ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಾಡಂಬರ ಆತ್ಮಗೀತೆ

Last Updated 18 ಜನವರಿ 2014, 19:30 IST
ಅಕ್ಷರ ಗಾತ್ರ

ಅವರ ಬದುಕು ಚಿಲಕುಂದದಲ್ಲಿ ಶುರುವಾಗುತ್ತದೆ. ಅಲ್ಲಿಂದ ಮೈಸೂರು, ಸೊಲ್ಲಾಪುರ, ನಿಪ್ಪಾಣಿ, ಸೋಮಾಲಿಯಾ, ಆಕ್ಸ್‌ಫರ್ಡ್, -ಓಹಾಯೋ, ರಿಯಾದ್,- ಸೌದಿ ಅರೇಬಿಯಾಗಳಲ್ಲಿ ಹರಿದಾಡಿ ಮಂಗಳೂರಿನ ಕೊಣಾಜೆಯಲ್ಲಿ ನಿವೃತ್ತಿಯನ್ನು ಹೊಂದುತ್ತದೆ. ಅನಂತರ ಬೆಂಗಳೂರಲ್ಲಿ ಕುಳಿತು ತಮ್ಮ ಎಂಟು ಊರುಗಳ ನಂಟಿನ ಬುತ್ತಿಯನ್ನು ಸಾವಕಾಶವಾಗಿ ಬಿಚ್ಚುತ್ತಾ ಹೋಗುತ್ತಾರೆ.

ನಿರುದ್ವಿಗ್ನವಾಗಿ, ಉತ್ಪ್ರೇಕ್ಷೆಗಳಿಲ್ಲದೆ, ಅತ್ತ ಆತ್ಮಪ್ರಶಂಸೆಯಾಗಲೀ, ಇತ್ತ ಪರನಿಂದನೆಯಾಗಲೀ ವಿನಾಕಾರಣ ಸುಳಿಯದಂತೆ ಬರೆಯುತ್ತ ಹೋಗುತ್ತಾರೆ. ಇದನ್ನು ಆತ್ಮಕಥನ ಎನ್ನುವುದಕ್ಕಿಂತ ಆತ್ಮಾವಲೋಕನ, ಸ್ವವಿಮರ್ಶೆ ಎನ್ನಬಹುದಾದ ಅನೇಕ ಉದಾಹರಣೆಗಳಿವೆ. ರಂಜಕತೆಗೆ ಎಳಸುವುದಿಲ್ಲ. ಏನನ್ನಾದರೂ ವೈಭವೀಕರಿಸಲು ಹೋಗುವುದಿಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯ ಎನ್ನುತ್ತಾರೆ. ಹೀಗೆ ನಡೆದಿರಬಹುದು ಎಂದು ಪ್ರಾಮಾಣಿಕವಾಗಿ ಘಟನೆಗಳನ್ನು ಮಾತ್ರ ದಾಖಲಿಸಿ ಅವುಗಳ ಕಾರ್ಯಕಾರಣ ಸಂಬಂಧವನ್ನು ವಿಶ್ಲೇಷಿಸಿಲ್ಲ ಎನ್ನುತ್ತಾರೆ.

ಸಾವಿರಾರು ರೇಜಿಗೆಗಳನ್ನು, ಪಡಿಪಾಟಲುಗಳನ್ನು, ಬೋಗಾರ ಕಷ್ಟಕಾರ್ಪಣ್ಯಗಳನ್ನುಂಡರೂ, ಬದುಕು ಸಾಕುಬೇಕಾದಷ್ಟನ್ನು ಉದಾರವಾಗಿ ನನಗೆ ಕೊಟ್ಟಿದೆ ಎನ್ನುತ್ತಾರೆ. ಬಹು ಭಾಷೆಗಳ ಪಾಂಡಿತ್ಯವಿದ್ದೂ ಎಲ್ಲೂ ಶಬ್ದಾಡಂಬರಕ್ಕೆ ಇಳಿಯದೆ ಸರಳಾತಿಸರಳವಾಗಿ ಆದರೆ ತುಂಬಾ ಪರಿಣಾಮಕಾರಿಯಾಗಿ ಆತ್ಮಗೀತೆಯನ್ನು ಹಾಡಿದ್ದಾರೆ. ಈ ಹಾಡಿನಲ್ಲಿ ಓದುಗನಿಗೆ ಚೂಪಾಗಿ ಕೇಳಿಸುವುದು ಸಂಕಟದ ಶ್ರುತಿಯೇ.

ಅಪಮಾನದ ತಾಳಗಳೇ. ಅವು ವ್ಯಕ್ತಿಯೊಬ್ಬನ ಸಂಕಟ, ಅಪಮಾನಗಳ ಪಟ್ಟಿಯಾಗದೆ ಒಂದು ಕಾಲಘಟ್ಟದಲ್ಲಿ ನಾಡು, ಸಮುದಾಯ ಒಟ್ಟಿಗೆ ಅನುಭವಿಸುತ್ತಿದ್ದ ಬವಣೆಗಳ ವಿರಾಟ್ ಸ್ವರೂಪದ ದರ್ಶನವಾಗುತ್ತದೆ. ವಾಸ್ತವವನ್ನು ಮೀರಬಯಸುವ ಮಹತ್ವಾಕಾಂಕ್ಷಿಗೆ ಬದುಕು ಅನ್ನ ಕೊಡುತ್ತದೆ, ಹೌದು. ಆದರೆ ಅದು ಮೂರು ಗುಕ್ಕು ಅಷ್ಟೆ. ಎಂದೂ ತಿಂದು ತೇಗುವಷ್ಟು ಅಲ್ಲ. ಒಂದು ಬಗೆಯ ಅರೆಹೊಟ್ಟೆಯ ಖಾಯಂ ಸ್ಥಿತಿ. ಈ ಅತೃಪ್ತಿಯೇ ಬದುಕಿನ ಸಂತೃಪ್ತಿ. ಈ ಎಂಟು ಊರಿನ ನೆಂಟ ಡಾ. ಸಿ.ಎನ್.ರಾಮಚಂದ್ರನ್ ಒಂಬತ್ತನೆ ಊರಿನ ನಿವೃತ್ತಿಯ ನೆರಳಲ್ಲಿ ಕುಳಿತು ತಮ್ಮ ಭೂತಕಾಲದ ನೆರಳುಗಳ ಬೆನ್ನುಹತ್ತಿ ಬರೆಯುತ್ತಾರೆ.

ಸಂಕೇತಿಗಳ ಐತಿಹ್ಯದಲ್ಲಿ ಉಲ್ಲೇಖವಾಗಿರುವ ನಾಚಾರಮ್ಮನ ವ್ಯಕ್ತಿತ್ವದಂತೆಯೇ ಇವರದು ಕೂಡಾ. ಅವಳಂತೆ ಸಿಟ್ಟಿನಿಂದ, ಅಸ್ತಿತ್ವ ಹುಡುಕಿ ವಲಸೆ ಹೊರಡುವ ಸಿಎನ್‌ಆರ್ ಅವರ ಹೊಸನೆಲೆಗಳ ಅನ್ವೇಷಣೆಯೇ ಈ ಕೃತಿ. ಕಂಪಲಾಪುರದ ಸಂತೆಗೆ ಹೋಗಿ ಎಲೆ ಕೊಯ್ದು ಪಿಂಡಿ ಕಟ್ಟಿ ಮಾರುತ್ತಿದ್ದ ಎಂಟು ವರ್ಷದ ಬಾಲಕನ ಆತಂಕ, ತಳಮಳಗಳು ಕೊನೆಯವರೆಗೂ ಹಾಗೇ ಉಳಿಯುತ್ತವೆ.

ನಿವೃತ್ತಿಗೆ ಮುನ್ನ ಕೂಡಾ ಇನ್‌ಕ್ರಿಮೆಂಟಿಗಾಗಿ, ಪ್ರಾಧ್ಯಾಪಕ ಹುದ್ದೆಗಾಗಿ ಅರ್ಹತೆ ಇದ್ದೂ ತಳಮಳಿಸುತ್ತಾರೆ. ಎದ್ದು ನಿಲ್ಲುವ ಆಸೆ, ಅಡ್ಡಬರುವ ಸಂಕೋಚ ಪ್ರವೃತ್ತಿ, ದಕ್ಕಿದ ಚೂರುಪಾರು ಸಂತೋಷಗಳಿಗೂ ಮಾಡಬೇಕಾದ ಸಾವಿರದೆಂಟು ಸರ್ಕಸ್ಸು  ಇವು ಬದುಕಿನ ಪ್ರತಿಹಂತದಲ್ಲೂ ಕಾಣುವ ಸಾಮಾನ್ಯ ಸ್ಥಿತಿ. ಹೀಗೆ ದಯನೀಯವಾಗಿ ಕಾಣುವ ಮನುಷ್ಯನೊಳಗೂ ಅಪಾರ ಸಿಟ್ಟಿದೆ, ಸ್ವಾಭಿಮಾನವಿದೆ. ಅದು ಸಮಯ ಬಂದಾಗ ಸಿಡಿಯುತ್ತದೆ. ಜೊತೆಗೆ  ಬತ್ತದ ಮಾನವೀಯ ಸೆಲೆಯೂ ಇದೆ.

ಉದಾಹರಣೆಗೆ ಸತ್ತ ಗಂಡನ ಜತೆ, ಬದುಕಿದ್ದ ಹೆಂಡತಿಯನ್ನು ಮಲಗಿಸಿ, ತಪ್ಪಿಸಿಕೊಂಡಾಳೆಂದು ಅವಳ ಕಾಲುಗಳಿಗೆ ಕಬ್ಬಿಣದ ಬಳೆ ತೊಡಿಸಿ, ಸಹಗಮನಕ್ಕೆ ಅಣಿಗೊಳಿಸುವ ಚಿತ್ರ ನೆನಪಾದಾಗಲೆಲ್ಲಾ ನಾನು ತೀರ ಅಸ್ವಸ್ಥನಾಗುತ್ತೇನೆ ಎನ್ನುತ್ತಾರೆ. ಮಗನ ಪರೀಕ್ಷೆ ಫೀಸಿಗೆ ಅಮ್ಮ ಚಿನ್ನದ ಬಳೆ ಮಾರುತ್ತಾಳೆ. ಅದೇ ಅಮ್ಮ ಟೈಫಾಯಿಡ್ ಖಾಯಿಲೆ ಬಿದ್ದಾಗ ಹೊಸ ಔಷಧವನ್ನು ಮೈಸೂರಿನಿಂದ ತರಿಸಲು ಹಣವಿರುವುದಿಲ್ಲ. ಅಮ್ಮ ತೀರಿಕೊಳ್ಳುತ್ತಾಳೆ. ನಂತರ ಎರಡನೆ ತಂಗಿ ಲಕ್ಷ್ಮಿಗೂ ಅಂಥದ್ದೇ ಸಾವು. ಸಾವು ಮತ್ತು ನೋವು ಕಥನದುದ್ದಕ್ಕೂ ಖಿನ್ನತೆಯನ್ನು ಮಡುಗಟ್ಟಿಸುವ ಪರ್ಯಾಯ ಮೈಲಿಗಲ್ಲುಗಳಾಗಿವೆ.

ಮೈಸೂರಿನಲ್ಲಿ ತೆರೆದುಕೊಳ್ಳುವ ಅನುಭವ, ವ್ಯಕ್ತಿಗಳು ಮತ್ತು ಸಂಸ್ಥೆಗಳು ಕುತೂಹಲಕರವಾಗಿವೆ. ಅನಂತಮೂರ್ತಿ, ಭೈರಪ್ಪ, ಹಾಮಾನಾ, ಸಿಡಿಎನ್, ಮುಂತಾದ ಗಣ್ಯರೊಂದಿಗಿನ ಚರ್ಚೆ, ಒಡನಾಟ  ಮೈಸೂರಿನಲ್ಲಿ ಓದಿದ ನನ್ನಂಥವರಿಗೆ ಬೇರೆ ಬೇರೆ ಬಗೆಯ ಹಳಹಳಿಕೆಗೆ ತಳ್ಳುತ್ತವೆ. ಚೆನ್ನಾಗಿ ಡ್ರೆಸ್ ಮಾಡಿಕೊಂಡವರ ಬಗ್ಗೆ, ಒಳ್ಳೆಯ ಇಂಗ್ಲಿಷ್ ಮಾತನಾಡುವವರ ಬಗ್ಗೆ ಅಸೂಯೆ! ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ಮಹಾರಾಜ ಕಾಲೇಜಿನ ಬೃಹತ್ ಸಭೆಯಲ್ಲಿ ಹಾಮಾನಾ ಅವರು ಮಾಡಿದ ಭಾಷಣ ಪೂರ್ತಿ ಈಗಲೂ ನೆನಪಿದೆ ಅನ್ನುತ್ತಾರೆ. ಹಾಮಾನಾರ ಮಾತುಗಾರಿಕೆಯನ್ನು ಕಲಿಯುವುದು ಹೇಗೆ ಎಂದು ತವಕಿಸುತ್ತಾರೆ.

ಸಿಎನ್‌ಆರ್ ವಿಕ್ಷಿಪ್ತರು. ಸಂಕೇತಿಗಳೆಲ್ಲ ಒಂದಲ್ಲ ಒಂದು ನೆಲೆಯಲ್ಲಿ ವಿಕ್ಷಿಪ್ತರೇ. ಬಡತನದಿಂದ ಕಲಿಯುವ ಸದ್ಗುಣಗಳೇನೆ ಇರಲಿ, ಅದು ತರುವ ಕೀಳರಿಮೆಯಿಂದ ಬದುಕಿನುದ್ದಕ್ಕೂ ಬಿಡುಗಡೆ ಪಡೆಯಲು ಸಾಧ್ಯವಿಲ್ಲವೋ ಏನೋ. ಅದರಲ್ಲೂ ಇಂಗ್ಲಿಷ್ ಉಚ್ಚಾರ. ಒಂದೊಂದು ತಪ್ಪು ಉಚ್ಚಾರಕ್ಕೂ ಅದೆಷ್ಟು ಅಪಮಾನ! ಎವಿಲ್ ಅಲ್ಲ ಈ-ವಿಲ್, ಈಲಿಯಟ್ ಅಲ್ಲ ಎಲಿಯಟ್! ಇಂತಹ ಹಲವು ತಿದ್ದುಪಡಿಗಳನ್ನು ಸಿಡಿಎನ್ ಸಿಟ್ಟಿನಿಂದ ಸೂಚಿಸುತ್ತಾರೆ. ಸ್ವಯಂ ಇಂಗ್ಲಿಷ್ ಅಧ್ಯಾಪಕರಾಗಿದ್ದ ಸಿಎನ್‌ಆರ್ ಇಷ್ಟು ಪಜೀತಿ ಅನುಭವಿಸಿದ್ದಾರೆ ಎಂದರೆ, ಕನ್ನಡವೇ ನನ್ನುಸಿರು ಎಂದು ಕುಣಿಕುಣಿದಾಡುತ್ತ ಅಡ್ಡಾಡುವ ನನ್ನಂಥವರ ಕೀಳರಿಮೆಯನ್ನು ವಿವರಿಸುವುದು ಕಷ್ಟ.

ಶಾಂತಿನಾಥ ದೇಸಾಯಿ ಅವರನ್ನು ಕುರಿತು ಸಿಎನ್‌ಆರ್ ಆಡಿರುವ ಮಾತುಗಳು: ನವ್ಯ ಯುಗದ ಶ್ರೇಷ್ಠ ಕತೆ ಕಾದಂಬರಿಕಾರರಲ್ಲಿ ಒಬ್ಬರಾದ ಅವರನ್ನು ಕನ್ನಡ ಜಗತ್ತು ಅಲಕ್ಷಿಸಿತೋ ಎಂದು ಒಮ್ಮೊಮ್ಮೆ ತೋರುತ್ತದೆ. ಈ ಅಲಕ್ಷ್ಯ ನಿಜವಾಗಿದ್ದರೆ ಅದಕ್ಕೆ ಎರಡು ಕಾರಣಗಳಿದ್ದಿರಬಹುದು. ಮುಖ್ಯವಾಗಿ ಅವರು ಬಹುಕಾಲ ಕರ್ನಾಟಕದಿಂದ ಹೊರಗೆ ಇದ್ದುದು. ಸಾಹಿತ್ಯಿಕ ಕ್ಷೇತ್ರದಲ್ಲಿ ಅಧಿಕಾರ ಕೇಂದ್ರಗಳಾದ ಬೆಂಗಳೂರು,-ಮೈಸೂರು,-ಧಾರವಾಡಗಳಿಂದ ದೂರವಿರುವ ಕನ್ನಡ ಸಾಹಿತಿಗಳು ಮತ್ತೆ ಮತ್ತೆ ಅಲಕ್ಷ್ಯಕ್ಕೆ ಒಳಗಾಗಿರುವುದು ಸಾಮಾನ್ಯ ಸಂಗತಿ.

ರಾಜಧಾನಿಯ ಕೆಲವು ಸಾಹಿತಿಗಳಂತೂ ಕಳಪೆ ಬರೆದಿದ್ದರೂ ತಮ್ಮ ಗುಂಪು ಸೇರಿಸಿಕೊಂಡು, ಶಂಖ ಜಾಗಟೆ ಬಾರಿಸಿಕೊಂಡು, ಮಂತ್ರಿ ಮಹೋದಯರನ್ನು ಕರೆಸಿಕೊಂಡು ಮಿಂಚುತ್ತಿರುತ್ತಾರೆ. ಓದಬಹುದಾದ ಒಂದೇ ಒಂದು ಕೃತಿ ಇಲ್ಲದಿದ್ದರೂ ಎಲ್ಲ ಪ್ರಶಸ್ತಿ, ಪುರಸ್ಕಾರಗಳನ್ನು ದೋಚುತ್ತಿರುತ್ತಾರೆ. ಸಂಕೋಚ ಪ್ರವೃತ್ತಿಯ ಶಾಂತಿನಾಥ ದೇಸಾಯಿ ಅವರಿಗೆ ಸಿಗಬೇಕಾದಷ್ಟು ಮನ್ನಣೆ ಸಿಗಲಿಲ್ಲ. ಸಿಎನ್‌ಆರ್ ಕೂಡ ಗಡಿನಾಡಲ್ಲಿ, ಹೊರನಾಡಲ್ಲಿ ಕೆಲಸ ಮಾಡಿದವರು.

ಬ್ರಾಹ್ಮಣರ ಹುಡುಗನಾಗಿ ಜನ್ಮನಕ್ಷತ್ರ-ರಾಶಿ ಯಾವುದೂ ತಿಳಿಯದಿದ್ದಾತ. ವಿಚಿತ್ರ ವರ್ತನೆಯ ಅಪ್ಪನನ್ನು ಕೇಳಿದ್ದಕ್ಕೆ ರಾತ್ರಿ ಆಕಾಶವನ್ನು ಒಂದು ಕಡೆಯಿಂದ ವಿವರವಾಗಿ ನೋಡು. ಯಾವ ನಕ್ಷತ್ರ ಚೆನ್ನಾಗಿ ಕಾಣಿಸುತ್ತದೋ ಅದನ್ನು ಆರಿಸಿಕೋ. ಅದೇ ನಿನ್ನ ನಕ್ಷತ್ರ ಎಂದಿದ್ದರಂತೆ. ಪುರೋಹಿತರಾಗಿದ್ದೂ ಕಬ್ಬಿಣದ ಕೆಲಸ, ಮರಗೆಲಸ ಮಾಡುತ್ತಿದ್ದರಂತೆ. ದೊಡ್ಡವರಿಗೆ ಮಂದಾಸನ, ಮಕ್ಕಳಿಗೆ ಬುಗುರಿ ಮುಫತ್ತಾಗಿ ಮಾಡಿಕೊಡುತ್ತಿದ್ದರಂತೆ. ಇದು ನನಗೆ ಬಹಳ ಕುತೂಹಲಕರ ಅಂಶ ಎನ್ನಿಸುತ್ತದೆ.

ಅದು ಹೆದರಿಕೆಯೋ, ಗೌರವವೋ ಸಿಎನ್‌ಆರ್ ತಮ್ಮ ಪತ್ನಿಯನ್ನು ಸದಾ ಬಹುವಚನದಲ್ಲೇ ಮಾತನಾಡಿಸುತ್ತಾರೆ. ಅದು ಹೆದರಿಕೆ ಇರಲಾರದು, ಅದೊಂದು ಮೌಲ್ಯ ಮಾತ್ರ ಎಂದು ಅವರ ಅಮೆರಿಕ ವಾಸ್ತವ್ಯದಲ್ಲಿ ಸ್ಪಷ್ಟವಾಗುತ್ತದೆ. ಹಲವು ಪರೀಕ್ಷೆಗೆ ಒಡ್ಡಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಮನಸ್ಸಿನ ಡೋಲಾಯಮಾನ, ಲೈಂಗಿಕ ಸ್ವೇಚ್ಛಾಚಾರಕ್ಕೆ ಆಸ್ಪದವಿರುವಾಗಲೂ ಮನಸ್ಸಿನ ಹಿಂಜರಿಕೆ. ಆದರೆ ತನ್ನ ತಳಮಳವನ್ನು ಮುಚ್ಚಿಡದೆ ದಾಖಲಿಸುವ ಪ್ರಾಮಾಣಿಕತೆ, ತನ್ನನ್ನು ಆಗಾಗ ಕಾಡುವ ಪುನರಾವರ್ತಿತವಾಗುವ ಎರಡು ಕನಸುಗಳನ್ನು ನಿವೇದಿಸಿಕೊಳ್ಳುವ ಕ್ರಮ, ಇವೆಲ್ಲ ಸಿಎನ್‌ಆರ್ ಒಳಗಿನ ಶ್ರೀಸಾಮಾನ್ಯನನ್ನು ಆಪ್ತವಾಗಿಸುತ್ತವೆ.

ಮೊದಲನೆಯ ಕನಸು ಹೀಗಿದೆ. ಎಲ್ಲಿಗೋ ಪ್ರಯಾಣ ಮಾಡುತ್ತಿರುವಾಗ ವಾಹನ ಒಂದು ಕಡೆ ನಿಂತಿದೆ. ಲೇಖಕರು ಕೆಳಗಿಳಿದು ಅತ್ತಿತ್ತ ನೋಡುವಾಗ ವಾಹನ ಹೊರಟುಹೋಗಿಬಿಡುತ್ತದೆ. ಅಸಹಾಯಕರಾಗಿ ಕೂಗಿಕೊಂಡು ಎದ್ದು ಕೂರುತ್ತಾರೆ. ಎರಡನೆಯ ಕನಸು ಸ್ವಾರಸ್ಯಕರ. ತರುಣಿಯೊಬ್ಬಳ ಜೊತೆಗೆ ಲೇಖಕರ ಮದುವೆ ನಡೆಯುತ್ತಿರುತ್ತದೆ. ತಾಳಿ ಕಟ್ಟುವ ಮುನ್ನ ತನಗೆ ಮದುವೆಯಾಗಿದೆಯಲ್ಲವೆ? ಮತ್ತೆ ನಾನು ಹೇಗೆ ಈ ಸಂಬಂಧದಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದೇನೆ ಎಂದು ಬೆಚ್ಚಿ ಎಚ್ಚರಗೊಳ್ಳುತ್ತಾರೆ.
ಅವರ ಆತ್ಮಕಥನದಲ್ಲಿ ಗಾಢ ಖಿನ್ನತೆಯಿದೆ. ಮರಾಠಿ ಲೇಖಕ ಕಾಳೆ ಬರೆದ, ನಾನು ಇಲ್ಲಿ ಒಬ್ಬ ಪ್ರಯಾಣಿಕ. ನನ್ನ ಮನೆ ಇಲ್ಲಿಲ್ಲ.

ನನ್ನವರು ಇಲ್ಲಿ ಯಾರೂ ಇಲ್ಲ ಎನ್ನುವ ಮಾತುಗಳನ್ನು ಗಟ್ಟಿಯಾಗಿ ಮತ್ತೆ ಮತ್ತೆ ಹೇಳಿಕೊಂಡು ಖಿನ್ನತೆಯನ್ನು ಮೀರಲು ಯತ್ನಿಸುತ್ತಾರೆ. ವ್ಯಕ್ತಿಯೊಬ್ಬನ ಕೃತ್ಯಾಕೃತ್ಯಗಳು, ಆಯ್ಕೆ-ಆಕಾಂಕ್ಷೆಗಳು ಹೇಗೆ ಅವನ ಸುತ್ತಲೂ ಇರುವ ಇತರರ ಬದುಕನ್ನೂ ಪ್ರಭಾವಿಸುತ್ತವೆ ಎಂಬುದನ್ನು ನೆನಸಿಕೊಂಡರೆ ಬದುಕುವುದಕ್ಕೇ ಹೆದರಿಕೆಯಾಗುತ್ತದೆ. ಕೆಲವು ಗಾಯಗಳು ಎಂದಿಗೂ ಮಾಯುವುದಿಲ್ಲ.

ಮನುಷ್ಯಜೀವಿ ಎಂಥ ಪರಿಸರದಲ್ಲೂ ಸುಖಿಯಲ್ಲ. ಅಮೆರಿಕದ ಮುಕ್ತಸಮಾಜದಲ್ಲಿ ಒಂದು ಬಗೆಯ ಒಂಟಿತನ. ರಿಯಾದ್‌ನ ಧಾರ್ಮಿಕ ಕಟ್ಟುಪಾಡುಗಳ ಸಮಾಜದಲ್ಲಿ ಮತ್ತೊಂದು ಬಗೆಯ ಉಸಿರುಗಟ್ಟಿಸುವಿಕೆ.  ಅಮೆರಿಕದಲ್ಲಿ ಭಾರತೀಯನೆಂಬ ಕಾರಣಕ್ಕೆ ಹೀಯಾಳಿಕೆ. ರಿಯಾದ್‌ನಲ್ಲಿ ಹಿಂದು ಎಂಬ ಕಾರಣಕ್ಕೆ ಮುತವೀನ್‌ರಿಂದ ತಿರಸ್ಕಾರದ ಬೈಗುಳ. ಸೋಮಾಲಿಯಾದಲ್ಲಿ ಮತ್ತೊಂದು ಬಗೆಯ ಸಂಕಷ್ಟಗಳು. ತಾಯ್ನಾಡಿನಲ್ಲೂ ನೆಮ್ಮದಿ ಇರದ ಬದುಕು. ಈ ವಿವರಗಳನ್ನು ಸ್ವಾನುಕಂಪವಿಲ್ಲದೆ ಒಂದು ಸಾಮಾಜಿಕ ಚಿತ್ರವಾಗಿ ನಮ್ಮ ಮುಂದಿರಿಸುತ್ತಾರೆ.

ಒಳಮುಚ್ಚುಗರಂತೆ, ಹಿಂಜರಿಕೆಯ ಮನುಷ್ಯರಂತೆ ಕಾಣಿಸುತ್ತಲೇ ದಿಕ್ಕು ದಿಕ್ಕಿಗೆ ವಲಸೆ ಹೋಗುವುದು, ವೈರುಧ್ಯಮಯ ಪರಿಸರಕ್ಕೆ ಡಿಕ್ಕಿ ಹೊಡೆಯುವುದು, ಅದರಿಂದ ಗಾಯಗೊಂಡು ನರಳುವುದು, ರಕ್ತಸ್ರಾವವನ್ನು ಎಡಗೈನಲ್ಲಿ ಒತ್ತಿಟ್ಟು ಬಲಗೈನ ತೋರುಬೆರಳು ಬಳಸಿ ಕೋಪಾತಿರೇಕದಿಂದ ಚೀರಿ ನ್ಯಾಯ ಪಡೆಯುವುದು, ಇತರರಿಗೆ ಸುಲಭವಾಗಿ ಒದಗುವ ಕಾರ್ಯಗಳು ನನಗೊಬ್ಬನಿಗೇ ಏಕೆ ಸಮಸ್ಯೆಗಳಾಗುತ್ತವೆ ಎಂದು ಸೆಕೆಂಡ್ ಕ್ಲಾಸ್ ಮಾರ್ಕ್ಸ್ ತೆಗೆದ ಶಾಲಾ ವಿದ್ಯಾರ್ಥಿಯಂತೆ ಚಿಂತಿತನಾಗುವುದು. ಇಂಥ ಅಸಂಖ್ಯ ವಿವರಣೆಗಳಿಂದ ಇದು ನಾನು ಓದಿದ ಆತ್ಮಕಥನಗಳೆಲ್ಲವುಗಳಿಗಿಂತ ನನ್ನನ್ನು ತೀವ್ರವಾಗಿ ಆವರಿಸಿಕೊಂಡಿದೆ.

ಅದೆಷ್ಟೇ ದೀರ್ಘವಾಗಿ, ವಿವರವಾಗಿ ಅಮೆರಿಕ, ರಿಯಾದ್, ಮಂಗಳೂರು ಮೂಡಿದ್ದರೂ ಬಾಲ್ಯದ ವಿವರಗಳನ್ನೊಳಗೊಂಡ ಕಡಿಮೆ ಪುಟದ ಚಿಲಕುಂದವೇ ನಮಗಿಷ್ಟವಾಗುತ್ತದೆ. ಹಾಗಾಗಿ ಆತ್ಮಕಥನ ಚಿಲಕುಂದದಲ್ಲಿ ಪ್ರಾರಂಭವಾಗಿ ಲೋಕವನ್ನೆಲ್ಲಾ ಸುತ್ತಿ ಮತ್ತೆ ಚಿಲಕುಂದಕ್ಕೇ ಮರಳಿ ಬಂದ ಅನುಭವ ನೀಡುತ್ತದೆ.
(ಈ ವರ್ಷದ ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಮಂಡಿಸಿದ ಲೇಖನ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT