ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಾಸೆಗೆ ಅವಕಾಶವಿಲ್ಲ

Last Updated 10 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ರಾಮಕೃಷ್ಣ ಪರಮಹಂಸರ ಜೀವನವೇ ಒಂದು ದೊಡ್ಡ ಸಂದೇಶ. ಅವರ ಜೀವನದ ಸಣ್ಣಪುಟ್ಟ ಘಟನೆಗಳೂ ಮಾರ್ಗದರ್ಶಿಯಾದವುಗಳು. ಅದರಲ್ಲೂ ರಾಮಕೃಷ್ಣರು ಆ ಸಣ್ಣ ಘಟನೆಗಳನ್ನು ನಮ್ಮ ಜೀವನಕ್ಕೆ ಅನ್ವಯಿಸುವ ರೀತಿ ಅದ್ಭುತವಾದದ್ದು.

ಒಂದು ಬಾರಿ ರಾಮಕೃಷ್ಣ ಪರಮಹಂಸರು ದಕ್ಷಿಣೇಶ್ವರದ ದೇವಾಲಯದ ಪೂಜೆ ಮುಗಿಸಿ ಅದರ ಸುತ್ತಮುತ್ತಲೂ ಹರಡಿಕೊಂಡಿದ್ದ ಭತ್ತದ ಗದ್ದೆಗಳ ಬಳಿ ಸುತ್ತಾಡಲು ಹೊರಟರು.

ಅವರೊಂದಿಗೆ ಅವರ ಕೆಲ ಶಿಷ್ಯರೂ ಇದ್ದರು. ಪರಮಹಂಸರನ್ನು ಕಂಡು ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಕೆಲವು ರೈತರು ನಮಸ್ಕಾರ ಮಾಡಿ ಗೌರವ ಸೂಚಿಸಿದರು. ಕೆಲವರು ಕೆಲಪ್ರಶ್ನೆಗಳನ್ನು ಕೇಳಿ ತಮ್ಮ ಕುತೂಹಲವನ್ನು ತಣಿಸಿಕೊಂಡರು, ಸಮಸ್ಯೆಗಳಿಗೆ ಪರಿಹಾರ ಪಡೆದರು.

ಒಬ್ಬ ತರುಣ ರೈತ,  `ಸ್ವಾಮೀ, ತಾವು ಹೇಳುವುದೆಲ್ಲ ಸರಿಯೇ, ಆದರೆ ನನಗೆ ಭಗವಂತ ಇರುವುದರ ಬಗ್ಗೆಯೇ ಸಂದೇಹ ಮೂಡುತ್ತಿದೆ. ತಾವು ಹಿಂದೆ ಹೇಳಿದಂತೆ ಸಂಪೂರ್ಣ ಶೃದ್ಧೆಯಿಂದ ಅವನ ಪೂಜೆ ಮಾಡಿದೆ. ನನ್ನ ಜೀವನವನ್ನು ಹಸನಾಗಿ ಇಟ್ಟುಕೊಂಡೆ. ನನ್ನ ಶಕ್ತಿಯ ಮಿತಿಯಲ್ಲಿ ಎಲ್ಲರಿಗೂ ಸಹಾಯ ಮಾಡಿದೆ.
 
ಆದರೂ ದೇವರು ನನ್ನಿಂದ ಅಷ್ಟೇ ದೂರದಲ್ಲೇ ಉಳಿದಿದ್ದಾನೆ, ನನ್ನ ಮೇಲೆ ಕೃಪೆ ಮಾಡಲಿಲ್ಲ. ಆದ್ದರಿಂದ ನಾನು ಇಷ್ಟು ದಿನ ಮಾಡಿದ್ದೆಲ್ಲ ವ್ಯರ್ಥವಾಯಿತು, ನನ್ನ ಭಕ್ತಿಗೆ ಅರ್ಥವಿಲ್ಲ ಎನ್ನಿಸುತ್ತಿದೆ~ ಎಂದ.

ಪರಮಹಂಸರು ನಕ್ಕು, ದೂರದಲ್ಲಿ ಗದ್ದೆಗಳಲ್ಲಿ ಕೆಲಸಮಾಡುತ್ತಿದ್ದ ರೈತರನ್ನು ತೋರಿಸಿ, `ನೋಡು ಅಲ್ಲಿ ಎರಡು ತರಹದ ರೈತರಿದ್ದಾರೆ.
 
ಕೆಲವರು ತಲೆತಲಾಂತರದಿಂದ ರೈತರಾಗಿದ್ದವರು. ಮಳೆ ಬರಲಿ ಬಿಡಲಿ, ಗದ್ದೆಗಳನ್ನು ಉತ್ತು ಯಾವಾಗಲೂ ಸಜ್ಜಾಗಿ ಇಟ್ಟುಕೊಂಡಿರುತ್ತಾರೆ. ಬರಗಾಲ ಬಂದಾಗಲೂ ಹೊಲದಿಂದ ಬೆಳೆ ಬರುವುದಿಲ್ಲವೆಂದು ಗೊತ್ತಿದ್ದರೂ ತಮ್ಮ ಶ್ರಮದಿಂದ ಹೊಲದ ಕೆಲಸ ಮಾಡುತ್ತಲೇ ಇರುತ್ತಾರೆ.

ಇನ್ನು ಕೆಲವರು ಹಣ ಗಳಿಸಲೆಂದೇ ಕೃಷಿಗೆ ಬಂದವರು. ಬರಗಾಲವೆಂದು ಗೊತ್ತಾದ ತಕ್ಷಣ ಪ್ರಯತ್ನದಿಂದ ಏನು ಫಲ ಎಂದು ಹೊಲದ ಕಡೆಗೆ ಕಾಳಜಿ ಮಾಡುವುದನ್ನು ಬಿಡುತ್ತಾರೆ. ಹಾಗೆಯೇ ನಿಜವಾದ ಭಕ್ತ ಕೆಲಕಾಲ ಪ್ರಯತ್ನದ ನಂತರ ನಿರಾಶನಾಗಿ ಭಕ್ತಿಯನ್ನು ಬಿಡಬಾರದು.

`ಸಮುದ್ರದಿಂದ ಮುತ್ತುಗಳನ್ನು ಹೆಕ್ಕಿ ತೆಗೆಯುವವರನ್ನು ಕಂಡಿದ್ದೀಯಾ? ಅವರನ್ನು ಕೇಳಿ ನೋಡು. ಪ್ರತಿ ಬಾರಿ ಅವರು ಸಮುದ್ರದ ತಳಕ್ಕೆ ಮುಳುಗಿ ಹುಡುಕಾಡಿದಾಗ ಮುತ್ತು ಸಿಕ್ಕೇ ಸಿಗುತ್ತದೆಂಬ ಭರವಸೆ ಇಲ್ಲ. ಕೆಲವೊಮ್ಮೆ ಹತ್ತಾರು ಬಾರಿ ಮುಳುಗಿದರೂ ಬರಿಗೈಯಿಂದಲೇ ಬರಬೇಕಾಗುತ್ತದೆ.
 
ಅಯ್ಯೋ ಏನೂ ದೊರೆಯಲಿಲ್ಲವಲ್ಲ, ಬರಿಗೈಯಿಂದ ಬರಬೇಕಾಯಿತಲ್ಲ ಎಂದು ದುಃಖಿಸುತ್ತ ಮತ್ತೊಮ್ಮೆ ಮುಳುಗಿ ಪ್ರಯತ್ನಿಸದಿದ್ದರೆ ಮುತ್ತು ಸಿಗುವುದು ಅಸಾಧ್ಯ. ತಾನಾಗಿಯೇ ಮುತ್ತು ಸಮುದ್ರದ ತಳದಿಂದ ಹಾರಿ ಅವನ ಕೈ ಸೇರಲಾರದು.
 
ಹಾಗೆಯೇ ಸ್ವಲ್ಪ ಕಾಲದ ನಂತರ ಭಗವಂತನ ಕೃಪೆ ದೊರಕಲಿಲ್ಲವೆಂದು ನಿರಾಶೆಯಿಂದ ಭಕ್ತಿಯ ದಾರಿಯಿಂದ ವಿಮುಖರಾಗಬಾರದು. ನಿನ್ನ ಪ್ರಯತ್ನವನ್ನು ಇನ್ನೂ ಹೆಚ್ಚು ಮಾಡು, ಭಕ್ತಿ ಹೆಚ್ಚು ತೀಕ್ಷ್ಣವಾಗಲಿ, ಆಗ ಅವನ ಕೃಪೆ ಹರಿದು ಬರುತ್ತದೆ~ ಎಂದರು
ಮಾತು ರೈತನ ಮನಸ್ಸನ್ನು ನಾಟಿತು.

ನಮ್ಮ ಬದುಕಿನಲ್ಲೂ ಭಗವಂತನ ಕೃಪೆಗಾಗಿಯೋ ಯಾವುದೋ ಕಾರ್ಯಸಾಧನೆಗೋ ಸ್ವಲ್ಪವೇ ಪ್ರಯತ್ನದ ನಂತರ ನಿರೀಕ್ಷಿತ ಫಲ ಬರದಿದ್ದಾಗ ನಿರಾಶರಾಗುತ್ತೇವೆ, ಖಿನ್ನರಾಗುತ್ತೇವೆ, ಪ್ರಯತ್ನ ಬಿಟ್ಟು ಕೈ ಚೆಲ್ಲಿ ಕುಳಿತುಬಿಡುತ್ತೇವೆ.
 
ಆಗ ರಾಮಕೃಷ್ಣರ ಮಾತು ನೆನಪಾಗಬೇಕು. ಪ್ರಯತ್ನ ತೀಕ್ಷ್ಣವಾಗಬೇಕು, ಇಮ್ಮಡಿಯಾಗಬೇಕು. ಆಗ ಫಲ ಸ್ವತಃ ಸಿದ್ಧವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT