ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡೋಜರಾದ ಕಲಬುರ್ಗಿಯವರು

Last Updated 20 ಡಿಸೆಂಬರ್ 2010, 10:30 IST
ಅಕ್ಷರ ಗಾತ್ರ

‘ನಾಡೋಜ’ ಎನ್ನುವುದು ಪಂಪ ತನಗೇ ತಾನೇ ಆತ್ಮವಿಶ್ವಾಸದಿಂದ ಇಟ್ಟುಕೊಂಡ ಹೆಸರು. ನಾಡಿನ ಓಜ (=ಗುರು) ಎಂಬುದು ಇದರರ್ಥ. ನಾಡೋಜ ಪದದಲ್ಲಿ, ನಾಡು ಎಂಬ ಅಚ್ಚಗನ್ನಡದ ದೇಸಿ ಶಬ್ದವು ಓಜ ಎಂಬ ಪ್ರಾಕೃತದ ಜತೆ ಮಿಲನಗೊಂಡಿದೆ. ಇದಕ್ಕೆ ಪೂರಕವಾಗಿ ಪಂಪ ತನ್ನ ಕಾವ್ಯ ‘ದೇಸಿಯೊಳ್ ಪುಗುವುದು, ಪೊಕ್ಕ ಮಾರ್ಗದೊಳೆ ತಳ್ವುದು’ (ತಳ್=ಮಿಲನವಾಗು) ಎಂದು ಮಿಲನ ತತ್ವ ಸಾರಿಕೊಂಡನು. ಈ ಕಾರಣದಿಂದ ‘ನಾಡೋಜ’ ಎಂಬ ಕೂಡುಪದವು ದೇಸಿ-ಮಾರ್ಗಗಳ ಕೂಟದ ಒಂದು ರೂಪಕ ಕೂಡ. ಸಹಸ್ರಮಾನಕ್ಕೂ ಮಿಕ್ಕಿದ ಚರಿತ್ರೆಯುಳ್ಳ ಕನ್ನಡ ಸಾಹಿತ್ಯ ವೃಕ್ಷದಲ್ಲಿ, ಒಳ್ಳೆಯ ಹೂಹಣ್ಣು ಬಂದಿರುವುದೇ ಈ ಕೂಟದ ಕಸಿಪ್ರಜ್ಞೆಯಲ್ಲಿ. ಇದಕ್ಕೆ ಬೇಂದ್ರೆಕಾವ್ಯ, ‘ಮಲೆಗಳಲ್ಲಿ ಮದುಮಗಳು’, ‘ಗದುಗಿನ ಭಾರತ’, ‘ಕುಸುಮಬಾಲೆ’ ಎಲ್ಲವೂ ಪುರಾವೆಗಳು.

ಆದಿಕವಿ ಪಂಪನೊಂದಿಗೆ ಸಮೀಕರಣಗೊಂಡಿರುವ ಈ ಪದವಿಯ ಗೌರವ ಕಲಬುರ್ಗಿ ಅವರಿಗೆ ಸಂದಿರುವುದು ಎರಡು ಕಾರಣಕ್ಕೆ ಅರ್ಥಪೂರ್ಣವಾಗಿದೆ:

1. ಪಂಪ, ಕಲಬುರ್ಗಿಯವರ ಪ್ರೀತಿಯ ಕವಿ. ಅವರ ಬರೆಹ ಮತ್ತು ಮಾತಲ್ಲಿ ಪಂಪ ಮತ್ತೆ ಮತ್ತೆ ಸುಳಿಯುತ್ತಾನೆ. ತಮಗೆ ‘ಪಂಪ ಪ್ರಶಸ್ತಿ’ ಬಂದಾಗ, ಅದರ ಮೊತ್ತವನ್ನು ಪಂಪನ ತಾಯೂರಾದ ಅಣ್ಣಿಗೇರಿಯಲ್ಲಿ ಒಂದು ಸ್ಮಾರಕ ನಿರ್ಮಾಣಕ್ಕೆಂದು ಅವರು ಕೊಟ್ಟುಬಿಟ್ಟರು. ತೆಲಂಗಾಣದಲ್ಲಿರುವ ಪಂಪನ ಪೂರ್ವಜರ ಊರಾದ ಕುರಿಕ್ಯಾಲಕ್ಕೆ- ಭಕ್ತರು ತೀರ್ಥಯಾತ್ರೆಗೆ ಹೋಗುವಂತೆ- ಹೋಗಿಬಂದರು; ಬರುವಾಗ ತಂದ ಕುರಿಕ್ಯಾಲ ಶಾಸನದ ಮಸಿಯಚ್ಚಿನ ಪ್ರತಿಗೆ  ಫ್ರೇಂ ಕಟ್ಟಿಸಿದರು. ಈಗಲೂ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಹೊಕ್ಕರೆ, ಮೊದಲು ಕಾಣುವುದು ಕುರಿಕ್ಯಾಲ ಶಾಸನದ ನಿಲುವೆತ್ತರದ ಪ್ರತಿಕೃತಿಯೇ. 

2. ಕಲಬುರ್ಗಿಯವರು ವಿದ್ಯಾರ್ಥಿಗಳ ಪಾಲಿಗೆ ಒಬ್ಬ ಶ್ರೇಷ್ಠ ಓಜರು. ವಿಶ್ವವಿದ್ಯಾಲಯಗಳಲ್ಲಿ ಇರುವವರಿಗೆ ಅವರ ಜಾಗದ ಬಲದಿಂದಲೇ ಒಂದು ಪ್ರಭಾವಳಿ ಒದಗುತ್ತದೆ. ಆದರೆ ಕೆಲವರು ತಮ್ಮ ಕೆಲಸದ ಕಾರಣದಿಂದಲೇ ತಾವಿರುವ ಸಂಸ್ಥೆಗೆ ಘನತೆ ತರುತ್ತಾರೆ. ಕಲಬುರ್ಗಿ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿದ್ದಾಗ, ತಮ್ಮ ಇರುವಿಕೆಯಿಂದಲೇ ಅದಕ್ಕೊಂದು ವಿದ್ವತ್ ಪ್ರಭೆಯನ್ನು ನಿರ್ಮಿಸಿದ್ದರು. ಕಲಬುರ್ಗಿಯವರ ನೂರಾರು ಶಿಷ್ಯರನ್ನು ನನ್ನ ತಿರುಗಾಟದಲ್ಲಿ ಭೇಟಿಯಾಗಿದ್ದೇನೆ. ಎಲ್ಲರೂ ಅವರ ಪಾಠದ ಶಿಸ್ತು ಮತ್ತು ಆಕರ್ಷಣೆಯನ್ನು ಮನದುಂಬಿ ನೆನೆಯುವವರೇ. ಸ್ವತಃ ಕಲಬುರ್ಗಿ ತಮ್ಮ ವಿದ್ಯಾಗುರುಗಳಾದ ಪ್ರೊ.ಬಿ.ಟಿ. ಸಾಸನೂರರನ್ನು ಹೀಗೇ ಕೃತಜ್ಞತೆಯಿಂದ ನೆನೆವುದುಂಟು. ನನಗೆ ಕಲಿಸಿದ ಜಿ.ಎಚ್.ನಾಯಕ ಮತ್ತು ಎಚ್.ಎಂ.ಚನ್ನಯ್ಯ ಕೂಡ ತಮ್ಮ ಕಾಲದ ಶ್ರೇಷ್ಠ ಓಜರು. ಪ್ರೊಫೆಸರುಗಳಾದ ಕೆ.ಮರುಳಸಿದ್ಧಪ್ಪ, ವಿವೇಕ ರೈ, ಕಿ.ರಂ.ನಾಗರಾಜ, ಬರಗೂರು ರಾಮಚಂದ್ರಪ್ಪ, ಶ್ರೀಕಂಠ ಕೂಡಿಗೆ- ಮುಂತಾದವರ ಬಗ್ಗೆಯೂ ಅವರ ಶಿಷ್ಯರಿಂದ ಮೆಚ್ಚುಮಾತನ್ನು ಕೇಳಿರುವೆ. ಒಳ್ಳೆಯ ಓಜರಲ್ಲಿ ಪಾಠ ಕೇಳುವುದಕ್ಕೂ ಅದೃಷ್ಟ ಬೇಕೆಂದು ಕಾಣುತ್ತದೆ.

ಕಲಬುರ್ಗಿ ಅವರು ಕನ್ನಡ ವಿಶ್ವವಿದ್ಯಾಲಯಕ್ಕೆ ಕುಲಪತಿಗಳಾಗಿ ಬಂದ ಮೇಲೆ, ಅವರ ಜತೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿತು. ಅವರ ಸಂಶೋಧನ ವಿಧಾನ ಮತ್ತು ಲೋಕದೃಷ್ಟಿಯ ಬಗ್ಗೆ ನನಗೂ ನನ್ನ ಗೆಳೆಯರಿಗೂ ಬೇಕಾದಷ್ಟು ತಾತ್ವಿಕ ಭಿನ್ನಮತ ಮತ್ತು ಪ್ರಶ್ನೆಗಳಿದ್ದವು. (ಈಗಲೂ ಅವು ಇವೆ). ಆದರೆ ಅವರಲ್ಲಿದ್ದ ವಿದ್ವತ್ತು, ಸಂಸ್ಥೆ ಕಟ್ಟುವ ಛಲ ಹಾಗೂ ದುಡಿಪ್ರಜ್ಞೆಯ ಕಾರಣಕ್ಕಾಗಿ ನಾವು ಅವರನ್ನು ಪ್ರೀತಿಸಿದೆವು. ಅವರೊಂದಿಗೆ ಮನಃಪೂರ್ವಕ ಕೈಜೋಡಿಸಿದೆವು. ಮೂರು ವರ್ಷ ಅವರ ಜತೆ ಕೆಲಸ ಮಾಡಿದ್ದು ನಮ್ಮ ಮಹತ್ವದ ಗಳಿಗೆಗಳು. ತಮ್ಮ ಜಾನಪದ ಪ್ರತಿಭೆಯಿಂದಲೂ ಕವಿಸಹಜ ಕಲ್ಪಕತೆಯಿಂದಲೂ ಮೊದಲ ಕುಲಪತಿ ಚಂದ್ರಶೇಖರ ಕಂಬಾರರು ಬುನಾದಿ ಹಾಕಿಹೋಗಿದ್ದರು; ಬಳಿಕ ಬಂದ ಕಲಬುರ್ಗಿಯವರು ಅದರ ಮೇಲೆ ಭದ್ರವಾದ ಸೌಧ ಎಬ್ಬಿಸಿದರು. ಕಂಬಾರರ ಬಳಿಕ ಕಲಬುರ್ಗಿಯವರು ಬಂದಿದ್ದು, ಕನ್ನಡ ವಿಶ್ವವಿದ್ಯಾಲಯದ ಪಾಲಿಗೆ, ‘ದೇಸಿಯೊಳ್ ಪೊಕ್ಕು ಮಾರ್ಗದೊಳೆ ತಳ್ವಿ’ದ ಅನುಭವವಾಯಿತು. 

ವಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಯರಗಲ್ ಎಂಬ ಅನಾಮಿಕ ಹಳ್ಳಿಯ ಸಣ್ಣ ರೈತಾಪಿ ಕುಟುಂಬದಿಂದ ಬಂದ, ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿ (1938) ಅವರು, ಧಾರವಾಡದಲ್ಲಿ ಕಲಿತು, ಕಲಿಸಿ, ನೆಲೆಸಿದರು; ಸಾಹಿತ್ಯ ಭಾಷೆ ವ್ಯಾಕರಣ ಗ್ರಂಥ ಸಂಪಾದನೆ ಹಸ್ತಪ್ರತಿ ಸ್ಥಳನಾಮ ಛಂದಸ್ಸು- ಮುಂತಾದ ಕ್ಷೇತ್ರಗಳಲ್ಲಿ ಅರ್ಧ ಶತಮಾನದ ಕಾಲ ಕೆಲಸ ಮಾಡಿದರು. ಯಾರೂ ಗೌರವಿಸಬೇಕಾದ ಈ ಸಾಧನೆಯ ಹಿಂದಿರುವುದು ಅವರ ಅವಿಶ್ರಾಂತ ಶ್ರಮ; ವೆಂಕಟಾಚಲ ಶಾಸ್ತ್ರಿಯವರು ಹೇಳಿರುವಂತೆ ‘ಹರಕೆ ಹೊತ್ತವರ ಹಾಗೆ’ ಕೆಲಸ ಮಾಡುವ ಅವರ ಶ್ರದ್ಧೆ.

‘ಅವಿಶ್ರಾಂತ’ ಎಂದಾಗ ನೆನಪಾಯಿತು. ಈಚೆಗೆ ಕೂಡಲಸಂಗಮದಲ್ಲಿ ನಡೆದ ಸಭೆಯಲ್ಲಿ, ಸ್ವಾಗತ ಭಾಷಣಕಾರರೊಬ್ಬರು ಕಲಬುರ್ಗಿ ಅವರನ್ನು ಪರಿಚಯಿಸುತ್ತ ‘ವಿಶ್ರಾಂತ ಕುಲಪತಿ’ ಎಂದರು; ಆಗ ನನ್ನ ಪಕ್ಕದಲ್ಲಿದ್ದ ಒಬ್ಬರು ಗೊಣಗಿದರು: ‘ಯಾವತ್ತು ನೋಡಿದರೂ ಓದತಾ, ಬರೀತಾ, ತಿರಗಾಡ್ತಾ ಇರ್ತಾರ. ಎಂಥ ವಿಶ್ರಾಂತರು?’. ನಮ್ಮ ವಿದ್ಯಾಲಯಗಳಲ್ಲಿ ಕೆಲವು ಪ್ರಾಧ್ಯಾಪಕರು ಸೇವೆಯಿನ್ನೂ ಬಾಕಿ ಇರುವಾಗಲೇ ಬೌದ್ಧಿಕವಾಗಿ ವಿಶ್ರಾಂತ ಸ್ಥಿತಿಗೆ ಮುಟ್ಟಿರುವರು; ಅವರನ್ನು ನೋಡುವಾಗ, ಕಲಬುರ್ಗಿ, ಎಲ್.ಬಸವರಾಜು ಅವರಂತಹವರು ಅವಿಶ್ರಾಂತ ಪ್ರಾಧ್ಯಾಪಕರೇ ಸೈ. ಹಂಪಿಯಲ್ಲಿದ್ದಾಗಲೂ ನಾವು ಅವರನ್ನು ಹೆಚ್ಚಾಗಿ ಕಂಡಿದ್ದು ಕಡತಗಳಿಗೆ ಸಹಿ ಮಾಡುವ ಸ್ಥಿತಿಯಲ್ಲಲ್ಲ; ಯಾವುದಾದರೂ ಕರಡನ್ನು ತಿದ್ದುತ್ತಿದ್ದ ಸ್ಥಿತಿಯಲ್ಲಿ! ಈಗಲೂ ಅವರು ಹೊತ್ತಲ್ಲದ ಹೊತ್ತಲ್ಲಿ ಫೋನು ಮಾಡುವುದುಂಟು: ‘ಏ ತರಿಕೆರೀ, ಈ ಸಿದ್ಧರಾಮ ಅದಾನಲ್ಲ, ಅಂವ್ಞಾ ನಾಥ ನೋಡು, ರಾಘವಾಂಕ ಅವನನ್ನ ಸಿದ್ಧನಾಥ ಅಂತ ಕರದಾನ’ ಎಂತಲೊ; ‘ನೀ.. ನೀ ಸೂಫಿಗಳ ಮ್ಯಾಲ ಕೆಲಸ ಮಾಡೀಯಲ್ಲ? ಉತ್ತರ ಕನ್ನಡದೊಳಗ ಸೂಪಾ ಅಂತ ಒಂದು ಊರದ. ಸೂಫಿಗಳಿಗೆ ಏನಾದರು ರಿಲೇಶನ್ ಅದೇಯೇನು ಚೆಕ್ ಮಾಡು’ ಎಂತಲೊ ಅದರಲ್ಲಿ ಸೂಚನೆಗಳಿರುತ್ತವೆ. ನನ್ನಂತಹ ನೂರಾರು ಜನರಿಗೆ ಇಂತಹ ಫೋನುಕರೆ ಹೋಗುತ್ತಿರಬಹುದು.

ಕಲಬುರ್ಗಿಯವರ ಶೋಧದ ಸ್ವರೂಪದ ಬಗ್ಗೆ ಇಲ್ಲಿ ಕೊಂಚ ಹೇಳಬೇಕು. ಕನ್ನಡ ಚಾರಿತ್ರಿಕ ಶೋಧದಲ್ಲಿ ಎರಡು ಮುಖ್ಯ ಮಾದರಿಗಳಿವೆ:

1. ಗತಕಾಲವನ್ನು ವಿಶ್ಲೇಷಿಸುತ್ತ ಇಂದಿಗೆ ನಾಳಿಂಗೆ ಬೇಕಾದ ಹೊಲಬನ್ನು ಹುಡುಕುವ ಸಂಸ್ಕೃತಿ ಶೋಧ. ಇದಕ್ಕೆ ನಿದರ್ಶನ ಶಂಬಾ ಜೋಶಿ. ಚರಿತ್ರೆಯನ್ನು ಅಗೆಯುತ್ತ ಶಂಬಾ, ವರ್ತಮಾನದ ಅವನತಿಗೆ ಕಾರಣಗಳನ್ನು ಗುರುತಿಸುತ್ತಾರೆ; ಇದರಿಂದ ಸಮಾಜ ಹೊರಬರುವುದಕ್ಕೆ ಬೇಕಾದ ಪರ್ಯಾಯಗಳನ್ನು ಸಹ ಸೂಚಿಸುತ್ತಾರೆ. ಈ ಕಾರಣಕ್ಕೆ ಅವರೊಬ್ಬ ದಾರ್ಶನಿಕ ಕೂಡ.

2. ವರ್ತಮಾನದಲ್ಲಿ ಸಿಗುವ ಆಕರಗಳನ್ನು ಬಳಸಿಕೊಂಡು, ಅಸ್ಪಷ್ಟವಾಗಿ ಗತವನ್ನು ಸ್ಪಷ್ಟವಾಗಿ ಕಟ್ಟಿತೋರುವ ಶೋಧ. ಈ ಚಾರಿತ್ರಿಕ ಶೋಧದ ಮಾದರಿಗೆ ಡಿ.ಎಲ್.ನರಸಿಂಹಾಚಾರ್, ಎಂ. ಚಿದಾನಂದಮೂರ್ತಿ, ಎಂ.ಎಂ. ಕಲಬುರ್ಗಿ, ಎಸ್.ಶೆಟ್ಟರ್ ಮುಂತಾದವರು ನಿದರ್ಶನ. ಕೊಂಚ ಸಾಂಪ್ರದಾಯಿಕವಾದ ಈ ಮಾದರಿ ನಮ್ಮ ವಿಶ್ವವಿದ್ಯಾಲಯ ವಲಯಗಳಲ್ಲಿ ವ್ಯಾಪಕವಾಗಿದೆ. ಇದರಲ್ಲಿ ಕೆಲವು ತೊಡಕುಗಳಿವೆ. ಬ್ರಿಟೀಷರು ಭಾರತೀಯರಿಗೆ ಇತಿಹಾಸದ ಪ್ರಜ್ಞೆ ಇಲ್ಲ ಎಂದಾಗ- ‘ಇಲ್ಲ, ನಮಗೂ ಇತಿಹಾಸವಿದೆ, ಇತಿಹಾಸದ ಪ್ರಜ್ಞೆಯಿದೆ ಎಂದು ಜವಾಬು ಕೊಡುತ್ತ ಹುರುಡಿನಲ್ಲಿ ಈ ಮಾದರಿ ಹುಟ್ಟಿತು. ಇದು ಗತಕಾಲದ ಚರಿತ್ರೆಯ ಶೋಧಕ್ಕೆ ಹೆಚ್ಚು ಎಳಸುತ್ತದೆ; ತನ್ನ ಹುಡುಕಾಟಕ್ಕೆ ಶಾಸನ, ಹಸ್ತಪ್ರತಿ ಮುಂತಾದ ಅಕ್ಷರ ಸಾಕ್ಷ್ಯಗಳನ್ನು ನೆಮ್ಮುತ್ತದೆ; ಜನರ ಬದುಕು ಅದರ ಭಾಗವಾದ ಆಚರಣೆ ಮುಂತಾದವು ಅದಕ್ಕೆ ಅಷ್ಟು ನಂಬಲರ್ಹವಲ್ಲದ ಆಕರಗಳೆನಿಸುತ್ತವೆ. ಶಾಸನಗಳನ್ನು ಹೆಚ್ಚು ನೆಚ್ಚಿದ್ದರಿಂದ ಇದು ಕಟ್ಟಿಕೊಡುವ ಚರಿತ್ರೆ ಪ್ರಭುತ್ವ ಕೇಂದ್ರಿತವಾಗುವುದು ಉಂಟು. ಇದರ ಜತೆಗೆ ಶಾಸನಕರ್ತರ ಪರವಾದ ದೃಷ್ಟಿಕೋನವೂ ಸೇರಿಬಿಟ್ಟರಂತೂ ಮುಗಿದೇ ಹೋಯಿತು. (ಚಿದಾನಂದ ಮೂರ್ತಿ ಅವರ ಬಹುಪಾಲು ಶೋಧಗಳ ಸಮಸ್ಯೆ ಇದು). ಕಳೆದುಹೋದ ಕಾಲದ ಚರಿತ್ರೆಯನ್ನು ಕಟ್ಟಲು ಗತವನ್ನು ಹೊಕ್ಕಿಬಿಡುವ ಈ ಮಾದರಿ, ವರ್ತಮಾನದ ಹಂಗನ್ನೇ ಕಡಿದುಕೊಳ್ಳುವ ಸಾಧ್ಯತೆಗಳೇ ಬಹಳ.

ಕೊನೆಗೂ ಯಾವ ಆಕರಗಳನ್ನು ಬಳಸಿ ಶೋಧ ಮಾಡಲಾಗುತ್ತದೆ ಎನ್ನುವುದು ಮುಖ್ಯವಲ್ಲ; ಶೋಧದ ತುದಿಗೆ ಯಾವ ತೀರ್ಮಾನ ಪಡೆಯಲಾಗುತ್ತದೆ ಮತ್ತು ಆ ತೀರ್ಮಾನ ವರ್ತಮಾನದ ಬದುಕಿನಲ್ಲಿ ಬೆರೆತು ಹೇಗೆ ಕ್ರಿಯಾಶೀಲವಾಗುತ್ತದೆ ಎಂಬುದು ಮುಖ್ಯ. ‘ವರ್ತಮಾನದ ಸಮಸ್ಯೆಗೆ ಗತಕಾಲ ಕಾರಣವಾಗಿದ್ದರೆ, ಅದರ ನಿಜ ಸ್ವರೂಪ ಶೋಧಿಸಿ ಸಮಾಜದಲ್ಲಿ ಸರಿಯಾದ ವಿವೇಕ ಮೂಡಿಸುವುದು ಸಂಶೋಧನೆಯ ಕರ್ತವ್ಯ’ ಎಂದು ಕಲಬುರ್ಗಿ ಅವರು ಒಂದೆಡೆ ಹೇಳುವುದುಂಟು. ಆದರೆ ವರ್ತಮಾನದ ಸಮಸ್ಯೆಗೆ ಕಾರಣ ವರ್ತಮಾನದಲ್ಲೇ ಇದ್ದರೆ ಮತ್ತು ಅದಕ್ಕಾಗಿ ಗತವು ದುರ್ಬಳಕೆ ಆಗುತ್ತಿದ್ದರೆ ಏನು ಮಾಡಬೇಕು? ಈಗ ಭಾರತದ ರಾಜಕಾರಣದಲ್ಲಿ ಆಗುತ್ತಿರುವುದು ಇದೇ ತಾನೇ? ಆಗ ಸಂಶೋಧನೆ ವರ್ತಮಾನದ ರಾಜಕೀಯ ಸಾಮಾಜಿಕ ವಿಶ್ಲೇಷಣೆಗೆ ಹೊರಳಬೇಕಾಗುತ್ತದೆ. ಆದರೆ ಚರಿತ್ರೆಯಲ್ಲಿ ಸ್ಥಳ- ಕಾಲ- ವ್ಯಕ್ತಿ ಘಟನೆಯನ್ನು ಖಚಿತಪಡಿಸಿಕೊಳ್ಳುವುದಕ್ಕೆ ತವಕಿಸುವ ಈ ಸಂಶೋಧನ ಮಾದರಿಗೆ ಇಂತಹ ಹೊರಳುಗುಣ ಕಡಿಮೆ.

ಈ ಹಿನ್ನೆಲೆಯಲ್ಲಿ ಕಲಬುರ್ಗಿ ಅವರ ಬಹುಪಾಲು ಸಂಶೋಧನೆ ‘ಮಾರ್ಗ’ ಪರಂಪರೆಯದು ಎನ್ನಬಹುದು. ಅವರ ಪಿಎಚ್.ಡಿ., ಅಧ್ಯಯನ ಕೂಡ ‘ಕವಿರಾಜಮಾರ್ಗ’ದ ಮೇಲಿತ್ತು. ಸಾಂಸ್ಕೃತಿಕ ಚರಿತ್ರೆ ರಚಿಸಲು ಆಳುವ ವರ್ಗಗಳ ದಾಖಲೆಗಳಾದ ಶಾಸನಗಳ ಮೇಲೆ ಅವರು ಬಹಳಷ್ಟು ಕೆಲಸ ಮಾಡಿದವರು. ಮಾರ್ಗ (ಕ್ಲಾಸಿಕಲ್) ಕವಿಗಳನ್ನು ಹೆಚ್ಚು ಅನುಸಂಧಾನ ಮಾಡಿದರು. ಈ ಹಿನ್ನೆಲೆಯಲ್ಲಿ ಅವರ ಸಂಶೋಧನ ಸಂಪುಟಗಳ ಹೆಸರು ‘ಮಾರ್ಗ’ ಎಂದಿರುವುದು ಸಹಜವಾಗಿದೆ. ಆದರೆ ಮಾರ್ಗದಲ್ಲಿ ಹೋಗುವಾಗ ಅನೇಕ ಸಲ ಕಾಲುದಾರಿಗಳು ಕಾಣುವುದಿಲ್ಲ; ಜನಪದ ದೈವಗಳು ‘ಕ್ಷುದ್ರದೈವಗಳು’ ಅನಿಸಿಬಿಡುತ್ತವೆ.

ಆದರೆ ಕಲಬುರ್ಗಿಯವರ ಶೋಧಗಳ ಇನ್ನೊಂದುಭಾಗ ಮತ್ತು ಮುಖ ಇರುವುದು ಜನ ಬದುಕಿನ ಮೇಲೆ ಅವರು ಮಾಡಿದ ಹುಡುಕಾಟದಲ್ಲಿ. ಇದಕ್ಕೆ, ವಚನ ಸಾಹಿತ್ಯದ ಮತ್ತು ಜಾನಪದ ಆಚರಣೆಗಳ ಅಧ್ಯಯನದಲ್ಲಿ ಅವರು ತೊಡಗಿಸಿಕೊಂಡಿದ್ದು ಒಂದು ಕಾರಣವಿರಬೇಕು. ತಮ್ಮ ಎರಡನೇ ಹಂತದಲ್ಲಿ ಕಲಬುರ್ಗಿಯವರು ಗತಕೇಂದ್ರಿತ ಶೋಧದಿಂದ ಹೊರಳಿಕೊಳ್ಳತೊಡಗಿದರು. ಬಹುಶಃ ಹಂಪಿಗೆ ಬಂದ ಬಳಿಕ ಈ  ಹೊರಳಿಕೆ ಮತ್ತಷ್ಟು ತೀವ್ರಗೊಂಡಿತು. ಎಲ್ಲ ದೊಡ್ಡ ವಿದ್ವಾಂಸರಲ್ಲಿ ಕಾಲಕಾಲಕ್ಕೆ ಹುಟ್ಟುವ ಸ್ವವಿಮರ್ಶೆ ಮತ್ತು ಮರುಹುಟ್ಟಿನ ಗುಣದಂತೆ ಇದು ತೋರುತ್ತದೆ. ಕಲಬುರ್ಗಿ ಅವರ ಹೊರಳಿಕೆಯ ಫಲ ಅವರ ‘ಮಾರ್ಗ-4’ರಲ್ಲಿ (2004) ಕಾಣುತ್ತದೆ. ಇಲ್ಲಿರುವ ‘ಶಾಸನ ಬರವಣಿಗೆ: ತರಮತ ಧೋರಣೆ’, ‘ಕೊಂಡೆಯ ಮಂಚಣ್ಣ’, ‘ಮತಾಂತರ-ಮಂತ್ರದೀಕ್ಷೆ’, ‘ಜೈನಧರ್ಮ: ಶಿಷ್ಯ-ಗುಡ್ಡ’- ಇವು ಅವರ ಮತ್ತು ಕನ್ನಡದ ಶ್ರೇಷ್ಠ ಸಂಶೋಧನ ಲೇಖನಗಳು. ಅದರಲ್ಲೂ ಮತಾಂತರ-ದೀಕ್ಷೆ ಕುರಿತು ಅವರ ಒಳನೋಟಗಳು ಅಪೂರ್ವವಾಗಿವೆ. ವೈದಿಕ ಹಿಂದೂ ಇಸ್ಲಾಂ ಮುಸ್ಲಿಂ ಲಿಂಗಾಯತ ಜೈನ ಬ್ರಾಹ್ಮಣ- ಮುಂತಾದ ಧರ್ಮ ಜಾತಿ ಪಂಥ ಸೂಚಕ ಪರಿಕಲ್ಪನೆಗಳು, ನಮ್ಮಲ್ಲಿ ಏಕರೂಪಿಯಾಗಿ ಬಳಕೆಗೊಳ್ಳುತ್ತಿವೆ. ಈ ಉಂಡೆ ಪರಿಕಲ್ಪನೆಗಳ ಒಳಗೆ ಇರುವ ಬಿರುಕು, ವೈರುಧ್ಯ, ಸಂಘರ್ಷಗಳನ್ನು ಬೆರಳಿಟ್ಟು ತೋರುವ ಇಲ್ಲಿನ ಲೇಖನಗಳು, ನಮ್ಮ ಗ್ರಹಿಕೆಯನ್ನು ಅಲುಗಿಸುತ್ತವೆ; ಪ್ರಾಚೀನ ಕರ್ನಾಟಕ ಸಮಾಜದ ಮೇಲಿನ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸುತ್ತವೆ.  

ಕರ್ನಾಟಕದ ಅಧ್ಯಯನಗಳಿಗೆ ಕನ್ನಡ ಸಂಸ್ಕೃತ ಆಕರಗಳಿಂದ ಮಾತ್ರವಲ್ಲ- ಉರ್ದು, ಮರಾಠಿ, ಫಾರಸಿ, ತೆಲುಗು, ತಮಿಳು, ತುಳು, ಕೊಡವ ಆಕರಗಳಿಂದಲೂ ಪ್ರವೇಶ ಸಾಧ್ಯವಾಗಬೇಕು. ಆಗ ಕರ್ನಾಟಕ ಸಂಸ್ಕೃತಿಯ ಬಹುತ್ವದ ನೋಟದ ದರ್ಶನವಾಗುತ್ತದೆ. ತಮ್ಮ ಮೊದಲ ಹಂತದಲ್ಲಿ ಕನ್ನಡ ಸಂಸ್ಕೃತ ಆಕರಗಳಿಂದ ಪ್ರವೇಶ ಮಾಡಿದ ಕಲಬುರ್ಗಿ ಅವರಿಗೆ, ಇತರ ಭಾಷಿಕ ಆಕರಗಳ ಮೂಲಕ ಪ್ರವೇಶಿಸುವ ಜರೂರು ಹೊಳೆಯಿತು. ಅವರು ಫಾರಸಿ ಉರ್ದು ಶಾಸನಗಳನ್ನು, ಆದಿಲಶಾಹಿ ಕಾಲದ ಇತಿಹಾಸ ಗ್ರಂಥಗಳ ಅನುವಾದಗಳು ಪ್ರಕಟಗೊಳ್ಳುವಂತೆ ಮಾಡಿದರು; ಮರಾಠಿಯಲ್ಲಿದ್ದ ರಾ.ಚಿಂ.ಢೇರೆಯವರ ಹತ್ತಾರು ಕೃತಿಗಳು ಕನ್ನಡಕ್ಕೆ ಬರುವಂತೆ ಮಾಡಿದರು. ಅವರೊಬ್ಬ ಪುಸ್ತಕ ಸಂಸ್ಕೃತಿಯ ವ್ಯಕ್ತಿ. ಅವರ ದೇಖರೇಖಿಗೆ ಒಳಪಡುವ ಎಲ್ಲ ಸಂಸ್ಥೆಗಳೂ ಪ್ರಸಿದ್ಧ ಪ್ರಕಾಶನಗಳಾಗಿ ಬದಲಾಗುತ್ತವೆ. ಅವರಿದ್ದ ಕಾಲಕ್ಕೆ ಕನ್ನಡ ವಿ.ವಿ.ಯಿಂದ ಪ್ರಕಟವಾದ ಪುಸ್ತಕಗಳು 300.

ಧಾರವಾಡಕ್ಕೆ ಹೋದಾಗೆಲ್ಲ ನಾನು ಅವರನ್ನು ಕಾಣುವುದುಂಟು. ಸದಾ ಕ್ರಿಯಾಶೀಲತೆಯ ಚಿಲುಮೆಯಂತಿರುವ ಅವರು ಈಚೆಗೆ ತಮ್ಮನ್ನು ಚಿಪ್ಪಿನೊಳಕ್ಕೆ ಎಳೆದುಕೊಂಡಂತೆ, ಒಂದು ಬಗೆಯ ಹತಾಶೆಯ ಮನೋಭಾವದಲ್ಲಿ ಇರುವಂತೆ ತೋರುತ್ತಿತ್ತು. ಅವರಿಗೆ ಲಿಂಗಾಯತ ಸಮಾಜ ತನ್ನ ಸದ್ಯದ ರಾಜಕೀಯ ಆಯ್ಕೆಯ ಜತೆಯಲ್ಲೇ ಪಡೆಯುತ್ತಿರುವ ವೈದಿಕೀಕರಣದ ಬಗ್ಗೆ ತಳಮಳವಿದ್ದಂತೆ ಕಂಡಿತು. ‘ನಿಮ್ಮ ಬಗ್ಗೆ ಜನರಿಗೆ ಗೌರವವಿದೆ. ಮಾತಾಡಿ ನಿಮ್ಮ ತಳಮಳ  ಹೊರಹಾಕಬಹುದಲ್ಲಾ’ ಎಂದೆ. ಅದಕ್ಕವರು ‘ತರಿಕೆರೀ, ಲಿಂಗಾಯತ ಸಮಾಜ ಡೆಪ್ಯುಟಿ ಚನ್ನಬಸಪ್ಪ, ಅರಟಾಳ ರುದ್ರಗೌಡರ ಕಾಲಕ್ಕ ಅನಸೆಟ್ಲ್ ಇತ್ತು. ಹಿಂಗಾಗೇ ಅದು ಡೈನಮಿಕ್ ಇತ್ತು. ಈಗದು ಸೆಟ್ಲ್ ಆಗ್ಯದ. ತನ್ನ ಚಲನಶೀಲತೆ ಕಳಕೊಂಡದ. ಬಸವತತ್ವದಿಂದ ದೂರ ಹೋಗ್ಲಿಕ್ಕ ಹತ್ಯದ. ಸಮಾಜಕ್ಕ ನಮ್ಮ ಮಾತು ಈಗ ಬೇಕಾಗಿಲ್ಲ. ಈಗೀಗ ಮಾತು ಆಡೋದನ್ನೇ ಕಮ್ಮಿ ಮಾಡೀನಿ’. ಅವರು ಮಾತೇನೋ ಕಡಿಮೆ ಮಾಡಿದರು. ಆದರೆ ಒಂದು ಪುಸ್ತಕ ಪ್ರಕಟಿಸಿದರು. ಅದರ ವಿಷಾದಭರಿತ ಶೀರ್ಷಿಕೆಯ ಹೆಸರು: ‘ಜಂಗಮದಿಂದ ಸ್ಥಾವರಕ್ಕೆ’! ಹೀಗಿದ್ದೂ ಸ್ಥಾವರವಾದಿಗಳ ವಿರುದ್ಧದ ತಮ್ಮ ಕದನವನ್ನೇನೂ ಅವರು ನಿಲ್ಲಿಸಿಲ್ಲ. 

ಸಂಶೋಧನೆಯಲ್ಲಿ ಮುಖ್ಯವಾದುದು, ಪರಂಪರೆಯ ಜತೆಗೆ ಶ್ರದ್ಧೆ ಮಾತ್ರವಲ್ಲ- ಅದರ ಜತೆಗೆ ಹೂಡುವ ಕದನ. ಕೇವಲ ಶ್ರದ್ಧಾವಂತ ಪಯಣಿಗರು ಅನುಕರಣೆಯ ನಕಲು ಪ್ರತಿಗಳನ್ನು ಸೃಷ್ಟಿಸಿದ್ದಾರೆ; ಬರೀ ಜಗಳ ಆಡುವವರು ಸಿನಿಕರಾಗಿದ್ದಾರೆ; ಮಾರ್ಗ ಮತ್ತು ದೇಸಿಗಳನ್ನು ಕೂಡಿಸಿದಂತೆ, ಶ್ರದ್ಧೆ ಮತ್ತು ಜಗಳವನ್ನು ಬೆರೆಸಿದವರು ಹೊಸ ಹಾದಿಗಳನ್ನು ಸೋಸುತ್ತ, ಹೊಸ ನೋಟ ಕೊಟ್ಟಿದ್ದಾರೆ. ವಿದ್ವತ್ತಿನ ಲಕ್ಷಣ ಸರ್ವಸಮ್ಮತಿ ಹುಟ್ಟಿಸುವುದಿಲ್ಲ; ಸಂವಾದಕ್ಕೆ ಕಾರಣವಾಗುವುದು. ಕಲಬುರ್ಗಿ ಅವರಂತಹ ಹಿರಿಯ ವಿದ್ವಾಂಸರು ಮಾಡಿರುವ ಶೋಧ ಮತ್ತು ಪ್ರಮೇಯಗಳನ್ನು ಇಟ್ಟುಕೊಂಡು ವಾಗ್ವಾದ ಮಾಡುವ ಸಾಧ್ಯತೆಗಳು ಆಕಾಶದಂತೆ ತೆರೆದಿವೆ. ಸಮಸ್ಯೆಯೆಂದರೆ, ನಾಡಿನಲ್ಲಿ ಓಜರೇನೋ ಇದ್ದಾರೆ. ಆದರೆ ಅವರ ಪರಂಪರೆಯನ್ನು ಮುರಿದು ಕಟ್ಟುವ ಶಿಷ್ಯರು ಯಾರಿದ್ದಾರೆ? ಕಲಬುರ್ಗಿಯವರ ಶೋಧಗಳನ್ನು ಬಳಸಬೇಕಾದವರು ಸಾಹಿತ್ಯದವರಿಗಿಂತ ಹೆಚ್ಚಾಗಿ ಸಮಾಜ ವಿಜ್ಞಾನದವರು; ಧರ್ಮ ಮತ್ತು ತತ್ವಶಾಸ್ತ್ರದವರು. ಆದರೆ ಅವರಲ್ಲಿ ಎಷ್ಟು ಜನಕ್ಕೆ ಶಂಬಾ ಅಥವಾ ಕಲಬುರ್ಗಿಯವರ ಹೆಸರು ಗೊತ್ತಿದೆ?
ತಮ್ಮ ವಿದ್ವತ್ ಜೀವನದಲ್ಲಿ ಖ್ಯಾತಿ-ಗೌರವ, ಸಂಭ್ರಮ-ನೋವು, ವಾದ-ವಿವಾದ, ಎಲ್ಲವನ್ನೂ ಕಂಡಿರುವ ಕಲಬುರ್ಗಿ, ನಮ್ಮ ಕಾಲದ ದೊಡ್ಡ ವಿದ್ವಾಂಸರಲ್ಲಿ ಒಬ್ಬರು. ತಮ್ಮ ಜೀವಮಾನವನ್ನೇ ತೇದುಕೊಂಡು, ಇಂತಹ ಓಜರು ಸೃಷ್ಟಿಸಿರುವ ವಿದ್ವತ್ತು, ಹೊಸ ತಲೆಮಾರುಗಳ ಮುಂದೆ ಒಂದು ಸವಾಲಿನಂತಿದೆ. ಇಂತಹ ಸವಾಲನ್ನು ನಿರ್ಮಿಸಿದ ಅವರಿಗೆ ನಾಡವರ ಪರವಾಗಿ ಕೃತಜ್ಞತೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT