ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮವ್ವನ್ ಕಾಲಿಗೆ ಬರೀ ಸಾವ್ರನಾ?

Last Updated 16 ಡಿಸೆಂಬರ್ 2015, 19:40 IST
ಅಕ್ಷರ ಗಾತ್ರ

ಇಂದುಮತಿಯ ರೂಮ್ ಮೇಟ್ ಬೊಳ್ಳಮ್ಮ ಅಲಿಯಾಸ್ ತನುಜಾ ಹೆಚ್ಚು ಮಾತಿಲ್ಲದ ಹುಡುಗಿ. ಅಂಥವಳು ಚಳಿಗಾಲದ ಒಂದು ಮಧ್ಯಾಹ್ನ ಅಳುತ್ತಾ ರೂಮಿಗೆ ಬಂದಾಗ ಎಲ್ಲರೂ ಊಹಿಸಿದ್ದು ಯಾವ್ದೋ ಎಕ್ಸಾಂ ಫೇಲ್ ಆಗಿದಾಳೇನೋ ಅಂತ. ಬಹಳ ಸ್ಟೂಡಿಯಸ್ ಹುಡುಗಿ ಅದು. ಯಾವಾಗಲೂ ಬೆನ್ನು ಬಗ್ಗಿಸಿ ಕೂತು ಓದುತ್ತಿದ್ದಳು. ಆದರೆ ಅವಳ ಅಳುವಿನ ಹಿಂದಿನ ಕಾರಣ ಬೇರೆಯೇ ಇದ್ದಂತಿತ್ತು. ಭಾನುವಾರ ಮಧ್ಯಾಹ್ನ ಸ್ಕೂಟಿಯಲ್ಲಿ ನಗುನಗುತ್ತಾ ಹೋದ ಹುಡುಗಿ ವಾಪಸ್ಸು ಬರುವಾಗ ಬಿಕ್ಕಳಿಸಿ ಅಳುತ್ತಾ ಬಂದದ್ದಂತೂ ನಿಜ. ಏನಾಯಿತು ಅಂತ ಕೇಳಿದರೆ ಅಳು ಹೆಚ್ಚಾಗುತ್ತಿತ್ತೇ ವಿನಃ ಕಡಿಮೆಯಾಗುವಂತೆ ಕಾಣಿಸಲಿಲ್ಲ.

‘ಏನಾಯ್ತು? ತನು, ಏನಾಯ್ತೇ?, ಎಲ್ಲಿಗ್ ಹೋಗಿದ್ದೆ?, ಯಾರಾದ್ರೂ ಏನಾದ್ರೂ ಅಂದ್ರೇನೇ?’
ಎಲ್ಲರೂ ಸೇರಿಕೊಂಡು ನಾನಾ ರೀತಿ ಪ್ರಶ್ನೆಕೇಳುತ್ತಿದ್ದರೆ ತನುಜಾಳ ಬಾಯಿಯಿಂದ ಒಂದು ಮಾತೂ ಹೊರಡುತ್ತಿರಲಿಲ್ಲ. ಸುಮ್ಮನೆ ಹೋ ಅಂತ ಅಳೋದು, ಸೊರ್ರಂತ ಗೊಣ್ಣೆ ಏರಿಸಿಕೊಂಡು ಮೂಗು ಕೊಂಕು ಮಾಡಿಕೊಳ್ಳೋದು. 

ಅಳುವ ಹುಡುಗಿಯರನ್ನು ಕಂಡರೆ ಗಂಡಸರು ಅಧೀರರಾಗುತ್ತಾರಂತೆ. ಆದರೆ, ಬರೀ ಅಳುವನ್ನೇ ಭಾಷೆ ಮಾಡಿಕೊಂಡ ಹೆಣ್ಣುಮಕ್ಕಳನ್ನು ಕಂಡರೆ ಉಳಿದ ಹೆಣ್ಣು ಮಕ್ಕಳೂ ಖಂಡಿತಾ ಧೈರ್ಯ ಕಳೆದುಕೊಳ್ಳುತ್ತಾರೆ. ಅಳುವ ಹೆಣ್ಣುಮಕ್ಕಳ ಪಕ್ಕ ಇರುವವರಿಗೆ ಇದೆಲ್ಲ ಕಿರಿಕಿರಿಯಾದರೂ ತೋರಿಸಿಕೊಳ್ಳುವಂತಿಲ್ಲ. ಕೆಲವು ನೈಜ ಸಂದರ್ಭಗಳಲ್ಲಿ ತಡೆಯಿಲ್ಲದೆ ಉಕ್ಕಿ ಬರುವ ಅಳುವನ್ನು ಹೊರತುಪಡಿಸಿ ನೋಡಿದರೆ, ಸರ್ವೇಸಾಮಾನ್ಯವಾಗಿ ಪಬ್ಲಿಕ್ಕಲ್ಲಿ ಬರುವ ಅಳುವಿಗೆ ನೇರ ಗುರಿ ಇರುವುದು ಸಹಾನುಭೂತಿ ಗಿಟ್ಟಿಸಿಕೊಂಡು ಕೇಸನ್ನು ತಮ್ಮ ಕಡೆ ಮಾಡಿಕೊಳ್ಳುವುದು. ಇದಕ್ಕೆ ಅಪವಾದಗಳೂ ಸಾಕಷ್ಟಿರಬಹುದು.

ಆದರೆ ತನುಜಾ ನಿಜವಾಗಿ ಅಳುತ್ತಿದ್ದಾಳೆ ಎನ್ನುವುದು ಯಾರಿಗೆ ಬೇಕಾದರೂ ಗೊತ್ತಾಗುತ್ತಿತ್ತು. ಇದು ಪ್ರತಿಕ್ರಿಯೆಯ ಅಳುವಲ್ಲ ಅಥವಾ ಸಹಾನುಭೂತಿ ಕೋರುವ ಅಳುವಲ್ಲ. ನಿಜವಾಗಿ ಉಮ್ಮಳಿಸಿ ಬರುತ್ತಿದ್ದ ಸಂಕಟದ ಅಳು. ಇಂದುಮತಿ, ವಿಜಿ ಕೂತು ಅವಳನ್ನ ಸಂತೈಸುತ್ತಿದ್ದರೂ ಅವಳ ಅಳು ನಿಲ್ಲಲಿಲ್ಲ. ಅಳು ನಿಲ್ಲದಿದ್ದಾಗ ಇಬ್ಬರಿಗೂ ಬೇಜಾರು ಬಂದು ಸುಮ್ಮನಾಗಿಬಿಟ್ಟರು. ‘ತನು, ನಿಂಗೆ ಹೇಳಬೇಕೆನ್ನಿಸಿದಾಗ ಹೇಳು. ಅಲ್ಲೀತನಕ ನಾವ್ ಕೇಳಲ್ಲ. ಸುಮ್ನೆ ಇಬ್ರಿಗೂ ಬೇಜಾರಾಗೋದು ಬೇಡ’ ಎಂದು ಸುಮ್ಮನಾಗಿಬಿಟ್ಟಳು ಇಂದುಮತಿ.

ವಿಜಿಯೇ ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಕೇಳಿದಳು. ‘ಏನಾಯ್ತೇ? ಯಾರಾದ್ರೂ ಕೈ ಕೊಟ್ರಾ?’
‘ಇಲ್ಲ’ ಎಂದಿತು ಹುಡುಗಿ. ಸದ್ಯ, ಹೋದ ಜೀವ ಬಂದಂತಾಯ್ತು. ಲವ್ ಕೇಸಲ್ಲ ಅಂದ್ರೆ ಸಾಕಪ್ಪಾ ದೇವ್ರೇ! ಬೇರೆ ಎಲ್ಲ ಕೇಸಿನ ದುಃಖಗಳನ್ನೂ ಕೇಳಬಹುದು. ಆದರೆ ಲವ್ ಮಕಾಡೆ ಬಿದ್ದದ್ದರ ವಿವರಗಳನ್ನು ಕೇಳಲು ಸಾಧ್ಯವೇ ಇಲ್ಲ. ಮೊದಲೇ ಆ ಹುಡುಗ ತನ್ನ ದಾರಿ ತಾನು ನೋಡಿಕೊಂಡು ಬಚಾವಾಗಿರುತ್ತಾನೆ. ಅವನು ಕೊಟ್ಟ ಲೆಟರ್ರು, ಕಾರ್ಡು, ಪೆನ್ನು, ಪಿನ್ನು, ಹೂವಿನ ದಳ, ಅವನ ಕೈ ಮೇಲಿನ ದೂಳಿನ ಕಣ, ಉಗುರಿನ ತುದಿ, ಅವನು ಕುಡಿದ ಜೂಸ್ ಬಾಟಲಿಯ ಮುಚ್ಚಳ ಎಲ್ಲವನ್ನೂ ತಂದಿಟ್ಟುಕೊಂಡು ಕರ್ಮಕಾಂಡವನ್ನು ಅನುಭವಿಸುತ್ತಾ ಬೇರೆಯವರಿಗೂ ನರಕ ದರ್ಶನ ಮಾಡಿಸುತ್ತಾರೆ ಕೆಲವರು. ಲವ್ ಅಲ್ಲ ಅಂದ ಮೇಲೆ ಇನ್ನೊಂದು ಪಾಸಿಬಿಲಿಟಿ ಇರುವುದು ಮನೆಯಲ್ಲಿ ಯಾರದ್ದೋ ಆರೋಗ್ಯ ಹದಗೆಟ್ಟ ಸುದ್ದಿ. ಯಾಕೆಂದರೆ ಒಂದು ಪಕ್ಷ ಯಾರಾದರೂ ತೀರಿ ಹೋಗಿದ್ದರೆ ಫೋನ್ ಮಾಡಿ ಸುದ್ದಿ ತಿಳಿಸುವವರು ಹೇಳುವುದು ಇಷ್ಟು: ‘ಬೇಗ ಹೊರಟು ಬಾ. ಅಜ್ಜಿ/ಅಜ್ಜ/ಸಂಬಂಧಿಕರು ಸೀರಿಯಸ್ ಆಗಿದ್ದಾರೆ’ ಅಂತ. ಅಲ್ಲಿಗೇ ಎದೆ ಢವಢವ ಎನ್ನಿಸಲು ಶುರುವಾಗುತ್ತದೆ. ಇದ್ದ ಊರಿನಿಂದ ತಮ್ಮ ಊರಿಗೆ ಹೋಗಿ ಇಳಿಯುವ ಹೊತ್ತಿಗೆ ಆಗಬಾರದ್ದು ಆಗಿ ಹೋಗಿರುತ್ತದೆ. ಆ ಪರಿಸ್ಥಿತಿ ಎದುರಿಸಿದವರಿಗೇ ಗೊತ್ತು ಅದರ ನೋವು, ಸಂಕಟ ಎಲ್ಲಾ.  ‘ಮನೇಲಿ ಯಾರಿಗಾದ್ರೂ ಹುಷಾರಿಲ್ವೇನೆ?’ ವಿಜಿ ಕೇಳಿದಳು.

‘ಇಲ್ಲಾ, ಆರಾಮಾಗಿದ್ದಾರೆ’ ಎಂದಿತು ಹೆಣ್ಣು.
‘ಮತ್ತೇನಾಯ್ತು ಅಂತ ಹೇಳೇ’ ಇಂದುಮತಿ ಕೇಳಿದಳು.
‘ಆಗಲೆ ಮಹಾರಾಜ ಕಾಲೇಜಿಗೆ ಹೋಗಿದ್ದೆನಲ್ಲ?’
‘ಹೂಂ’
‘ಅಲ್ಲಿ...’
‘ಯಾರಾದ್ರೂ ಏನಾದ್ರೂ ಮಾಡಿದ್ರೇನೇ? ಭಾನ್ವಾರ ಯಾಕ್ ಹೋದೆ ಅಲ್ಲಿಗೆ?’ ಇಂದು ಮುಂದುವರೆದು ಮಾತನಾಡಿದಳು.
‘ಕಾಲೇಜಲ್ಲಿ ಅಲ್ಲ ಕಣೆ...ಹೊರಗೆ...’
‘ರಸ್ತೆ ಮೇಲಾ?’
‘ಹೂಂ...’
‘ಹೆಲ್ಪ್ ಅಂತ ಕೂಗಿಕೋಬೇಕಿತ್ತು?’
‘ಥೂ ಇಂದೂ, ಅಂಥಾದ್ದೇನೂ ಆಗಿರೋ ಹಂಗಿಲ್ಲ ಕಣೇ. ಸ್ವಲ್ಪ ತಡಿ. ಏನಾಯ್ತು ಅಂತ ನೀನೇ ಹೇಳೆ ತನುಜಾ. ಇಲ್ಲಾಂದ್ರೆ ಸುಮ್ನೆ ನಮಗೆ ಕಷ್ಟ ಆಗುತ್ತೆ’ ವಿಜಿ ಹೇಳಿದಳು.

‘ಅಲ್ಲಾ ಮಹಾರಾಜ ಕಾಲೇಜಿಗೆ ಹೋಗಿ ವಾಪಸ್ಸು ಬರ್ತಾ ಇದ್ದೆ. ನಮ್ಮ ಯೂನಿವರ್ಸಿಟಿ ಹತ್ತಿರ ಬಂದಾಗ ನನ್ನ ಗಾಡಿಗೆ ಒಂದು ಅಜ್ಜಿ ಅಡ್ಡ ಬಂದುಬಿಡ್ತು’
‘ಢಿಕ್ಕಿ ಹೊಡದ್ಯಾ?’

‘ಇಲ್ಲಾ, ನಾನು ಬಹಳ ಅವಾಯ್ಡ್ ಮಾಡಿದೆ. ಇಬ್ಬರೂ ಕೆಳಗೆ ಬಿದ್ವಿ. ಅಜ್ಜಿ ತನ್ನ ಕಾಲಿಗೆ ಪೆಟ್ಟಾಯ್ತು ಅಂತ ಅಳೋಕೆ ಶುರು ಮಾಡ್ತು’
‘ಅಯ್ಯೋ!ಆಸ್ಪತ್ರೆಗೆ ಕರ್ಕೊಂಡು ಹೋಗಿದ್ಯಾ?’

‘ನಾನು ಕರ್ಕೊಂಡು ಹೋಗ್ತೀನಿ ಅಂತ ಹೇಳಿದರೆ ನನ್ನ ಮಾತು ಕೇಳದೆ ಅಜ್ಜಿ ಜೋರಾಗಿ ಕಿರುಚಾಡಕ್ಕೆ ಶುರು ಮಾಡಿತು. ಜನ ಸೇರ್ಕೊಂಡು ಬಿಟ್ರು. ಎಲ್ಲಾ ನನ್ನದೇ ತಪ್ಪು ಅಂತ ತೀರ್ಮಾನಿಸಿ ಜೋರು ಮಾಡೋಕೆ ಶುರು ಮಾಡಿದರು. ಕೆಲವರು ನನ್ ಗಾಡಿ ನಂಬರ್ ಬರ್ಕೊಂಡ್ರು’

ಸ್ನೇಹಿತೆಯರು ಮುಖ ಮುಖ ನೋಡಿಕೊಂಡರು. ಜನವೆಲ್ಲಾ ಸೇರಿ ಗಲಾಟೆ ಆಗಿದೆ ಅಂತ ಆದ್ರೆ ಸ್ವಲ್ಪ ಸೀರಿಯಸ್ ಮ್ಯಾಟರ್ರೇ ಇದು. ಸುಮ್ಮನೆ ಪಾಪ ಇವಳನ್ನು ಗೋಳು ಹುಯ್ದುಕೊಂಡುಬಿಟ್ಟೆವಲ್ಲಾ ಅಂತ ಮರುಗಿದರು.

‘ಅಯ್ಯೋ ದೇವ್ರೆ! ಮುಂದೇನಾಯ್ತು?’
‘ಕಂಪ್ಲೇಂಟ್ ಕೊಡ್ತೀವಿ ಅಂತ ಹೆದರಿಸಿದ್ರು. ಅದಕ್ಕೆ ನಾನು ಪ್ಲೀಸ್ ಹಾಗೆಲ್ಲ ಮಾಡಬೇಡಿ. ಅದೆಷ್ಟು ಖರ್ಚಾಗುತ್ತೋ ನಾನು ಕೊಡ್ತೀನಿ ಅಂದೆ.

‘ಒಳ್ಳೆಯ ಕೆಲಸ ಕಣೇ. ಪಾಪ ಅಜ್ಜಿಗೆ ಅದೆಷ್ಟು ನೋವಾಗಿತ್ತೋ ಏನೋ. ವಯಸ್ಸಾದ ಮೇಲೆ ನೋವುಗಳಾಗಿಬಿಟ್ರೆ ಸುಧಾರಿಸಿಕೊಳ್ಳೋದು ಕಷ್ಟ ಆಗುತ್ತೆ. ಪಾಪ, ಬೇಗ ಹುಷಾರಾಗ್ಲಿ ಅಜ್ಜಮ್ಮ’ ಎಂದು ಇಂದುಮತಿ ಸಹಾನುಭೂತಿ ವ್ಯಕ್ತಪಡಿಸಿದಳು.
‘ನನ್ ಹತ್ರ ಸ್ವಲ್ಪ ದುಡ್ಡಿತ್ತು. ಈ ತಿಂಗಳ ಖರ್ಚಿನದ್ದು. ಅದರಿಂದ ಒಂದು ಸಾವ್ರ ತೆಗೆದು ಕೊಟ್ಟೆ ಅಲ್ಲೇ. ಅಜ್ಜಿ ತಗೊಂಡು ಹೋಯ್ತು. ಮತ್ತೆ ಆಸ್ಪತ್ರೆ ಖರ್ಚಿದ್ದರೆ ಬಂದು ನಿನ್ ಹತ್ರ ತಗೊಳ್ತೀನಿ ಅಂತು’

‘ಅಯ್ಯೋ! ಅಡ್ರೆಸ್ ಕೊಟ್ಯಾ?’
‘ಮತ್ತೇನ್ ಮಾಡ್ಲೀ? ನೋಡೋದ್ರೊಳಗೇ ಎಷ್ಟು ಜನ ಜಮಾಯಿಸಿದ್ರೂಂತಾ! ನನಗಂತೂ ಇಲ್ಲಿಂದ ಬಿಡಿಸಿಕೊಂಡ್ರೆ ಸಾಕು ಅನ್ನೋ ಹಾಗಿತ್ತು’

‘ಸರಿ ಬಿಡು. ಇಲ್ಲಿಗೆ ಬಂದಾಗ ನೋಡ್ಕೊಳೋಣಾ’...
ಘಟನೆ ನಡೆದು ಇನ್ನೂ ಇಪ್ಪತ್ತನಾಲ್ಕು ಗಂಟೆ ಕಳೆದಿರಲಿಲ್ಲ. ಆಗಲೇ ಮರುದಿನ ಬೆಳಿಗ್ಗೆ ತನುಜಾನ್ನ ಹುಡುಕಿಕೊಂಡು ನಾಲ್ಕು ಹುಡುಗರು ಬಂದರು. ತನುಜಾಳನ್ನು ಹಾಸ್ಟೆಲಿನ ಹೊರಗೆ ಕರೆದ ಮೋನ ಆ ಹುಡುಗರನ್ನು ಅನುಮಾನವಾಗಿ ನೋಡುತ್ತಲೇ ಇದ್ದ. ತನುಜಾನ್ನ ಮಾತನಾಡಿಸಿ ಜೋರು ಜೋರಾಗಿ ಕೈ ಕಾಲು ಆಡಿಸಿ ತಮ್ಮ ಮಾತುಗಳನ್ನು ಮಂಡಿಸಿ ಹೋದರು.

ಹುಡುಗಿ ಅಳುತ್ತಲೇ ಒಳಗೆ ಬಂದಳು. ಇಂದುಮತಿ, ವಿಜಿ, ರಿಂಕಿ, ಈಶ್ವರಿ, ರಶ್ಮಿ ಎಲ್ಲರೂ ತಿಂಡಿ ಮಾಡಲು ಮೆಸ್ಸಿನ ಕಡೆ ಹೋಗುತ್ತಿದ್ದವರು ಅಲ್ಲೇ ನಿಂತು ವಿಷಯ ಏನೆಂದು ಕೇಳಿದರು. ಹೆಚ್ಚು ಉಪಚಾರ ಮಾಡಿಸಿಕೊಳ್ಳದೆ ತನು ವಿಷಯ ತಿಳಿಸಿದಳು.

ಬಂದವರು ಅಜ್ಜಿಯ ಮಕ್ಕಳೋ, ಮೊಮ್ಮಕ್ಕಳೋ ಅಂತೆ. ಒಟ್ಟಿನಲ್ಲಿ ಆಕೆಗೆ ಹತ್ತಿರದ ಸಂಬಂಧಿಗಳು. ನಿನ್ನೆ ತನುಜಾ ಗಾಡಿ ಅಜ್ಜಿಗೆ ಗುದ್ದಿದ್ದರ ಪರಿಣಾಮ ಆಕೆ ಕಾಲು ಮುರಿದು ಮೂಳೆ ಪುಡಿಪುಡಿಯಾಗಿದೆ ಎಂದು ಡಾಕ್ಟರ್ ಹೇಳಿದ್ದಾರಂತೆ. ಆ ಸರ್ಜರಿಗೆ ಏನಿಲ್ಲವೆಂದರೂ ಐವತ್ತು ಸಾವಿರ ಖರ್ಚಾಗುವುದೆಂದು ಆಸ್ಪತ್ರೆಯವರು ಅಂದಾಜು ಮಾಡಿದ್ದಾರಂತೆ. ಹಾಗಾಗಿ ಈ ದುಡ್ಡನ್ನ ತನುಜಾಳೇ ಕೊಡಬೇಕೆಂದೂ, ಸರ್ಜರಿ ಇನ್ನೆರಡು ದಿನದಲ್ಲಿ ಮಾಡದಿದ್ದರೆ ಮತ್ತೆ ಖರ್ಚು ಹತ್ತು ಸಾವಿರವಾದರೂ ಹೆಚ್ಚಾಗುತ್ತದೆಂದೂ ಹೇಳಿ ಹೋದರಂತೆ ಆ ಹುಡುಗರು. ‘ನನ್ ಕೈಲಿ ಇದ್ದ ದುಡ್ಡನ್ನೆಲ್ಲಾ ಕೊಟ್ಟೆ. ಪ್ಲೀಸ್ ಇನ್ನು ನನ್ ಹತ್ರ ದುಡ್ಡಿಲ್ಲ’ ಅಂದದ್ದಕ್ಕೆ ‘ನಮ್ಮವ್ವನ್ ಕಾಲಿಗೆ ಬರೀ ಸಾವ್ರ ರೂಪಾಯಾ ಅಮ್ಮಣ್ಣೀ? ಸುಮ್ಕ ಉಳುದ್ ಕಾಸ ತಂದ್ ಮಡುಗ್ಬೇಕ್’ ಎಂದರಂತೆ.
ತನುಜಾ ಅಕ್ಷರಶಃ ನಡುಗಿ ಹೋಗಿದ್ದಳು. 

   ‘ನಾನು ಅಷ್ಟು ಫಾಸ್ಟಾಗಿ ಗಾಡಿ ಓಡಿಸ್ತಿರಲಿಲ್ಲ. ಅಜ್ಜಿಗೆ ಅಷ್ಟು ಪೆಟ್ಟಾಗಿರೋಕೆ ಸಾಧ್ಯವೇ ಇಲ್ಲ. ಅಜ್ಜೀನಾ ಸೇವ್ ಮಾಡಕ್ಕೆ ಹೋಗಿಯೇ ನಾನು ಬಿದ್ದೆ. ಆ ಗಾಬರಿಯಲ್ಲಿ ಅಜ್ಜಿಯೂ ನೆಲಕ್ಕೆ ಬಿತ್ತು’ ಅಂತ ಬಡಬಡಿಸೋಕೆ ಶುರುಮಾಡಿದಳು. ಎರಡು ದಿನದಲ್ಲಿ ಐವತ್ತು ಸಾವಿರ ಹೊಂದಿಸೋದು ಸಾಧ್ಯವೇ ಇರಲಿಲ್ಲ. ಎರಡು ದಿನವಿರಲಿ, ತಿಂಗಳು ಕಳೆದರೂ ಅಷ್ಟು ದುಡ್ಡು ಅವಳ ಕೈಗೆ ಬರುತ್ತಿರಲಿಲ್ಲ. ಮನೆ ಕಡೆ ಹೆಚ್ಚಿನ ಆಸ್ತಿ ಇಲ್ಲ. ಅಪ್ಪ ಯಾರದೋ ಕಾಫಿ ತೋಟದಲ್ಲಿ ಮ್ಯಾನೇಜರ್ ಆಗಿದ್ದರು. ಅಮ್ಮ ಸ್ಕೂಲಿನಲ್ಲಿ ಟೀಚರ್ ಆಗಿದ್ದರು. ಅಣ್ಣ ಕೊಯಮತ್ತೂರಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ. ಅಪ್ಪ ಅಮ್ಮ ದುಡಿದ ಬಹುಪಾಲು ಅಣ್ಣನ ಖರ್ಚಿಗೆ ಹೋಗುತ್ತಿತ್ತು. ಇವಳದ್ದು ಅಷ್ಟು ದುಬಾರಿ ಬಾಬತ್ತಲ್ಲ ಅಂತ ಓದು ಮುಂದುವರೆಸಲು ಸಾಕಷ್ಟು ಉತ್ತೇಜನ ನೀಡಿದ್ದರು.

ಐವತ್ತು ಸಾವಿರ, ಐವತ್ತು ಸಾವಿರ ಎನ್ನುತ್ತಲೇ ಅವಳಿಗೆ ಸಂಜೆಗೇ ಚಳಿ ಜ್ವರ ಬಂದಿತು. ಆ ಹುಡುಗರು ಮತ್ತೆಲ್ಲಿ ಹಾಸ್ಟೆಲಿನ ಹತ್ತಿರ ಬರುತ್ತಾರೋ, ಗಲಾಟೆ ಮಾಡಿಬಿಟ್ಟರೆ ಏನು ಗತಿ ಎಂದೆಲ್ಲ ಭ್ರಮಿಸಿ ಬೆಚ್ಚಿಬೀಳುತ್ತಿದ್ದಳು. ರಾತ್ರಿ ಅವಳಿಗೆ ಗುಳಿಗೆ ಕೊಟ್ಟು ಮಲಗಿಸುವ ಹೊತ್ತಿಗೆ ಇಂದುಮತಿ, ವಿಜಿಯರಿಗೆ ಸಾಕುಬೇಕಾಯಿತು. ಬೆಳಿಗ್ಗೆ ಆ ಹುಡುಗರು ಬಂದರೆ ವಿಜಿ ಹೋಗಿ ಮಾತನಾಡಬೇಕೆಂದು ನಿರ್ಧಾರವಾಯಿತು. ಮಾರನೇ ದಿನ ನಿರೀಕ್ಷೆಯಂತೆಯೇ ಆ ಹುಡುಗರ ದಂಡು ಬಂದಿತು. ಮೋನ ತನುಜಾಳನ್ನ ಕರೆದ. ವಿಜಿ ಹೋದಳು.

‘ಆಯಮ್ಮನ್ನ ಕರೀರಿ’ ಎಂದರು ಹುಡುಗರು.
‘ಆಯಮ್ಮಂಗೆ ಹುಷಾರಿಲ್ಲ. ನಿನ್ನೆ ರಾತ್ರಿ ಆಸ್ಪತ್ರೆಗೆ ಸೇರಿಸಿದಾರೆ. ನೀವ್ ಯಾರು?’
‘ವೋ. ಮಾಡಾದೆಲ್ಲ ಮಾಡಿ ಆಸ್ಪತ್ರೆ ಸೇರ್ಕಂಡವ್ಳಾ? ಅವ್ರ್ ಅಪ್ಪನ್ ಪೋನ್ ನಂಬರ್ ಕ್ವಡಿ ಮತ್ತ’

‘ನೀವ್ ಯಾರು ಅಂತ ಹೇಳ್ರೀ. ಅವ್ರ್ ಅಪ್ಪನ ಫೋನ್ ನಂಬರ್ ನನಗೆ ಗೊತ್ತಿಲ್ಲ’
‘ಮಂತ? ಆ ಯಮ್ಮ ಆಸ್ಪತ್ರೆ ಸೇರ್ಕಂಡದ ಅಂತ ಅವ್ರ್ ಮನೆಯೋರಿಗೆ ಯಾರಿಗೂ ಏಳ್ನೇ ಇಲವಾ? ನಾಟ್ಕ ಆಡೀರಾ ನಂ ತಾವ?’

ವಿಜಿಗೆ ಇದು ಯಾಕೋ ವಸೂಲಿ ಕೇಸು ಎನ್ನಿಸಲು ಶುರುವಾಯಿತು. ನಾಲ್ಕೈದು ಜನ ಇಲ್ಲಿ ಹಾಸ್ಟೆಲಿನ ಹತ್ತಿರ ಬಂದು ಮಾತನಾಡುತ್ತಿರುವುದರಿಂದ ಹೆಚ್ಚಿಗೆ ಗಲಾಟೆ ಮಾಡುವಂತಿಲ್ಲ. ಸುಮ್ಮನೆ ಸಾಗಹಾಕಿ ನಂತರ ಒಂದು ಪರಿಹಾರ ಹುಡುಕಬೇಕು. ಕಾರ್ಯವಾಸಿ ಕತ್ತೆ ಕಾಲು ಹಿಡಿ ಎಂದು ಮನಸ್ಸಿನಲ್ಲಿ ಹತ್ತು ಸಾರಿ ಹೇಳಿಕೊಂಡಳು.

‘ಇಲ್ಲ, ನಮಗ್ಯಾರಿಗೂ ಅವ್ರ್ ಮನೆಯೋರು ಗೊತ್ತಿಲ್ಲ. ಅವಳಿಗೆ ಇಲ್ಲಿ ಸಂಬಂಧಿಕರೂ ಇಲ್ಲ’
‘ಯಾವ್ ಆಸ್ಪತ್ರೆಗೆ ಸೇರಿಸಿದೀರಿ?’

‘ಬಸಪ್ಪ ಆಸ್ಪತ್ರೆಗೆ. ನಮ್ ವಾರ್ಡನ್ನೇ ಇದಾರೆ ಅಲ್ಲಿ ಜೊತೆಗೆ’ ವಾರ್ಡನ್ ಎನ್ನುವ ಮಾತು ಕೇಳಿದ ತಕ್ಷಣ ಜನ ತಣ್ಣಗಾದರು.
‘ಸರಿ ಬುಡಿ. ಬಂದ್ ಮ್ಯಾಲ ಈ ನಂಬರಿಗೆ ಪೋನ್ ಮಾಡು ಅಂತ ಯೋಳಿ. ಅವ್ರ್ ದೆಸಿಂದ ನಮ್ಮವ್ವ ಸಾಯ್ತಾ ಬಿದ್ದಳ. ಪೋನ್ ಮಾಡ್ನಿಲ್ಲ ಅಂದ್ರ ಪೋಲಿಸ್ ಕಂಪ್ಲೇಂಟ್ ಕ್ವಡ್ತಿವಿ’ ಎಂದು ಹೊರಟರು.

ವಿಜಿ ರೂಮಿಗೆ ಬಂದು ತನುಜಾನ ಹಣೆ ಮುಟ್ಟಿ ನೋಡಿದಳು. ಜ್ವರ ಇಳಿದಂತೆ ಇತ್ತು. ಟೀ ತಂದುಕೊಟ್ಟು, ತನುಜಾ ಸ್ವಲ್ಪ ಸುಧಾರಿಸಿಕೊಂಡ ಮೇಲೆ ವಿಜಿ ಅವಳಿಗೆ ಆ ಹುಡುಗರು ಬಂದದ್ದರ ಬಗ್ಗೆ ಹೇಳಿದಳು. ತನುಜಾ ಕಣ್ಣಿನಲ್ಲಿ ನೀರು ತುಂಬಿಕೊಂಡಿತು. ‘ನೀನು ವರಿ ಮಾಡ್ಕೋಬೇಡ ಕಣೆ. ವಾರ್ಡನ್ ಬಂದಾಗ ಈ ವಿಷಯ ತಿಳಿಸಿ ಹೆಲ್ಪ್ ಮಾಡಿ ಅಂತ ಕೇಳ್ಕೊಳ್ಳೋಣ’

ಇಂದುಮತಿ, ವಿಜಿ, ಮತ್ತು ತನುಜಾ ಆವತ್ತು ಕ್ಲಾಸಿಗೆ ಹೋಗದೆ ವಾರ್ಡನ್ ಬರುವ ಹಾದಿ ಕಾದು ಅವರನ್ನು ಭೇಟಿ ಮಾಡಿದರು. ವಾರ್ಡನ್ ಎಲ್ಲ ವಿಷಯವನ್ನೂ ಕೇಳಿಸಿಕೊಂಡರು. ತನುಜಾ ವಿಚಾರದಲ್ಲಿ  ಅವರಿಗೆ ಸ್ವಲ್ಪ ವಿಶ್ವಾಸ ಹುಟ್ಟಿದಂತೆ ಕಂಡಿತು.

ತಮ್ಮ ಪರಿಚಯದ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರಿಗೆ ಫೋನ್ ಮಾಡಿ ಈ ವಿಚಾರದಲ್ಲಿ ಸಹಾಯ ಮಾಡುವಂತೆ ಕೋರಿಕೊಂಡರು. ಇನ್ಸ್‌ಪೆಕ್ಟರ್ ಎಲ್ಲರನ್ನೂ ಸ್ಟೇಷನ್ನಿಗೆ ಬರಲು ಹೇಳಿ, ಕೂಲಂಕಷವಾಗಿ ವಿಷಯ ತಿಳಿದುಕೊಂಡರು. ಆ ಹುಡುಗರು ಮತ್ತೆ ಬಂದರೆ ಏನೇನು ಹೇಳಬೇಕು ಅಂತ ತನುಜಾಗೆ ತಿಳಿಸಿದರು. ಮಾರನೇ ದಿನ ಇನ್ಸ್‌ಪೆಕ್ಟರ್ ಹೇಳಿದಂತೆಯೇ ತನುಜಾ ಆ ಹುಡುಗರು ವಿಜಿ ಕೈಲಿ ಕೊಟ್ಟು ಹೋಗಿದ್ದ ನಂಬರಿಗೆ ಫೋನ್ ಮಾಡಿದಳು.

‘ದುಡ್ಡು ವ್ಯವಸ್ಥೆಯಾಗಿದೆ. ಎಲ್ಲಿಗೆ ತಲುಪಿಸಬೇಕು?’
‘ನಾವೇ ಬಂದು ತಕ್ಕತೀವಿ’
‘ಇಲ್ಲ ಚೆಕ್ ಇದೆ. ಆಸ್ಪತ್ರೆ ಹೆಸರಿಗೆ ಬರೀಬೇಕು. ಯಾವ ಆಸ್ಪತ್ರೆ ಅಂತ ಹೇಳಿ. ಅಲ್ಲಿಗೇ ಬರ್ತೀನಿ’
‘ಇಲ್ಲ ಹಂಗೆ ಆಗಲ್ಲ. ಬರೀ ಆಸ್ಪತ್ರೆ ಚಾರ್ಜಲ್ಲ. ನಂ ಕರ್ಚೂ ಅದ. ಎಲ್ಲಾ ತಕ್ಕ ವೋಗಿ ಅವ್ರಿಗೇ ಕ್ವಟ್ ಬುಟ್ರ ನಾವ್ ಕರ್ಚ್ ಮಾಡಿರದ ಯಾರ್ ಕ್ವಟ್ಟರೂ?’

‘ಸರಿ ಹಂಗಾದ್ರೆ. ನಾಳೆ ಬೆಳಿಗ್ಗೆ ಎಂಟು ಗಂಟೆಗೆ ಹಾಸ್ಟೆಲಿನ ಹತ್ತಿರ ಬಂದು ತೆಗೆದುಕೊಂಡು ಹೋಗಿ’ ಎಂದು ತನುಜಾ ಫೋನ್ ಇಟ್ಟಳು.
ಮಾರನೇ ದಿನ ಎಂಟು ಗಂಟೆಗೆ ಮಗಧೀರರ ಸವಾರಿ ಹಾಸ್ಟೆಲ್ ದಾರಿಯಲ್ಲಿರುವಾಗಲೇ ಇನ್ಸ್‌ಪೆಕ್ಟರ್ ಕಳಿಸಿದ್ದ ಪೇದೆಯೊಬ್ಬರು ಹಾಸ್ಟೆಲಿನ ಹತ್ತಿರ ಕಾದಿದ್ದು ಹುಡುಗರನ್ನು ಸಕಲ ಮರ್ಯಾದೆ ಸಮೇತ ಸ್ಟೇಷನ್ನಿಗೆ ಕರೆದುಕೊಂಡು ಹೋದರು.

ಹನ್ನೆರಡು ಗಂಟೆಯ ಹೊತ್ತಿಗೆ ವಾರ್ಡನ್ನಿಗೆ ಇನ್ಸ್‌ಪೆಕ್ಟರ್‌ರಿಂದ ಫೋನ್ ಬಂತು. ‘ಅವರು ಮಾಮೂಲು ಗಿರಾಕಿಗಳು. ಆ ಅಜ್ಜಿಯೂ ಅವರೊಂದಿಗೆ ಶಾಮೀಲಾಗಿದಾಳೆ. ಒಂಟಿ ಹುಡುಗಿಯರ ಗಾಡಿಗೆ ಬೇಕಂತ ಅಡ್ಡ ಹೋಗೋದು. ಬಿದ್ದ ಹಾಗೆ ಮಾಡೋದು. ಜನ ಸೇರಿಸೋದು. ಆಮೇಲೆ ಬ್ಲಾಕ್ ಮೇಲ್ ಮಾಡೋದು. ಇದು ಅವರ ಕಾರ್ಯ ತಂತ್ರ. ಅಜ್ಜಿಗೆ ಯಾವ ಪೆಟ್ಟೂ ಆಗಿಲ್ಲ. ಇಲ್ಲೇ ನನ್ ಮುಂದೆಯೇ ಇದ್ದಾಳೆ. ನಿಮ್ ಹುಡುಗೀಗೆ ಆರಾಮಾಗಿ ಇರು ಅಂತ ಹೇಳಿ. ಆಮೇಲೆ, ಸಿಕ್ಸಿಕ್ಕೋರಿಗೆ ತಾನು ಹಾಸ್ಟೆಲ್ಲಿನಲ್ಲಿ ಇದೀನಿ ಅಂತ ಹೇಳಬಾರದು ಅಂತ ಸರಿಯಾಗಿ ತಿಳಿಸಿ. ಎಕ್ಸ್ ಪ್ಲಾಯಿಟ್ ಮಾಡ್ಕೊಳೋರು ತುಂಬಾ ಜನ ಇರ್ತಾರೆ’ ಎಂದು ಹೇಳಿದರು. ತನುಜಾ ಜ್ವರ ಇಳಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT