ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀನೆಷ್ಟು ಕೊಡ್ತೀಯಾ?

Last Updated 9 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಒಂದು ದಿನ ಸಂಜೆ ಊರಿನಿಂದ ಬರುವಾಗ ಆತ ರಸ್ತೆಯಲ್ಲಿ ಅಚಾನಕ್ಕಾಗಿ ಸಿಕ್ಕ. ನನ್ನ ನೋಡಿ ಆಸೆ ತುಂಬಿದ ಕಣ್ಣುಗಳಿಂದ ನಕ್ಕ. ಅವನ ಗುರುತು ಹತ್ತಲಿಲ್ಲ. ಆತ ಮಾತ್ರ ನನ್ನ ನೋಡುತ್ತಲೇ ಹತ್ತಿರ ಬಂದ. ಅವನ ಬಟ್ಟೆ ಅಗತ್ಯಕ್ಕಿಂತ ಹೆಚ್ಚು ಕೊಳೆಯಾಗಿದ್ದವು. ಎಲೆ ಅಡಿಕೆ ತಂಬಾಕು ವಿಪರೀತ ತಿಂದು ಹಲ್ಲುಗಳು ತುಕ್ಕು ಹಿಡಿದಿದ್ದವು. ಕುಳ್ಳಗೆ ಕಪ್ಪಗಿದ್ದ ಅವನ ನಗುವಿನಲ್ಲಿ ಮಗುವಿನ ಆತ್ಮೀಯತೆ ಇತ್ತು.

ನನ್ನ ಮುಖ ದಿಟ್ಟಿಸುತ್ತಾ, ನೋಡಿದ್ಯಾ ಕಳ್ಳ, ನನ್ನ ಮರೆತೇ ಬಿಟ್ಟಿದ್ದೀಯಾ! ಮರೀದೆ ಏನು? ಈಗ ನೀವೆಲ್ಲಾ ದೊಡ್ಡ ಜನ ಕಣಪ್ಪ. ಸೂಟು, ಬೂಟು, ಶೋಕಿ ಬಂದ್ಮೇಲೆ ನಮ್ಮಂಥ ಜನ ಎಲ್ಲಿ ನೆನಪಿರ್ತಾರಾ ಹೇಳು ಎಂದ. ನಿಜವಾಗಿಯೂ ನನಗೆ ನೆನಪಾಗುತ್ತಿಲ್ಲ. ಯಾರಿವನು ಎಂಬುದೂ ಅರ್ಥವಾಗುತ್ತಿಲ್ಲ. ಕಕ್ಕಾಬಿಕ್ಕಿಯಾಗಿ ಸುಮ್ಮನೆ ನಿಂತೆ.

ನೀನು, ಮಲ್ಲಿಕಾರ್ಜುನ ಕಬ್ಬೂರು ಎಂ.ಎ. ಓದಿದ್ದು ನೆಂಪು ಮಾಡ್ಕೋ. ಅಲ್ಲಿ ನಾನೂ ಓದ್ತಾ ಇದ್ದೆ. ನೀವು ಅವಾಗವಾಗ ನಮ್ಮ ರೂಮಿಗೆ ಬರ್ತಾ ಇದ್ರಿ. ನೀವೆಲ್ಲಾ ಸೇರಿ ಕರಿಯ, ಕುಳ್ಳ, ಅಂತ  ನನಗೆ ಆಕ್ಲಾಸ ಮಾಡ್ತಿದ್ರಿ. ನಾನೂ ಬ್ಯಾಸರಾಗದೆ ನೆಗಾಡ್ತಾನೆ ಇರ್ತಿದ್ದೆ ನೋಡು! ಹೇ ಅದೇ ಕಣ್ಲೆ... ಉಪ್ಪಿಟ್ಟು, ಚಿತ್ರಾನ್ನ ಮಾಡಿದ್ದೆ. ನೀನು ತಿಂದು, ರಂಗಪ್ಪ ನೀನು ಮುಂದೆ ಒಳ್ಳೆ ಹೋಟ್ಲೇ ಇಡಬಹುದು ಕಣೋ ಅಂದಿದ್ದೆ. ನಾನು ಅದೇ ಎಕನಾಮಿಕ್ಸ್ ರಂಗಪ್ಪ ಕಣೋ. ನೋಡು ನೀನು ಹೇಳಿದಂಗೆ ಹೋಟ್ಲು ಮುಂದೇನೆ ನಿಂತಿದ್ದೀನಿ ಎಂದು ಅವನೇ ಪರಿಚಯ ಹೇಳಿಕೊಂಡ. ಓಹೋ! ಇಪ್ಪತ್ತು ವರ್ಷದ ಹಿಂದಿನ ರಂಗಪ್ಪ ಈಗ ಛಂಗನೆ ಎಲ್ಲಿಂದ ಬಂದ? ಅವನ ಸ್ಥಿತಿ ನೋಡಿ ನನ್ನ ಕರುಳೇ ಕಿವುಚಿದಂತಾಯಿತು.

ಹಳ್ಳಿಯ ಬಡತನದಿಂದ ನಲುಗಿ ಬಂದಿದ್ದ ರಂಗಪ್ಪನನ್ನು ಮೊದಮೊದಲು ನಾವೆಲ್ಲಾ ತುಂಬಾ ಸತಾಯಿಸಿದ್ದೆವು. ಕಿಚಾಯಿಸಿ, ತಮಾಷೆ ಮಾಡಿದರೆ ಜೊತೆಗೆ ಅವನೂ ನಗುತ್ತಿದ್ದ. ಅವಮಾನ, ಬೇಸರ, ಸಿಟ್ಟು ಅವನಿಗೆ ಗೊತ್ತೇ ಇರಲಿಲ್ಲ. ಪ್ರಾಯಶಃ ಗೊತ್ತಾದರೂ ಅದನ್ನಾತ ಎಂದೂ ತೋರಿಸಿಕೊಳ್ಳಲಿಲ್ಲ. ಹರಟೆ ಕೊಚ್ಚಿ, ಹೊಟ್ಟೆ ಹುಣ್ಣಾಗುವಂತೆ ನಕ್ಕು ಕೊನೆಗೆ ಅವನ ಕೈ ರುಚಿಯ ತಿಂಡಿ ತಿಂದು ಅವನ ರೂಮಿನಿಂದ ಜಾಗ ಖಾಲಿ ಮಾಡುತ್ತಿದ್ದೆವು. ರಂಗಪ್ಪನೂ ಎಂದೂ ನಮ್ಮನ್ನು ಬಿಟ್ಟು ಕದಲಿದವನಲ್ಲ. ನಾವೆಲ್ಲಿಯೋ ಅವನಲ್ಲಿ ಹಾಜರ್.

ಊರಿಂದ ಅವನಿಗೆ ಟೈಮಿಗೆ ಸರಿಯಾಗಿ ಯಾವತ್ತೂ ದುಡ್ಡು ಬರುತ್ತಿರಲಿಲ್ಲ. ಹಳ್ಳಿಯಲ್ಲಿ ಕೂಲಿ ಕೆಲಸ ಮಾಡುವ ಅವರಪ್ಪ ಕೂಲಿ ಸಿಕ್ಕಿಲ್ಲ, ದುಡ್ಡು ಹುಟ್ಟಿಲ್ಲ ಮಗನೇ, ಉಪವಾಸ ಬಿದ್ದರೂ ಓದು ಬಿಡಬೇಡ. ಹೆಂಗಾದರೂ ಓದಿ ಬಾ ಎಂದು ಒಂದು ಕಾರ್ಡ್ ಬರೆಸಿ ಹಾಕೋರು. ಆಗ ನಾವೆಲ್ಲಾ ಅವನ ಕೈ ಹಿಡಿಯುತ್ತಿದ್ದೆವು. 

ನಾನು ಓದಿ ದೊಡ್ಡ ಎಕನಾಮಿಕ್ಸ್ ಲೆಕ್ಚರರ್ ಆಗಿ ನಿಮ್ಮ ಋಣ ತೀರಿಸ್ತೀನಿ ಎಂದು ಅವನು ಕಣ್ಣು ತುಂಬಿಕೊಂಡು ಹೇಳೋನು. ಆ ಮಾತಿಗೆ ಕರಗಿ ನಾವೆಲ್ಲಾ ಒಟ್ಟಿಗೆ ಕೂತು ಅತ್ತಿದ್ದೆವು. ಆಗ ಸುಮ್ಮನಿರೋ ಕುಳ್ಳ ರಂಗ, ಲೀಲಾವತಿ ನಾಟ್ಕ ಆಡ್ಬೇಡ ಎಂದು ನಮ್ಮ ಬಸ್ಯಾ ಜೋರು ಹಾಕಿದ್ದ. ಮೊದಮೊದಲು ಅವನ ಅಣಕಿಸಿ ನಗುತ್ತಿದ್ದ ನಾವೆಲ್ಲಾ ಆಮೇಲೆ ಅವನನ್ನು ಕ್ಷಣವೂ ಬಿಟ್ಟಿರಲಾರದ ಸ್ಥಿತಿಗೆ ಬಂದೆವು. ರಂಗಪ್ಪ ನಮ್ಮ  ಜೀವದ ಜೀವವಾಗಿದ್ದ.

ಎಂ.ಎ ಪ್ರಥಮ ದರ್ಜೆಯಲ್ಲಿ ಪಾಸಾಗಿ ಅವತ್ತು ವಿಶ್ವವಿದ್ಯಾನಿಲಯದಿಂದ ಹೊರ ಹೋದ ರಂಗಪ್ಪ ಇವತ್ತು ಸಿಕ್ಕಿದ್ದಾನೆ. ಅದೂ ಈ ಸ್ಥಿತಿಯಲ್ಲಿ. ಏನಾಯಿತೆಂದು ಕೇಳಲೇಬೇಕು, ತಕ್ಷಣ ಅವನ ಕೈ ಹಿಡಿದು ಅಲ್ಲಿದ್ದ ಟೀ ಹೋಟೆಲ್ಲಿನ ಕಡೆಗೆ ನಡೆದೆ. ಆ ಹೋಟೆಲ್ಲಿನವನು ಥೂ ಅವನು ಹಾಫ್ ಕ್ರಾಕು ಸಾರ್. ಒಂದೆರಡು ರೂಪಾಯಿ ಬೀಡಿಗೆ ಕೇಳ್ತಾನೆ. ಬಿಸಾಕಿ ಕಳಿಸಿ, ಹೋಗ್ತಾನೆ. ಆ ಕೊಳಕನ್ನ ಇಲ್ಲಿಗೆ ಕರ್ಕೊಂಡು ಬಂದ್ರೆ ನನ್ನ ಗಿರಾಕಿ ಹಾಳಾಗ್ತಾವೆ ಎಂದು ಕೂಗಿಕೊಂಡನು.

ಇವರ ಸಹವಾಸವೇ ಬ್ಯಾಡ ಬಾ ರಂಗಪ್ಪ ಎಂದು ಅವನ ಕೈ ಹಿಡಿದು ಬೇವಿನ ಮರದ ನೆರಳಿಗೆ ಹೋದೆ. ಏನಾಯಿತೋ ಎಂದು ದುಃಖ ತುಂಬಿಕೊಂಡು ಕೇಳಿದೆ. ಮತ್ತೆ ಅದೇ ಹಳೇ ದರಿದ್ರ ಮುಗ್ಧ ನಗು. ಏನಾಗಿಲ್ಲ ಪ್ರೆಂಡೆ, ಎಲ್ಲಾ ಲಾಸ್ ಆತು ಅಂದ. ಏನ್ ಲಾಸೋ ಬಿಸ್‌ನೆಸ್ ಏನಾದರೂ ಮಾಡಿದೇನೋ ಎಂದೆ.  ಕತ್ತನ್ನು ಅಲ್ಲಾಡಿಸಿ ಹೇ ಅದಲ್ಲ ಪ್ರೆಂಡೆ. ಲೈಪು ಲಾಸಾತು ಎಂದ. ಏನಾಯಿತು ಬಿಡಿಸಿ ಹೇಳೋ ರಂಗ ಎಂಬ ನನ್ನ ಪ್ರಶ್ನೆಗೆ ಉತ್ತರವಾಗಿ ಜೇಬಿನಿಂದ ಒಂದು ಕಂತೆಗಳ ಸಂತೆಯನ್ನೇ ತೆಗೆದು ಬೀಸಿ ನನ್ನೆಡೆಗೆ ಒಗೆದ. ಅದರಲ್ಲಿ ಹರಿದು ಲಡಾಸಾದ ಕವರುಗಳು, ತುಂಡಾದ ಮಾರ್ಕ್ಸ್ ಕಾರ್ಡ್‌ಗಳು, ಜಾಬ್ ನ್ಯೂಸ್‌ ಪೇಪರಿನ ಕಟಿಂಗ್ಸ್‌ಗಳು, ಹೀಗೆ, ಏನೇನೋ ಚೂರಾದ ಪೇಪರುಗಳಿದ್ದವು. ನೋಡಿದೆ, ಒಂದಕ್ಕೊಂದು ಸಂಬಂಧವಿಲ್ಲ. ಎಲ್ಲಾ ರದ್ದಿಯಂತಾಗಿದ್ದವು.

ಏನಾರ ಒಂದು ಕೆಲಸಕ್ಕೆ ಅರ್ಜಿ ಬರ್ಕೊಡ್ತಿಯಾ ಮತ್ತೆ ಎಂದು ಅದೇ ನಗುವಿನಲ್ಲಿ ಕೇಳಿದ. ನಿನ್ನ ಒರಿಜಿನಲ್ ಮಾರ್ಕ್ಸ್ ಕಾರ್ಡ್ ಎಲ್ಲಾ ಹರ್ಕೊಂಡಿದ್ದಿಯಲ್ಲೋ ಮಾರಾಯ. ನೀನು ಎಸ್.ಎಸ್.ಎಲ್.ಸಿ, ಪಿಯುಸಿ, ಡಿಗ್ರಿ, ಎಂ.ಎ ಪಾಸು ಮಾಡಿದ್ದೀಯ ಅನ್ನೋದಕ್ಕೆ ಈಗ ಆಧಾರಗಳೇ ಇಲ್ವಲ್ಲೋ? ಕೆಲಸದ ಅರ್ಜಿಗೆ ಎಲ್ಲಾ ಹಾಕಬೇಕಲ್ಲ, ಈಗ ಏನು ಮಾಡ್ತೀಯಾ? ಎಂದು ಪ್ರಶ್ನಿಸಿದೆ.

ನಾನೇ ಬೇಜಾರಾಗಿ ಹರಿದು ಹಾಕಿದೆ ಕಣೋ. ಯಾರಿಗೆ ಕೇಳಿದ್ರು ಕೆಲ್ಸಾನೆ ಇಲ್ಲ ಅಂತಾರೆ. ಇನ್ನ ಆ ಪೇಪರ್ ತುಂಡು ತಗೊಂಡು ಏನ್ ಮಾಡೋದು? ಎಲ್ಲದಕ್ಕೂ ಹಣೇಬರ ಚೆನ್ನಾಗಿರಬೇಕು. ಏನಂತೀಯ? ಅದು ಬಿಡು ಈಗ, ಯಾವ್ದಾನ ಇರ್ಲಿ, ಒಟ್ನಲ್ಲಿ ಸೆಂಟ್ರಲ್ ಗೋರ್ಮೆಂಟ್ ಕೆಲಸಕ್ಕೆ ಅರ್ಜಿ ಬರ್ಕೊಡು ಮತ್ತೆ. ಅದಕ್ಕೆ ರಾಷ್ಟ್ರಪತಿ ಹೆಡ್ ಆಗಿರಬೇಕು ಕಣಪ್ಪ, ಇಲ್ಲಾಂದ್ರೆ ಚೆನ್ನಾಗಿರಲ್ಲ. ಈ  ರಾಷ್ಟ್ರಪತಿ ಕಲಾಂ ಅನ್ನೋರು ನಿಮ್ಮ ಪೈಕಿನೆ ಅಲ್ವೆ? ನಿಮ್ಮ ಜನ. ಅವರಿಗೊಂದು ಮಾತು ನಂಗೆ ಕೆಲ್ಸ ಕೊಡ್ಸಿ ಅಂತ ಹೇಳ್ತೀಯ ಪ್ರೆಂಡೆ? ಅದೇ ಮುಗ್ಧತೆಯಲ್ಲಿ ಕೇಳಿದ.  ನಾನು ನಿಡಿದಾದ ನಿಟ್ಟುಸಿರು ಬಿಟ್ಟು ಹೇಳಿದೆ. ನಂಗೆ ಪರಿಚಯವಿಲ್ಲ ರಂಗಪ್ಪ.

ಹೋಗ್ಲಿ ಬಿಡು, ನಾನು ಕೆಂಪನಳ್ಳಿ ರಂಗಪ್ಪ ಮನಸ್ಸು ಮಾಡಿದ್ರೆ ಡೀಸಿನೆ ಆಗಬೈದು ಪ್ರೆಂಡೆ. ಆದ್ರೆ ಬ್ಯಾಡಾಂತ ಬಿಟ್ಟೆ. ಯಾಕೆ ಅಂತೀಯಾ! ನೋಡು ಯಾರಾನ ನಿನ್ನಂಥವನು ಒಂದು ಸಣ್ಣ ಸೈನಿಗೆ ಅಂತ ಬಂದು ನನ್ನ ನೋಡಿ ಥೂ ಕರಿಯ, ಕುಳ್ಳಕ್ಕೆ ಇದಾನೆ. ಇವನ್ಯಾವ ಸೀಮೆ ಡೀಸಿ. ಇವನತ್ರ ನಂದೇನು ಮಾತು ಅಂತ ಮುಖದ ಮ್ಯಾಲೆ ಥೂ ಅಂತ ಉಗಿದ್ರೆ ಆ ಸೀಟಿಗೆ ಅವಮಾನ ನೋಡು, ಅದಕ್ಕೆ ನಾನು ಅದನ್ನು ಬ್ಯಾಡ ಅಂದಿದ್ದು. ಪ್ರೆಸ್ಟೀಜ್ ಇಸ್‌ ವೆರಿ ಇಂಪಾರ್ಟೆಂಟ್. ರಾಷ್ಟ್ರಪತಿ ಫೋನು ಮಾಡಿ ಯಾಕೆ ರಂಗಪ್ಪ ಹೋಗಲಿಲ್ಲ ಅಂತ ಕೇಳಿದ್ದರು. ನಾನು ಈಗ ಆಗಲ್ಲ, ಟೈಮಿಲ್ಲ ಅಂದೆ ಕಣೋ. ಮದ್ವೆಗಿದ್ವೆ ಆಗಬೇಕೋ ಬೇಡವೋ ಪ್ರೆಂಡೆ?

ನೋಡು ಮದ್ವೆ ಅಂದಾಗ ನೆನಪಾತು. ನಮ್ಮಪ್ಪ ನಿನಗೆ ಏನು ಕೆಲಸ ಇಲ್ಲ, ಎಲ್ಲೂ ಹೆಣ್ಣು  ಕೇಳಕ್ಕಾಗಲ್ಲ ಅಂದ. ಅವ್ವನತ್ರ ದುಡ್ಡು ಇಸ್ಕೊಂಡು ಎಲ್ಲಾ ಕಾಲೇಜಿಗೆ ಹೋಗಿ ಕೆಲಸ ಕೆಲಸ ಅಂದೆ. ಅವರು ಇಲ್ಲ ಇಲ್ಲ ಅಂದ್ರು. ಊರಿಗೆ ಬಂದೆ. ಅಪ್ಪ ಮತ್ತೆ ಕೂಲಿಗಾದ್ರು ಹೋಗು ಅಂದ. ಕೂಲಿಗೋದ್ರೆ, ನಮ್ಮೂರಾಗೆ ನೀನು ಒಬ್ಬನೇ ದೊಡ್ಡ ಇದ್ಯೆ ಕಲ್ತಿರೋನು, ಕೂಲಿ ನಾಲಿ ಮಾಡಿ ಊರಿನ ಮಾನ ಮರ್ಯಾದಿ ತೆಗೀಬ್ಯಾಡ ಅಂತ ಬುದ್ಧಿ ಹೇಳಿದ್ರು. ಅಲ್ಲಿಂದ ಹೋಟ್ಲು ಕ್ಲೀನರ್ ಆದೆ.

ಅವನು ತಿಂಡಿ ಊಟ ಬೀಡಿ ಬೆಂಕಿ ಪಟ್ನ ಕೊಟ್ಟು ವಾರಕ್ಕೆ ಹತ್ತು ಬಿಸಾಕೋನು ಕಣೋ. ಜಿಪುಣ ನನ್ಮಗ. ನೋಡು ಅದಕ್ಕೆ ಅದ್ಯಾವುದೂ ಬ್ಯಾಡಂತಾ ಈ ಸರ್ಕಲ್ ಹಿಡ್ಕಂಡಿದ್ದೀನಿ. ಯಾರೋ ನಿಮ್ಮಂಥ ಪುಣ್ಯಾತ್ಮರು ಭಿಕ್ಷೆ ಹಾಕ್ತಾರೆ. ಬೈತಾರೆ. ಎಲ್ಲಾ ಇಸ್ಕೊಳ್ತೀನಪ್ಪ. ನೀನೆಷ್ಟು ಕೊಡ್ತೀಯಾ ಕೊಡು ಎಂದು ಎರಡೂ ಕೈ ಒಡ್ಡಿ ನಿಂತನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT