ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಸೇನೆಗೆ ನಾವೇ ಹೆದರಬೇಕೇ!?

Last Updated 1 ಜೂನ್ 2017, 19:30 IST
ಅಕ್ಷರ ಗಾತ್ರ

ಕಾಶ್ಮೀರದ ಕುರಿತಾದ ಕಳೆದ ತಿಂಗಳ ಚರ್ಚೆಯಲ್ಲಿ ಹೊಸದೊಂದು ಅಂಶ ಸ್ಪಷ್ಟತೆಯನ್ನು ಪಡೆದುಕೊಳ್ಳುತ್ತಿದೆ. ಅದೇನೆಂದರೆ ಭಾರತೀಯ ಸೈನ್ಯ, ಕೇಂದ್ರ ಸರ್ಕಾರ ಹಾಗೂ ದೇಶದ ಜನರ ನಡುವಣ ಸಂಬಂಧದಲ್ಲಿ, ಪರಸ್ಪರರಲ್ಲಿ ಇರುವ ನಿರೀಕ್ಷೆಗಳಲ್ಲಿ ಕೆಲವು ಮೂಲಭೂತ ಬದಲಾವಣೆಗಳು ಆಗುತ್ತಿವೆ ಎನ್ನುವುದು.

ನನ್ನ ಅನುಮಾನಕ್ಕೆ ಪೂರಕವಾಗಿ ಮೂರು ಹೇಳಿಕೆಗಳನ್ನು ಗಮನಿಸಿ. ಈ ಹೇಳಿಕೆಗಳು ಏಪ್ರಿಲ್ 9ರಂದು ಮೇಜರ್ ಗೊಗೊಯ್ ತನ್ನ ಜೀಪಿನ ಮುಂಭಾಗಕ್ಕೆ ಫಾರೂಕ್ ದರ್ ಎಂಬ ಕಾಶ್ಮೀರಿಯನ್ನು ಕಟ್ಟಿ ಒಂಬತ್ತು ಹಳ್ಳಿಗಳ ಮೂಲಕ ಸುಮಾರು ಐದು ಗಂಟೆಗಳ ಕಾಲ ಮೆರವಣಿಗೆ ಮಾಡಿದ ಘಟನೆಗೆ ಪ್ರತಿಕ್ರಿಯೆಯಾಗಿ ಬಂದವುಗಳು. ಅಂದು ಶ್ರೀನಗರ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಮತಗಟ್ಟೆಯ ಹೊರಗೆ ಕಲ್ಲುತೂರಾಟ ನಡೆಸುತ್ತಿದ್ದ ಕಾಶ್ಮೀರಿ ಪ್ರತಿಭಟನೆಕಾರರಿಂದ ಮತಗಟ್ಟೆಯಲ್ಲಿದ್ದ ಸಿಬ್ಬಂದಿಯನ್ನು ಮೇಜರ್ ಗೊಗೊಯ್ ನೇತೃತ್ವದ ಸೈನಿಕರ ತುಕಡಿ ರಕ್ಷಿಸಬೇಕಿತ್ತು. ಆ ಪರಿಸ್ಥಿತಿಯಿಂದ ಹೊರಬರಲು ದರ್ ಅವರನ್ನು ಮಾನವ ಗುರಾಣಿಯಾಗಿಸಿಕೊಳ್ಳುವ ತಂತ್ರವನ್ನು ಮೇಜರ್ ಗೊಗೊಯ್ ಬಳಸಿದರು. 

ಆಗ ಪಂಜಾಬ್‌ನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಮೇಜರ್ ಗೊಗೊಯ್‌ ಅವರ ಕ್ರಮಗಳನ್ನು ಸಮರ್ಥಿಸಿಕೊಂಡು ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯಲ್ಲಿ ಮೇ 20ರಂದು ಅಗ್ರಲೇಖನವೊಂದನ್ನು ಬರೆದರು. 1965ರ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ಅಮರೀಂದರ್ ಕಾಂಗ್ರೆಸ್ ಪಕ್ಷದವರು ಎನ್ನುವುದು ಇಲ್ಲಿ ಉಲ್ಲೇಖನೀಯವಾದ ವಿಚಾರ. ಮೇಜರ್ ಗೊಗೊಯ್ ಪರಿಸ್ಥಿತಿಯಲ್ಲಿ ತಾನು ಇದ್ದಿದ್ದರೆ ಅದೇ ಕೆಲಸವನ್ನು ಮಾಡುತ್ತಿದ್ದೆ ಎಂದು ಹೇಳಿದ ಅಮರೀಂದರ್ ಗೊಗೊಯ್‌ಗೆ ಭಾರತೀಯ ಸೈನ್ಯವು ಪ್ರಶಸ್ತಿ ನೀಡಬೇಕೆಂದು ಪ್ರತಿಪಾದಿಸಿದರು.  ರಕ್ಷಣಾ  ಸಚಿವ ಅರುಣ್ ಜೇಟ್ಲಿ ಸಹ ಮೇ 24ರ ಪತ್ರಿಕಾಗೋಷ್ಠಿಯಲ್ಲಿ  ಮೇಜರ್ ಗೊಗೊಯ್‌ ಅವರನ್ನು ಸಾರ್ವಜನಿಕವಾಗಿ ಸಮರ್ಥಿಸಿಕೊಂಡರು. ಮಾತ್ರವಲ್ಲ,  ‘ಯುದ್ಧಭೂಮಿಯಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು ಎನ್ನುವುದನ್ನು ಸ್ಥಳದಲ್ಲಿರುವ ಸೈನ್ಯದ ಅಧಿಕಾರಿಗಳೇ ನಿರ್ಧರಿಸಬೇಕು. ಆಪತ್ತಿನ ಸಂದರ್ಭದಲ್ಲಿರುವಾಗ ರಾಜಕಾರಣಿಗಳನ್ನು, ಪಾರ್ಲಿಮೆಂಟಿನ ಸದಸ್ಯರನ್ನು ಸಂಪರ್ಕಿಸುತ್ತ ಕೂರಬೇಕಿಲ್ಲ’ ಎಂದು ಜೇಟ್ಲಿ ಹೇಳಿದರು. ಹೀಗೆ  ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಭಾರತೀಯ ಸೈನ್ಯಕ್ಕೆ ಪರಿಸ್ಥಿತಿಗನುಗುಣವಾಗಿ ಕ್ರಮ ಕೈಗೊಳ್ಳುವ ಸ್ವಾಯತ್ತತೆ ನೀಡುವ ಬಗ್ಗೆ ಏಕಮತವನ್ನು ವ್ಯಕ್ತಪಡಿಸಿದರು.
ಸಿಂಗ್ ಮತ್ತು ಜೇಟ್ಲಿಯವರಿಗಿಂತ ಒಂದು ಹೆಜ್ಜೆ ಮುಂದೆ ಹೋದವರು ಭಾರತೀಯ ಸೈನ್ಯದ ಮುಖ್ಯಸ್ಥ ಜನರಲ್ ಬಿಪಿನ್ ರಾವತ್. ಮೇಜರ್ ಗೊಗೊಯ್‌ ಕ್ರಮಗಳನ್ನು ಜನರಲ್ ರಾವತ್ ಸಮರ್ಥಿಸಿಕೊಂಡರು ಮಾತ್ರವಲ್ಲ, ಅಮರೀಂದರ್ ಸಿಂಗ್ ಅವರ ಸಲಹೆಯನ್ನು ಅನುಸರಿಸಿ ಗೊಗೊಯ್‌ ಅವರಿಗೆ ಶ್ಲಾಘನಾ ಪದಕವೊಂದನ್ನು ಸಹ ನೀಡಿದರು. ಜೊತೆಗೆ ಪಿ.ಟಿ.ಐ.ಗೆ ನೀಡಿದ ಸಂದರ್ಶನದಲ್ಲಿ ವಿಶಾಲನೆಲೆಯ ಹಲವಾರು ಅಭಿಪ್ರಾಯಗಳನ್ನು ಹಂಚಿಕೊಂಡರು. ಬಹುಶಃ ಇಂತಹ ಹೇಳಿಕೆಗಳನ್ನು ಈ ಹಿಂದೆ ಯಾವ ಸೇನಾ ಮುಖ್ಯಸ್ಥರೂ ನೀಡಿರಲಿಲ್ಲ ಎಂದರೆ ತಪ್ಪಾಗಲಾರದು. ಕಾಶ್ಮೀರವು ಒಂದು ಯುದ್ಧವಲಯ, ಆದರೆ ಇದೊಂದು ಅಸಾಂಪ್ರದಾಯಿಕ ಯುದ್ಧ ನಡೆಯುತ್ತಿರುವ ಕ್ಷೇತ್ರವೆಂದು ಜನರಲ್ ರಾವತ್ ಬಣ್ಣಿಸಿದರು. ಎದುರಾಳಿ ಮುಖಾಮುಖಿ ಬಂದು ಯುದ್ಧ ಮಾಡಿದರೆ, ಆಗ ಯುದ್ಧದ ನಿಯಮಗಳನ್ನು ಪಾಲಿಸಬಹುದು. ಆದರೆ ಕಾಶ್ಮೀರದಲ್ಲಿ ಇಂದು ನಡೆಯುತ್ತಿರುವುದು ಛಾಯಾ (ಪ್ರಾಕ್ಸಿ) ಸಮರ ಎಂದು ಪಾಕಿಸ್ತಾನವನ್ನು ನೇರವಾಗಿ ದೂರಿದರು. ‘ಈ ಕೊಳಕು (ಡರ್ಟಿ) ಯುದ್ಧದಲ್ಲಿ ಯಾವುದೇ ನಿಯಮಗಳನ್ನು ಅನುಸರಿಸಲಾಗುತ್ತಿಲ್ಲ, ಹಾಗಾಗಿ ಇಲ್ಲಿ ಕದನಕ್ಷೇತ್ರದಲ್ಲಿಯೇ ಸೈನ್ಯದ ಅಧಿಕಾರಿಗಳು ಹೊಸ ವಿಧಾನಗಳನ್ನು ಆವಿಷ್ಕರಿಸಬೇಕಿದೆ’ ಎಂದರು ಜನರಲ್ ರಾವತ್.

ಕಾಶ್ಮೀರದಲ್ಲಿ ಜನರು ಕಲ್ಲುಗಳನ್ನು, ಪೆಟ್ರೋಲ್ ಬಾಂಬ್‌ಗಳನ್ನು ಭಾರತೀಯ ರಕ್ಷಣಾಪಡೆಗಳ ಮೇಲೆ ಎಸೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಶ್ಮೀರಿ ಪ್ರತಿಭಟನಕಾರನೊಬ್ಬನನ್ನು ಜೀಪಿನ ಮೇಲೆ ಕಟ್ಟಿ, ಭಾರತೀಯ ಸೈನಿಕರು ತಮ್ಮ ರಕ್ಷಣೆಗೆ ಗುರಾಣಿಯಂತೆ ಬಳಸಿಕೊಂಡದ್ದು ಅಂದಿನ ಸಂದರ್ಭದಲ್ಲಿ ಅಗತ್ಯವಾಗಿದ್ದ ಸಾಮಾನ್ಯ ತಿಳಿವಳಿಕೆಯ (ಕಾಮನ್ ಸೆನ್ಸ್) ಕ್ರಮ. ಕುತೂಹಲದ ವಿಷಯವೆಂದರೆ ಮೇಜರ್ ಗೊಗೊಯ್ ಸಮರ್ಥಕರೆಲ್ಲರೂ ಅವರ ಕ್ರಮಗಳನ್ನು ಸಾಮಾನ್ಯ ತಿಳಿವಳಿಕೆಯ ನೆಲೆಯ ಮೇಲೆಯೇ ಸಮರ್ಥಿಸಿಕೊಳ್ಳುತ್ತಿರುವುದು.

ಜನರಲ್ ರಾವತ್ ಹೇಳಿದ ಮತ್ತೊಂದು ಮಾತು ಆತಂಕ ಮೂಡಿಸುವಂತಹದ್ದು. ‘ಶತ್ರುಗಳು ನಿಮ್ಮ ಬಗ್ಗೆ ಭಯಭೀತರಾಗಿರಬೇಕು ಮತ್ತು ಅದೇ ಸಮಯದಲ್ಲಿ ನಿಮ್ಮ ಜನರೂ ನಿಮ್ಮ ಬಗ್ಗೆ ಭಯವನ್ನು ಹೊಂದಿರಬೇಕು. ನಾವು ಸ್ನೇಹಭಾವದ ಸೈನ್ಯದವರು. ಆದರೆ ನಮ್ಮನ್ನು ಕಾನೂನು ಸುವ್ಯವಸ್ಥೆಯನ್ನು ಸರಿಪಡಿಸಲು ಕರೆದಾಗ, (ನಮ್ಮ) ಜನರು ಸಹ ನಮ್ಮ ಬಗ್ಗೆ ಭಯವನ್ನು ಹೊಂದಿರಬೇಕು’.

ಜನರಲ್ ರಾವತ್ ಅವರ ಈ ಮಾತುಗಳು ಸಾಮಾನ್ಯ ತಿಳಿವಳಿಕೆಯ ಮಾತುಗಳಾಗಿ ಸರಿಯೆನಿಸಬಹುದು, ಸಮರ್ಥನೀಯವೆನಿಸಬಹುದು. ಆದರೆ ಯಾವುದೇ ಸೈನ್ಯದ ಮುಖ್ಯಸ್ಥರೂ ತಮ್ಮ ದೇಶದ ಜನರೂ ಸೈನ್ಯದ ಬಗ್ಗೆ ಭಯವನ್ನು ಹೊಂದಿರಬೇಕು ಎಂದಾಗ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರುವ ಯಾವ ನಾಗರಿಕನೂ ಒಂದು ಕ್ಷಣ ಎಚ್ಚೆತ್ತು ಚಿಂತಿಸದೆ ಇರಬಾರದು. ಭಾರತೀಯ ಸೈನ್ಯವು ಇದುವರೆಗೂ ತಮ್ಮ ನಾಗರಿಕ ಸರ್ಕಾರದ ಅಧಿಕಾರದಡಿಯಲ್ಲಿಯೇ ಕೆಲಸ ಮಾಡುತ್ತ ಬಂದಿದೆ. ಎಂದೂ ತಾನೇ ಅಧಿಕಾರದ ಗದ್ದುಗೆಯನ್ನು ಹಿಡಿಯುವ ಬಗ್ಗೆ ಸೈನ್ಯದ ಅಧಿಕಾರಿಗಳು ಸಹ ಯೋಚಿಸಿಲ್ಲ. ಇಂದು ಸಹ ಜನರಲ್ ರಾವತ್ ಅಂತಹ ಮಾತುಗಳನ್ನು ಆಡಿಲ್ಲ ಎನ್ನುವುದು ನಿಜವಾದರೂ, ‘ನಮ್ಮ ಸೈನ್ಯದ ಬಗ್ಗೆ ನಮಗೆ ಭಯವಿರಬೇಕು’ ಎಂದಂತೂ ಹೇಳಿದ್ದಾರೆ. ಈ ಹಿಂದೆ ಸೈನ್ಯದ ಅಧಿಕಾರಿಗಳು ಸಾಮಾನ್ಯವಾಗಿ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುವ, ಪತ್ರಿಕಾಗೋಷ್ಠಿಗಳನ್ನು ಕರೆಯುವ ಪದ್ಧತಿ ನಮ್ಮಲ್ಲಿ ಇರಲಿಲ್ಲ. ಆದರೆ ಇಂದು ಜನರಲ್ ರಾವತ್ ಮಾತ್ರವಲ್ಲ, ಮೇಜರ್ ಗೊಗೊಯ್ ಸಹ ಶ್ಲಾಘನಾ ಪದಕವನ್ನು ಪಡೆದ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು ಹಾಗೂ ತಮ್ಮ ಕ್ರಮಗಳನ್ನು ಸಮರ್ಥಿಸಿಕೊಂಡರು.

ಒಂದೆಡೆ ಜನರಲ್ ರಾವತ್ ಅವರ  ಮಾತು ಆತಂಕಕಾರಿ ಹೇಳಿಕೆ ಎನಿಸಿದರೂ ಈ ಮಾತು ಬಂದಿರುವ ಸಂದರ್ಭವನ್ನು ಅವಲೋಕಿಸುವುದು ಸಹ ಮುಖ್ಯ. ಸೈನ್ಯವನ್ನು ಸಾಮಾನ್ಯವಾಗಿ ಗಡಿಯ ರಕ್ಷಣೆಗೆಂದು ಸಜ್ಜುಗೊಳಿಸಿರುತ್ತೇವೆ. ಅದರ ಮುಖ್ಯ ಉದ್ದೇಶ, ಆಂತರಿಕ ಭದ್ರತೆಯ ಸವಾಲುಗಳನ್ನು ನಿರ್ವಹಿಸುವುದಲ್ಲ. ಅಥವಾ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದೂ ಅಲ್ಲ. ಈ ಉದ್ದೇಶಕ್ಕಾಗಿ ಹಲವಾರು ವಿಶೇಷ ಪಡೆಗಳು ಕೇಂದ್ರ ಸರ್ಕಾರದ ಉಸ್ತುವಾರಿಯಲ್ಲಿವೆ. ಆದರೂ ವಿದ್ರೋಹಿ ಚಟುವಟಿಕೆಗಳು ನಡೆಯುತ್ತಿರುವ ಕಾಶ್ಮೀರದಂತಹ ರಾಜ್ಯಗಳಲ್ಲಿ ಭಾರತೀಯ ಸೈನ್ಯವನ್ನು ನಿಯೋಜಿಸುವುದು ಸಾಮಾನ್ಯವಾಗಿದೆ. ಅಂದರೆ ಭಾರತೀಯ ಸೈನ್ಯವು ಸಹ ತನ್ನನ್ನು ಒಂದು ಅಸಾಧ್ಯದ ಪರಿಸ್ಥಿತಿಯಲ್ಲಿ ಕಂಡುಕೊಳ್ಳುತ್ತಿದೆ. ಬಹುಶಃ ಸೈನ್ಯದ ಆಯ್ಕೆಗೆ ಬಿಟ್ಟರೆ ಇಂತಹ ಆಂತರಿಕ ಭದ್ರತೆಯ ಜವಾಬ್ದಾರಿಗಳನ್ನು ಹೊರಲು ಅದು ನಿರಾಕರಿಸುತ್ತದೆ.

ಇಂದಿನ ಸಂದರ್ಭದಲ್ಲಿ ದೇಶದ ಬೇರೆ ಯಾವ ಸಂಸ್ಥೆಗೂ ಇಲ್ಲದಷ್ಟು ಅಧಿಕೃತತೆ ಮತ್ತು ಗೌರವ ಭಾರತೀಯ ಸೈನ್ಯಕ್ಕೆ ದೊರಕುತ್ತಿದೆ. ಆದರೆ ಇದೊಂದು ಎರಡು ಅಲುಗಿನ ಕತ್ತಿ. ಯಾಕೆಂದರೆ ಈ ಗೌರವದೊಡನೆ ಜವಾಬ್ದಾರಿಯೂ ಹೆಚ್ಚುತ್ತದೆ. ಮೇಜರ್ ಗೊಗೊಯ್ ಕ್ರಮಕ್ಕೆ ಬೆಂಬಲ, ಸಮರ್ಥನೆ ದೊರಕಿದೆ ನಿಜ. ಆದರೆ ಸೈನ್ಯದ ದೈನಂದಿನ ಕಾರ್ಯಾಚರಣೆಗಳು ಪ್ರದರ್ಶನದ ಚಟುವಟಿಕೆಗಳಾಗುತ್ತಿವೆ. ಇಂದಿನ 24 ಗಂಟೆಗಳ ಕಾಲವೂ ನೇರಪ್ರಸಾರ ನಡೆಯುವ ಟೆಲಿವಿಷನ್ ಯುಗದಲ್ಲಿ, ಪಾಕಿಸ್ತಾನದ ಬಂಕರುಗಳ ನಾಶವಾಗಲಿ ಅಥವಾ ಆಂತರಿಕ ಭದ್ರತೆಯ ಕಾರ್ಯಾಚರಣೆಗಳಾಗಲಿ ಪರದೆಯ ಮೇಲೆ ಮೂಡುವ ಹಾಗೂ ಚರ್ಚಿತವಾಗುವ ಚಿತ್ರಗಳಾಗುತ್ತಿವೆ. ಇದು ಭಾರತೀಯ ಸೈನ್ಯವು ಎದುರಿಸುತ್ತಿರುವ ಗಂಭೀರ, ಅಪಾಯಕಾರಿ ವಾಸ್ತವವನ್ನು ಕ್ಷುಲ್ಲಕಗೊಳಿಸುವ ವಿದ್ಯಮಾನವಾಗಿದೆ ಎನ್ನುವುದು ಒಂದು ಅಪಾಯ. ಜೊತೆಗೆ ಸೈನ್ಯಕ್ಕೆ ಬೇಷರತ್ತಾದ ಬೆಂಬಲವನ್ನು ಬೇಡುವ ಟೆಲಿವಿಷನ್ ನಿರ್ವಾಹಕರ ಹೊಣೆಗೇಡಿ ಮಾತುಗಳು ಭಾರತೀಯ ಸೈನ್ಯದಿಂದ ನಮ್ಮ ನಿರೀಕ್ಷೆಗಳನ್ನು ಹೆಚ್ಚಿಸುತ್ತವೆ. ನಮ್ಮ ಮನೆಗಳಲ್ಲಿ ಟೆಲಿವಿಷನ್ ಪರದೆಗಳ ಮುಂದೆ ಕುಳಿತು, ಸೈನ್ಯದಿಂದ ಅದ್ಭುತ ಪವಾಡಗಳನ್ನು ನಿರೀಕ್ಷಿಸುವವರಾಗಿ ನಾವೆಲ್ಲರೂ ಪರಿವರ್ತಿತರಾಗುತ್ತೇವೆ. ಹಿನ್ನೆಲೆಯಲ್ಲಿರಬೇಕಾಗಿದ್ದ ಸೈನ್ಯ ಮತ್ತು ಅದರ ಅಧಿಕಾರಿಗಳನ್ನು ಪ್ರದರ್ಶನದ ಗೊಂಬೆಗಳಾಗಿಸುತ್ತೇವೆ.

ಈ ಅಪಾಯವನ್ನು ಜನರಲ್ ರಾವತ್ ಅಂತಹವರು ನಿರ್ಲಕ್ಷಿಸಬಾರದು. ಕಾಶ್ಮೀರದಲ್ಲಿ ಭಾರತೀಯ ಸೈನ್ಯವು ಅಸಾಧ್ಯದ ಪರಿಸ್ಥಿತಿಯಲ್ಲಿ ತನ್ನನ್ನು ತಾನು ಕಂಡುಕೊಂಡಿದೆ. ಕಾಶ್ಮೀರದ ಕಗ್ಗಂಟಿಗೆ ಕಾರಣಗಳು ಏನೇ ಇರಲಿ, ಹೊರಗಿನ ಪ್ರಚೋದನೆ ಎಷ್ಟೇ ಇರಲಿ. ಇಷ್ಟಂತೂ ಸತ್ಯ. ಈ ಸಮಸ್ಯೆಗೆ ಸೈನಿಕ ಪರಿಹಾರಗಳಿಲ್ಲ. ಸೈನ್ಯದ ಮೂಲಕ ಕಾಶ್ಮೀರದ ಪ್ರದೇಶವನ್ನು ಹಿಡಿತದಲ್ಲಿ ಇಟ್ಟುಕೊಳ್ಳಬಹುದು. ಪ್ರಾಣಕ್ಕೆ ಅಪಾಯವಾಗುವ ಕ್ಲಿಷ್ಟ ಪರಿಸ್ಥಿತಿಗಳಲ್ಲಿ ಸೈನಿಕರು ಮೇಜರ್ ಗೊಗೊಯ್‌ ಅವರಂತೆ ಸೈನ್ಯದ ಅಧಿಕಾರಿಗಳು ಏನಾದರೂ ಉಪಾಯ ಹೂಡಬಹುದು, ಆದರೆ ಇವಾವುವೂ ಪರ್ಯಾಯಗಳಲ್ಲ. ಅಲ್ಲಿನ ಸಮಸ್ಯೆಯನ್ನು ನಾಗರಿಕ ಸರ್ಕಾರಗಳೇ ರಾಜಕೀಯ ಪರಿಹಾರಗಳ ಮೂಲಕ ಬಗೆಹರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT