ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿದ್ರಿಸದ ಮುಂಗಾರು ಮಾರುತ

Last Updated 2 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ವರ್ಷಕ್ಕೆ ಯಾವ ತಿಂಗಳಲ್ಲಿ ಅತಿ ಹೆಚ್ಚು ಮಳೆ ಸುರಿಯುತ್ತಿದೆ? ಇದೊಂದು ಜಾಣ್ಮೆಯ ಪ್ರಶ್ನೆ. ಹವಾಮಾನ ತಜ್ಞರ ಪ್ರಕಾರ ದಕ್ಷಿಣ ಒಳನಾಡಿನಲ್ಲಿ ಬರುವ ಬೆಂಗಳೂರಿನಲ್ಲಿ ಜೂನ್ ಅಥವಾ ಜುಲೈ ತಿಂಗಳಲ್ಲಿ ಅಧಿಕ ಮಳೆ ಬೀಳುತ್ತದೆ ಎಂಬ ಉತ್ತರ ಬರಬಹುದು.

ಕಳೆದ 30 ವರ್ಷಗಳ ಮಳೆ ಪ್ರಮಾಣ ಲೆಕ್ಕ ಹಾಕಿದಾಗ ಬೆಂಗಳೂರಿನಲ್ಲಿ ಸೆಪ್ಟೆಂಬರ್‌ನಲ್ಲಿ ಅಧಿಕ ಮಳೆ ಸುರಿದಿರುವುದು ಗೊತ್ತಾಗುತ್ತದೆ! ಹಾಗಿದ್ದರೆ, ಈ ಭಾಗದಲ್ಲಿ ಎರಡನೇ ಅತಿ ಹೆಚ್ಚು ಮಳೆ ಬೀಳುವ ತಿಂಗಳು ಯಾವುದು?
 
ಅದು ಕೂಡಾ ನಿಮಗೆ ಅಚ್ಚರಿ ತರಬಹುದು. ಸಾಮಾನ್ಯವಾಗಿ ಮೇ ತಿಂಗಳು ಈ ಭಾಗದಲ್ಲಿ ಎರಡನೇ ಅತಿ ಹೆಚ್ಚು ಮಳೆಯಾಗುವ ತಿಂಗಳಾಗಿರುತ್ತದೆ.
 
ಆದರೆ, ಈ ಬಾರಿ ಏಪ್ರಿಲ್‌ನಲ್ಲೇ ಸಾಮಾನ್ಯಕ್ಕಿಂತ ಹೆಚ್ಚು ಪ್ರಮಾಣದ ಮಳೆ ಸುರಿದು ಪ್ರಕೃತಿ ಅಚ್ಚರಿ ಮೂಡಿಸಿದೆ. ಒಟ್ಟಾರೆಯಾಗಿ ಹೇಳುವುದಾದರೆ ಕಳೆದ ಹಲವು ವರ್ಷಗಳಿಂದ ಸೆಪ್ಟೆಂಬರ್-ಮೇ ತಿಂಗಳಲ್ಲೇ ಅಧಿಕ ಮಳೆ ಸುರಿಯುವ ಪರಿಪಾಠ ಮುಂದುವರಿದಿದೆ.

ಈ ಮಳೆ ಯಾವುದರ ಮೇಲೆ ಅವಲಂಬಿಸಿದೆ? ಜಗತ್ತಿನಲ್ಲಿ ಭಾರತ ಉಪಖಂಡದಂತಹ ಭೌಗೋಳಿಕ ಪರಿಸರ ಬೇರೆಲ್ಲೂ ಇಲ್ಲ.
 
ಈ ನೆಲ ಮಳೆಗೆ ಸಂಪೂರ್ಣವಾಗಿ ಅವಲಂಬಿಸಿರುವುದು ಸಮುದ್ರದಿಂದ ನಿರಂತರವಾಗಿ ಸಾಗಿಬರುವ ಮಾರುತಕ್ಕೆ. ಬಂಗಾಳಕೊಲ್ಲಿ, ಅರಬ್ಬಿ ಸಮುದ್ರ ಹಾಗೂ ಹಿಂದೂಮಹಾಸಾಗರ ಭಾರತದ ಮಳೆಯ ಪ್ರಮಾಣವನ್ನು ನಿರ್ಧರಿಸುತ್ತವೆ.

ಈಶಾನ್ಯ ಮತ್ತು ನೈರುತ್ಯ ಮುಂಗಾರುಗಳಿಗೆ ಲಕ್ಷಾಂತರ ವರ್ಷಗಳ ಇತಿಹಾಸವಿದೆ. ಈ ಮಳೆ ಮೋಡಗಳು ಗಂಟೆಗೆ 12ರಿಂದ 18 ಕಿ.ಮೀ. ವೇಗದಲ್ಲಿ ಸಾಗುತ್ತಿರುತ್ತವೆ. 15-20 ದಶಲಕ್ಷ ವರ್ಷಗಳ ಹಿಂದೆ ಹಿಮಾಲಯ ಪರ್ವತ ಶ್ರೇಣಿಗಳು ತಲೆ ಎತ್ತಿದ ಬಳಿಕ `ಇತ್ತೀಚೆಗೆ~ ಈ ಮಾರುತಗಳು ತಮ್ಮ ಪಥ ಬದಲಿಸಿರಬೇಕು. ಈ ಭೂಮಿ 4 ಸಾವಿರ ದಶಲಕ್ಷ ವರ್ಷಗಳ ಇತಿಹಾಸ ಹೊಂದಿರುವುದನ್ನು ತಿಳಿದಾಗ ಇಂತಹ ಸಾಧ್ಯತೆ ಇಲ್ಲದಿಲ್ಲ.

ನೈರುತ್ಯ ಮುಂಗಾರು ಜೂನ್ 6ರ ಸಮಯಕ್ಕೆ ಕೇರಳಕ್ಕೆ ಅಪ್ಪಳಿಸುವಾಗ ದೇಶದ ತಪ್ಪಲು ಪ್ರದೇಶದಲ್ಲಿ ವಾಯು ಭಾರ ಕುಸಿತ ಇದ್ದಲ್ಲಿಗೆ ಮಾರುತ ಧಾವಿಸುತ್ತವೆ. ಬಹುತೇಕ ಭಾರತದ ಹೃದಯ ಭಾಗದತ್ತ ಮಳೆ ಮೋಡ ಚಲಿಸುತ್ತದೆ. ಪಶ್ಚಿಮ ಕರಾವಳಿಯಲ್ಲಿ ಮುಂಗಾರು ಮಳೆ ಮಾರುತ ಬೀಸಿದಾಗ ಮಹಾರಾಷ್ಟ್ರದ ನಾಗಪುರ ಮತ್ತಿತರ ಕಡೆಗಳಲ್ಲಿ ಉಷ್ಣಾಂಶ 45-48 ಡಿಗ್ರಿ ಸೆಲ್ಸಿಯಸ್ ತನಕವೂ ಹೆಚ್ಚಿರುತ್ತದೆ.

ಈ ಮಾರುತಗಳು ಮುಂದಕ್ಕೆ ಚಲಿಸುತ್ತ ಈಶಾನ್ಯ ದಿಕ್ಕಿನತ್ತ ಪರ್ವತಗಳನ್ನು ಅರಸಿ ಸಾಗುತ್ತವೆ. ಮಾರುತದ ಈ ಪ್ರಯಾಣ ಕರ್ನಾಟಕದ ಉತ್ತರ ಭಾಗ, ಆಂಧ್ರಪ್ರದೇಶ, ಬಂಗಾಳಕೊಲ್ಲಿಯ ಮೇಲೆ ಸಾಗುತ್ತ ಮತ್ತೂ ಮುಂದಕ್ಕೆ ಚಲಿಸುತ್ತದೆ.
 
ಈ ಚಲನೆಗೆ 40-50 ದಿನ ಬೇಕು. ಈ ಮಾರುತಗಳು ಹಿಮಾಲಯದ ಗೋಡೆಗೆ ಡಿಕ್ಕಿ ಹೊಡೆದು ಬಳಿಕ ಪೂರ್ವದತ್ತ ಚಲಿಸಿ ಗಂಗಾ ನದಿಯ ತಪ್ಪಲು ಪ್ರದೇಶದಲ್ಲಿ ಸಾಗುತ್ತವೆ. ತಪ್ಪಲು ಪ್ರದೇಶದಲ್ಲಿ ಈ ಮಾರುತಗಳು ವೇಗ ಪಡೆದುಕೊಳ್ಳುತ್ತವೆ.

ಹಿಂದಿ ಮಾತನಾಡುವ ದೇಶದ ಹೃದಯ ಭಾಗದಲ್ಲಿ ತಂಪಾದ ವಾತಾವರಣವನ್ನು ತರುವ ಈ ಮಳೆ ಮಾರುತಗಳನ್ನು `ಪುರುವಯ್ಯ~ ಎಂದು ಕರೆಯಲಾಗುತ್ತದೆ. ದೆಹಲಿಯಲ್ಲಿ ಮಳೆ ಬೀಳುವಾಗ ಜುಲೈ 15 ಆಗಿರುತ್ತದೆ.
 
ಇದೇ ಅವಧಿಯಲ್ಲಿ ಪಂಜಾಬ್, ಹರಿಯಾಣ ಭಾಗದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗುವುದನ್ನು ನಾವು ನೋಡುತ್ತ್ದ್ದಿದೇವೆ. ಈ ಹಂತದಲ್ಲಿ ಮಳೆ ಮಾರುತಗಳು ರಾಜಸ್ತಾನದ ಪೂರ್ವಕ್ಕಿರುವ ಅರಾವಳಿ ಪರ್ವತಕ್ಕೆ ಅಪ್ಪಳಿಸುತ್ತವೆ ಮತ್ತು ದೆಹಲಿಯ ನೈರುತ್ಯ ದಿಕ್ಕಿಗೆ ಬರುತ್ತವೆ.

ಈ ಪರ್ವತ ಪ್ರದೇಶ ಉತ್ತರದಿಂದ ದಕ್ಷಿಣಕ್ಕೆ 600 ಕಿ.ಮೀ. ಚಾಚಿಕೊಂಡಿದೆ. ಈ ಪರ್ವತ ಮಳೆ ಮಾರುತಗಳನ್ನು ಸಂಪೂರ್ಣ ತಡೆಯುತ್ತದೆ. ಮಾರುತಗಳು ಮತ್ತೆ ಹಿಂದಕ್ಕೆ ಚಲಿಸುತ್ತವೆ. ಅಂದರೆ ಆಗಸ್ಟ್ ಕೊನೆಯ ವೇಳೆಗೆ ಮಾರುತಗಳು ಹಿಂದಿರುಗುವಿಕೆ ಆರಂಭವಾಗುತ್ತದೆ. ಈ ಮಾರುತಗಳು ಗಂಗಾ ನದಿಯ ತಪ್ಪಲು ಪ್ರದೇಶಗುಂಟ ಸಾಗಿ ಹಿಮಾಲಯ ತಲುಪಿ ಮತ್ತೆ ದಕ್ಷಿಣದತ್ತ ಮುಖ ಮಾಡುತ್ತವೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದಂತೆಯೇ ಈ ಮಾರುತಗಳಿಗೆ ಮತ್ತೆ ವೇಗ ಬರುತ್ತದೆ. ಇದರಿಂದಾಗಿ ದಕ್ಷಿಣ ದ್ವೀಪಕಲ್ಪದ ಭಾಗದಲ್ಲಿ ಮಳೆ ಸುರಿಯುತ್ತದೆ. ಸಾಮಾನ್ಯವಾಗಿ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಈ ಈಶಾನ್ಯ ಮುಂಗಾರು ಮಳೆ ಸುರಿಯುತ್ತದೆ.

ಕುತೂಹಲದ ವಿಚಾರವೆಂದರೆ ದೇಶದ ಶೇ 75ರಷ್ಟು ನೆಲ ವರ್ಷಕ್ಕೆ ಸುಮಾರು 1 ಮೀಟರ್‌ನಷ್ಟು ಮಳೆಯನ್ನು ಪಡೆಯುತ್ತದೆ. ಪರ್ವತಗಳ ಇನ್ನೊಂದು ಬದಿಯಲ್ಲಿ ಮಳೆ ಮೋಡಗಳು ಚಲಿಸದ ಪ್ರದೇಶಗಳಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗುತ್ತದೆ.

ಅಲ್ಲಿ ವರ್ಷಕ್ಕೆ 400 ಮಿ.ಮೀ.ನಷ್ಟು ಮಳೆ ಕೂಡ ಬೀಳುವುದಿಲ್ಲ. ಪಶ್ಚಿಮ ರಾಜಸ್ತಾನ ಮತ್ತು ಗುಜರಾತ್‌ನ ಉತ್ತರ ಭಾಗದಲ್ಲಿ ವರ್ಷಕ್ಕೆ 100 ಮಿ.ಮೀ. ಮಳೆ ಬೀಳದ ಸ್ಥಳವೂ ಇದೆ. ಇದೇ ರೀತಿಯ ಸ್ಥಿತಿ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲೂ ಇದೆ.
 
ಇದರಿಂದಾಗಿಯೇ ಗುಜರಾತ್ ಮತ್ತು ಉತ್ತರ ಕರ್ನಾಟಕದ ಭಾಗಗಳಲ್ಲಿ ಸಾವಿರಾರು ವರ್ಷಗಳಿಂದ ಕಲಾತ್ಮಕವಾಗಿ ಬಾವಿಗಳು ಮತ್ತು ಕೆರೆಗಳನ್ನು ನಿರ್ಮಿಸಿ ಜನರು ಅದರಿಂದ ನೀರು ಪಡೆಯುತ್ತಿರುವುದು ಕಂಡುಬರುತ್ತದೆ.

ಭಾರತದಲ್ಲಿ ನಾವೆಲ್ಲ ಅವಲಂಬಿಸಿರುವುದು ಮುಂಗಾರು ಮಾರುತಗಳನ್ನೇ. ಈ ಮಾರುತಗಳ ಚಲನೆಯಲ್ಲಿ ಕೇವಲ 4 ಡಿಗ್ರಿಯಷ್ಟು ವ್ಯತ್ಯಾಸವಾದರೂ ದೇಶದ ಹಲವು ಭಾಗಗಳಲ್ಲಿ ಬರಗಾಲ ಕಾಣಿಸಿಕೊಳ್ಳುತ್ತದೆ.

ಜಗತ್ತು ಎಷ್ಟೇ ಆಧುನೀಕರಣಗೊಂಡಿದ್ದರೂ, ಆರ್ಥಿಕ ಪ್ರಗತಿ ಸಾಧಿಸಿದ್ದರೂ ಇಂದಿಗೂ ನಮ್ಮ ರೈತರು ಆಗಸದತ್ತ ಮುಖಮಾಡಿ ಮೊರೆ ಇಡುವುದು ಬಿಟ್ಟು ಬೇರೆ ದಾರಿಯೇ ಇಲ್ಲ.

ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದಲ್ಲಿ ಮಳೆ ಸುರಿಯಲಿ ಎಂಬುದಷ್ಟೇ ಅವರ ಪ್ರಾರ್ಥನೆಯಾಗಿರುತ್ತದೆ. ನಗರ ಜನರು ಸಹ ಮಳೆಯನ್ನು ನೆಚ್ಚಿಕೊಳ್ಳುತ್ತಾರೆ.
 
ಯಾಕೆಂದರೆ ಅವರಿಗೂ ಕುಡಿಯಲು ನೀರು ಬೇಕು, ವಿದ್ಯುತ್ ಬೇಕು. ಹೀಗಾಗಿ ದೇಶದ ಇಡೀ ಜನ ಇಂದು ಮುಂಗಾರು ಮಳೆಗೆ ಸಂಪೂರ್ಣವಾಗಿ ಅವಲಂಬಿಗಳಾಗಿದ್ದಾರೆ. ಮಳೆ ಮಾರುತ ಬೀಸದೆ ಇದ್ದರೆ ಮತ್ತು ಮಳೆ ಸುರಿಯದೆ ಇದ್ದರೆ ರೈತರು ಬೆಳೆ ಬೆಳೆಯಲು ಸಾಧ್ಯವಿಲ್ಲ. ನಗರ ಪ್ರದೇಶಕ್ಕೆ ವಿದ್ಯುತ್ ಸಿಗಲು ಸಾಧ್ಯವಿಲ್ಲ.

ಮಾಲ್‌ಗಳಲ್ಲಿ ಆಹಾರ ಸಹ ಸಿಗುವುದಿಲ್ಲ. ಜಲಾಶಯಗಳು ತುಂಬದೆ ಇದ್ದರೆ ವಿದ್ಯುತ್ ಉತ್ಪಾದನೆ ಅಸಾಧ್ಯ, ಹೊಲಕ್ಕೆ ನೀರಿಲ್ಲದಿದ್ದರೆ ಹಸಿರು ಚಿಗುರೊಡೆಯಲು ಸಾಧ್ಯವಿಲ್ಲ. ಹೀಗಾಗಿ ನಾವು ಮಳೆಗೆ ಅದೆಷ್ಟು ಆಶ್ರಯಿಸಿದ್ದೇವೆ ಎಂಬುದನ್ನು ತಿಳಿದುಕೊಂಡು ಮಳೆ ಪ್ರಮಾಣ ಕಡಿಮೆಯಾಗದಂತೆ ಪರಿಸರವನ್ನು ಕಾಯ್ದುಕೊಳ್ಳಬೇಕಾಗಿದೆ.

ನಗರದಲ್ಲಿ ವಾಸಿಸುವ ನಮಗೆ ಮಳೆಯಂತಹ ಪ್ರಕೃತಿಯ ಕೊಡುಗೆಗಳ ಮಹತ್ವ ಗೊತ್ತಿಲ್ಲ. ನಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಮಳೆ ಮಹತ್ವದ ಪಾತ್ರ ನಿರ್ವಹಿಸುತ್ತಲೇ ಇರುತ್ತದೆ. ನಮ್ಮ ಪೀಳಿಗೆ ಮಾತ್ರವಲ್ಲ, ನಮ್ಮ ಈಗಿನ ನಾಗರಿಕತೆ ಕೊನೆಗೊಂಡು ಹೊಸದೊಂದು ನಾಗರಿಕತೆ ಉದಿಸಿ, ಬೆಳೆದಾಗ ಸಹ ಮಳೆಯ ಮಹತ್ವ ಹಾಗೆಯೇ ಮುಂದುವರಿಯುತ್ತಲೇ ಇರುತ್ತದೆ.

ಹೀಗಾಗಿ, ಮಳೆ ಸುರಿಯಲು ಅಗತ್ಯವಾದ ಪರಿಸರವನ್ನು ನಾವು ರಕ್ಷಿಸಬೇಕು ಹಾಗೂ ಬಿದ್ದ ಮಳೆ ನೀರನ್ನು ಸಂಗ್ರಹಿಸಿ ಇಟ್ಟುಕೊಂಡು ನೀರು ಉಳಿಸುವ ಕ್ರಮವನ್ನು ಗಂಭೀರವಾಗಿ ಪರಿಗಣಿಸಬೇಕು.

(ಲೇಖಕರನ್ನು 99010 54321 ಕರೆ ಮಾಡಿ ಸಂಪರ್ಕಿಸಬಹುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT