ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಿಕತೆ ಅವನತಿಯ ಹಿಂದೆ...

Last Updated 16 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ದೇಶದಲ್ಲಿ ಕಳೆದ ಮೂರು ನಾಲ್ಕು ತಿಂಗಳುಗಳಿಂದ ಧ್ವನಿಯಿಲ್ಲದವರಿಗಾಗಿ ಚಿರಪರಿಚಿತವಾದ ಧ್ವನಿಯೊಂದು ಕೇಳಿ ಬರತೊಡಗಿದೆ. ಬಹುಶಃ ಇದು ತಮ್ಮ ಚಳವಳಿಯ ಮೂಲಕ ಸರ್ಕಾರವನ್ನೇ ಅಲುಗಾಡಿಸಿದ, ಸರ್ಕಾರದ ಕೆಲಸ ಆಡಳಿತವೇ ಹೊರತು ಆಳುವುದಲ್ಲ ಎಂದು ಎಚ್ಚರಿಕೆಯ ಗಂಟೆ ಮೊಳಗಿಸಿದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರಿಗೆ ದೊರೆತ ಜನರ ಅದ್ವಿತೀಯ ಬೆಂಬಲವೇ ಕಾರಣವಿರಬಹುದು.

ಇನ್ನೂ ಸರಳವಾಗಿ ಹೇಳಬೇಕೆಂದರೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂತಃಪ್ರಜ್ಞೆಯುಳ್ಳ ಯುವ ಪೀಳಿಗೆಯ ಅಧಿಕಾರಿಗಳು ತಮಗೆ ದೊರೆಯುತ್ತಿರುವ ಜಾಗೃತ ಮತ್ತು ಸಾಮಾಜಿಕ ಗುಂಪುಗಳ ಬೆಂಬಲದಿಂದ ದನಿಯೆತ್ತಲು ತೊಡಗಿದ್ದೂ ಕಾರಣವಿರಬಹುದು. ವಿವಾದಕ್ಕೆ ಗುರಿಯಾದ ಇತ್ತೀಚಿನ ಕೆಲವು ಯೋಜನೆಗಳು ಸ್ಥಗಿತಗೊಂಡ್ದ್ದದರಲ್ಲಿ ಈ ದನಿಯ ಮಹತ್ವವನ್ನೂ ಕಾಣಬಹುದು.

ಕೆಲ ದಿನಗಳ ಹಿಂದೆ ಪೋಸ್ಕೊ ಮತ್ತು ಧಿನಿಕಾ (ಒಡಿಶಾ ತೀರದಲ್ಲಿ)ದಲ್ಲಿ  ಸಣ್ಣ ಮತ್ತು ದೊಡ್ಡ ಭೂಮಾಲೀಕರು ಯೋಜನೆಗಳ ವಿರುದ್ಧ ನಿರಂತರವಾಗಿ ಪ್ರತಿಭಟನೆ  ನಡೆಸುತ್ತಲೇ ಬಂದಿದ್ದು ಕೊನೆಯಲ್ಲಿ ಪೋಸ್ಕೊ  ಹೋರಾಟಕ್ಕೆ ಜಯ ದೊರೆತು ಬೇರೆ ಕಡೆಗೆ ಸ್ಥಳಾಂತರಗೊಂಡಿತು.

ಆದರೆ, ಇದೇ ವೇಳೆ ಆಗಸ್ಟ್ ತಿಂಗಳ ಆರಂಭದಲ್ಲಿ  ಕರ್ನಾಟಕದಲ್ಲಿ ಒಂದು ಪ್ರಮುಖ ಬೆಳವಣಿಗೆಯೊಂದು ಕಂಡುಬಂತು. ರೂ 27,000 ಕೋಟಿ  ( 6 ಶತಕೋಟಿ ಡಾಲರ್)  ಮೌಲ್ಯದ  ವಾರ್ಷಿಕ 6 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಉಕ್ಕು ಘಟಕವನ್ನು ಅಷ್ಟೇನೂ ಚಿರಪರಿಚಿತವಲ್ಲದ ರಾಜ್ಯ ವನ್ಯಜೀವಿ ಮಂಡಳಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ರದ್ದುಪಡಿಸಿದರು.

ಕಳೆದ ವರ್ಷದ ಜೂನ್ ತಿಂಗಳಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಈ ಯೋಜನೆಗೆ ಅನುಮತಿ ದೊರೆತಿತ್ತು. ಇದಕ್ಕೆಂದೇ ಬಳ್ಳಾರಿ ಜಿಲ್ಲೆಯ ದಾರೋಜಿ ಕರಡಿ ಧಾಮದ ಬಳಿಯ ಸೂಕ್ಷ್ಮ ಪ್ರದೇಶವನ್ನು  ಸರ್ಕಾರ ನಿಗದಿಪಡಿಸಿತ್ತು ಕೂಡ.

ಈ ಹಿನ್ನೆಲೆಯಲ್ಲಿ ರತ್ನಗಿರಿ ಜಿಲ್ಲೆಯ ಜೈತಾಪುರ ಮತ್ತು ಒಡಿಶಾದ ಧಿನಿಕಾ ಗ್ರಾಮದ ಜನರು ಈಗಲೂ ಸರ್ಕಾರ ತನ್ನ ನಿಲುವನ್ನು ಬದಲಾಯಿಸುವುದೇ ಎಂದು ಕಾದು ನೋಡುತ್ತಿದ್ದಾರೆ.

ಈ ಎರಡೂ ಯೋಜನೆಗಳು ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ಪ್ರದೇಶವನ್ನು ಅಂತೆಯೇ ವಿಂದ್ಯಶ್ರೇಣಿಯನ್ನೂ ಸಂಪೂರ್ಣವಾಗಿ ನಾಶ ಮಾಡುತ್ತದೆ. ಇವೆರಡೂ ಯೋಜನೆಗಳಲ್ಲಿ ಒಂದು ಸಮಾನವಾದ ಸಂಗತಿಯೊಂದಿದೆ.

ಭೂಮಿಯೊಳಗಿನ  ನೂರಾರು ದಶಲಕ್ಷ ವರ್ಷಗಳಷ್ಟು ಹಿಂದಿನ ಸಂಪನ್ಮೂಲಗಳನ್ನು ಬಗೆದು ಬರಿದು ಮಾಡುವುದೇ ಈ ಎರಡೂ ಯೋಜನೆಗಳ ಸಮಾನ ಸಂಗತಿಗಳಾಗಿವೆ.

ಸಂಪನ್ಮೂಲಗಳ ನಾಶಕ್ಕಿಂತಲೂ ಅಪಾಯಕಾರಿದದ್ದು ಏನೆಂದರೆ, ಈ ಯೋಜನೆಯಿಂದ ಈ ಪ್ರದೇಶಗಳ ಹೇರಳ ಸಸ್ಯ ಸಂಪತ್ತು, ವಿವಿಧ ಬಗೆಯ ಪಕ್ಷಿ ಸಂಕುಲಗಳೇ ನಿರ್ನಾಮವಾಗುವುದಲ್ಲದೆ  ಅರಣ್ಯಗಳು, ಬೆಟ್ಟ ಗುಡ್ಡಗಳ ನಾಶದಿಂದ ನಮ್ಮ ನಿಮ್ಮಂತಹ ಅದೆಷ್ಟೋ ಮಂದಿಯ ಬದುಕಿಗೆ ಅಗತ್ಯವಾದ ನೀರು, ಇಂಧನಗಳೇ ಇಲ್ಲವಾಗಿ ಬದುಕು ದುರ್ಬರವಾದೀತು. 

ಭೂಮಿಗೆ ಪುನರುತ್ಪಾದನಾ ಸಾಮರ್ಥ್ಯವಿದೆ. ಅದು ಭೂಮಿಗೆ ದೊರೆತ ವರವೂ ಹೌದು. ಆದರೆ, ಭೂಮಿಯ ಮೇಲ್ಪದರವನ್ನೇ ಕಿತ್ತು ಹಾಕಿದಲ್ಲಿ ಅದು ಕೇವಲ 2500 ವರ್ಷಗಳಷ್ಟು ಪುರಾತನವಾದ ನಮ್ಮ ನಾಗರಿಕತೆ ಮಾತ್ರವಲ್ಲ ಭೂಮಿಯ ಅಸ್ತಿತ್ವಕ್ಕೇ ಮಾರಕವಾಗಬಲ್ಲದು.

ಚರಿತ್ರೆಯಲ್ಲಿ ಬರುವ ಯಾವುದೇ ನಾಗರಿಕತೆಯ ಪುಟ ತೆರೆದು ನೋಡಿದಾಗ ಅವುಗಳ ಅವನತಿಯ ಕಥೆ ಅನಾವರಣಗೊಳ್ಳುತ್ತದೆ.

ಸುಮೇರಿಯನ್ ಮತ್ತು ಮೆಸಪೊಟೊಮಿಯಾ, ರೋಮನ್ ಮತ್ತು ಈಜಿಪ್ಟ್, ಇಂಕಾನ್ ಮತ್ತು ಮಯಾನ್ ನಾಗರಿಕತೆಗಳಲ್ಲಿ ಪರಿಸರವನ್ನು ಸಂರಕ್ಷಿಸುವುದಕ್ಕಿಂತಲೂ ಹೆಚ್ಚಿನ ಶಕ್ತಿ ಬದುಕಿನ ನಿರ್ವಹಣೆಗೆ ಬಳಸಿಕೊಂಡಾಗ ಇಡೀ ನಾಗರಿಕತೆಯೇ ಅವನತಿಯತ್ತ ಸಾಗಿತು.   

ಒಂದು ಸಣ್ಣ ಭೂಪ್ರದೇಶದ ಪುನರುತ್ಪಾದನಾ ಸಾಮರ್ಥ್ಯಕ್ಕೆ ಧಕ್ಕೆ ಒದಗಿದಾಗ ಪರಿಸರ ವ್ಯವಸ್ಥೆಗೆ ಅಗತ್ಯವಾದ ಸೂಕ್ಷ್ಮ ಸಮತೋಲನವೇ ನಾಶವಾಗುತ್ತದೆ. 

ಭಾರತದ ಈಗಿನ ಭೂಪ್ರದೇಶಕ್ಕಿಂತಲೂ 2-3 ಪಟ್ಟು ವಿಸ್ತೀರ್ಣ ಹೊಂದಿದ್ದ ಮತ್ತು  ಸುಮಾರು 8 ಲಕ್ಷದಷ್ಟು ಜನಸಂಖ್ಯೆಯ ನಗರಗಳನ್ನು ಹೊಂದಿದ್ದ ಸಿಂಧೂ ಕಣಿವೆ  60-70 ವರ್ಷಗಳಲ್ಲಿ ಸಂಪೂರ್ಣವಾಗಿ ನಾಶಗೊಂಡವು. ನದಿಗಳು ಮತ್ತು ಅರಣ್ಯ ಪ್ರದೇಶಗಳ ನಾಶವೇ ಈ ಅವನತಿಗೆ ಕಾರಣವಾಗಿತ್ತು.

ಆದರೆ, ಆಶಾದಾಯಕ ಸಂಗತಿ ಏನೆಂದರೆ ಬೆಳವಣಿಗೆ ಮತ್ತು ಅಭಿವೃದ್ಧಿಯ ನಡುವಿನ ವ್ಯತ್ಯಾಸವನ್ನು ಗುರುತಿಸುವಂತಹ ಜಾಗೃತ ವ್ಯವಸ್ಥೆಯೊಂದನ್ನು ನಾವೀಗ ಭಾರತದಲ್ಲಿ ನೋಡುತ್ತಿದ್ದೇವೆ. ಅದೇ ಈಗ ನಮ್ಮ ಭವಿಷ್ಯಕ್ಕೆ ಭರವಸೆಯನ್ನೂ ನೀಡುತ್ತಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT