ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮಲ್ಲೇ ಒಳ್ಳೆ ಕಥೆಗಳಿವೆಯಲ್ಲಾ!

ಅಕ್ಷರ ಗಾತ್ರ

ಪ್ರಖ್ಯಾತ ಸಿನಿಮಾ ಸಾಹಿತಿಗಳಾದ ಸಾಹಿತ್ಯರಾಜ್‌ ಅವರು ಪೆಕರನನ್ನು ಹುಡುಕಿಕೊಂಡು ಓಡೋಡಿ ಬಂದಿದ್ದರು. ದಮ್ಮು ಕಟ್ಟಿಕೊಂಡು ದೌಡಾಯಿಸಿ ಬಂದದ್ದರಿಂದ ಏದುಸಿರು ಬಿಡುತ್ತಿದ್ದರು.

‘ಏನ್ರೀ ಸಾಹಿತಿಗಳೇ, ಹೀಗೆ ಓಡಿ ಬಂದಿದ್ದೀರಿ?! ಸೆಂಟ್ರಲ್‌ ಕಾಲೇಜು ಮೈದಾನದಿಂದ ಡೈರೆಕ್ಟಾಗಿ  ಬಂದಂತೆ ಕಾಣ್ತಾ ಇದೆ’ ಎಂದು ಪೆಕರ ಪ್ರಶ್ನಿಸಿದ.

‘ಕನ್ನಡದಲ್ಲಿ ನೂರಾರು ಸ್ಟೋರಿಗಳಿರುವಾಗ ಡಬ್ಬಿಂಗ್‌ ಯಾಕ್ಸಾರ್‌?’
‘ಸಡನ್ನಾಗಿ ಬಂದು ಈ ರೀತಿ ಬೇತಾಳನ ಕತೆಗಳ ಕೊನೆ­ಯಲ್ಲಿ ಬೇತಾಳನು ಕೇಳುವ ಪ್ರಶ್ನೆಯ ರೀತಿಯಲ್ಲಿ ಕೇಳಿದರೆ ಹೇಗಪ್ಪಾ ಹೇಳಲಿ? ವಾಟ್‌ ಈಸ್‌ ಯುವರ್‌ ಪ್ರಾಬ್ಲಂ ಅದನ್ನು ಮೊದಲು ಹೇಳಿ’ ಎಂದು ಪೆಕರ ಕೇಳಿದ.

‘ನನ್ನತ್ರ ನೂರಾರು ಒರಿಜನಲ್‌ ಕತೆಗಳಿರುವಾಗ ಡಬ್ಬಿಂಗ್‌ ಏಕೆ ಎನ್ನುವುದು ನನ್ನ ಮೂಲಭೂತ ಪ್ರಶ್ನೆ ಸಾರ್‌. ಸಖತ್‌ ಹಿಟ್‌ ಸ್ಟೋರಿ ಕೊಡ್ತೀನಿ ಬನ್ನಿ ಅಂದ್ರೆ ಒಬ್ಬ ನಿರ್ಮಾಪಕನೂ ಕ್ಯಾರೇ ಅಂತಾ ಇಲ್ಲ. ಯಾವುದಾದರೂ ರೀಮೇಕ್‌ ಸಬ್ಜೆಕ್‌್ಟ ಇದ್ರೆ ಹೇಳಿ ಅಂತಾರೆ. ಐದಾರು ಸಿ.ಡಿ. ಕೊಡ್ತೀವಿ ಎಲ್ಲಾನೂ ನೋಡಿ, ಒಂದು ಸೂಪರ್‌ ಡೂಪರ್‌ ಕತೆ ಬರೆದುಕೊಡಿ, ಸಂತೆ ಹೊತ್ಗೆ ಮೂರು ಮೊಳ ನೇಯ್ದು ಕೊಡಿ ಎಂದು ಕೇಳ್ತಾರೆ. ನನ್ನ ಕತೆ ಕೇಳೋದಕ್ಕೆ ಯಾರೂ ರೆಡಿನೇ ಇಲ್ಲಾ ಸಾರ್‌, ನಾನು ಸ್ಕೈ ಡೈವಿಂಗ್‌ ಮಾಡಿ ಸಾಯೋಣ ಅಂತಿದ್ದೀನಿ’ ಎಂದು ಸಿನಿಮಾ ಸಾಹ್ತಿಗಳು ಒಂದೇ ಸಮನೆ ರೋದಿಸಿದರು.

ಡಬ್ಬಿಂಗ್‌ ಬಂದ್ರೆ ಸುಮ್ನೆ ಬಿಡಲ್ಲ
ಅಂತ ಗುರಾಯಿಸಿದ್ರು ಶಿವಣ್ಣ
ಏನಾದ್ರೂ ಮಾಡ್ಕಳಿ ಅಂದ್ರು ಅಂಬರೀಷಣ್ಣ
ಇಂಥ ಸಮಯದಲ್ಲಿ
ಇರಬೇಕಿತ್ತು ನಮ್ಮ ರಾಜಣ್ಣ
‘ಇಂಡಸ್ಟ್ರಿಯವರು ಕತೆ ಕೇಳಲು ರೆಡಿ ಇಲ್ಲದಿದ್ದರೆ ಏನಂತೆ, ನಾನಿದ್ದೀನಲ್ಲಾ? ಏನಂಥಾ ಸೂಪರ್‌ ಕತೆಗಳನ್ನು ನೇಯ್ದಿ­ದ್ದೀರಾ, ಹಾಗೇ ಸ್ವಲ್ಪ ಸ್ಯಾಂಪಲ್‌ ಬಿಡಿ ನೋಡೋಣ’– ಎಂದು ಪೆಕರ ಸಿನಿಮಾ ಸಾಹ್ತಿಗಳಿಗೆ ಸಮಾಧಾನ ಮಾಡಲು ಯತ್ನಿಸಿದ.

‘ಒಂದು ಊರು, ಗಾಂಧಿನಗರ್‌ ಅಂತ ಆ ಊರಿನ ಹೆಸರು. ಅಲ್ಲೊಂದು ಶಾಲೆ. ನೂರಾಹತ್ತು ವರ್ಷಗಳ ಇತಿಹಾಸವಿರುವ ಶಾಲೆ ಅದು. ಆ ಜಾಗದ ಬೆಲೆಯೇ ಐನೂರು ಕೋಟಿ ರೂಪಾಯಿಗೂ ಹೆಚ್ಚು ಎನ್ನುವುದು ಬ್ರೇಕಿಂಗ್‌ ಪಾಯಿಂಟ್‌, ಎಲ್ಲ ಹುಡುಗರೂ ಬಿಸಿಯೂಟ ಮಾಡಿಕೊಂಡು ಹಾಯಾ­ಗಿದ್ರು. ಅಂತಹ ಸಮಯದಲ್ಲಿ ಶುಂಭ–ನಿಶುಂಭ ಎಂಬ ಇಬ್ಬರು ದಾಂಢಿಗರು ಅಲ್ಲಿಗೆ ಎಂಟ್ರಿ ಕೊಡ್ತಾರೆ. ಈ ಶಾಲೆಗೆ ನಾವೇ ಅಧ್ಯಕ್ಷರು ಎನ್ನಲಾರಂಭಿಸುತ್ತಾರೆ. ಹಿನ್ನೆಲೆಯಲ್ಲಿ ಆಸ್ಫೋಟ. ಇಲ್ಲಿಗೆ ಇಂಟರ್‌ವಲ್‌ ಮಾಡಬಹುದು ಸಾರ್‌... ಜನ ಮುಂದೇನು ಅಂತ ತುದಿ ಕುರ್ಚಿಯಲ್ಲಿ ಕುಳಿತಿರ್‍ತಾರೆ’.

‘ಇಂಟರ್‌ವಲ್‌ ಆದ ಕೂಡಲೇ, ಗ್ರಾನೈಟ್‌ಕ್ವಾರಿ ಅಕ್ರಮ­ವನ್ನು ಸೇರಿಸಿ ಬ್ಲ್ಯಾಸ್‌್ಟ ಸೀನ್‌ ಸೇರಿಸಿದರೆ ಒಳ್ಳೆ ಗರಂಮಸಾಲೆ ಆಗುತ್ತೆ. 143 ಪ್ರಕರಣಗಳ ವೀರಾಧಿವೀರ ಎಂದು ಟೈಟಲ್‌ ಇಡಬಹುದು ಸಾರ್...’

‘ರೀ ಸ್ವಾಮಿ, ಹೋಲ್ಡಾನ್‌, ಈ ಕತೆಗೆ ಧಾರವಾಡದ ದೊಡ್ಡಮಠ ಅವರೇ ಸ್ಫೂರ್ತಿ ಅಂತ ಕಾಣುತ್ತೆ. ಕತೆ ಕೇಳಿದ್ರೆ ಡಿಕುಶಿಮಾರ ಮತ್ತು ಡಿಕುಸರಮಾರರ ಕತೆ ಇದ್ದಂತಿದೆ. ಸೀರಿ­ಯಸ್ಸಾಗಿ ಕತೆ ಬರೆದುಬಿಟ್ರೆ ಹೇಗೆ, ಸಿನಿಮಾ ಅಂದ ಮೇಲೆ ಸ್ವಲ್ಪ ಕಾಮಿಡಿನೂ ಇರಬೇಕಲ್ವೇ?’– ಪೆಕರ ತನಗೆ ಗೊತ್ತಿದ್ದನ್ನು ಹೇಳಿದ.

ಕಾಮಿಡಿಯನ್ನು ತಂದಿದ್ದೀನಿ ಸಾರ್‌. ಖ್ಯಾತ ಕಾಮಿಡಿ ಸ್ಟಾರ್‌ ಶಿರಾದ ವಿಕ್ಟರಿಚಂದ್ರ ಅವರಿಗೆ ಒಂದು ರೋಲ್‌ ಇದೆ. ಅವರಿಗೆ ಒಂದು ಸಾಂಗೂ ಇದೆ.

11ನೇ ಶತಮಾನದ ಯುವಕರೇ
ಬನ್ನಿ ದೇಶವ ತೊರೆಯೋಣ
ಕನ್ನಡವನ್ನು ಅಳಿಸೋಣ
ಜನಸೇವೆಗೆ ಬೈ ಎನ್ನೋಣ
5 ವರ್ಷ ನಿದ್ದೆಯ ಮಾಡೋಣ
‘ಈ ಹಾಡು ಲೂಸ್‌ಮಾದನ ಡಬ್ಬಾ ಸಾಂಗ್‌ಗಿಂತ ಹೆಚ್ಚು ಕ್ಲಿಕ್‌ ಆಗುತ್ತೆ ಸಾರ್‌, ಈ ವರ್ಷದ ಸೂಪರ್‌ ಡೂಪರ್‌ ಹಿಟ್‌ ಸಾಂಗು ಅಂದ್ರೆ ಇದೇ ಅಂತ ಚಮಚಾಗಳೆಲ್ಲಾ ಚಪ್ಪಾಳೆ ತಟ್ಟಿ ಅಭಿನಂದಿಸ್ತಾರೆ ಸಾರ್‌’ ಎಂದು ಸಾಹ್ತಿಗಳು ಬಡಾಯಿ ಕೊಚ್ಚಿದರು.

‘ಅಲ್ರೀ ಸಾಹ್ತಿಗಳೇ ಹನ್ನೊಂದನೇ ಶತಮಾನದ ಹಾಡನ್ನು ಈ ಶತಮಾನದಲ್ಲಿ ಹಾಡಿದ್ರೆ ಹೇಗೆ? ಅಸಂಗತ, ಅಸಂಬದ್ಧ ಹಾಡನ್ನೆಲ್ಲಾ ಬರ್‍್ದು ಸೂಪರ್‌ ಅಂತ ನಿಮ್ಮ ಬೆನ್ನನ್ನು ನೀವೇ ತಟ್ಕೋತಾ ಇದ್ದೀರಾ, ಮಾತೂ ಆಡ್ಬೇಕು, ಮೀನಿಂಗೂ ಇರ್‍್ಬಾರ್ದು ಅನ್ನೋತರ ಆಯ್ತು ನಿಮ್ಮ ಕತೆ’–ಎಂದು ಪೆಕರ ದಬಾಯಿಸಿದ.

‘ಅಸಂಗತ ಹೇಗೆ ಆಗುತ್ತೆ ಸಾರ್‌? ನಮ್ಮ ನಾಯಕರು ಈಗ 11ನೇ ಶತಮಾನ ಅಂದ್ರೆ ಅದು ನಿಜವಾಗುತ್ತೆ. ಅವರು ಹೇಳಿದ ಮೇಲೆ ಸುಳ್ಳಾಗಲು ಹೇಗೆ ಸಾಧ್ಯ? ಸರಿ, ಮುಂದೆ ನೋಡಿ ಸಾರ್‌ ಕತೆ ಹೇಗೆ ಓಡುತ್ತೇ ಅಂತ. ಸಡನ್ನಾಗಿ ಚುನಾವಣೆ ಬಂದೇ ಬಿಡುತ್ತೆ. ಅಯ್ಯ ಅವರಿಗೆ ಭಿನ್ನರ ಕಾಟ ಶುರುವಾಗುತ್ತೆ. ಅತೃಪ್ತರ ಸಂಖ್ಯೆ ಜಾಸ್ತಿಯಾಗುತ್ತೆ. ಕ್ಲೈಮ್ಯಾಕ್‌್ಸನಲ್ಲಿ ಸೀಟು ಅದುರೋ ಹಾಗೆ ಒಂದು ಸೀನ್‌ ಇಟ್ಟುಬಿಡ್ತೀನಿ. ಕೊನೆ ಕೊನೆಗೆ ಸೀರಿಯಸ್ಸಾಯ್ತು ಅಂದ್ರೆ ಇನ್ನೊಂದು ಕಾಮಿಡಿ ಸೀನ್‌ ಸೇರಿಸಬಹುದು. ಅದೂ ಸೂಪರ್‌ ಆಗಿದೆ ಕೇಳಿ ಸಾರ್‌’.

ಹಾಸ್ಯನಟ ಭಯಂಕರ ರಪ್ಪ ಅವರಿಗೆ ಇಲ್ಲಿ ಒಂದು ಒಳ್ಳೆ ಚಾನ್‌್ಸ ಇದೆ. ರಪ್ಪ ಅವರ ಜೊತೆಗಾರರಾದ ಮಾರ­ಸ್ವಾಮಿಗಳು, ಡಿಕುಶಿಮಾರರು, ಬೇಗ ಊಟ ಮಾಡುವುದ­ರಲ್ಲಿ, ಟೀ ಕುಡಿಯುವುದರಲ್ಲಿ ನಿಸ್ಸೀಮರು. ಆದರೆ ರಪ್ಪ ಅವರಿಗೆ ಸರಿಯಾಗಿ ಟೀ ಕುಡಿಯಲೂಬಾರದು.

ಮಾರಸ್ವಾಮಿಗಳು, ಡಿಕುಶಿಮಾರರು ತಟ್ಟೆಯಲ್ಲಿರುವು­ದನ್ನು ಒಂದು ಚೂರೂ ಬಿಡದೆ ನಾಜೂಕಾಗಿ ತಿಂದು ಏನೂ ಆಗದವರಂತೆ ಇದ್ದು ಬಿಡ್ತಾರೆ. ಆದರೆ ರಪ್ಪ ಅವರಿಗೆ ತಿನ್ನುವುದು ಗೊತ್ತಿಲ್ಲದ ಕಾರಣ ಎಲ್ಲವನ್ನೂ ಅಂಗಿಯ ಮೇಲೆ ಚೆಲ್ಲಿಕೊಂಡು ಬಿಡ್ತಾರೆ! ಚಾರ್ಲಿ ಚಾಪ್ಲಿನ್‌ಗೂ ಮಿಗಿಲು, ಆಗ ಒಂದು ಸಾಂಗ್‌ ಬರುತ್ತೆ:

ಕೊಟ್ಟ ತಿಂಡಿಯನು
ತಿನ್ನಲರಿಯದವನು
ರಾಜಕಾರಣಿಯೇ ಅಲ್ಲ.
ಕಂಡ ಕಂಡದ್ದನ್ನು
ನುಂಗಲು ಕಲಿತವನು
ಪ್ರಚಂಡ ಪುಢಾರಿ ಆದಾನು
ನೋಡಾ ಹರ ಹರ ಪೆಕರೇಶ್ವರ
‘ಇಂಥಾ ಕತೆ ತೆಗೆಯಲು ನಿರ್ಮಾಪಕರಿಗೆ ದಮ್‌ ಇರ­ಬೇಕು ಸಾರ್‌, ಆದ್ರೆ ಯಾರೂ ಬೇಡಾ ಅಂತಿದ್ದಾರೆ. ಈ ಕಥೆ ಬೇಡಾ ಬಿಡಿ ಸಾರ್‌, ಇನ್ನೊಂದು ಕಥೆ ಇದೆ ಕೇಳ್ತೀರಾ ಸಾರ್‌?’

‘ನಿಮ್ಮತ್ರ ತಲೆ ಕೊಟ್ಟು ಸಿಕ್ಕಿಹಾಕಿಕೊಂಡಿದ್ದೇನೆ. ಅದನ್ನು ಹೇಳಿ ಬಿಟ್ಟು ತೊಲಗುವಂತವರಾಗಿ’ ಎಂದು ಪೆಕರ ಅಸಹನೆ ವ್ಯಕ್ತಪಡಿಸಿದ.
‘ಇದು ಮಲ್ಟಿ ಸ್ಟಾರ್‌ಗಳಿರುವ ಕತೆ, ಇದನ್ನೇನಾದರೂ ಪಿಕ್ಚರ್‌ ಮಾಡ್ಬಿಟ್ರೆ ಶೋಲೆಗಿಂತ ಜೋರಾಗಿ ಓಡುತ್ತೆ. ಹ್ಯಾಟ್ರಿಕ್‌ ಸ್ಟಾರ್‌, ಪವರ್‌ ಸ್ಟಾರ್‌, ಡೈನಮಿಕ್‌ ಸ್ಟಾರ್‌, ಹುಚ್‌ಕಿಚ್‌ ಸ್ಟಾರ್‌ ಮೊದಲಾದವರೆಲ್ಲ ಒಟ್ಟಾಗಿ ಕಾಣಿಸಿಕೊಂಡರೆ ಅದರ ಖದರ್‌ ಬೇರೆ. ಇಂಡಿಯಾದಲ್ಲೇ ಯಾರೂ ಈ ಕತೆ ಮಾಡಿಲ್ಲ’.

‘ಈ ರೀತಿ ರೀಲ್‌ ಬಿಟ್ಟೇ ಸಿನಿಮಾ ಇಂಡಸ್ಟ್ರಿ ಹಾಳಾ­ಗೋಯ್ತು. ಕೂಸು ಹುಟ್ಟೋಕೆ ಮುಂಚೇನೇ ಕುಲಾವಿ ಹೊಲಿ­ಯುವ ಕೆಲಸ ಬೇಡ. ಮೊದಲು ಕತೆ ಹೇಳಿ, ಡಬ್ಬಾನೋ, ಡಬ್ಬಿಂಗೋ ಆಮೇಲೆ ನೋಡೋಣ’ ಎಂದು ಪೆಕರ ಪ್ರಶ್ನಿಸಿದ.

ಇದು ಎರಡು ಭಾಷೆಯಲ್ಲಿ ತಯಾರಿಸಬಹುದಾದ ಚಿತ್ರ. ‘ಪರಮಭ್ರಷ್ಟ ಪರಮಾತ್ಮರು’ ಎಂಬ ಟೈಟಲ್‌ ಸೂಕ್ತವಾಗಿದೆ. ಕನ್ನಡದಲ್ಲಿ ಮಾರಸ್ವಾಮಿ, ಕುಮಾರಾನಂತ, ರಪ್ಪಾಜೀ ಹಾಗೂ ಮೈಲಿಸಾಬ್‌ ನಾಲ್ವರೂ ಹೀರೋಗಳಾಗಿ ಕಾಣಿಸಿ­ಕೊಳ್ತಾರೆ. ಹಿಂದಿ ಚಿತ್ರದಲ್ಲಿ ಯುವರಾಜರು ಇರ್‍ತಾರೆ. ಬಡ್ಕರಿ, ಲಾಯಂ ಸಿಂಗ್‌, ಜಗನ್‌ರಾಜ್‌, ಕೆಮೊಳಿ ಮೊದಲಾದವರೆಲ್ಲ ಪ್ರಮುಖ ಪಾತ್ರದಲ್ಲಿರ್‍ತಾರೆ. ಸಖತ್‌ ಸೆನ್ಸೇಷನ್‌, ಈ ಕತೆ ಯಾರಿಗುಂಟು ಯಾರಿಗಿಲ್ಲ ಹೇಳಿ ಸಾರ್‌’.
‘ಡೈರೆಕ್ಷನ್‌ ಯಾರದು?’
‘ಕ್ರೇಜಿಸ್ಟಾರ್‌’
ಪೆಕರ ಮರು ಮಾತಾಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT