಗ್ಗಳಿಕೆ. ಒಂದೇ ಪಕ್ಷ ಮೇಲುಗೈ ಹೊಂದಿದ್ದ ಭಾರತದ ರಾಜಕೀಯ ರಂಗದಲ್ಲಿ ಆದ ವಿಸ್ತೃತ ಬದಲಾವಣೆಯನ್ನು ಇದು ಸೂಚಿಸಿತು. ತಮ್ಮ ಮಿತ್ರಪಕ್ಷಗಳನ್ನು ನಾಜೂಕಾಗಿ ನಿಭಾಯಿಸಿದ ವಾಜಪೇಯಿ ಮತ್ತಷ್ಟು ಆರ್ಥಿಕ ಉದಾರೀ­ಕರಣಕ್ಕೆ ಉತ್ತೇಜನ ನೀಡಿದರು. ಆದರೂ ಆರೆಸ್ಸೆಸ್‌­ನವರು ಶೈಕ್ಷಣಿಕ ಕ್ಷೇತ್ರದಲ್ಲಿ ನುಸುಳಿ­ದ್ದನ್ನು ಅವರು ತಡೆಯಲಿಲ್ಲ. ಅಲ್ಲದೇ 2002­ರಲ್ಲಿ ಗುಜರಾತ್‌ ಮುಖ್ಯಮಂತ್ರಿಯನ್ನು ಅವರು ವಜಾಗೊಳಿಸಿದ್ದರೆ ಅಲ್ಪಸಂಖ್ಯಾತರ ಹಿತ ಕಾಯುವ ನಮ್ಮ ಸಂವಿಧಾನದ ಬದ್ಧತೆಯನ್ನು ದೃಢವಾಗಿ ಎತ್ತಿಹಿಡಿದಂತೆ ಆಗುತ್ತಿತ್ತು.
ಅವಧಿ ಪೂರ್ಣಗೊಳಿಸದ ಪ್ರಧಾನಿಗಳ ಪೈಕಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಎದ್ದುಕಾಣುತ್ತಾರೆ. ಹಸಿರು ಕ್ರಾಂತಿಗೆ  ಬುನಾದಿ ಹಾಕಿದ ಶಾಸ್ತ್ರಿ ಅವರು, 1965ರಲ್ಲಿ ಪಾಕಿಸ್ತಾನ ಯುದ್ಧದ ಸಮಯದಲ್ಲಿ ಸರ್ವಶ್ರೇಷ್ಠ ನಾಯಕತ್ವ ನೀಡಿ­ದರು. ಅವರು ಇನ್ನೈದು ವರ್ಷ ಬದುಕಿದ್ದರೆ ಭಾರತ ಈಗಿನಕ್ಕಿಂತ ವಿಭಿನ್ನವಾಗಿರುತ್ತಿತ್ತು.

ಮನಮೋಹನ್‌ ಸಿಂಗ್‌ ಅವರ ಕೆಲಸವನ್ನು ಅವರ ಹಿಂದಿನವರ ಜತೆ ಹೋಲಿಸುವುದು ಹೇಗೆ? ಮಾಧ್ಯಮಗಳು ತಮ್ಮ ಬಗ್ಗೆ ತೀರ್ಮಾನ ಕೊಟ್ಟಿದ್ದಕ್ಕಿಂತ ಕರುಣೆಯಿಂದ ಇತಿಹಾಸ ತಮ್ಮ ಬಗ್ಗೆ ನಿರ್ಧರಿಸುತ್ತದೆ (ಅಥವಾ ಶೀಘ್ರವೇ ಮತದಾರರು ನಿರ್ಧರಿಸುತ್ತಾರೆ ) ಎಂದು ಸಿಂಗ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಆದರೆ, ಹೀಗಾಗುವುದು ಅನುಮಾನ. ಅವರ ಅವಧಿ­ಯಲ್ಲಿ ನೈಜವಾದ, ಮಹತ್ವದ್ದಾದ ಯಾವುದೇ ಕೆಲಸ ನಡೆದಂತೆ ಕಾಣುವುದಿಲ್ಲ. ‘ನರೇಗಾ‘ ಮತ್ತು ಆಹಾರ ಭದ್ರತಾ ಕಾಯ್ದೆಯಂತಹ ಜನಪ್ರಿಯ ಕಾರ್ಯಕ್ರಮಗಳ ಆಧಾರದಲ್ಲಿ ಇತಿಹಾಸ ತಮ್ಮ ಬಗ್ಗೆ ಉದಾತ್ತವಾಗಿರಬಹುದು ಎಂದು ಸಿಂಗ್‌ ಅಂದುಕೊಂಡಿರಬಹುದು. ಆದರೆ, ಈ ಕಾರ್ಯಕ್ರಮಗಳನ್ನು ಯಶಸ್ಸನ್ನು ಪಕ್ಷದ ಅಧ್ಯಕ್ಷೆ ತೆಗೆದುಕೊಳ್ಳುತ್ತಾರೆ. ಭಾರತ– ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದ ದೇಶಕ್ಕೆ ತಮ್ಮ ದೊಡ್ಡ ಕೊಡುಗೆ ಎಂದು ಡಾ. ಸಿಂಗ್‌ ಭಾವಿಸುತ್ತಾರೆ. ಆದರೆ, ಇಂಧನ ಭದ್ರತೆ ಹೆಚ್ಚಿಸುವಲ್ಲಿ ಈ ಒಪ್ಪಂದದಿಂದ ಯಾವುದೇ ಲಾಭವಾದಂತೆ ಕಾಣುವುದಿಲ್ಲ.

ಸಿಂಗ್‌ ಅವಧಿಯ ವೈಫಲ್ಯಗಳೇ ಕಣ್ಣಿಗೆ ರಾಚು­ತ್ತವೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತಿ ಭ್ರಷ್ಟವಾಗಿರುವ ಸರ್ಕಾರದ ನೇತೃತ್ವವನ್ನು ಸಿಂಗ್‌ ವಹಿಸಿದ್ದಾರೆ. ಲೋಕಸಭೆಗೆ ನೇರವಾಗಿ ಆಯ್ಕೆ­ಯಾ­ಗದೇ ಹಾಗೂ ಕಾಂಗ್ರೆಸ್‌ನ ಪ್ರಥಮ ಕುಟುಂಬದ ಮುಂದೆ ತಲೆಬಾಗುವ ಮೂಲಕ ಪ್ರಧಾನಿ ಸ್ಥಾನದ ಘನತೆಯನ್ನೇ ಕುಗ್ಗಿಸಿ­ಬಿಟ್ಟಿದ್ದಾರೆ.

ಹಣಕಾಸು ಪತ್ರಿಕೆಗಳು ಹಾಗೂ ಉದ್ಯಮಿಗಳ ಪರವಾಗಿರುವ ಸಂಪಾದಕರು ಖಾಸಗಿ ವಲಯ­ಕ್ಕಾಗಿ ಪ್ರಧಾನಿ ಹೆಚ್ಚಿನ ಕೊಡುಗೆ ನೀಡಿಲ್ಲ ಎಂದು ದೂರುತ್ತಾರೆ. ಸತ್ಯ ಏನೆಂದರೆ ಸಿಂಗ್‌ ಅವಧಿ­ಯಲ್ಲಿ ಸರ್ಕಾರಿ  ವ್ಯವಸ್ಥೆಯ ಪುನರುತ್ಥಾನಕ್ಕೆ ಗಮನ ನೀಡದೇ ಇರುವುದು ದೇಶದ ದೀರ್ಘ­ಕಾಲಿಕ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಸರ್ಕಾರಿ ಸಂಸ್ಥೆಗಳು, ವ್ಯವಸ್ಥೆಯನ್ನು ಸುಧಾರಿಸುವುದು ಭಾರತದ ಮುಂದೆ ಈಗ ಇರುವ ದೊಡ್ಡ ಸವಾಲು. ನಾಗರಿಕ ಸೇವೆಗಳಲ್ಲಿ ರಾಜಕೀಯ ಹಸ್ತಕ್ಷೇಪ­ವಾಗ­­ದಂತೆ ನೋಡಿಕೊಳ್ಳುವುದು, ಸರ್ಕಾರಿ ವ್ಯವಸ್ಥೆಯಲ್ಲಿ ಮತ್ತಷ್ಟು ವೃತ್ತಿಪರರನ್ನು ತರು­ವುದು ಹಾಗೂ ನಿಷ್ಠಾವಂತ ಮತ್ತು ಹೊಗಳು­ಭಟ್ಟರಿಗಿಂತ ದಕ್ಷ ಮತ್ತು ಸಮರ್ಥರಿಗೆ ಪ್ರೋತ್ಸಾಹ ನೀಡುವುದರ ಮಹತ್ವ ಸಿಂಗ್‌ ಅವರಿಗೆ ತಿಳಿಯದೇ ಇಲ್ಲ. ಈ ಕುರಿತು ಸಂಪೂರ್ಣ ಅರಿವಿದ್ದೂ ಅವರು ವ್ಯವಸ್ಥೆ ಮತ್ತಷ್ಟು ಕುಸಿಯಲು ಕಾರಣರಾದರು.

2004ರಲ್ಲಿ ಡಾ. ಸಿಂಗ್‌ ಅಧಿಕಾರ ವಹಿಸಿ­ಕೊಂಡಾಗಲೇ ರಾಜಕೀಯ ಒಳವಲಯಗಳಲ್ಲಿ ಇದ್ದವರಿಗೆ ಅವರೆಷ್ಟು ದುರ್ಬಲರು ಎಂಬುದು ತಿಳಿದಿತ್ತು. ತಮ್ಮ ಸಂಪುಟದ ಸದಸ್ಯರನ್ನು  ನೇಮಿಸಿ­ಕೊಳ್ಳುವಾಗಲೂ ಅವರ ಮಾತಿಗೆ ಮನ್ನಣೆ ಇರಲಿಲ್ಲ.

ಆದರೆ, ಹೊರಜಗತ್ತಿಗೆ ಅವರೊಬ್ಬ ಶಾಂತ ಮೂರ್ತಿ, ಭರವಸೆಯ ಮುಖ ಎಂಬಂತೆ ಬಿಂಬಿಸ­ಲಾಯಿತು. ಅಲ್ಲದೇ ವೃತ್ತಿಪರ ಅರ್ಥ­ಶಾಸ್ತ್ರ­ಜ್ಞರು ಎಂಬ ಹಿರಿಮೆಯೂ ಅವರಿಗಿತ್ತು. ಕಾಲ­ಕ್ರಮೇಣ ಈ ಅಭಿಪ್ರಾಯಗಳೆಲ್ಲ ಮಂಕಾ­ಗುತ್ತ ಬಂದು ಎಲ್ಲವೂ ಕುಸಿದುಬಿತ್ತು. ಅವರ ಎರಡನೇ ಅವಧಿಯ ಹೊತ್ತಿಗೆ, ಸರ್ಕಾರಿ ವ್ಯವಸ್ಥೆ­ಯಲ್ಲಿನ (ಹಾಗೂ ರಾಜಕೀಯ) ಭ್ರಷ್ಟಾಚಾರ­ವನ್ನು ತಡೆಯುವ ಅಥವಾ ಕುಸಿಯುತ್ತಿರುವ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರುವ ವ್ಯಕ್ತಿ ಇವರಲ್ಲ ಎಂಬುದು ಎಲ್ಲರಿಗೂ ಮನ­ದಟ್ಟಾಗಿತ್ತು.

ಈ ಹಿಂದೆಯೂ ದುರ್ಬಲ ಪ್ರಧಾನಿಗಳಿದ್ದರು. ಆದರೆ ಯಾರೂ ಇಷ್ಟು ದೀರ್ಘಾವಧಿಗೆ ಪ್ರಧಾನಿ­­ಯಾಗಿರಲಿಲ್ಲ. ಇತಿಹಾಸ ತೀರ್ಪು ಕೊಡುವಾಗ ಅವರ ಆಡಳಿತದ ಅವಧಿಯನ್ನು ಸಹ ಗಣನೆಗೆ ತೆಗೆದುಕೊಳ್ಳಲೇಬೇಕು. ಇಷ್ಟೊಂದು ದೀರ್ಘ ಕಾಲದಲ್ಲಿ ಸ್ವಲ್ಪವೂ ಕೆಲಸ ಮಾಡದೇ ಇರುವು­ದಕ್ಕೆ ಸಿಂಗ್‌ ಅವಧಿ ನಿರಾಸೆ ಹುಟ್ಟಿಸು­ವಂತಿದೆ.

ಕಾಲ ಕಳೆದಂತೆ ಐತಿಹಾಸಿಕ ತೀರ್ಪುಗಳನ್ನು ಪರಿ­ಷ್ಕರಿಸಬಹುದು, ಪೂರ್ತಿ ತಲೆಕೆಳಗಾಗಿ­ಸ­ಬಹುದು ಎಂಬುದೂ ಸತ್ಯವೇ. ಇಂದಿರಾ ಗಾಂಧಿ ಅವರ ಸರ್ವಾಧಿಕಾರಿ ಧೋರಣೆಯಿಂದಾಗಿ ಉಗ್ರ ಹಿಂದುತ್ವವಾದಿಗಳು ಜವಾಹರಲಾಲ್‌ ನೆಹರೂ ಅವರನ್ನು ಉದಾರ ದೃಷ್ಟಿಯಿಂದ ನೋಡ­ಲಾರಂಭಿಸಿದರು. ರಾಹುಲ್‌ ಗಾಂಧಿ ವರ್ತನೆ­ಯಿಂದಾಗಿ ವಂಶಪಾರಂಪರ್ಯ ರಾಜ­ಕಾರಣದ ಕಟು ಟೀಕಾಕಾರರು ಇಂದಿರಾಗಾಂಧಿ ಅವರನ್ನು ಭಾವುಕತೆಯಿಂದ ನೆನಪಿಸಿಕೊಳ್ಳು­ತ್ತಿ­ದ್ದಾರೆ. ಬಿಜೆಪಿಯ ಮುಂದಿನ ಪ್ರಧಾನಿ, ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ಎಡ­ಪಂಥೀ­ಯರು ಉದಾರ ದೃಷ್ಟಿಯಿಂದ ನೋಡುವಂತೆ ಮಾಡುವ ಎಲ್ಲ ಸಾಧ್ಯತೆಗಳಿವೆ. ಆದರೂ ಡಾ. ಸಿಂಗ್‌ ಅವರ ವರ್ಚಸ್ಸು ಮುಂಬರುವ ವರ್ಷ­ಗಳಲ್ಲಿ ಹೇಗೆ ಹೆಚ್ಚುತ್ತದೆ ಎಂಬುದನ್ನು ಊಹಿಸಿ­ಕೊಳ್ಳಲು ಸಾಧ್ಯವಿಲ್ಲ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT