ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮತಾರೆಯರಿಗೆ ಮೇಲ್ಮನೆಯಲ್ಲಿ ಏನು ಕೆಲಸ?

Last Updated 30 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಅಸ್ಸಾಂನಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಚರ್ಚೆ ನಡೆಯುತ್ತಿತ್ತು. ಮೇಲ್ಮನೆ ಸದಸ್ಯರು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ, ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು. ನೂತನ ಗೃಹಸಚಿವ ಸುಶೀಲ್‌ಕುಮಾರ್ ಶಿಂಧೆ ಉತ್ತರಿಸಲು ತಡಕಾಡುತ್ತಿದ್ದರು.

ಆಗ ಮೇಲ್ಮನೆ ಸದಸ್ಯರಾಗಿರುವ ನಟಿ ಜಯಾಬಚ್ಚನ್ ಕೂಡಾ ಒಂದು ಪ್ರಶ್ನೆ ಎಸೆದರು. ಇದರಿಂದ ತೀರಾ ಕಿರಿಕಿರಿಗೊಂಡ ಗೃಹ ಸಚಿವರು, `ಸ್ವಲ್ಪ ಬಾಯಿ ಮುಚ್ಚಿಕೊಳ್ಳಿ, ಇದು ಸಿನಿಮಾ ಅಲ್ಲ~ ಎಂದು ರೇಗಿದರು. ಇದು ಪ್ರತಿಪಕ್ಷದವರನ್ನು ಕೆರಳಿಸಿ, ಕೋಲಾಹಲವಾದ ಸಂಗತಿ ನಿಮಗೆಲ್ಲಾ ಗೊತ್ತೇ ಇದೆ.

ಗೃಹ ಸಚಿವರು ನಂತರ ಕ್ಷಮೆ ಕೇಳಿರಬಹುದು. ಆದರೆ, ರಾಜಕಾರಣಿಗಳಿಗೆ ಸಿನಿಮಾ ನಟ-ನಟಿಯರ ಬಗ್ಗೆ ಯಾವ ರೀತಿಯ ಮನೋಭಾವವಿದೆ ಎನ್ನುವುದಕ್ಕೆ ಇದು ಒಂದು ಸಣ್ಣ ಉದಾಹರಣೆ. ರಾಜಕಾರಣಿಗಳು ಎಂದೂ ಈ ಸಿನಿಮಾಮಂದಿಗೆ ಗೌರವ ಕೊಡುವುದಿಲ್ಲ.

ಸಿನಿಮಾ ಜನ ಎಂದರೆ ಹಸಿ ದಡ್ಡರು ಎಂದೇ ಅವರೊಳಗೊಂದು ಭಾವನೆ ಇದೆ. ಶಿಂಧೆ ಅವರು ಜಯಾಬಚ್ಚನ್ ಅವರಿಗೆ ಹೇಳಿದ ಮಾತಿನಲ್ಲೇ ಆ ಧೋರಣೆ ಇದೆ. ಅಸ್ಸಾಂ ಸಮಸ್ಯೆ ಜಟಿಲವಾದದ್ದು, ಅದರ ಬಗ್ಗೆ ಮಾತನಾಡಲು ಜಯಾ ಬಚ್ಚನ್ ಅವರಿಗೆ ಏನು ಅರ್ಹತೆ ಇದೆ? ಎನ್ನುವುದು ಅವರ ಪ್ರಶ್ನೆಯಾಗಿರಬಹುದು.

ಸಿನಿಮಾ ನಟಿಯರು ರಾಜಕೀಯ ಪಕ್ಷಗಳ ಬಾಲಬಡುಕರಾಗಿ, ದೊಡ್ಡ ನಾಯಕರ ವಿಶೇಷ `ಕೃಪಾಕಟಾಕ್ಷ~ ದಕ್ಕಿಸಿಕೊಂಡು ಮೇಲ್ಮನೆಗೆ ನಾಮಕರಣಗೊಂಡು ಬಂದಿರುತ್ತಾರೆ. ಯಾವುದೇ ತಿಳಿವಳಿಕೆ ಇರುವುದಿಲ್ಲ. ಜ್ಞಾನವೂ ಇರುವುದಿಲ್ಲ ಎನ್ನುವುದು ಮತ್ತೊಂದು ಭಾವನೆಯಿರಬಹುದು. ಅದು ಅವರ ಮಾತಿನಲ್ಲೇ ವ್ಯಕ್ತವಾಗುತ್ತದೆ.

ಸಿನಿಮಾ ಎನ್ನುವುದು ಹೇಗೆ ಬೇಕಾದರೂ ಎಳೆಯಬಹುದಾದ, ತಲೆಬುಡವಿಲ್ಲದ, ಯಾವುದೇ ತರ್ಕವಿಲ್ಲದ ಹಸಿಹಸಿ ಬುರುಡೆ ಎನ್ನುವುದೂ ಅವರ ಮಾತಿನ ತಿರುಳಾಗಿರಬಹುದು. ಸಿನಿಮಾ ಸ್ಟೋರಿಯಾದರೆ ಹೇಗಾದರೂ ಮುಗಿಸಬಹುದು, ರಾಜಕೀಯ ಬಿಕ್ಕಟ್ಟಿಗೆ ಪರಿಹಾರ ಕಷ್ಟ ಎಂದೂ ಇರಬಹುದು.
 
ಅಸ್ಸಾಂ ಸಮಸ್ಯೆ ಬಗ್ಗೆ ಜಯಾಬಚ್ಚನ್ ಅವರಿಗೆ ಸರಿಯಾದ ತಿಳಿವಳಿಕೆ ಇದ್ದಿದ್ದರೆ, ಅವರು ಈ ವಿಷಯದಲ್ಲಿ ಆಳವಾದ ಅಭ್ಯಾಸ ನಡೆಸಿಯೇ ಬಂದಿದ್ದಾರೆ ಎಂಬ ಖಚಿತ ಸುಳಿವು ಗೃಹ ಸಚಿವರಿಗೆ ಇದ್ದಿದ್ದರೆ ಅವರು ಈ ರೀತಿ ವ್ಯಂಗಾಸ್ತ್ರ ಬಿಡುತ್ತಿರಲಿಲ್ಲ ಎನಿಸುತ್ತದೆ. ಅಂದಹಾಗೆ, ಇಷ್ಟು ವರ್ಷಗಳಲ್ಲಿ ಜಯಾ ಅವರು ರಾಜ್ಯಸಭೆಯಲ್ಲಿ ಒಂದಾದರೂ ಪ್ರಶ್ನೆ ಕೇಳಿದ್ದಾರಾ?

ಅವರು ಆಯ್ಕೆಯಾದ ಉತ್ತರಪ್ರದೇಶ ರಾಜ್ಯಕ್ಕಾದರೂ ಏನಾದರೂ ಪ್ರಯೋಜನವಾಗಿದೆಯೇ? ಗೃಹ ಸಚಿವರು ಜಯಾಬಚ್ಚನ್ ಅವರಿಗೆ ಹೇಳಿದಂತೆ ದೇವೇಗೌಡರಿಗೆ ಹೇಳಲು ಸಾಧ್ಯವಾಗುತ್ತಿತ್ತೇ ಯೋಚಿಸಿ. ಅದಕ್ಕೇ ಅಲ್ಲವೇ ಜೆ.ಎಚ್.ಪಟೇಲರು “ಈರುಳ್ಳಿ, ಬೆಳ್ಳುಳ್ಳಿ ಮಾರುವವರೆಲ್ಲಾ ಸಿನಿಮಾ ಮಾಡ್ತಿದ್ದಾರೆ” ಎಂದು ಹೇಳಿದ್ದು.

ಮೇಲ್ಮನೆಯಲ್ಲಾಗಲಿ, ಕೆಳಮನೆಯಲ್ಲಾಗಲಿ, ರಾಜ್ಯಸಭೆಯಾಗಲಿ, ವಿಧಾನಪರಿಷತ್ ಆಗಲಿ ಎಲ್ಲಾ ಕಡೆ ಸಿನಿಮಾ ನಟ-ನಟಿಯರ ಬಗ್ಗೆ ಇದೇ ಭಾವನೆ ಇದೆ.
ಸಾಮಾನ್ಯವಾಗಿ ಸಿನಿಮಾ ರಂಗದಿಂದ ಮೇಲ್ಮನೆಗೆ ಆಯ್ಕೆಯಾಗುವವರು ತಮ್ಮ ವೈಯಕ್ತಿಕ ಹಿತಾಸಕ್ತಿ ಕಾಪಾಡಿಕೊಳ್ಳಲೆಂದೇ ಬಂದವರಾಗಿರುತ್ತಾರೆ. ನೀತಿ ನಿರೂಪಕರಾಗಿರಬೇಕಾದ ಸ್ಥಾನದಲ್ಲಿ ಬಂದು ಕುಳಿತ ನಂತರ ರಾಜಕೀಯವಾಗಿ ಗಹನ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರೆ, ಸರ್ಕಾರಕ್ಕೆ ಮಾರ್ಗದರ್ಶನ ಮಾಡುತ್ತಾರೆ.
 
ಯಾವುದೇ ವಿಷಯದ ಚರ್ಚೆಯಲ್ಲಿ ಪಾಲ್ಗೊಂಡು ಜನರ ಹಿತಾಸಕ್ತಿ ಕಾಪಾಡುವ ದಿಸೆಯಲ್ಲಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ ಎಂದು ನಿರೀಕ್ಷಿಸುವುದೇ ತಪ್ಪಾಗುತ್ತದೆ. ಇದುವರೆಗೆ ಮೇಲ್ಮನೆಗೆ ನಾಮಕರಣ ಮಾಡಿದವರನ್ನು ಗಮನಿಸಿದಾಗ, ಅವರೆಲ್ಲರಿಗೂ ಜನಹಿತಕ್ಕಿಂತ ಸ್ವಹಿತಾಸಕ್ತಿಯೇ ಹೆಚ್ಚಾಗಿರುವುದು ರಾಚುತ್ತದೆ.

ಹೇಮಾಮಾಲಿನಿ ಕರ್ನಾಟಕದಿಂದ ರಾಜ್ಯಸಭೆಗೆ ನಾಮಕರಣಗೊಳ್ಳುತ್ತಾರೆ. ಬೆಂಗಳೂರು ನಗರದಲ್ಲಿ ಅವರ ಪತಿ ಧರ್ಮೇಂದ್ರ ಅವರ ಒಡೆತನದಲ್ಲಿ ಮೂರುಸಾವಿರ ಸಮೂಹವಸತಿಗಳಿವೆ. ಹೇಮಾಮಾಲಿನಿ ಅವರು ಕರ್ನಾಟಕ ರಾಜ್ಯದಾದ್ಯಂತ ರಾಜ್ಯ ಸರ್ಕಾರ ಪ್ರಾಯೋಜಿಸಿದ ಉತ್ಸವಗಳಲ್ಲಿ ನೃತ್ಯ ಪ್ರದರ್ಶನ ಮಾಡಿದ್ದಾರೆ.
 
ಸರ್ಕಾರ ಅದಕ್ಕೆ ಭಾರೀ ಸಂಭಾವನೆ ನೀಡಿದೆ. ದೆಹಲಿಯಿಂದ ಅವರನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗಿದೆ. ಮೇಲ್ಮನೆ ಸದಸ್ಯತ್ವವನ್ನೂ ನೀಡಿ, ನೃತ್ಯ ಪ್ರದರ್ಶನಕ್ಕೂ ಅವಕಾಶ ನೀಡಿ, ಅವರನ್ನು ಓಲೈಸಲಾಗಿದೆ. ವೈಜಯಂತಿಮಾಲಾ ಬಾಲಿ ಅವರೂ ಇದೇ ರೀತಿ ನೃತ್ಯ ಪ್ರದರ್ಶನ ಮಾಡುತ್ತಲೇ ಆರೂ ವರ್ಷದ ತಮ್ಮ ಅವಧಿಯನ್ನು ಮುಗಿಸಿದರು.

ಜಯಪ್ರದಾ ಅವರು ರಾಜ್ಯಸಭೆಯಲ್ಲೂ ಇದ್ದರು, ಲೋಕಸಭೆಗೂ ಆಯ್ಕೆಯಾದರು. ಹೊಸ ಜವಾಬ್ದಾರಿಯನ್ನು ನಿರ್ವಹಿಸದೆ ಅವರೂ ಡ್ಯಾನ್ಸ್ ಕಾರ್ಯಕ್ರಮಕ್ಕೆ ಆದ್ಯತೆ ನೀಡಿದರು. ತಮ್ಮ ವೃತ್ತಿ ಜೀವನದ ಎಲ್ಲ ಕೆಲಸಗಳನ್ನೂ ಮುಗಿಸಿದ ಮೇಲೆ ಸಾಮಾನ್ಯವಾಗಿ ಎಲ್ಲರೂ ಈ ರೀತಿ ಬೇರೆ ಕ್ಷೇತ್ರಗಳಲ್ಲಿ ನುಸುಳಿಕೊಳ್ಳುತ್ತಾರೆ. ಆ ನಂತರವೂ ಅಲ್ಲಿನ ಮೋಹ ಅವರಿಂದ ದೂರಾಗದಿದ್ದರೆ, ಅವರೂ ಭ್ರಷ್ಟ ರಾಜಕಾರಣಿಗಳ ಮತ್ತೊಂದು ಮುಖವಾಗಿ ಬಿಡುತ್ತಾರೆ.

ಇದು ನಮ್ಮ ದೇಶದ ರಾಜಕೀಯ ದುರಂತ. ಡ್ಯಾನ್ಸ್ ಮಾಡುವುದನ್ನು ಮುಂದುವರೆಸುವುದಾದರೆ ಮೇಲ್ಮನೆಯಲ್ಲಿ ಅವರಿಗೇನು ಕೆಲಸ? ರಾಜ್ಯಸಭೆಯಲ್ಲಾಗಲಿ, ವಿಧಾನಪರಿಷತ್ತಿನಲ್ಲಾಗಲಿ ಅವರಿಂದ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ? ಕೇಂದ್ರದಲ್ಲಿ ಲತಾ ಮಂಗೇಶ್ಕರ್ ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಲಾಗಿತ್ತು.
 
ಇದು ಕಲಾವಿದರಿಗೆ ಸಲ್ಲಿಸುವ ಗೌರವ ಎಂದೇ ಭಾವಿಸಿದರೂ, ಈ ಗೌರವವನ್ನು ತಿರಸ್ಕರಿಸಲೂ ಆಗದೆ, ಅದಕ್ಕೆ ಸರಿಯಾದ ನ್ಯಾಯವನ್ನೂ ಒದಗಿಸಲಾಗದೆ ಲತಾ ಅವರು ಪರಿತಪಿಸಿದರು. ಇದರಿಂದ ರಾಜ್ಯಸಭೆಗೆ ಏನೂ ಲಾಭವಾಗಲಿಲ್ಲ. ಸಿನಿಮಾಕ್ಕೂ ಪ್ರಯೋಜನವಾಗಲಿಲ್ಲ.

ಸಿನಿಮಾ ಅಕಾಡೆಮಿ ಅಧ್ಯಕ್ಷೆಯಾಗಿದ್ದ ತಾರಾ ಅವರು ವಿಧಾನಪರಿಷತ್‌ಗೆ ನಾಮಕರಣವಾಗಿದ್ದಾರೆ. ಪ್ರಮಾಣವಚನ ಸ್ವೀಕರಿಸುವ ದಿನ ಅವರು ಸಮ್ಮೇಳನ ಸಭಾಂಗಣಕ್ಕೆ ಪುರೋಹಿತರೊಬ್ಬರನ್ನು ಕರೆದುಕೊಂಡು ಬಂದು ಅಲ್ಲೇ ಗಣಪತಿ ಪೂಜೆ ಮಾಡಿ ನಂತರ ಪ್ರಮಾಣ ವಚನ ಸ್ವೀಕರಿಸಿದರು. “

ಕಲಾವಿದರು, ಮಹಿಳೆಯರು, ಮಕ್ಕಳ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸುವ ಮೂಲಕ ಅವರ ಪರವಾಗಿ ಕೆಲಸಮಾಡುತ್ತೇನೆ” ಎಂದು ಅವರು ಭರವಸೆ ನೀಡಿದ್ದಾರೆ. `ಚಿತ್ರರಂಗದಲ್ಲಿ ಹಲವಾರು ಸಮಸ್ಯೆಗಳಿವೆ. ಅದನ್ನು ಸರ್ಕಾರದ ಮುಂದೆ ಗಟ್ಟಿಯಾಗಿ ಹೇಳುವವರು ಬೇಕು, ಅದನ್ನು ತಾರಾ ಮಾಡುತ್ತಾರೆ~ ಎಂದು ಟೀವಿ ಚಾನಲ್‌ನ ಚರ್ಚೆಯೊಂದರಲ್ಲಿ ಹಿರಿಯ ನಿರ್ಮಾಪಕರೊಬ್ಬರು ಹೇಳುತ್ತಿದ್ದರು.

ತಾರಾಗಿಂತ ಮುಂಚೆ ಇದ್ದವರು, ಈಗಾಗಲೇ ಸದನದಲ್ಲಿ ಇರುವ ಕಲಾವಿದರಿಗೆ ಗಟ್ಟಿದನಿ ಇರಲಿಲ್ಲವೇ? ಇದುವರೆಗೆ ಇದ್ದವರು ಸಿನಿಮಾ ಬಗ್ಗೆ ಯಾವ ರೀತಿಯ ವಾದ ಮಂಡಿಸಿದರು? ಎನ್ನುವುದನ್ನೂ ಪರಿಶೀಲಿಸಬೇಕು.ಬಿ.ಜಯಮ್ಮನವರು ವಿಧಾನಪರಿಷತ್ತಿಗೆ ನಾಮಕರಣವಾದ ದಿನದಿಂದಲೂ ವಿಧಾನಪರಿಷತ್‌ನಲ್ಲಿ ಸಿನಿಮಾ ಕ್ಷೇತ್ರಕ್ಕೆ ಪ್ರಾತಿನಿಧ್ಯವಿದೆ.
 
ಅಂದೂ ಸಿನಿಮಾರಂಗಕ್ಕೆ ಏನಾದರೂ ಪ್ರಯೋಜನವಾಗುತ್ತದೆ ಎಂದು ನಂಬಲಾಗಿತ್ತು. ಇಂದೂ ಅದೇ ನಂಬಿಕೆ ಇದೆ. ಆರತಿ, ಶ್ರೀನಾಥ್, ಮುಖ್ಯಮಂತ್ರಿ ಚಂದ್ರು ಮೊದಲಾದವರೆಲ್ಲಾ ಸಿನಿಮಾ ರಂಗವನ್ನು ಪ್ರತಿನಿಧಿಸಿದ್ದವರೇ. ಒಂದು ಬಾರಿ ವಿಧಾನ ಸಭೆಗೆ, ಮತ್ತೊಂದು ಅವಧಿಗೆ ವಿಧಾನಪರಿಷತ್‌ಗೆ ಆಯ್ಕೆಯಾಗಿದ್ದ ಹಿರಿಯ ನಟ ಅನಂತನಾಗ್ ಸಚಿವರೇ ಆಗಿದ್ದರು.

ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲರ ಆಪ್ತರೂ ಆಗಿದ್ದವರು. ಅವರು ಮನಸ್ಸು ಮಾಡಿದ್ದರೆ ರಾಜಧಾನಿಯಲ್ಲಿ ಫಿಲಂಸಿಟಿ, ಮತ್ತಷ್ಟು ಸ್ಟುಡಿಯೋ ಬರುವುದಕ್ಕೆ ತಡವಾಗುತ್ತಿರಲಿಲ್ಲ. ಸಬ್ಸಿಡಿ ಸಮಸ್ಯೆ, ಚಿತ್ರಮಂದಿರದ ಸಮಸ್ಯೆ ಎಲ್ಲವೂ ಕ್ಷಣಮಾತ್ರದಲ್ಲಿ ಬಗೆಹರಿದುಹೋಗುತ್ತಿತ್ತೇನೋ! ಅಂಬರೀಷ್ ಇದ್ದರು.

ಕೇಂದ್ರಸಚಿವರಾಗಿಯೇ ಅವರು ಪರಿಣಾಮಕಾರಿಯಾಗಿ ಕೆಲಸ ಮಾಡಬಹುದಿತ್ತು. ಚಿತ್ರರಂಗಕ್ಕೆ ಅಸಾಧಾರಣವಾದುದನ್ನು ಕೇಂದ್ರದಿಂದ ತಂದುಕೊಡುವ ಸಾಧ್ಯತೆ ಇದ್ದೇಇತ್ತು. ಆದರೆ ಪಾರ್ಲಿಮೆಂಟಿಗೇ ಕಾಲಿಡದೆ ಅವರು ಅವಕಾಶ ಕಳೆದುಕೊಂಡರು. ಕುಮಾರ್ ಬಂಗಾರಪ್ಪ, ಉಮಾಶ್ರೀ, ಜಗ್ಗೇಶ್, ಬಿ.ಸಿ.ಪಾಟೀಲ, ದೊಡ್ಡರಂಗೇಗೌಡ ಮೊದಲಾದವರೆಲ್ಲಾ ಅಲ್ಲಿಯೇ ಇದ್ದಾರೆ.

ಚಿತ್ರರಂಗಕ್ಕೆ ಇವರೆಲ್ಲಾ ಸೇರಿ ಏನಾದರೂ ಮಾಡುವ ಮನಸ್ಸು ಮಾಡಬೇಕು. ಆದರೆ ಏನು ಮಾಡಬೇಕು ಎನ್ನುವುದೂ ಗೊತ್ತಿರಬೇಕು. ಇಲ್ಲದಿದ್ದರೆ ರಾಜಕಾರಣಿಗಳಂತೆ ಚಿತ್ರಭೂಪರೂ ಕಳೆದುಹೋಗುತ್ತಾರೆ. ರಾಜಕಾರಣಿಗಳು ಸಚಿವರಾದ ಕೂಡಲೇ ವಾಸ್ತು ಇರುವ ಕೊಠಡಿಗಾಗಿ ಕುಸ್ತಿ ಮಾಡುತ್ತಾರೆ. ನಂತರ ಕೊಠಡಿಯಲ್ಲಿ ಪೂಜೆ, ಪುನಸ್ಕಾರ, ಹೋಮ ಮೊದಲಾದವನ್ನು ಮಾಡುತ್ತಾರೆ.

ಚಿತ್ರನಟ ನಟಿಯರೂ ಅದನ್ನೇ ಮಾಡಿದರೆ ರಾಜಕಾರಣಿಗಳಿಗೂ, ಸಿನಿಮಾ ನಟರಿಗೂ ವ್ಯತ್ಯಾಸ ಏನು ಉಳಿಯುತ್ತದೆ?ಸಿನಿಮಾ ಕ್ಷೇತ್ರಕ್ಕೂ ರಾಜಕಾರಣಕ್ಕೂ ನಂಟಿದೆ. ತಮಿಳುನಾಡಿನಲ್ಲಿ, ಆಂಧ್ರಪ್ರದೇಶದಲ್ಲಿ ಸಿನಿಮಾ ನಟರ ರಾಜಕಾರಣಕ್ಕೆ ಇತಿಹಾಸವೇ ಇದೆ. ಕರ್ನಾಟಕದಲ್ಲಿ ಸಿನಿಮಾ ನಟರು, ರಾಜಕಾರಣದಲ್ಲಿ `ಅತಿಥಿನಟ~ರಾಗಿ ಅಭಿನಯಿಸಬೇಕಾಗಿದೆ.

ಯಾವ ನಟನಟಿಯರಿಗೂ ಒಂದು ಕ್ಷೇತ್ರದಲ್ಲಾದರೂ ಒಬ್ಬನೇ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸುವ ಶಕ್ತಿ ಇಲ್ಲ. ಅಷ್ಟೇಕೆ ಸ್ವಯಂ ತಾವೇ ಗೆಲ್ಲುವ ಶಕ್ತಿಯೂ ಇಲ್ಲ. ಅಂಬರೀಷ್‌ಗೆ ರಾಮನಗರದಲ್ಲಿ ಏನಾಯಿತು? ರಾಮಕೃಷ್ಣ ಹೆಗಡೆ ಅವರ ನೇತೃತ್ವದ `ಲೋಕಶಕ್ತಿ~ ಪಕ್ಷದಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ನಟಿ ಜಯಂತಿ ಅವರ ಫಲಿತಾಂಶ ಏನಾಯಿತು?

ಉಮಾಶ್ರೀ ಕಳೆದ ಚುನಾವಣೆಯಲ್ಲಿ ಏಕೆ ಗೆಲ್ಲಲಿಲ್ಲ? ಸಾಯಿಕುಮಾರ್, ಮದನ್‌ಪಟೇಲ್ ಇವರೆಲ್ಲಾ ಚುನಾವಣಾ ಸಮಯದಲ್ಲಿ ಏನು ಮಾಡಿದರು? ಎಲ್ಲವೂ ಜನರಿಗೆ ಗೊತ್ತಾಗಿದೆ. ಸಿನಿಮಾ ನಟರು ಕಲಾವಿದರಾಗಿರುವಾಗಲೇ ಸಾಮಾಜಿಕ ಕಳಕಳಿಯನ್ನು ಬೆಳೆಸಿಕೊಂಡರೆ, ಬದ್ಧ ಕಲಾವಿದರಾಗಿದ್ದರೆ ಎಲ್ಲ ಕಡೆ ಗೆಲ್ಲುತ್ತಾರೆ. ಹಣದ ಹಿಂದೆಯೂ, ಅಧಿಕಾರದ ಹಿಂದೆಯೂ ಓಡುತ್ತಾ ಹೋದರೆ ನಿಸ್ತೇಜರಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT