ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಕಾಲದ ಸಂಜಯ ಗಾಂಧಿ

Last Updated 23 ಜೂನ್ 2016, 19:30 IST
ಅಕ್ಷರ ಗಾತ್ರ

ಈ ಲೇಖಕ  ಸೇರಿ ಹಲವು ವಿಶ್ಲೇಷಕರು ನರೇಂದ್ರ ಮೋದಿ ಅವರನ್ನು ಇಂದಿರಾ ಗಾಂಧಿಗೆ ಹೋಲಿಸಿದ್ದಾರೆ. ಇಂದಿರಾ ನಂತರ ಅತ್ಯಂತ ಅಧಿಕಾರಯುತ ಪ್ರಧಾನಿ ಮೋದಿ ಎಂಬುದರಲ್ಲಿ ಅನುಮಾನವೇ ಇಲ್ಲ. ಇತರ ಇಬ್ಬರು ಪೂರ್ಣಾವಧಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ನರಸಿಂಹ ರಾವ್ ಅವರಿಗೆ ಹೋಲಿಸಿದಾಗ ಅದು ಇನ್ನೂ ಹೆಚ್ಚು ಖಚಿತವಾಗುತ್ತದೆ.

ಈ ಶಕ್ತಿ ಮತ್ತು ಅಧಿಕಾರವು ಪಕ್ಷ ಮತ್ತು ಸರ್ಕಾರದಲ್ಲಿ ಆಂತರಿಕವಾಗಿ, ದೇಶ ಮತ್ತು ಜಾಗತಿಕ ಮಟ್ಟದಲ್ಲಿ ಬಾಹ್ಯವಾಗಿ ವ್ಯಕ್ತವಾಗಿದೆ. ಇಂದಿರಾ ಅವರಂತೆ ಮೋದಿ ಅವರೂ ಏಕಾಂಗಿ. ಇಂದಿರಾ ರೀತಿಯಲ್ಲೇ ಮೋದಿ ಅವರೂ ತಮ್ಮ ಯೋಚನೆಗಳನ್ನು ಇತರರಿಗೆ ಬಿಟ್ಟುಕೊಡುವವರಲ್ಲ. ಅವರು ವಿಶ್ವಾಸ ಇರಿಸಿರುವ ಮತ್ತು ಕೆಲವು ರೀತಿಯಲ್ಲಾದರೂ ತಮಗೆ ಸಮಾನ ಎಂದು ಪರಿಗಣಿಸುವ ಏಕೈಕ ವ್ಯಕ್ತಿ ಅಮಿತ್ ಷಾ.

ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸಚಿವರಾಗಿದ್ದ ಷಾ ಅವರಿಗೆ 12 ಖಾತೆಗಳನ್ನು ವಹಿಸಿದ್ದರು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ಪ್ರಧಾನಿ ಅಭ್ಯರ್ಥಿಯಾದಾಗ ಷಾ ಅವರಿಗೆ ಪ್ರಚಾರದಲ್ಲಿ ಮಹತ್ವದ ಹುದ್ದೆ ನೀಡಬೇಕು ಎಂದು ಒತ್ತಾಯಿಸಿದ್ದರು. ಹಾಗೇ ನಿರ್ಣಾಯಕ ರಾಜ್ಯವಾದ ಉತ್ತರ ಪ್ರದೇಶದ ಅಭ್ಯರ್ಥಿಗಳ ಆಯ್ಕೆ ಮತ್ತು ಪ್ರಚಾರವನ್ನು ಷಾ ಅವರೇ ನೋಡಿಕೊಂಡರು. 2014ರ ಜುಲೈಯಲ್ಲಿ ಮೋದಿ ಅವರ ಒತ್ತಾಯ ಅಥವಾ ಅಪ್ಪಣೆಯಂತೆ ಬಿಜೆಪಿ ಅಧ್ಯಕ್ಷರಾಗಿ ಷಾ ನೇಮಕವಾದರು.

ರಾಜಕೀಯವಾಗಿ ಮೋದಿ ಅವರು ಸಂಪೂರ್ಣವಾಗಿ ನಂಬುವ ಒಬ್ಬ ವ್ಯಕ್ತಿ ಅಮಿತ್ ಷಾ. ಕನಿಷ್ಠ 1975-1980ರ ನಿರ್ಣಾಯಕ ವರ್ಷಗಳಲ್ಲಿ ಇಂದಿರಾ ಅವರು ನಿಜವಾಗಿಯೂ ವಿಶ್ವಾಸ ಇರಿಸಿದ್ದ ಏಕೈಕ ವ್ಯಕ್ತಿ ಸಂಜಯ ಗಾಂಧಿ. ಇಂದಿರಾ ಮತ್ತು ಸಂಜಯ ಅವರಿಗೆ ಇದ್ದಂತೆ ಮೋದಿ ಮತ್ತು ಷಾ ನಡುವೆ ರಕ್ತ ಸಂಬಂಧ ಇಲ್ಲ. ಆದರೆ, ಒಬ್ಬ ಇತಿಹಾಸಕಾರನಿಗೆ ಕುತೂಹಲ ಹುಟ್ಟಿಸುವ ಮತ್ತು ಜನರಿಗೆ ಕಾಡುವ ಕೆಲವು ಎದ್ದು ಕಾಣುವ ಸಾಮ್ಯಗಳು ಇದ್ದೇ ಇವೆ.

ಎಷ್ಟು ದೀರ್ಘ ಕಾಲ ಸಾಧ್ಯವೋ ಅಷ್ಟು ಕಾಲ ಅಧಿಕಾರದಲ್ಲಿ ಉಳಿಯಲು ಇಂದಿರಾ ಬಯಸಿದ್ದರು. ಜತೆಗೆ, ಭಾರತವನ್ನು ಸುಧಾರಣೆ ಮಾಡಿ ಇತಿಹಾಸದಲ್ಲಿ ತಮ್ಮ ಛಾಪು ಮೂಡಿಸಲೂ ಬಯಸಿದ್ದರು. ಅಧಿಕಾರ ಮತ್ತು ಖ್ಯಾತಿಯನ್ನು ಪಡೆಯುವುದರ ಜತೆಗೆ ಅದಕ್ಕಿಂತಲೂ ಹೆಚ್ಚಿನದೇನನ್ನೋ ಮಾಡಬೇಕು ಎಂಬ ಬಯಕೆ ಮೋದಿ ಅವರಿಗೂ ಇದೆ ಎಂದು ನನಗೆ ಅನಿಸುತ್ತದೆ. ಮೋದಿ ಅವರ ಸಮೃದ್ಧ ಮತ್ತು ಶಕ್ತ ಭಾರತದ ಚಿಂತನೆ ಇಂದಿರಾ ಅಥವಾ ನೆಹರೂ ಅವರು ಹೊಂದಿದ್ದ ಚಿಂತನೆಗಿಂತ ಭಿನ್ನವಾಗಿರಬಹುದು.

ಆದರೆ ತಮ್ಮ ವೈಯಕ್ತಿಕ ಆಕಾಂಕ್ಷೆಗಳನ್ನು ಮೀರಿ ದೇಶದ ಬಗ್ಗೆಯೂ ಮೋದಿ ಅವರಿಗೆ ಒಂದು ದೃಷ್ಟಿಕೋನ ಇದೆ ಎಂಬುದನ್ನು ನಿರಾಕರಿಸುವುದು ಹಟಮಾರಿತನವಾಗಬಹುದು. ಅದಕ್ಕೆ ವ್ಯತಿರಿಕ್ತವಾಗಿ, ಸಂಜಯ ಗಾಂಧಿ ಅವರಂತೆ ಅಮಿತ್ ಷಾ ಅವರನ್ನೂ ಅಧಿಕಾರ ಮತ್ತು ಅಧಿಕಾರ ಮಾತ್ರ ಮುನ್ನಡೆಸುತ್ತಿದೆ ಎಂಬಂತೆ ಕಾಣಿಸುತ್ತಿದೆ. ಮೊದಲನೆಯದಾಗಿ, ಇಂದಿರಾ ಅವರ ಎರಡನೇ ಮಗನ ರಾಜಕೀಯ ಚಟುವಟಿಕೆಗಳನ್ನು ವಿವರಿಸಲು ನನ್ನ ಮನಸ್ಸಿಗೆ ಬರುವ  ಒಂದು ಪದ ‘ಏಕೋದ್ದೇಶ’.

ಎರಡನೆಯದಾಗಿ, ಮೊದಲನೆಯದರ ಪರಿಣಾಮವಾಗಿ ಮತ್ತು ಅದಕ್ಕೆ ಸಂವಾದಿಯಾಗಿರುವ ಆದರೆ ಅಷ್ಟೊಂದು ಸೌಮ್ಯವಲ್ಲದ ಪದ ‘ನಿರ್ದಯ’. ತುರ್ತು ಪರಿಸ್ಥಿತಿ ಕಾಲದಲ್ಲಿ ಮಾತ್ರವಲ್ಲದೆ, ಅದರ ನಂತರ ಸೋತು ಹೋಗಿದ್ದ ತಾಯಿಯಲ್ಲಿ ಧೈರ್ಯ ತುಂಬಿ, ಜನತಾ ಪಕ್ಷವನ್ನು ವಿಭಜಿಸಿ, ಪಕ್ಷ ತೊರೆದಿದ್ದ ಪ್ರಭಾವಿಗಳನ್ನು ಮರಳಿ ಕರೆತಂದು ಕಾಂಗ್ರೆಸ್‌ನ ರಾಜಕೀಯ ಪುನರ್ಜನ್ಮಕ್ಕೆ ಕಾರಣರಾದ ಸಂಜಯ ಗಾಂಧಿ ಅವರಲ್ಲಿ ಈ ಎಲ್ಲ ಪ್ರವೃತ್ತಿಗಳು ಕಂಡವು.

ಕೆಲವು ವಿಶ್ಲೇಷಕರು ಸಂಜಯ ಗಾಂಧಿಯನ್ನು ಯರ್ರಾಬಿರ್ರಿ ವರ್ತನೆಯ ಕೆಟ್ಟು ಹೋದ ಯುವಕ ಎಂದು ಕಾಣಲು ಬಯಸುತ್ತಾರೆ. ಆದರೆ ವಾಸ್ತವದಲ್ಲಿ ಅವರು ಅತ್ಯಂತ ಯಶಸ್ವಿ  ರಾಜಕೀಯ ಕಾರ್ಯನಿರ್ವಾಹಕ.

ಇಂದಿರಾ ಅವರಲ್ಲಿ ಸ್ವಲ್ಪ ಆತ್ಮಸಾಕ್ಷಿ ಇದ್ದಿರದಿದ್ದರೆ ಮತ್ತು ಅವರು ತುರ್ತು ಪರಿಸ್ಥಿತಿ ಹಿಂದಕ್ಕೆ ಪಡೆಯದೇ ಇದ್ದಿದ್ದರೆ (ತುರ್ತು ಪರಿಸ್ಥಿತಿ ಹಿಂದಕ್ಕೆ ಪಡೆಯುವ ನಿರ್ಧಾರದ ಬಗ್ಗೆ ಅವರು ಸಂಜಯ ಅವರ ಜತೆ ಸಮಾಲೋಚನೆ ನಡೆಸಿರಲಿಲ್ಲ ಎಂಬುದು ಗಮನಾರ್ಹ), ಪ್ರತಿಪಕ್ಷ ಮತ್ತು ಮಾಧ್ಯಮವನ್ನು ಆಗಲೇ ದಮನ ಮಾಡಿದ್ದರಿಂದ ನಿರಂಕುಶಾಧಿಪತ್ಯ ಮತ್ತೂ ಮುಂದುವರಿಯುತ್ತಿತ್ತು. ಸಂಜಯ ಉಸ್ತುವಾರಿ ನೋಡಿಕೊಂಡಿದ್ದ ಸಾರ್ವತ್ರಿಕ ಚುನಾವಣೆ 1980ರದ್ದು ಮಾತ್ರ. ಅದರಲ್ಲಿ ಅವರ ಪಕ್ಷಕ್ಕೆ ಭಾರಿ ಗೆಲುವು ದೊರೆಯಿತು.

ಏಕೋದ್ದೇಶ ಮತ್ತು ನಿರ್ದಯ ಎಂಬ ಪದಗಳು ಅಮಿತ್ ಷಾ ಅವರಿಗೂ ಅನ್ವಯ ಆಗುತ್ತವೆ. ಗುಜರಾತ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ದಮನ ಮಾಡಿದ್ದಾರೆ ಎಂಬ ಈಗಲೂ ವಿವಾದಾತ್ಮಕವಾಗಿರುವ ಅವರ ಪಾತ್ರವನ್ನು ಸದ್ಯಕ್ಕೆ ಬದಿಗಿಡೋಣ (ಆಸಕ್ತರು ರಾಣಾ ಅಯೂಬ್ ಅವರ ದಿಟ್ಟ ಪುಸ್ತಕ ‘ದಿ ಗುಜರಾತ್ ಫೈಲ್ಸ್’ ಓದಬಹುದು).

ರಾಜ್ಯದಿಂದ ರಾಷ್ಟ್ರೀಯ ರಾಜಕೀಯಕ್ಕೆ ಹೋದ ನಂತರ ಅವರು ಮಾಡಿರುವುದನ್ನೇ ಗಣನೆಗೆ ತೆಗೆದುಕೊಳ್ಳೋಣ. 2014ರ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಅವರು ಅತ್ಯಂತ ಪ್ರಜ್ಞಾಪೂರ್ವಕವಾಗಿ ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಮತ ಪೆಟ್ಟಿಗೆ ಮೂಲಕ ‘ಸೇಡು’ ತೀರಿಸುವಂತೆ ಮತದಾರರನ್ನು ಕೋರಿ ಧ್ರುವೀಕರಣ ನಡೆಸಿದರು.

ಷಾ ಅವರ ಉಸ್ತುವಾರಿಯಲ್ಲಿ ಗೆದ್ದು ಸಂಸದರಾದ ಯೋಗಿ ಆದಿತ್ಯನಾಥ್, ಸಾಕ್ಷಿ ಮಹಾರಾಜ್ ಮತ್ತು ಸಂಜೀವ್ ಬಲ್ಯಾನ್ ಅಂಥವರು ಅತ್ಯಂತ ದ್ವೇಷಪೂರಿತ ಮತ್ತು ಧರ್ಮಾಂಧ ಹೇಳಿಕೆಗಳನ್ನು ನೀಡಿದ್ದಾರೆ. ಅವರನ್ನು ತಡೆಯುವ ಗೋಜಿಗೆ ಪಕ್ಷಾಧ್ಯಕ್ಷ ಷಾ ಹೋಗಿಲ್ಲ (ಪ್ರಧಾನಿ ಕೂಡ ಆ ಕೆಲಸ ಮಾಡಲಿಲ್ಲ).

ಈಗ ಅಮಿತ್ ಷಾ ಉತ್ತರ ಪ್ರದೇಶ ಮತ್ತು ಭಾರತವನ್ನು ಮತ್ತಷ್ಟು ಧ್ರುವೀಕರಣಗೊಳಿಸಲು ಸಜ್ಜಾಗಿದ್ದಾರೆ. ಬಿಜೆಪಿ ಸಂಸದರೊಬ್ಬರು ಮಾಡಿದ ಆರೋಪದ ಆಧಾರದಲ್ಲಿ, ಉತ್ತರ ಪ್ರದೇಶದ ಕೈರಾನಾ ಎಂಬ ಪಟ್ಟಣದಿಂದ ಹಿಂದೂಗಳ ಸಾಮೂಹಿಕ ವಲಸೆ ನಡೆದಿದೆ ಎಂದು ಷಾ ಆಪಾದಿಸಿದ್ದಾರೆ.

ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ವರದಿ ಮಾಡಿ, ಇದು ಉತ್ಪ್ರೇಕ್ಷಿತ ಹೇಳಿಕೆ ಎಂದಾಗ, ಸಂಸದ ತಮ್ಮ ಆರೋಪವನ್ನು ಹಿಂದಕ್ಕೆ ಪಡೆದರು. ಆದರೆ ಷಾ ಹಾಗೆ ಮಾಡಲಿಲ್ಲ. ಆರೋಪ ಮಾಡಿ ಅದರಿಂದ ಹಿಂದೆ ಸರಿದ ಸಂಸದ ಮತ್ತೆ ಮೂಲ ನಿಲುವಿಗೇ ಅಂಟಿಕೊಳ್ಳುವಂತೆ ಮಾಡಲಾಯಿತು. ಕೈರಾನಾ ಮತ್ತು ಸುತ್ತಲಿನ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯಲು ಸ್ಥಳೀಯ ವಿಷಪೂರಿತ ರಾಜಕಾರಣಿ ಸಂಗೀತ್ ಸೋಮ್ ಅವರನ್ನು ಕಳುಹಿಸಲಾಯಿತು.

ವದಂತಿ ಮತ್ತು ಕೊಂಕುನುಡಿಗಳಿಂದಲೇ ಸಾಮಾನ್ಯವಾಗಿ ಕೋಮು ಗಲಭೆಗಳು ಆರಂಭವಾಗುತ್ತವೆ ಎಂಬುದನ್ನು ಇತಿಹಾಸಕಾರರು ಮತ್ತು ಮಾನವಶಾಸ್ತ್ರಜ್ಞರು ನಡೆಸಿದ ಹಲವು ಅಧ್ಯಯನಗಳು ತೋರಿಸಿಕೊಟ್ಟಿವೆ. ಜವಾಬ್ದಾರಿಯುತ ನಾಯಕ ಸುಳ್ಳನ್ನು ಸುಳ್ಳೆಂದು ಸಾರ್ವಜನಿಕವಾಗಿ ಘೋಷಿಸಬೇಕು.

ಕಳಕಳಿ ಇರುವ ನಾಯಕ 2013ರ ಮುಜಫ್ಫರ್‌ನಗರ ಗಲಭೆಯಿಂದಾಗಿ ಇನ್ನೂ ನಿರ್ವಸಿತರಾಗಿರುವ ಸಾವಿರಾರು ಜನರ ಪುನರ್ವಸತಿಗಾಗಿ ಕೆಲಸ ಮಾಡಬೇಕು. ಆದರೆ ಷಾ ಇಂಥ ನಾಯಕ ಅಲ್ಲ, ಅವರು ಏಕೋದ್ದೇಶದ ಮತ್ತು ನಿರ್ದಯಿ ವ್ಯಕ್ತಿ. ಉತ್ತರ ಪ್ರದೇಶದ ಹಿಂದೂಗಳಲ್ಲಿ ಭೀತಿ ಮತ್ತು ದಿಗಿಲು ಹೆಚ್ಚಿಸುವುದರಿಂದ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಹಿಂದೂ ಮತಗಳನ್ನು ಕ್ರೋಡೀಕರಿಸುವುದು ಸಾಧ್ಯ ಎಂದು ಷಾ ನಿರ್ಧರಿಸಿದ್ದಾರೆ.

ಜನಾಂಗೀಯ ದ್ವೇಷವನ್ನು ತೀವ್ರಗೊಳಿಸುವ ಈ ಬಯಕೆಗೆ ಷಾ ಅವರಿಗೆ ಎರಡು ರೀತಿಯ ಮಿತ್ರರಿದ್ದಾರೆ. ಒಂದು, ಸಹಜವಾಗಿಯೇ, ಅವರದೇ ಪಕ್ಷದ ಶಾಸಕರು ಮತ್ತು ಸಂಸದರು. ಇವರ ರಾಜಕೀಯ ಚಿಂತನೆ ಷಾ ಅವರದ್ದೇ ಆಗಿದೆ. ಅವರಿಗೆ ಯಾವುದೇ ಬೆಲೆ ತೆತ್ತಾದರೂ ಗೆಲ್ಲಬೇಕು, ತಮ್ಮ ವಿಧಾನಗಳು ಸಾಮಾಜಿಕ ರಚನೆಯನ್ನು ಮತ್ತಷ್ಟು ಹಾನಿಗೊಳಿಸಿದರೂ ಚಿಂತೆ ಇಲ್ಲ.

ಷಾ ಅವರ ಎರಡನೇ ಮಿತ್ರ ಸಮಾಜವಾದಿ ಪಕ್ಷ. ಈ ಪಕ್ಷದ ಮುಖಂಡರಿಗೆ ಮುಸ್ಲಿಮರನ್ನು ಈಗ ಇರುವುದಕ್ಕಿಂತಲೂ ಹೆಚ್ಚು ಅಸುರಕ್ಷಿತರನ್ನಾಗಿಸಬೇಕು. ಹಾಗಾದರೆ ಮಾತ್ರ ಚುನಾವಣೆ ಸಂದರ್ಭದಲ್ಲಿ ಅವರು ಬೇರೆ ಪಕ್ಷಗಳಿಗೆ ವಲಸೆ ಹೋಗದಂತೆ ತಡೆಯಬಹುದು.

ಸಂಜಯ ಗಾಂಧಿಯ ಹಾಗೆಯೇ ಷಾ ಅವರೂ ಸ್ವಪಕ್ಷೀಯರ ಗೌರವ ಪಡೆಯುವುದರ ಜತೆಗೆ ಅವರಲ್ಲಿ ಭಯಕ್ಕೂ ಕಾರಣರಾಗಿದ್ದಾರೆ. ಬಹುಶಃ ಇದು ಭಯದ ಮೂಲಕ ಇರುವ ಗೌರವ. ಮಾಧ್ಯಮವನ್ನು ದಮನಗೊಳಿಸಿ ಪಳಗಿಸಲು ಸಂಜಯ ಗಾಂಧಿ ತಾಯಿಯ ಮೂಲಕ ತುರ್ತುಸ್ಥಿತಿ ಹೇರಿಸಬೇಕಾದ ಅಗತ್ಯ ಇತ್ತು. ಆದರೆ ಷಾ  ಪ್ರಜಾತಂತ್ರ ಹೆಚ್ಚು ದೃಢವಾಗಿರುವ ತುರ್ತುಪರಿಸ್ಥಿತಿ ನಂತರದ ದಿನಗಳಲ್ಲೂ ಮಾಧ್ಯಮದ ಪ್ರಭಾವಿ ವರ್ಗವನ್ನು ತಮಗೆ ಬೇಕಾದಂತೆ ಬಾಗಿಸಿದ್ದಾರೆ.

ಷಾ ಅವರನ್ನು ಟೀಕಿಸುವ ಧೈರ್ಯ ತೋರಿದ ಅಂಕಣಕಾರರೊಬ್ಬರ ವ್ಯಾಪಕ ಓದುಗರಿದ್ದ ಅಂಕಣವನ್ನು ಮುಂಬೈನ ಪತ್ರಿಕೆಯೊಂದು ನಿಲ್ಲಿಸಿತು. (ನಂತರ ಆ ಪತ್ರಿಕೆಯ ಮಾಲೀಕರು ಬಿಜೆಪಿ ಬೆಂಬಲದಿಂದ ರಾಜ್ಯಸಭಾ ಸದಸ್ಯರಾದರು). ಇದು ಪತ್ರಕರ್ತರನ್ನು ಜಾಗರೂಕರನ್ನಾಗಿಸಿದೆ- ಪಕ್ಷದ ಸಾಮಾನ್ಯ ವಕ್ತಾರರನ್ನು ಬೆಂಡೆತ್ತುವ ನಿರೂಪಕ ಆರ್ಣಬ್‌ ಗೋಸ್ವಾಮಿ, ಬಿಹಾರ ಚುನಾವಣೆಗೆ ಮೊದಲು ಬಿಜೆಪಿ ಅಧ್ಯಕ್ಷರ ಸಂದರ್ಶನದ ಸಂದರ್ಭದಲ್ಲಿ ನಮ್ರವಾಗಿದ್ದದ್ದು ಮಾತ್ರವಲ್ಲ ಗುಲಾಮನಂತಿದ್ದರು.

ಸಂಜಯ ಗಾಂಧಿಯ ಪ್ರಮಾದಗಳನ್ನು ಇಂದಿರಾ ಕಾಣಲಿಲ್ಲ, ಅದಕ್ಕೆ ಒಂದು ಕಾರಣ ಆತ ಅವರ ಮಗ ಎಂಬುದು. ಮೋದಿ ಮತ್ತು ಷಾ ನಡುವಣ ಸಂಬಂಧ ಆ ರೀತಿಯದ್ದಲ್ಲದಿದ್ದರೂ ಷಾ ಅವರ ರಾಜಕೀಯ ವಿಧಾನಗಳನ್ನು ಪ್ರಶ್ನಿಸದಿರುವಷ್ಟು ನಂಬಿಕೆ ಅವರ ನಡುವೆ ಇದೆ.

ರಾಜ್ಯಸಭೆಯಲ್ಲಿ ಪಕ್ಷದ ಬಲ ಹೆಚ್ಚಿಸಲು ಇದು ಅಗತ್ಯ ಎಂದು ಮೋದಿ ಭಾವಿಸಿದ್ದಾರೆಯೇ? ಹಾಗಾದರೆ, ಬಡ, ಸಾಮಾಜಿಕವಾಗಿ ಹಿಂದುಳಿದ, ಧಾರ್ಮಿಕ ಹಿಂಸೆಗೆ ತುತ್ತಾಗುವ ಅಪಾಯವನ್ನು ಸದಾ ಹೊಂದಿರುವ ದೊಡ್ಡ ದೇಶದ ಮೇಲೆ ಇದು ಉಂಟು ಮಾಡುವ ಗಾಯಗಳನ್ನು ಅವರು ಗಣನೆಗೆ ತೆಗೆದುಕೊಂಡಿದ್ದಾರೆಯೇ? ಇಂತಹ ವಿಧಾನಗಳ ಮೂಲಕ ಉತ್ತರ ಪ್ರದೇಶವನ್ನು ಅಥವಾ ಭಾರತವನ್ನು ಮುಂದಕ್ಕೆ ಒಯ್ಯುವುದಕ್ಕೆ ಸಾಧ್ಯವಿದೆಯೇ?

ನಾನು ಇಂದಿರಾ ಅಥವಾ ಮೋದಿ ಅವರ ಅಭಿಮಾನಿ ಅಲ್ಲ. ತುರ್ತುಸ್ಥಿತಿಯನ್ನು ನೋಡಿದ್ದೇನೆ.  ಹಾಗೆಯೇ 2002ರ ಹಿಂದೆ ಮತ್ತು ನಂತರ ಹಲವು ಬಾರಿ ಗುಜರಾತ್‌ಗೆ ಭೇಟಿ ನೀಡಿದ್ದೇನೆ. ಆ ವರ್ಷ ನಡೆದ ಘೋರ ಘಟನೆಗಳು ರಾಜ್ಯದಲ್ಲಿ ಉಂಟು ಮಾಡಿದ ಹಾನಿಯ ಪ್ರಮಾಣ ಎಷ್ಟು ಎಂಬುದನ್ನು ಕಂಡಿದ್ದೇನೆ. ಒಬ್ಬ ರಾಜಕಾರಣಿಯ ವೃತ್ತಿ ಜೀವನವನ್ನು ಸಮಗ್ರವಾಗಿ ನೋಡಬೇಕು.

ಬಾಂಗ್ಲಾ ಯುದ್ಧದ ಗೆಲುವು ಮತ್ತು ಬಾಹ್ಯಾಕಾಶ ಕಾರ್ಯಕ್ರಮದ ಆರಂಭ, ಆಹಾರದಲ್ಲಿ ಸ್ವಾವಲಂಬನೆಗೆ ಪ್ರೋತ್ಸಾಹ, ಪರಿಸರ ಮತ್ತು ಅರಣ್ಯ ಸಚಿವಾಲಯ ಆರಂಭದಂತಹ ಸಾಧನೆಗಳು ತುರ್ತು ಸ್ಥಿತಿ ಹೇರಿಕೆಯ ಕಪ್ಪುಚುಕ್ಕೆ ಜತೆಗೆ ಇಂದಿರಾ ಅವರಿಗೆ ಇವೆ. ಮುಖ್ಯಮಂತ್ರಿಯಾಗಿದ್ದ ಆರಂಭಿಕ ದಿನಗಳಲ್ಲಿ ನಡೆದ ಗುಜರಾತ್ ಗಲಭೆಯ ಕಳಂಕದ ಜತೆಗೆ, ಮೋದಿ ಅವರಿಗೆ ನಂತರ ಅವರು ಗಮನ ಕೇಂದ್ರೀಕರಿಸಿದ ಕೃಷಿ ಉತ್ಪನ್ನ ಹೆಚ್ಚಳ, ಕೈಗಾರಿಕಾ ಬಂಡವಾಳ ಆಕರ್ಷಣೆಯಂತಹ ಸಾಧನೆಗಳಿವೆ.

ಇತ್ತೀಚೆಗೆ ಅವರು ದೆಹಲಿಗೆ ಹೋದ ನಂತರ, ಕಳೆದ ಹತ್ತು ವರ್ಷಗಳ ಯುಪಿಎ ಸರ್ಕಾರದ ಅವಧಿಯಲ್ಲಿ ಅವನತಿಗೊಳಗಾಗಿದ್ದ ಪ್ರಧಾನಿ ಕಚೇರಿಯ ಗೌರವವನ್ನು ಮರಳಿ ತಂದಿದ್ದಾರೆ. ಡಾ. ಮನಮೋಹನ್ ಸಿಂಗ್ ಬಹಳ ದುರ್ಬಲರಾಗಿದ್ದುದರಿಂದ ಹಲವು ಭಾರತೀಯರು ಮೋದಿ ಅವರ ದರ್ಪ, ದಬ್ಬಾಳಿಕೆಯ ಶೈಲಿಯನ್ನು ಲಕ್ಷಿಸದಿರಲು ಬಯಸುತ್ತಾರೆ.

ನಾವು ಇನ್ನೊಂದು ಅತಿರೇಕಕ್ಕೆ ಹೋಗಿದ್ದೇವೆಯೇ ಎಂದು ಇತಿಹಾಸದ ವಿದ್ಯಾರ್ಥಿಯಾಗಿ ನನಗೆ ಕೆಲವೊಮ್ಮೆ ಚಿಂತೆಯಾಗುತ್ತದೆ. ಇಂದಿರಾ ಮತ್ತು ಮೋದಿ ಅವರಿಬ್ಬರೂ ಮಹಾತ್ಮ ಗಾಂಧಿಯ ನಿಕಟ ರಾಜಕೀಯ ಅನುಯಾಯಿಗಳಾದ ಜವಾಹರಲಾಲ್ ನೆಹರೂ ಮತ್ತು ವಲ್ಲಭಭಾಯಿ ಪಟೇಲ್ ಸಮ್ಮತಿಸದ ವಿಧಾನಗಳನ್ನು ಅನುಸರಿಸಿದ್ದಾರೆ: ಅಧಿಕಾರ ಪಡೆಯಲು ಇತರ ಪಕ್ಷಗಳ ಮುಖಂಡರ ಮೇಲೆ ಕ್ರೂರ ವೈಯಕ್ತಿಕ ದಾಳಿ; ಅಧಿಕಾರದಲ್ಲಿರುವಾಗ ತಮ್ಮ ಪ್ರಾಬಲ್ಯ ಉಳಿಸಿಕೊಳ್ಳಲು ತಮ್ಮದೇ ಸಂಪುಟದ ಸದಸ್ಯರ ದಮನ ಇದರಲ್ಲಿ ಸೇರುತ್ತವೆ.

ಇನ್ನೊಂದು ಮೂರನೇ ವರ್ಗದ ರಾಜಕಾರಣಿಗಳೂ ಇದ್ದಾರೆ- ಅವರು ಅನುಸರಿಸುವ ದಾರಿಗಳು ಅನೈತಿಕ. ರಾಜ್ಯ ಮಟ್ಟದ ರಾಜಕಾರಣ ಠಕ್ಕರು, ಪಾತಕಿಗಳು, ಹಂತಕರಿಂದ ತುಂಬಿದ್ದು, ವೈಯಕ್ತಿಕ ಹಿತಾಸಕ್ತಿಗಳನ್ನು ರಕ್ಷಿಸಿ ಮತ್ತಷ್ಟು ಮುಂದಕ್ಕೆ ಒಯ್ಯುವುದಕ್ಕಾಗಿ ಅವರು ಶಾಸಕರು, ಸಂಸದರು ಮತ್ತು ಸಚಿವರಾಗುತ್ತಾರೆ. ಇದೇ ಕಾರಣಕ್ಕಾಗಿ ಭ್ರಷ್ಟ ಉದ್ಯಮಿಗಳು ರಾಜ್ಯಸಭಾ ಸದಸ್ಯತ್ವವನ್ನು ಖರೀದಿಸುತ್ತಾರೆ.

ಹಾಗಿದ್ದರೂ, ಅಧಿಕಾರ ಪಡೆಯಲು ಮತ್ತು ಅದನ್ನು ಉಳಿಸಿಕೊಳ್ಳಲು ಯಾವ ದಾರಿಯನ್ನಾದರೂ ಅನುಸರಿಸಬಲ್ಲ, ರಾಷ್ಟ್ರವ್ಯಾಪಿ ಪ್ರಭಾವದ ಇಬ್ಬರು ನಾಯಕರನ್ನು ಮಾತ್ರ ಭಾರತ ಕಂಡಿದೆ: ಹಿಂದೆ ಸಂಜಯ ಗಾಂಧಿ ಮತ್ತು ಈಗ ಅಮಿತ್ ಷಾ. ಹಾಗಾಗಿಯೇ ಕೆಲವು ಜನರು ಷಾ ಸಮಕಾಲೀನ ಚಾಣಕ್ಯ ಎಂದು ಸಂಭ್ರಮಿಸುತ್ತಿರುವುದು ನಡುಕ ಹುಟ್ಟಿಸುತ್ತದೆ.

ವಾಸ್ತವದಲ್ಲಿ, ರಾಜಕಾರಣದ ನೈತಿಕತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಕಾರ್ಯಾಚರಿಸುವ ಮತ್ತೊಬ್ಬ ನಾಯಕನನ್ನು ಇಂದಿರಾ ಅವರ ಎರಡನೇ ಮಗನ ಮರಣಾನಂತರ ಪ್ರಮುಖ ರಾಷ್ಟ್ರೀಯ ಪಕ್ಷವೊಂದು ಇದುವರೆಗೆ ಕಂಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT