ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕನೇ ಸಂಭ್ರಮ `ಬಾಣಂತನ'

Last Updated 15 ಡಿಸೆಂಬರ್ 2012, 19:54 IST
ಅಕ್ಷರ ಗಾತ್ರ

ವೈದ್ಯಕೀಯ ವಿಜ್ಞಾನವನ್ನು ಸಾಮಾನ್ಯ ವ್ಯಕ್ತಿಗೆ ಅರ್ಥವಾಗುವಂತೆ ವಿವರಿಸುವುದು ಸುಲಭದ ಮಾತಲ್ಲ. ಅದನ್ನು ನಾನು ಸವಾಲಾಗಿ ತೆಗೆದುಕೊಂಡಿದ್ದೇನೆ. ಸಾಮಾನ್ಯ ಜನರಲ್ಲಿ ವೈದ್ಯಕೀಯ ತಿಳಿವಳಿಕೆ ಮೂಡಿಸುವುದರಿಂದ ಸಮುದಾಯಗಳಲ್ಲಿ ಆರೋಗ್ಯ ಸ್ಥಿತಿ ಕಾಪಾಡಬಹುದು, ಜನಸಾಮಾನ್ಯರು ಕಾಯಿಲೆಗಳಿಗೆ ಬಲಿಪಶುವಾಗುವುದನ್ನು ಹಾಗೂ ಸಂಕೀರ್ಣವಾದ ವೈದ್ಯಕೀಯ ವಿಜ್ಞಾನವನ್ನು ಅರಿತುಕೊಳ್ಳಲಾಗದೆ ಅವರ ವೇದನೆಗಳು ವೃದ್ಧಿಯಾಗುವುದನ್ನು ತಡೆಯಲು ಸಾಧ್ಯ ಎನ್ನುವುದು ನನ್ನ ನಂಬಿಕೆ. 

 
ಕಾಯಿಲೆಗಳು ಒಬ್ಬ ವ್ಯಕ್ತಿಯನ್ನು ನರಳುವಂತೆ ಮಾಡುತ್ತಿದ್ದರೆ, ಇನ್ನೊಂದೆಡೆ ನಮ್ಮ ಸಮಾಜದ ಎಲ್ಲಾ ವರ್ಗ ಹಾಗೂ ಜಾತಿಗಳ ನಡುವೆ ಆಳವಾಗಿ ಬೇರೂರಿರುವ ಸಾಂಪ್ರದಾಯಿಕ ಶರೀರ ವಿಜ್ಞಾನದ ತೀವ್ರತೆಯ ಪರಿಣಾಮವನ್ನು ಮಹಿಳೆಯರು ಅನುಭವಿಸುವಂತಾಗಿದೆ.

ನಮ್ಮಂತೆ ಹಲವಾರು ಮಹಿಳೆಯರು ಈ ರೂಢಿ ಆಚರಣೆಗಳಿಂದ ಯಶಸ್ವಿಯಾಗಿ ಹೊರಬಂದಿದ್ದರೂ, ತಾಯ್ತನದ ಉತ್ಕಟತೆ ಮತ್ತು ಆಸ್ಥೆ ಬದಲಾಗಿಲ್ಲ. ಆ ಕುರಿತ ನಮ್ಮ ಮನೋಭಾವವನ್ನು ನಿರಾಳಗೊಳಿಸುವುದು ಮತ್ತು ಸಂತೋಷಪಡಿಸುವುದು ಈ ಲೇಖನದ ಉದ್ದೇಶ.
 
ವಿವಾಹ, ಬಸಿರು ಮತ್ತು ಮಕ್ಕಳ ಜನನದಂಥ ಕ್ಷಣಗಳನ್ನು ನಮ್ಮ ಬದುಕಿನ ಅತ್ಯಂತ ಸಂಭ್ರಮದ ಘಟನೆಗಳೆಂದು ಆಚರಿಸಲಾಗುತ್ತದೆ. ಪ್ರಸವ ನಂತರದ ಅವಧಿ (ಬಾಣಂತನ) ಅತ್ಯಂತ ವಿಶೇಷ ಘಟ್ಟ- ಇದು ನಾಲ್ಕನೇ ಸಂಭ್ರಮ!
 
ಗರ್ಭಿಣಿಯಾಗುವುದು ಸಹಜ ಮತ್ತು ನೈಸರ್ಗಿಕ ಪ್ರಕ್ರಿಯೆಯಾದ್ದರಿಂದ ಅದಕ್ಕೆ ಯಾವುದೇ ವಿಮೆ ಇಲ್ಲ. ಕುಟುಂಬಕ್ಕೆ ಹೊಸ ಸದಸ್ಯ/ಸ್ಯೆಯನ್ನು ಸ್ವಾಗತಿಸಲು ಗರ್ಭಾವಸ್ಥೆಯಲ್ಲಿ ಮಹಿಳೆಯ ದೇಹದಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತವೆ. ಅದೇ ವೇಳೆ ಆ ಕುಟುಂಬ ಅರ್ಥಪೂರ್ಣ, ಪ್ರಯೋಜನಕಾರಿ ಸಾಂಪ್ರದಾಯಿಕ ಪದ್ಧತಿಗೆ ಸಿದ್ಧತೆ ನಡೆಸುತ್ತದೆ.
 
ಗರ್ಭಿಣಿಯರಿಗೆ `ಸೀಮಂತ' ಅತ್ಯಂತ ವಿಶಿಷ್ಟ ಕ್ಷಣ. ಈ ಕಾರ್ಯಕ್ರಮದ ಸಂದರ್ಭದಲ್ಲಿ ಹೊಸ ಬಟ್ಟೆ, ಗಾಜಿನ ಬಳೆಗಳನ್ನು ಧರಿಸಿದ ಆಕೆಗೆ ಆರತಿ ಎತ್ತಲಾಗುತ್ತದೆ. ಆಕೆಯ ತವರು ಮನೆಗೆ ಬೆಲ್ಲದಿಂದ ತಯಾರಿಸಿದ ಸಿಹಿ ತಿನಿಸುಗಳ ರಾಶಿಯನ್ನು ನೀಡಲಾಗುತ್ತದೆ. ಉಳಿದ ಪ್ರಮುಖ ತಿಂಗಳುಗಳನ್ನು (3,7,9) ಪೋಷಕರೊಂದಿಗೆ ಆಕೆ ಕಳೆಯುತ್ತಾಳೆ.
 
ಈ ಕ್ರಿಯಾವಿಧಿಗಳು ಆಕೆಯನ್ನು ವಿಶೇಷ ವ್ಯಕ್ತಿಯನ್ನಾಗಿರಿಸುವುದರಿಂದ ಆಕೆಯ ದೇಹದೊಳಗೆ `ಸಂತೋಷದ ಹಾರ್ಮೋನುಗಳು' ಹರಿಯುತ್ತವೆ. ಈ ಆಚರಣೆ ಗರ್ಭದೊಳಗಿನ ಭ್ರೂಣದ ತ್ವರಿತ ಬೆಳವಣಿಗೆಗೂ ಪ್ರೇರಕವಾಗುತ್ತದೆ. ಶಿಶುವಿನ ತೂಕ ದ್ವಿಗುಣಗೊಳ್ಳುವುದು ಈ ಸಮಯದಲ್ಲಿಯೇ. ಅಲ್ಲದೆ ಸಂತೋಷದ ಹಾರ್ಮೋನುಗಳು ಮಗುವಿನ ಬೆಳವಣಿಗೆಗೆ ಸಹಕಾರಿ. ಗರ್ಭಿಣಿಗೆ ಅಗತ್ಯವಿರುವ ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶಗಳು ಬೆಲ್ಲದಲ್ಲಿ ತಯಾರಿಸಿದ ತಿನಿಸುಗಳಿಂದ ಪೂರೈಕೆಯಾಗುತ್ತದೆ.
 
ಇಂದು ಹೆಚ್ಚಿನ ಮಹಿಳೆಯರು ಮನೆಯಲ್ಲಿಯೇ ಮಾಡಿದ ರುಚಿಯಾದ ಖಾದ್ಯಗಳ ಬದಲು ಮಾತ್ರೆಗಳನ್ನು ಸೇವಿಸುತ್ತಿದ್ದಾರೆ. ವಿವಾಹದವರೆಗೂ ಬೆಳೆದ ತವರು ಮನೆಯನ್ನೇ ಹೆಚ್ಚು ಹಿತಕರ ಎಂದೂ ಮಹಿಳೆಯರು ಭಾವಿಸುತ್ತಿದ್ದಾರೆ.
 
ಈ ಸಾಂಪ್ರದಾಯಿಕ ಪದ್ಧತಿಗಳ ಹಿಂದೆ ವೈಜ್ಞಾನಿಕ ಸಂಗತಿಗಳಿವೆ. ಆದರೆ ಎಲ್ಲಿ ತಪ್ಪಾಗುತ್ತಿದೆ ಎಂಬುದು ನನಗೆ ತಿಳಿಯುತ್ತಿಲ್ಲ. ಪ್ರಸವವಾಗುತ್ತಿದ್ದಂತೆಯೇ ಮಹಿಳೆಯನ್ನು ಬೇರೆ ರೀತಿಯಲ್ಲಿ ನೋಡಿಕೊಳ್ಳಲಾಗುತ್ತದೆ- ಇದು ಅರ್ಥೈಸಿಕೊಳ್ಳಲು ಕಷ್ಟಕರವಾದ ವಿಷಯ.
 
ಗರ್ಭಾವಸ್ಥೆ ಮುಗಿಯುತ್ತಿದ್ದಂತೆ ಅಂದರೆ, ಪ್ರಸವವಾದ ಬಳಿಕ ಮಗುವಿನ ಜನನ ಮತ್ತು ಜಾರುಯುವಿನ ವಿಸರ್ಜನೆಯ ಕಾರಣದಿಂದಾಗಿ ಗರ್ಭಿಣಿಯ ದೇಹದಲ್ಲಿ ಒಂಬತ್ತು ತಿಂಗಳಿಂದ ಇರುವ ಹಾರ್ಮೋನುಗಳು ನಿಧಾನವಾಗಿ ಕಣ್ಮರೆಯಾಗುತ್ತವೆ. ಗರ್ಭಕೋಶ ತನ್ನ ಮೂಲಸ್ಥಾನಕ್ಕೆ ಮರಳುತ್ತಿದ್ದಂತೆ ಕುಟುಂಬದ ಹೊಸ ಸದಸ್ಯನನ್ನು ಪೋಷಿಸಲು ತಾಯಿ ಎದೆಗಳು ಹೆಚ್ಚು ಕ್ರಿಯಾಶೀಲತೆ ಪಡೆದುಕೊಳ್ಳಲಾರಂಭಿಸುತ್ತವೆ.
 
ಹೆರಿಗೆಯವರೆಗೂ ಮಹಿಳೆಯರನ್ನು ತೀರಾ ಸಹಜವಾಗಿ ನೋಡಿಕೊಳ್ಳಲಾಗುತ್ತದೆ. ಆಹಾರ ಪದ್ಧತಿ, ಚಟುವಟಿಕೆ, ಉಡುಗೆ ತೊಡುಗೆ ಎಲ್ಲವೂ ನಮ್ಮ ನಿಮ್ಮಂತೆಯೇ ಇರುತ್ತದೆ. ಆದರೆ ಪ್ರಸವವಾಗುತ್ತಿದ್ದಂತೆ ಮಹಿಳೆಯರಿಗೆ ವಿಶೇಷ ಆರೈಕೆ ಉಪಚಾರ ದೊರಕತೊಡಗುತ್ತದೆ.

ಈ ಅವಧಿಯನ್ನು ಕೆಲವರು `ಬಂಧನ' ಎಂದು ಕರೆಯುವುದರಲ್ಲಿ ಆಶ್ಚರ್ಯವೇನಿಲ್ಲ. ಈ ಸನ್ನಿವೇಶ ಈಗಿನ ಆಧುನಿಕ ಯುವತಿಯರ ಮನೋಭಾವವನ್ನು ಸಂಪೂರ್ಣ ಬದಲಿಸುವುದಲ್ಲದೆ, ಅದಕ್ಕೆ ಹೊಂದಿಕೊಳ್ಳಲು ಅವರು ಹೆಣಗಾಡುತ್ತಾರೆ.
 
ಇದು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಲವಾರು ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ. ಎಷ್ಟೆಂದರೆ ನಿಮ್ಹಾನ್ಸ್‌ನಲ್ಲಿ  ಪ್ರತಿ ಶುಕ್ರವಾರ ಬೆಳಿಗ್ಗೆ 9ರಿಂದ 1ಗಂಟೆವರೆಗೆ ಮಹಿಳೆಯರಿಗೆ ಮಾನಸಿಕ ಚಿಕಿತ್ಸೆ ನೀಡುವ ಸಲುವಾಗಿಯೇ ಪ್ರಸವಪೂರ್ವ ಚಿಕಿತ್ಸೆ ಕ್ಲಿನಿಕ್ ಅನ್ನು ನಡೆಸಲಾಗುತ್ತಿದೆ.
 
“ಆಶಾ ಮೇಡಂ, ನನಗೆ ಮಗುವಾಗಲೀ, ನನ್ನ ಸುತ್ತಲಿನ ಆಚರಣೆಗಳಾಗಲೀ ಯಾವುದೂ ಇಷ್ಟವಿಲ್ಲ. ನನಗೆ ಓಡಿ ಹೋಗಬೇಕು ಎನಿಸುತ್ತಿದೆ. ದಯವಿಟ್ಟು ಸಹಕರಿಸಿ. ಹೀಗೆ ಕರೆ ಮಾಡಿ ಹೇಳಿದ್ದು ಒಂಬತ್ತು ದಿನಗಳ ಹಸುಗೂಸು ನಿಶಾಂತ್‌ನ ತಾಯಿ. ಕೂಡಲೇ ನಾನು ಅವರ ಮನೆಗೆ ಹೋದಾಗ ಸೀಮಾ (ಅಚ್ಚುಕಟ್ಟಾಗಿ ಉಡುಪು ಧರಿಸಿದ್ದ ಸಾಫ್ಟ್‌ವೇರ್ ಎಂಜಿನಿಯರ್) ಎಲ್ಲವನ್ನೂ ಪ್ಯಾಕ್ ಮಾಡಿಕೊಂಡು, ಅಳುತ್ತಾ ಕೂತಿದ್ದಳು.

ಆಕೆ `ಬೇಬಿ ಬ್ಲ್ಯೂಸ್'ನಲ್ಲಿದ್ದಳು- ಇದು ಶೇ15-20ರಷ್ಟು ಪ್ರಸವ ನಂತರ ಮಹಿಳೆಯರ ಮೇಲೆ ಪ್ರಭಾವ ಬೀರುವ ಒಂದು ಪರಿಸ್ಥಿತಿ. ಇದನ್ನು ನಿಭಾಯಿಸಲು ಹೆಚ್ಚಿನ ಮಾನಸಿಕ ಬೆಂಬಲ ಮತ್ತು ಬಾಣಂತನದ ಮನೋವೈಜ್ಞಾನಿಕ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವ ಅಗತ್ಯವಿರುತ್ತದೆ.
 
ಸಾಮಾನ್ಯ ದಿರಿಸು ತೊಡುವಂತೆ ಸೀಮಾಗೆ ಹೇಳಿ ಆಕೆಯನ್ನು ಹೊರಗೆ ಕರೆದುಕೊಂಡು ಹೋದೆ. ಒಂದು ಸಿನಿಮಾ ನೋಡಲೇಬೇಕು ಎನ್ನುವ ಮಟ್ಟಿಗೆ ಅವಳು ಹತಾಶಳಾಗಿದ್ದಳು. ಪಿವಿಆರ್‌ನಲ್ಲಿ ಒಂದು ಸಿನಿಮಾ ತೋರಿಸಿ ವಾಪಸು ಮನೆ ತಲುಪಿಸಿದೆ. ಆ ಕುಟುಂಬದವರು ಆಘಾತಕ್ಕೊಳಗಾಗಿ `ನಾನು ಅಪರಾಧ ಮಾಡಿದ್ದೇನೆ' ಎಂಬಂತೆ ಮಾತನಾಡಿದರು. ಆಕೆಗೆ ಥಂಡಿ, ನಂಜು ಇತ್ಯಾದಿ ಏನಾದರೂ ಆಗಬಹುದು ಎಂದು ಗೊಣಗಾಡಿದರು. ಸೀಮಾಳಿಗೆ ಏನೇ ಆದರೂ ಅದಕ್ಕೆ ನಾನು ಜವಾಬ್ದಾರಿ ಎಂದು ಅವರನ್ನು ತಣ್ಣಗಾಗಿಸಿದೆ. ಖಿನ್ನತೆ ಇತ್ಯಾದಿಯಿಂದಾಗಿ ಸೀಮಾಳನ್ನು ಕಳೆದುಕೊಳ್ಳುವಂತಾಗಬಾರದು ಎನ್ನುವುದು ನನ್ನ ಕಾಳಜಿಯಾಗಿತ್ತು. 
 
ಈಚೆಗೆ ಆ ಸಂತುಷ್ಟ ತಾಯಿ, ತನ್ನ ಮಗ ನಿಶಾಂತ್ ಜೊತೆ ನನ್ನ ಕ್ಲಿನಿಕ್‌ಗೆ ಬಂದಾಗ ಹಳೆಯ ಪ್ರಸಂಗವನ್ನು ನೆನಪಿಸಿಕೊಂಡಳು. ನಾವು ಸಂಕೋಲೆಯನ್ನು ಯಶಸ್ವಿಯಾಗಿ ತುಂಡರಿಸಿದೆವು. ಈಗ ಆ ಕುಟುಂಬ ತಮ್ಮ ತಪ್ಪು ನಂಬಿಕೆಯನ್ನು ಹೋಗಲಾಡಿಸಿದ್ದಕ್ಕೆ ನನ್ನನ್ನು ಪ್ರಶಂಸಿಸುತ್ತಿರುವುದಲ್ಲದೆ, ನನ್ನ ಮೇಲೆ ನಂಬಿಕೆಯನ್ನೂ ಇಟ್ಟುಕೊಂಡಿದೆ.
 
ಹಾಲಿವುಡ್ ಮತ್ತು ಬಾಲಿವುಡ್‌ನ ಅನೇಕ ತಾರೆಯರು ಈ ಬಗೆಯ ಮಾನಸಿಕ ಸ್ಥಿತಿಗೆ ಒಳಗಾಗುತ್ತಿದ್ದಾರೆ. ಪಶ್ಚಿಮದ ರಾಷ್ಟ್ರಗಳಲ್ಲಿ `ಬೇಬಿ ಬ್ಲ್ಯೂ' ಸಹಾಯವಾಣಿಯನ್ನೂ ಆರಂಭಿಸಲಾಗಿದೆ.
 
ಹಲವು ವರ್ಷಗಳ ಹಿಂದೆ ನನ್ನ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಡಾ. ಗೀತಾ, ತಮ್ಮ ಮೂರು ವರ್ಷದ ಪದವಿಯನ್ನು ಪೂರ್ಣಗೊಳಿಸಲು ನಾಲ್ಕೂವರೆ ವರ್ಷ ತೆಗೆದುಕೊಂಡಿದ್ದರು. ಶೇ 10-20ರಷ್ಟು ತಾಯಂದಿರು ಒಳಗಾಗುವ ಪ್ರಸವ ನಂತರದ ಖಿನ್ನತೆಗೆ ಆಕೆ ಒಳಗಾಗಿದ್ದಳು. ಈ ಖಿನ್ನತೆ ಹೆರಿಗೆ ಬಳಿಕ 4-6 ತಿಂಗಳಲ್ಲಿ ಹಂತಹಂತವಾಗಿ ಸಂಭವಿಸುತ್ತದೆ. ಆ್ಯಂಟಿ ಡಿಪ್ರೆಸಾಂಟ್ ಮೂಲಕ ಚಿಕಿತ್ಸೆ ನೀಡಬೇಕಾಗುತ್ತದೆ.
 
ಇತ್ತೀಚೆಗೆ ಒಂದು ಉದ್ದಿಮೆದಾರ ಜೋಡಿ ತಮ್ಮ ಏಕೈಕ ಪುತ್ರಿ ರಾಣಿಯೊಂದಿಗೆ ನನ್ನ ಕ್ಲಿನಿಕ್‌ಗೆ ಬಂದಿದ್ದರು. ಆಕೆ ಆ್ಯಂಟಿ ಡಿಪ್ರೆಸಾಂಟ್ ಅನ್ನು ಅಧಿಕ ಪ್ರಮಾಣದಲ್ಲಿ ಪಡೆಯುತ್ತಿದ್ದರಿಂದ ಮಗಳಿಗೆ ಎದೆಹಾಲು ಕುಡಿಸಬಹುದೇ ಎಂಬುದು ಅವರ ಪ್ರಶ್ನೆಯಾಗಿತ್ತು. ಕೆಲವು ಬದಲಾವಣೆಗಳ ಮೂಲಕ ಎದೆಹಾಲು ಕುಡಿಸುವುದನ್ನು ಮುಂದುವರಿಸಬಹುದು ಎಂದು ಅವರಿಗೆ ಭರವಸೆ ನೀಡಿದೆ.

ರಾಣಿ ಮನೋವಿಕಲ್ಪ ಹೊಂದಿದ್ದ ಮಗುವಾಗಿದ್ದಳು. ಹೆರಿಗೆ ಬಳಿಕ ಆಕೆ ಪೋಸ್ಟ್ ಪಾರ್ಟಮ್ ಸೈಕೋಸಿಸ್‌ಗೆ ಒಳಗಾಗಿದ್ದಳು. ಅದು ಈ ಹಿಂದಿನ ಎರಡು ಸಮಸ್ಯೆಗಳಿಗಿಂತಲೂ ಅತ್ಯಂತ ಗಂಭೀರ ಪರಿಸ್ಥಿತಿ.
 
ಅಂದಹಾಗೆ, ಪ್ರಸವ ಸಮಯದಲ್ಲಿ ಗಮನಿಸಬೇಕಾದ ಅಂಶಗಳಾದರೂ ಯಾವುವು? 
ತಾಯಿಯ ಆರೋಗ್ಯ ಸ್ಥಿತಿಯನ್ನು ಸಹಜ ಸ್ಥಿತಿಗೆ ತರುವ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಸೋಂಕು ತಗುಲದಂತೆ ತಡೆಯಬೇಕು. ಉದರ/ ಬೆನ್ನುಮೂಳೆ/ ಶ್ರೋಣಿ ಭಾಗಕ್ಕೆ ವ್ಯಾಯಾಮ, ಎದೆಹಾಲು ಉಣಿಸುವುದು ಹಾಗೂ ಮುಂದಿನ ದಿನಗಳಲ್ಲಿ ಗರ್ಭನಿರೋಧಕ ಬಳಕೆ.
 
ಪ್ರಸವಾನಂತರದ ಅವಧಿಯಲ್ಲಿ ಎದೆಯನ್ನು ಚಲನಶೀಲಗೊಳಿಸಲು ಮತ್ತು ಮಗುವನ್ನು ಆರೈಕೆ ಮಾಡಲು ದೇಹದಲ್ಲಿ, ಹಾರ್ಮೋನುಗಳಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಸಹಜ ಹೆರಿಗೆಯಾದಾಗಲೂ ಮಹಿಳೆ 24ರಿಂದ 48 ಗಂಟೆ ವಿಶ್ರಾಂತಿ ಪಡೆಯುವುದು ಅತ್ಯವಶ್ಯಕ. ನಡೆದಾಡುವುದು ಆಕೆಯಲ್ಲಿ ಹೆಚ್ಚು ಉಲ್ಲಾಸ ನೀಡುತ್ತದೆ.

ಮೂತ್ರವಿಸರ್ಜನೆಯ ಸಮಸ್ಯೆಗಳು ಮತ್ತು ಮಲಬದ್ಧತೆ ಕಡಿಮೆಯಾಗುತ್ತದೆ ಹಾಗೂ ಗರ್ಭಕೋಶ ಸಹಜ ಸ್ಥಾನಕ್ಕೆ ಮರಳಲು ಸಹಕಾರಿಯಾಗುತ್ತದೆ. ಕಾಲು ನೋವು ಆವರಿಸುವುದನ್ನು ತಡೆಯುತ್ತದೆ. ನಡೆದಾಡುವುದರಿಂದ ದೇಹದ ಭಾಗಗಳಿಗೆ ರಕ್ತಸಂಚಲನ ಚೆನ್ನಾಗಿ ಆಗುತ್ತದೆ.
 
ಆದರೆ ನಿಜಕ್ಕೂ ಬಾಣಂತನ ಏನು ಮಾಡುತ್ತಿದೆ- ಅವರ ಚಟುವಟಿಕೆಗಳನ್ನು ನಿರ್ಬಂಧಿಸುತ್ತಿದೆ. ಅವರು `ವಿಶೇಷ ಕೋಣೆಯೊಳಗಿನ ಬಂಧಿಗಳು'.
 
ಹೆರಿಗೆ ಸಂದರ್ಭದಲ್ಲಿ ಬೆವರುವುದರಿಂದ ಮತ್ತು ಅಧಿಕ ಮೂತ್ರವಿಸರ್ಜನೆ ಮಾಡುವುದರಿಂದ ಪ್ರಸವದ ಬಳಿಕ ಗರ್ಭಕೋಶದಿಂದ ಸ್ರವಿಕೆ ತೀವ್ರವಾಗುತ್ತದೆ. ಆದರೆ ಬಾಣಂತನ ಮಾಡುತ್ತಿರುವುದು ಏನು- ಈ ಸ್ರವಿಕೆಯನ್ನು ತಡೆಯುವ ಗೋಜಿಗೆ ಹೋಗುವುದಿಲ್ಲ (ದ್ರವ್ಯವನ್ನು ಉತ್ಪಾದಿಸಿಕೊಳ್ಳಬಲ್ಲ ಸಾಮರ್ಥ್ಯವಿದೆ ಮತ್ತು ದಪ್ಪಗಾಗುತ್ತಾರೆ ಎಂಬ ನಂಬಿಕೆ). ಇದು ಮೂತ್ರಾಂಗ ಸೋಂಕಿಗೆ (ಯಾರು ಪ್ರಸವದ ವೇಳೆಗಾಗಲೇ ಮಾನಸಿಕ ಆಘಾತಕ್ಕೊಳಗಾಗಿರುತ್ತಾರೋ ಅವರು) ಎಡೆಮಾಡಿಕೊಡಬಹುದು. ಮಲಬದ್ಧತೆಯಿಂದ ಮಹಿಳೆಗೆ ವಿಸರ್ಜನೆ ಕಷ್ಟವಾಗಿ ರೆಕ್ಟೊಸಿಲೆ (ಯೋನಿ ಬಳಿ ಕಟ್ಟಿಕೊಳ್ಳುವುದು) ಉಂಟಾಗಬಹುದು. 
 
ಬಾಣಂತಿಯರ ದಿರಿಸು ವಿಶಿಷ್ಟವಾದದ್ದು. ಕಿವಿಗಳನ್ನು ಮುಚ್ಚಿ, ದೇಹವನ್ನು ಮಫ್ಲರ್, ಸ್ವೆಟರ್, ಶಾಲ್ ಮತ್ತು ಸಾಕ್ಸ್‌ಗಳಿಂದ ಮುಚ್ಚಿಡಲಾಗುತ್ತದೆ. ಅವರನ್ನು ಬೆಚ್ಚಗೆ ಇರಿಸುವುದು ಅತ್ಯಗತ್ಯ. ಇದರಿಂದ ಕೊಬ್ಬು ಕರಗಿ ಬೆಚ್ಚಗಿನ ರಕ್ತವು ನಂಜಾಗುವುದು ತಪ್ಪುತ್ತದೆ ಎನ್ನುವುದು ತಪ್ಪುಕಲ್ಪನೆ. ವಾತಾವರಣಕ್ಕೆ ಅನುಗುಣವಾಗಿ ಅವರು ಹಿತಕರವೆನಿಸುವ ದಿರಿಸು ತೊಡಬೇಕು. ಬಾಣಂತಿಗೆ `ದೃಷ್ಟಿ'ಯಾಗಬಾರದೆನ್ನುವುದು ಎಲ್ಲರ ಅಪೇಕ್ಷೆ, ಆದರೆ ಅವರ ದಿರಿಸೇ ಎಲ್ಲರ ದೃಷ್ಟಿ ಸೆಳೆಯುವಂತಿರುತ್ತದೆ.
 
ಉದರಕ್ಕೆ ಅಂಟಿಕೊಳ್ಳುವಂತೆ ದಿರಿಸು ತೊಡುವ `3 ಸೈಜ್ ಜೀರೋ'ದಂಥ ಕೆಟ್ಟ ಅನುಕರಣೆಗಳು ಸಹ ಈ ತಪ್ಪು ನಂಬಿಕೆಗಳಲ್ಲಿ ಸೇರಿಕೊಂಡಿವೆ. ದೇಹಕ್ಕೆ ಅಂಟಿಕೊಳ್ಳುವಂತೆ ಧರಿಸುವ ಉಡುಪು ಸರಾಗ ಉಸಿರಾಟಕ್ಕೆ ಅಡ್ಡಿಯುಂಟುಮಾಡುತ್ತದೆ. ಮತ್ತು ಮಗುವನ್ನು ಎದೆಗೆ ಸೂಕ್ತವಾಗಿ ಆನಿಸಿಕೊಳ್ಳುವುದು ಸಹ ಕಷ್ಟವಾಗುತ್ತದೆ. ಇದರಿಂದ ಬೆನ್ನನ್ನು ನೇರವಾಗಿ ಇರಿಸಿಕೊಳ್ಳುವಂತಾಗುತ್ತದೆ.
 
ಬಾಣಂತಿ ಸ್ನಾನ ಹೆಚ್ಚು ಕ್ರಮಬದ್ಧವಾಗಿರುತ್ತದೆ. ಆಗಾಗ್ಗೆ ಎಣ್ಣೆ ಮಜ್ಜನವನ್ನು ನಾನು ಪ್ರಶಂಸಿಸುತ್ತೇನೆ. ಅದು ಸ್ನಾಯುಗಳಿಗೆ ರಕ್ತ ಪೂರೈಕೆಯನ್ನು ಉತ್ತೇಜಿಸುತ್ತದೆ. ಆದರೆ ಬಿಸಿನೀರಿನ ಸ್ನಾನ ಕೆಲವೊಮ್ಮೆ ಅವರಿಗೆ ಯಾತನೆ ಉಂಟುಮಾಡುತ್ತದೆ. ಇಲ್ಲಿಯೂ ಬಿಸಿ ಹಾಗೂ ಬೆವರುವುದು ಕೊಬ್ಬನ್ನು ಕರಗಿಸಲು ಸಹಕರಿಸುತ್ತದೆ.
 
ಬಾಣಂತಿಯರ ಕೈಗಳನ್ನು ಬಿಸಿ ನೀರಿನಲ್ಲಿಯೇ ತೊಳೆದುಕೊಳ್ಳಬೇಕು. ದ್ರವ್ಯ ನಿಯಂತ್ರಣದಿಂದ ಹೆಚ್ಚಿನ ಬೆವರುವಿಕೆ, ಮೂತ್ರವಿಸರ್ಜನೆ ಹೆಚ್ಚುವುದು ಸಂಭವಿಸಿ ಅದು ದೇಹದಲ್ಲಿ ದ್ರವದ ಕೊರತೆಗೆ ಕಾರಣವಾಗಬಹುದು. ಈ ಬಗೆಯ ಎಲ್ಲಾ ನಿಯಂತ್ರಣಗಳಿಂದ ಕೆಟ್ಟ ವಾಸನೆ ಬರುವುದು ಮತ್ತು ಆರೋಗ್ಯ ದುರ್ಬಲಗೊಳ್ಳಬಹುದು.

ಅಧಿಕ ಹಾಲು ಉತ್ಪಾದನೆಯಾಗಲಿ ಎಂದು ಹೆಚ್ಚು ಹಾಲು ಕುಡಿಸಲಾಗುತ್ತದೆ- ದುರದೃಷ್ಟವಶಾತ್ ತಾಯಿಯ ಆಹಾರ ನಳಿಕೆಗೂ ಎದೆಗೂ ಕೊಳವೆ ಸಂಪರ್ಕವಿಲ್ಲ! ಅದರ ಬದಲು ಆಕೆಯ ತೂಕ ಹೆಚ್ಚುತ್ತಾ ಹೋಗುತ್ತದೆ (100 ಮಿ.ಲೀ ಹಾಲು 65 ಕ್ಯಾಲರಿ ಮತ್ತು 3.5 ಗ್ರಾಂ ಕೊಬ್ಬನ್ನು ನೀಡುತ್ತದೆ). ಎದೆಹಾಲಿನ ಕೊರತೆಯ ತಪ್ಪಿನಿಂದಾಗಿ ಮಗುವಿನ ದೇಹದಲ್ಲಿ ವಾಯು ತುಂಬಿಕೊಳ್ಳುವುದು, ಉದರ ಶೂಲೆ ಮತ್ತು ವಿಪರೀತ ಅಳುವುದು ಪ್ರಾರಂಭವಾಗುತ್ತದೆ.

ಎಲ್ಲವೂ ಬಿಸಿಬಿಸಿ ಹಾಗೂ ಹಬೆಯಾಡುತ್ತಿರಬೇಕೆಂಬ ಆಹಾರ ಕ್ರಮ ಬೇಸರ ಹುಟ್ಟಿಸುವಂತಹದ್ದು. ತುಪ್ಪದಿಂದ ಶುರುವಾಗಿ ಅವರಿಗೆ ಅತ್ಯವಶ್ಯಕವಾದರೂ ತರಕಾರಿ, ನಾರು ಪದಾರ್ಥಗಳಿಲ್ಲದ ಆಹಾರ ನೀಡಲಾಗುತ್ತದೆ. ಆಹಾರ ಅವರ ಒಳಗರ್ಭಕ್ಕೆ ಚಲಿಸಿ ದೇಹವನ್ನು ಪುನರುಜ್ಜೀವನಗೊಳಿಸಬೇಕು. ಅದು ಅವರ ತೂಕದೊಂದಿಗೆ ಸೇರಿಕೊಳ್ಳುತ್ತದೆ.
 
`ಡಾಕ್ಟರ್, ನನ್ನ ಹೆಂಡತಿಯನ್ನು ಬಾಣಂತನಕ್ಕೆ ಕಳುಹಿಸಿದ್ದೆ, ಆಕೆ 10 ಕೆ.ಜಿ. ತೂಕ ಹೆಚ್ಚಿದ್ದಾಳೆ' ಎಂದು ತಂದೆಯೊಬ್ಬರು ವ್ಯಥೆಪಡುತ್ತಿದ್ದರು. ಈ ವಿಧಿವಿಧಾನಗಳಿಗೆ ತಂದೆ ಮೂಕ ಪ್ರೇಕ್ಷಕ. ಆಕೆಯ ಸಾಮಾಜಿಕ ಚಟುವಟಿಕೆಗಳೆಲ್ಲವೂ ಅಕ್ಷರಶಃ ನಿಂತು ಹೋಗುತ್ತವೆ. ಟೀವಿ ನೋಡುವಂತಿಲ್ಲ, ರೇಡಿಯೊ ಆಲಿಸುವಂತಿಲ್ಲ, ಮನೆಯಿಂದ ಹೊರಹೋಗುವಂತಿಲ್ಲ. ಈ ಪದ್ಧತಿ ಅನೇಕ ಮಹಿಳೆಯರಲ್ಲಿ ತಾತ್ಕಾಲಿಕ ಮಾನಸಿಕ ಅಸ್ಥಿರತೆ ಉಂಟಾಗಲು ಎಡೆಮಾಡಿಕೊಡುತ್ತದೆ.
 
ಕೆಲವು ವಿಶೇಷ ಪಾನೀಯಗಳಿವೆ. ಗಿಡಮೂಲಿಕೆಗಳು ಮತ್ತು ಅದಕ್ಕೆ ಮಿಶ್ರಣಗಳು ಎರಡೂ ಮನೆಯಲ್ಲಿಯೇ ತಯಾರಾದ ಮತ್ತು ಕಮರ್ಷಿಯಲ್ ಉತ್ಪನ್ನಗಳು. ಅವು ಹಾನಿಯುಂಟುಮಾಡಲಾರವು ಮತ್ತು ಮಹಿಳೆಯರು ಬೇಕೆನಿಸಿದಾಗ ಸೇವಿಸಬಹುದು.

ಅದು ಮಾನಸಿಕ ನೆಮ್ಮದಿಯನ್ನು ನೀಡುವ ಹೊರತು ಬೇರ‌್ಯಾವ ಪಾತ್ರವನ್ನೂ ವಹಿಸಲಾರವು. ಪ್ರಕೃತಿ ಆಕೆಯನ್ನು ಎಲ್ಲದಕ್ಕೂ ನೈಸರ್ಗಿಕವಾಗಿಯೇ ಅಣಿಗೊಳಿಸಿರುವಾಗ ಮಹಿಳೆ ಯಾಕೆ ತನ್ನ ದೇಹವನ್ನು ರಾಸಾಯನಿಕಗೊಳಿಸಿಕೊಳ್ಳಬೇಕು ಎಂದು ನನಗೆ ಹಲವು ಬಾರಿ ಅನಿಸಿದ್ದಿದೆ. 
 
ನೀವು ಏನನ್ನೇ ಮಾಡಿದರೂ ಎಲ್ಲವೂ ಆರು ತಿಂಗಳಲ್ಲಿ ಸಹಜ ಸ್ಥಿತಿಗೆ ಮರಳುತ್ತದೆ.
ನನ್ನ ಕಳಕಳಿಯ ಮನವಿಯೆಂದರೆ ನಿಮ್ಮ ಪ್ರೀತಿಯ, ಕಟ್ಟುನಿಟ್ಟಿನ ಬಾಣಂತನ ಆಚರಣೆಯಲ್ಲಿ ನಿಮ್ಮ ಮಗಳು ಅಥವಾ ಸೊಸೆಯನ್ನು ಹಿಂಸಿಸದಿರಿ. ಈ ಸಂತೋಷಕರ ಸಮಯವನ್ನು ಸಂಭ್ರಮಿಸಲು ಪ್ರಕೃತಿಯೇ ಆಕೆಯಲ್ಲಿ ಎಲ್ಲವನ್ನೂ ಸಿದ್ಧಗೊಳಿಸಿದೆ.
 
ನಮ್ಮಲ್ಲಿ ಅನೇಕರು (ನನ್ನನ್ನೂ ಒಳಗೊಂಡು) ಅಪಾರ ಸೈರಣೆಯಿಂದ ಇವುಗಳನ್ನು ಯಶಸ್ವಿಯಾಗಿ ದಾಟಿ ಬಂದಿದ್ದೇವೆ. ಆದರೆ ಆಕೆಯ ದೇಹ ಮರಳಿ ಸಹಜ ಸ್ಥಿತಿ ಪಡೆದುಕೊಳ್ಳಲು ಸಹಕರಿಸಿ ಎಂದು ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತೇನೆ. ಆಕೆಗೆ ನಿಮ್ಮ ಪ್ರೀತಿಯ ಆರೈಕೆ, ಸೇವೆ ಮತ್ತು ಪ್ರೋತ್ಸಾಹದ ಅಗತ್ಯವಿದೆ.
 

 

(ಲೇಖನದಲ್ಲಿ ಬಳಸಿರುವ ಹೆಸರುಗಳನ್ನು ಬದಲಿಸಲಾಗಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT