ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮನ್ನೇ ನಾವು ಇರಿದುಕೊಂಡು ಪರಿಹಾರ ಹುಡುಕುತ್ತಿದ್ದೇವೆಯೇ?

Last Updated 10 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಇದೀಗ ರಸ್ತೆಯ ಕೊನೆ. ಮುಂದೆ ಹೋಗಲು ದಾರಿ ಕಾಣುವುದಿಲ್ಲ. ಹಿಂದೆ ಹೋದರೆ ಪ್ರಯೋಜನವಿಲ್ಲ. ಇದು ಇಂದಿನ ಕಥೆಯಲ್ಲ. ಕಳೆದ 26 ವರ್ಷಗಳಿಂದ ಇದೇ ಗೋಳು. ಕರ್ನಾಟಕಕ್ಕೆ ಅನ್ಯಾಯವಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಅನ್ಯಾಯದಿಂದ ಹೇಗೆ ಪಾರಾಗುವುದು ಎಂದು ತಿಳಿಯುತ್ತಿಲ್ಲ. ಕಾವೇರಿ ನದಿ ಹರಿವಿನ ದೃಷ್ಟಿಯಿಂದ ಕರ್ನಾಟಕ ಮೇಲಿನ ರಾಜ್ಯವಾಗಿರುವುದೇ ತಪ್ಪಾಗಿದೆ. ಎಲ್ಲ ನದಿ ಹರಿವಿನ ಮೇಲಿನ ರಾಜ್ಯಗಳ ಪಾಡು ಇದೇ ಆಗಿರುತ್ತದೆ.

ಕಾವೇರಿ ನದಿ ನೀರು ಹಂಚಿಕೆ ವಿವಾದ ಒಂದು ವಾರ್ಷಿಕ ವಿಧಿಯಂತೆ ಆಗಿದೆ. ಮಳೆರಾಯನ ಕೃಪೆಯಾದರೆ ಯಾರೂ ವಿವಾದ ಹುಟ್ಟಿ ಹಾಕುವುದಿಲ್ಲ. ಹಾಕಲು ಅವಕಾಶವೂ ಇರುವುದಿಲ್ಲ. ಮಳೆ ಕಡಿಮೆಯಾಯಿತೋ ಸಮಸ್ಯೆ ಬಂತು ಎಂದೇ ಅರ್ಥ. ಒಂದು ದಿನ ತಡವಾಗಬಹುದು ಅಷ್ಟೇ, ಆದರೆ, ಬಂದೇ ಬರುತ್ತದೆ. ನೆರೆಯ ರಾಜ್ಯದಲ್ಲಿ ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದರಂತೂ ಸಮಸ್ಯೆ ಖಾತ್ರಿ ಎಂದೇ ಅರ್ಥ!

ನೆರೆಹೊರೆಯ ರಾಜ್ಯಗಳ ನಡುವೆ ಮಾತುಕತೆಯ, ಸಂಧಾನದ ಬಾಗಿಲುಗಳು ಮುಚ್ಚಿಹೋದ ಫಲ ಇದು. ನದಿ ಹರಿವಿನ ಮೇಲು ಭಾಗದಲ್ಲಿಯೂ ರೈತರೇ ಇರುತ್ತಾರೆ. ಕೆಳಭಾಗದಲ್ಲಿಯೂ ರೈತರೇ ಇರುತ್ತಾರೆ. ನದಿಯ ನೀರನ್ನು ಮುಖ್ಯವಾಗಿ ಕುಡಿಯಲು ಮತ್ತು ಕೃಷಿಗೆ ಬಳಸುತ್ತೇವೆ. ಆದರೆ, ‘ಸೋದರರಿಗೆ ಸೂಜಿ ಮೊನೆಯಷ್ಟು ಜಾಗವನ್ನು ಬಿಡುವುದಿಲ್ಲ’ ಎಂದ ನಾಡು ನಮ್ಮದು. ಮಂಡ್ಯದ ಜನರು ಮೈಸೂರಿಗೇ ಕುಡಿಯುವ ನೀರು ಬಿಡುವುದಿಲ್ಲ ಎನ್ನುವಾಗ ತಮಿಳುನಾಡಿಗೆ ಹೇಗೆ ಬಿಡಲು ಸಾಧ್ಯ?

ಬಿಡುವುದಿಲ್ಲ ಎಂದರೆ ನ್ಯಾಯ ಬಗೆಹರಿಸುವವರು ಒಬ್ಬರು ಇದ್ದೇ ಇರುತ್ತಾರೆ. ಅವರ ಬಾಗಿಲಿಗೆ ನಾವು ಅಲ್ಲದಿದ್ದರೂ ಅವರು ಹೋಗುತ್ತಾರೆ. ನ್ಯಾಯಮೂರ್ತಿಗಳು ತಮಗೆ ತಿಳಿದ ಒಂದೇನೋ ಪರಿಹಾರವನ್ನು ಹೇಳುತ್ತಾರೆ. ನಾವು ಅನುಸರಿಸಲೇ ಬೇಕು, ಇಲ್ಲ ಎನ್ನುವಂತೆ ಇಲ್ಲ. ಅದು ಈ ನೆಲದ ಅತ್ಯುಚ್ಚ ಕಾನೂನು. ಪಾಲಿಸುವುದಿಲ್ಲ ಎಂದರೆ ಸರ್ಕಾರವನ್ನು ವಜಾ ಮಾಡಿಯಾದರೂ ಪಾಲಿಸುವಂತೆ ಮಾಡುತ್ತಾರೆ. ಏಕೆಂದರೆ ಸಾಂವಿಧಾನಿಕ ವ್ಯವಸ್ಥೆಯೇ ಮುರಿದು ಬಿದ್ದರೆ ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಈಗಲೂ ಹಾಗೇ ಆಗಿದೆ. ಕಾವೇರಿಯಿಂದ ನಿತ್ಯ 15,000 ಕ್ಯುಸೆಕ್‌ನ ಹಾಗೆ ಹತ್ತು ದಿನ 13 ಟಿಎಂಸಿ ಅಡಿ ನೀರು ಬಿಡಬೇಕು ಎಂದು ಸುಪ್ರೀಂ ಕೋರ್ಟು ಆದೇಶ ಮಾಡಿದೆ. ಕರ್ನಾಟಕದ ಜಲಾಶಯಗಳಲ್ಲಿನ ಈಗಿನ ನೀರಿನ ಸ್ಥಿತಿಗತಿ ನೋಡಿದರೆ ಇದು ಕುಠಾರಪ್ರಾಯವಾದ ಆದೇಶ. ಆದರೆ, ಪಾಲಿಸದೇ ವಿಧಿಯಿಲ್ಲ. ನಾವು ಬಂದ್‌  ಮಾಡಬಹುದು, ರಸ್ತೆ ತಡೆ ಮಾಡಬಹುದು, ಶಾಲೆ  ಕಾಲೇಜು ಮುಚ್ಚಬಹುದು. ಆದರೆ, ನೀರು ಬಿಡುವುದನ್ನು ನಿಲ್ಲಿಸುವ ಹಾಗೆ ಇಲ್ಲ. ನೀರು ಬಿಡಬಾರದು ಎಂದು ಹೇಳುವುದು ಸುಲಭ. ಆದರೆ, ರಾಜ್ಯ ಸರ್ಕಾರಕ್ಕೆ ಬೇರೆ ದಾರಿ ಇರುವುದಿಲ್ಲ. ಇದು ಒಂದು ರೀತಿ ಇಕ್ಕಳದಲ್ಲಿ ಸಿಲುಕಿದ ಹಾಗೆ. ಇತ್ತ ಬದುಕುವುದೂ ಇಲ್ಲ. ಅತ್ತ ಸಾಯುವುದೂ ಇಲ್ಲ.

26 ವರ್ಷಗಳ ಹಿಂದೆ ಅಂದರೆ 1990ರಲ್ಲಿ ಕಾವೇರಿ ನದಿ ನೀರು ಹಂಚಿಕೆ ನ್ಯಾಯಮಂಡಳಿ ರಚನೆಯಾಯಿತು. ಅಲ್ಲಿಯವರೆಗೆ ನದಿ ನೀರು ಬಿಡಬೇಕು ಎಂದು ತಮಿಳುನಾಡಿನ ಮುಖ್ಯಮಂತ್ರಿಗಳೋ, ಜಲಸಂಪನ್ಮೂಲ ಸಚಿವರೋ ಬೆಂಗಳೂರಿಗೆ ಬರುತ್ತಿದ್ದರು. ನಮ್ಮ ಮುಖ್ಯಮಂತ್ರಿಗಳ ಜೊತೆಗೆ ಮಾತನಾಡುತ್ತಿದ್ದರು. ಅಷ್ಟೋ ಇಷ್ಟೋ ನಾವೂ ನೀರು ಬಿಡುತ್ತಿದ್ದೆವು. ಇದು ಒಂದು ವಿವಾದ ಎಂದು ಆಗ ಅನಿಸುತ್ತಿರಲಿಲ್ಲ. ಎಲ್ಲವೂ ಸೌಹಾರ್ದಯುತವಾಗಿ ನಡೆಯುತ್ತಿತ್ತು. 90ರ ನಂತರ ಸಂಘರ್ಷದ ಹಾದಿ ಶುರುವಾಯಿತು.

ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಕರ್ನಾಟಕವೇನೂ ಸುಮ್ಮನೆ ಕುಳಿತಿಲ್ಲ. ಎರಡು ಸಾರಿ ಹೆಚ್ಚೂ ಕಡಿಮೆ ರಾಜ್ಯ ಸರ್ಕಾರಗಳು ವಜಾ ಆಗುವಂಥ ಸನ್ನಿವೇಶ ನಿರ್ಮಾಣವಾಗಿತ್ತು. ಮೊದಲನೆಯದು, 1991ರಲ್ಲಿ ಎಸ್‌.ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ. ಅದೇ ಆಗ ರಚನೆಯಾಗಿದ್ದ ನ್ಯಾಯಮಂಡಳಿಯು ಒಂದು ಜಲವರ್ಷದಲ್ಲಿ ತಮಿಳುನಾಡಿಗೆ 205 ಟಿಎಂಸಿ ಅಡಿ ನೀರು ಬಿಡಬೇಕು ಎಂದು ಆದೇಶಿಸಿತ್ತು.

‘ನೀರು ಬಿಡಲು ಆಗದು’ ಎಂದ ಬಂಗಾರಪ್ಪನವರು, ನ್ಯಾಯಮಂಡಳಿಯ ಆದೇಶದ ಉರುಳಿನಿಂದ ತಪ್ಪಿಸಿಕೊಳ್ಳಲು ಕರ್ನಾಟಕ ಕಾವೇರಿ ಜಲಾನಯನ ಪ್ರದೇಶ ನೀರಾವರಿ ಸಂರಕ್ಷಣ ಸುಗ್ರೀವಾಜ್ಞೆ ಹೊರಡಿಸಿದರು. ಅದಕ್ಕೆ ರಾಜ್ಯಪಾಲರು ರುಜು ಹಾಕಿದರೂ ರಾಷ್ಟ್ರಪತಿಗಳು ಅದನ್ನು ಸುಪ್ರೀಂ ಕೋರ್ಟಿನ ಅಭಿಪ್ರಾಯಕ್ಕೆ ಕಳುಹಿಸಿಕೊಟ್ಟರು. ‘ನದಿ ನೀರಿನ ವಿವಾದ ಎರಡು ಅಥವಾ ಹೆಚ್ಚು ರಾಜ್ಯಗಳಿಗೆ ಸಂಬಂಧಿಸಿದ್ದು.

ಒಂದು ರಾಜ್ಯ ಹೀಗೆ ತನ್ನ ನೀರಾವರಿ ಪ್ರದೇಶವನ್ನು ಸಂರಕ್ಷಿಸಲು ಕಾಯ್ದೆ ಮಾಡಿದರೆ ಅದೇ ನೀರು ಹರಿದು ಹೋಗುವ ಇತರ ರಾಜ್ಯಗಳು ಏನು ಮಾಡಬೇಕು’ ಎಂದು ರಾಷ್ಟ್ರಪತಿಗಳು ತಿಳಿಯಬಯಸಿದರು. ಸುಗ್ರೀವಾಜ್ಞೆಯನ್ನು ಸಂವಿಧಾನ ಬಾಹಿರ ಎಂದು ಸುಪ್ರೀಂ ಕೋರ್ಟಿನ ಮೂವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಅಭಿಪ್ರಾಯಪಟ್ಟು ಸುಗ್ರೀವಾಜ್ಞೆಯನ್ನು ರದ್ದು ಮಾಡಿತು.

2002ರಲ್ಲಿ ಮತ್ತೆ ಇಂಥದೇ ಸ್ಥಿತಿ ನಿರ್ಮಾಣವಾಗಿತ್ತು. ಆಗ, ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದರು. ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಕಾವೇರಿ ನದಿ ನೀರು ಪ್ರಾಧಿಕಾರ ಸಭೆ ಸೇರಿ ತಮಿಳುನಾಡಿಗೆ 1.25 ಟಿಎಂಸಿ ಅಡಿ ನೀರು ಬಿಡಬೇಕು ಎಂದು ಸಲಹೆ ಮಾಡಿತು. ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯದ ಪ್ರತಿನಿಧಿ ಅದಕ್ಕೆ ಸಮ್ಮತಿಸಿದ್ದರು. ನಂತರ ರಾಜ್ಯದ ನಿಲುವು ಬದಲಾಯಿತು.

ನೀರು ಬಿಡುವುದಿಲ್ಲ ಎಂದು ಕರ್ನಾಟಕ ಪಟ್ಟು ಹಿಡಿಯಿತು. ಆಗಲೂ ಮುಖ್ಯಮಂತ್ರಿಯಾಗಿ ಜಯಲಲಿತಾ ಅವರೇ ಇದ್ದರು! ಅವರು ಕೃಷ್ಣ ಅವರು ಮಾತ್ರವಲ್ಲದೇ, ಆಗಿನ ಜಲಸಂಪನ್ಮೂಲ ಸಚಿವ ಎಚ್‌.ಕೆ.ಪಾಟೀಲ್‌, ಮುಖ್ಯ ಕಾರ್ಯದರ್ಶಿ ಡಾ.ಎ.ರವೀಂದ್ರ, ನೀರಾವರಿ ಕಾರ್ಯದರ್ಶಿ ಎಸ್‌.ಜೆ.ಚನ್ನಬಸಪ್ಪ ಅವರ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲು ಮಾಡಿದರು. ಇತ್ತ ಕೃಷ್ಣ ಅವರು, ಬೆಂಗಳೂರಿನಿಂದ ಕೃಷ್ಣರಾಜಸಾಗರಕ್ಕೆ ಪಾದಯಾತ್ರೆ ಹೊರಟರು.

ತಮ್ಮ ತವರು ಜಿಲ್ಲೆ ಮಂಡ್ಯದಲ್ಲಿ ‘ಶಾಂತಿ ಸ್ಥಾಪನೆಯ ಉದ್ದೇಶದಿಂದ’ ಅವರು ಪಾದಯಾತ್ರೆ ಹೊರಟಿದ್ದರೂ ಅದರ ಉದ್ದೇಶ ರಾಜಕೀಯವೇ ಆಗಿತ್ತು. ಆಗ ಕೃಷ್ಣರಾಜಸಾಗರ ಜಲಾಶಯದ ಮಟ್ಟ ಈಗಿನಷ್ಟು ಕೆಟ್ಟದಾಗಿರಲಿಲ್ಲ. 99 ಅಡಿ ನೀರು ಇತ್ತು. ನೀರು ಬಿಡುವುದಿಲ್ಲ ಎಂಬ ಸರ್ಕಾರದ ನಿರ್ಧಾರವನ್ನು ಮೆಚ್ಚಿಕೊಂಡ ಎಲ್ಲರೂ ಅಚ್ಚರಿ ಎನಿಸುವಂತೆ ಪಾದಯಾತ್ರೆಯನ್ನು ವಿರೋಧಿಸಿದರು. ಕೃಷ್ಣ ಹೀರೋ ಆಗಲು ಹೊರಟಿದ್ದಾರೆ ಎಂದು ಎಲ್ಲರಿಗೂ ಅಳುಕು ಇತ್ತೇನೋ?

ಕೃಷ್ಣ ಅವರ ಪಾದಯಾತ್ರೆ ಮಂಡ್ಯ ತಲುಪುವ ವೇಳೆಗೆ ಮಳೆ ಸುರಿಯತೊಡಗಿತು. ಇತ್ತ ಸುಪ್ರೀಂ ಕೋರ್ಟಿನಲ್ಲಿ ಜಯಾ ಹಾಕಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ಕುಣಿಕೆ ಬಿಗಿಯಾಗುವಂತೆಯೂ ಕಂಡಿತು. ಮಳೆಯ ಕಾರಣ ಜಲಾಶಯದ ಮಟ್ಟ 105 ಅಡಿಗೆ ಏರಿತು. ದೆಹಲಿಯಲ್ಲಿ ಕರ್ನಾಟಕದ ಪರ ವಾದಿಸುವ ವಕೀಲರು ಏನು ಹಿತವಚನ ಹೇಳಿದರೋ ಏನೋ? ಕೃಷ್ಣ ಅವರು ಮಂಡ್ಯದಲ್ಲಿ ಬೃಹತ್‌ ಸಭೆ ಮಾಡಿ ದಿಢೀರ್‌ ಎಂದು ಕಾವೇರಿಯಿಂದ  ನೀರು ಬಿಡಲು ತೀರ್ಮಾನಿಸಿದರು. ಬಂಗಾರಪ್ಪ ಮತ್ತು ಕೃಷ್ಣ ಅವರಿಬ್ಬರೂ ಹೆಚ್ಚೂ ಕಡಿಮೆ ಗೋಡೆಗೆ ತಲೆ ಗುದ್ದಲು ಹೋಗಿದ್ದರು. ಗುದ್ದಿದ್ದರೆ ತಲೆ ಒಡೆದು ಹೋಗುತ್ತಿತ್ತು ಎಂದೇ ಅರ್ಥ!

ಈಗ ಸಿದ್ದರಾಮಯ್ಯ ಅವರಿಗೆ, ನೀರು ಬಿಡಬೇಡಿ ಎಂದು ಹೇಳುವುದು ಸುಲಭ. ರಾಜೀನಾಮೆ ಕೊಡಿ ಎಂದು ಹೇಳುವುದು ಇನ್ನೂ ಸುಲಭ. ಜಲಸಂಪನ್ಮೂಲ ಸಚಿವರಿಗೆ, ‘ನಿನ್ನನ್ನು ಮಂತ್ರಿ ಮಾಡಿದ್ದು ಯಾರು’ ಎಂದು ಕೇಳುವುದೂ ಕಷ್ಟದ ಕೆಲಸವಲ್ಲ. ಸರಿ, ನೀರು ಬಿಡದೇ ಇದ್ದರೆ ಏನಾಗುತ್ತದೆ? ಸುಪ್ರೀಂ ಕೋರ್ಟು ಮಧ್ಯ ಪ್ರವೇಶಿಸುತ್ತದೆ. ಏಕೆಂದರೆ ಅದು ಸಂವಿಧಾನದ ಪ್ರಕಾರ ನೆಲದ ಕಾನೂನು ಕಾಪಾಡುವ ಅತಿ ಉನ್ನತ ಸಂಸ್ಥೆ.

ತಾನೇ ಮಾಡಿದ ಆದೇಶವನ್ನು ಒಂದು ರಾಜ್ಯ ಪಾಲನೆ ಮಾಡುವುದಿಲ್ಲ ಎಂದರೆ ಏನರ್ಥ ಎಂದು ರಾಜ್ಯ ಸರ್ಕಾರವನ್ನು ವಜಾ ಮಾಡಲು ಆದೇಶಿಸಬಹುದು. ಅಥವಾ ರಾಜ್ಯಪಾಲರ ಮೂಲಕ ತನ್ನ ಆದೇಶದ ಪಾಲನೆಗೆ ಸೂಚನೆ ನೀಡಬಹುದು. ಒಂದು ವೇಳೆ ಜನಾರ್ದನ ಪೂಜಾರಿ ಮತ್ತು ಎಚ್.ವಿಶ್ವನಾಥ್‌ ಅವರಂಥ ತಮ್ಮ ಪರಮ ಸ್ನೇಹಿತರು (?) ಕೇಳುತ್ತಾರೆ ಎಂದು ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೂ ಅವರ ಜಾಗದಲ್ಲಿ ಇನ್ನೊಬ್ಬರು ಬಂದು ಕುಳಿತರೂ ಅವರೂ ನೀರನ್ನು ಬಿಡಲೇಬೇಕು.

ಈ ಅನಿವಾರ್ಯತೆಯ ಬೆಳಕಿನಲ್ಲಿಯೇ ನಾವು ಮುಂದೆ ಏನು ಮಾಡಬೇಕು ಎಂದು ಯೋಚನೆ ಮಾಡಬೇಕು. ನಮ್ಮ ಹೋರಾಟ ಹೇಗೆ ರೂಪುಗೊಳ್ಳಬೇಕು ಎಂದೂ ಯೋಚಿಸಬೇಕು. ಈಗ ಕರ್ನಾಟಕದಲ್ಲಿ ಬಂದ್‌ಗೆ ಕರೆ ಕೊಡುವುದು ಅತ್ಯಂತ ಸುಲಭದ ಕೆಲಸ. ಯಾರಾದರೂ ಮೊದಲು ಬಂದ್‌ ಕರೆ ಕೊಟ್ಟಾರು ಎಂದು ಒಬ್ಬ ನಾಯಕರು ಎಲ್ಲರಿಗಿಂತ ಮೊದಲು ತಾವೇ ಬಂದ್‌ಗೆ ಕರೆ  ಕೊಟ್ಟು ಬಿಡುತ್ತಿದ್ದಾರೆ.

ಉಳಿದವರೂ ‘ಉಘೇ’, ‘ಉಘೇ’ ಎಂದು ಅದಕ್ಕೆ ಸೇರಿಕೊಳ್ಳುತ್ತಿದ್ದಾರೆ. ಸರಣಿ ಬಂದ್‌ಗಳಿಗೆ ಈಗ ಕರ್ನಾಟಕ ಇಡೀ ದೇಶದಲ್ಲಿ ಹೆಸರು ವಾಸಿ. ರಾಜ್ಯ ಸರ್ಕಾರಕ್ಕೂ ಇಂಥ ಬಂದ್‌ಗಳು ಬೇಕು ಎಂದು ಅನಿಸಿರಬೇಕು. ಇಲ್ಲವಾದರೆ ಅದು ಪರೋಕ್ಷವಾಗಿ ಬಂದ್‌ಗೆ ಬೆಂಬಲ ಕೊಡುತ್ತಿರಲಿಲ್ಲ. ಅಥವಾ ಅದು ಒಂದು ರಾಜಕೀಯ ತಂತ್ರಗಾರಿಕೆಯೂ ಆಗಿರಬಹುದು.

ಆ ಮೂಲಕವಾದರೂ ರಾಜ್ಯದ ಕೆಲವರ ಸಿಟ್ಟು ತಣ್ಣಗಾಗಲಿ ಎಂದು ಸರ್ಕಾರ ಲೆಕ್ಕ ಹಾಕುತ್ತ ಇರಬಹುದು. ಆದರೆ, ಬಂದ್‌ ಮೂಲಕ ನಾವು ಸುಪ್ರೀಂ ಕೋರ್ಟಿನ ಆದೇಶವನ್ನು ಬದಲಿಸಲು ಸಾಧ್ಯವೇ? ಅಥವಾ ಸುಪ್ರೀಂ ಕೋರ್ಟಿನ ಮೇಲೆ ಪ್ರಭಾವ ಬೀರಲು ಸಾಧ್ಯವೇ? ನಮ್ಮ ಪ್ರತಿಭಟನಾ ವಿಧಾನಗಳು ಹಾಸ್ಯಾಸ್ಪದವಾಗಿವೆ, ರೂಕ್ಷವಾಗಿವೆ ಮತ್ತು ಶೋಚನೀಯವಾಗಿವೆ. ಬಹುಶಃ ದೃಶ್ಯ ಮಾಧ್ಯಮಗಳಿಗೆ ಇದು ರಂಜನೀಯವಾಗಿ, ಮಾರಾಟದ ಸರಕಾಗಿ ಕಾಣುತ್ತ ಇರಬಹುದು. ಅವರೇ ಹೋರಾಟದ ‘ವಿಧಾನ’ವನ್ನು ನಿರ್ದೇಶಿಸುವ ಹಾಗೂ ಕಾಣುತ್ತದೆ.

ತಲೆ ಬೋಳಿಸಿಕೊಳ್ಳುವುದು, ರಾಜಕೀಯ ನಾಯಕರ ‘ತಿಥಿ’ ಮಾಡುವುದು, ಅವರ ಭಾವಚಿತ್ರಗಳಿಗೆ ಚಪ್ಪಲಿಯಿಂದ ಹೊಡೆಯುವುದು, ಟೈರ್‌ ಸುಡುವುದು ಇತ್ಯಾದಿಯೆಲ್ಲ ಟೀವಿ ಕ್ಯಾಮೆರಾಗಳ ಮುಂದಿನ ಪ್ರಹಸನದಂತೆ ಕಾಣುತ್ತದೆ. ಕ್ಯಾಮೆರಾಗಳು ಚಿತ್ರೀಕರಿಸಿಕೊಳ್ಳುತ್ತ ಇರುವವರೆಗೆ ಜನರು ಏನು ಬೇಕಾದರೂ ಮಾಡಲು ಸಿದ್ಧರಿರುವಂತೆ ತೋರುತ್ತದೆ. ಕೊನೆಗೆ ನದಿಗೆ ಹಾರಿ ಸಾಯಲೂ ಅವರು ಅಂಜುವುದಿಲ್ಲ.

ಒಂದು ವೇಳೆ ಟೀವಿ ವಾಹಿನಿಗಳು ಇದನ್ನೆಲ್ಲ ತೋರಿಸುವುದಿಲ್ಲ ಎಂದು ತೀರ್ಮಾನಿಸಿದರೆ ನಮ್ಮ ಹೋರಾಟಗಾರರು ಪಾಪ ಅನಾಥರಾಗಿ ಬಿಡಬಹುದು ಎಂದು ಚಿಂತೆಯಾಗುತ್ತದೆ! ಕಾವೇರಿ ನೀರಿನ ನೆಪದಲ್ಲಿ ಚಳವಳಿಯನ್ನು ರೈತರಲ್ಲದ, ರೈತರ ಮಕ್ಕಳೂ ಅಲ್ಲದ ಯಾರೋ ಹೈಜಾಕ್‌ ಮಾಡಿದಂತೆ ಭಾಸವಾಗುತ್ತಿದೆ. ಈ ಚಳವಳಿ ರೂಕ್ಷ ಮಾತ್ರ  ಆಗಿಲ್ಲ. ಕ್ರೂರವೂ ಆಗಿದೆ.

ಮಹಾದಾಯಿ ಚಳವಳಿಯ ಸಮಯದಲ್ಲಿ ಧಾರವಾಡದ ಪೇಟೆಗೆ ಬಂದ ರೈತನ ಬದನೆಕಾಯಿಯನ್ನು ಬೀದಿಗೆ ಚೆಲ್ಲಿ ತಮ್ಮ ಪೌರುಷ ಮೆರೆದಿದ್ದ ಹೋರಾಟಗಾರರು ಈ ಸಾರಿ ಮಂಡ್ಯದ ಬೀದಿಯಲ್ಲಿ ಆಲೂಗೆಡ್ಡೆಯ ಬುಟ್ಟಿಯನ್ನು ರಸ್ತೆಗೆ ಬಿಸಾಕಿದರು. ಇವರು ರೈತರು ಆಗಿರಲಾರರು. ರೈತರ ಮಕ್ಕಳೂ ಆಗಿರಲಾರರು. ಚಳವಳಿ ಎನ್ನುವುದು ಪುಂಡರ ಕೈಗೆ, ಗೂಂಡಾಗಳ ಕೈಗೆ ಹೋಗಬಾರದು.

ಬೆಂಗಳೂರು–ಮೈಸೂರು ರಸ್ತೆಯನ್ನು ಎಷ್ಟು ದಿನವೆಂದು ಮಂಡ್ಯದ ಜನರು ಬಂದ್‌ ಮಾಡುತ್ತಾರೆ? ಹಾಗೆ ಬಂದ್‌ ಮಾಡಿ ತಮಿಳುನಾಡಿಗೆ ನೀರು ಹರಿಯುವುದನ್ನು ತಡೆಯಲು ಸಾಧ್ಯವೇ? ತಮ್ಮ ಹೊಲದಲ್ಲಿ ಬೆಳೆದ ತರಕಾರಿಯನ್ನು ನಿತ್ಯ ಮಾರುಕಟ್ಟೆಗೆ ತಂದು ಮಾರಿ ಹೊಟ್ಟೆ ಹೊರೆಯುವ ಅದೇ ಜಿಲ್ಲೆಯ ರೈತರಿಗೂ ಬಂದ್‌ನ ಬಿಸಿ ತಟ್ಟುತ್ತದಲ್ಲ? ಈಗಾಗಲೇ ತಟ್ಟಿರಬೇಕಲ್ಲ?

ರಾಜ್ಯದಲ್ಲಿ ಈಚಿನ ದಿನಗಳಲ್ಲಿ ಇದು ಐದನೇ ಬಂದ್‌. ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ನಿತ್ಯ ₹1,600 ಕೋಟಿಯಿಂದ ₹1,700 ಕೋಟಿವರೆಗೆ ವಹಿವಾಟು ನಡೆಯುತ್ತದೆ. ಇದರಿಂದ ತೆರಿಗೆ ರೂಪದಲ್ಲಿ ಸರ್ಕಾರದ ಬೊಕ್ಕಸಕ್ಕೆ ₹160 ಕೋಟಿಯಿಂದ ₹170 ಕೋಟಿ ಸಂದಾಯವಾಗುತ್ತದೆ. ಕಳೆದ ಐದು ಬಂದ್‌ಗಳಲ್ಲಿ ನಾವು ಕಳೆದುಕೊಂಡ  ಹಣ ಎಷ್ಟು ಎಂದು ಈಗ ಯಾರಾದರೂ ಲೆಕ್ಕ ಹಾಕಬಹುದು. ಕನ್ನಡ ಚಳವಳಿಗಾರರು ಬೇಕಾದರೆ ಒಂದು ತಿಂಗಳು ರಾಜ್ಯ ಬಂದ್‌ ಕರೆ ಕೊಡಬಹುದು.

ಸರ್ಕಾರವೂ ತೆಪ್ಪಗೆ ಇರುತ್ತದೆ ಎಂದು ಜನರೂ ಮೌನವಾಗಿ ಬಂದ್‌ನಲ್ಲಿ ಭಾಗವಹಿಸ ಬಹುದು. ಆದರೂ ಕಾವೇರಿ ನೀರನ್ನು ತಡೆದು ಇಟ್ಟುಕೊಳ್ಳಲು ಆಗುವುದಿಲ್ಲ. ಅಂದರೆ, ನಾವು ರಾಜ್ಯದ ಮಂದಿ ಎಂಥ ನಿರರ್ಥಕವಾದ ಹೋರಾಟದಲ್ಲಿ ತೊಡಗಿದ್ದೇವೆ ಎಂದು ಅರ್ಥ ಮಾಡಿಕೊಳ್ಳಬಹುದು. ಇದು ಒಂದು ರೀತಿ ನಮ್ಮನ್ನೇ ಎಲ್ಲೆಂದರಲ್ಲಿ ಇರಿದುಕೊಂಡು ಗಾಯ ಮಾಡಿಕೊಂಡಂತೆ.

ಹಾಗಾದರೆ ರಸ್ತೆಯ ಕೊನೆಗೆ ಉತ್ತರವೇ ಇಲ್ಲವೇ? ಎಲ್ಲ ಪ್ರಶ್ನೆಗಳಿಗೂ ಉತ್ತರ ಇದ್ದೇ ಇರುತ್ತದೆ. ನಮ್ಮ ಎಲ್ಲ ಸಮಸ್ಯೆಗಳಿಗೆ ಸುಪ್ರೀಂ ಕೋರ್ಟು ಉತ್ತರವಲ್ಲ ಎಂದು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳೆರಡೂ ತಿಳಿದುಕೊಳ್ಳಬೇಕು. ಕಳೆದ 26 ವರ್ಷಗಳಲ್ಲಿ ಪ್ರಧಾನಿ ನೇತೃತ್ವದ ಕಾವೇರಿ ನದಿ ನೀರು ಪ್ರಾಧಿಕಾರ ಎರಡೇ ಸಾರಿ ಸಭೆ ಸೇರಿದೆ.

ಒಂದು ಸಾರಿ, ವಾಜಪೇಯಿ ನೇತೃತ್ವದಲ್ಲಿ, ಇನ್ನೊಂದು ಸಾರಿ, 2012ರಲ್ಲಿ, ಮನಮೋಹನ್‌ ಸಿಂಗ್‌ ನೇತೃತ್ವದಲ್ಲಿ. ನಿತ್ಯ 9,000 ಕ್ಯುಸೆಕ್‌ ನೀರು ಬಿಡಬೇಕು ಎಂದು ಸಿಂಗ್‌ ನೇತೃತ್ವದಲ್ಲಿ ಸಭೆ ಸೇರಿದ್ದ  ಪ್ರಾಧಿಕಾರ ರಾಜ್ಯಕ್ಕೆ ಸೂಚನೆ ನೀಡಿತ್ತು. ರಾಜ್ಯದಲ್ಲಿ ಆಗ ಜಗದೀಶ್‌ ಶೆಟ್ಟರ್‌ ಅವರು ಮುಖ್ಯಮಂತ್ರಿಯಾಗಿದ್ದರು. ಅವರು ನೀರು ಬಿಡಲು ಒಪ್ಪಲಿಲ್ಲ. ಜಯಲಲಿತಾ ಮತ್ತೆ ಸುಪ್ರೀಂ ಕೋರ್ಟಿನ ಮೆಟ್ಟಿಲು ಏರಿದರು.

‘ನೀರು ಬಿಡಬೇಕು, ಪ್ರಧಾನಿಯ ಸೂಚನೆಯನ್ನು ಗೌರವಿಸಬೇಕು’ ಎಂಬ ಆದೇಶ ಕೋರ್ಟಿನಿಂದ ಬಂತು. ನೀರು ಬಿಡಲೇಬೇಕಾಯಿತು. ಅಂದರೆ, ರಾಜಕೀಯದ ಕೆಸರಿನಿಂದ ಹೊರಗೆ ನಿಂತು ಯೋಚಿಸಲು ಯಾವ ಪಕ್ಷಕ್ಕೂ ಸಾಧ್ಯವಾಗುತ್ತಿಲ್ಲ. ವಾಜಪೇಯಿ ನೇತೃತ್ವದ ಪ್ರಾಧಿಕಾರದ ಆದೇಶವನ್ನು ಕೃಷ್ಣ ಸರ್ಕಾರ ಪಾಲಿಸಲಿಲ್ಲ. ಮನಮೋಹನ್‌ಸಿಂಗ್‌ ನೇತೃತ್ವದ ಪ್ರಾಧಿಕಾರದ ಆದೇಶವನ್ನು ಶೆಟ್ಟರ್‌ ಸರ್ಕಾರ ಪಾಲಿಸಲಿಲ್ಲ.

ಇದು ನ್ಯಾಯಾಲಯ ತೀರ್ಮಾನಿಸುವ ಸಂಗತಿಯಲ್ಲ. ನೀರಾವರಿ ತಜ್ಞರು, ಕೃಷಿ ತಜ್ಞರು ಸೇರಿಕೊಂಡು ರಚಿತವಾದ ಒಂದು ನಿಷ್ಪಕ್ಷ, ಕಾವೇರಿ ನದಿ ಹರಿವಿಗೆ ಸೇರದ ರಾಜ್ಯಗಳ ತಜ್ಞರ ತಂಡ ತೀರ್ಮಾನಿಸಬೇಕಾದ ಸಂಗತಿ ಎಂದು ಕಳೆದ 26 ವರ್ಷಗಳಲ್ಲಿ ಕಂಡುಕೊಳ್ಳಲು ನಮಗೆ ಆಗಿಲ್ಲ. ಅಂಥ ಒಂದು ತಂಡವೇ ಅಸ್ತಿತ್ವದಲ್ಲಿ ಇಲ್ಲದೆ ಇರುವುದು ನಾಯಕತ್ವದ ದಿವಾಳಿಕೋರತನವನ್ನು ಅಥವಾ ರಾಜಕಾರಣದ ಖದೀಮತನವನ್ನು ತೋರಿಸುತ್ತಿರಬಹುದು! ನೈಜ ಪರಿಹಾರ ಯಾರಿಗೂ ಬೇಕಿರುವುದೇ ಇಲ್ಲವೇನೋ? ಪರಿಹಾರ ಸಿಕ್ಕರೆ ರಾಜಕೀಯ ಮಾಡಲು ಅವಕಾಶವೇ ಇರುವುದಿಲ್ಲವಲ್ಲ?

ರಾಜಕಾರಣದಿಂದ ಇದಕ್ಕೆಲ್ಲ ಪರಿಹಾರ ಸಿಗುತ್ತದೆ ಎಂದು ಯಾರೂ ಅಂದುಕೊಳ್ಳಬಾರದು. ಈಗ ನಡೆದಿರುವ ಚಳವಳಿಯ ರೀತಿಯಿಂದಲಂತೂ ಪರಿಹಾರ ಸಿಗುವುದು ಖಂಡಿತ ಸಾಧ್ಯವಿಲ್ಲ. ಮಂಡ್ಯದ ರೈತರು ದಡ್ಡರೇನೂ ಅಲ್ಲ. ಅವರು ಇಷ್ಟು ದಿನ ಕೃಷಿ ಮಾಡಿದ್ದಾರೆ. ಭತ್ತ ಬೆಳೆದಿದ್ದಾರೆ, ಕಬ್ಬು ಬಿತ್ತಿದ್ದಾರೆ.

ಒಂದಿಷ್ಟು ಹಣವನ್ನೂ ಮಾಡಿರಬಹುದು. ಆದರೆ, ಅಲ್ಲಿಯೇ ಹೆಚ್ಚು ರೈತರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ? ಒಂದೋ ಕೃಷಿ ಪದ್ಧತಿಯಲ್ಲಿಯಾದರೂ ತಪ್ಪು ಇರಬೇಕು, ಇಲ್ಲವೇ ಜೀವನ ಶೈಲಿಯಲ್ಲಿಯಾದರೂ ದೋಷ ಇರಬೇಕು. ಅಥವಾ ಎರಡರಲ್ಲಿಯೂ ಸಮಸ್ಯೆ ಇರಬಹುದು. ಕಡಿಮೆ ನೀರಿನಲ್ಲಿ ಮತ್ತು ಕಡಿಮೆ ವೆಚ್ಚದಲ್ಲಿ ಕೃಷಿ ಮಾಡಲು ಅವರು ಕಲಿಯದಿದ್ದರೆ ಅವರ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಅನಿಸುವುದಿಲ್ಲ.

ಇತ್ತ ಬೆಂಗಳೂರಿನ ಜನರು ಕಾವೇರಿ ತಮ್ಮ ತಾತನ ಆಸ್ತಿ ಎನ್ನುವಂತೆ ನೀರು ಚೆಲ್ಲುತ್ತ ಇದ್ದರೆ ಬಹುಕಾಲ ನಡೆಯುವುದಿಲ್ಲ ಎಂದು ತಿಳಿದುಕೊಳ್ಳಬೇಕು. ಬೆಂಗಳೂರಿನ ತಲೆಯ ಮೇಲೆ ಪ್ರತಿವರ್ಷ ಒಂದು ಕಾವೇರಿ ಬೀಳುತ್ತದೆ ಎಂದು ಲೆಕ್ಕ ಹಾಕಿದ್ದಾರೆ. ಆದರೆ, ನಾವು ನಮ್ಮ ಮಾಳಿಗೆಯ ಮೇಲೆ ಬಿದ್ದ ನೀರನ್ನು ಸಂಗ್ರಹಿಸಿ ಬಳಸಿಕೊಳ್ಳುತ್ತಿಲ್ಲ. ನಲ್ಲಿಯಲ್ಲಿ ಹರಿದು ಬರುವ ನೀರನ್ನು ಮಿತವಾಗಿಯೂ ಬಳಸಿಕೊಳ್ಳುತ್ತಿಲ್ಲ. ಎಲ್ಲ ಕಾಲವೂ ಹೀಗೆಯೇ ಇರುವುದಿಲ್ಲ. ಮುಂದೆ ಬರುವ ಕಾಲ ದುಷ್ಕಾಲವೇ ಆಗಿರಬಹುದು. ಅದು ರಸ್ತೆಯ ಕೊನೆಯೂ ಆಗಿರಬಹುದು! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT