ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಹುಷ ದೊರೆಯ ಮಕ್ಕಳಿಗೆ ಸುಖವಿಲ್ಲ...

Last Updated 14 ಜೂನ್ 2014, 19:30 IST
ಅಕ್ಷರ ಗಾತ್ರ

ವ್ಯಕ್ತಿಯ ಸುಖದ ಎಲ್ಲೆಗಳು ಯಾವುವು? ವ್ಯಕ್ತಿಯ ಸ್ವಾತಂತ್ರ್ಯದ ಮಿತಿ ಯಾವುದು? ಇವು ಸಾರ್ವಕಾಲಿಕ ಪ್ರಶ್ನೆಗಳು. ಶಿಲಾಯುಗದಿಂದ ಇವತ್ತಿನವರೆಗೆ ಮನುಕುಲ ಕೇಳಿಕೊಳ್ಳಬೇಕಾದ ಅಪೇಕ್ಷಣೀಯವಾದ ಪ್ರಶ್ನೆಗಳು. ತನ್ನ ಸುಖವನ್ನು ಆಚರಿಸುವಾಗ ಇತರರ ಸ್ವಾತಂತ್ರ್ಯಕ್ಕೆ ಅಡ್ಡಿ ಮಾಡಬಾರದು. ಇಂಥ ಒಂದು ಸಾಮಾನ್ಯ ಅರಿವು ಆಧುನಿಕ ಮನುಷ್ಯನ ಅನೇಕ ಸಂಘರ್ಷಗಳನ್ನು ತಪ್ಪಿಸೀತು. ಆದರೆ ಅಂತರಂಗವನ್ನು ಒಳಚರಂಡಿ ಮಾಡಿಕೊಂಡು, ಎಲ್ಲದರಲ್ಲೂ ಬಹಿರ್ಮುಖಿಯಾಗುತ್ತಿರುವ ಆಧುನಿಕ ಮನುಷ್ಯನಿಗೆ ಸಂಘರ್ಷಗಳೆಂದರೆ ಅಚ್ಚುಮೆಚ್ಚು. ಸ್ವಾತಂತ್ರ್ಯಮತ್ತು ಸ್ವೇಚ್ಛೆಯ ನಡುವೆ ಅದೆಷ್ಟು ತೆಳುವಾದ ಗೆರೆ!

ರಷ್ಯಾದ ಕ್ರಾಂತಿಯ ಫಲವಾಗಿ ಸ್ವಾತಂತ್ರ್ಯ ಬಂದ ಮರುದಿನ ಕಿಕ್ಕಿರಿದ ಮಾಸ್ಕೋ ನಗರದ ಬೀದಿಯಲ್ಲಿ ಹೆಂಗಸೊಬ್ಬಳು ಹುಚ್ಚುಹುಚ್ಚಾಗಿ ಹಾವಿನ ನಡಿಗೆಯಲ್ಲಿ ಅಡ್ಡಾಡುತ್ತಿದ್ದಳು. ಪೊಲೀಸನು ಆಕೆಯನ್ನು ತಡೆದು ಸರಿಯಾಗಿ ಒಂದು ಬದಿಯಲ್ಲಿ ನಡೆದು ಹೋಗು ಎಂದರೆ, ‘ಯಾವನಯ್ಯಾ ನೀನು? ನನಗೆ ಸ್ವಾತಂತ್ರ್ಯ ಬಂದಿದೆ’ ಎಂದಳಂತೆ. ನಲವತ್ತೇಳರ ಆಗಸ್ಟ್ ಹದಿನೈದರ ಹಗಲು ಭಾರತದಲ್ಲಿ ಹೀಗೇ ಇದ್ದಿತೆಂದು ಕಾಣುತ್ತದೆ.

ಈಗಿನ ಪಡಿಪಾಟಲು ಏನೆಂದರೆ ನನಗೆ ಮಾತ್ರ ಸುಖ, ಹೆಚ್ಚು ಸುಖ, ಹೆಚ್ಚು ಹೆಚ್ಚು ಸುಖ ಎಂಬಂತಾಗಿ ನನ್ನ ಸುಖವೇ ತನ್ನ ಬದುಕಿನ ಪ್ರಣಾಳಿಕೆಯಾಗಿ ಒಳಮನಸ್ಸಿನ ಏಕಮೇವ ಘೋಷಣೆಯಾಗಿಬಿಟ್ಟಿದೆ. ಮಹಾಭಾರತವು ಯಯಾತಿಯ ಮೂಲಕ ಇದಕ್ಕೆಲ್ಲಾ ಉತ್ತರಿಸುತ್ತದೆ. ಮನುಷ್ಯನ ಹಲವು ಜಿಜ್ಞಾಸೆಗಳಿಗೆ ರಾಮಾಯಣದಲ್ಲಿ ಉತ್ತರ ಸಿಗದಿರಬಹುದು. ಆದರೆ ಮಹಾಭಾರತದ ಪ್ರತಿ ಆಖ್ಯಾನಗಳು, ಉಪಕಥೆಗಳು ಇನ್ನೊಂದು ಮಹಾಭಾರತವೇ ಆಗುತ್ತ ಉತ್ತರಿಸುತ್ತ ಹೋಗುತ್ತವೆ. ಯಯಾತಿ ಆಧುನಿಕ ಮನುಷ್ಯನ ಪ್ರತಿನಿಧಿಯಾಗಿದ್ದಾನೆ.

ಕಣ್ಣಳತೆಯಲ್ಲಿ, ಕೈಯ್ಯಳತೆಯಲ್ಲಿ, ದಿಂಬಿನ ಕೆಳಗೆ, ಕಾರಿನ ಹಿಂಬದಿ ಸೀಟಲ್ಲಿ ಇರಿಸಿಕೊಂಡು ನಾನು ಆಪದ್ಧನದಂತೆ ಬಳಸುತ್ತಿರುವ ಕೆಲವು ಪುಸ್ತಕಗಳಲ್ಲಿ ವಿ.ಎಸ್.ಖಾಂಡೇಕರ್ ಅವರ ಯಯಾತಿಯೂ ಒಂದು. ಇದೇ ಮೂಲವಿರಬೇಕು ಅನ್ನಿಸುವಷ್ಟು ಗಾಢವಾಗಿ ತಟ್ಟುವಂತೆ ವಿ. ಎಂ. ಇನಾಂದಾರ್ ಕನ್ನಡಕ್ಕೆ ತಂದಿದ್ದಾರೆ. ಪ್ರತಿ ಓದಿಗೂ ಇದು ಬಿಟ್ಟುಕೊಡುವ ಹೊಸ ಧ್ವನಿಯಿಂದ ಹತ್ತಾರು ಪಾತ್ರಗಳು, ನೂರಾರು ಘಟನೆಗಳು ತುಂಬಿರುವುದರಿಂದ ಯಯಾತಿಯನ್ನು ಎಲ್ಲಿಂದ ಬೇಕಾದರೂ ಆರಂಭಿಸಿ, ಎಲ್ಲಿ ಬೇಕಾದರೂ ನಿಲ್ಲಿಸಬಹುದು. ಒಂದೆರಡು ಸಾಲುಗಳನ್ನಷ್ಟೇ ಹೆಕ್ಕಿಕೊಂಡು ದಿನಗಟ್ಟಲೆ ಮಥಿಸಬಹುದು.

ಏಕೆಂದರೆ ಇಂದಿನ ಆಸೆಬುರುಕ ಮನುಷ್ಯನ ಪ್ರತಿನಿಧಿಯಾದ ಯಯಾತಿ, ಸರ್ವಸುಖಗಳು ಒಲಿದರೂ ನಿತ್ಯ ಅಸಂತೃಪ್ತ. ಹುಚ್ಚನಂತೆ, ಕುರುಡನಂತೆ ಕ್ಷಣಿಕವಾದ ಶರೀರಸುಖವನ್ನು ಚಿರಂತನವಾಗಿಸಿಕೊಳ್ಳಲು ಚಿಂತಿಸುತ್ತಾನೆ. ದೇವಯಾನಿಯನ್ನು ಮದುವೆಯಾದರೂ ಶರ್ಮಿಷ್ಠೆಯನ್ನು ಪ್ರೀತಿಸುತ್ತಾನೆ. ಅವರಿಬ್ಬರಿಂದ ಐದು ಮಕ್ಕಳನ್ನು ಪಡೆದ ನಂತರವೂ ಅತೃಪ್ತ. ಇಷ್ಟು ಸಾಲದೆಂಬಂತೆ ಮಗನ ತಾರುಣ್ಯವನ್ನು ಕಿತ್ತುಕೊಳ್ಳುತ್ತಾನೆ.

ವೈದೃಶ್ಯವೊಂದನ್ನು ನೆನಪಿಸುವುದಾದರೆ ತಂದೆ ಹುಮಾಯೂನ್ ಮರಣಶಯ್ಯೆಯಲ್ಲಿರುವಾಗ ಮಗ ಬಾಬರ್, ತನ್ನ ಉಳಿಕೆ ಆಯುಷ್ಯವನ್ನು ತಂದೆಗೆ ವರ್ಗಾಯಿಸುವಂತೆ ಅಲ್ಲಾನನ್ನು ಪ್ರಾರ್ಥಿಸುತ್ತಾನೆ. ಯಯಾತಿಯ ಕಾಮವಾಸನೆಗಳು ಅಮಾನುಷ ಮತ್ತು ಅನಿರ್ಬಂಧ. ಭೋಗದ ಕಡಲಿನಲ್ಲಿ ಎಷ್ಟು ಬಾರಿ ಮುಳುಗಿ ಎದ್ದರೂ ಆತನ ವಾಸನಾಕಾಂಕ್ಷೆಗಳಿಗೆ ಮುಕ್ತಿಯೇ ಇಲ್ಲ.

ಮನೋವಿಕಾರದಿಂದ ಅವು ಉಚ್ಛೃಂಖಲ. ಅರಕ್ಷಿತ ಭಾವದಿಂದ ಬಳಲುವ ಯಯಾತಿ, ಯಾವುದಾದರೊಂದು ಪೊಳ್ಳು ಸುಖದ ಹಿಂದೆ ಅಡಗಿ ಕೂರಲು ನಿರಂತರ ಪ್ರಯತ್ನಿಸುತ್ತಾನೆ. ಅವನ ಸಂಯಮಹೀನತೆಯಿಂದ ಅನೇಕರ ಸ್ವಾತಂತ್ರ್ಯ ಮುಕ್ಕಾಗುತ್ತದೆ. ಯಾವುದೇ ವಾಸನೆ, ವಾಸನಾಸ್ವರೂಪದ ನೆಲೆಯಲ್ಲೇ ಉಳಿದರೆ ಅದು ಉನ್ಮಾದವಾಗಿ ರೂಪಾಂತರವಾಗುತ್ತದೆ. ಉನ್ಮಾದಸ್ಥಿತಿ ಅಪಾಯಕಾರಿ.

ಅದಕ್ಕೆ ಉದಾತ್ತತೆಯ ಸ್ಪರ್ಶ ಬೇಕು. ಮನುಷ್ಯ ವಿರಾಗಿಯಲ್ಲ. ಅವನೆಲ್ಲ ವಾಸನಾಮೂಲಕಾಂಕ್ಷೆಗಳನ್ನು ಒಂದು ಮಿತಿಯವರೆಗೆ ತಣಿಸುವ, ತೃಪ್ತಿಗೊಳಿಸುವ ತಿಳಿವಳಿಕೆಯ ಅನುಕೂಲವ್ಯವಸ್ಥೆಯೊಂದು ಇರಲೇಬೇಕಾಗುತ್ತದೆ. ಕೆರಳಿ ನಿಂತ ವಾಸನಾಕಾಂಕ್ಷೆಗಳ ನಿಮಿತ್ತ ಇಂದು ನಮ್ಮ ಸಮಾಜ ಮೃಗಾಲಯವಾಗುತ್ತಿರುವುದರಿಂದಲೇ ಇಷ್ಟೊಂದು ಅತ್ಯಾಚಾರಗಳು ಹಳ್ಳಿಯಿಂದ ದಿಲ್ಲಿವರೆಗೆ ಅವ್ಯಾಹತವಾಗುತ್ತಿವೆ. ಈಗ ಯಯಾತಿಯ ಭೋಗಾಭಿಲಾಷೆಯ ವಿರಾಟ್‌ಸ್ವರೂಪವನ್ನೇ ಕಾಣುತ್ತಿದ್ದೇವೆ. ಸಂಯಮ ಎಂಬ ವಿವೇಕ ಹಾಗೂ ಮೌಲ್ಯ ಕ್ರಮೇಣ ಕಣ್ಮರೆಯಾಗುತ್ತಿದೆ. ನಾಲ್ಕು ಪುರುಷಾರ್ಥಗಳ ಜಾಗವನ್ನು ಅರ್ಥ ಮತ್ತು ಕಾಮಗಳೇ ಆವರಿಸಿಕೊಳ್ಳುತ್ತಿವೆ.

ವೈಯಕ್ತಿಕ ಬದುಕಿನಲ್ಲೂ, ಸಾಮಾಜಿಕ ಬದುಕಿನಲ್ಲೂ ಎಲ್ಲ ಮೌಲ್ಯಗಳನ್ನೂ ಹಣ ಎಂಬುದು ಹಿಂದಿಕ್ಕಿದೆ. ಹಣವಿಲ್ಲದೆ ಏನೂ ಆಗುವುದಿಲ್ಲ; ಹಣವಿದ್ದರೆ ಏನು ಬೇಕಾದರೂ ಮಾಡಬಹುದು ಎಂಬ ಅಪಾಯಕಾರಿ ತೀರ್ಮಾನವನ್ನು ಜಗತ್ತು ಒಪ್ಪಿಕೊಂಡಂತಿದೆ. ಹಣವು ಕಾಮದ ಇನ್ನೊಂದು ರೂಪ. ಕಾಮದ ದಾಹದಷ್ಟೇ ಹಣದ ದಾಹ ಅಪಾಯಕಾರಿ. ಅನ್ನವಾಸನೆಯಷ್ಟೇ ಸಹಜವಾದ ಇವುಗಳನ್ನು ಪೂರ್ವಾಗ್ರಹದಿಂದ ನೋಡಬೇಕಾಗಿಲ್ಲ. ಬದುಕನ್ನು ಮುನ್ನಡೆಸಲು ಅವು ಸ್ವಾಭಾವಿಕವಾಗಿ ಅಗತ್ಯವಾದವು. ಆದರೆ ಅವು ವಿಕಾರಗಳಾದಾಗ, ಅಸ್ವಾಭಾವಿಕವಾದಾಗ ಮನುಷ್ಯ ಯಯಾತಿಯಾಗುತ್ತಾನೆ.

ಯಯಾತಿ ನಹುಷ ದೊರೆಯ ಮಗ. ಹಸ್ತಿನಾಪುರದ ರಾಜ. ಯಯಾತಿಯ ಅಣ್ಣ ಯತಿ. ಶುಕ್ರಾಚಾರ್ಯರ ಮಗಳಾದ ದೇವಯಾನಿ, ಯಯಾತಿಯ ಮೊದಲ ಪತ್ನಿ. ವೃಷಪರ್ವನ ಮಗಳಾದ ಶರ್ಮಿಷ್ಠೆ, ಯಯಾತಿಯ ಎರಡನೆಯ ಪತ್ನಿ. ಯದು ದೇವಯಾನಿಯ ಮಗನಾದರೆ, ಪುರು ಶರ್ಮಿಷ್ಠೆಯ ಮಗ. ಯಯಾತಿಯ ಗೆಳೆಯ ಮಾಧವ. ಈತನ ಪ್ರಿಯತಮೆ ಮಾಧವಿ. ಅಲಕಾ ಪುರುವಿನ ಪ್ರೇಯಸಿ. ಕಚ, ಬೃಹಸ್ಪತಿಯ ಮಗ. ಹೆಸರುಗಳಿಲ್ಲದ ವನ್ಯಜನ, ಸಾಮಾನ್ಯ ಜನ, ಸೇವಕರು, ದಾಸಿಯರು, ಸೈನಿಕರು, ಋಷಿಗಳೂ ಅನೇಕ. ಆರಂಭಕ್ಕೇ ನಗರ ದೇವತೆಗಳ ಉತ್ಸವ. ಅಲ್ಲಿ ಮದವೇರಿದ ಕುದುರೆ ಸವಾರಿಯ ಸ್ಪರ್ಧೆಯನ್ನು ಯೋಧರಿಗಾಗಿ ಏರ್ಪಡಿಸಲಾಗಿದೆ.

ಎಲ್ಲರೂ ಪರಾಭವಗೊಂಡಾಗ ಯುವರಾಜ ಯಯಾತಿ ಅದರ ಮೇಲೆ ಸವಾರಿ ಮಾಡಿ ಸಾಹಸವನ್ನು ಮೆರೆಯುತ್ತಾನೆ. ಇದು ಕೊಂಚ ಹೊತ್ತು ಅಷ್ಟೆ. ಕುದುರೆಯಿಂದ ಕೆಳಗೆ ಬೀಳುತ್ತಾನೆ. ಇದು ಧ್ವನಿಪೂರ್ಣ ಆರಂಭ. ಮರುಕ್ಷಣ ಗಾಯಾಳು ಯಯಾತಿ ಅಂತಃಪುರದಲ್ಲಿ ಅಲಕಾಳಿಂದ ಚಿಕಿತ್ಸೆ ಪಡೆಯುತ್ತಾ ಅವಳ ಹೊಂಬಣ್ಣದ ತಲೆಗೂದಲನ್ನು ಚುಂಬಿಸಲು ಹಾತೊರೆಯುವುದು ಮುಂದಿನ ದೃಶ್ಯವಾಗುತ್ತದೆ. ಯಯಾತಿಯ ಹುಚ್ಚುತನಗಳು ಹೀಗೆ ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಹಸ್ತಿನಾಪುರದ ಹೆಬ್ಬಾಗಿಲಿನಲ್ಲಿ ಅಶ್ವಮೇಧದ ಘೋಷಣೆಯಾಗುತ್ತದೆ.

ವೀರಾವೇಷದಿಂದ ಹೋರಾಡುವ ಯಯಾತಿ ಎದುರಾಳಿಗಳನ್ನು ಹಿಮ್ಮೆಟ್ಟಿಸುತ್ತಾನೆ. ಎಲ್ಲೆಡೆ ಜಯಘೋಷ. ಸಹೃದಯನಿನ್ನೂ ಯಯಾತಿಯ ಪರಾಕ್ರಮದ ಗುಂಗಿನಲ್ಲಿರುವಾಗ ಅಡವಿ ಮಧ್ಯದಲ್ಲಿರುವ ರತಿಯ ನಿರ್ಜೀವ ಮೂರ್ತಿಗೆ ಗುಟ್ಟಾಗಿ ಚುಂಬಿಸುವ ವಿಲಕ್ಷಣ ಯಯಾತಿ ಎದುರಾಗುತ್ತಾನೆ. ಸೈನಿಕರು ದೂರವಿದ್ದಾಗ ಕಾಡಿನ ನಡುವೆ ಒಂಟಿಯಾಗಿ ನಿಂತಿರುವ ರತಿಯ ವಿಗ್ರಹವನ್ನು ಕಂಡು ಮೋಹಿತನಾಗುವ ಅವನು ಈಕೆ ದೇವತೆಯೂ ಅಲ್ಲ -ಪರಸತಿಯೂ ಅಲ್ಲ- ಎಂದು ಚುಂಬಿಸಿದ್ದಕ್ಕೆ ಸಮಾಧಾನಪಟ್ಟುಕೊಳ್ಳುತ್ತಾನೆ. ಯುದ್ಧ ಮತ್ತು ಕಾಮ ಸಮನಾಂತರವಾಗಿ ಸಾಗುತ್ತಾ ಕ್ರಮೇಣ ಯಯಾತಿಯಲ್ಲಿ ಕಾಮವೇ ಮೇಲುಗೈ ಪಡೆಯುತ್ತದೆ.

ಈ ಕೃತಿಯ ಅಸ್ಮಿತೆ ಮತ್ತು ಘನತೆ ಯಾವುದೆಂದರೆ ಪರಸ್ಪರ ವಿರುದ್ಧಗುಣಗಳ ಪಾತ್ರವನ್ನು ಎದುರುಬದುರು ನಿಲ್ಲಿಸುವುದು. ಹೆಣ್ಣುಗಳಲ್ಲಿ ದೇವಯಾನಿ-– ಶರ್ಮಿಷ್ಠೆ ಹೀಗೆ ಮುಖಾಮುಖಿಯಾದರೆ, ಗಂಡುಗಳಲ್ಲಿ ಯಯಾತಿ-–ಯತಿ ಇದ್ದಾರೆ.

ಆರ್ಯಾವರ್ತದುದ್ದಕ್ಕೂ ವಿಜಯ ಸಾಧಿಸಿ, ಅಣ್ಣ ಯತಿಯನ್ನು ವಿಚಿತ್ರ ರೀತಿಯಲ್ಲಿ ಸಂಧಿಸುತ್ತಾನೆ. ಯತಿ, ವಿಗ್ರಹ ಚುಂಬನದ ಮೈಲಿಗೆಯ ನೀನು, ನನ್ನ ಕಾಲುಗಳನ್ನು ಮುಟ್ಟಬೇಡವೆನ್ನುತ್ತಾನೆ. ಮುಳ್ಳುಗಳ ಹಾಸಿಗೆಯ ಮೇಲೆ ಮಲಗುತ್ತಾ, ಕಹಿ ಹಣ್ಣುಗಳನ್ನು ತಿನ್ನುತ್ತಾ, ಗುಹೆಯ ತುಂಬಾ ಕಾಡುಮೃಗಗಳ ಜತೆ ಸಹಜೀವನ ಮಾಡುತ್ತಾ ಸನ್ಯಾಸಿಯಾಗಿರುವ ಯತಿ ಒಂದು ದಿಕ್ಕಾದರೆ, ಭೋಗಾಭಿಲಾಷೆಯ ಯಯಾತಿ ಇನ್ನೊಂದು ದಿಕ್ಕು. ತಾವು ನೆಚ್ಚಿದ ಸುಖವನ್ನು ಅದರ ತಾರಕದಲ್ಲಿ ಇಬ್ಬರೂ ಅನುಭವಿಸುತ್ತಿದ್ದಾರೆ.

ಆದರೂ ಘೋಷವಾಕ್ಯ ಸಾರುತ್ತಿದೆ: ನಹುಷದೊರೆಯ ಮಕ್ಕಳಿಗೆ ಸುಖವಿಲ್ಲ. ಕ್ಷತ್ರಿಯನಾದರೂ ಸುಖವಿಲ್ಲ; ಸನ್ಯಾಸಿಯಾದರೂ ಸುಖವಿಲ್ಲ. ಪಾಣಿಗ್ರಹಣ ಮಾಡಿ ಪತ್ನಿಯಾದ ದೇವಯಾನಿಗೂ ಸುಖವಿಲ್ಲ. ರಾಜಕನ್ಯೆಯಾಗಿಯೂ ಬದುಕಿಡೀ ದಾಸಿಯಾಗಿ ದೇವಯಾನಿಯ ಸೇವೆ ಮಾಡುತ್ತಲೇ ಆಕೆಯ ಪತಿ ಯಯಾತಿಯ ಮನಸ್ಸು ಗೆದ್ದು ಅವನಿಂದ ಮಕ್ಕಳು ಪಡೆಯುವ ಶರ್ಮಿಷ್ಠೆಯೂ ಸುಖಿಯಲ್ಲ.

ಫ್ರಾಯ್ಡ್‌ನಂಥ ಮನೋವಿಜ್ಞಾನಿಗಳ ಪ್ರಯೋಗಾಲಯಕ್ಕೆ ಹೇಳಿಮಾಡಿಸಿದ ವಸ್ತು ಯಯಾತಿ. ಅವನ ಕೆಲವು ಸ್ವಗತಗಳು ಹೀಗಿವೆ:

ಹಿಂದುಗಡೆಯಲ್ಲಿ ಕಿರ್ರೆನ್ನುವ ಕಾಡು, ಮುಂದುಗಡೆಯಲ್ಲಿ ಕಟ್ಟಡವಿ- ಹೀಗಿದೆ ಬದುಕು; ಆ ಕನಸಿನಲ್ಲಿ ನಾನು ಇಡೀ ಪ್ರಪಂಚಕ್ಕೆ ದೊರೆಯಾಗಿದ್ದೆ. ಕೈಯ್ಯಲ್ಲಿ ಚಾಟಿಯೊಂದನ್ನು ಹಿಡಿದು ಸಿಕ್ಕ ಸಾಧು, ಸನ್ಯಾಸಿಗಳನ್ನು ಚಾಟಿಯಿಂದ ಹೊಡೆದು, ರಕ್ತ ಚಿಮ್ಮಿ ಬಂದಾಗ ಸಂತೋಷದಿಂದ ಚಪ್ಪಾಳೆ ತಟ್ಟುತ್ತಿದ್ದೆ; ಜಗತ್ತು ನಡೆಯುವುದು ಶಕ್ತಿಯ ಮೂಲಕ. ಬದುಕುವುದು ಸ್ಪರ್ಧೆಯ ಮೂಲಕ.

ಹಾತೊರೆಯುವುದು ಭೋಗಕ್ಕಾಗಿ. ಕ್ರೌರ್ಯ ಮತ್ತು ಶೌರ್ಯ ಇವೆರಡೂ ಅವಳಿ ಮಕ್ಕಳು; ತಣ್ಣಗಿನ ಆ ಕಲ್ಲಿನ ಸ್ಪರ್ಶದಿಂದ ನನಗೆ ಎಚ್ಚರವಾಗದಿದ್ದರೆ ಒಂದು ಲಕ್ಷ ಸಲ ಆ ಮೂರ್ತಿಯನ್ನು ಚುಂಬಿಸಿದ್ದರೂ ನನಗೆ ತೃಪ್ತಿಯಾಗುತ್ತಿರಲಿಲ್ಲ ; ಸಾವು ಎಂದರೆ ದಿನದ ಅಷ್ಟಪ್ರಹರಗಳುದ್ದಕ್ಕೂ ಅಶ್ವಮೇಧವನ್ನು ನಡೆಸುವ ವಿಜಯಶಾಲಿ ಸಾಮ್ರಾಟ. ಈ ಲೋಕದಲ್ಲಿ ಆತನನ್ನು ವಿರೋಧಿಸಿ ಗೆಲ್ಲಲು ಯಾರಿಗೂ ಸಾಧ್ಯವಿಲ್ಲ.

ಇಂದು ತಂದೆಯವರು ಮಂಚದ ಮೇಲೆ ಬಿದ್ದುಕೊಂಡಿರುವ ಹಾಗೆ ನಾನೂ ಒಂದು ದಿನ ಬಿದ್ದುಕೊಳ್ಳಬೇಕಾಗುತ್ತದೆ. ಎಲ್ಲಿಯಾದರೂ ಓಡಿಹೋಗಬೇಕು, ಮೃತ್ಯುವಿನ ಕೈಗೆ ಸಿಗದ ಗವಿಯಲ್ಲಿ ಅಡಗಿಕೊಳ್ಳಬೇಕು; ವಸಂತ ನೃತ್ಯವನ್ನು ಮಾಡುತ್ತಿದ್ದ ದೇವಯಾನಿ ಚೆಲುವೆಯಾಗಿ, ಕೋಮಲೆಯಾಗಿ, ಅದೇ ಸಮಯದಲ್ಲಿ ಅಂತರಂಗದಲ್ಲಿ ನಿಷ್ಕರುಣಿಯಾದ ಕ್ರೂರಿ ಹೆಂಗಸಾಗಿ ಕಾಣುತ್ತಿದ್ದಳು.

ಮನುಷ್ಯನೆಂದರೆ ದೇವದಾನವರಿಬ್ಬರೂ ಒಂದೆಡೆ ಸೇರಿದ ವಿಚಿತ್ರ ಸಂಕರ ಎನಿಸುತ್ತಿತ್ತು; ಮದ್ಯ, ಮೃಗಯೆ, ಮೀನಾಕ್ಷಿ -ಈ ಮೂರರ ಸಹವಾಸದಲ್ಲಿ ಎಲ್ಲ ದುಃಖಗಳನ್ನೂ ಮನುಷ್ಯ ಮರೆಯಬಲ್ಲ. ಮದ್ಯದಿಂದ ಮನುಷ್ಯನಿಗೆ ರೆಕ್ಕೆಗಳೊಡೆಯುತ್ತವೆ. ನೀತಿ, ಕರ್ತವ್ಯ, ಪಾಪಪುಣ್ಯಗಳೆಲ್ಲ ಅದರ ದಾಹಕ ಸಾಮರ್ಥ್ಯದಲ್ಲಿ ಕರಗಿಹೋಗುತ್ತವೆ. ತನ್ನನ್ನು ಯಾರೂ ಬೇಟೆಯಾಡಬಾರದೆಂಬ ಕಾರಣಕ್ಕೆ ತಾನು ಇನ್ನೊಬ್ಬರನ್ನು ಬೇಟೆಯಾಡುತ್ತಿರುತ್ತಾನೆ. ಪವಿತ್ರ, ಪುಣ್ಯ ಎಂಬ ಪದಗಳು ಕೈಲಾಗದ ಸಜ್ಜನರು ನಿರ್ಮಿಸಿದ ಅರ್ಥವಿಲ್ಲದ ಮಾತುಗಳು. ಸುಂದರ ಯುವತಿಯ ಸಹವಾಸವೆಂದರೆ ಮದ್ಯ ಮತ್ತು ಬೇಟೆ ಎಂಬ ಎರಡು ಸುಖಪ್ರವಾಹಗಳ ಸಂಗಮ.

ಆದರೆ ವಾನಪ್ರಸ್ಥಕ್ಕೆ ಹೊರಟ ಯಯಾತಿ ಮಗ ಪುರುವಿಗೆ ಹೇಳುವ ಕೊನೆಯ ಮಾತುಗಳಿವು: ಸುಖದಲ್ಲಿ, ದುಃಖದಲ್ಲಿ ಒಂದು ವಿಷಯವನ್ನು ಮನಸ್ಸಿನಲ್ಲಿರಿಸಿಕೋ. ಕಾಮ ಮತ್ತು ಧರ್ಮ ಇವು ಬಹಳ ದೊಡ್ಡ ಪುರುಷಾರ್ಥಗಳು. ಪ್ರೇರಕ ಶಕ್ತಿಯನ್ನುಳ್ಳ ಪುರುಷಾರ್ಥಗಳು. ಜೀವಕ್ಕೆ ಪೋಷಕವಾದವುಗಳು. ಆದರೆ ಅವು ಸ್ವೈರವಾಗಿ ನೆಗೆದು ದಾರಿಗೆಡಿಸಬಲ್ಲವು. ಅವು ಯಾವಾಗ ಕುರುಡಾಗುತ್ತವೆ ಎಂದು ಹೇಳಲಾಗುವುದಿಲ್ಲ. ಅವನ್ನು ನಿಯಂತ್ರಿಸುವ ಕಡಿವಾಣವನ್ನು ದಿನದ ಎಂಟು ಪ್ರಹರಗಳಲ್ಲಿಯೂ ಧರ್ಮದ ಕೈಯಲ್ಲಿರಿಸು. ಇಂದು ದಿನೇ ದಿನೇ ಹೆಚ್ಚುತ್ತಿರುವ ಯಯಾತಿಗಳು ಕಿವಿಗೊಡಬೇಕಾದ ಮಾತಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT