ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮೊಳಗಿನ ಪಶುವನ್ನು ಪಳಗಿಸುವುದು ಹೇಗೆ?...

Last Updated 7 ಜನವರಿ 2017, 19:52 IST
ಅಕ್ಷರ ಗಾತ್ರ

ಅದು ಬೇಟೆ. ಗಾಢ ಕತ್ತಲೆಯಲ್ಲಿ ಹಿಂಡನಗಲಿದ ಹುಲ್ಲೆ ಆ ಕಡೆ ಈ ಕಡೆ  ನೋಡುತ್ತ ಗೂಡು ಸೇರಲು ಹೊರಟಿದೆ. ವಾಸನೆ ಹಿಡಿದ ಹುಲಿ ಹೊಂಚು ಹಾಕಿ ಕಾಯುತ್ತಲಿದೆ. ಒಂದಲ್ಲ ಎರಡು ಹುಲಿ ಇವೆ. ದೂರದಲ್ಲಿ ಇನ್ನೂ ಎರಡು ಮೂರು ಇರುವಂತಿವೆ. ಹುಲ್ಲೆ ಮುಂದೆ ಎರಡು ಹೆಜ್ಜೆ ಇಡುವುದೇ ತಡ ಎರಡೂ ಹುಲಿಗಳು ಸುತ್ತುವರಿದು ಬಂದೇ ಬಿಡುತ್ತವೆ. ಒಂದು ಹುಲಿ ಹುಲ್ಲೆಯ ಕತ್ತನ್ನೇ ಹಿಡಿದು ರಕ್ತ ಹೀರಲು ಆರಂಭಿಸುತ್ತದೆ.

ಇನ್ನೊಂದು ಹುಲಿ ಸರದಿಗಾಗಿ ಕಾಯುತ್ತಲಿದೆ. ತಾನು ರಕ್ತ  ಹೀರಿದ್ದು ಸಾಲದು ಎಂದು ಹುಲ್ಲೆಯನ್ನು ಇನ್ನೊಂದು ಹುಲಿಯ ಕೈಗೆ ಕೊಡುತ್ತದೆ. ಒಂದಲ್ಲ ಎರಡು ಹುಲಿಗಳ ಕೈಗೆ ಸಿಕ್ಕ ಹುಲ್ಲೆಯ ಕಥೆ ಇನ್ನೇನು ಮುಗಿದೇ ಹೋಯಿತು ಎನ್ನುವಾಗ ಯಾರೋ ಕೂಗಿದಂತೆ ಕೇಳುತ್ತದೆ. ಎರಡೂ ಹುಲಿಗಳು ಹುಲ್ಲೆಯನ್ನು ನೆಲಕ್ಕೆ ಬಿಸಾಕಿ ಓಡಿ ಹೋಗುತ್ತವೆ.

ಹುಲಿ ಮತ್ತು ಹುಲ್ಲೆಯ ನಡುವಿನ ಈ ಹೋರಾಟ ಇಂದು ನಿನ್ನೆಯದಲ್ಲ.  ಹುಲಿಯ ಕೈಗೆ ಹುಲ್ಲೆ ಮತ್ತೆ ಮತ್ತೆ ಸಿಗುತ್ತಲೇ ಇದೆ. ಕೆಲವು ಸಾರಿ ಪೂರ್ಣಾಹುತಿ ಆದರೆ  ಇನ್ನು ಕೆಲವು ಸಾರಿ ಅಲ್ಲಿ ಇಲ್ಲಿ ಗಾಯಗಳಾಗುತ್ತವೆ.  ಸತ್ತರೆ ಮುಗಿದೇ ಹೋಯಿತು. ಅಲ್ಲಿ ಇಲ್ಲಿ ಗಾಯವಾದರೆ ಅವು ಮಾಯುವುದೇ ಇಲ್ಲ. ಇವು  ಬರೀ ಹುಲ್ಲೆಯ ಮೈಮೇಲೆ ಆದ ಗಾಯಗಳಲ್ಲ. ನಮ್ಮ ನಗರ ಸಂಸ್ಕೃತಿಯ ಮೇಲೆ ಆದ ಗಾಯಗಳು. ಮೊನ್ನೆ ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ನಡೆದ ಘಟನೆ ಬೆಳಕಿಗೆ ಬಂದ ಅಂಥ ಒಂದು ಘಟನೆ ಅಷ್ಟೇ. ಗಾಢ ಕತ್ತಲೆಯಲ್ಲಿ,  ಒಂಟಿ ಚಲನವಲನದಲ್ಲಿ ಇಂಥ ಎಷ್ಟು ಘಟನೆಗಳು ನಡೆದಿರಬಹುದು?

‘ಒಂಟಿ ಹೆಣ್ಣುಮಕ್ಕಳಿಗೆ ಬೆಂಗಳೂರು ಸುರಕ್ಷಿತವಲ್ಲ’ ಎಂಬುದು ಈಗ ಜಗಜ್ಜಾಹೀರು. ಇಪ್ಪತ್ತು ಮೂವತ್ತು ವರ್ಷಗಳ ಹಿಂದಿನ ಬೆಂಗಳೂರು ಈಗ ಉಳಿದಿಲ್ಲ. ದೆಹಲಿಯ ನಿರ್ಭಯಾ ಪ್ರಕರಣ ನಡೆದ ನಂತರ ಇಂಗ್ಲೆಂಡಿನ ‘ಟೆಲಿಗ್ರಾಫ್‌’ ಪತ್ರಿಕೆಯಲ್ಲಿ ಜಾರ್ಜಿಯಾ ಆರ್ಲಟ್‌ ಎಂಬ ಯುವತಿ, ‘ಏಕಾಂಗಿ ಮಹಿಳೆಗೆ ಭಾರತ ಏಕೆ ಸುರಕ್ಷಿತವಲ್ಲ’  ಎಂದು ದೀರ್ಘ ಲೇಖನ ಬರೆದಿದ್ದರು. ಅವರು ಒಬ್ಬ ಪ್ರವಾಸಿಯಾಗಿ ಭಾರತಕ್ಕೆ ಬಂದಿದ್ದರು. ತಮಿಳುನಾಡು, ಪುದುಚೇರಿ, ಕರ್ನಾಟಕ ಮತ್ತು ಪಶ್ಚಿಮ ಬಂಗಾಲ ರಾಜ್ಯಗಳಲ್ಲಿ ಅವರು ಪ್ರವಾಸ  ಮಾಡಿದ್ದರು. ಹೆಚ್ಚೂ ಕಡಿಮೆ ಎಲ್ಲ ಕಡೆ ಅವರಿಗೆ ಒಂದೇ ತೆರನ ಅನುಭವವಾಗಿತ್ತು.

ಆಟೊದಲ್ಲಿ ಪ್ರಯಾಣಿಸುವಾಗ ಚಾಲಕ ಹೇಗೆ ತಮ್ಮನ್ನು ತಿನ್ನುವ ಹಾಗೆ ನೋಡುತ್ತಿದ್ದ, ಜಾತ್ರೆಗೆ ಹೋದಾಗ ಅಕ್ಕಪಕ್ಕದವರು ಹೇಗೆ ತಮ್ಮ ಜೊತೆಗೆ ಅಸಭ್ಯವಾಗಿ ನಡೆದುಕೊಂಡರು ಎಂಬುದನ್ನೆಲ್ಲ ಅವರು ವಿವರವಾಗಿ ಬರೆದಿದ್ದರು. ಬೆಂಗಳೂರಿಗೆ ಬಂದು ಉಳಿದುಕೊಂಡಿದ್ದ ಜಾರ್ಜಿಯಾ ಅವರನ್ನು ಅವರ ಗೆಳೆಯರು ಕೆಲಸಕ್ಕೆ  ಹೋಗುವಾಗ ‘ಬಿಳಿಯ ಯುವತಿಯರಿಗೆ ಭಾರತ ಸುರಕ್ಷಿತವಲ್ಲ’ ಎಂದು ಮನೆ ಒಳಗೆ ಹಾಕಿ ಹೊರಗಿನಿಂದ ಬೀಗ  ಹಾಕಿಕೊಂಡು ಹೋಗುತ್ತಿದ್ದರು.   ಈ ಮನೆಯಲ್ಲಿ ಬಿಳಿಯ ಯುವತಿ ಇದ್ದಾರೆ ಎಂದು ಹೇಗೋ ತಿಳಿದು ಬಾಗಿಲು ತಟ್ಟಿದ ಪೊಲೀಸರು, ‘ನೀವು ವೇಶ್ಯಾವಾಟಿಕೆ ಮಾಡಲು ಬಂದಿದ್ದೀರಿ’ ಎಂದು ಅವರಿಂದ ಹಣ ಕಿತ್ತಿದ್ದರು!

‘ಭಾರತೀಯ ಸಮಾಜದಲ್ಲಿ ಒಂದು ದ್ವಂದ್ವ ಇದೆ.  ಭಾರತೀಯರು ತಮ್ಮ ಮಗಳು, ಅಕ್ಕ, ತಂಗಿ, ಹೆಂಡತಿ ಸುರಕ್ಷಿತವಾಗಿ ಇರಬೇಕು ಎಂದು ಬಯಸುತ್ತಾರೆ ಮತ್ತು ಅವರನ್ನು ಬಾಗಿಲ ಒಳಗೆಯೇ ಇರಿಸುತ್ತಾರೆ. ಆದರೆ, ಬೀದಿಯಲ್ಲಿ ಸಿಗುವ ಹೆಣ್ಣು ಭೋಗದ ವಸ್ತು ಎಂದು ಭಾವಿಸುತ್ತಾರೆ. ಹೊಸ್ತಿಲ ಹೊರಗೆ ಕಾಲು ಇಡುವ ಹೆಣ್ಣಿನ ಜೊತೆಗೆ ಅಸಭ್ಯವಾಗಿ ನಡೆದುಕೊಳ್ಳುತ್ತಾರೆ. ಆದರೆ, ಅವರ ಈ ಅಸಭ್ಯ ನಡವಳಿಕೆಯೇ ಅವರ ಮಗಳು, ಅಕ್ಕ–ತಂಗಿ, ಹೆಂಡತಿ ನಾಲ್ಕು ಗೋಡೆಗಳ ನಡುವಿನ ಬಂದಿಯಾಗಲು ಕಾರಣ ಎಂದು ಅವರಿಗೆ ಅರ್ಥವಾಗುತ್ತಿಲ್ಲ’ ಎಂದು ಜಾರ್ಜಿಯಾ ಬರೆದಿದ್ದರು. ಅವರ ಲೇಖನದ ಹಿನ್ನೆಲೆಯಲ್ಲಿ ನಿರ್ಭಯಾ ಪ್ರಕರಣ ಇತ್ತು.

ಅದು ದೆಹಲಿ ನಾಚಿ ತಲೆತಗ್ಗಿಸಿದ ಘಟನೆ. ಆದರೆ, ಅದೇ  ಕೊನೆ ಎನ್ನುವಂತೆ  ಆಗಲಿಲ್ಲ. ನಿರ್ಭಯಾ ಜೊತೆಗೆ ಅತ್ಯಂತ ಅನಾಗರಿಕವಾಗಿ, ಆದಿಮಾನವನ ಹಾಗೆ, ಪಶುವಿನ ಹಾಗೆ  ನಡೆದುಕೊಂಡಿದ್ದ ಪುರುಷ ತನ್ನ ವರಸೆಯನ್ನು ಸರಿ ಮಾಡಿಕೊಂಡಿಲ್ಲ. ಮತ್ತೆ ಮತ್ತೆ ಆತನ ಕ್ರೂರ ದಾಡೆಗಳು ಹೊರಗೆ ಚಾಚಿಕೊಳ್ಳುತ್ತಲೇ ಇವೆ, ಆತ ಮತ್ತೆ ಮತ್ತೆ ತನ್ನ ಪಂಜವನ್ನು ಬೀಸುತ್ತಲೇ ಇದ್ದಾನೆ. ಅಂದು ದೆಹಲಿ, ಇನ್ನೊಂದು ದಿನ ಮುಂಬೈ, ಮತ್ತೊಂದು ದಿನ ಕೊಲ್ಕತ್ತ. ಈಗ ಬೆಂಗಳೂರು ಸರದಿ.

ಹೊಸ ವರ್ಷದ ಮಧ್ಯರಾತ್ರಿ ಬೆಂಗಳೂರಿನಲ್ಲಿ ನಡೆದ ಘಟನೆ ನಾವೆಲ್ಲ ಮತ್ತೆ ನಾಚಿ ತಲೆ ತಗ್ಗಿಸುವಂತೆ ಮಾಡಿದೆ. ಬೆಂಗಳೂರಿನ ಮಾನ ಮತ್ತೆ ಜಾಗತಿಕ ಮಟ್ಟದಲ್ಲಿ ಹರಾಜಾಗಿದೆ. ಜಾಗತಿಕ ನಕಾಶೆಯಲ್ಲಿ ಬೆಂಗಳೂರು ಎಷ್ಟು ಎದ್ದು ಕಾಣುವ ಜಾಗದಲ್ಲಿ ಇದೆ ಎಂದು ನಮ್ಮ ಆಡಳಿತಗಾರರಿಗೆ ಅರ್ಥವಾಗುತ್ತಿಲ್ಲ. ಇಲ್ಲಿ ಕಸ ಬಿದ್ದರೆ ಜಗತ್ತಿನಲ್ಲಿ ಸುದ್ದಿಯಾಗುತ್ತದೆ. ಇಲ್ಲಿ ರಸ್ತೆಗಳು ಹಾಳಾದರೆ ಜಾಗತಿಕ ಮಟ್ಟದ ಸುದ್ದಿಯಾಗುತ್ತದೆ. ಗಲಭೆಯಾದರೆ ಸುದ್ದಿಯಾಗುತ್ತದೆ.  ಬಂದ್‌ ಆದರೆ ಸುದ್ದಿಯಾಗುತ್ತದೆ. ಹೊಸ ವರ್ಷದ ದಿನ ನಡೆದ ಘಟನೆಗಳೂ ‘ಬಿ.ಬಿ.ಸಿ’ಯಲ್ಲಿ ಸುದ್ದಿಯಾಗಿವೆ.

‘ಗಾರ್ಡಿಯನ್‌’ನಲ್ಲಿ ಲೇಖನವೇ ಬಂದಿದೆ. ಬೆಂಗಳೂರಿನಲ್ಲಿ ಬರೀ ಬೆಂಗಳೂರಿನ ಮಂದಿ ಅಥವಾ ಸುತ್ತಮುತ್ತಲಿನ ಕನಕಪುರ, ರಾಮನಗರದ ಮಂದಿ ಇದ್ದರೆ ‘ಬಿ.ಬಿ.ಸಿ’ಯವರೂ ತಲೆ ಕೆಡಿಸಿಕೊಳ್ಳುತ್ತ  ಇರಲಿಲ್ಲ, ‘ಗಾರ್ಡಿಯನ್‌’ ಪತ್ರಿಕೆಯವರೂ ಯೋಚಿಸುತ್ತ ಇರಲಿಲ್ಲ. ಬೆಂಗಳೂರಿನಲ್ಲಿ ಜಗತ್ತಿನ ಅನೇಕ ದೇಶಗಳ ಕಂಪೆನಿಗಳು ಇವೆ, ಬೆಂಗಳೂರಿನದೇ ಕಂಪೆನಿಗಳಲ್ಲಿ ಜಗತ್ತಿನ ಅನೇಕ ದೇಶಗಳ ಯುವಕ ಯುವತಿಯರು ಕೆಲಸ ಮಾಡುತ್ತಿದ್ದಾರೆ. ‘ನಮ್ಮ ಕಂಪೆನಿಗಳು ಮತ್ತು ನಮ್ಮ ಯುವಕ ಯುವತಿಯರು ಅಲ್ಲಿ ಸುಖವಾಗಿ, ಸುರಕ್ಷಿತವಾಗಿ ಇದ್ದಾರೆಯೇ ಇಲ್ಲವೇ’ ಎಂಬ ಚಿಂತೆ ಅವರಿಗೆ.

ನಮ್ಮ ಆಡಳಿತಗಾರರಿಗೆ ಇದು ಗೊತ್ತಾಗುತ್ತಿದೆಯೋ ಇಲ್ಲವೋ ತಿಳಿಯದು. ಏನೇ ಅನಾಹುತ ಆದರೂ ‘ಇದೆಲ್ಲ ಸಹಜ, ಇಷ್ಟು ದೊಡ್ಡ  ಊರು, ಇಂಥದೆಲ್ಲ, ಆಗದೇ ಇರುತ್ತದೆಯೇ’ ಎಂಬ ಅವರ ಉದಾಸೀನ ನಡೆ ಇಡೀ ಬೆಂಗಳೂರಿನ, ರಾಜ್ಯದ ವರ್ಚಸ್ಸಿಗೆ ಮಾರಕವಾಗುತ್ತಿದೆ. ಮೊದಲು ಏನೋ ಉದಾಸೀನವಾಗಿ ಮಾತನಾಡಿ ಆಮೇಲೆ ವಿವಾದ ಎದ್ದ ಕೂಡಲೇ ಅದನ್ನು ಸರಿ ಮಾಡಲು ಹೆಣಗುವುದರಲ್ಲಿ ಯಾವ ಅರ್ಥವೂ ಇಲ್ಲ.

ಇಂಥ ಘಟನೆಗಳು ಮತ್ತೆ ಮತ್ತೆ ನಡೆಯುವುದಕ್ಕೆ ಅನೇಕ ಕಾರಣಗಳು ಇರಬಹುದು. ಈಗಿರುವ ಕಾರಣಗಳಿಗೆ ಇನ್ನೂ ಅನೇಕ ಕಾರಣಗಳು ಸೇರುತ್ತಲೂ ಇರಬಹುದು. ಇದಕ್ಕೆಲ್ಲ ಮನೆಯೇ ಮುಖ್ಯ ಕಾರಣವಾಗಿರಬಹುದು. ತಂದೆ ತಾಯಿ ಮಗನನ್ನು ಪೊರೆದ ಹಾಗೆ ಮಗಳನ್ನು ಪೊರೆಯುವುದಿಲ್ಲ. ಸಾಧ್ಯವಾದರೆ  ಮಗಳನ್ನು ಹೆರುವುದೇ ಬೇಡ ಎಂದೇ ಭಾರತೀಯರು ಅಂದುಕೊಳ್ಳುತ್ತಾರೆ. ಇಡೀ ಜಗತ್ತಿನಲ್ಲಿ ಗಂಡು–ಹೆಣ್ಣಿನ ಜನಸಂಖ್ಯೆಯ ಅನುಪಾತ ಕಡಿಮೆ ಇರುವುದು ಭಾರತದಲ್ಲಿಯೇ ಎಂದರೆ ಆಶ್ಚರ್ಯವೇನೂ ಆಗುವುದಿಲ್ಲ.

ಇದು ಎಂಥ ಮನಃಸ್ಥಿತಿಯನ್ನು ಹುಟ್ಟಿ ಹಾಕಿದೆ ಎಂದರೆ ಶೇಕಡ 57 ರಷ್ಟು ಹುಡುಗರು ಮತ್ತು ಶೇಕಡ 53ರಷ್ಟು ಹುಡುಗಿಯರು, ‘ಹೆಂಡತಿಯನ್ನು ಹೊಡೆಯುವುದು ಗಂಡನ ಹಕ್ಕು’ ಎಂದು ಭಾವಿಸುತ್ತಾರೆ. ಇದು ಯುನಿಸೆಫ್ ನಡೆಸಿದ ಸಮೀಕ್ಷೆಯಲ್ಲಿ ಕಂಡುಬಂದ ಅಂಶ.  ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯಕ್ಕೆ ಏನು ಕಾರಣ ಎಂದು 1996ರಲ್ಲಿ ನಡೆದ  ಒಂದು ಸಮೀಕ್ಷೆಯಲ್ಲಿ ನ್ಯಾಯಾಧೀಶರಿಗೆ ಪ್ರಶ್ನೆ ಕೇಳಲಾಯಿತು. ಇದು ಇಡೀ ಭಾರತ ಮಟ್ಟದಲ್ಲಿ ನಡೆದ ಸಮೀಕ್ಷೆಯಾಗಿತ್ತು. ಶೇಕಡ 68ರಷ್ಟು ನ್ಯಾಯಾಧೀಶರು ಹೇಳಿದ್ದು, ‘ಆಕೆ ತೊಡುವ ಪ್ರಚೋದಕ ಬಟ್ಟೆ ಕಾರಣ’ ಎಂದು! ನಿರ್ಭಯಾ ಪ್ರಚೋದಕ ಬಟ್ಟೆ ತೊಟ್ಟಿದ್ದಳೇ? ಮುಂಬೈನಲ್ಲಿ ಅತ್ಯಾಚಾರಕ್ಕೆ ಈಡಾದ ಪತ್ರಿಕಾ ಛಾಯಾಗ್ರಾಹಕಿ ಮೈ ತುಂಬ ಬಟ್ಟೆ ತೊಟ್ಟುಕೊಂಡೇ ಇದ್ದಳಲ್ಲ?

‘ಹೆಣ್ಣು ಅಬಲೆ ಮತ್ತು ಭೋಗದ ವಸ್ತು’ ಎಂದೇ ಪುರುಷ ಭಾವಿಸುತ್ತಾನೆ. ಅವಕಾಶಕ್ಕಾಗಿ ಹೊಂಚು ಹಾಕುತ್ತಲೇ ಇರುತ್ತಾನೆ. ಕೈಗೆ ಸಿಕ್ಕರೆ ಸಾಕು ಹೊಸಕಿ ಬಿಸಾಕುತ್ತಾನೆ. ಆತನ ಒಳಗಿನ ಪಶು ಮಲಗಿರುತ್ತದೆಯೇ ಅಥವಾ ಸದಾ ‘ಎದ್ದಿ’ರುತ್ತದೆಯೇ? ಹೆಣ್ಣಿನ ಹಲವು ಬಿಂಬಗಳು ಅವನನ್ನು ಕಾಡುತ್ತಿವೆ. ಆಕೆ ಸ್ವತಂತ್ರಳಾಗಿದ್ದಾಳೆ. ಕೆಲಸ ಮಾಡುತ್ತಾಳೆ. ಎಲ್ಲೆಂದರಲ್ಲಿ ಹೋಗುತ್ತಾಳೆ. ತನ್ನ ಇಷ್ಟದಂತೆ ಬಟ್ಟೆ ಹಾಕುತ್ತಾಳೆ. ಜಾಹೀರಾತಿಗೆ ಪೋಸು ಕೊಡುತ್ತಾಳೆ. ಅದಕ್ಕೆ ತನ್ನ ದೇಹ ಸೌಂದರ್ಯವನ್ನು ಧಾರೆ ಎರೆಯುತ್ತಾಳೆ. ಆತ ಎಲ್ಲಿಂದಲೋ ಬಂದವ. ಹರೆಯ ಕಾಡುತ್ತ ಇರುತ್ತದೆ. ಚಿತ್ರದ ಮುಂದೆ ನಿಂತು ಕನಸು ಕಾಣುತ್ತಾನೆ. ಮನಸ್ಸು ಕದಡಿ ಹೋಗುತ್ತದೆ. ಅದು ಇನ್ನೆಲ್ಲಿಯೋ ಪ್ರತಿಕ್ರಿಯಿಸುತ್ತದೆ.

‘ಹಾಗೆಲ್ಲ ಮಾಡಿ ಆಕೆ ತೊಂದರೆಯನ್ನು ಆಮಂತ್ರಿಸುತ್ತಾಳೆಯೇ? ಅಷ್ಟು ಅಪರಾತ್ರಿಯಲ್ಲಿ ಆಕೆ ಕಮ್ಮನಹಳ್ಳಿಯಲ್ಲಿ ಒಬ್ಬಳೇ ಏಕೆ ಹೋಗಬೇಕಿತ್ತು? ಹೊಸ ವರ್ಷ ಆಚರಿಸಲು ಬಂದವರು ನಿಲ್ಲಲು ಆಗದಷ್ಟು ಕುಡಿದು ಕುಪ್ಪಳಿಸಿದರೆ ಇನ್ನೇನಾಗುತ್ತದೆ? ಹೆಣ್ಣಿನ ಸ್ವಾತಂತ್ರ್ಯದ ಬಗೆಗೆ ಮಾತನಾಡುವವರು ತಮ್ಮ ಮಗಳನ್ನು ಹೀಗೆಲ್ಲ ಕಳಿಸುತ್ತಾರಾ? ಕಡಲೆಕಾಯಿ ಪರಿಷೆಯಲ್ಲಿ ಹೀಗೆಲ್ಲ ಏಕೆ ಆಗುವುದಿಲ್ಲ? ಹಾಗೆ ಅರೆಬರೆ ಬಟ್ಟೆ ಹಾಕಿಕೊಂಡರೆ ಇನ್ನೇನಾಗುತ್ತದೆ’ ಎಂಬ ಪ್ರಶ್ನೆಗಳು ಈಗ ಎದ್ದಿರಬಹುದು. ಮಹಾತ್ಮ ಗಾಂಧಿ ರಸ್ತೆ ಮತ್ತು ಬ್ರಿಗೇಡ್‌ ರಸ್ತೆಯಲ್ಲಿ ಅಂಥದೇನೂ ಆಗಿಲ್ಲ ಎಂದು ಪೊಲೀಸರ ಹಾಗೆಯೇ ವಾದಿಸುವವರೂ ಬಹಳ ಮಂದಿ ಇದ್ದಾರೆ. ಅದರೆ, ಇದು ಕಮ್ಮನಹಳ್ಳಿಯಲ್ಲಿ ನಡೆದ ಘಟನೆಗೆ ಪರಿಹಾರವಲ್ಲ.

ಐವರು ಹೆಣ್ಣುಮಕ್ಕಳಲ್ಲಿ ನಾಲ್ವರು ಒಂದಲ್ಲ ಒಂದು ರೀತಿಯ ಲೈಂಗಿಕ ಕಿರುಕುಳಕ್ಕೆ ತುತ್ತಾಗಿರುತ್ತಾರೆ ಎಂದರೆ ಒಟ್ಟು ಭಾರತೀಯ ಸಮಾಜದ ನಡವಳಿಕೆಯಲ್ಲಿಯೇ ಏನೋ ದೋಷವಿದೆ ಎಂದು ಅರ್ಥ. ನಮ್ಮ ಧರ್ಮಗಳಲ್ಲಿಯೂ ಸಮಸ್ಯೆ ಇದ್ದಂತೆ ಕಾಣುತ್ತದೆ. ಅದು ಭಾರತದ್ದೇ ಇರಲಿ, ಬೇರೆ ದೇಶದ್ದೇ ಇರಲಿ, ಯಾವ ಧರ್ಮ ಹೆಣ್ಣಿಗೆ ಸಮಾನ ಸ್ಥಾನಮಾನ ಕೊಟ್ಟಿದೆ? ಒಂದಾದರೂ ಧರ್ಮವನ್ನು ಒಬ್ಬ ಮಹಿಳೆ ಸ್ಥಾಪಿಸಿದ್ದರೆ ಹೀಗೆ ಆಗುತ್ತಿರಲಿಲ್ಲವೇನೋ? ಎಲ್ಲ ಧರ್ಮ ಸ್ಥಾಪಕರೂ ಪುರುಷರೇ ಆಗಿರುವುದು ಆಕಸ್ಮಿಕ ಇರಲಾರದು!

ಬಾಂಗ್ಲಾ ಲೇಖಕಿ ತಸ್ಲೀಮಾ ನಸ್ರೀನ್‌, ‘ಯಾವ ಧರ್ಮವೂ  ಹೆಣ್ಣಿನ ಪರವಾಗಿ ಇಲ್ಲ’ ಎಂದು ಅದಕ್ಕೇ ಹೇಳಿರಬಹುದು. ಧರ್ಮ, ಸಮಾಜ, ಕಾನೂನು, ಸಂಸ್ಕೃತಿ ಎಲ್ಲ ಸೇರಿಕೊಂಡು ಹೆಣ್ಣಿನ ವಿರುದ್ಧದ ಅಪರಾಧಗಳನ್ನು ಸಮರ್ಥಿಸುತ್ತವೆ. ಪುರುಷ ಏನು ಮಾಡಿದರೂ ನಡೆಯುತ್ತದೆ. ಅನೇಕ ಸಾರಿ ಅದು ಬೆಳಕಿಗೇ ಬರುವುದಿಲ್ಲವಲ್ಲ!

ಬೆಳಕಿಗೆ ಬಂದರೂ ಕಾನೂನು ಹೆಣ್ಣಿನ ಪರವಾಗಿ ಇದೆಯೇ ಎಂದರೆ ಅದೂ ಅನುಮಾನ. ಠಾಣೆಗೆ ಹೋಗಿ ದೂರು ಕೊಡಬೇಕು ಎಂದರೆ ಅಲ್ಲಿ ಕುಳಿತ ಅಧಿಕಾರಿಯೂ ಪೂರ್ವಗ್ರಹಪೀಡಿತ. ‘ನೀವು ಯಾವ ರಾಜ್ಯದವರು? ಅಂಥ ಅಪವೇಳೆಯಲ್ಲಿ ಅಲ್ಲಿಗೆ ಏಕೆ ಹೋದಿರಿ? ಅವರು ನಿಮಗೆ ಏನು ಮಾಡಿದರು? ಪರಿಚಯದವರೇ?’ ಆಕೆಗೆ ಏಕಾದರೂ ಠಾಣೆಗೆ ಬಂದೆ ಎನಿಸಿ ಸಾಕು ಸಾಕಾಗಿ ಹೋಗುತ್ತದೆ. ನ್ಯಾಯಾಲಯದಲ್ಲಿ ಮತ್ತೆ ಅದೇ ಪ್ರಶ್ನೆ. ಆಕೆ ತಾನು ಮರೆಯಲು ಬಯಸುವ ದಾರುಣ ಘಟನೆಯನ್ನು ಮತ್ತೆ ಮತ್ತೆ ಹೇಳಬೇಕಾಗುತ್ತದೆ, ಬದುಕಬೇಕಾಗುತ್ತದೆ. ಒಂದು ಸಾರಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹೆಣ್ಣು  ನಿತ್ಯವೂ ಭಯಭೀತಳಾಗಿ ಬದುಕುತ್ತಾಳೆ ಎಂದು ಅದಕ್ಕೇ ಹೇಳುವುದು.

ನಮ್ಮ ದೇಶದ ರಾಜಧಾನಿ  ಅತ್ಯಾಚಾರಗಳ ರಾಜಧಾನಿ ಎಂದೂ ಹೆಸರಾಗಿದೆ. ಅಲ್ಲಿನ ಪೊಲೀಸ್‌ ಸಿಬ್ಬಂದಿಯಲ್ಲಿ  ಶೇಕಡ 7ರಷ್ಟು ಮಾತ್ರ ಮಹಿಳೆಯರು ಇದ್ದರು. 161 ಜಿಲ್ಲಾ ಪೊಲೀಸ್‌ ಕಚೇರಿಗಳ ಪೈಕಿ ಒಂದರಲ್ಲಿ ಮಾತ್ರ ಮಹಿಳೆ ಠಾಣಾಧಿಕಾರಿಯಾಗಿದ್ದಾರೆ! ಬೆಂಗಳೂರಿನಲ್ಲಿ ಏನು ಸ್ಥಿತಿ ಇದೆ ಎಂದು ನಾವು ಊಹಿಸಬಹುದು. ಕೆಲಸ  ಮಾಡುವ, ತನಗೆ ಇಷ್ಟದ ಬಟ್ಟೆ ಹಾಕಿಕೊಳ್ಳುವ ಮಹಿಳೆಯರ ಬಗೆಗೆ ಆದಿಮಾನವನ ಪೂರ್ವಗ್ರಹ ಹೊಂದಿರುವ ಕೆಳ ಹಂತದ ಪುರುಷ ಪೊಲೀಸ್‌ ಅಧಿಕಾರಿಗಳಿಂದ ಏನು ನ್ಯಾಯ ಸಿಗಲು ಸಾಧ್ಯ?

ನ್ಯಾಯಾಲಯಗಳಾದರೂ ಸೂಕ್ಷ್ಮವಾಗಿವೆಯೇ? ನಿರ್ಭಯಾ ಪ್ರಕರಣ ನಡೆದು ನಾಲ್ಕು ವರ್ಷಗಳು ಕಳೆದು ಹೋದುವು. ಆದರೆ, ಕೆಳಹಂತದ ನ್ಯಾಯಾಲಯಗಳಲ್ಲಿ ತಪ್ಪಿತಸ್ಥರು ಎಂದು ಕಂಡು ಬಂದ ಅಪರಾಧಿಗಳಿಗೆ ಇನ್ನೂ ಶಿಕ್ಷೆಯಾಗಿಲ್ಲ. ಯಾರೋ ಇಬ್ಬರು ತಾವೇ ಬೇಸತ್ತೋ ಅಥವಾ ಇನ್ನು ಯಾವ  ಕಾರಣಕ್ಕಾಗಿಯೋ ಸಾವಿಗೆ ಶರಣಾದರು. ಉಳಿದವರು? ಹಾಗಾದರೆ ಹೆಣ್ಣನ್ನು ಮತ್ತೆ  ಮತ್ತೆ ಕೆಣಕುವ ಕಾಮಣ್ಣರಿಗೆ ಏನು ಹೆದರಿಕೆ?

ನಿರ್ಭಯಾ ಮೇಲೆ ಘೋರ ಅತ್ಯಾಚಾರ ನಡೆದಾಗ ಇಡೀ ಭಾರತ ಬೀದಿಗೆ ಬಂದಿತ್ತು, ಒಂದಾಗಿ ಪ್ರತಿಭಟಿಸಿತ್ತು. ಏಕೆಂದರೆ ಒಂದು ವೇಳೆ ‘ನಿರ್ಭಯಾ ನನ್ನ ತಂಗಿಯಾಗಿದ್ದರೇ?’ ‘ಹೆಂಡತಿಯಾಗಿದ್ದರೇ’ ಎಂದು ಯೋಚಿಸಿತ್ತು. ಕಮ್ಮನಹಳ್ಳಿ ಘಟನೆ ಅಷ್ಟು ಘೋರವಾಗಿ ಇರಲಿಕ್ಕಿಲ್ಲ. ಆದರೆ, ನಮ್ಮ ಬೀದಿಗಳಲ್ಲಿ ಹೆಣ್ಣು ಸುರಕ್ಷಿತವಲ್ಲ ಎಂದು ಈ ಘಟನೆ ಮತ್ತೊಮ್ಮೆ ಸಾಬೀತು ಮಾಡಿದೆ. ಈ ಘಟನೆಗೆ ವ್ಯಕ್ತವಾದ ಪ್ರತಿಕ್ರಿಯೆಗಳನ್ನು ನೋಡಿದರೆ ಒಟ್ಟು ಸಮಾಜದ ಯೋಚನಾಕ್ರಮ ಬದಲಾಗಿಲ್ಲ ಎಂಬುದೂ ಬಯಲಾಗಿದೆ. ಹಾಗಾದರೆ ಭಾರತೀಯ ಪುರುಷ ತನ್ನ ಒಳಗಿನ ಪಶುವನ್ನು ಪಳಗಿಸುವುದೇ ಇಲ್ಲವೇ? ಹಾಗೇ ಅನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT