ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಗುಂದ ಬಂಡಾಯ ಕಲಿಸಿದ ಪಾಠ

Last Updated 7 ಜುಲೈ 2013, 19:59 IST
ಅಕ್ಷರ ಗಾತ್ರ

ನಾನು ಚಿಕ್ಕವನಿದ್ದಾಗ ನಮ್ಮೂರು ಐರವಳ್ಳಿಯಲ್ಲಿ ಹೊಡೆದಾಟಗಳನ್ನು ನೋಡಿದ್ದೆ. ತಲೆಗೆ ಏಟು ತಿಂದವರು ಆಸ್ಪತ್ರೆಗೆ ಹೋಗಿ ಬ್ಯಾಂಡೇಜ್ ಹಾಕಿಸಿಕೊಂಡು ಬರುವುದು, ಪೊಲೀಸರು ಊರಿಗೆ ಬರುವ ವೇಳೆಗೆ ಹೊಡೆದಾಡಿದ ಜನ ನಾಪತ್ತೆಯಾಗಿ ಊರಿನಲ್ಲಿ ಮುದುಕರು, ಮಕ್ಕಳು ಮತ್ತು ಹೆಂಗಸರಷ್ಟೇ ಉಳಿಯುವುದು ಸಾಮಾನ್ಯವಾಗಿತ್ತು.

ಸಾಮಾನ್ಯ ಜನರನ್ನು ನೋಡಿದರೆ ಮೈಮೇಲೆ ಎಗರುತ್ತಿದ್ದ ಕಂತ್ರಿ ನಾಯಿಗಳು, ಆ ಕಾಲದ ಪೊಲೀಸರು ಮಜಬೂತಾದ ದಿರಿಸಿನಲ್ಲಿ ಊರೊಳಗೆ ಬರುವುದನ್ನು ಕಂಡು, ಹೆದರಿ ವಿಚಿತ್ರ ರೀತಿಯಲ್ಲಿ ಬೊಗಳಿ ಓಡಿ ಹೋಗುತ್ತಿದ್ದವು. ಈ ಘಟನೆಗಳೆಲ್ಲ ನನಗೆ ತುಂಬಾ ನಿಗೂಢವಾಗಿ ಕಾಣುತ್ತಿದ್ದವು. ಊರು ಸಹಜ ಸ್ಥಿತಿಗೆ ಮರಳಲು ವಾರಗಳೇ ಹಿಡಿಯುತ್ತಿತ್ತು. ಬೆಂಗಳೂರಿನ ಕಾಲೇಜಿಗೆ ಬಂದ ಮೇಲೆ ಹಲವಾರು ವಿದ್ಯಾರ್ಥಿ ಚಳವಳಿಗಳಲ್ಲಿ ಪೊಲೀಸರು ಮತ್ತು ವಿದ್ಯಾರ್ಥಿಗಳ ಘರ್ಷಣೆಗಳನ್ನು ಹತ್ತಿರದಿಂದ ನೋಡಿದ್ದೆ.

ಗಲಾಟೆ, ಹೊಡೆದಾಟಗಳೆಂದರೆ ನಾನು ಯಾವಾಗಲೂ ದೂರ. ರೋಷಾವೇಶದ ಘಟನೆಗಳು ಎಷ್ಟೊಂದು ಬೀಭತ್ಸ ಎನ್ನುವುದು ಅನುಭವ ವೇದ್ಯವಾಗಿದ್ದು ಮಾತ್ರ 1980ರ ಜುಲೈ 21ರಂದು; ಅದೂ ನರಗುಂದದಲ್ಲಿ! `ಪ್ರಾಂತ ಸಾಹೇಬ'ನಾಗಿ (ಅಸಿಸ್ಟಂಟ್ ಕಮಿಷನರ್) ಗದಗಿಗೆ ಬಂದಿದ್ದ ನಾನು, ಗದಗ, ಮುಂಡರಗಿ, ನರಗುಂದ ಮತ್ತು ರೋಣ ತಾಲ್ಲೂಕುಗಳ ಆಡಳಿತದ ಹೊಣೆಯನ್ನು ಹೊತ್ತಿದ್ದೆ.

ಮಳೆಗಾಲದಲ್ಲಿ ಹಳ್ಳ-ಕೊಳ್ಳಗಳು ತುಂಬಿ ಹರಿದಿದ್ದವು. ಸೂರ್ಯನ ದಿನಚರಿಯಂತೆ ನಮ್ಮ ಕೆಲಸಗಳೂ ಯಾವುದೇ ಅಡೆತಡೆ ಇಲ್ಲದಂತೆ ಸಾಂಗೋಪಾಂಗವಾಗಿ ಸಾಗಿದ್ದವು. ಸಭೆಗಳಿಗೆ ಹೋಗುವುದು, ಊರಿನ ಮುಖಂಡರ ಪರಿಚಯ ಮಾಡಿಕೊಳ್ಳುವುದು, ಕಚೇರಿಯಲ್ಲಿ ಸಭೆ ನಡೆಸುವುದು... ಹೀಗೇ ನಡೆದಿತ್ತು ಕೆಲಸ.  `ಅಸಿಸ್ಟಂಟ್ ಕಮಿಷನರ್ ಕೆಲಸ ಎಷ್ಟೊಂದು ಚಂದ' ಎಂದು ಖುಷಿಪಟ್ಟಿದ್ದೆ.

ಆಗ ಧುತ್ತೆಂದು ಎದುರಾಗಿದ್ದು ನರಗುಂದದ ರೈತ ಚಳವಳಿ, ಅದರಿಂದಾದ ಸಾವು, ನೋವು ಮತ್ತು ಹಿಂಸಾಚಾರ. ಅವೆಲ್ಲ ನನ್ನನ್ನು ವಾಸ್ತವಕ್ಕೆ ತಂದು ನಿಜ ನೆಲದ ಮೇಲೆ ನಿಲ್ಲಿಸಿದವು. ಆಗತಾನೆ ಈಜಲು ಕಲಿತವನನ್ನು ಸಮುದ್ರಕ್ಕೆ ಎಸೆದು ಈಜು ಎಂದು ಹೇಳಿದಂತಿತ್ತು. ಆ ದಿನದ ಅನುಭವಗಳು ನನ್ನ ಮುಂದಿನ ಸೇವಾವಧಿಗೆ ಭದ್ರ ಬುನಾದಿಯಾದವು. ಸರಿ ಎನಿಸಿದ್ದನ್ನು ಗಟ್ಟಿಯಾಗಿ ಹೇಳುವ ಪಾಠ ಕಲಿಸಿದವು.

ಕರ್ನಾಟಕ ನೀರಾವರಿ (ಲೆವಿ ಆಫ್ ಬೆಟರ್‌ಮೆಂಟ್ ಕಾಂಟ್ರಿಬ್ಯೂಷನ್ ಅಂಡ್ ವಾಟರ್ ರೇಟ್) ಕಾಯ್ದೆ 1957ರ ಪ್ರಕಾರ ಶಾಶ್ವತ ಮೂಲದಿಂದ ನೀರಾವರಿ ಒದಗಿಸಿದ ಪ್ರದೇಶಗಳಲ್ಲಿ ಕರ (ಬೆಟರ್‌ಮೆಂಟ್ ಲೆವಿ ಅಂಡ್ ವಾಟರ್ ರೇಟ್) ವಿಧಿಸುವುದು ಕಡ್ಡಾಯವಾಗಿತ್ತು. ಈ ಕಾಯ್ದೆಗೆ 1974ರಲ್ಲಿ ಮಾಡಲಾದ ತಿದ್ದುಪಡಿಯಂತೆ ಪ್ರತಿ ಎಕರೆಗೆ ಗರಿಷ್ಠ 1,500 ರೂಪಾಯಿ ಕರ ಆಕರಿಸಬಹುದಿತ್ತು. ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ನೀರಾವರಿ ಸೌಲಭ್ಯ ಒದಗಿಸಲು ಸರ್ಕಾರ ಮಲಪ್ರಭಾ ನದಿಗೆ ನವಿಲುತೀರ್ಥದಲ್ಲಿ ಅಣೆಕಟ್ಟೆ ನಿರ್ಮಿಸಿತ್ತು.

ಅಣೆಕಟ್ಟೆ ನಿರ್ಮಾಣವಾದ ಕೂಡಲೇ ಈ ಭಾಗವನ್ನು ನೀರಾವರಿ ಅಚ್ಚಕಟ್ಟು ಪ್ರದೇಶ ಎಂದು ವ್ಯಾಖ್ಯಾನಿಸಿದ ಸರ್ಕಾರ ಕರ ವಸೂಲಿಗೆ ಗೆಜೆಟ್ ಮೂಲಕ ಆದೇಶ ಹೊರಡಿಸಿತು. ನೀರಾವರಿಯನ್ನೇ ಕಾಣದಿದ್ದ ಭೂಮಿಯಲ್ಲಿ ನೀರು ಹರಿಸಲು ಮುಂದಾದಾಗ ಹಲವು ಎಡವಟ್ಟುಗಳು ಆಗಿದ್ದವು. ಕೆಲ ಜಮೀನುಗಳಲ್ಲಿ ನೀರು ಮಡುಗಟ್ಟಿ ನಿಂತರೆ, ಮತ್ತೆ ಹಲವು ಹೊಲಗಳಿಗೆ ಕಾಲುವೆ ತೋಡದ ಕಾರಣ ನದಿ ನೀರು ಅತ್ತ ಹರಿಯಲೇ ಇರಲಿಲ್ಲ.

ಖುಷ್ಕಿ ಭೂಮಿಯಲ್ಲಿ ಕೃಷಿ ಮಾಡಿ ಗೊತ್ತಿದ್ದ ರೈತರಿಗೆ ಏಕಾಏಕಿ ಹೊಲಕ್ಕೆ ನೀರು ಸಿಕ್ಕಿದ್ದರಿಂದ ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ತಿಳಿಯದಾಗಿತ್ತು. ನೀರಾವರಿಯಲ್ಲಿ ಕೃಷಿ ಪದ್ಧತಿ ಹೇಗಿರಬೇಕು ಎಂಬ ಮಾಹಿತಿಯೂ ಅವರಲ್ಲಿ ಇಲ್ಲವಾಗಿತ್ತು. ಪರಿಣಾಮ ಫಲವತ್ತಾಗಿದ್ದ ಭೂಮಿ ಸವಳು ಹಿಡಿಯಿತು. ಕಳಪೆ ಗುಣಮಟ್ಟದ ಬೀಜ ಮತ್ತು ಕ್ರಿಮಿನಾಶಕದಿಂದ ವರಲಕ್ಷ್ಮಿ ಹತ್ತಿ ಬೆಳೆಯೂ ನೆಲಕಚ್ಚಿತು.

ಇದನ್ನೆಲ್ಲ ಗಮನಕ್ಕೆ ತಂದುಕೊಳ್ಳದೆ ನೀರಾವರಿ ಇಲಾಖೆ ಕೊಟ್ಟ ಎಲ್ಲ ಸರ್ವೆ ನಂಬರುಗಳ ಜಮೀನಿನ ಮಾಲೀಕರಿಗೆ ಕಂದಾಯ ಅಧಿಕಾರಿಗಳು ನೋಟಿಸ್ ಜಾರಿ ಮಾಡತೊಡಗಿದರು. ದಾಖಲೆಗಳ ಪ್ರಕಾರ, ಪ್ರತಿಯೊಂದು ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ತೆರಿಗೆ ಬಾಕಿ ಇತ್ತು. ಆಗಿನ ದಿನಗಳಲ್ಲಿ ಒಣ ಭೂಮಿಗೆ ಪ್ರತಿ ಎಕರೆಗೆ ಸರಾಸರಿ 1,500ದಿಂದ 2,000 ರೂಪಾಯಿ ಮೌಲ್ಯವಿತ್ತು.

ನೀರಾವರಿ ನಿರ್ವಹಣೆ ಗೊತ್ತಿಲ್ಲದೆ ಮೊದಲೇ ಕೆಟ್ಟುಹೋದ ಭೂಮಿಗಾಗಿ ಪ್ರತಿ ಎಕರೆಗೆ 1,500 ರೂಪಾಯಿ ಬೆಟರ್‌ಮೆಂಟ್ ಲೆವಿ ಮತ್ತು ನೀರಾವರಿ ಕರ ಸಹ ನೀಡಬೇಕಿತ್ತು. ಪಿತ್ರಾರ್ಜಿತ ಭೂಮಿಯನ್ನು ಸರ್ಕಾರದಿಂದ ಹೀಗೆ ಮತ್ತೆ `ಖರೀದಿ' ಮಾಡಬೇಕಾದ ಸಂಕಟ ಮಣ್ಣಿನ ಮಕ್ಕಳ ಆಕ್ರೋಶದ ಬೆಂಕಿಗೆ ತುಪ್ಪ ಸುರಿದಂತೆ ಆಗಿತ್ತು.

ರೈತರಿಗೆ ಮೇಲಿಂದ ಮೇಲೆ ನೋಟಿಸ್‌ಗಳು ಜಾರಿಯಾದವು. ತೆರಿಗೆ ತುಂಬದಿದ್ದರೆ ಆಸ್ತಿ ಜಪ್ತಿ ಮಾಡಲಾಗುವುದು ಎಂಬ ಬೆದರಿಕೆ ಸಹ ನೋಟಿಸ್‌ನಲ್ಲಿತ್ತು. ಜಿಲ್ಲಾಧಿಕಾರಿ ರೇಣುಕಾ ವಿಶ್ವನಾಥ್ ಮತ್ತು ವಿಶೇಷ ಜಿಲ್ಲಾಧಿಕಾರಿ ವಿ.ಗೋವಿಂದರಾಜು ಅವರಿಗೆ ಸರ್ಕಾರದ ಆದೇಶವನ್ನು ಜಾರಿಗೆ ತಂದು ದಕ್ಷ ಅಧಿಕಾರಿಗಳು ಎಂಬ ಬಿರುದು ಪಡೆಯುವ ಆತುರ. ಕಂದಾಯ ಅಧಿಕಾರಿಗಳ ಸಭೆ ಕರೆದು, ಎಲ್ಲರಿಗೂ ಕರ ಸಂಗ್ರಹದ ಗುರಿ ನಿಗದಿ ಮಾಡಿದರು.

ಈ ಅಧಿಕಾರಿಗಳನ್ನು ಭೇಟಿಮಾಡಿದ ಸ್ಥಳೀಯ ರೈತ ನಾಯಕ  ಬಿ.ಆರ್. ಯಾವಗಲ್ (ಅವರೀಗ ಶಾಸಕ) ಮತ್ತಿತರರು ಬಾಕಿ ವಸೂಲಿ  ಕಾರ್ಯವನ್ನು ಮುಂದಕ್ಕೆ ಹಾಕುವಂತೆ ಮನವಿ ಮಾಡಿದರು. ಅದಕ್ಕೆ ಅಧಿಕಾರಿಗಳು ಕಿವಿಗೊಡಲಿಲ್ಲ. ರೈತರ ಅಹವಾಲು ಕೇಳಲೂ ಅವರು ತಯಾರಿರಲಿಲ್ಲ. ಇದರಿಂದ ರೈತ ಮುಖಂಡರೆಲ್ಲ ಕಿಡಿಕಿಡಿಯಾಗಿದ್ದರು.

ನರಗುಂದದ ರೈತ ಬಂಡಾಯ ಘಟನೆ ನಡೆಯುವ ಎರಡು ವಾರಗಳ ಪೂರ್ವದಲ್ಲಿ ನಾನು ನರಗುಂದದ ತಾಲ್ಲೂಕು ಕಚೇರಿಯಲ್ಲಿ ಕಂದಾಯ, ನೀರಾವರಿ, ಕೃಷಿ, ಸಹಕಾರ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳ ಸಭೆ ಕರೆದೆ. ರೈತ ಮುಖಂಡರೂ ಸಭೆಯಲ್ಲಿ ಭಾಗವಹಿಸಿದ್ದರು. ಬೆಟರ್‌ಮೆಂಟ್ ಲೆವಿ ವಿಧಿಸುವಲ್ಲಿ ತಾರತಮ್ಯ ಇರುವುದು ಮೇಲ್ನೋಟಕ್ಕೆ ಗೋಚರವಾಗುತ್ತಿತ್ತು. ರೈತರ ಸಂಕಷ್ಟ ಅರ್ಥ ಮಾಡಿಕೊಂಡು ಮೇಲಧಿಕಾರಿಗಳಿಗೆ ಪತ್ರ ಬರೆದೆ.

ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ರೈತರಿಂದ ಒತ್ತಾಯಪೂರ್ವಕ ಬಾಕಿ ವಸೂಲಿ ಮಾಡುವುದು ಸದ್ಯಕ್ಕೆ ಸೂಕ್ತವಲ್ಲ ಎಂದು ತಿಳಿಸಿದೆ. ಮೊದಲು ನೀರಾವರಿ ಬಳಕೆ ಕುರಿತಂತೆ ಅವರಿಗೆ ತಿಳಿವಳಿಕೆ ನೀಡಬೇಕು. ಅವರನ್ನು ಸುಸ್ಥಿರಗೊಳಿಸಬೇಕು. ಬಳಿಕವಷ್ಟೇ ಬಾಕಿ ವಸೂಲಿಗೆ ಪರಿಶೀಲಿಸಬಹುದು ಎಂಬುದು ನನ್ನ ಪತ್ರದ ಸಾರಾಂಶವಾಗಿತ್ತು. ಘಟನೆ ಕುರಿತಂತೆ ತನಿಖೆ ನಡೆಸಿದ ಕೆಂಪೇಗೌಡ ಆಯೋಗದ ವರದಿಯಲ್ಲಿ ನನ್ನ ಈ ಪತ್ರದ ಪ್ರಸ್ತಾಪ ಇದೆ.

ಬೆಲೆ ಏರಿಕೆಯೂ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಆಗಿನ ವಿರೋಧ ಪಕ್ಷಗಳು ಜುಲೈ 21ರಂದು ಭಾರತ ಬಂದ್‌ಗೆ ಕರೆ ನೀಡಿದವು. ನರಗುಂದದಲ್ಲಿ ರೈತರ ಅಸಮಾಧಾನ ಹೊಗೆಯಾಡುತ್ತಿದ್ದ ಮಾಹಿತಿಯೂ ಬಂದಿತ್ತು. ರೈತರು ಚಳವಳಿಯನ್ನು ಘೋಷಣೆ ಮಾಡಿಯೇಬಿಟ್ಟರು.

ಗದಗಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯನ್ನು ನಾನು ವಹಿಸಿಕೊಂಡೆ. ಡಿವೈಎಸ್‌ಪಿ ಪ್ರವೀಣಕುಮಾರ್ ಊರ್ವ ನರಗುಂದದ ಪರಿಸ್ಥಿತಿ ನಿಭಾಯಿಸುವ ಹೊಣೆ ಹೊತ್ತುಕೊಂಡರು. ತುಸು ಹೆಚ್ಚಿನ ಬಲದೊಂದಿಗೆ ಹೊರಡುವುದು ಒಳ್ಳೆಯದು ಎಂದು ನಾನು ಸೂಚಿಸಿದೆ. ಪ್ರತಿಯಾಗಿ ಪ್ರವೀಣಕುಮಾರ್  ‘we believe in minimum strength and maximum effect’ ಎಂದು ಹೇಳಿದರು.

ಮುಂಜಾಗ್ರತಾ ಕ್ರಮವಾಗಿ ಗದಗಿನಲ್ಲಿ ನಿಷೇಧಾಜ್ಞೆಯನ್ನೂ ಜಾರಿಗೊಳಿಸಲಾಗಿತ್ತು. ಮಾರುಕಟ್ಟೆ ಪ್ರದೇಶದಲ್ಲಿ ಸುತ್ತು ಹೊಡೆಯುವಾಗ ಕೆಲವು ಅಂಗಡಿಗಳ ಮೇಲೆ ಕಲ್ಲು ತೂರುತ್ತಿದ್ದುದು ಕಂಡುಬಂತು. ಜೀಪಿನಿಂದ ಕೆಳಗೆ ಇಳಿದು ನಿಂತಿದ್ದ ನನ್ನತ್ತಲೂ ಕಲ್ಲುಗಳು ತೂರಿಬಂದವು. ತಕ್ಷಣ ಚಾಲಕ ಕೆ.ಎಂ. ಅಗಸಿಮನಿ ನನಗೆ ಜೀಪ್ ಏರುವಂತೆ ಮನವಿ ಮಾಡಿದ. ನಾನು ಪೊಲೀಸ್ ಠಾಣೆಗೆ ಬಂದೆ. ಸರ್ಕಲ್ ಇನ್ಸ್‌ಪೆಕ್ಟರ್ ಲಕ್ಷ್ಮಯ್ಯ ಮತ್ತು ಅವರ ಸಿಬ್ಬಂದಿ ನೆರವಿನೊಂದಿಗೆ ಪ್ರತಿಭಟನಾಕಾರರನ್ನು ಚದುರಿಸಿದೆವು.

ಇದೆಲ್ಲ ನಡೆಯುವ ವೇಳೆಗೆ ಬೆಳಗಿನ ಸುಮಾರು 11.30 ಆಗಿತ್ತು. ಅಷ್ಟರಲ್ಲಿ ನರಗುಂದದಿಂದ ಸುದ್ದಿ ಬಂತು. ಪಟ್ಟಣದಲ್ಲಿ ಕೋಲಾಹಲದ ವಾತಾವರಣ ಉಂಟಾಗಿದ್ದು, ಎಲ್ಲೆಡೆ ಬೆಂಕಿ ಹೊತ್ತಿ ಉರಿಯುತ್ತಿದೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವರ ಕೊಲೆ ಮಾಡಲಾಗಿದೆ ಎಂಬುದು ತುರ್ತು ಸಂದೇಶದ ಸಾರವಾಗಿತ್ತು.

ತಕ್ಷಣ ನರಗುಂದದ ಕಡೆಗೆ ಹೊರಟೆ. ನರಗುಂದ ತಲುಪಬೇಕಾದರೆ ನವಲಗುಂದದ ಮೂಲಕವೇ ಹಾಯ್ದು ಹೋಗಬೇಕಿತ್ತು. ಅಲ್ಲೂ ಸ್ಮಶಾನ ಮೌನ ಆವರಿಸಿತ್ತು. ರೈತ ಬಸಪ್ಪ ಲಕ್ಕುಂಡಿ ಅವರ ಮೃತದೇಹ ರಸ್ತೆ ಮೇಲೆ ಬಿದ್ದಿತ್ತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎ.ಡಿ.ನಾಯಕ್ ಅಲ್ಲಿಯೇ ನಿಂತಿದ್ದರು. ನರಗುಂದಕ್ಕೆ ಪೊಲೀಸ್ ವಾಹನದಲ್ಲಿ ಹೋದರೆ ಅಪಾಯ ಜಾಸ್ತಿ ಎಂಬ ಭಾವದಲ್ಲಿದ್ದ ನಾಯಕ್ ನನ್ನ ವಾಹನ ಏರಿದರು. ಮುಂದೊಂದು ಕೆಎಸ್‌ಆರ್‌ಪಿ ವಾಹನ, ಮಧ್ಯದಲ್ಲಿ ನನ್ನ ಜೀಪು, ಹಿಂದೆ ನಾಯಕ್ ಅವರ ಕಾರು.

ನರಗುಂದಕ್ಕೆ ಹೋಗಿ ನೋಡುತ್ತೇವೆ, ಯುದ್ಧಭೂಮಿಯಂತೆ ರಕ್ತಮಯವಾಗಿದ್ದ ರಸ್ತೆ, ಹೊತ್ತಿ ಉರಿಯುತ್ತಿದ್ದ ತಾಲ್ಲೂಕು ಕಚೇರಿ, ಸರ್ಕಾರಿ ವಾಹನಗಳು, ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕಲ್ಲುಗಳು, ಗಿಡ-ಕಂಟಿಗಳ ಪಾಲಾಗಿದ್ದ ರೈತರ ಟವಲ್‌ಗಳು, ರಸ್ತೆಯುದ್ದಕ್ಕೂ ಎಲ್ಲೆಂದರಲ್ಲಿ ಬೋರಲಾಗಿ ಮಲಗಿದ್ದ ಕೊಲ್ಲಾಪುರ ಚಪ್ಪಲಿಗಳು, ಭೀಕರ ರೂಪದಲ್ಲಿ ಹೆಣವಾಗಿ ಬಿದ್ದಿದ್ದ ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಪಟೇಲ್, ಪ್ರಜ್ಞೆತಪ್ಪಿ ಬಿದ್ದಿದ್ದ ತಹಶೀಲ್ದಾರ ಫಕೀರಪ್ಪ ವರೂರು ಮತ್ತು ಡಿವೈಎಸ್‌ಪಿ ಪ್ರವೀಣಕುಮಾರ್... ಯುವ ಅಧಿಕಾರಿಯಾಗಿದ್ದ ನನಗೆ ಒಂದು ಕ್ಷಣ ಕತ್ತಲು ಕವಿದಂತಾಯಿತು.

ದೊಂಬಿ ನಿಯಂತ್ರಣಕ್ಕೆ ಬಾರದಿದ್ದಾಗ ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಗೋಲಿಬಾರ್ ಮಾಡಿದ್ದರು. ಅವರ ಗುಂಡಿಗೆ ರೈತ ಈರಪ್ಪ ಕಡ್ಲಿಕೊಪ್ಪ ಬಲಿಯಾದ. ಚದುರಿ ಹೋಗುತ್ತಿದ್ದ ರೈತರು ಪೊಲೀಸರನ್ನು ವಾಪಸ್ ಅಟ್ಟಿಸಿಕೊಂಡು ಬಂದರು. ಸರ್ಕಾರಿ ಆಸ್ಪತ್ರೆಯಲ್ಲಿ ಪಟೇಲ್ ಆಶ್ರಯ ಪಡೆದರು. ಅಲ್ಲಿದ್ದ ನರ್ಸ್‌ಗಳು ಅವರನ್ನು ಬೆಡ್‌ಶೀಟ್‌ಗಳಲ್ಲಿ ಸುತ್ತಿ ಮಂಚದ ಕೆಳಗೆ ಅಡಗಿಸಿಟ್ಟರು.

ಆಸ್ಪತ್ರೆ ಒಳಹೊಕ್ಕ ಉದ್ರಿಕ್ತ ರೈತರು ಸಬ್ ಇನ್ಸ್‌ಪೆಕ್ಟರ್‌ಗಾಗಿ ಎಲ್ಲೆಡೆ ತಡಕಾಡಿದರು. ಮಂಚದ ಕೆಳಗೆ ಬೆಡ್‌ಶೀಟ್ ಸಂದಿಯಲ್ಲಿ ಕರಿಬೂಟು ಕಂಡಿದ್ದೇ ತಡ ಸಬ್ ಇನ್ಸ್‌ಪೆಕ್ಟರ್ ಅವರನ್ನು ಹೊರಗೆಳೆದು ರಸ್ತೆಗೆ ಹಾಕಿ ಕಲ್ಲಿನಿಂದ ಜಜ್ಜಿ, ದೊಣ್ಣೆಗಳಿಂದ ಬಾರಿಸಿ ಜೀವ ತೆಗೆದರು. ಮತ್ತಿಬ್ಬರು ಪೊಲೀಸರೂ ರೈತರ ಹೆಸರಿನಲ್ಲಿ ನಡೆದ ಅಟ್ಟಹಾಸದಲ್ಲಿ ಬಲಿಯಾದರು.

ನಾನು ಗದಗಿನಲ್ಲಿ ಕರ್ತವ್ಯಕ್ಕೆ ಸೇರಿದಾಗ ಬಂದು ಸೆಲ್ಯೂಟ್ ಹೊಡೆದಿದ್ದ ಸಿಕಂದರ್ ಬಲು ಕಟ್ಟುಮಸ್ತಾದ ಯುವಕನಾಗಿದ್ದ. ಅಪಾಯದ ಸನ್ನಿವೇಶದಲ್ಲಿ ಮುನ್ನುಗ್ಗುವ ಎದೆಗಾರಿಕೆ ಆತನಲ್ಲಿತ್ತು. ಆತನ ಮೃತದೇಹದ ಭೀಕರ ರೂಪ ಕಂಡು ಕಣ್ಣುಗಳು ಹನಿಗೂಡಿದ್ದವು. ನರಗುಂದದ ದಾರಿತಪ್ಪಿದ್ದ ವ್ಯವಸ್ಥೆಯನ್ನು ಮತ್ತೆ ಹಳಿಮೇಲೆ ತರುವ ಹೊಣೆ ಹೊತ್ತಿದ್ದ ನಾವು ನೀರಾವರಿ ಇಲಾಖೆ ಪರಿವೀಕ್ಷಣಾ ಮಂದಿರದಲ್ಲಿ ಉಳಿದುಕೊಂಡೆವು.

ತಾಲ್ಲೂಕು ಕಚೇರಿಯಲ್ಲಿ ಒಂದು ತುಂಡು ಕಾಗದವೂ ಇಲ್ಲದಂತೆ ಎಲ್ಲವೂ ಅಗ್ನಿಗೆ ಆಹುತಿಯಾಗಿತ್ತು. ಮಾರನೇ ದಿನ ಬೆಳಗಾವಿ ವಿಭಾಗಾಧಿಕಾರಿ ಡಿ. ಬಾಲಗೋಪಾಲನ್ ಹೊರಟುಬಂದರು. ಘಟನಾ ಸ್ಥಳವನ್ನು ಅವಲೋಕಿಸಿದ ಅವರು, `ಪೊಲೀಸರಿಗೆ ಕೊಟ್ಟ ಬೂಟುಗಳು ಬಲುಭಾರ ಎಂದೆನಿಸುತ್ತದೆ. ಅವುಗಳನ್ನೆಲ್ಲ ಕಳಚಿಟ್ಟು ಓಡಿದ್ದಾರಲ್ಲ' ಎಂದು ಹೇಳುವಾಗ ಆ ಗಂಭೀರ ವಾತಾವರಣದಲ್ಲೂ ಅವರ ಹೇಳಿಕೆ ವಿಚಿತ್ರವೆನಿಸಿತು.

ಬೆಂಗಳೂರಿನಿಂದ ಪೊಲೀಸ್ ಮಹಾನಿರ್ದೇಶಕ ಜಿ.ವಿ. ರಾವ್ ಬಂದರು. ಅವರಿಗೆ ಐ.ಬಿ.ಯಲ್ಲಿ ಮೊದಲ ಸಂಖ್ಯೆಯ ಕೊಠಡಿಯನ್ನೇ ನೀಡಲಾಯಿತು. ಇದ್ದಕ್ಕಿದ್ದಂತೆ ಕೊಠಡಿಯಿಂದ ಹೊರಬಂದ ಅವರು, `ಎಂಜಿನಿಯರ್ ಎಲ್ಲಿದ್ದಾರೆ, ಬರಹೇಳಿ, ಈ ಕೊಠಡಿಯಲ್ಲಿ ಕಮೋಡ್ ಇಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರಿಯಾಗಿ ಹಲ್ಲುಜ್ಜದೆ, ಬಟ್ಟೆ ಬದಲಿಸದೆ ಮೂರು ದಿನ ಕಳೆದಿದ್ದೆವು ನಾವು.

ಮುಖ್ಯಮಂತ್ರಿ ಆರ್. ಗುಂಡೂರಾವ್ ಸಹ ನರಗುಂದಕ್ಕೆ ಬಂದರು. ರೈತರೊಂದಿಗೆ ಮಾತನಾಡಿ ಎಲ್ಲರನ್ನೂ ಸಮಾಧಾನ ಮಾಡಲು ಯತ್ನಿಸಿದರು. ವ್ಯಕ್ತಿಯೊಬ್ಬ ಕಾಗದ ಹಿಡಿದುಕೊಂಡು ಅವರನ್ನು ಕಾಣಲು ಹೊರಟಿದ್ದ. ತುಸು ದೂರದಲ್ಲಿದ್ದ ಮಲಕಣ್ಣನವರ್ ಎಂಬ ಇನ್ಸ್‌ಪೆಕ್ಟರ್ ಆತನನ್ನು ಕರೆದು `ಎಲ್ಲಿಗೆ ಹೊರಟಿರುವೆ' ಎಂದು ಕೇಳಿದರು. `ಮುಖ್ಯಮಂತ್ರಿಗಳಿಗೆ ಮನವಿ ಕೊಡಲು' ಎಂಬ ಉತ್ತರವನ್ನು ಆತ ನೀಡಿದ. ಸಿಟ್ಟಿಗೆದ್ದ ಮಲಕಣ್ಣನವರ್ ಆತನಿಗೆ ಕಪಾಳ ಮೋಕ್ಷ ಮಾಡಿದರು. ಹಲ್ಲೊಂದು ಉದುರಿ ಬಿತ್ತು.

ಅದನ್ನು ತಮ್ಮ ಕೈವಸ್ತ್ರದಲ್ಲಿ ಎತ್ತಿಟ್ಟುಕೊಂಡರು. `ಹೀಗೇಕೆ ಮಾಡಿದಿರಿ' ಎಂದು ಕೇಳಿದರೆ, `ಅದನ್ನೇ ಸಾಕ್ಷ್ಯ ಕೊಟ್ಟು ನನ್ನ ಕೆಲಸಕ್ಕೆ ಕುತ್ತು ತಂದಾನು' ಎಂದು ಅವರು ಸಮಯ ಪ್ರಜ್ಞೆ ತೋರಿದರು. ವಿವಿಧ ವಿನೋದಾವಳಿಯಲ್ಲಿ ನರಗುಂದಕ್ಕೆ ಬಂದ ಮೆರವಣಿಗೆಗಳಿಗೆ ಲೆಕ್ಕವೇ ಇಲ್ಲ. ರಾಜಕಾರಣಿಗಳ ದಂಡೇ ಬಂತು. ಎಲ್ಲರಿಗೂ ಉತ್ತರ ಕೊಟ್ಟು, ಕೊಟ್ಟು ಸಾಕಾಗಿ ಹೋಯಿತು. ಬಳಿಕ ಸರ್ಕಾರ ಕೆಂಪೇಗೌಡ ನೇತೃತ್ವದಲ್ಲಿ ನ್ಯಾಯಾಂಗ ಆಯೋಗವನ್ನು ರಚಿಸಿತು.

ರೈತರು ಸಂಕಷ್ಟದಲ್ಲಿದ್ದಾಗ ಕಷ್ಟ-ಸುಖ ವಿಚಾರಿಸದಿದ್ದ ಮುಖಂಡರೆಲ್ಲ ಬಂಡಾಯದ ಬಳಿಕ ಪ್ರತ್ಯಕ್ಷವಾದರು. ರೈತರ ಮೇಲೆ ಎಲ್ಲರಿಗೂ ದಿಢೀರ್ ಕಾಳಜಿ ಬಂದಿತ್ತು. ಒಂದು ತಿಂಗಳು ಏನೇನು ಘಟನೆಗಳು ನಡೆದವೋ ಗೊತ್ತಿಲ್ಲ. ಬಂದ ಜನರಿಗೆ ಲೆಕ್ಕವಿಲ್ಲ. ರೈತರ ಪರ ಮೊಸಳೆ ಕಣ್ಣೀರು ಸುರಿಸಿದ ದೊಡ್ಡ ನಾಯಕರೆಲ್ಲ ನನಗೆ ಕುಬ್ಜರಂತೆ ಕಂಡರು. ರೈತ ಚಳವಳಿ ಕಾಡಿನ ಬೆಂಕಿಯಂತೆ ರಾಜ್ಯದೆಲ್ಲೆಡೆ ಹಬ್ಬಿತು.

ರೈತರ ಪಾಲಿಗೆ ನೆಲದ ಮೇಲಿನ ನಕ್ಷತ್ರ ಎನಿಸಿದ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರಂತೂ ರೈತ ಜಾಗೃತಿ ಕಹಳೆ ಊದಿದರು. `ಅಪ್ಪಣೆ ಇಲ್ಲದೆ ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ಪ್ರವೇಶ ಇಲ್ಲ' ಎಂಬಂತಹ ಫಲಕಗಳು ಹಳ್ಳಿ-ಹಳ್ಳಿಗಳಲ್ಲಿ ಎದ್ದವು. ರೈತಸಂಘ ಅತ್ಯಂತ ಬಲವಾಗಿದ್ದ ಕಾಲ ಅದು. ರೈತ ಬಂಡಾಯದ ಬಿಸಿಯಲ್ಲಿ ಕಾಂಗ್ರೆಸ್ ಸರ್ಕಾರ ಮೊದಲ ಬಾರಿಗೆ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿತು.

ನಂತರದ ದಿನಗಳಲ್ಲಿ ರಾಮಕೃಷ್ಣ ಹೆಗಡೆ ಅವರ ಸರ್ಕಾರ ಬಂತು. ರೈತ ಸಂಘದಲ್ಲಿ ಸದ್ದಿಲ್ಲದಂತೆ ಒಡಕು ಕಾಣಿಸಿಕೊಂಡು ದುರ್ಬಲಗೊಂಡಿತು. ಬಳಿಕ ಬೆಳೆಗೊಂದು ರೈತ ಸಂಘಗಳು ಹುಟ್ಟಿಕೊಂಡವು. ಊರುಗಳಲ್ಲಿ ಹುಲಿಗಳಂತೆ ಅಬ್ಬರಿಸುವ ರೈತ ಮುಖಂಡರು, ರಾಜಕೀಯ ಸೇರಿ, ವಿಧಾನಸೌಧದ ಮೊಗಸಾಲೆಗೆ ಬಂದೊಡನೆ ಧ್ವನಿಯನ್ನೇ ಕಳೆದುಕೊಂಡರು.

ಬಂಡಾಯದ ನೆಲದಲ್ಲಿ ನಾಶವಾಗಿದ್ದ ದಾಖಲೆಗಳನ್ನು ಮರುಸೃಷ್ಟಿಸಲು ನಮಗೆ ಎರಡು ವರ್ಷಗಳೇ ಬೇಕಾದವು. ಆದರೆ, ಆಗ ಸವಳು ಭೂಮಿಯಲ್ಲಿ ಬೆಂದ ರೈತರು ಮಾತ್ರ ಬದುಕು ಕಟ್ಟಿಕೊಳ್ಳಲು ಇನ್ನೂ ಹೋರಾಟ ನಡೆಸುತ್ತಲೇ ಇದ್ದಾರೆ.
ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT