ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಕಾನ್ ಡಿ 3400 ಪ್ರವೇಶಮಟ್ಟದ ಡಿಎಸ್‌ಎಲ್‌ಆರ್

Last Updated 14 ಜೂನ್ 2017, 13:41 IST
ಅಕ್ಷರ ಗಾತ್ರ

ಒಂದು ಕಾಲದಲ್ಲಿ ದುಬಾರಿಯಾಗಿದ್ದ ಡಿಜಿಟಲ್ ಎಸ್‌ಎಲ್‌ಆರ್ ಕ್ಯಾಮೆರಾಗಳು ಕೈಗೆಟುಕುವ ಬೆಲೆಗೆ ದೊರೆಯತೊಡಗಿ ಹಲವು ವರ್ಷಗಳೇ ಆಗಿವೆ. ನಿಕಾನ್ ಕಂಪೆನಿ ಪ್ರವೇಶಮಟ್ಟದಲ್ಲಿ ಕೆಲವು ಡಿಎಸ್‌ಎಲ್‌ಆರ್ ಕ್ಯಾಮೆರಾಗಳನ್ನು ತಯಾರಿಸಿದೆ. ಅಂತಹ ಒಂದು ಕ್ಯಾಮೆರಾ ಡಿ3300ಯ ವಿಮರ್ಶೆ ಇದೇ ಅಂಕಣದಲ್ಲಿ ಪ್ರಕಟವಾಗಿತ್ತು. ನಿಕಾನ್ ಕಂಪೆನಿ ಆ ಮಾದರಿಯನ್ನು ಸುಧಾರಿಸಿ ತಯಾರಿಸಿರುವ ಕ್ಯಾಮೆರಾ ಡಿ3400 (Nikon D3400). ಇದು ನಮ್ಮ ಈ ವಾರದ ಗ್ಯಾಜೆಟ್.
ಗುಣವೈಶಿಷ್ಟ್ಯಗಳು

ಡಿಜಿಟಲ್ ಎಸ್‌ಎಲ್‌ಆರ್ ಕ್ಯಾಮೆರಾ, 24.2 ಮೆಗಾಪಿಕ್ಸೆಲ್ ರೆಸೊಲೂಶನ್, 23.5 x 15.6 ಮಿ.ಮೀ. ಗಾತ್ರದ ಸಿಮೋಸ್ ಸಂವೇದಕ (CMOS sensor), 1/4000 - 30 ಸೆಕೆಂಡ್ ಷಟ್ಟರ್ ವೇಗ, 100 – 25600 ಐಎಸ್‌ಓ ಆಯ್ಕೆ, -5 - +5 EV ಎಕ್ಸ್‌ಪೋಷರ್ ಕಾಂಪನ್ಸೇಶನ್, ಆಯ್ಕೆ ಮಾಡಿಕೊಳ್ಳಬಹುದಾದ 11 ಫೋಕಸ್ ಬಿಂದುಗಳು, ಎಲ್ಲ ಡಿಎಸ್‌ಎಲ್‌ಆರ್ ಕ್ಯಾಮೆರಾಗಳಲ್ಲಿರುವಂತೆ ಪ್ರೋಗ್ರಾಮ್, ಷಟ್ಟರ್ ಪ್ರಯಾರಿಟಿ, ಅಪೆರ್ಚರ್ ಪ್ರಯಾರಿಟಿ, ಮ್ಯಾನ್ಯುವಲ್ ಆಯ್ಕೆಗಳು, 7.5 ಸೆ.ಮೀ. ಗಾತ್ರದ ಎಲ್‌ಸಿಡಿ ಪರದೆ, ಹೈಡೆಫಿನಿಶನ್ ವಿಡಿಯೊ (1920 x 1080, 60fps), ಹಲವು ದೃಶ್ಯಗಳ ಆಯ್ಕೆ, ಮಾರ್ಗದರ್ಶಕ ಆಯ್ಕೆ (guide mode), ಸುಮಾರು 445 ಗ್ರಾಂ ತೂಕ (ಲೆನ್ಸ್ ರಹಿತ), ಲೆನ್ಸ್ ರಹಿತ ಮಾರುಕಟ್ಟೆ ಬೆಲೆ ಸುಮಾರು ₹28,000.

ನಿಕಾನ್ ಪ್ರವೇಶಮಟ್ಟದಲ್ಲಿ ಈಗಾಗಲೇ ತಂದಿದ್ದ ಡಿ3100, ಡಿ3200, ಡಿ3300 ಕ್ಯಾಮೆರಾಗಳಿಗೆ ಬದಲಿಯಾಗಿ ಇದನ್ನು ತಂದಿದೆ. ಈ ಕ್ಯಾಮೆರಾದಲ್ಲಿ ಬಳಸಿದ ಪ್ರೊಸೆಸರ್ ಇಂಜಿನ್ ಸುಧಾರಿತ ಆವೃತ್ತಿಯದಾಗಿದೆ. ಆದುದರಿಂದ ಈ ಕ್ಯಾಮೆರಾ ಉತ್ತಮ ಎನ್ನಬಹುದು. ಈ ಸುಧಾರಿತ ಪ್ರೊಸೆಸರ್ ಚೆನ್ನಾಗಿದೆ. ಫೋಟೊಗಳು ಚೆನ್ನಾಗಿ ಮೂಡಿಬರುತ್ತವೆ. ಈ ಕ್ಯಾಮೆರಾದಲ್ಲಿ ಅತಿ ವೇಗವಾಗಿ ಒಂದರ ನಂತರ ಇನ್ನೊಂದು ಫೋಟೊ ತೆಗೆಯಬಹುದು. ಈ ವೇಗ ಸೆಕೆಂಡಿಗೆ ಸುಮಾರು 5 ಫೋಟೊಗಳ ತನಕ ಹೋಗಬಲ್ಲುದು. ಅಂತೆಯೇ ವಿಡಿಯೊ ಚಿತ್ರೀಕರಣದಲ್ಲೂ ಈ ಸುಧಾರಣೆ ಗೋಚರವಾಗುತ್ತದೆ. ಡಿ3300ಗಿಂತ ಇದು ಸ್ವಲ್ಪ ಹಗುರವಾಗಿದೆ. ಡಿ3300 ಕ್ಯಾಮೆರಾದಲ್ಲಿ ಮೈಕ್ರೊಫೋನ್ ಕಿಂಡಿ ಇದೆ, ಆದರೆ ಡಿ3400ರಲ್ಲಿ ಅದಿಲ್ಲ.

ಹಲವು ನಿಕಾನ್‌ ಕ್ಯಾಮೆರಾಗಳಲ್ಲಿರುವಂತೆ ಇದರಲ್ಲೂ ಹಲವು ದೃಶ್ಯಗಳ ಆಯ್ಕೆಗಳಿವೆ. ವ್ಯಕ್ತಿ ಚಿತ್ರ ತೆಗೆಯಲು ಪೋರ್ಟ್ರೈಟ್, ಕ್ರೀಡೆಯ ಚಿತ್ರಕ್ಕೆ ಸ್ಪೋರ್ಟ್ಸ್ ಇತ್ಯಾದಿ ಆಯ್ಕೆಗಳಿವೆ. ಇವೇನೂ ಈ ಕ್ಯಾಮೆರಾದಲ್ಲಿ ಮಾತ್ರ ಇರುವ ಹೊಸ ಸೌಲಭ್ಯಗಳಲ್ಲ.

ನಿಕಾನ್ ಡಿ3300 ಕ್ಯಾಮೆರಾದಲ್ಲಿದ್ದಂತೆ ಇದರಲ್ಲೂ Guide mode ಎಂಬ ಸೌಲಭ್ಯವಿದೆ. ನೀವು ಕ್ಯಾಮೆರಾ ಬಳಸಲು ಹೊಸಬರಾಗಿದ್ದರೆ ಅದು ನಿಮಗೆ ಮಾರ್ಗದರ್ಶನ ನೀಡಬಲ್ಲುದು. ಗಣಕ ಬಳಸುವವರಿಗೆ ಟ್ಯುಟೋರಿಯಲ್‌ಗಳನ್ನು ಬಳಸಿ ಅನುಭವ ಇರಬಹುದು. ಇದೂ ಸುಮಾರಾಗಿ ಅದೇ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಫೋಟೊ ತೆಗೆಯಲು ಸಹಾಯ ಎಂದು ಆಯ್ಕೆ ಮಾಡಿಕೊಂಡರೆ ಹಲವು ನಮೂನೆಯ ಫೋಟೊಗಳನ್ನು ತೆಗೆಯಲು ಹಂತಹಂತವಾಗಿ ಸಹಾಯ ಮಾಡುತ್ತದೆ. ಪ್ರಥಮ ಬಾರಿ ಫೋಟೊಗ್ರಫಿ ಮಾಡುವವರಾದರೆ ಇದು ನಿಜಕ್ಕೂ ಉತ್ತಮ ಸೌಲಭ್ಯ.

ವಿಡಿಯೊ ಚಿತ್ರೀಕರಣ ಪರವಾಗಿಲ್ಲ. ಕ್ಯಾಮೆರಾವನ್ನು ಒಂದೇ ಕಡೆ ಸ್ಥಾಪಿಸಿ, ಹೆಚ್ಚು ಚಲನೆಗಳಿಲ್ಲದ ವಸ್ತುವಿನ ಚಿತ್ರೀಕರಣ ಮಾಡಲು ಇದು ಸೂಕ್ತ. ಉದಾಹರಣೆಗೆ ವೇದಿಕೆ ಮೇಲೆ ಒಂದೇ ಕಡೆ ನಿಂತು ಮಾಡುವ ಭಾಷಣ. ಆದರೆ ಕ್ಯಾಮೆರಾವನ್ನು ವೇಗವಾಗಿ ತಿರುಗಿಸಿದರೆ ಮತ್ತು ಅಥವಾ ಲೆನ್ಸ್ ಅನ್ನು ಝೂಮ್ ಮಾಡಿದರೆ ವಿಡಿಯೊ ಸ್ವಲ್ಪ ಮಸುಕಾಗುತ್ತದೆ. ದೃಶ್ಯದ ದೂರ ಬದಲಾದಂತೆ ಅದಕ್ಕೆ ಫೋಕಸ್ ಮಾಡಲು ಅದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ವಿಡಿಯೊ ಚಿತ್ರೀಕರಣ ಮಾಡುವಾಗ ಆಡಿಯೊ ಮೋನೊ ಆಗಿರುತ್ತದೆ. ಅಂದರೆ ವೃತ್ತಿಪರಿಣತ ಗುಣಮಟ್ಟದ ವಿಡಿಯೊ ತಯಾರಿಸಲು ಇದು ಹೇಳಿದ್ದಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಇದು ನಿಜಕ್ಕೂ ನೀಡುವ ಹಣಕ್ಕೆ ಮೋಸವಿಲ್ಲ ಎನ್ನಬಹುದಾದ ಕ್ಯಾಮೆರಾ. ಡಿಎಸ್‌ಎಲ್‌ಆರ್ ಕ್ಷೇತ್ರಕ್ಕೆ ಕಾಲಿಡುವವರಿಗೆ ಇದು ಸೂಕ್ತ.     

ನಿಕಾನ್ 18-300 ಮಿ.ಮೀ. ಲೆನ್ಸ್
ಎಲ್ಲ ಕೆಲಸಕ್ಕೂ ನೆರವಾಗುವ ಲೆನ್ಸ್

ನಿಕಾನ್ ಡಿ3400 ಕ್ಯಾಮೆರಾ ಜೊತೆ ನನಗೆ ವಿಮರ್ಶೆಗೆ ಬಂದದ್ದು ನಿಕಾನ್ 18-300 ಮಿ.ಮೀ. ಝೂಮ್ ಲೆನ್ಸ್. ಇದರ ಗುಣವೈಶಿಷ್ಷ್ಯಗಳು - 18-300 ಮಿ.ಮೀ. ಝೂಮ್ ಲೆನ್ಸ್, F/3.5-6.3. 16 ಪ್ರತ್ಯೇಕ ಅಂಗಗಳಿವೆ, ಅತಿ ಕಡಿಮೆ ಅಪೆರ್ಚರ್ ಎಫ್/22. ಫಿಲ್ಟರ್ ವ್ಯಾಸ 67 ಮಿ.ಮೀ. 78.5 x 99 ಮಿ.ಮೀ ಗಾತ್ರ. 550 ಗ್ರಾಂ ತೂಕ. ಬೆಲೆ ಸುಮಾರು ₹46,000.

ಈ ಲೆನ್ಸ್ಉತ್ತಮ ವಿನ್ಯಾಸ ಮತ್ತು ರಚನೆಯನ್ನು ಒಳಗೊಂಡಿದೆ. ಆಟೊಫೋಕಸ್ ಮತ್ತು ಮ್ಯಾನ್ಯುವಲ್ ಎಂಬ ಎರಡು ವಿಧಾನಗಳಿವೆ. ಹಾಗೆಯೇ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (VR) ಇದೆ. ಇವನ್ನು ಆಯ್ಕೆ ಮಾಡಿಕೊಳ್ಳಲು ಬಟನ್‌ಗಳಿವೆ. ಹಿಂಭಾಗದಲ್ಲಿ ಮ್ಯಾನ್ಯುವಲ್ ಫೋಕಸ್ ರಿಂಗ್ ಇದೆ. 18 ಮಿ.ಮೀ. ಫೋಕಲ್ ಲೆಂತ್‌ಗೆ ಲೆನ್ಸ್ ಅನ್ನು ಝೂಮ್ ಮಾಡಿದಾಗ ಲೆನ್ಸ್‌ ಅನ್ನು ಆ ಜಾಗದಲ್ಲೇ ಸ್ಥಿರಗೊಳಿಸಲು ಒಂದು ಲಾಕ್ ಬಟನ್ ಕೂಡ ಇದೆ. ಇದು ಕ್ಯಾಮೆರಾವನ್ನು ಕುತ್ತಿಗೆಗೆ ಹಾಕಿಕೊಂಡು ನಡೆದಾಡುವಾಗ ಲೆನ್ಸ್ ಹೊರಗೆ ಬಾರದಂತೆ ತಡೆಯುತ್ತದೆ.

ಲೆನ್ಸ್‌ನ ಗುಣಮಟ್ಟ ಉತ್ತಮವಾಗಿದೆ. ಎಲ್ಲ ಶ್ರೇಣಿಗೂ (range) ಬಳಕೆಯಾಗುವ ಲೆನ್ಸ್ ಆಗಿರುವುದರಿಂದ  ಒಂದು ರೀತಿಯಲ್ಲಿ ರಾಜಿ (compromise) ಲೆನ್ಸ್ ಅನ್ನಬಹುದು. ನಿಮಗೆ ನಿಜಕ್ಕೂ ಅತ್ಯುತ್ತಮ ಗುಣಮಟ್ಟದ ಲೆನ್ಸ್ ಬೇಕಿದ್ದರೆ ಬೇರೆ ಬೇರೆ ಲೆನ್ಸ್ ಕೊಳ್ಳುವುದೇ ಉತ್ತಮ. ಎಲ್ಲ ನಮೂನೆಯ ಫೋಟೊಗಳನ್ನು ತೆಗೆದು ನೋಡಿದೆ. ಫೋಟೊ ಮತ್ತು ಬಣ್ಣ ನಿಖರವಾಗಿ ಬರುತ್ತದೆ. ಅತಿ ಹತ್ತಿರದ ವಸ್ತುಗಳ ಫೋಟೊವನ್ನು ಕೂಡ ತೆಗೆಯಬಹುದು. ಸಾಮಾನ್ಯವಾಗಿ 300 ಮಿ.ಮೀ. ಫೋಕಲ್ ಲೆಂತ್ ಇರುವ ಲೆನ್ಸ್‌ನಲ್ಲಿ 48 ಸೆ.ಮೀ.ನಷ್ಟು ಹತ್ತಿರದಿಂದ ಫೋಟೊ ತೆಗೆಯಲು ಆಗುವುದಿಲ್ಲ. ಆದರೆ ಈ ಲೆನ್ಸ್‌ನಲ್ಲಿ ಆಗುತ್ತದೆ. ಒಟ್ಟಿನಲ್ಲಿ ಇದು ರಾಜಿ ಲೆನ್ಸ್ ಅಂದುಕೊಂಡರೂ ನೀಡುವ ಹಣಕ್ಕೆ ಮೋಸವಿಲ್ಲ.

***

ವಾರದ ಆ್ಯಪ್: ಕುಣಿಕೆ ಆಟ

ಸ್ಮಾರ್ಟ್‌ಫೋನ್‌ಗಳಲ್ಲಿ ಆಡುವ ಆಟಗಳಲ್ಲಿ ಹಲವು ನಮೂನೆ. ಅದರಲ್ಲಿ ಕೆಲವು ಮೆದುಳಿಗೆ ಕೆಲಸ ನೀಡುವವು. ಮೆದುಳಿಗೆ ಕಸರತ್ತು ನೀಡುವ ಆಟಗಳು ನಿಮಗಿಷ್ಟವೇ? ಹೌದಾದಲ್ಲಿ ಗೂಗಲ್‌ ಪ್ಲೇ ಸ್ಟೋರಿಗೆ ಭೇಟಿ ನೀಡಿ Infinity Loop ಎಂದು ಹುಡುಕಿ ಅಥವಾ bit.ly/gadgetloka282 ಜಾಲತಾಣಕ್ಕೆ ಭೇಟಿ ನೀಡಿ. ಪ್ರಾರಂಭದಲ್ಲಿ ಅಡ್ಡಾದಿಡ್ಡಿಯಾಗಿ ಗೋಚರಿಸುವ ತುಣುಕುಗಳನ್ನು ತಿರುಗಿಸಿ ಜೋಡಿಸಿ ಕುಣಿಕೆ ಪೂರ್ತಿ ಮಾಡಬೇಕು. ತುಂಬ ಸರಳವಾದ ಆಟ. ಎಂದಿನಂತೆ ಹಲವು ಹಂತಗಳಿವೆ. ಇದು ಸಂಪೂರ್ಣ ಉಚಿತ ಆಟ. ಆಡುತ್ತ ಆಡುತ್ತ ಒಂದು ರೀತಿಯ ಚಟದಂತೆ ಅಂಟಿಕೊಳ್ಳಬಹುದಾದ ಆಟ. ಜೊತೆಗೆ ಮೆದುಳಿಗೆ ಕೆಲಸವನ್ನೂ ನೀಡುತ್ತದೆ.

**
ಗ್ಯಾಜೆಟ್‌ ಸುದ್ದಿ: 
ಕಣ್ಣ ಮೇಲೆ ಸಹಜ ಬೆಳಕು

ಕೆಲವರಿಗೆ ದಿನಗಟ್ಟಲೆ ಸೂರ್ಯನ ಸಹಜ ಬೆಳಕು ನೋಡಲು ಸಿಗುವುದೇ ಇಲ್ಲ. ದಿನಾ ವಿಮಾನದಲ್ಲಿ ಪ್ರಯಾಣಿಸುವವರು, ದಿನವಿಡೀ ಕೃತಕ ಬೆಳಕಿನಲ್ಲಿ ಕೆಲಸ ಮಾಡುವ ತಂತ್ರಾಂಶ ತಜ್ಞರು- ಇಂಥವರಿಗೆ ಪ್ರಮುಖ ಉದಾಹರಣೆಗಳು. ಇಂಥವರಿಗೆ ಸಹಜ ಬೆಳಕು ನೋಡದೆ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಆಗುತ್ತದೆ. 

ಇದಕ್ಕೆ ಪರಿಹಾರ ರೂಪವಾಗಿ ಲುಮಿನೆಟ್ಟೆ ಬಂದಿದೆ. ಇದು ನೋಡಲು ಬಹುಮಟ್ಟಿಗೆ ಕನ್ನಡಕದಂತೆ ಕಾಣಿಸುತ್ತದೆ. ಬಿಳಿ ಬೆಳಕನ್ನು ಕಣ್ಣಿಗೆ ನೇರ ಬೀಳುವಂತೆ ವಿನ್ಯಾಸ ಮಾಡಲಾಗಿದೆ.

**

ಗ್ಯಾಜೆಟ್‌ ಸಲಹೆ

ಕೆ.ಪಿ. ಸತ್ಯನಾರಾಯಣ ಅವರ ಪ್ರಶ್ನೆ: ನಮ್ಮಲ್ಲಿರುವ, ಒಂದು ವರ್ಷದಷ್ಟು ಹಿಂದೆ ಕೊಂಡುಕೊಂಡ,  ಲೆನೊವೊ A 1000 ಮೊಬೈಲ್ ಫೋನಿನ ಬ್ಯಾಟರಿ ಬಹಳ ಬೇಗ ಸೋರಿಹೋಗುತ್ತಿದೆ. ಸೆಟ್ಟಿಂಗ್ಸ್‌ನಲ್ಲಿ ನೋಡಿದಾಗ ‘battery used by mobile radio - (ಸಾಧಾರಣ 30% ರಿಂದ 40%)’ ಎಂದು ತೋರಿಸುತ್ತದೆ. ಈ ಮೊಬೈಲ್‌ನಲ್ಲಿ FM radio ನಾವು ಉಪಯೋಗಿಸುತ್ತಲೇ ಇಲ್ಲ. ಯಾವ ರೀತಿ ಇದನ್ನು ಸರಿಪಡಿಸಬಹುದು ದಯಮಾಡಿ ತಿಳಿಸಿರಿ.

ಉ: ಇದು ಹಳೆಯ ಆವೃತ್ತಿಯ ಆ್ಯಂಡ್ರಾಯ್ಡ್‌ನಲ್ಲಿದ್ದ ದೋಷ (ಬಗ್). ನಿಮ್ಮ ಮೊಬೈಲ್‌ನ ಆ್ಯಂಡ್ರಾಯ್ಡ್‌ ಅನ್ನು ನವೀಕರಿಸಿ (software update). ಲೆನೊವೊದವರು ಅಪ್‌ಡೇಟ್ ನೀಡಿಲ್ಲವಾದಲ್ಲಿ ಈ ಪರಿಹಾರ ಪ್ರಯತ್ನಿಸಿ: ನೀವು ಯಾವುದಾದರೂ ಫೈಲ್ ಅಥವಾ ಮಾಹಿತಿಯನ್ನು ಮೊಬೈಲ್ ಡಾಟಾ ಬಳಸಿ ಡೌನ್‌ಲೋಡ್ ಮಾಡಿದ ನಂತರ ವೈಫೈಗೆ ಸಂಪರ್ಕಿಸಿಲ್ಲವಾದಲ್ಲಿ ಅದು ಮೊಬೈಲ್ ಡಾಟಾವನ್ನು ಬಳಸುವುದನ್ನು ಮುಂದುವರೆಸಿ ಬ್ಯಾಟರಿ ತಿನ್ನುತ್ತದೆ. ಇದಕ್ಕೆ ಪರಿಹಾರವೆಂದರೆ ವೈಫೈಗೆ ಸಂಪರ್ಕ ಮಾಡುವುದು. ವೈಫೈ ಇಲ್ಲವಾದಲ್ಲಿ, ಮಾಹಿತಿಯನ್ನು ಡೌನ್‌ಲೋಡ್ ಮಾಡಿದ ಆ್ಯಪ್ ಅನ್ನು ನಿಲ್ಲಿಸಬೇಕು. ಅದು ಯಾವುದು ಎಂದು ತಿಳಿಯಲು ಸ್ವಲ್ಪ ಸರ್ಕಸ್ ಮಾಡಬೇಕಾಗುತ್ತದೆ. ಇನ್ನೂ ಸರಳ ಉಪಾಯವೆಂದರೆ ಮೊಬೈಲ್ ಡಾಟಾ ಬಳಕೆಯ ನಂತರ ಫೋನನ್ನು ರಿಬೂಟ್ (ರಿಸ್ಟಾರ್ಟ್) ಮಾಡಿ.

**

ಗ್ಯಾಜೆಟ್‌ ತರ್ಲೆ

ಸ್ಮಾರ್ಟ್‌ಫೋನ್= ಕ್ಷಣಾರ್ಧದಲ್ಲಿ ಸುಳ್ಳು ಸುದ್ದಿಯನ್ನು ಜಗತ್ತಿಗೆಲ್ಲ ಹಂಚಬಹುದಾದ ಸಾಧನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT