ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಲಾದ ನಿರ್ಮಿತಂಗಳು

Last Updated 31 ಮಾರ್ಚ್ 2012, 19:30 IST
ಅಕ್ಷರ ಗಾತ್ರ

ಕಳೆದ ವಾರ ನೀವು ಓದಿದ ಬರಹವನ್ನು ಮುಗಿಸುತ್ತಿರುವಾಗ ನನ್ನ ವಿದ್ಯಾರ್ಥಿನಿ ಹೇಮಾ ಅವರ ಫೋನು ಬಂದಿತ್ತು. ಅವರಿಗೆ ನಾನು ಎಂದೋ ವಿವರಿಸಿದ್ದ ಅಲ್ಲಮನ ವಚನದ ಸಾಲು `ನೀರಲಾದ ನಿರ್ಮಿತಂಗಳು~ ಅನ್ನುವುದನ್ನು ಮಾತಿನ ಮಧ್ಯೆ ನೆನಪಿಸಿಕೊಂಡಿದ್ದರು.

ಕನಸು ಬಿತ್ತು.
ಹೋಗುತ್ತಾ ಇದ್ದೆ. ನಾನು ಅಸ್ಪಷ್ಟವಾಗಿ ಕಾಣುತಿದ್ದೆ. ಬೆನ್ನು, ತಲೆ ಮಾತ್ರ. ಗಿಡ ಮರಗಳೂ ಇದ್ದಾವೆ ಅನಿಸುತಿತ್ತು. ಸ್ಪಷ್ಟವಾಗಿ ಕಂಡದ್ದು ಮೆಟ್ಟಿಲುಗಳು. ಕಣ್ಣ ನೋಟದ ಅಗಲವನ್ನೆಲ್ಲ ತುಂಬುವ ಹಾಗೆ ಎತ್ತರ ಕಡಮೆ ಇದ್ದ ನಾಲ್ಕಾರು ಮೆಟ್ಟಿಲುಗಳು. ಹತ್ತಿದೆ.
 
ಇದು ನೀರುನೆಲ. ಇದು ನೀರಮೆಟ್ಟಿಲು. ಇಲ್ಲಿರುವುದೆಲ್ಲ ನೀರು ಮರ. ಮೆಟ್ಟಿಲ ಮೇಲೊಂದು ಹೂವಿನ ದಳ ಬಿದ್ದಿತ್ತು. ಒಂದೇ ದಳ. ಬೆಳ್ಳಗೆ. ಮಲ್ಲಿಗೆ ಹೂವಿನ ದಳ. ಸ್ಪಷ್ಟವಾಗಿ ಕಾಣುತಿತ್ತು. ದಳ ಒಂದಿಷ್ಟೆ ಮುರಿದಿತ್ತು. ದಳದ ಮೇಲೆ ಧೂಳು ಬಿದ್ದಿತ್ತು.

ಇದು ನೀರು ಹೂವು, ಇದು ನೀರು ಧೂಳು. ಈಗ ಸೂರ್ಯ ಹುಟ್ಟಿದರೆ ಬೀಳುವ ಬಿಸಿಲೂ ನೀರುಬಿಸಿಲು. ಬೆಳಗಿನ ಜಾವದ ಬೀಸುವ ಗಾಳಿಯೂ ನೀರುಗಾಳಿ. ಇಲ್ಲಿರುವ ಮನೆಗಳೆಲ್ಲ ನೀರುಮನೆಗಳೇ, ಬೀದಿಗಳೆಲ್ಲ ನೀರು ಬೀದಿಗಳೇ ಅನ್ನಿಸಿ-
ತಟ್ಟನೆ ಎಚ್ಚರವಾಯಿತು. ಎಲ್ಲಿದ್ದೇನೆ? ನಾನು ಮಲಗಿರುವುದು ನೀರುಮಂಚದ ಮೇಲೋ? ಗಂಟೆ ನೋಡಿದೆ. ರಾತ್ರಿ ಹನ್ನೆರಡು ಕಳೆದು ಹತ್ತು ನಿಮಿಷವಾಗಿತ್ತು.

ಫೆಬ್ರುವರಿಯ 28 ಕಳೆದು 29 ತೊಡಗಿತ್ತು. ಇಂಥ ಕನಸು ಯಾವತ್ತೂ ಬಿದ್ದಿರಲಿಲ್ಲ. ಬಹಳ ಹೊತ್ತು ಮತ್ತೆ ನಿದ್ರೆ ಬರಲಿಲ್ಲ.

ನೀವು ಗಮನಿಸಿದ್ದೀರೋ ಇಲ್ಲವೋ. ಕನಸನ್ನು ಕಾಣಬಹುದು, ಅನುಭವಿಸಬಹುದು, ಆದರೆ ಸಮರ್ಪಕವಾಗಿ ಹೇಳುವುದಕ್ಕೆ ಆಗುವುದೇ ಇಲ್ಲ. ನಮ್ಮ ಕನಸು ನಮಗಾಗಿ ಮಾತ್ರ ಹುಟ್ಟಿಕೊಂಡದ್ದೇ ಹೊರತು ಇತರರಿಗೆ ಹೇಳುವುದಕ್ಕಾಗಿ ಅಲ್ಲ.

ಕಾಣುತ್ತಿರುವಷ್ಟೂ ಹೊತ್ತು ಅದು ತೀರ ತೀರ ನಿಜ. ಕನಸಿನ ಭಾಷೆಯ ನಿಜವೇ ಬೇರೆ. ಕನಸು ಕಂಡವರಿಗೆ ಮಾತ್ರ ತೆರೆದುಕೊಳ್ಳುವ ರಹಸ್ಯ ಅದು. ಕನಸಿನ ಭಾಷೆಯ ಬಗ್ಗೆ ಮತ್ತೆ ನೋಡೋಣ.

ನನಗೆ ಬಿದ್ದ ಕನಸು ದೀರ್ಘವಾದದ್ದಲ್ಲ. ಬಹುಶಃ ಒಂದು ನಿಮಿಷಕ್ಕೂ ಕಡಮೆ ಅವಧಿಯದಿರಬೇಕು. ಪೂರಾ ಎಚ್ಚರವಾದಮೇಲೆ ಮನಸ್ಸು ಇನ್ನಷ್ಟು ವಿವರಗಳನ್ನು ಕಲ್ಪಿಸಿಕೊಂಡಿತು. ಇಲ್ಲಿನ ಬೇಲಿಯೂ ನೀರುಬೇಲಿ, ಹಕ್ಕಿಯೂ ನೀರುಹಕ್ಕಿ, ಹೀಗೆ. ಅಲ್ಲಮನ ವಚನದ ಈ ಮಾತಿನ ಮೊದಲು ಬರುವ ಕ್ರಿಯಾಪದ ನೆನಪಿಗೆ ಬಂದಿತು.

`ಅಳಿದವಲ್ಲಾ~. ಅಂದರೆ `ಅಳಿದವಲ್ಲಾ ನೀರಲಾದ ನಿರ್ಮಿತಂಗಳು~.
ಅಲ್ಲಮನ ವಚನದ ರೂಪಕವನ್ನು ನನ್ನ ಮನಸ್ಸು ಅಕ್ಷರಶಃ ನಿಜವೆಂದು ಗ್ರಹಿಸಿ ಇಂಥ ಕನಸನ್ನು ಕಟ್ಟಿ ತೋರಿರಬೇಕು ನನಗೆ.
 
ಯಾವ ಮಾತು, ಯಾರ ಮಾತು ಹೇಗೆ ಮನಸ್ಸಿನ ಒಳಗೆ, ಒಳಗೇ ಹೋಗಿ ಮನೆಮಾಡಿಕೊಂಡು ಹೀಗೆ ತಟ್ಟನೆದ್ದು ಬಂದು ದರ್ಶನ ಕೊಡುತ್ತದೋ ಊಹಿಸಲೂ ಆಗುವುದಿಲ್ಲ.
 
ಎಷ್ಟೋ ವರ್ಷಗಳು ಕಳೆದಿದ್ದರೂ, ಸುಮಾರು ಐವತ್ತು ವರ್ಷಗಳಿಗೂ ಹೆಚ್ಚೇ ಆಗಿರಬೇಕು, ಆ ಘಟನೆ ನೆನಪಿದೆ. ಆಗ ನಾನು ಚಿತ್ರದುರ್ಗದಲ್ಲಿದ್ದೆ. ಏಳನೆಯ ತರಗತಿಯಲ್ಲಿ ಓದುತಿದ್ದೆ. ಬೆಂಗಳೂರಿಗೆ ಬಂದಿದ್ದೆವು. ಬರುತ್ತಾ ಕಾರಿನಲ್ಲಿ ಕೂತು ಶೇಕ್ಸ್‌ಪಿಯರನ ನಾಟಕ ಕಥೆಗಳು ಅನ್ನುವ ಪುಸ್ತಕ ಓದುತಿದ್ದೆ.
 
ಅದರಲ್ಲಿ ಮ್ಯಾಕ್‌ಬೆತ್ ಕಥೆ. ಬೆಂಗಳೂರಿಗೆ ಬರುವ ಹೊತ್ತಿಗೆ ಸಂಜೆಯಾಗಿತ್ತು. ರಾತ್ರಿ ಊಟ ಮುಗಿಸಿ ಮಲಗಿದೆ. ಬೆಳಗ್ಗೆ ಎದ್ದ ಮೇಲೆ ನಮ್ಮಮ್ಮ ಬೈದರು. ಅದೇನದು, ರಾತ್ರಿಯೆಲ್ಲ ನೀನು ಚೂರಿ ಚೂರಿ ಅನ್ನುತ್ತ ಎದ್ದು ದಿಂಬಿನ ಕೆಳಗೆಲ್ಲ ಹುಡುಕುತಿದ್ದೆ. ಏನೇನೋ ಕತೆ ಪುಸ್ತಕ ಎಲ್ಲ ಓದಬಾರದು ಇನ್ನುಮೇಲೆ ಅಂತ ಬೈದಿದ್ದರು.

ಮ್ಯಾಕ್‌ಬೆತ್ ಕಣ್ಣಿಗೆ ಆಕಾಶದಲ್ಲಿ ತೇಲಿಕೊಂಡು ಬಂದ ಹಾಗೆ ಕಾಣುವ ಚೂರಿ, ಅವನ ಕೈಯಿಂದ ಹೆಂಡತಿ ಕಿತ್ತುಕೊಂಡ ಚೂರಿ, ನಿದ್ದೆ ಹೋದ ಕಾವಲುಗಾರರ ಪಕ್ಕದಲ್ಲಿಟ್ಟ ಚೂರಿ ನನ್ನ ಮನಸ್ಸಿನಲ್ಲಿ ಉಳಿದುಬಿಟ್ಟಿತ್ತು ಅಂತ ಕಾಣುತ್ತದೆ. ಕನಸು ನೆನಪಿಲ್ಲ, ದಿಂಬಿನ ಕೆಳಗೆ ತಡಕಿದ್ದೂ ನೆನಪಿಲ್ಲ. ಕನ್ನಡದಲ್ಲಿ ಓದುತಿದ್ದ ಇಂಗ್ಲಿಶ್ ಕತೆ ನಿದ್ದೆಯಲ್ಲೆ ನಿಜವಾಗಿ ಕಂಡಿರಬೇಕು, ನನಗೇ ಗೊತ್ತಿಲ್ಲದೆ ಚೂರಿಗೆ ತಡಕಾಡಿರಬೇಕು. ಅಮ್ಮ ಹೇಳಿದ್ದರಿಂದ ನನಗೆ ಕನಸು ಬಿದ್ದು ಹಾಗೆ ಮಾಡಿರಬೇಕು ನಾನು ಅಂತ ಅಂದುಕೊಂಡೆ.

ನೀರಲಾದ ನಿರ್ಮಿತಂಗಳು ಅನ್ನುವ ನುಡಿಗಟ್ಟೇ ನಮ್ಮ ದಿನನಿತ್ಯದ ಮಾತಿನ ಸತ್ಯದ ಉಲ್ಲಂಘನೆ. ನಮ್ಮ ಎಚ್ಚರದ ಅನುಭವದ ಉಲ್ಲಂಘನೆ. ಕವಿ ಗೆಳೆಯ ಜೀವಯಾನದ ಮಂಜುನಾಥ್ ನನ್ನ ಕನಸನ್ನು ಕೇಳಿ ಹೇಳಿದ್ದು ಬೇರೆ ಥರ. ಭೂಮಿ, ನೀರು, ಬೆಂಕಿ, ಗಾಳಿ, ಆಕಾಶ ಈ ಎಲ್ಲ ಪಂಚಭೂತಗಳೂ ಸೇರಿ ಆಗಿರುವ ಸೃಷ್ಟಿಯ ಬದಲಾಗಿ ನೀರು ಒಂದರಿಂದಲೇ ಎಲ್ಲವೂ ಸೃಷ್ಟಿಯಾಗಿರುತ್ತಿದ್ದರೆ, ಉಳಿದ ಭೂತಗಳೆಲ್ಲ ಇರದಿದ್ದರೆ ಹೇಗಿರುತಿತ್ತೋ ಹಾಗಿದೆ ನಿಮ್ಮ ಕನಸು ಅಂದರು.

ನಾನು ನೀರುಕನಸು ಕಂಡು ಎಚ್ಚರವಾದಮೇಲೆ ಅಂದುಕೊಂಡದ್ದೇ ಬೇರೆ. ಭಾಷೆಯ ಸುಳ್ಳನ್ನು ಅಲ್ಲಮ ಹೇಳುತಿದ್ದಾನೆ. ಭಾಷೆಯ ತುಂಬ ಇರುವುದು ಪರಿಕಲ್ಪನೆಗಳೇ. ಕಣ್ಣಿಗೆ ಕಾಣದ, ಕೈಗೆ ಸಿಗದ, ವಿಚಾರಗಳಿಗೆ, ಐಡಿಯಾಗಳಿಗೆ ಖಚಿತವಾದ ರೂಪಧಾರಣೆ ಮಾಡಿಸಿ, ಅರ್ಥದ ಚೌಕಟ್ಟಿನಲ್ಲಿ ಕೂರಿಸಿ, ಅದನ್ನೇ ನಿಜವೆಂದು ನೆಚ್ಚಿ ವ್ಯವಹರಿಸುವುದಕ್ಕೆ ತೊಡಗುತ್ತೇವೆ. ಅವೆಲ್ಲ ಕಲ್ಪಿತಗಳು, ಪರಿಪರಿಯಾದ ಪರಿಕಲ್ಪನೆಗಳು, ಭಾಷೆಯಲ್ಲೇ ನಿರ್ಮಿಸಿಕೊಂಡ ನಿರ್ಮಿತಿಗಳು. ಅವು ಎಲ್ಲವೂ ಅಳಿಯುತ್ತವೆ ಅನ್ನುತಿದ್ದಾನೆ.

ಆದರೂ ನಮ್ಮ ಎಚ್ಚರದ ಬದುಕನ್ನು ನಾವೇ ಕಲ್ಪಿಸಿಕೊಂಡಿರುವ ರೂಪಕಾರ್ಥಗಳೇ ಆಳುತ್ತವೆ! ಮೇಲೆ ಮತ್ತು ಕೆಳಗೆ ಅನ್ನುವ ಎರಡು ತೀರ ಸಾಮಾನ್ಯ ಪದಗಳನ್ನೇ ನೋಡಿ. ಜಾತಿಯಲ್ಲಿ `ಮೇಲು ಜಾತಿ~, `ಕೆಳಜಾತಿ~ ಇರುವ ಹಾಗೆಯೇ ಸಾಮಾಜಿಕವಾಗಿ ಮೇಲು ವರ್ಗ ಕೆಳವರ್ಗಗಳೂ ಅವು ಎರಡರ ನಡುವೆ ಮಧ್ಯಮ ವರ್ಗವೂ ಇವೆಯಷ್ಟೆ.
 
ಅಧಿಕಾರದ ಶ್ರೇಣಿಯಲ್ಲಿ `ಮೇಲಿನ~ ಅಧಿಕಾರಿಗಳೂ ಇರುತ್ತಾರೆ, ಮೇಲಿನವರು ಆಜ್ಞೆಮಾಡುತ್ತಾರೆ, ಉಳಿದವರು ಅದನ್ನು ಪಾಲಿಸಬೇಕಾಗುತ್ತದೆ. ಮೇಲು-ಕೀಳು ಅನ್ನುವುದು ನೀತಿಯ, ಧರ್ಮದ, ಸಮಾಜದ, ಅಧಿಕಾರದ, ಅಂತಸ್ತಿನ ರೂಪಕಗಳೂ ಆಗಿ ಬಳಕೆಯಾಗುತ್ತವೆ. ಈ ರೂಪಕಾರ್ಥಗಳು ಅನುಲ್ಲಂಘನೀಯ ಅನ್ನುವ ಹಾಗೆ ನಮ್ಮನ್ನು ಆಳತೊಡಗುತ್ತವೆ.

ರೂಪಕಗಳ ಈ ಜಾಲವನ್ನು ಮುರಿಯುವುದಕ್ಕೆ ವಿರೋಧಗಳನ್ನು ಬೆಸೆಯಬೇಕು ಅಥವ ಹೊಸ ರೂಪಕಗಳನ್ನು ಸೃಷ್ಟಿಸಬೇಕು, ಇಲ್ಲವೇ ರೂಪಕದ ಜಾಲ ಮನಸ್ಸಿಗೆ ಮುಟ್ಟುವ ಹಾಗೆ ವಿವರಿಸಿ ಬಿಡಿಸಬೇಕು. ವಿರುದ್ಧಾರ್ಥಗಳನ್ನು, ಅಸಾಧ್ಯ ಅರ್ಥಗಳನ್ನು ಬೆಸೆದು ತಬ್ಬಿಬ್ಬುಗೊಳಿಸಿ ಹೊಸನೋಟವನ್ನು ಕೊಡುವ ದಾರಿ ಅಲ್ಲಮನದ್ದು.
 
ಬಸವಣ್ಣ ರೂಪಕಗಳ ಅರ್ಥವನ್ನು ತಲೆಕೆಳಗು ಮಾಡಿ ಹೊಸ ಸಾಧ್ಯತೆಯನ್ನು ಸೂಚಿಸುತ್ತಾನೆ. `ಕೀಳಿಗಲ್ಲದೆ ಹಯನು ಕರೆಯುವುದಿಲ್ಲ, ಕೀಳಾಗದೆ ಮೇಲಾಗಲು ಒಲ್ಲೆನು~ ಅನ್ನುವ ಅವನ ಮಾತನ್ನೇ ನೋಡಿ. ನಡುಗನ್ನಡದ ಕಾಲದಲ್ಲಿ `ಕೀಳು~ ಅನ್ನುವ ಮಾತಿಗೆ ಹಸುವಿನ ಕರು ಅನ್ನುವ ಅರ್ಥವೂ ಇತ್ತು. ಇಲ್ಲಿ ಆ ಅರ್ಥವನ್ನೂ ಇಟ್ಟುಕೊಂಡು ನಾನು ಮೇಲಾಗುವುದಿಲ್ಲ ಕೀಳೇ ಆಗುತ್ತೇನೆ ಅನ್ನುತ್ತಾನೆ.
 
ಕಲ್ಪಿತ ಮೇಲುತನಕ್ಕಿಂತ ಕೀಳು ಆಗುವುದೇ ಅಪೇಕ್ಷಣೀಯ ಅನ್ನುವ ದನಿ ಹೊರಡಿಸುತ್ತಾನೆ. ಹಾಗೆ ನೋಡಿದರೆ ಭಕ್ತಿಯುಗದ ರಚನೆಗಳೆಲ್ಲ ಭಾಷೆಯಲ್ಲಿ ಒಪ್ಪಿತವಾಗಿರುವ ಅಧಿಕಾರದ ರೂಪಕಗಳನ್ನು ತಲೆಕೆಳಗು ಮಾಡುವ ಕೆಲಸದಲ್ಲೇ ತೊಡಗಿರುವುದನ್ನು ಗಮನಿಸಬಹುದು.

ಎಲ್ಲರೂ ಸಾಮಾನ್ಯವಾಗಿ ಮೌಲ್ಯಗಳು ಎಂದು ಒಂದಿಷ್ಟೂ ವಿಚಾರಿಸದೆಯೇ ಒಪ್ಪಿಕೊಳ್ಳುವ ದೇಶಪ್ರೇಮ, ರಾಷ್ಟ್ರಭಕ್ತಿ ಇಂಥ ಮೌಲ್ಯಜಾಲಗಳ ಸಿಕ್ಕನ್ನು ಕುಮಾರವ್ಯಾಸನಂಥ, ಟಾಲ್ಸ್‌ಟಾಯ್‌ನಂಥ ಲೇಖಕರು ಬಿಡಿಸಿ ತೋರಿಸುತ್ತಾರೆ.

ಮಹಾಭಾರತದ ಯುದ್ಧ ಮುಗಿದಮೇಲೆ ಧರ್ಮರಾಯ ದುರ್ಯೋಧನನ ಅರಮನೆಯಲ್ಲಿ, ಭೀಮ ದುಃಶಾಸನನ ಅರಮನೆಯಲ್ಲಿ, ಅರ್ಜುನ ದ್ರೋಣರ ಅರಮನೆಯಲ್ಲಿ ವಾಸಕ್ಕೆ ತೊಡಗಿದಮೇಲೆ (ಇದೂ ಅದ್ಭುತ ವ್ಯಂಗ್ಯವಲ್ಲವೇ!) ದುರ್ಯೋಧನನ ಸೇವೆಯಲ್ಲಿದ್ದ ಭ್ರಷ್ಟ ಅಧಿಕಾರಿಗಳೇ ಧರ್ಮಜನ ಆಳ್ವಿಕೆಯಲ್ಲೂ ಮುಂದುವರೆಯುತ್ತ (ರಾಜಕೀಯ ಪಲ್ಲಟಕ್ಕೆ ನಿಜವಾಗಿ ಅರ್ಥವಿದೆಯೇ!) ಹಸ್ತಿನಾಪುರದ ಜನ ಮಾತ್ರ ಮೊದಲಿನಂತೆಯೇ ಹಾಗೇ ಯಾವ ವ್ಯತ್ಯಾಸವೂ ಇಲ್ಲದೆ ಬದುಕುತಿದ್ದರು ಅನ್ನುತ್ತಾನೆ ಕುಮಾರವ್ಯಾಸ.
 
ಯುದ್ಧಭೂಮಿಯಲ್ಲಿ ಮುಂದಿನ ಕ್ಯಾಂಪಿಗೆ ಸಾಗುತ್ತಿರುವ ಸೈನಿಕರ ಮನಸ್ಸಿನಲ್ಲಿ ರಾತ್ರಿಗಾದರೂ ಕಣ್ಣು ತುಂಬ ನಿದ್ದೆಮಾಡುವ ಅವಕಾಶ ಸಿಕ್ಕೀತೆ, ಒಳ್ಳೆಯ ಊಟ ಸಿಕ್ಕೀತೆ, ಹೊಸ ಬೂಟು, ಕಂಬಳಿ ಯಾವಾಗ ಕೊಡುತ್ತಾರೋ, ಸಂಬಳ ಈ ತಿಂಗಳಾದರೂ ಸರಿಯಾಗಿ ಬರುತ್ತದೋ, ಮನೆಯವರ ಪತ್ರ ಓದಲು ಸಿಕ್ಕೀತೆ ಇಂಥ ಯೋಚನೆಗಳು ತುಂಬಿರುತ್ತವೆಯೇ ಹೊರತು ತಾನು ಮಹಾನ್ ದೇಶಪ್ರೇಮದ, ರಾಷ್ಟ್ರ ರಕ್ಷಣೆಯ ಕರ್ತವ್ಯದಲ್ಲಿ ತೊಡಗಿದ್ದೇನೆ ಅನ್ನುವ ಯೋಚನೆಯ ನೆರಳೂ ಸುಳಿಯುವುದಿಲ್ಲ ಅನ್ನುತ್ತಾನೆ ಟಾಲ್ಸ್‌ಟಾಯ್. ದೇಶಪ್ರೇಮ, ರಾಷ್ಟ್ರ ರಕ್ಷಣೆ ಇವೆಲ್ಲ ಎಂದೂ ಯುದ್ಧದ ಅನುಭವವೇ ಇರದ ಜನ ಊದಿ ಉಬ್ಬಿಸಿಕೊಂಡಿರುವ ಬಣ್ಣದ ಬಲೂನುಗಳು ಅನ್ನುತ್ತಾನೆ.
 
ನೆಪೋಲಿಯನ್ ದಾಳಿ ಮಾಡಿದ್ದಾಗ, ರಷಿಯ ಸೋಲುತಿದ್ದಾಗ ಕೂಡ ಮಾಸ್ಕೋದಲ್ಲಿ, ಪೀಟರ್ಸ್‌ಬರ್ಗಿನಲ್ಲಿ ನಡೆಯುತ್ತಿದ್ದ ಮೇಜವಾನಿಗಳು, ಕಾವ್ಯವಾಚನಗಳು, ದಿನ ನಿತ್ಯದ ಕಲಹ ಸಲ್ಲಾಪಗಳು, ಪ್ರೀತಿ, ವಿರಸ, ಮದುವೆ, ವಿಚ್ಛೇದನ, ರಾಜನ ಕೊಲ್ಲುವ ಆಸ್ಥಾನದ ಸಂಚು ಸನ್ನಾಹ ಎಲ್ಲವೂ ಹಾಗೆಯೇ ನಡೆದಿದ್ದವು ಅನ್ನುತ್ತಾನೆ. ಚಾರಿತ್ರಿಕ ನೋಟಕ್ಕೆ ಯಾವುದೋ ಒಂದು ಯುಗ ವೀರ ಯುಗವಾಗಿಯೋ, ಯಾವುದೋ ಕಾಲ ಘಟ್ಟದ ಜನ ಮಹಾನ್ ದೇಶಭಕ್ತರಾಗಿಯೋ ಕಾಣಬಹುದು, ಆದರೆ ಮನುಷ್ಯ ಬದುಕಿನ ವಾಸ್ತವ ಅರಿತಾಗ ಕಾಣುವುದೇ ಬೇರೆ ಅನ್ನುತ್ತಾನೆ.

ರೂಪಕವನ್ನು ನಿರ್ಮಿಸುವ, ಅರ್ಥಮಾಡಿಕೊಳ್ಳುವ ಶಕ್ತಿ ಇರದಿದ್ದರೆ ಬದುಕುವುದಕ್ಕೇ ಆಗುವುದಿಲ್ಲ. ಹಾಗೆಯೇ ನಾವೇ ಕಲ್ಪಿಸಿಕೊಂಡ ರೂಪಕಗಳೇ ಪರಮಸತ್ಯಗಳಾಗಿ ನಮ್ಮನ್ನು ಆಳತೊಡಗಿದರೂ, ಕನಸಿನ ಚೂರಿಯಂತೆ ಇರಿಯತೊಡಗಿದರೂ ಬದುಕು ಅಸಹನೀಯ. ವಚನಗಳಲ್ಲಿ ಬರುವ `ನೀರು~ ಅನ್ನುವ ಮಾತಿಗೆ ಮನಸ್ಸು ಅನ್ನುವ ಅರ್ಥವೂ ಇದೆ ಎಂದು ವ್ಯಾಖ್ಯಾನಕಾರರು ಹೇಳುತ್ತಾರೆ.
 
ರೂಪಕವೆನ್ನುವುದು ಮನುಷ್ಯ ಮನಸ್ಸು ಬದುಕಿನ ಅನುಭವಗಳನ್ನು ಅರ್ಥಮಾಡಿಕೊಳ್ಳಲು ಭಾಷೆಯಲ್ಲಿ ಕೆತ್ತಿಕೊಂಡಿರುವ ರೂಪಗಳು. ಭಾಷೆಯನ್ನು ಹರಿಯುವ ನದಿ ಅನ್ನುವುದು ಹೇಳಿ ಹೇಳಿ ಸವೆದ ಮಾತು. (ನೀರು ಸವೆಯುತ್ತದೆಯೇ ಅನ್ನುತ್ತಿದೆ ನನ್ನ ಮನಸ್ಸು!).
 
ನೀರೆಂಬ ಮನಸ್ಸು, ನೀರೆಂಬ ಭಾಷೆಯನ್ನು ಬಳಸಿ ಕಟ್ಟಿಕೊಂಡಿರುವುದೆಲ್ಲ ನೀರಲಾದ ನಿರ್ಮಿತಂಗಳು, ಅವೆಲ್ಲ ಅಳಿಯುತ್ತವೆ ಅನ್ನುವುದು ದೊಡ್ಡ ದರ್ಶನ. ನಿರ್ಮಿಸದೆ ಬದುಕಿಲ್ಲ, ನಿರ್ಮಿಸಿದ್ದು ಉಳಿಯುವುದಿಲ್ಲ. ನೀರಿನ ಹಾಗೇ, ಚೂರಿಯ ಹಾಗೇ ರೂಪಕ ಕೂಡ ಅನಿವಾರ್ಯ; ಆದರೆ, ರೂಪಕ ಸೂಚಿಸುವ ಸತ್ಯ ಅಸ್ಥಿರ. ಈ ಮಾತು ರೂಪಕ ಮತ್ತು ಮನುಷ್ಯ ಮನಸ್ಸಿನ ಸಂಬಂಧವನ್ನು ಅರಿಯಲು ಪ್ರಚೋದಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT