ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿನ್ನೆ ಕಹಿ, ಇಂದು ಒಗರು, ನಾಳೆ ಎಂತು?

Last Updated 11 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಫೆಬ್ರುವರಿ ತಿಂಗಳನ್ನು ಅಮೆರಿಕ ಮತ್ತು ಕೆನಡಾಗಳಲ್ಲಿ ‘ಕಪ್ಪು ಇತಿಹಾಸದ ತಿಂಗಳು’ ಎಂದು ಗುರುತಿಸಲಾಗಿದೆ. ಅಮೆರಿಕದ ಶಾಲೆ, ಕಾಲೇಜು, ಗ್ರಂಥಾಲಯಗಳಲ್ಲಿ ತಿಂಗಳಿಡೀ ಆಫ್ರಿಕಾ ಮೂಲದ ಅಮೆರಿಕನ್ನರ ಸಾಧನೆಯನ್ನು ಮೆಲುಕು ಹಾಕುವ ಉಪನ್ಯಾಸಗಳು, ಚರ್ಚಾ ಗೋಷ್ಠಿಗಳು ನಡೆಯುತ್ತವೆ.

ಅಂತರ್ ಯುದ್ಧದ ದಿನಗಳಲ್ಲಿ ಗುಲಾಮಿ ಪದ್ಧತಿಯ ವಿರುದ್ಧ ಹೋರಾಡಿದ, ನೂರಾರು ಕೃಷ್ಣವರ್ಣೀಯರನ್ನು ಜೀತದಿಂದ ಮುಕ್ತಿಗೊಳಿಸಲು ಶ್ರಮಪಟ್ಟ ಹ್ಯಾರಿಯಟ್ ಟಬ್ಮನ್, ಕಪ್ಪುಜನರ ಹಕ್ಕುಗಳಿಗಾಗಿ ಬಹುದೊಡ್ಡ ಹೋರಾಟ ಸಂಘಟಿಸಿದ ಡಾ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರಿಗೆ ವಿಶೇಷವಾಗಿ ಗೌರವ ಸಲ್ಲಿಸಲು ಫೆಬ್ರುವರಿ ತಿಂಗಳನ್ನು ಬಳಸಿಕೊಳ್ಳಲಾಗುತ್ತದೆ.

1926ರಲ್ಲಿ ಇತಿಹಾಸತಜ್ಞ ಕಾರ್ಟರ್ ಜಿ ವುಡ್ಸನ್, ಅಮೆರಿಕದ ಚರಿತ್ರೆಯಲ್ಲಿ ಕಪ್ಪುಜನರನ್ನು ಕಡೆಗಣಿಸಲಾಗಿದೆ, ಹಾಗಾಗಿ ಇತಿಹಾಸವನ್ನು ಮರುವ್ಯಾಖ್ಯಾನಿಸುವ ಕಾರ್ಯ ಆರಂಭವಾಗಬೇಕಿದೆ ಎಂದು ಪ್ರತಿಪಾದಿಸಿದ್ದರು. ಅದರಂತೆಯೇ ಆಫ್ರಿಕನ್-ಅಮೆರಿಕನ್ನರ ಬದುಕು ಮತ್ತು ಚರಿತ್ರೆಯ ಅಧ್ಯಯನಕ್ಕೆ ಸಂಸ್ಥೆಯೊಂದನ್ನು ಸ್ಥಾಪಿಸಲಾಯಿತು.

ಆ ಸಂಸ್ಥೆ ಫೆಬ್ರುವರಿ ಎರಡನೆಯ ವಾರವನ್ನು ‘ನ್ಯಾಷನಲ್ ನೀಗ್ರೊ ಹಿಸ್ಟರಿ ವೀಕ್’ ಎಂದು ಕರೆದು, ನಿಗ್ರೋಗಳ ಬದುಕು, ಕೊಡುಗೆಗಳನ್ನು ಪ್ರಚುರಪಡಿಸುವ ಕಾರ್ಯವನ್ನು ತೊಂಬತ್ತು ವರ್ಷಗಳ ಹಿಂದೆ ಆರಂಭಿಸಿತ್ತು.

ಫೆಬ್ರುವರಿ ಎರಡನೆಯ ವಾರವನ್ನೇ ಆಯ್ದುಕೊಳ್ಳಲು ಕಾರಣ, ಗುಲಾಮಿ ಪದ್ಧತಿಯ ನಿವಾರಣೆಗೆ ಶ್ರಮಿಸಿದ ಫೆಡೆರಿಕ್ ಡಾಗ್ಲಸ್ (ಫೆ. 14) ಮತ್ತು ಗುಲಾಮಗಿರಿ ವಿಮೋಚನಾ ಘೋಷಣೆ ಮಾಡಿದ ಅಬ್ರಹಾಂ ಲಿಂಕನ್ (ಫೆ. 12) ಅವರ ಜನ್ಮದಿನ ಇದೇ ವಾರದಲ್ಲಿ ಬರುತ್ತದೆ ಎನ್ನುವುದು. ತದನಂತರ ಈ ಆಚರಣೆಯನ್ನು 1976ರಲ್ಲಿ ಅಂದರೆ ನಾಗರಿಕ ಹಕ್ಕು ಚಳವಳಿಗಳು ಬಲಗೊಂಡ ಅವಧಿಯಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಜಿ.ಆರ್. ಫೋರ್ಡ್ ಒಂದು ತಿಂಗಳ ಅವಧಿಗೆ ವಿಸ್ತರಿಸಿ ಆದೇಶ ಹೊರಡಿಸಿದರು.

ಅಂದಿನಿಂದಲೂ ಇತಿಹಾಸದ ಮರುಓದು, ಗುಲಾಮಗಿರಿ ದಿನಗಳ ಮೆಲುಕು, ನೀಗ್ರೊ ಸಮುದಾಯ ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಗೊಳ್ಳುವತ್ತ ಇಟ್ಟ ಹೆಜ್ಜೆಗಳ ಪುನರಾವಲೋಕನವನ್ನು ಫೆಬ್ರುವರಿ ತಿಂಗಳಿನಲ್ಲಿ ಮಾಡುವುದು ವಾಡಿಕೆ. ಆದರೆ ಇಲ್ಲಿ ಕೆಲವು ಸಂದಿಗ್ಧಗಳು, ಸವಾಲುಗಳು ಎದುರಾಗುತ್ತವೆ.

ಇಂದಿನ ಆಫ್ರಿಕನ್ ಅಮೆರಿಕನ್ ಯುವ ಪೀಳಿಗೆಗೆ ತಮ್ಮ ಪೂರ್ವಜರ ಗುಲಾಮಗಿರಿಯ ಕಷ್ಟದ ಕತೆಗಳನ್ನು ಹೇಗೆ ಪರಿಚಯಿಸಬೇಕು? ಬಿಳಿಯರು ನಡೆಸಿದ ದಬ್ಬಾಳಿಕೆಯನ್ನು ಹೇಗೆ ವಿವರಿಸಬೇಕು? ಒಂದೊಮ್ಮೆ ಅದು ಅವರಲ್ಲಿ ಸಿಟ್ಟು, ಆಕ್ರೋಶ, ಇನ್ನೊಂದು ಸಮುದಾಯದ ಬಗ್ಗೆ ಪ್ರತೀಕಾರ ಭಾವವನ್ನು ಮೂಡಿಸಿದರೆ ಸಮಾಜದ ಸಾಮರಸ್ಯಕ್ಕೆ ಧಕ್ಕೆಯಾಗುವುದಿಲ್ಲವೇ? ಇವು ಗಂಭೀರವಾದ ಪ್ರಶ್ನೆಗಳು. ಇತಿಹಾಸದ ಮರುಓದನ್ನು ಈ ಪ್ರಶ್ನೆಗಳನ್ನು ಗಮನದಲ್ಲಿಟ್ಟುಕೊಂಡೇ ಮಾಡಬೇಕಾಗುತ್ತದೆ.

ಎರಡು ವರ್ಷದ ಹಿಂದೆ ‘12 Years a Slave’ ಎಂಬ ಚಿತ್ರ ಬಿಡುಗಡೆಯಾದಾಗ ಈ ಬಗ್ಗೆ ಚರ್ಚೆಯಾಗಿತ್ತು. ಸೊಲೊಮನ್ ನಾರ್ಥಪ್ ಜೀವನವನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣಗೊಂಡ ಆ ಚಿತ್ರದಲ್ಲಿ, ಆತ 12 ವರ್ಷಗಳ ಕಾಲ ತನ್ನ ಕುಟುಂಬದಿಂದ ದೂರವಾಗಿ ಗುಲಾಮಗಿರಿಯಲ್ಲಿ ಬದುಕಿದ ಯಾತನಾಮಯ ಕತೆಯನ್ನು ಚಿತ್ರೀಕರಿಸಲಾಗಿತ್ತು.

ವೃತ್ತಿಯಲ್ಲಿ ಬಡಗಿಯಾಗಿ, ವಯೊಲಿನ್ ನುಡಿಸುವುದನ್ನು ನೆಚ್ಚಿನ ಹವ್ಯಾಸವಾಗಿಸಿಕೊಂಡಿದ್ದ ಸೊಲೊಮನ್‌ನನ್ನು, ಸರ್ಕಸ್ ಕಂಪೆನಿಯ ಪ್ರವರ್ತಕರೆಂದು ಪರಿಚಯಿಸಿಕೊಂಡ ಇಬ್ಬರು, ಹೆಚ್ಚಿನ ಸಂಬಳದ ನೌಕರಿ ಕೊಡಿಸುವುದಾಗಿ ಹೇಳಿ ಕರೆದೊಯ್ದು ಪ್ರಜ್ಞೆ ತಪ್ಪಿಸಿ, ವಿಲಿಯಂ ಪ್ರಿನ್ಸ್ ಫೋರ್ಡ್ ಎಂಬ ಹತ್ತಿ ಬೆಳೆಯುವ ಜಮೀನುದಾರನಿಗೆ ಮಾರುತ್ತಾರೆ. ಫೋರ್ಡ್ ಓರ್ವ ಕರುಣಾಮಯಿ ಮಾಲೀಕ.

ಗುಲಾಮರಾಗಿ ಬಂದವರನ್ನೂ ಮಾನವೀಯತೆಯಿಂದಲೇ ನೋಡುತ್ತಾನೆ. ಸೊಲೊಮನ್ ಬುದ್ಧಿವಂತಿಕೆ, ಚಾಕಚಕ್ಯತೆಗಳನ್ನು ಗಮನಿಸಿ ಹೆಚ್ಚಿನ ಜವಾಬ್ದಾರಿಗಳನ್ನು ನೀಡುತ್ತಾನೆ. ವಯೊಲಿನ್ ಬಗೆಗಿನ ಆಸಕ್ತಿ ಅರಿತು, ವಯೊಲಿನ್ ಉಡುಗೊರೆಯಾಗಿ ಕೊಡುತ್ತಾನೆ. ಇದನ್ನು ಸಹಿಸದ ಫೋರ್ಡ್ ಸುತ್ತಲಿದ್ದ ಬಿಳಿಯರು ಸೊಲೊಮನ್ ಮೇಲೆ ಹಲ್ಲೆ ಮಾಡುತ್ತಾರೆ.

ಫೋರ್ಡ್ ಜಮೀನಿನ ಕೆಲಸ ಮುಗಿದ ನಂತರ, ಗುಲಾಮರನ್ನು ಮತ್ತೊಬ್ಬ ಮಾಲೀಕನಿಗೆ ಮಾರಲಾಗುತ್ತದೆ. ಎಡ್ವಿನ್ ಎಪ್ಸ್ ಎಂಬ ಮಾಲೀಕನಿಗೆ ಸುಮಾರು 10 ವರ್ಷಗಳ ಕಾಲ ಸೊಲೊಮನ್ ದುಡಿಯುವಾಗ, ಮನುಷ್ಯನ ಕ್ರೌರ್ಯದ ಅಷ್ಟೂ ಕರಾಳ ಮುಖಗಳ ದರ್ಶನವಾಗುತ್ತದೆ. ಆತನ ಮುಂದಿನ ಬದುಕು ಹಿಂಸೆ, ಕ್ರೌರ್ಯ, ಶೋಷಣೆ, ದುಃಖದಿಂದ ಆವೃತವಾಗುತ್ತದೆ.

ಕೊನೆಗೆ ಬಿಳಿಯನೊಬ್ಬನ ಸಹಾಯದಿಂದಲೇ ಸೊಲೊಮನ್ ಗುಲಾಮಗಿರಿಯಿಂದ ಮುಕ್ತನಾಗಿ, ತನ್ನ ಕುಟುಂಬ ಸೇರುತ್ತಾನೆ. ಗುಲಾಮಗಿರಿಯ ವಿರುದ್ಧ ಹೋರಾಡುವ ಪಣತೊಡುತ್ತಾನೆ. ಅಲ್ಲಿಗೆ ಚಿತ್ರ ಮುಗಿಯುತ್ತದೆ. ಚಿತ್ರ ಬಹುಮೆಚ್ಚುಗೆ ಗಳಿಸಿ, ಆಸ್ಕರ್ ಪ್ರಶಸ್ತಿಗೆ ಭಾಜನವಾದರೂ, ಗುಲಾಮರ ಮೇಲೆ ನಡೆಸಲಾದ ಕ್ರೌರ್ಯವನ್ನು ಎತ್ತಿ ತೋರಿಸಿದ ಚಿತ್ರ, ಮತ್ತೊಬ್ಬ ಯಜಮಾನನ ಮಾನವೀಯ ಮುಖವನ್ನು ಸ್ಪಷ್ಟವಾಗಿ ಗುರುತಿಸಲು ವಿಫಲವಾಯಿತು ಎಂಬ ಮಾತುಗಳು ಕೇಳಿಬಂದಿದ್ದವು.  

ಗುಲಾಮಿ ಪದ್ಧತಿಯ ವಿರುದ್ಧ ಹೋರಾಡಿದ ಡಾಗ್ಲಸ್ ಬದುಕಿನಲ್ಲೂ ಇಂತಹ ಘಟನೆಗಳು ಸಿಗುತ್ತವೆ. ತನ್ನ ಒಡೆಯ ಓದಿ ಹೇಳುತ್ತಿದ್ದ ಬೈಬಲ್ ವಾಕ್ಯಗಳು, ಫೆಡೆರಿಕ್ ಡಾಗ್ಲಸ್‌ನನ್ನು ಜ್ಞಾನದಾಹಿಯಾಗುವಂತೆ ಮಾಡುತ್ತವೆ. ಶೂ ಪಾಲಿಷ್‌್ ಮಾಡಿ, ದೊರೆಯುತ್ತಿದ್ದ ಕಿರುಗಾಸನ್ನು ಕೂಡಿಸಿ ಡಾಗ್ಲಸ್ ಪುಸ್ತಕಗಳನ್ನು ಕೊಳ್ಳುತ್ತಾನೆ.

ಹೆಚ್ಚೆಚ್ಚು ಓದಿದಂತೆಲ್ಲಾ ಗುಲಾಮಿ ಪದ್ಧತಿಯನ್ನು ತಿರಸ್ಕರಿಸುವ, ಅದರ ವಿರುದ್ಧ ಹೋರಾಡಬೇಕೆಂಬ ತುಡಿತ ಹೆಚ್ಚಾಗುತ್ತದೆ. ಕೊನೆಗೆ ತನ್ನ ಒಡೆಯನ ಮನೆ ತೊರೆದು, ಊರೂರು ತಿರುಗಿ ಕಪ್ಪು ಜನರನ್ನು ಸಂಘಟಿಸುವ, ಭಾಷಣಗಳ ಮೂಲಕ, ಬರಹದ ಮೂಲಕ ಎಚ್ಚರಿಸುವ ಕಾರ್ಯವನ್ನು ಮಾಡುತ್ತಾನೆ. ಗುಲಾಮಿ ಪದ್ಧತಿಯ ವಿರುದ್ಧ ‘The North Star’ ಎಂಬ ಪತ್ರಿಕೆ ತರುತ್ತಾನೆ.

ಡಾಗ್ಲಸ್ ತನ್ನ ಒಡೆಯನಿಗೆ ಬರೆದ ಪತ್ರವೊಂದನ್ನು ಮುಖ್ಯವಾಗಿ ಇಲ್ಲಿ ಗಮನಿಸಬೇಕಾಗುತ್ತದೆ. ‘ಸರ್, ನಾನು ಗುಲಾಮಗಿರಿಯಿಂದ ತಪ್ಪಿಸಿಕೊಂಡು ಬಂದು 20 ವರ್ಷಗಳಾದವು. ಅಂದಿನಿಂದಲೂ ನಿಮ್ಮ ಬಗ್ಗೆ ನಿಮ್ಮ ಮಕ್ಕಳ ಯೋಗಕ್ಷೇಮದ ಬಗ್ಗೆ ತಿಳಿಯಬೇಕೆಂಬ ಬಯಕೆಯಾಗುತ್ತಿತ್ತು. ಅವರೆಲ್ಲಾ ಹೇಗಿದ್ದಾರೆ? ನಾನು ನಿಮ್ಮನ್ನು ಈಗಲೂ ಪ್ರೀತಿಸುತ್ತೇನೆ. ಆದರೆ ಗುಲಾಮಗಿರಿಯನ್ನು ದ್ವೇಷಿಸುತ್ತೇನೆ’ ಎಂದು ಡಾಗ್ಲಸ್ ಬರೆಯುತ್ತಾನೆ. ಇತಿಹಾಸದ ಮರುಓದಿನಲ್ಲಿ ಈ ಕೊನೆಯ ವಾಕ್ಯವನ್ನು ಗೆರೆ ಎಳೆದು ಗಮನಿಸುವುದು ಅಗತ್ಯ.  

‘Slavery is not abolished until the black man has the ballot’ ಎಂಬುದನ್ನು ಪ್ರತಿಪಾದಿಸಿದ್ದ ಡಾಗ್ಲಸ್, ಆ ಕುರಿತು ಅಮೆರಿಕ ಕಾಂಗ್ರೆಸ್ ಉದ್ದೇಶಿಸಿ ಬರೆದ ‘ಪುನರ್ನಿರ್ಮಾಣ’ ಎಂಬ ಮಹತ್ವದ ಲೇಖನದಲ್ಲಿ ‘ನೀಗ್ರೋಗಳು ಕೂಡ ಮನುಷ್ಯರು. ಇನ್ನೂರೈವತ್ತು ವರ್ಷಗಳ ಅವಧಿಯಲ್ಲಿ ಅಪಮಾನ, ಹಿಂಸೆಗಳನ್ನು ಸಹಿಸಿಕೊಂಡ ಜನ, ಇದೀಗ ಹೊಸ ನಾಳೆಗಳಿಗಾಗಿ ಎದುರು ನೋಡುತ್ತಿದ್ದಾರೆ.

ಆಗಿ ಹೋದದ್ದರ ಬಗ್ಗೆ ದೂರದೇ, ಸೇಡಿನ ಮಾತುಗಳನ್ನಾಡದೇ, ಇತರರಂತೆ ನಮಗೂ ಬದುಕಲು ಅವಕಾಶ ಕೊಡಿ ಎಂದು ಕಾಂಗ್ರೆಸ್ ಅನ್ನು ಕೇಳುತ್ತಿದ್ದಾರೆ. ಎಲ್ಲರೂ ಒಂದುಗೂಡಿ ಈ ದೇಶವನ್ನು ಪುನರ್ನಿರ್ಮಿಸಬೇಕಿದೆ. ಅದೇ ಲಿಂಕನ್ ಆಶಯವಾಗಿತ್ತು. ಅಸಂಖ್ಯ ಕಪ್ಪು ಜನರ ಮತ್ತು ಮುಂದಿನ ಪೀಳಿಗೆಯ ಭವಿಷ್ಯವನ್ನು ರೂಪಿಸುವ ಅವಕಾಶ ನಿಮಗೆ ಒದಗಿದೆ.

ನಿಮ್ಮ ಪೂರ್ವಜರು ಅವಿವೇಕದಿಂದ ಎಸಗಿದ ತಪ್ಪುಗಳನ್ನೇ ನೀವು ಮಾಡುತ್ತೀರೋ ಅಥವಾ ಅಸಮಾನತೆಯನ್ನು ಈ ದೇಶದ ಗಡಿಗಳ ಆಚೆಗೆ ದಬ್ಬುವ ವಿವೇಕಯುತ ನಿರ್ಧಾರ ಕೈಗೊಳ್ಳುತ್ತೀರೋ, ಯೋಚಿಸಿ’ ಎಂದು ಬರೆಯುತ್ತಾನೆ. ಎಲ್ಲಿಯೂ ಪ್ರತೀಕಾರದ, ಕೆಡುಕಿನ ಮಾತುಗಳನ್ನು ಡಾಗ್ಲಸ್ ಬಳಸುವುದಿಲ್ಲ.

ಮುಂದೆ ಸಾರ್ವಜನಿಕ ಬಸ್ಸುಗಳಲ್ಲಿನ ತಾರತಮ್ಯವನ್ನು ವಿರೋಧಿಸಿ ರೋಸಾ ಪಾರ್ಕರ್ ನೇತೃತ್ವದಲ್ಲಿ ಮೊಂಟಗೋಮರಿ ಬಸ್ ಬಹಿಷ್ಕಾರ ಚಳವಳಿ ನಡೆದು, ದಕ್ಷಿಣ ಕರೋಲಿನದ ಒಂಬತ್ತು ವಿದ್ಯಾರ್ಥಿಗಳು ಪ್ರತ್ಯೇಕ ಭೋಜನ ವ್ಯವಸ್ಥೆಯನ್ನು ವಿರೋಧಿಸಿ ಬಂಧನಕ್ಕೊಳಗಾಗಿ, ವಿದ್ಯಾರ್ಥಿಗಳು ಜೈಲ್ ಭರೋ ಚಳವಳಿಗೆ ಮುಂದಾದಾಗ, ಹೋರಾಟ ಹಿಂಸಾ ರೂಪಕ್ಕೆ ತಿರುಗುತ್ತದೆ.

ಆಗ ಪುನಃ ಚಳವಳಿಯನ್ನು ಸರಿದಾರಿಗೆ ತರಲು ಮಾರ್ಟಿನ್ ಲೂಥರ್ ಕಿಂಗ್ ಪ್ರಯತ್ನಿಸುತ್ತಾರೆ. ಗಾಂಧಿ ಅವರಿಂದ  ಪ್ರಭಾವಿತರಾಗಿದ್ದ ಮಾರ್ಟಿನ್ ಲೂಥರ್ ಕಿಂಗ್, ನಾಗರಿಕ ಹಕ್ಕುಗಳಿಗಾಗಿ ಗಾಂಧೀಜಿ ಮಾದರಿಯಲ್ಲೇ ಹೋರಾಟ ರೂಪಿಸುತ್ತಾರೆ. ಈ ಸಂಗತಿಗಳನ್ನು ಚರಿತ್ರೆಯ ಮರು ಓದಿನಲ್ಲಿ ಒತ್ತಿ ಹೇಳಬೇಕಾದ ಜರೂರು ಇದೆ. 

ಜೊತೆಗೆ ವರ್ತಮಾನದ ಸ್ಥಿತಿಗತಿಗಳ ಬಗ್ಗೆ ಚರ್ಚಿಸುವ, ಭವಿಷ್ಯದ ಕುರಿತು ಯೋಚಿಸುವ ಕೆಲಸವನ್ನು ನೀಗ್ರೊ ಸಮುದಾಯ ಮಾಡಬೇಕಿದೆ. ಆ ನಿಟ್ಟಿನಲ್ಲಿ ‘Black Lives Matter’ ನಂತಹ ಕೆಲವು ಸಂಘಟನೆಗಳು ಕಪ್ಪು ಜನರ ಭವಿಷ್ಯದ ಕುರಿತ ಚರ್ಚೆಯನ್ನು ಮುನ್ನೆಲೆಗೆ ತಂದಿವೆ. ಪ್ರಸ್ತುತ ಅಮೆರಿಕದಲ್ಲಿ ಕಪ್ಪು ಜನರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿವೆ. ಬಹುಪಾಲು ಕಪ್ಪು ಜನರ ಬದುಕು ದುರ್ಭರವಾಗಿರುವುದು ಅನಕ್ಷರತೆ, ವ್ಯಸನ ಮತ್ತು ನಿರುದ್ಯೋಗ ಸಮಸ್ಯೆಗಳಿಂದ.

ನಿರುದ್ಯೋಗ ಪ್ರಮಾಣ ಈ ಸಮುದಾಯದಲ್ಲಿ ಶೇಕಡ 12 ರಷ್ಟಿದೆ. ಯಾವುದೇ ಆದಾಯವಿಲ್ಲದ ಹಲವರ ಬದುಕು ಸೋಷಿಯಲ್ ಸೆಕ್ಯುರಿಟಿ ಹಣದ ಮೇಲೆ ಅವಲಂಬಿತವಾಗಿದೆ. ದುಶ್ಚಟ, ಮಾದಕ ದ್ರವ್ಯ ಸೇವನೆ ಯುವಕರನ್ನು ದುರ್ಬಲಗೊಳಿಸುತ್ತಿದೆ. ಸಾಮಾನ್ಯವಾಗಿ ಪೊಲೀಸರು ಎಸಗುವ ಜನಾಂಗೀಯ ಹಿಂಸೆ ವ್ಯಾಪಕವಾಗಿ ಸುದ್ದಿಯಾಗುತ್ತಿರುತ್ತದೆ. ಸರಾಸರಿ 28 ಗಂಟೆಗಳಿಗೆ ಒಬ್ಬ ನೀಗ್ರೊ ಒಂದಿಲ್ಲೊಂದು ಕಾರಣಗಳಿಂದ ಗುಂಡೇಟಿಗೆ ಬಲಿಯಾಗುತ್ತಿದ್ದಾನೆ ಎನ್ನುವುದು ಆಘಾತಕಾರಿ ಸಂಗತಿ.

ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರುವವರ ಸಂಖ್ಯೆ ಶೇಕಡ 40ರಷ್ಟಿದೆ. ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಕಪ್ಪು ಜನರೆಡೆಗಿನ ಪೂರ್ವಗ್ರಹ ಇದಕ್ಕೆ ಕಾರಣ ಎಂಬ ಆರೋಪಗಳು ಇವೆಯಾದರೂ, ನೀಗ್ರೊ ಸಮುದಾಯ ಈ ಎಲ್ಲದರ ಕುರಿತು ಚಿಕಿತ್ಸಕ ದೃಷ್ಟಿಯಿಂದ ನೋಡುವ ಅಗತ್ಯವಿದೆ.

ಇನ್ನು, ‘ಕಪ್ಪು ಇತಿಹಾಸದ ತಿಂಗಳ’ನ್ನು ಶ್ವೇತವರ್ಣೀಯರು ಹೇಗೆ ನೋಡಬೇಕು ಎಂಬುದೂ ಪ್ರಮುಖ ಪ್ರಶ್ನೆಯೇ? ಕಳೆದ ವರ್ಷ ‘ನ್ಯೂಯಾರ್ಕ್ ಟೈಮ್ಸ್’ ತನ್ನ ಲೇಖನದಲ್ಲಿ ‘ನ್ಯೂಯಾರ್ಕ್ ಸೇರಿದಂತೆ ಹಲವು ನಗರಗಳ ಶಾಲೆಗಳಲ್ಲಿ ವರ್ಣ ತಾರತಮ್ಯ ಹೆಚ್ಚುತ್ತಿದೆ. ಬಿಳಿ ಜನರು ತಮ್ಮ ಮಕ್ಕಳನ್ನು ಕಪ್ಪು ಜನರ ಮಕ್ಕಳು ಕಲಿಯುವ ಸ್ಥಳೀಯ ಸಾರ್ವಜನಿಕ ಶಾಲೆಗಳಲ್ಲಿ ಓದಿಸಲು ಹಿಂಜರಿಯುತ್ತಿದ್ದಾರೆ’ ಎಂಬ ಕಳವಳಕಾರಿ ಅಂಶವನ್ನು ಪ್ರಸ್ತಾಪಿಸಿತ್ತು.

ಇಂದಿಗೂ ತೊಗಲ ಬಣ್ಣವನ್ನು ನೋಡಿ ಮುಖ ಹಿಂಡುವ, ಸರಿದು ನಿಲ್ಲುವ, ಗೇಲಿ ಮಾಡಿ ನಗುವ ಒಂದು ಪೀಳಿಗೆಯ ಜನ ಎದುರಾಗುತ್ತಲೇ ಇರುತ್ತಾರೆ. ಇತಿಹಾಸದಲ್ಲಿ ತಮ್ಮ ಪೂರ್ವಜರು ಎಸಗಿದ ಕ್ರೌರ್ಯದ ಮೆಲುಕು, ವರ್ತಮಾನದಲ್ಲಿ ಮಾನವೀಯತೆಯನ್ನು ವೃದ್ಧಿಸದಿದ್ದರೆ ಹೇಗೆ? ಈ ಎಲ್ಲ ಅಂಶಗಳೂ ಜಾತೀಯ ತಾರತಮ್ಯದಿಂದ ನಲುಗುತ್ತಿರುವ ಭಾರತಕ್ಕೂ ಅನ್ವಯಿಸುತ್ತವೆ.

ಒಟ್ಟಿನಲ್ಲಿ ಅನೇಕ ಮಹನೀಯರ ಪ್ರಯತ್ನಗಳಿಂದ, ಕಾನೂನಿನ ಮೂಲಕ ಅಮೆರಿಕದಲ್ಲಿ ಗುಲಾಮಗಿರಿಯನ್ನು ತೊಡೆದು ಹಾಕಲಾಗಿದೆ, ಎಲ್ಲರೂ ಸಮಾನರು ಎಂದು ಘೋಷಿಸಿದ್ದಾಗಿದೆ. ಮತದಾನದ ಹಕ್ಕು ಸರ್ವರಿಗೂ ದೊರೆತಿದೆ. ಆದರೆ ಪರಿಸ್ಥಿತಿ ಸಂಪೂರ್ಣ ಸುಧಾರಿಸಿದಂತೆ ತೋರುವುದಿಲ್ಲ.

ಎಂಟು ವರ್ಷಗಳ ಹಿಂದೆ ಆಫ್ರಿಕಾ ಮೂಲದ ಒಬಾಮ ‘ಶ್ವೇತ’ ಭವನಕ್ಕೆ ಅಧ್ಯಕ್ಷರಾಗಿ ಬಂದಾಗ ಕಾಲ ಬದಲಾಗಿದೆ ಎಂದು ಅಮೆರಿಕದೊಂದಿಗೆ ಜಗತ್ತೂ ಉದ್ಗರಿಸಿತ್ತು. ಇದೀಗ ಒಬಾಮ ಶ್ವೇತ ಭವನ ಬಿಟ್ಟು ತೆರಳುವ ಸಮಯವೂ ಹತ್ತಿರವಾಗುತ್ತಿದೆ. ಆದರೆ ಕಪ್ಪು ಬಿಳುಪುಗಳ ನಡುವಿನ ಮಾನಸಿಕ ಕಂದರ ಇದ್ದೇ ಇದೆ.

 ಲಿಂಕನ್, ಡಾಗ್ಲಸ್, ಮಾರ್ಟಿನ್ ಲೂಥರ್ ಕಿಂಗ್ ಅವರ ಸಮಾನತೆಯಿಂದ ಕೂಡಿದ ಸೌಹಾರ್ದಯುತ ಸಮಾಜ ನಿರ್ಮಾಣದ ಕನಸು ಅಮೆರಿಕದಲ್ಲಿ ನನಸಾಗಲು ಇನ್ನೆಷ್ಟು ವರ್ಷಗಳು ಬೇಕೋ? ಅಂದಹಾಗೆ ಇಂದು ಲಿಂಕನ್ ಜನ್ಮದಿನ, ಗುಲಾಮಗಿರಿ ವಿಮೋಚನೆಗಾಗಿ ದುಡಿದು ಪ್ರಾಣತೆತ್ತ ಆ ಮಹಾತ್ಮನಿಗೊಂದು ನಮಸ್ಕಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT