ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ನಮ್ಮವರು... ಅರಸಬೇಕಿದೆ ಹೊಸ ಅಸ್ಮಿತೆ

Last Updated 22 ಜುಲೈ 2013, 19:59 IST
ಅಕ್ಷರ ಗಾತ್ರ

`ನಮ್ಮವರೊಬ್ಬರನ್ನೂ ಈ ಸಾರಿ ಮಂತ್ರಿ  ಮಾಡಿಲ್ಲ ನೋಡಿ'. ಚುನಾವಣೆಯ ನಂತರ ಇಂತಹ ಗೊಣಗಾಟಗಳು ಕೇಳುತ್ತಲೇ ಇರುತ್ತವೆ. `ಈ ಸಾರಿ ಸಿ.ಎಂ. ನಮ್ಮವರೇ. ಹೇಗಾದರೂ ಮಾಡಿ ಲೇಔಟ್ ಸ್ಯಾಂಕ್ಷನ್ ಮಾಡಿಸಿಕೊಂಡುಬಿಡಬೇಕು, ನಮ್ಮವರದು ಅಂತ ಒಂದೂ  ಎಂಜಿನಿಯರಿಂಗ್ ಅಥವಾ ಮೆಡಿಕಲ್ ಕಾಲೇಜ್ ಆಗಿಲ್ಲ. ಇನ್ನೇನ್ ಹೂವಿನ ಸರ ಎತ್ತಿದ ಹಾಗೆ ಕೆಲಸ ಆಗತ್ತೆ ಬಿಡಿ'. , 

`ನಮ್ಮವರಿಗೇನಾದರು ತೊಂದರೆ ಆಗಬೇಕಲ್ಲ ಸುಮ್ಮನೆ ಮಾತ್ರ ಬಿಡಲ್ಲ' - ಇಂತಹ ಮಾತುಗಳಲ್ಲಿ ಬರುವ ಈ `ನಮ್ಮವರು' ಯಾರು? ಸಮಯಕ್ಕೆ ತಕ್ಕಹಾಗೆ `ನಮ್ಮವರನ್ನು' ಗುರುತಿಸಿಕೊಳ್ಳುವ ಬಗೆ ಬದಲಾಗುತ್ತಿರುತ್ತದೆ.

ಇತರೆ ಹಿಂದುಳಿದ ಜಾತಿಗೆ ಸೇರಿದವರು (ಓಬಿಸಿ) ಉದಾಹರಣೆಗೆ ಕುರುಬ, ಕುಂಬಾರ, ಕಮ್ಮೋರ ಒಂದು ಕಡೆ ಸೇರಿದಾಗ `ನಾವೆಲ್ಲ ಒಟ್ಟಾಗಿ ಹೋರಾಡಬೇಕು. ಹಾಗಾದರೆ ಮಾತ್ರವೇ ನಾವು ಮುಂದುವರೆಯಲು ಸಾಧ್ಯ' ಎಂದು ಯೋಜನೆಯನ್ನು ರೂಪಿಸಿಕೊಳ್ಳುತ್ತಾರೆ. ಪ್ರಬಲ ಕೋಮಿನವರ ಶೋಷಣೆಯಿಂದ ಹೊರಬರಬೇಕು ಎಂಬುದು ಮುಖ್ಯ ಉದ್ದೇಶವಾಗಿರುತ್ತದೆ. ಓಬಿಸಿ ಒಳಗಿನ ಯಾವುದಾದರೂ ಒಂದು ಜಾತಿಯವರು ಒಂದು ಕಡೆ ಕಲೆತಾಗ `ನಮ್ಮದು ಅಂತ ಒಂದು ಮಠಾನು ಇಲ್ಲ ನಮ್ಮ ಮಕ್ಕಳಿಗೆ ಒಂದು ಹಾಸ್ಟೆಲ್ ಇಲ್ಲ' ಎಂದು ತಮ್ಮದೇ ಆದ ಅಸಹಾಯಕತೆಯನ್ನು ತೋಡಿಕೊಂಡು ಅದರ ನಿವಾರಣೆಗೆ ಹೆಜ್ಜೆ ಹಾಕತೊಡಗುತ್ತಾರೆ. ಜಾತಿ ನಾಯಕರು ತಮ್ಮದೇ ಆದ ಗುರುತುಗಳಿಗಾಗಿ ಹುಡುಕಾಡುತ್ತಾರೆ. ಓಬಿಸಿ ಎಂಬ ವಿಸ್ತಾರವಾದ ಚೌಕಟ್ಟಿನಿಂದ ಹೊರಬಂದು ಜಾತಿ ಐಡೆಂಟಿಟಿಯ ಪ್ರಶ್ನೆಗಳನ್ನು ಮುಂದುಮಾಡಿಕೊಳ್ಳುತ್ತಾರೆ. ದೊಡ್ಡ ಗುಂಪಿನಲ್ಲಿ ತಮಗೆ ಪ್ರಾಮುಖ್ಯ ದೊರೆಯುತ್ತದೊ ಇಲ್ಲವೋ ಎಂಬ ಆತಂಕ ಅವರನ್ನು ಕಾಡುತ್ತದೆ. ಇಂತಹ ಆಲೋಚನೆಗಳು ಇದ್ದಕ್ಕಿದ್ದಂತೆ ಹುಟ್ಟಿ ಬರುವುದಿಲ್ಲ. ಇದರ ಹಿಂದಿನ ಇನ್ನೂರು ವರ್ಷಗಳ ಚರಿತ್ರೆಯನ್ನೇ ಜಾಲಾಡಬೇಕಾಗುತ್ತದೆ. 

ಜಾತಿ, ಒಳಜಾತಿ, ಧರ್ಮ, ಭಾಷೆ, ಮೂಲ ನೆಲೆ, ಸಿದ್ಧಾಂತ, ಪಂಥ, ವರ್ಗ, ಉದ್ಯೋಗ ಇತ್ಯಾದಿ ಕಾರಣಗಳಿಗಾಗಿ ತಾವೆಲ್ಲ ಒಂದು ಎಂದು ಜನ ಭಾವಿಸಿಕೊಳ್ಳುತ್ತಾರೆ. ಹೀಗೆ ತಾವು ಒಂದು ಎಂದು ಗುರುತಿಸಿಕೊಳ್ಳುವ ಸಮಾಜದ ನಡೆಯನ್ನು ಐಡೆಂಟಿಟಿ, ಅನನ್ಯತೆ, ಅಸ್ಮಿತೆ ಎಂಬಿತ್ಯಾದಿ ಪದಗಳಿಂದ ವಿದ್ವಾಂಸರು ವಿವರಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಬ್ರಿಟಿಷರು ಭಾರತದಲ್ಲಿ ಮೊದಲ ಜನಗಣತಿಯನ್ನು (ಸೆನ್ಸಸ್) 1861ರಲ್ಲಿ ಭಾಗಶಃ ಪ್ರಕಟಪಡಿಸಿದರು.ಆ ನಂತರ ನಿರಂತರವಾಗಿ ಪ್ರಕಟವಾದ ವರದಿಗಳಲ್ಲಿ ಅವರ ಗ್ರಹಿಕೆಗೆ ದೊರೆತಂತೆ ಭಾರತೀಯರನ್ನು ಧರ್ಮದ ಆಧಾರದ ಮೇಲೆ ವರ್ಗೀಕರಿಸಿದರು. ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ ಎಂದು ಬೇರ್ಪಡಿಸಿ ಮುಂದಿಟ್ಟಾಗ ಭಾರತದ ಮುಸಲ್ಮಾನರು ಮೊದಲ ಬಾರಿಗೆ ತಾವು ಒಂದು ಎಂದು ಭಾವಿಸತೊಡಗಿದರು. ಉಳಿದ ಜಾತಿಗಳನ್ನೆಲ್ಲಾ ಸಾರಾಸಗಟಾಗಿ ಒಂದು ಕಟ್ಟಿನಲ್ಲಿ ಕಟ್ಟಿ ಹಿಂದೂಗಳೆಂಬ ಶಿರೋನಾಮೆಯನ್ನು ಹಚ್ಚಲಾಗಿ ಅವರ ಮುಂದೆ ಮುಸಲ್ಮಾನರು ಅಲ್ಪಸಂಖ್ಯಾತರಾದರು, ಭಾರತದ ಕೋಮು ದುರಂತಕ್ಕೆ ಅಡಿಪಾಯವಾಗಿತ್ತು. ಮುಸಲ್ಮಾನರ ಆವರೆಗಿನ ಸಾಂಸ್ಕೃತಿಕ ಭವ್ಯತೆಯನ್ನೆಲ್ಲಾ ಮರೆತು ಅಲ್ಪಸಂಖ್ಯಾತರೆಂಬ ಸಂಕುಚಿತ ಪದ ಕಲ್ಪನೆಯಲ್ಲಿ ನರಳುವಂತಾಯಿತು. ಏಳುನೂರಐವತ್ತು ವರ್ಷಗಳ ಕಾಲ ಈ ನಾಡಿನ ರಾಜಕೀಯ ಸೂತ್ರವನ್ನು ಹಿಡಿದವರೂ,  ಕಲೆ, ವಾಸ್ತುಶಿಲ್ಪ, ಸಾಹಿತ್ಯ ಹೀಗೆ ಬದುಕಿಗೆ ಹೊಸ ಭಾಷ್ಯವನ್ನು ಬರೆದ ಸಮುದಾಯ, ಇದ್ದಕ್ಕಿದ್ದಂತೆ ಅತಾರ್ಕಿಕವಾದ ಸಂಖ್ಯಾಸೂಚಕ ಪದದಲ್ಲಿ ಗುರುತಿಸತೊಡಗಿದ್ದು, ಚಾರಿತ್ರಿಕ ಹಲ್ಲೆಗೆ ತಲೆಬಾಗಿದಂತಾಗಿತ್ತು.

ದಕ್ಷಿಣ ಭಾರತದಲ್ಲಿ ಆರಂಭವಾದ ದ್ರಾವಿಡ ಹೋರಾಟಕ್ಕೂ ಹಲವು ಒತ್ತಾಸೆಗಳಿದ್ದವು. ಭಾಷಾ ಮೂಲವನ್ನು ಆಧರಿಸಿ ಆರ್ಯ ಸಿದ್ಧಾಂತವನ್ನು ಮ್ಯಾಕ್ಸ್‌ಮುಲ್ಲರ್ ಮಂಡಿಸಿದ್ದು, ಆತನ ಉದ್ದೇಶ ಮೀರಿ ಅದು ಒಂದು ಜನಾಂಗ ಸಿದ್ಧಾಂತವಾಗಿ ಬೆಳೆದು ಭೂತಾಕಾರವಾಯಿತು. ಕೆಲವರಿಗೆ `ಆರ್ಯ ಜನಾಂಗ ಶ್ರೇಷ್ಠತೆ'ಯ ವ್ಯಸನಕ್ಕೆ ಸಿಕ್ಕಿ ನರಳುವಂತಾಯಿತು. ಕಾಲ್ಡವೆಲ್ ದ್ರಾವಿಡ ಭಾಷಾ ಅಧ್ಯಯನದ ಆಧಾರದ ಮೇಲೆ ದ್ರಾವಿಡ ಜನಾಂಗ ವಾದವನ್ನು ಮಂಡಿಸಿದನು. ಆರ್ಯ ವೈದಿಕ  ಶ್ರೇಷ್ಠತೆಯ ಕಲ್ಪನೆಗೆ ವಿರೋಧವಾಗಿ ದ್ರಾವಿಡರು ತಮ್ಮನ್ನು ತಾವು ಗುರುತಿಸಿಕೊಳ್ಳತೊಡಗಿದರು. ಇದೇ ಸರಿಸುಮಾರಿಗೆ ಮಹಾರಾಷ್ಟ್ರದಲ್ಲಿ  ಫುಲೆ ಅವರು ತಳಸಮುದಾಯಗಳ ಸಂಘಟನೆಯನ್ನು ಆರಂಭಿಸಿದಾಗ ವೈದಿಕರ ವಿರೋಧ ತೀವ್ರವಾಗಿತ್ತು. ಕೇರಳದಲ್ಲಿ ನಾರಾಯಣ ಗುರು ಸಂತನಾಗಿ ಕೇರಳದ ಶೋಷಿತ ಸಮುದಾಯಗಳಿಗೆ ಧಾರ್ಮಿಕ, ಆಧ್ಯಾತ್ಮಿಕ ಬಲವನ್ನು ತಂದುಕೊಟ್ಟರು. ದಕ್ಷಿಣ ಭಾರತದಾದ್ಯಂತ ಹುಟ್ಟಿದ ಈ ಚಳವಳಿಗಳು ಒಂದಕ್ಕೊಂದು ಪೂರಕವಾಗಿ ವಿಸ್ತರಿಸಿದವು. ಜನ ಸಂಘಟಿತರಾಗಿ ತಮ್ಮ ನೆಲೆಗಳನ್ನು ಕಂಡುಕೊಳ್ಳತೊಡಗಿದರು. ಹತ್ತೊಂಬತ್ತನೆ ಶತಮಾನದ ಈ ಎಲ್ಲ ಬೆಳವಣಿಗೆಗಳು ಹೊಸ ಐಡೆಂಟಿಟಿಗಳನ್ನು ಹುಟ್ಟು ಹಾಕಿದವು.

ಸರ್ಕಾರಿ ಉದ್ಯೋಗಗಳಲ್ಲಿ ಬ್ರಾಹ್ಮಣರೇ ಹೆಚ್ಚಾಗಿ ಇದ್ದುದು ಮೈಸೂರಿನಲ್ಲಿ 1916 ರಲ್ಲಿ ಆರಂಭವಾದ ಬ್ರಾಹ್ಮಣ ವಿರೋಧಿ ಚಳವಳಿಗೆ ಕಾರಣವಾಯಿತು. ಮೈಸೂರು ಸರ್ಕಾರ ಮಿಲ್ಲರ್ ಆಯೋಗವನ್ನು ನೇಮಕ ಮಾಡಿತು. ಅದು ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಎತ್ತಿ ಹಿಡಿಯಿತು. ಹಿಂದುಳಿದ ವರ್ಗಗಳು ಎಂದಾಗ ಬ್ರಾಹ್ಮಣರು, ಕ್ರೈಸ್ತರು ಮತ್ತು ಆಂಗ್ಲೋ ಇಂಡಿಯನ್ನರನ್ನು ಹೊರತುಪಡಿಸಿ ಉಳಿದವರನ್ನು ಪರಿಗಣಿಸಿತು. ಆಗ ಅದರ ಲಾಭವನ್ನು ಪಡೆದುಕೊಂಡವರು ಲಿಂಗಾಯಿತರು ಮತ್ತು ಒಕ್ಕಲಿಗರೇ ಆಗಿದ್ದರು. ಆಡಳಿತದ ಉನ್ನತ ಸ್ಥಾನಗಳಿಗೆ ಮೀಸಲಾತಿಯನ್ನು ಕಲ್ಪಿಸಿತು. ಸ್ವಾತಂತ್ರ್ಯಾ ನಂತರದ ಕರ್ನಾಟಕ ರಾಜಕೀಯದಲ್ಲಿ ಒಕ್ಕಲಿಗರು ಲಿಂಗಾಯತರು ಮುಂಚೂಣಿಯಲ್ಲಿ ಇರಲು ಮುನ್ನುಡಿಯಾಯಿತು.

ಅಂಬೇಡ್ಕರರು ರಾಷ್ಟ್ರೀಯ ಹೋರಾಟದ ಸಂದರ್ಭದಲ್ಲಿ ದಲಿತ ಸಮುದಾಯಗಳು ತಮ್ಮನ್ನು ರಾಜಕೀಯವಾಗಿ ಗುರುತಿಸಿಕೊಳ್ಳಲು ಹೋರಾಡಿದರು. ವರ್ಣಾಶ್ರಮದ ಚೌಕಟ್ಟಿನಲ್ಲಿ ನರಳುವುದು ಅವರಿಗೆ ಬೇಕಿರಲಿಲ್ಲ. ಅನುಕಂಪದ  `ಹರಿಜನ ` ಸುಧಾರಣೆಗಿಂತ ರಾಜಕೀಯ ಮೀಸಲಾತಿಯನ್ನು ಬಯಸಿದರು. ಅಸ್ಪೃಶ್ಯತೆಯ ಬಿಡುಗಡೆಗೆ ಬೌದ್ಧ ನೆಲೆಯನ್ನು ಕಂಡುಕೊಂಡರು. ದಲಿತರ ವಿಮೋಚನೆಗೆ ಹೊಸ ದಾರಿಯನ್ನು ತೋರಿಸಿಕೊಟ್ಟರು.

ಒಂದಾದ ನಂತರ ಒಂದು ಹೊರ ಬಂದ ಸರ್ಕಾರಿ ವರದಿಗಳು, ಜನಸಂಖ್ಯಾ ವರದಿಗಳು ಶಿಕ್ಷಣ, ಆರ್ಥಿಕ ಪರಿಸ್ಥಿತಿಯ ಆಧಾರದ ಮೇಲೆ ಜಾತಿ ಬುಡಕಟ್ಟುಗಳನ್ನು ವರ್ಗೀಕರಿಸತೊಡಗಿದವು. `ಹಿಂದುಳಿದ ವರ್ಗ', `ಪರಿಶಿಷ್ಟ ಜಾತಿ', `ಪರಿಶಿಷ್ಟ ಬುಡಕಟ್ಟು',  `ಇತರೇ ಹಿಂದುಳಿದ ವರ್ಗ'  ಈ ಹೊಸ ಹೆಸರುಗಳನ್ನು ವಿರೋಧವಿಲ್ಲದೆ ಒಪ್ಪಿಕೊಂಡಿದ್ದು ಆಶ್ಚರ್ಯಕರವಾಗಿದೆ. ಚಾರಿತ್ರಿಕವಾದ, ಸಾಂಸ್ಕೃತಿಕವಾದ ಗುರುತುಗಳಿಂದ ಹೊರಬಂದು ಹೊಸ ವರ್ಗೀಕರಣದಲ್ಲಿ ಭಾರತದ ಜನಸ್ತೋಮವನ್ನು ಗುರುತಿಸಲಾಯಿತು. ಅದು ಶಿಕ್ಷಣ, ಉದ್ಯೋಗದ ಮೀಸಲಾತಿಯಿಂದ ಆರಂಭಗೊಂಡು ರಾಜಕೀಯ ಮೀಸಲಾತಿಯವರೆಗೆ ಮುಂದುವರೆಯುತ್ತದೆ. `ಹಿಂದುಳಿದ' ಎಂದು ಕರೆಯುವಾಗ ಆಸ್ತಿ, ಆದಾಯ, ಓದು ಇವು ಪ್ರಮುಖ ಅಳತೆಗೋಲುಗಳಾಗಿದ್ದವು. ವಿಪರ್ಯಾಸದ ಸಂಗತಿಯೆಂದರೆ ಆರ್ಥಿಕ ಕುಸಿತಕ್ಕೆ ಕಾರಣವಾದ ಬ್ರಿಟಿಷರೇ ನಮ್ಮನ್ನು ಹಿಂದುಳಿದವರೆಂದು ಕರೆದುದು. ಅಂತಹ ಹೆಸರುಗಳಲ್ಲಿ ಗುರುತಿಸಿಕೊಳ್ಳುವುದನ್ನು ಪ್ರಶ್ನಾತೀತವಾಗಿ ಒಪ್ಪಿದ್ದು ಮತ್ತೂ ಆಶ್ಚರ್ಯಕರವಾದ ಸಂಗತಿ. ಹಿಂದುಳಿದ ವರ್ಗಗಳು ಎಂದು ಕರೆಸಿಕೊಂಡ ಜಾತಿಗಳು ಬೇಸಾಯ ಮೂಲದವರು, ಓಬಿಸಿ (ಇತರೆ ಹಿಂದುಳಿದ ವರ್ಗಗಳು) ಪಟ್ಟಿಗೆ ಸೇರಿದವರು ಪಶುಪಾಲಕ ಇಲ್ಲವೆ ಕುಶಲಕರ್ಮಿಗಳು. ಕಲೆಯನ್ನು ಬದುಕಾಗಿಸಿಕೊಂಡವರು ಹಿಂದುಳಿದವರೆಂದು ಗುರುತಿಸಿಕೊಳ್ಳಬೇಕೆ? ಪರಿಶಿಷ್ಟ ಜಾತಿ ಎಂಬ ಪಟ್ಟಿಯೇ ನಮ್ಮ ಬದುಕಿನ ಹೆಸರಾಗಲು ಸಾಧ್ಯವೇ? ಆ ಪಟ್ಟಿಯ ಅಡಿಯಲ್ಲಿ ನಮ್ಮನ್ನು ಇತರರು ಗಮನಿಸಬೇಕೆ? ನಮ್ಮ ಸಮುದಾಯಗಳಿಗೊಂದು ಗೌರವದ ಹೆಸರೂ ಬೇಡವೇ? ಹಿಂದುಳಿದ ದೇಶಗಳೆಂದು ಕರೆಯುವುದನ್ನು ಕೈ ಬಿಟ್ಟು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳೆಂದು ಕರೆದುದನ್ನು ಇಲ್ಲಿ ನೆನೆಯಬಹುದು.

`ಶೂದ್ರ'ನ ಸ್ಥಾನ ವರ್ಣವ್ಯವಸ್ಥೆಯಲ್ಲಿ ಕಡೆಯದಾಗಿದ್ದು ಉಳಿದವರು ಅವರನ್ನು ಕೀಳಾಗಿ ಕಾಣುತ್ತಿದ್ದರೂ ತಮಿಳು ನಾಡಿನಲ್ಲಿ ಆರಂಭವಾದ ದ್ರಾವಿಡ ಹೋರಾಟ, ಶೂದ್ರ ಕಲ್ಪನೆಗೊಂದು ಘನತೆಯನ್ನು ತಂದುಕೊಟ್ಟಿತು. ಪೆರಿಯಾರ್, ಲೋಹಿಯಾ ಅಂತಹವರಿಂದ ಪದದ ಮೈಲಿಗೆಯನ್ನು ಹೋಗಲಾಡಿಸಲು ಸಾಧ್ಯವಾಯಿತು. ಕುವೆಂಪು ಅವರ `ಶೂದ್ರ ತಪಸ್ವಿ' ಈ ಭಾವವನ್ನು ಹೊತ್ತು ಮೂಡಿದ ಕೃತಿ. 
 
ಕರ್ನಾಟಕದಲ್ಲಿ ಆರಂಭವಾದ ದಲಿತ ಚಳವಳಿ 1980ರ ದಶಕದಲ್ಲಿ ಹೊಸ ಐಡೆಂಟಿಟಿಗೆ ಚಾಲನೆ ನೀಡಿತು. ಕ್ರಾಂತಿಗೀತೆಗಳು, ತಮಟೆ ವಾದ್ಯ, ಅಂಬೇಡ್ಕರ್ ಭಾವಚಿತ್ರ ಇವೆಲ್ಲ ಸಾಂಸ್ಕೃತಿಕ ಹೆಗ್ಗುರುತುಗಳಾದವು.ದಲಿತ ಸಮುದಾಯದೊಳಗಿನ ಜಾತಿಗಳು ತಮ್ಮ ವೈವಿಧ್ಯತೆಯನ್ನು ಮೀರಿ ಒಕ್ಕೊರಲಿನಿಂದ ಘೋಷಣೆಗಳನ್ನು ಕೂಗಿದವು. ದಲಿತರಲ್ಲದವರು ದಲಿತರೊಳಗಿನ ಜಾತಿ ಅಂತರವನ್ನು ಗುರುತಿಸದಾದರು. ರಾಜಕೀಯ ಪ್ರಾಬಲ್ಯಕ್ಕೆ ಹೆದರಿ ದಲಿತ ಸಂಘಟನೆಯನ್ನು ಒಡೆಯುವ ಹೊರಗಿನ ಪ್ರಯತ್ನ ತೀವ್ರವಾಗಿತ್ತು. ಎಡಗೈ, ಬಲಗೈ ಗುರುತುಗಳು ವಿರಸಕ್ಕೆ ತಿರುಗಿದವು. ದಲಿತ ಚಳವಳಿ ನಿಧಾನವಾಗಿ ಕ್ಷೀಣಿಸತೊಡಗಿತು. ಸಂಖ್ಯಾ ಬಾಹುಳ್ಯವಿಲ್ಲದ ಜಾತಿಗಳು ಅಭದ್ರತೆಯಿಂದ ಮೌನವಾದರೆ, ತಮಗೆ ಸಿಗಬಹುದಾದ ಸವಲತ್ತುಗಳ ಅರಿವೂ ಇಲ್ಲದೆ ಮರೆಮಾಚಿದ ಬದುಕನ್ನು ಮುಂದುವರೆಸಿವೆ.

ಕರ್ನಾಟಕದ ರಾಜಕೀಯ ಚುಕ್ಕಾಣಿಯನ್ನು ನಿರಂತರವಾಗಿ ಹಿಡಿದ ಲಿಂಗಾಯತ, ಒಕ್ಕಲಿಗ ಹಾಗೂ ಬ್ರಾಹ್ಮಣರಿಗೆ ತಮ್ಮ ಐಡೆಂಟಿಟಿಗಾಗಿ ಹೋರಾಡಬೇಕಾದ ಅಗತ್ಯವಿರಲಿಲ್ಲ. ಇತರೆ ಹಿಂದುಳಿದ ಜಾತಿಗಳೆಂದು ಕರೆಸಿಕೊಳ್ಳುವ ಕೈಕಸುಬುದಾರ ಸಮುದಾಯಗಳು ತಮ್ಮ ಸಾಂಸ್ಕೃತಿಕ ಹೆಗ್ಗುರುತುಗಳಿಗಾಗಲೀ, ರಾಜಕೀಯ ಅವಕಾಶಗಳಿಗಾಗಲೀ ಹೋರಾಡುವುದು ದುಸ್ತರವೇ ಆಗಿತ್ತು. ಬಂಡಾಯ ಚಳವಳಿ ಈ ದಿಕ್ಕಿನಲ್ಲಿ ನಡೆದ ಒಂದು ಪ್ರಯತ್ನವಾಗಿತ್ತು. ಮುಂದೆಯೂ ಹಿಂದುಳಿದ ವರ್ಗದ ನಾಯಕತ್ವವನ್ನು  ಕರ್ನಾಟಕದ ಮತ್ತೊಂದು ದೊಡ್ಡ ಜಾತಿಯಾದ ಕುರುಬರು ವಹಿಸಬೇಕಾಯಿತು.

ಶಿಕ್ಷಣ ಜನರನ್ನು ಹೆಚ್ಚೆಚ್ಚು ರಾಜಕೀಯವಾಗಿ ಪ್ರಾಜ್ಞರನ್ನಾಗಿಸಿದೆ. ತಮ್ಮ ಜಾತಿ ಸಮುದಾಯಗಳ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸತೊಡಗಿವೆ. ಚರಿತ್ರೆ ಪುರಾಣಗಳಿಂದ, ಮಹಾಕಾವ್ಯಗಳಿಂದ, ತಮ್ಮ ಜಾತಿಯನ್ನು ಪ್ರತಿನಿಧಿಸುವ ವ್ಯಕ್ತಿಗಳಿಗಾಗಿ ಹುಡುಕಾಟ ನಡೆಸಿವೆ. ಈ ಸಮಸ್ಯೆ ವೈದಿಕರನ್ನು ಕಾಡಲಿಲ್ಲ, ಅವರಿಗೆ ಸ್ಥಾಪಿತ ಮಠಗಳೇ ಇದ್ದುದರಿಂದ ಶಂಕರ, ಮಧ್ವ, ರಾಮಾನುಜ, ಇವರೇ ಹೆಗ್ಗುರುತುಗಳಾಗಿದ್ದರು. ವೀರಶೈವರಿಗೆ ಬಸವಣ್ಣನವರ ನಾಯಕತ್ವ  ಪ್ರಶ್ನಾತೀತವಾಗಿತ್ತು. ಅಲ್ಲದೆ ಅದರ ಒಳ ಪ್ರಭೇದಗಳಿಗೆ ಅನುಗುಣವಾಗಿ ಮಠಗಳೂ ಇರುವುದು ಸಮಾಧಾನವನ್ನು ತರುತ್ತದೆ.

ಒಕ್ಕಲಿಗರು ಆದಿಚುಂಚನಗಿರಿ ಮಠವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲಾಗಿ ಆ ಜನ ಅಲ್ಲಿಗೆ ನಡೆದುಕೊಳ್ಳತೊಡಗಿದರು. ಬಹುತೇಕ ಒಕ್ಕಲಿಗರು ಮಠಗಳ ಒಕ್ಕಲಾಗದಿದ್ದರೂ ಉಳಿದವರು ಮಠದೊಂದಿಗೆ ಅವರನ್ನು ಬೆಸೆದು ನೋಡುವುದು ಸಹಜವೆನಿಸುತ್ತದೆ. ಏನಿಲ್ಲದಿದ್ದರೂ ಮಠಗಳು ನಡೆಸುವ ಶಾಲಾಕಾಲೇಜುಗಳು ಆಯಾ ಸಮುದಾಯಗಳ ಹಿತವನ್ನು ಕಾದಿರುತ್ತವೆ. ಈ ಲಾಭವನ್ನು ಗಮನಿಸಿದ ಇತರ ಸಮುದಾಯಗಳು ಮಠಗಳನ್ನು ಕಟ್ಟಿ ಅದರ ಅಡಿಯಲ್ಲಿ ಬಲಗೊಳ್ಳುವ ಪ್ರಯತ್ನ ಮಾಡಿವೆ. ಮಠಗಳು ಸಮುದಾಯಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ದೊಡ್ಡ ಪಾತ್ರವನ್ನೇ ವಹಿಸುತ್ತವೆ.

ತಮ್ಮ ಸಮುದಾಯಗಳ ಸಾಂಸ್ಕೃತಿಕ ನಾಯಕರನ್ನು ಹುಡುಕಿಕೊಳ್ಳುವ ಪಡಿಪಾಟಲು ಕಳೆದೆರಡು ದಶಕಗಳಿಂದ ಕಾಣಬರುತ್ತಿದೆ. ವಾಲ್ಮೀಕಿ, ಕನಕದಾಸ, ಮಂಟೇಸ್ವಾಮಿ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ, ಬೆಂಗಳೂರು ಕೆಂಪೇಗೌಡ, ಮದಕರಿ ನಾಯಕ, ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ, ಟಿಪ್ಪು  ಸುಲ್ತಾನ್ ಹೀಗೆ ಸಾಲುಸಾಲಾಗಿ ಮಹಾತ್ಮರ ಭಾವಚಿತ್ರಗಳು ಬ್ಯಾನರ್‌ಗಳಲ್ಲಿ ಕಾಣತೊಡಗಿವೆ. ಜಾತಿ ಮೀರಿದ ಮಹಾತ್ಮರೆಲ್ಲಾ ಜಾತಿಯ ಐಕಾನ್‌ಗಳಾಗುವುದು ಚರಿತ್ರೆಯಲ್ಲಿ ಹೊಸದೇನೂ ಅಲ್ಲ. ಊರು ಕೇರಿಗಳಿಗೆ, ಬಸ್ ನಿಲ್ದಾಣಗಳಿಗೆ, ರಸ್ತೆಗಳಿಗೆ, ವಿಶ್ವವಿದ್ಯಾಲಯಗಳಿಗೆ ಕಡೆಗೆ ಏರ್‌ಪೋರ್ಟ್‌ಗೆ ಹೆಸರಿಡುವಾಗ ಎಲ್ಲಿಲ್ಲದ ಪೈಪೋಟಿ ಕಾಣುತ್ತದೆ. ಅಷ್ಟೇ ಅಲ್ಲದೆ ಪ್ರತಿ ಸಮುದಾಯ ತನ್ನ ಮೂಲ ಸಂಸ್ಕೃತಿಯನ್ನು, ಚರಿತ್ರೆಯನ್ನು ಅರಿಯಲು ಬಯಸುತ್ತದೆ. ಹೀಗೆ ಎಲ್ಲದರಲ್ಲೂ ತಮ್ಮವರನ್ನು ಹುಡುಕಿಕೊಳ್ಳುವಲ್ಲಿ ಆತ್ಮತೃಪ್ತಿಯನ್ನು ಪಡೆದುಕೊಳ್ಳುತ್ತಿವೆ.

ಹಳ್ಳಿಯಿಂದ ನಗರಗಳಿಗೆ ವಲಸೆ ಬಂದ ಸಮುದಾಯಗಳು ತಮ್ಮ ಜೊತೆಗೆ ತಮ್ಮ ಕುಲದ ಲಾಂಛನಗಳನ್ನೂ ಹೊತ್ತುತರುತ್ತವೆ. ತಮ್ಮ ಕುಲ ದೈವಗಳನ್ನು ನಗರದಲ್ಲಿ ತಂದು ನೆಲೆಗೊಳಿಸುತ್ತವೆ. ಮದ್ದೂರಮ್ಮ, ಕರುಮಾರಿಯಮ್ಮ, ಎಲ್ಲಮ್ಮ, ಕರಿಯಮ್ಮ, ಮಲೆ ಮಾದೇಶ್ವರ... ಇವರೆಲ್ಲಾ ಬೆಂಗಳೂರಿನಲ್ಲಿ ನೆಲೆಯೂರಿರುವುದನ್ನು ನೋಡಿದರೆ ಕುಲ ಮೂಲದ ದೈವಗಳು ಸಮುದಾಯದ ಚಹರೆಗಳಾಗಿರುತ್ತವೆಂದು ಸ್ಪಷ್ಟವಾಗುತ್ತದೆ. ದೈವಗಳು ಸೊಗಸಾಗಿ ಜನರನ್ನು ಒಂದುಗೂಡಿಸುವಂತೆ ಉಳಿದವರನ್ನು ದೂರವಿಡುತ್ತವೆ. ಹೊರ ನಾಡಿನಿಂದ ಬಂದವರೂ ದೇವರನ್ನೂ ತಮ್ಮ ಜೊತೆ ತರುತ್ತಾರೆ. ಹಾಗೆ ಹೆಚ್ಚು ಜನರನ್ನು ತನ್ನ ಕಡೆಗೆ ಸೆಳೆದುಕೊಂಡ ದೇವರು ಅಯ್ಯಪ್ಪಸ್ವಾಮಿ. ವಲಸೆ ಬಂದ ಮಲೆಯಾಳಿಗಳಿಗೆ ಅಯ್ಯಪ್ಪ ಸ್ವಾಮಿ, ಮಾತಾ ಅಮೃತಾನಂದಮಯಿ ಭಾವುಕ ಸಂಕೇತಗಳಾಗಿದ್ದಾರೆ. ಇಲ್ಲಿ ಜಾತಿಗಿಂತ ಹೆಚ್ಚಾಗಿ ಭಾಷೆ ಅವರನ್ನು ಒಂದುಗೂಡಿಸುತ್ತದೆ.

ಬಹುಸಂಸ್ಕೃತಿಯ  ನಾಡಾದ ಭಾರತದಲ್ಲಿ ಪ್ರತಿ ಸಮುದಾಯವೂ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಅದನ್ನು ಗೌರವಿಸುವುದು ಎಷ್ಟು ಮುಖ್ಯವೋ, ಅದನ್ನು ಮೀರಿ ಉಳಿದ ಸಮುದಾಯಗಳ ಜೊತೆ ಕೈ ಜೋಡಿಸಿ ಮುನ್ನಡೆಯುವುದು ಇಂದು ಅಷ್ಟೇ ಮುಖ್ಯವಾಗಿದೆ. ಎಲ್ಲವನ್ನೂ ತನ್ನ ತೆಕ್ಕೆಗೆ ಎಳೆದುಕೊಳ್ಳಲು ಹೊಂಚುಹಾಕುವ ಜಾಗತಿಕ ಮಾರುಕಟ್ಟೆಯನ್ನು ಎದುರಿಸಲು,  ನಮ್ಮವರನ್ನು  ಉಳಿಸಿಕೊಳ್ಳಲು ಹೊಸ ಐಡೆಂಟಿಟಿಯನ್ನು ಹುಡುಕಿಕೊಳ್ಳಬೇಕಾಗಿದೆ. ನಮ್ಮ ರೈತರು, ನಮ್ಮ ವ್ಯಾಪಾರಗಾರರು, ನಮ್ಮ ಕಾರ್ಮಿಕರು, ನಮ್ಮ ಕಲಾವಿದರು.. ....

(ಲೇಖಕಿ  ಸಹ ಪ್ರಾಧ್ಯಾಪಕರು, ಇತಿಹಾಸ ವಿಭಾಗ,  ಬೆಂಗಳೂರು ವಿಶ್ವವಿದ್ಯಾಲಯ)
    ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT