ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ತನಿಖಾ ಸಂಸ್ಥೆಗಳ ಕಥೆ-ವ್ಯಥೆ

Last Updated 12 ಮಾರ್ಚ್ 2018, 4:55 IST
ಅಕ್ಷರ ಗಾತ್ರ

ಕೇಂದ್ರೀಯ ತನಿಖಾ ತಂಡ (ಸಿಬಿಐ) ಎಂಬುದು ಅಪರಾಧಗಳ ತನಿಖೆ ನಡೆಸಲು ನಮ್ಮಲ್ಲಿ ಇರುವ ಅತ್ಯುನ್ನತ ಸಂಸ್ಥೆ. ಅಮೆರಿಕದ ಫೆಡರಲ್ ಬ್ಯೂರೊ ಆಫ್‌ ಇನ್ವೆಸ್ಟಿಗೇಷನ್‌ (ಎಫ್‌ಬಿಐ) ಮಾದರಿಯಲ್ಲಿ ಸಿಬಿಐ ಎಂಬ ಸಂಸ್ಥೆಯನ್ನು ನಿರ್ದಿಷ್ಟ ಅಪರಾಧಗಳ ತನಿಖೆಗೆ ರಚಿಸಲಾಯಿತು. ಆರಂಭದಲ್ಲಿ ಕಮ್ಯುನಿಸಂ ತಡೆಯಲು ಎಫ್‌ಬಿಐ ಹುಟ್ಟುಹಾಕಲಾಯಿತು, ಭ್ರಷ್ಟಾಚಾರದ ಪ್ರಕರಣಗಳ ತನಿಖೆ ನಡೆಸಲು ಸಿಬಿಐ ರಚಿಸಲಾಯಿತು.

ಹಾಗಾದರೆ, ಸಿಬಿಐ ಎನ್ನುವ ಸಂಸ್ಥೆ ಎಷ್ಟು ಪರಿಣಾಮಕಾರಿ ಆಗಿದೆ? ಸುದ್ದಿಯಲ್ಲಿ ಕಾಣಿಸುವಂತಹ ಅಪರಾಧಗಳು ನಡೆದಾಗಲೆಲ್ಲ 'ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು' ಎಂಬ ಬೇಡಿಕೆಯನ್ನು ನಾವು ಕೇಳುತ್ತಲೇ ಇರುತ್ತೇವೆ. ಸಿಬಿಐ ಎನ್ನುವುದು ಕೇಂದ್ರ ಸರ್ಕಾರದ ಅಡಿ ಕೆಲಸ ಮಾಡುವ ಸಂಸ್ಥೆ, ಆಯಾ ರಾಜ್ಯ ಸರ್ಕಾರಗಳ ಅಡಿ ಕೆಲಸ ಮಾಡುವ ಪೊಲೀಸ್ ಇಲಾಖೆಯಂತೆ ಅಲ್ಲ ಇದು. ಅಮೆರಿಕದ ಎಫ್‌ಬಿಐ ಭಯೋತ್ಪಾದನೆ ಸೇರಿದಂತೆ ವಿವಿಧ ಸ್ವರೂಪದ ಅಪರಾಧಗಳ ಬಗ್ಗೆ ತನಿಖೆ ನಡೆಸುತ್ತದೆ. ಸಿಬಿಐ ಕೂಡ ಹಲವು ಸ್ವರೂಪದ ಅಪರಾಧ ಪ್ರಕರಣಗಳ ಬಗ್ಗೆ ತನಿಖೆ ನಡೆಸಬೇಕು ಎಂಬ ಸ್ಥಿತಿ ಇದೆ. ಅಂದರೆ, ಸಿಬಿಐ ಯಾವ ಬಗೆಯ ಪ್ರಕರಣಗಳ ತನಿಖೆ ನಡೆಸಬೇಕು? ಈ ವಿಚಾರದಲ್ಲಿ ಸ್ಪಷ್ಟತೆ ಇಲ್ಲ, ಯಾವ ರೀತಿಯ ಪ್ರಕರಣದ ಬಗ್ಗೆ ಬೇಕಿದ್ದರೂ ತನಿಖೆ ನಡೆಸಬೇಕಾಗಬಹುದು.

ಕೊಲೆ ಪ್ರಕರಣವೊಂದು ಟಿ.ವಿ. ವಾಹಿನಿಗಳಲ್ಲಿ ದೊಡ್ಡದಾಗಿ ಪ್ರಸಾರವಾಗಿದೆ ಎಂಬ ಕಾರಣಕ್ಕೆ ಸಿಬಿಐ ಕೊಲೆ ಪ್ರಕರಣದ ತನಿಖೆ ನಡೆಸಬೇಕಾಗಬಹುದು (ಅರುಷಿ ಪ್ರಕರಣ ಅಥವಾ ಶೀನಾ ಕೊಲೆ ಪ್ರಕರಣ), ಹಗರಣ ಎಂಬ ಹಣೆಪಟ್ಟಿ ಹೊತ್ತ ಬೇರೆ ಬೇರೆ ವಿದ್ಯಮಾನಗಳ ಬಗ್ಗೆ ತನಿಖೆ ನಡೆಸಬೇಕಾಗಬಹುದು (2-ಜಿ ಹಗರಣ ಅಥವಾ ನೀರವ್ ಮೋದಿ ಹಗರಣ) ಅಥವಾ ಸರ್ಕಾರದ ಮಟ್ಟದಲ್ಲಿ ನಡೆಯುವ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಕೂಡ ನಡೆಸಬೇಕಾಗಬಹುದು.

ಸಿಬಿಐನ ಜಾಲವು ಹತ್ತು ಪ್ರಾದೇಶಿಕ ವಲಯಗಳನ್ನು ಒಳಗೊಂಡಿದೆ: ಮುಂಬೈ (ಮಹಾರಾಷ್ಟ್ರ, ಗುಜರಾತ್ ಮತ್ತು ಗೋವಾ ವ್ಯಾಪ್ತಿ), ಹೈದರಾಬಾದ್ (ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ), ಚೆನ್ನೈ (ತಮಿಳುನಾಡು, ಕೇರಳ, ಪುದುಚೇರಿ), ಗುವಾಹಟಿ (ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರಾ), ಕೋಲ್ಕತ್ತ (ಪಶ್ಚಿಮ ಬಂಗಾಳ, ಒಡಿಶಾ, ಪೋರ್ಟ್‌ ಬ್ಲೇರ್), ಪಟ್ನಾ (ಬಿಹಾರ ಮತ್ತು ಜಾರ್ಖಂಡ್), ಲಖನೌ (ಉತ್ತರ ಪ್ರದೇಶ ಮತ್ತು ಉತ್ತರಾಖಂಡ), ಚಂಡೀಗಡ (ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ), ಭೋಪಾಲ್ (ಮಧ್ಯಪ್ರದೇಶ ಮತ್ತು ಛತ್ತೀಸಗಡ), ದೆಹಲಿ (ರಾಜಸ್ಥಾನ ಮತ್ತು ದೆಹಲಿ). ಇವುಗಳಲ್ಲದೆ, ಭ್ರಷ್ಟಾಚಾರ ವಿರೋಧಿ ಕೇಂದ್ರ ವಲಯ, ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದಂತೆ ಎರಡು ವಲಯಗಳು, ಬ್ಯಾಂಕ್ ಭದ್ರತೆ ಮತ್ತು ವಂಚನೆ ವಲಯ, ವಿಶೇಷ ಅಪರಾಧಗಳ ವಲಯ, ವಿಶೇಷ ಕಾರ್ಯಪಡೆ ವಲಯ, ಬಹುಶಿಸ್ತೀಯ ಮೇಲ್ವಿಚಾರಣೆ ಸಂಸ್ಥೆ (ನಂಬಿದರೆ ನಂಬಿ, ಬಿಟ್ಟರೆ ಬಿಡಿ: ಇದು ಕೆಲವು ತಿಂಗಳುಗಳ ಹಿಂದಿನವರೆಗೂ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿತ್ತು), ನೀತಿ ವಿಭಾಗ, 'ತಾಂತ್ರಿಕ, ವಿಧಿವಿಜ್ಞಾನ ಮತ್ತು ಸಮನ್ವಯ ವಿಭಾಗ', ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯ (ಈ ಪ್ರಯೋಗಾಲಯದ ಅಡಿಯಲ್ಲಿ ಹನ್ನೊಂದು ವಿಭಾಗಗಳು ಇವೆ: ಬ್ಯಾಲಿಸ್ಟಿಕ್ಸ್‌, ಜೀವವಿಜ್ಞಾನ, ರಸಾಯನ ವಿಜ್ಞಾನ, ಕಂಪ್ಯೂಟರ್ ವಿಧಿವಿಜ್ಞಾನ, ಡಿಎನ್‌ಎ, ದಾಖಲೆಗಳು, ಬೆರಳಚ್ಚು, ಮನಃಶಾಸ್ತ್ರೀಯ ವಿಧಿವಿಜ್ಞಾನ, ಭಾವಚಿತ್ರ ಮತ್ತು ವೈಜ್ಞಾನಿಕ ನೆರವು, ಭೌತವಿಜ್ಞಾನ ಹಾಗೂ ರಕ್ತದ ಅಧ್ಯಯನ.) ಪ್ರಕರಣಗಳ ವಿಚಾರಣೆ ವೇಳೆ ವಿಧಿವಿಜ್ಞಾನಕ್ಕೆ ಸಂಬಂಧಿಸಿದಂತೆ ಸರ್ಕಾರ ಹಾಜರುಪಡಿಸುವ ಸಾಕ್ಷ್ಯಗಳು ತೀರಾ ದುರ್ಬಲ ಆಗಿರುತ್ತವೆ ಎಂಬುದು ನ್ಯಾಯಾಂಗದ ಕಲಾಪಗಳ ವರದಿಗಾರ ಆಗಿದ್ದ ನನಗೆ ಗೊತ್ತಿದೆ. ಹಾಗಾಗಿ, ಸಿಬಿಐ ಬಳಿ ಇಷ್ಟೊಂದೆಲ್ಲ ಅಂಗಗಳು ಇವೆ ಎಂಬುದನ್ನು ತಿಳಿದು ಆಶ್ಚರ್ಯವಾಯಿತು. ಒಟ್ಟಾರೆಯಾಗಿ ಸಿಬಿಐನಲ್ಲಿ ಆರು ಸಾವಿರ ಜನ ಕೆಲಸ ಮಾಡುತ್ತಾರೆ. ಆದರೆ, ಇಂಥದ್ದೊಂದು ವ್ಯವಸ್ಥೆಯಿಂದ ದೇಶಕ್ಕೆ ಸಿಗುತ್ತಿರುವುದು ಏನು? ಉಪಯೋಗವಾಗುವಂಥದ್ದು ತೀರಾ ಅಲ್ಪ.

ಸಿಬಿಐ ತನಿಖೆ ನಡೆಸಿದ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಆದ ಪ್ರಮಾಣ 2005ರಲ್ಲಿ ಶೇಕಡ 65.6ರಷ್ಟು, 2006ರಲ್ಲಿ ಶೇಕಡ 72.9ರಷ್ಟು, 2007ರಲ್ಲಿ ಶೇಕಡ 67.7ರಷ್ಟು ಮತ್ತು 2009ರಲ್ಲಿ ಶೇಕಡ 64.4ರಷ್ಟು ಇತ್ತು. ಈ ಸರ್ಕಾರದ ಅವಧಿಯಲ್ಲಿ ಅಂದರೆ 2014, 2015 ಮತ್ತು 2016ರಲ್ಲಿ ಸಿಬಿಐ ತನಿಖೆ ನಡೆಸಿದ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾದ ಪ್ರಮಾಣ ಕ್ರಮವಾಗಿ ಶೇಕಡ 69.02, ಶೇಕಡ 65.1 ಮತ್ತು ಶೇಕಡ 66.8ರಷ್ಟು ಎಂದು 2017ರಲ್ಲಿ ಸಂಸತ್ತಿಗೆ ತಿಳಿಸಲಾಯಿತು. ಆದರೆ, ಈ ಅಂಕಿ-ಅಂಶಗಳು ಪೂರ್ಣ ಚಿತ್ರಣ ನೀಡುವುದಿಲ್ಲ, ಇವು ತಪ್ಪುದಾರಿಗೆ ಎಳೆಯುತ್ತವೆ.

'Curbing corruption in Asian countries: an impossible dream?' (ಏಷ್ಯನ್ ರಾಷ್ಟ್ರಗಳಲ್ಲಿ ಭ್ರಷ್ಟಾಚಾರ ನಿಗ್ರಹ: ಅಸಾಧ್ಯವಾದ ಕನಸೇ?) ಎಂಬ ಪುಸ್ತಕದಲ್ಲಿ ಜಾನ್ ಎಸ್‌. ಟಿ. ಕ್ವಾ ಅವರು ಭಾರತೀಯ ಲೇಖಕ ಎಸ್‌. ಎಸ್‌. ಗಿಲ್‌ ಅವರು ಸಿಬಿಐ ನೀಡುವ ಅಂಕಿ-ಅಂಶಗಳ ಬಗ್ಗೆ ಆಡಿದ್ದಾರೆ ಎನ್ನಲಾದ ಮಾತೊಂದನ್ನು ಉಲ್ಲೇಖಿಸಿದ್ದಾರೆ. 'ಹೇಯ ಅಪರಾಧಗಳ 30 ಪ್ರಕರಣಗಳು, ಸಣ್ಣಪುಟ್ಟ ಕಳ್ಳತನದಂತಹ 70 ಪ್ರಕರಣಗಳು ಇದ್ದಾಗ, ಸಣ್ಣಪುಟ್ಟ ಕಳ್ಳತನಗಳ 60 ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಆಗುವಂತೆ ಮಾಡಿ, ಆರೋಪಿಗಳಿಗೆ ಶಿಕ್ಷೆ ಆಗುವ ಪ್ರಮಾಣ ಶೇಕಡ 60ರಷ್ಟು ಇದೆ ಎಂದು ಹೇಳಿಕೊಳ್ಳುವುದು ವಂಚನೆ ಆಗುತ್ತದೆ' ಎಂಬುದು ಆ ಮಾತು.
ಅವರ ಮಾತುಗಳ ಅರ್ಥ ಏನು? ಕೆಲವು ದಿನಗಳ ಹಿಂದೆ, ಅಂದರೆ ಮಾರ್ಚ್‌ 8ರಂದು, ಪ್ರಕಟವಾದ ಒಂದು ವರದಿಯ ಶೀರ್ಷಿಕೆ ಹೀಗಿತ್ತು: 'ಲಂಚದ ಆರೋಪ: ಸಿಬಿಐನಿಂದ ಎಐಐಎಂಎಸ್‌ (ಏಮ್ಸ್‌) ಸಿಬ್ಬಂದಿ ಬಂಧನ'. ಈ ವರದಿಯಲ್ಲಿ, 'ಬಾಕಿ ಉಳಿದಿದ್ದ ಬಿಲ್‌ಗಳಿಗೆ ಸಂಬಂಧಿಸಿದ ಹಣ ಪಾವತಿ ಮಾಡಲು ಸಿವಿಲ್‌ ಗುತ್ತಿಗೆದಾರರೊಬ್ಬರಿಂದ ರೂ 19,500 ಲಂಚ ಕೇಳಿ, ಆ ಮೊತ್ತವನ್ನು ಪಡೆಯುತ್ತಿದ್ದ ವೇಳೆ ಕೆ.ಡಿ. ಬಿಸ್ವಲ್ ಎನ್ನುವವರನ್ನು ಬಂಧಿಸಲಾಗಿದೆ' ಎಂದು ಹೇಳಲಾಗಿದೆ.

ಬಿಸ್ವಲ್ ಅವರು ಎಐಐಎಂಎಸ್‌ನಲ್ಲಿ ಕೆಲಸ ಮಾಡುವ ಸಹಾಯಕ ಎಂಜಿನಿಯರ್. ಇವರ ಮನೆ ಮತ್ತು ಕಚೇರಿಯಲ್ಲಿ ಸಿಬಿಐ ಅಧಿಕಾರಿಗಳು ಶೋಧ ನಡೆಸಿದ್ದಾರೆ ಎಂದು ಕೂಡ ವರದಿಯಲ್ಲಿ ಹೇಳಲಾಗಿದೆ. 'ಸಿಬಿಐ' ಎಂಬ ಪದ ಕೇಳಿದಾಗ ನಮ್ಮ ಮನಸ್ಸಿಗೆ ಬರುವುದು ಇಂಥ ಕೆಲಸಗಳೇ? ಬಹುಶಃ ಅಲ್ಲ. ಆದರೆ, ಸಿಬಿಐ ವಿಚಾರಣೆ ನಡೆಸುವ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಆಗುವುದು ಹೆಚ್ಚಾಗಿ ಇಂತಹ ಪ್ರಕರಣಗಳಲ್ಲಿ. ಪ್ರಮುಖ ಅಪರಾಧಗಳ ಬಗ್ಗೆ ಸಿಬಿಐ ನಡೆಸಿದ ತನಿಖೆಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಆಗಿರುವ ಪ್ರಮಾಣ ಶೇಕಡ 3.96ರಷ್ಟು ಮಾತ್ರ ಎಂದು ವಿಚಕ್ಷಣಾ ಆಯುಕ್ತ ಆರ್. ಶ್ರೀಕುಮಾರ್ ಹೇಳುತ್ತಾರೆ.

ಸಿಬಿಐ ಒಂದು ಸಂಸ್ಥೆಯಾಗಿ ಮಾಡಿದ ತಪ್ಪುಗಳದು ಇನ್ನೊಂದು ಸಮಸ್ಯೆ. 'ಸಾಮರ್ಥ್ಯ ಮತ್ತು ಪ್ರಾಮಾಣಿಕತೆಯಲ್ಲಿ ಜನಸಾಮಾನ್ಯರು ನಿಮ್ಮಿಂದ ಅತ್ಯುನ್ನತವಾದುದನ್ನೇ ನಿರೀಕ್ಷಿಸುತ್ತಾರೆ. ಜನರು ಹೊಂದಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಪರಿಶ್ರಮ, ನಿಷ್ಪಕ್ಷಪಾತ ಧೋರಣೆ, ಪ್ರಾಮಾಣಿಕತೆ ನಮ್ಮ ಧ್ಯೇಯವಾಕ್ಯ. ಎಲ್ಲಾ ಸಂದರ್ಭಗಳಲ್ಲೂ, ಎಲ್ಲಾ ಕಡೆಗಳಲ್ಲೂ, ಕರ್ತವ್ಯಕ್ಕೆ ಮೊದಲ ನಿಷ್ಠೆ ಇರಬೇಕು' ಎಂದು ಸಿಬಿಐನ ಸಂಸ್ಥಾಪಕ ನಿರ್ದೇಶಕ ಡಿ.ಪಿ. ಕೊಹ್ಲಿ 55 ವರ್ಷಗಳ ಹಿಂದೆ ಹೇಳಿದ್ದರು.
ಈ ಉನ್ನತ ಮೌಲ್ಯಗಳನ್ನು ಸಿಬಿಐ ಕಾಪಾಡಿಕೊಂಡಿಲ್ಲ. ವಾಸ್ತವವಾಗಿ ಸಿಬಿಐ ಎಂಬುದು ಸಮಸ್ಯೆಯ ಒಂದು ಭಾಗವೇ ವಿನಾ ಅದು ಸಮಸ್ಯೆಗಳಿಗೆ ಒಂದು ಪರಿಹಾರದ ರೂಪದಲ್ಲಿ ಇಲ್ಲ. 'ಸ್ಕ್ಯಾಮ್‌: ಫ್ರಂ ಹರ್ಷದ್ ಮೆಹ್ತಾ ಟು ಗ್ಲೋಬಲ್ ಟ್ರಸ್ಟ್‌ ಬ್ಯಾಂಕ್' ಪುಸ್ತಕದಲ್ಲಿ ದೇಬಶಿಶ್ ಬಸು ಮತ್ತು ಸುಚೇತಾ ದಲಾಲ್ ಅವರು, 'ತನಿಖೆಯನ್ನು ಚುರುಕಿನಿಂದ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸುವ ಬದಲು, ಸಿಬಿಐ ಸಂಸ್ಥೆಯ ಜಂಟಿ ನಿರ್ದೇಶಕ ಕೆ. ಮಾಧವನ್ ಅವರು ತಮಗೆ ಬಡ್ತಿ ಸಿಗಲಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ... ಮಾದಕ ವಸ್ತುಗಳ ವಹಿವಾಟಿಗೆ ಹರ್ಷದ್ ಮೆಹ್ತಾ ಹಣಕಾಸಿನ ನೆರವು ನೀಡುತ್ತಿದ್ದ ಎಂಬಂಥ ಸುದ್ದಿಗಳನ್ನು ಹರಡುತ್ತ ಕುಳಿತಿತ್ತು.

ಈ ಸಂಸ್ಥೆಯು ಮಹತ್ವದ ಮಾಹಿತಿಗಳನ್ನು ಸಂಸತ್ತಿನ ಜಂಟಿ ಸಮಿತಿಯಿಂದ ಮುಚ್ಚಿಟ್ಟಿತು. ’ಹಗರಣ ನಡೆಸಿದವರು ವಿದೇಶಗಳಲ್ಲಿ ಹೊಂದಿರುವ ಖಾತೆಗಳನ್ನು ತನಿಖೆಗೆ ಒಳಪಡಿಸಬೇಕು’ ಎಂದು ತಾವು ಹೇಳಿದ್ದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ ಎಂದು ಜಂಟಿ ಸಮಿತಿ ಎದುರು ಹೇಳುವ ಮೂಲಕ ಮಾಧವನ್ ಅವರು ತಮ್ಮ ಸಂಸ್ಥೆ ಹಾಗೂ ಅದರ ನಿರ್ದೇಶಕರನ್ನು ಮುಜುಗರಕ್ಕೆ ಈಡುಮಾಡಿದರು. ಮುಖ ಉಳಿಸಿಕೊಳ್ಳುವ ಕೆಲಸವಾಗಿ ಸಿಬಿಐ 1993ರ ಫೆಬ್ರುವರಿ 14ರ ರಾತ್ರಿ ಪಿಟಿಐ, ಯುಎನ್‌ಐ, ಸರ್ಕಾರಿ ಸ್ವಾಮ್ಯದ ದೂರದರ್ಶನದಂತಹ ಸುದ್ದಿ ಸಂಸ್ಥೆಗಳ ಮೂಲಕ ಅವಸರದಲ್ಲಿ ಒಂದು ಸುದ್ದಿ ಹರಿಬಿಟ್ಟಿತು. ‘ಹರ್ಷದ್‌ನ ಸ್ವಿಸ್‌ ಬ್ಯಾಂಕ್‌ ಖಾತೆಗಳನ್ನು ಸ್ಥಗಿತ ಮಾಡಲಾಗಿದೆ’ ಎಂಬುದು ಆ ಸುದ್ದಿ. ಆದರೆ ಈ ಬಗ್ಗೆ ಸ್ವಿಟ್ಜರ್‌ಲೆಂಡ್‌ ಅಧಿಕಾರಿಗಳ ಬಳಿ ಪರಿಶೀಲನೆ ನಡೆಸಿದ ’ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆ, ‘ವರದಿ ಸುಳ್ಳು’ ಎಂಬುದನ್ನು ಕಂಡುಕೊಂಡಿತು. ಇದನ್ನು ಮುಚ್ಚಿಹಾಕಲು ಸಿಬಿಐ ಇನ್ನಷ್ಟು ಅವಸರದಲ್ಲಿ ಒಂದು ಯತ್ನ ನಡೆಸಿತು, ಕೆಲವು ಖಾತೆಗಳನ್ನು ಮೊದಲು ಸ್ಥಗಿತಗೊಳಿಸಿ ನಂತರ ಅವುಗಳಲ್ಲಿ ವಹಿವಾಟು ನಡೆಸಲು ಅವಕಾಶ ನೀಡಲಾಗಿದೆ ಎಂದು ಹೇಳಿತು. ಈ ಮಾತು ಕೂಡ ಸುಳ್ಳು ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್‌’ ಹೇಳಿತು. ತನ್ನ ಪ್ರಮುಖ ಅಸ್ತ್ರವನ್ನು ಉಳಿಸಿಕೊಳ್ಳಲು ಸಿಬಿಐ ಯುನೈಟೆಡ್ ಕಮರ್ಷಿಯಲ್ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಕೆ. ಮಾರ್ಗಬಂತು ಅವರನ್ನು ಬಂಧಿಸಿ, ವಾರಗಟ್ಟಲೆ ತನ್ನ ವಶದಲ್ಲಿ ಇರಿಸಿಕೊಂಡಿತು.'

ಈ ವಿಚಾರದಲ್ಲಿ ಆಂತರಿಕವಾಗಿ ಯಾರಿಗಾದರೂ ಶಿಕ್ಷೆ ಆಯಿತೇ? ಇಲ್ಲ.
ಈ ಪ್ರವೃತ್ತಿ ಇವತ್ತಿನವರೆಗೂ ಮುಂದುವರಿದಿದೆ. ಕಾನೂನು ಸಂಸ್ಥೆಗಳು ಭಾರತದಲ್ಲಿ ಕೆಲಸ ಮಾಡುವಾಗ ಗದ್ದಲವೇ ಹೆಚ್ಚು. ಕೆಲವರನ್ನು ಬಂಧಿಸಿ, ರೋಚಕ ಸುದ್ದಿಗಳನ್ನು ಹರಿಬಿಡಲಾಗುತ್ತದೆ. ಆರೋಪಿಗಳ ವಿರುದ್ಧ ಹೆಚ್ಚಿನ ಸಾಕ್ಷ್ಯ ಕಲೆಹಾಕಿರುವ ಕಾರಣ ಇನ್ನಷ್ಟು ದಿನಗಳ ಕಾಲ ಅವರನ್ನು ವಶದಲ್ಲಿ ಇರಿಸಿಕೊಳ್ಳಬೇಕು ಎಂದು ನ್ಯಾಯಾಲಯಗಳಲ್ಲಿ ಹೇಳಲಾಗುತ್ತದೆ. ದೊಡ್ಡ ಹಗರಣಗಳು ತೆರೆದುಕೊಳ್ಳುವುದು ಸಾಮಾನ್ಯವಾಗಿ ಹೀಗೆ.

ಆದರೆ, ತನಿಖೆಯಲ್ಲಿ ನಿರ್ಲಕ್ಷ್ಯ ತೋರಿ, ಉತ್ಪ್ರೇಕ್ಷಿತ ಹೇಳಿಕೆಗಳನ್ನು ನೀಡುವ ಪರಿಣಾಮವಾಗಿ ಪ್ರಕರಣ ಬೇರೆಯದೇ ಹಾದಿ ಹಿಡಿಯುತ್ತದೆ. ಇದನ್ನು ನಾವು 2ಜಿ ಹಗರಣದಲ್ಲಿ ಕಂಡಿದ್ದೇವೆ. ಪ್ರಕರಣವೊಂದನ್ನು ಸಿಬಿಐ ಭೇದಿಸಿದೆ ಎಂಬ ಸುದ್ದಿ ಟಿ.ವಿ. ವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ ಮುಂದಿನ ಬಾರಿ ಬಂದಾಗ ಓದುಗರು ಇದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು.
(ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT