ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನೆಂಬುದು ಮರೆತಾಗ

Last Updated 11 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ವಾಸ್ಲಾವ್ ನಿಜಿನ್‌ಸ್ಕಿ ಒಬ್ಬ ರಷ್ಯಾದ ಬ್ಯಾಲೆ ನೃತ್ಯಪಟು (೧8೮೦–-೧೯೫೦). ಇವನ ತಂದೆ ತಾಯಿ ಮೂಲತಃ ಪೋಲಂಡ್ ದೇಶದಿಂದ ಬಂದವರು. ತಂದೆ-ತಾಯಿ ಇಬ್ಬರೂ ನೃತ್ಯಗಾರರೇ. ತಂದೆಯಂತೂ ರಂಗದ ಮೇಲೆ ಹಾರಿ ಕುಣಿದು ಮಾಡುವ ನೃತ್ಯಕ್ಕೆ ಹೊಸ ಕಳೆಯನ್ನೇ ತಂದವನು. ಮಗ ವಾಸ್ಲಾವ್‌ಗೂ ಇದು ತಂದೆ-ತಾಯಿ­ಯರು ನೀಡಿದ ಬಳುವಳಿ ಇದ್ದಿರಬೇಕು. ಎಂಟು ವರ್ಷಕ್ಕೇ ಆತ ದೊಡ್ಡ ಹೆಸರು ಗಳಿಸಿದ. ನೃತ್ಯಶಾಲೆಯಲ್ಲಿ ಅವನ ಶಿಕ್ಷಕರು ಕೂಡ ಅವನ ಅಸಾಮಾನ್ಯ ಕಲೆಗೆ ಮಾರುಹೋಗಿದ್ದರು.

ಆತ ತನ್ನ ನೃತ್ಯಕಲೆಯ ಶಿಕ್ಷಣವನ್ನು ೧೯೦೭ ರಲ್ಲಿ ಮುಗಿಸಿ ನೃತ್ಯಗಾರನಾಗಿ ವೇದಿಕೆ­ಯನ್ನೇರಿದ. ಅವನ ಮೊದಲನೇ ಬ್ಯಾಲೆ ಲಾಸೋರ್ಸ ಅದೆಷ್ಟು ಜನಪ್ರಿಯವಾ­ಯಿತೆಂದರೆ ಜನ ನಿಜಿನ್‌ಸ್ಕಿಯನ್ನು ನೃತ್ಯದೇವತೆ ಎಂದೇ ಕೊಂಡಾಡತೊಡ­ಗಿದರು. ಮುಂದೆ ಅವನ ಜಿಸೆಲ್ಲೆ, ಸ್ಪಾನ್ ಲೇಕ್, ದಿ ಸ್ಲೀಪಿಂಗ್ ಬ್ಯೂಟಿಗಳಲ್ಲಿ ಅವನ ಖ್ಯಾತಿ ಗಗನ ಮುಟ್ಟಿತು. ಇಡೀ ರಷ್ಯಾದಲ್ಲಿ, ಯುರೋಪ್‌ನಲ್ಲಿ ಅವನನ್ನು ಪ್ರಪಂಚದ ಎಂಟನೇ ಅದ್ಭುತ ಎಂದು ಕರೆದರು. ಅವನು ಧ್ಯಾನವನ್ನು ಕಲಿತಿದ್ದನೋ ಇಲ್ಲವೋ ತಿಳಿಯದು. ಆದರೆ, ಆತನ ನೃತ್ಯದಲ್ಲಿ ಧ್ಯಾನದ ಏಕಾಗ್ರತೆ ಇತ್ತು, ಸೌಂದರ್ಯವಿತ್ತು. ಅವನು ನೃತ್ಯಕ್ಕಾಗಿ ರಂಗವನ್ನೇರಿದರೆ ಅವನ ಕಣ್ಣುಗಳು ಬೇರೆಯೇ ಕಾಣುತ್ತಿದ್ದವು. ಅವನ ತಮ್ಮ ಮುಂದೆ ನಿಂತರೂ ಆತನ ಗುರುತು ಹಿಡಿಯಲು ನಿಜಿನ್‌ಸ್ಕಿಗೆ ಆಗಲಿಲ್ಲವಂತೆ.

ಅವನ ನೃತ್ಯದ ಒಂದು ವಿಶೇಷವೆಂದರೆ ಓಡುತ್ತ, ಓಡುತ್ತ ಬಂದು ಒಮ್ಮೆಲೇ ಮೇಲೆ ಹಾರುವ ಲಯ. ಅವನು ಎಷ್ಟು ಎತ್ತರಕ್ಕೆ ಹಾರುತ್ತಿದ್ದನೆಂದರೆ ಸಾಮಾನ್ಯ ಮನುಷ್ಯ ಅಷ್ಟು ಎತ್ತರ ಹಾರುವುದನ್ನು ಕಲ್ಪಿಸಲೂ ಸಾಧ್ಯವಿಲ್ಲ. ಗುರುತ್ವಾಕರ್ಷಣ ಶಕ್ತಿಯನ್ನು ತಿರಸ್ಕರಿಸಿ ಹೋದಂತೆ, ಗಾಳಿಪಟದಂತೆ, ಗಾಳಿಗೆ ಹಾರಿದ ಹಕ್ಕಿಯ ಗರಿಯಂತೆ ತೇಲಿತೇಲಿ ಮೇಲೆ ಹೋಗುತ್ತಿದ್ದ. ಪ್ರೇಕ್ಷಕರು ಮಂತ್ರಮುಗ್ಧ­ರಾಗಿ ಚಪ್ಪಾಳೆ ಹೊಡೆಯುವುದನ್ನೂ ಮರೆಯುತ್ತಿದ್ದರು. ಅದನ್ನು ನೋಡು­ತ್ತಿದ್ದ­ವರ ಎದೆಬಡಿತ ನಿಲ್ಲುತ್ತಿತ್ತು. ನಂತರ ಅವನು ನಿಧಾನವಾಗಿ ನೆಲಕ್ಕಿಳಿಯುವುದು ಇನ್ನೊಂದು ಪವಾಡ. ಯಾವ ಅವಸರವೂ ಇಲ್ಲದೇ ಗಾಳಿಯಲ್ಲಿ ತೇಲಿಹೋದ ಗರಿ ನಿಧಾನಕ್ಕೆ ಕೆಳಗೆ ಸರಿಯುವಂತೆ, ಆಕಾಶದಿಂದ ನೆಲಕ್ಕಿಳಿದ ಗರುಡ ತೇಲಿಬಂದು ನೆಲತಟ್ಟುವಂತೆ ಬಂದು ಮುಟ್ಟುತ್ತಿದ್ದ. ವೈಜ್ಞಾನಿಕವಾಗಿ ಇದು ಅಸಂಭವ ಎಂದು ಎನಿಸುತ್ತಿತ್ತು. ಅವನು ಗಾಳಿಯಲ್ಲೇ ಹೇಗೆ ತೇಲುತ್ತ ನಿಲ್ಲುತ್ತಾನೆ ಎಂದು ಎಷ್ಟೋ ಜನ ಲೇಖನಗಳನ್ನು ಬರೆದರು.

ಒಂದು ಬ್ಯಾಲೆಯಲ್ಲಂತೂ ಆತ ಗುಲಾಮನ ಪಾತ್ರದಲ್ಲಿ ರಾಣಿಯ ಮುಂದೆ ಬಂದಾಗ ಆಕೆ ಅವನನ್ನು ಕೊಲ್ಲಿಸುತ್ತಾಳೆ. ಆಗ ಆತ ಓಡಿ ಬಂದು ತಲೆಕೆಳಗಾಗಿ ನಿಂತು, ತಲೆಯ ಮೇಲೆಯೇ ಇಡೀ ದೇಹದ ಭಾರವನ್ನು ಹೊತ್ತು ಗಿರಗಿರನೇ ತಿರುಗಿಸಿ ಬಿದ್ದು ಸಾಯುತ್ತಾನೆ. ಅದಂತೂ ಅದ್ಭುತ. ಅದು ಹೇಗೆ ಬರೀ ತಲೆಯ ಮೇಲೆ ದೇಹವನ್ನು ಹೊತ್ತು ನಿಜಿನ್‌ಸ್ಕಿ ಗರಗರನೇ ತಿರುಗಿ ದೊಪ್ಪನೇ ಬೀಳುತ್ತಾನೆ ಎಂಬುದನ್ನು ನೋಡಲೆಂದೇ ಹತ್ತಾರು ಬಾರಿ ಜನ ಆ ಬ್ಯಾಲೆಗೆ ಹೋದದ್ದುಂಟು. ಅವನನ್ನು ಕೆಲವರು ನೃತ್ಯಪಟುಗಳು ಕೇಳಿದರು. ‘ಅದು ಹೇಗೆ ಈ ಪವಾಡಸದೃಶ ನೃತ್ಯ ಮಾಡುತ್ತೀರಿ? ಅದು ಅತಿಮಾನುಷ ಎನ್ನಿಸುವುದಿಲ್ಲವೇ?’ ಅದಕ್ಕೆ ನಿಜಿನ್‌ಸ್ಕಿ ಹೇಳಿದ, ‘ಎಲ್ಲರೂ ಹಾಗೆಯೇ ಹೇಳುತ್ತಾರೆ.

ಆದರೆ, ಅದು ಹೇಗೆ ಆಗುತ್ತದೆ ಎಂಬುದು ನನಗೆ ಗೊತ್ತಿಲ್ಲ. ನಾನು ಗೊತ್ತು ಮಾಡಿಕೊಳ್ಳ­ಬೇಕು ಎಂದು ಪ್ರಯತ್ನಿಸಿದಾಗೆಲ್ಲ ನಾನು ಸೋತಿದ್ದೇನೆ. ಅಂದು ಆ ರೀತಿ ನೃತ್ಯ ಮಾಡಲು ಆಗಿಯೇ ಇಲ್ಲ. ಯಾವಾಗ ನಾನು ನೃತ್ಯಪಟು, ವಿಶೇಷವಾದ ಕಲೆ ಪ್ರದರ್ಶಿಸುತ್ತೇನೆ ಎಂಬುದು ಮರೆತು ಹೋಗುತ್ತದೆಯೋ ಅಂದೇ ಇಂಥ ಪ್ರದರ್ಶನ ಸಾಧ್ಯವಾಗುತ್ತದೆ. ಅದು ನನಗೆ ಆಶ್ಚರ್ಯ ತರುತ್ತದೆ.’ ಅದು ಅತ್ಯಂತ ಸತ್ಯವಾದ ಮಾತು. ನಾನು ಮಾಡಬಲ್ಲೆ ಎಂಬ ಅಹಂಕಾರ­ದಿಂದಲೋ, ಜನರನ್ನು ಮೆಚ್ಚಿಸಲೋ ಮಾಡಿದ ಕ್ರಿಯೆ ಸರ್ವೊತ್ಕೃಷ್ಟವಾಗ­ಲಾರದು. ನನ್ನ ಇರುವನ್ನೇ ಮರೆತು ತಾದಾತ್ಮ್ಯತೆಯಿಂದ ಮಾಡಿದ ಕೆಲಸ ಪವಾಡ­ವಾಗುತ್ತದೆ, ಅದ್ಭುತ­ವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT