ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮೋಹತೆ

Last Updated 1 ಜೂನ್ 2011, 19:30 IST
ಅಕ್ಷರ ಗಾತ್ರ

ಅವರೊಬ್ಬ ಬಂಗಾರದ ವ್ಯಾಪಾರಿ. ತಲತಲಾಂತರದಿಂದ ಬಂದಿದ್ದ ವ್ಯವಹಾರ. ಅದರಂತೆಯೇ ತಲೆಮಾರುಗಳಿಂದ ಬಂದ ಶ್ರೀಮಂತಿಕೆ. ತಂದೆ ಬಹಳ ಬೇಗನೇ ಕಾಲವಾದ್ದರಿಂದ ಇವರು ಸಣ್ಣ ವಯಸ್ಸಿಗೇ ವ್ಯಾಪಾರವನ್ನು ಕೈಗೆ ತೆಗೆದುಕೊಳ್ಳುವ ಪರಿಸ್ಥಿತಿ ಒದಗಿತು. ಇವರು ಬಹಳ ಬುದ್ಧಿವಂತರು. ಸಣ್ಣ ವಯಸ್ಸಿನ ಹುಡುಗ ಈ ದೊಡ್ಡ ವ್ಯಾಪಾರವನ್ನು ಹೇಗೆ ನಿಭಾಯಿಸಿಯಾನು ಎಂದು ಎಲ್ಲರೂ ಚಿಂತೆಪಡುತ್ತಿದ್ದಾಗ ಅವರೆಲ್ಲರ ಚಿಂತೆಗಳನ್ನು ಹುಸಿಯಾಗಿಸಿ ಹಿಂದಿನವರು ಕಲ್ಪನೆ ಕೂಡ ಮಾಡದ ಮಟ್ಟಕ್ಕೆ ವ್ಯಾಪಾರವನ್ನು ಬೆಳೆಸಿದರು.

ಅವರು ಕೇವಲ ಬಂಗಾರವನ್ನು ನೆಚ್ಚಿ ಕೂರಲಿಲ್ಲ. ಬೇರೆ ಬೇರೆ ವ್ಯವಹಾರಗಳಲ್ಲಿ ಹಣ ತೊಡಗಿಸಿ ತಮ್ಮ ಸಂಪತ್ತನ್ನು ನೂರಾರು ಪಾಲು ವೃದ್ಧಿಸಿದರು. ಪುಣ್ಯವಶಾತ್ ಅವರನ್ನು ಕೈ ಹಿಡಿದ ಹುಡುಗಿ ಕೂಡ ತುಂಬ ತಿಳಿವಳಿಕೆ ಉಳ್ಳವರು. ಧರ್ಮದಲ್ಲಿ, ದೇವರಲ್ಲಿ ಬಲವಾದ ನಂಬಿಕೆ. ಸಂಸಾರ ಚೆನ್ನಾಗಿ ನಡೆಯುತ್ತಿತ್ತು.

ಕಾಲಕಳೆದಂತೆ ಅವರ ಮಕ್ಕಳು ದೊಡ್ಡವರಾದರು. ತಂದೆಗೆ ಸಹಕಾರಿಯಾಗಿ ನಿಂತರು. ಅವರಿಗೂ ಮದುವೆಯಾಯಿತು. ಹೀಗೆ ಕ್ರಮವಾಗಿ ಮರದಲ್ಲೇ ಹಣ್ಣಾಗುವ ಫಲದಂತೆ ಅವರ ಜೀವನ ಮಾಗಿತು. ನಿಧಾನವಾಗಿ ಮನಸ್ಸು ಸಂಸಾರ, ವ್ಯಾಪಾರಗಳಿಂದ ಹೊರಬಂದು ಭಗವಂತನ ಚಿಂತನೆಯಲ್ಲಿ ತೊಡಗಿತು. ಆಗೊಬ್ಬ ಗುರು ದೊರಕಿದರು.

ಒಂದು ದಿನ ಅದೇನಾಯಿತೋ? ಯಜಮಾನರು ಹೆಂಡತಿಯೊಡನೆ ಮಾತನಾಡಿ ನಂತರ ಮಕ್ಕಳ, ಸೊಸೆಯಂದಿರ ಸಭೆಯನ್ನು ಕರೆದರು.  ಮಕ್ಕಳೇ, ನಾನಿಷ್ಟು ದಿನ ಈ ವ್ಯಾಪಾರದಲ್ಲಿ ಮುಳುಗಿ ಹೋಗಿದ್ದೆ. ಈಗ ಅದು ಸಾಕು ಎನ್ನಿಸಿದೆ. ನಾವಿಬ್ಬರೂ ಇನ್ನು ಭಗವಂತನತ್ತ ಮುಖ ಮಾಡಿ ನಡೆಯಲು ತೀರ್ಮಾನಿಸಿದ್ದೇವೆ.

ಆದ್ದರಿಂದ ಎಲ್ಲವನ್ನೂ ತೊರೆದು ಇಬ್ಬರೇ ತೀರ್ಥಯಾತ್ರೆಗೆ ಹೊರಡುತ್ತೇವೆ. ನಮಗೆ ಹಣ, ಒಡವೆ, ಮನೆ ಯಾವುದೂ ಬೇಡ. ನೀವು ಎಲ್ಲವನ್ನೂ ಹಂಚಿಕೊಂಡು ಸುಖವಾಗಿ ಬದುಕಿ. ನಾವು ಇನ್ನು ಮೇಲೆ ಸರ್ವಸಂಗಪರಿತ್ಯಾಗಿಗಳು. ಮಕ್ಕಳು ಎಷ್ಟು ಅತ್ತು ಗೋಗರೆದು ಹೇಳಿದರೂ ಕೇಳಲಿಲ್ಲ. ಗಂಡ, ಹೆಂಡತಿ ಮನೆ ಬಿಟ್ಟು ನಡೆದರು.

ಅಷ್ಟು ವರ್ಷ ಸಮೃದ್ಧಿಯಲ್ಲಿ ಬದುಕಿದವರಿಗೆ ಪ್ರವಾಸ ಅಷ್ಟೊಂದು ಸುಲಭವಾಗಿರಲಿಲ್ಲ, ಆದರೆ ಮನದಲ್ಲಿ ಧೃಡತೆ ಇದ್ದುದರಿಂದ ಸಹನೆ ಸಾಧ್ಯವಾಯಿತು. ನಿಧಾನಕ್ಕೆ ಯಜಮಾನರಿಗೆ ತಮ್ಮ ಮನಸ್ಸಿನಲ್ಲಿ ಮೋಹವೆಲ್ಲ ಕರಗಿಹೋದಂತೆ ಎನ್ನಿಸಿತು. ಅದರ ಬಗ್ಗೆ ಒಂದು ಸಣ್ಣ ಅಭಿಮಾನವೂ ಬಂತು.

ಕಾಡಿನಲ್ಲಿ ನಡೆದು ಹೋಗುತ್ತಿದ್ದಾಗ ಯಜಮಾನರ ಕಣ್ಣಿಗೆ ದಾರಿಯಲ್ಲಿ ಬಿದ್ದಿದ್ದ ಒಂದು ವಜ್ರ ಕಾಣಿಸಿತು. ಇಡೀ ಜೀವನವನ್ನೇ ಬಂಗಾರ, ವಜ್ರಗಳಲ್ಲಿ  ಕಳೆದಿದ್ದ ಅವರಿಗೆ ಅದೊಂದು ಬೆಲೆಬಾಳುವ ವಜ್ರವೆಂದು ತಿಳಿಯಲು ತಡವಾಗಲಿಲ್ಲ. ತಕ್ಷಣ ಅವರು ವಜ್ರದ ಮೇಲೆ ತಮ್ಮ ಎಡಕಾಲನ್ನು ಊರಿನಿಂತು ತಮ್ಮ ಹೆಂಡತಿಗೆ ಮುಂದೆ ನಡೆಯಲು ಹೇಳಿದರು.

ತಮ್ಮ ಹೆಂಡತಿ ಆ ವಜ್ರವನ್ನೇನಾದರೂ ನೋಡಿ ಆಸೆಪಟ್ಟು ತಮ್ಮ ತ್ಯಾಗಬುದ್ಧಿಯನ್ನು ತೊರೆದುಬಿಡುತ್ತಾಳೋ ಎಂಬ ಹೆದರಿಕೆ ಅವರದು. ಆದರೆ ಆಕೆ ಅದನ್ನು ನೋಡಿಯಾಗಿತ್ತು. ತನ್ನ ಗಂಡ ಹಾಗೆ ಮಾಡಿದ್ದನ್ನು ಕಂಡು ಮುಗ್ಧಳಾಗಿ ಕೇಳಿದರು,  ನಿಮಗೆ ಇನ್ನೂ ಮನಸ್ಸಿನಲ್ಲಿ  ವಜ್ರ ಮತ್ತು ಮಣ್ಣಿನ ನಡುವೆ ವ್ಯತ್ಯಾಸ ಕಾಣುತ್ತಿದೆಯೇ? ಹಾಗಾದರೆ ಆ ಭೋಗಪ್ರಪಂಚವನ್ನು ಏಕೆ ಬಿಟ್ಟು ಬಂದಿರಿ?  ಆಕೆಗೆ ನಿಜವಾಗಿಯೂ ನಿರ್ಮೋಹತ್ವ ಸಾಧ್ಯವಾಗಿತ್ತು. ಮನಸ್ಸು ಪೂರ್ತಿ ಹದವಾಗಿತ್ತು, ಪ್ರಪಂಚ ವಿಮುಖವಾಗಿತ್ತು. ಗಂಡನಿಗೆ ತಕ್ಷಣ ತಿಳಿಯಿತು, ಆಸೆಗಳನ್ನು ತೊರೆಯುವುದರಲ್ಲಿ  ತಮ್ಮ ಹೆಂಡತಿ ತಮಗಿಂತ ಎಷ್ಟೋ ಮುಂದೆ ಹೋಗಿಬಿಟ್ಟಿದ್ದಾಳೆ.

ನಿರ್ಮೋಹ ಎಂದರೆ ವಸ್ತುಗಳಿಂದ ದೂರವಿರುವುದಲ್ಲ. ವಸ್ತುಗಳ ಮಧ್ಯೆ ಇದ್ದರೂ ಅವುಗಳಿಗೆ ಅಂಟಿಕೊಳ್ಳದೇ ಅವುಗಳ ಪ್ರಭಾವದಿಂದ ಪಾರಾಗುವುದು. ಅದು  ಪ್ರಯತ್ನದಿಂದ ಮಾತ್ರ ಸಾಧ್ಯವಾಗುವಂತಹದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT