ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಂತ್ರಿಸಲಾಗದ ನಾಯಕನೊಬ್ಬನ ಕುರಿತು...

Last Updated 7 ಜನವರಿ 2012, 19:30 IST
ಅಕ್ಷರ ಗಾತ್ರ

ಬಿಜೆಪಿಗೆ ಇದು ಫಜೀತಿಯ ಕಾಲ. ಮಹತ್ವಾಕಾಂಕ್ಷೆಯಿಂದ ಅಬ್ಬರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ನಿಯಂತ್ರಿಸುವುದು ಹೇಗೆ ಎಂದು ಬಿಜೆಪಿಯಲ್ಲಿ ಯಾರಿಗೂ ಗೊತ್ತಿದ್ದಂತೆ ಕಾಣುವುದಿಲ್ಲ. ಅವರನ್ನು ಎದುರು ಹಾಕಿಕೊಳ್ಳಲು ಹೈಕಮಾಂಡ್ ಸಿದ್ಧವಿದ್ದಂತೆ ಇಲ್ಲ. ಇದ್ದರೆ ಅದರ ಉತ್ತರ ಈಗಿನಷ್ಟು ದುರ್ಬಲವಾಗಿ ಇರಬೇಕಾದ ಅಗತ್ಯವಿರಲಿಲ್ಲ. ಹೈಕಮಾಂಡ್‌ನಲ್ಲಿ ಪ್ರಬಲ ನಾಯಕತ್ವವಿಲ್ಲದೇ ಇರುವುದು ಒಂದು ಸಮಸ್ಯೆಯಾದರೆ ಇನ್ನೊಂದು ಸಮಸ್ಯೆ ಯಡಿಯೂರಪ್ಪ ಅವರ ಉಪ್ಪು ತಿಂದವರು ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು. ಕರ್ನಾಟಕದ ಸಂಕಷ್ಟ ಇನ್ನೂ ಕತ್ತಲೆಯ ಸುರಂಗ ಮಾರ್ಗದವರೆಗೆ ಬಂದಿಲ್ಲ ಎಂದೂ ಅವರಿಗೆ ಅನಿಸುತ್ತ ಇರಬಹುದು. ಹೈಕಮಾಂಡಿನ ಸ್ಥಿತಿಯೇ ಹೀಗಾದರೆ ರಾಜ್ಯ ಬಿಜೆಪಿಯ ಕಥೆ ಇನ್ನು ಹೇಗೆ ಇದ್ದೀತು? ರಾಜ್ಯದ ಮುಖ್ಯಮಂತ್ರಿಯೇ ಯಡಿಯೂರಪ್ಪನವರ ಋಣದಲ್ಲಿ ಇದ್ದಾರೆ. ಈಶ್ವರಪ್ಪ ಅವರ ಬಾಯಿಯನ್ನು ಯಡಿಯೂರಪ್ಪ ಒಂದೇ ಏಟಿಗೆ ಮುಚ್ಚಿಸಿಬಿಟ್ಟಿದ್ದಾರೆ. ಉಳಿದವರು ಯಾರೂ ಮಾತನಾಡುತ್ತಿಲ್ಲ. ಈಗ ಮಾತು ಕೇಳಿಬರುತ್ತಿರುವುದು ಯಡಿಯೂರಪ್ಪ ಅವರ ಬಣದ್ದು ಮಾತ್ರ!

ಯಡಿಯೂರಪ್ಪ ಅವರಿಗೆ ಅಧಿಕಾರ ಬೇಕಾಗಿದೆ. ಸದಾನಂದಗೌಡರನ್ನು ಮುಖ್ಯಮಂತ್ರಿ ಮಾಡಿದ ನಂತರ ತಮಗೆ ಪಕ್ಷದ ಅಧ್ಯಕ್ಷ ಹುದ್ದೆ ಸಿಕ್ಕರೆ ಸಾಕು ಎನ್ನುತ್ತಿದ್ದ ಅವರು ಈಗ ಮುಖ್ಯಮಂತ್ರಿ ಹುದ್ದೆಗಿಂತ ಕೆಳಗಿನ ಯಾವ ಹುದ್ದೆಯೂ ಬೇಡ ಎನ್ನುತ್ತಿದ್ದಾರೆ.

ಸದಾನಂದಗೌಡ ಮತ್ತು ಯಡಿಯೂರಪ್ಪ ಅವರ ಸಂಬಂಧ ಹಳಸಿಬಿಟ್ಟಿದೆ. ಗೌಡರು `ಭರತ~ನ ಪಾತ್ರವನ್ನು ಮೀರುತ್ತಿದ್ದಾರೆ ಎಂದು ಯಡಿಯೂರಪ್ಪ ಅವರಿಗೆ ಅನಿಸುತ್ತಿರುವಂತಿದೆ. ಹಾಗೆಂದು ಸದಾನಂದಗೌಡರು ತಮ್ಮನ್ನೇನು ತಾವು ಸಮರ್ಥಿಸಿಕೊಂಡಂತೆ, ಯಡಿಯೂರಪ್ಪ ಹಾಕಿದ ಗೆರೆಯನ್ನು ದಾಟಿ ಬಹು ದೂರ ಹೋಗಿರುವಂತೆ ಸಾಮಾನ್ಯ ಜನರಿಗೇನೂ ಅನಿಸುತ್ತಿಲ್ಲ. ಆದರೆ, ಅವರು ರಾಜ್ಯ ವಿಧಾನಪರಿಷತ್ತಿಗೆ ಸ್ಪರ್ಧಿಸಿದ್ದೇ ಮಾಜಿ ಮುಖ್ಯಮಂತ್ರಿ ದೃಷ್ಟಿಯಲ್ಲಿ ಅಪರಾಧವಾದಂತೆ ಕಾಣುತ್ತದೆ. ಬರೀ ಸ್ಪರ್ಧಿಸಿ ಗೆದ್ದುದು ಮಾತ್ರವಲ್ಲ ಆತುರಾತುರವಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಹಿಂದೆಯೇ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ಕೊಟ್ಟುದು ಯಡಿಯೂರಪ್ಪನವರಿಗೆ ಇಷ್ಟವಾದಂತಿಲ್ಲ. `ನಾನು ನಿಮ್ಮ ಕೈಗೊಂಬೆ, ನೀವು ಆಡಿಸಿದಂತೆ ಆಡುವ ಕೀಲುಗೊಂಬೆ~ ಎಂಬುದನ್ನು ಗೌಡರು ಮತ್ತೆ ಮತ್ತೆ ಸಾಬೀತು ಮಾಡಬೇಕು, ಹಾಗೆಯೇ ನಡೆದುಕೊಳ್ಳಬೇಕು ಎಂದೂ ಯಡಿಯೂರಪ್ಪ ಅಪೇಕ್ಷಿಸುತ್ತಿದ್ದಾರೆ. ಹೈಕಮಾಂಡಿನ ವಿರೋಧ  ಕಟ್ಟಿಕೊಂಡು, ಹಟ ಹಿಡಿದು, ತಾವೇ ಅಲ್ಲವೇ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂಡಿಸಿದ್ದು, ತಮ್ಮ ಬಗ್ಗೆ ಗೌಡರಿಗೆ ಅಷ್ಟಾದರೂ ಕೃತಜ್ಞತೆ ಇರುವುದು ಬೇಡವೇ ಎಂದೂ ಅವರು ಕೇಳುತ್ತಿರುವಂತಿದೆ.

ಮುಖ್ಯಮಂತ್ರಿಯಾಗಿ ಕಳೆದ ಐದು ತಿಂಗಳಲ್ಲಿ ಸದಾನಂದಗೌಡರು ದೊಡ್ಡದೇನನ್ನೂ ಮಾಡಿಲ್ಲ. ಅವರ ಆಡಳಿತ ವೈಖರಿಯಿಂದ ವಿಧಾನಸೌಧದ ಮೂರನೇ ಮಹಡಿಯಲ್ಲಿ ಸಂಚಲನವೂ ಆಗಿಲ್ಲ. ಯಾವ ಆಡಳಿತದ ಅನುಭವವೂ ಇಲ್ಲದ ಅವರಿಂದ ಹೆಚ್ಚಿನದನ್ನು ನಿರೀಕ್ಷಿಸುವುದೂ ಸಾಧ್ಯವಿರಲಿಲ್ಲ. ಒಬ್ಬ ನಿರುಪದ್ರವಿ ವ್ಯಕ್ತಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತಂತೆ ಮಾತ್ರ ಭಾಸವಾಗುತ್ತಿದೆ. ಹೀಗೇ  ಬಿಟ್ಟರೆ ಮುಂದಿನ ಚುನಾವಣೆಯಲ್ಲಿ ನಾವೇ ಬಿಜೆಪಿಗೆ ಮಣ್ಣು ಕೊಡಬೇಕಾಗುತ್ತದೆ ಎಂದು ಯಡಿಯೂರಪ್ಪ ಬಣ ಹೇಳುವುದರಲ್ಲಿ ನಿಜವಾಗಿಯೂ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ಕಳಕಳಿಯಿದೆಯೇ ಅಥವಾ ಕೈ ಬಿಟ್ಟು ಹೋಗಿರುವ ಅಧಿಕಾರವನ್ನು ಮತ್ತೆ ವಶಕ್ಕೆ ತೆಗೆದುಕೊಳ್ಳಬೇಕು ಎಂಬ ದಾಹವಿದೆಯೇ? ಎರಡೂ ಇರಬಹುದು. ಅಧಿಕಾರವೇ ಹಾಗೆ. ಅದನ್ನು ಒಂದು ಸಾರಿ ಅನುಭವಿಸಿದವರು ಅದರಿಂದ ದೂರ ಇರುವುದು ಕಷ್ಟ. ಬೇರೆ ಯಾವ ಆಸಕ್ತಿಗಳೂ ಇಲ್ಲದ ಜನರಿಗೆ ಅದು ಇನ್ನೂ ಕಷ್ಟ. ಈಗ ಯಡಿಯೂರಪ್ಪ ಅವರ ಮನೆಗೆ ಜನರು ಬರುತ್ತಿರಬಹುದು, ಆದರೆ, ಅಧಿಕಾರಿಗಳು ಬರುವುದಿಲ್ಲ. ಬರೀ ಜನರನ್ನು ಕಟ್ಟಿಕೊಂಡು ಏನು ಮಾಡಬೇಕು? ಅಧಿಕಾರ ಚಲಾಯಿಸಿದಂತೆ ಆಗುವುದಿಲ್ಲವಲ್ಲ?

`ಅಧಿಕಾರವನ್ನು ಮತ್ತೆ ನಡೆಸಬೇಕಾದರೆ ನೀವು ಆರೋಪ ಮುಕ್ತರಾಗಿ ಬರಬೇಕು~ ಎಂದು ಹೈಕಮಾಂಡಿನ ನಾಯಕರು ಹೇಳಿದ್ದೂ ಅವರಿಗೆ ರುಚಿಸುತ್ತಿಲ್ಲ. ಇದೇ ಮಾತನ್ನು ಹೇಳಿದ  ಈಶ್ವರಪ್ಪ ಅವರನ್ನು ಬಾಯಿ ಮುಚ್ಚಿಸುವ ಮೂಲಕ ಹೈಕಮಾಂಡಿಗೂ ಯಡಿಯೂರಪ್ಪ ಪರೋಕ್ಷ ಎಚ್ಚರಿಕೆ ಕೊಟ್ಟಿದ್ದಾರೆ. `ಆರೋಪ ಹೊತ್ತವರು ಅಧಿಕಾರ ನಡೆಸಬಾರದು ಎಂದು ಸಂವಿಧಾನದಲ್ಲಿ ಇಲ್ಲವಲ್ಲ~ ಎಂಬ ಸಮರ್ಥನೆಯನ್ನು ಯಡಿಯೂರಪ್ಪ ಬಣ ಢಾಲಿನಂತೆ ಬಳಸುತ್ತಿದೆ. ಹೀಗೆ ಆರೋಪ ಹೊತ್ತವರು ಪಕ್ಕದ ರಾಜ್ಯದಲ್ಲಿಯೇ ಅಧಿಕಾರ ನಡೆಸುತ್ತಿರುವುದು ಅವರಿಗೆ ನೆಪವಾಗಿ ಸಿಕ್ಕಿದೆ. ತಮ್ಮ ವಿರುದ್ಧದ ಎಲ್ಲ ಆರೋಪಗಳಿಂದ ನ್ಯಾಯಾಲಯದಲ್ಲಿ ಮುಕ್ತವಾಗಿ ಬರಬೇಕಾದರೆ ದಶಕಗಳೇ ಕಳೆದು ಹೋಗಬಹುದು. ಆಗ ದೇಶದಲ್ಲಿ ಏನಾಗಿರುತ್ತದೆ ಯಾರಿಗೆ ಗೊತ್ತು ಎಂಬುದು ಅವರ ಆತುರಕ್ಕೆ ಕಾರಣ. ಕೇಂದ್ರ  ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಬಿಜೆಪಿಗೆ ಯಡಿಯೂರಪ್ಪ ನುಂಗಲಾಗದ ತುತ್ತು. ಹಾಗೆಂದು ಬಿಜೆಪಿಯಲ್ಲಿ ದ್ವಂದ್ವಗಳು ಇಲ್ಲವೆಂದಲ್ಲ.

ಉತ್ತರಪ್ರದೇಶದಲ್ಲಿ ಮಾಯಾವತಿ ಕಿತ್ತು ಹಾಕಿದ ಮಾಜಿ ಸಚಿವ ಬಾಬುಸಿಂಗ್ ಕುಶವಾ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಬಿಜೆಪಿ ಏನು ಹೇಳಲು ಹೊರಟಿದೆ?

 ಉತ್ತರ ಪ್ರದೇಶವೂ ಸೇರಿದಂತೆ ಐದು ರಾಜ್ಯಗಳಲ್ಲಿ ಚುನಾವಣೆ ಆಗುವವರೆಗೆ ಯಡಿಯೂರಪ್ಪ ಕಾಯುತ್ತಾರೆಯೇ ಅಥವಾ ಕಬ್ಬಿಣ ಕಾದಿರುವಾಗಲೇ ಅದನ್ನು ಬಡಿದು ಮೆತ್ತಗೆ ಮಾಡುತ್ತಾರೆಯೇ? ರಾಜ್ಯ ಪ್ರವಾಸಕ್ಕೆ ಹೊರಟಿರುವ ಅವರು ತಮ್ಮ ಬಲದ ಪರೀಕ್ಷೆಯನ್ನು ತಾವೇ ಮಾಡಿಕೊಳ್ಳಬಹುದು ಆ ಮೂಲಕ ಅದನ್ನು ಪಕ್ಷಕ್ಕೆ ತೋರಿಸಿಕೊಡಲೂಬಹುದು. ಅವರ ಸಭೆಗಳಿಗೆ ಭಾರಿ ಸಂಖ್ಯೆಯಲ್ಲಿ ಜನರು ಬಂದು ಸೇರುವಂತೆ(!) ಮಾಡಿಯೂ ಎರಡನೆಯದನ್ನು ಮಾಡಬಹುದು. ಅವರಿಗೆ ಈಗ ಪಕ್ಷದ ಜತೆಗಿನ ಸಂಬಂಧ ಹೆಚ್ಚು ಮುಖ್ಯ ಎಂದು ಅನಿಸುತ್ತಿಲ್ಲ. ತಾವೇ ಈ ಸರ್ಕಾರವನ್ನು ಅಧಿಕಾರಕ್ಕೆ ತಂದುದು, ಸಾಮೂಹಿಕ ನಾಯಕತ್ವಕ್ಕೆ ಅರ್ಥವಿಲ್ಲ ಎಂದು ಹೇಳುತ್ತಿರುವುದರಲ್ಲಿ ಈ ಧ್ವನಿಯೇ ಅಡಗಿದೆ. ಒಮ್ಮೆ ಒಬ್ಬ ನಾಯಕನ ತಲೆಯಲ್ಲಿ ಆ ಬಗೆಯ ಅಭಿಪ್ರಾಯ ಹೊಕ್ಕರೆ ಅದು ಆತನನ್ನು ಎಲ್ಲಿಗೆ ತೆಗೆದುಕೊಂಡು ಹೋಗಿ ನಿಲ್ಲಿಸುತ್ತದೆ ಎಂದು ಹೇಳಲು ಆಗದು. ಇದು ದೇವರಾಜ ಅರಸು ಅವರಿಗೆ ಆಯಿತು, ಎಸ್.ಬಂಗಾರಪ್ಪ ಅವರಿಗೆ ಆಯಿತು, ರಾಮಕೃಷ್ಣ ಹೆಗಡೆ ಅವರಿಗೆ ಆಯಿತು. ಹೀಗೆ ಪಕ್ಷವನ್ನು ತೊರೆದು ಹೋದ ಅಥವಾ ಹೊರಗೆ ಹಾಕಿಸಿಕೊಂಡ ನಾಯಕರಿಗೆ ಏನು ಪಾಠಗಳು ಸಿಕ್ಕವು ಎಂಬುದಕ್ಕೆ ಇತಿಹಾಸದಲ್ಲಿ ಉತ್ತರವಿದೆ. ಹಾಗೆ ನೋಡಿದರೆ ಇದ್ದುದರಲ್ಲಿ ಬಂಗಾರಪ್ಪ ಅವರಿಗೇ ಹೆಚ್ಚಿನ ಬೆಂಬಲ ಸಿಕ್ಕಿತು. ಆದರೂ ಅದು ಅವರನ್ನು ಅವರು ಬಯಸಿದ ಮುಖ್ಯಮಂತ್ರಿ ಗದ್ದುಗೆಯವರೆಗೆ ತೆಗೆದುಕೊಂಡು ಹೋಗಲಿಲ್ಲ. ಮತ್ತೆ ಅವರು ರಾಷ್ಟ್ರೀಯ ಪಕ್ಷದ ನೆರವಿನಿಂದಲೇ ಮುಖ್ಯಮಂತ್ರಿ ಆದರು.

ಯಡಿಯೂರಪ್ಪ ಅವರು ಹೀಗೆ ಪಕ್ಷದ ಹಂಗು ಹರಿದುಕೊಂಡು ಹೊರಗೆ ಹೋಗಲು ಒಂದೊಮ್ಮೆ ಧೈರ್ಯ ಮಾಡಿದರೆ ಅದಕ್ಕೆ ಲಿಂಗಾಯತ ನಾಯಕರು ಇದುವರೆಗೆ ಪ್ರತ್ಯೇಕ ಪಕ್ಷ ಕಟ್ಟಿಲ್ಲ ಎಂಬ ಕಾರಣವೂ ಇರಬಹುದು. ತಮ್ಮ ವಿರುದ್ಧ ಆರೋಪ ಬಂದು, ಅದರಿಂದಾಗಿ ಜೈಲಿಗೆ ಹೋಗಿ ಬಂದ ಮೇಲೆ ತಮ್ಮ ಜನಪ್ರಿಯತೆ ಹೆಚ್ಚಿದೆ ಎಂಬ ಭಾವನೆಯೂ ಅವರಲ್ಲಿ ಇದ್ದಂತೆ ಇದೆ. ಇವೆಲ್ಲ ವಿಚಿತ್ರ ಕಾರಣಗಳು. ಒಬ್ಬ ನಾಯಕನಿಗೆ ಆತನ ಜನಪರ ಕಾರ್ಯಗಳ ಮೂಲಕ ಜನಪ್ರಿಯತೆ ಬರಬೇಕು. ಈಗ ಕಾಲವೇ ಬೇರೆ!

ತಮ್ಮ ಜನಪ್ರಿಯತೆ ಕಾರಣವಾಗಿ ಒಂದಿಷ್ಟು ಸೀಟುಗಳು ಬಂದರೆ ತಮ್ಮ ಚೌಕಾಶಿ ಸಾಮರ್ಥ್ಯ ಹೆಚ್ಚಬಹುದು ಎಂದು ಯಡಿಯೂರಪ್ಪ ಅಂದುಕೊಂಡಿರುವಂತಿದೆ ಅಥವಾ ಒಂದು ಸಾರಿ ತಾವು ರಾಜ್ಯ ಸುತ್ತಿ ಬಂದ ಮೇಲೆ ಪಕ್ಷವೇ ತಮ್ಮ ಬಳಿಗೆ ಬಂದು ರಾಜಿ ಮಾಡಿಕೊಂಡು ಅಧಿಕಾರ ಕೊಡಬಹುದು ಎಂದೂ ಅವರು ಲೆಕ್ಕ ಹಾಕುತ್ತಿರಬಹುದು. ತಮ್ಮ ಬಲವನ್ನು ಹೆಚ್ಚಿಸಿಕೊಳ್ಳಲು ಇತ್ತ ಶ್ರೀರಾಮುಲು ಅತ್ತ ಶರದ್ ಪವಾರ್ ಜತೆಗೂ ಅವರು ಬಾಗಿಲು ತೆಗೆದುಕೊಂಡಿರುವಂತಿದೆ. ಅವರು ತಮ್ಮ ಎದೆಯ ಹತ್ತಿರ ಕಾರ್ಡುಗಳನ್ನು ಇಟ್ಟುಕೊಂಡು ಎಷ್ಟೇ ಆಟವಾಡಿದರೂ ಅವರಿಗೆ ಅಧಿಕಾರ ಬೇಕಾಗಿದೆ ಎಂಬ ಗುಟ್ಟನ್ನು ಬಚ್ಚಿ ಇಡಲು ಮಾತ್ರ ಸಾಧ್ಯವಾಗುತ್ತಿಲ್ಲ.

ಶಿಕಾರಿಪುರದ ಪುರಸಭೆಯ ಸದಸ್ಯತ್ವದಿಂದ ಮುಖ್ಯಮಂತ್ರಿಯ ಗದ್ದುಗೆಯವರೆಗೆ ಏರಿ ಬಂದ ಯಡಿಯೂರಪ್ಪ ಅವರಿಗೆ ಪಕ್ಷವೇ ಎಲ್ಲ ಅಧಿಕಾರವನ್ನು, ಸಂಪತ್ತನ್ನು ಕೊಟ್ಟಿದೆ. ಅಂಥ ಪಕ್ಷದ ಜತೆಗಿನ ಅವರ ಸಂಬಂಧ ಇನ್ನೂ ಎಷ್ಟು ದಿನ ಮಧುರವಾಗಿ ಇರುತ್ತದೆ? ಗೊತ್ತಿಲ್ಲ.

ರಾಜಕಾರಣ ಒಂದು ಕಾಯುವ ಆಟ ಎಂಬುದರಲ್ಲಿ ಅವರಿಗೆ ನಂಬಿಕೆ ಹೊರಟು ಹೋದಂತಿದೆ. ಯಾವುದೇ ಚೌಕಾಶಿಯನ್ನು ಹೆಚ್ಚು ಎಳೆದಾಡಬಾರದು. ಎಳೆದರೆ ಅದು ಹರಿದು ಹೋಗುತ್ತದೆ ಅಥವಾ ಹರಿದು ಹೋಗುವ ಹಂತಕ್ಕೆ ಬರುತ್ತದೆ. ಕೆಲವೇ ತಿಂಗಳಲ್ಲಿ ಎರಡನೇ ಗಾಂಧಿ ಎಂದು ಹೆಸರು ಮಾಡಿದ ಅಣ್ಣಾ ಹಜಾರೆ ಕೂಡ ಈಗ ಮಂಕಾಗಿ ಹೋಗಿದ್ದಾರೆ. ಅವರು ಹೆಚ್ಚು ಎಳೆದಾಡಿದರು ಎಂದೇ ಈಗ ಎಲ್ಲರಿಗೂ ಅನಿಸತೊಡಗಿದೆ.

ಅದು ಯಡಿಯೂರಪ್ಪ ಅವರಿಗೆ ಪಾಠ ಅಲ್ಲವೇ? ಒಂದು ಪಕ್ಷಕ್ಕೆ, ಒಂದು ಸಂಸ್ಥೆಗೆ ತನ್ನದೇ ಆದ ಶಕ್ತಿ ಇರುತ್ತದೆ. ಒಂದು ಪಕ್ಷದ, ಸಂಸ್ಥೆಯ ಮುಖ್ಯಸ್ಥರ ಹುದ್ದೆಯಲ್ಲಿ ಬಂದು ಕುಳಿತವರಿಗೆ ತನ್ನದೇ ಶಕ್ತಿ ದೊಡ್ಡದು ಎಂದು ಅನಿಸತೊಡಗುವುದು ಪಕ್ಷಕ್ಕೂ ಒಳ್ಳೆಯದಲ್ಲ, ಸಂಸ್ಥೆಗೂ ಒಳ್ಳೆಯದಲ್ಲ. ಹೀಗೆ ಪಕ್ಷ ಮತ್ತು ಸಂಸ್ಥೆಯ ಚೌಕಟ್ಟನ್ನು ಮೀರಿ ಬೆಳೆಯುವ, ಬೆಳೆದಿದೆ ಎಂದು ಅಂದುಕೊಳ್ಳುವ ವ್ಯಕ್ತಿಗಳನ್ನು ನಿಯಂತ್ರಿಸುವ ಶಕ್ತಿ ಅಂತರ್ಗತವಾಗಿ ಇರಬೇಕು.

ಬಿಜೆಪಿಯಲ್ಲಿ ಅದು ಇದೆಯೇ? ಮಧ್ಯಪ್ರದೇಶದಲ್ಲಿ ಉಮಾ ಭಾರತಿ, ಉತ್ತರಪ್ರದೇಶದಲ್ಲಿ ಕಲ್ಯಾಣಸಿಂಗ್ ಅವರು ಹೀಗೆ ಪಕ್ಷದ ಚೌಕಟ್ಟನ್ನು ಮೀರಿ ಹೋಗಲು ಪ್ರಯತ್ನ ಮಾಡಿ ಹೆಚ್ಚಿನದೇನನ್ನೂ ಸಾಧಿಸಲಿಲ್ಲ. ತಮ್ಮ ಶಕ್ತಿಯನ್ನು ಹೀಗೆ ಹೊರಗೆ  ಹೋಗಿಯೇ ಪರೀಕ್ಷೆಗೆ ಒಡ್ಡುವುದು ಅನೇಕ ಸಾರಿ ಅವರ ದೌರ್ಬಲ್ಯಗಳನ್ನೇ ಬಯಲು ಮಾಡಿಬಿಡಬಹುದು. ಸುಂಕದ ಕಟ್ಟೆಯ ಕುಂಟನ ಹಾಗೆ ಹೆದರಿಸುತ್ತ ಇರಬೇಕೇ ಹೊರತು, ಎದ್ದು ನಿಂತು ತನ್ನ ವೈಕಲ್ಯವನ್ನು ಬಹಿರಂಗ ಮಾಡಲು ಹೋಗಬಾರದು. ಇಂಥ  ಚಿಂತೆಯೇನೂ ಇಲ್ಲದಂತಿರುವ ಯಡಿಯೂರಪ್ಪನವರು ತಾವಷ್ಟೇ ಫಜೀತಿಯಾಗುತ್ತಾರೆಯೇ ಅಥವಾ ಪಕ್ಷವನ್ನೂ ಫಜೀತಿ ಮಾಡುತ್ತಾರೆಯೇ? ತಿಳಿಯಲು ಅವರೇ ಸಂಕ್ರಾಂತಿ ಗಡುವು ಹಾಕಿದ್ದಾರಲ್ಲ?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT