ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಹಕ್ಕು: ಮರುಚಿಂತನೆಯ ಸವಾಲು

Last Updated 8 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಕಾವೇರಿದ ದಕ್ಷಿಣ ಕರ್ನಾಟಕದಲ್ಲಿ ಈ ಕೆಳಗಿನ ಮಾತುಗಳು ಅಪಥ್ಯವೆನಿಸಬಹುದು. ಕಾವೇರಿಯ ನೀರಿಲ್ಲದೆ ನನ್ನ, ನನ್ನ ಸಮುದಾಯದ ಬದುಕು ದುಸ್ತರ ಎನ್ನುವ ಅರಿವಿಟ್ಟುಕೊಂಡು, ಎಚ್ಚರಿಕೆ- ಜವಾಬ್ದಾರಿಗಳಿಂದ ಕೆಲವು ವಾಸ್ತವಿಕ ವಿಚಾರಗಳನ್ನು ದಾಖಲಿಸುತ್ತಿದ್ದೇನೆ.

ಸರ್ವೋಚ್ಚ ನ್ಯಾಯಾಲಯವು ಪ್ರತಿದಿನವೂ 15 ಸಹಸ್ರ ಕ್ಯುಸೆಕ್‌ ನೀರನ್ನು ಬಿಡುವಂತೆ ಆದೇಶಿಸಿರುವುದನ್ನು ನಮ್ಮ ಸಮಸ್ಯೆ ಎಂದು ನಾವು ಭಾವಿಸುತ್ತಿದ್ದೇವೆ. ಆದರೆ ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಯಿದು: ಕರ್ನಾಟಕದಲ್ಲಿ ಬೀಳುವ ಮಳೆಯ ಮೂಲಕ ಕಾವೇರಿ ಮತ್ತು ಅದರ ಉಪನದಿಗಳಲ್ಲಿ ಸಂಗ್ರಹವಾಗುವ ನೀರಿನ ಮೇಲೆ ಕನ್ನಡಿಗರಿಗೆ ಮೊದಲ, ಸಮಗ್ರ ಮತ್ತು ನಿರಂಕುಶ ಹಕ್ಕು ಇದೆ ಎನ್ನುವುದನ್ನು ನ್ಯಾಯಾಲಯಗಳಾಗಲಿ, ನ್ಯಾಯಮಂಡಳಿ

ಯಾಗಲಿ (ಟ್ರಿಬ್ಯುನಲ್) ಅಥವಾ ಕೇಂದ್ರ ಸರ್ಕಾರವಾಗಲಿ ಒಪ್ಪುವುದಿಲ್ಲ. ಆದರೆ ನಮ್ಮ ವಾದಗಳನ್ನು ಈ ಅರಿವಿನ ಆಧಾರದ ಮೇಲೆಯೇ ಮಾಡುತ್ತಿದ್ದೇವೆ. ಬೇರೆಯವರು ನಮ್ಮ ವಾದವನ್ನು ಒಪ್ಪದಿರುವುದಕ್ಕೆ ಇರುವ ಕಾರಣವು ಸರಳವಾದುದು.

ಜಾಗತಿಕವಾಗಿ ಎಲ್ಲರೂ ಒಪ್ಪಿರುವ ನೀರಿನ ಹಂಚಿಕೆಯ ನ್ಯಾಯತತ್ವಗಳ ಪ್ರಕಾರ ಯಾವುದೇ ನದಿಯ ಕೊಳ್ಳದ ಕೆಳಗಿನ ರಾಜ್ಯಗಳಿಗೂ (ಅದರಲ್ಲೂ ನದಿಯ ನೀರನ್ನು ಐತಿಹಾಸಿಕವಾಗಿ ಮೊದಲೇ ಬಳಸುತ್ತಾ ಬಂದಿರುವ ರಾಜ್ಯಗಳಿಗೆ) ನದಿಯಲ್ಲಿ ಹರಿಯುವ ನೀರಿನ ಮೇಲೆ ಹಕ್ಕಿದೆ.

ಹಕ್ಕಿನ ಪ್ರಮಾಣ ಎಷ್ಟಿರಬೇಕು ಎಂದು ನಾವು ಪ್ರಶ್ನಿಸಬಹುದು. ಮೊದಲ ಬಳಕೆಯ ಹಕ್ಕನ್ನು ಸ್ಥಾಪಿಸಿದ ವಿಧಾನ ಸರಿಯಿರಲಿಲ್ಲ, ಅದು ಅಸಮಾನ ಹಂಚಿಕೆಗೆ ದಾರಿ ಮಾಡಿಕೊಟ್ಟಿದೆ ಎಂದು ವಾದಿಸಬಹುದು. ಕಾವೇರಿಗೆ ಸಂಬಂಧಿಸಿದಂತೆ ಕಳೆದ ನಲವತ್ತೈದು ವರ್ಷಗಳಿಂದ ಇಂತಹ ವಾದವೊಂದನ್ನು ಕರ್ನಾಟಕವು ಎಲ್ಲ ವೇದಿಕೆಗಳಿಂದಲೂ ಮುಂದಿಟ್ಟಿದೆ.

ಹೇಮಾವತಿ, ಹಾರಂಗಿ, ಕಬಿನಿ ಜಲಾಶಯ ಯೋಜನೆಗಳನ್ನು ರೂಪಿಸಿ, ಕಾರ್ಯಗತಗೊಳಿಸುವಾಗ ಮತ್ತು ತದನಂತರದಲ್ಲಿ ಕಾವೇರಿ ಟ್ರಿಬ್ಯುನಲ್‌ನ ಮುಂದೆ ನಮ್ಮ ಪಾಲಿನ ನೀರಿಗಾಗಿ ಹೋರಾಡುವಾಗ ಐತಿಹಾಸಿಕವಾಗಿ ಮದ್ರಾಸ್ ಪ್ರೆಸಿಡೆನ್ಸಿಯಿಂದ ಮೈಸೂರು ಸಂಸ್ಥಾನಕ್ಕಾಗಿರುವ ಅನ್ಯಾಯವನ್ನು ಪ್ರತಿಪಾದಿಸಿದ್ದೇವೆ. ಈಗ ನಮಗೆ ದೊರಕಿರುವ ನೀರಿನ ಪಾಲು, ಇದನ್ನೆಲ್ಲ ಗಮನದಲ್ಲಿರಿಸಿಕೊಂಡೇ ಕೊಡಲಾಗಿರುವುದು.

ಈ ಮೇಲಿನ ಮಾತುಗಳನ್ನು ಬರೆಯುವಾಗ, ನಮಗೆ ದೊರಕಿರುವ ಕಾವೇರಿ ನದಿ ನೀರಿನ ಪಾಲು ಸರಿಯಾದುದು, ನ್ಯಾಯಬದ್ಧವಾದುದು ಎಂದು ನಾನು ಹೇಳುತ್ತಿಲ್ಲ. ಅಥವಾ ಈಗ ತಮಿಳುನಾಡಿಗೆ ದಿನವೂ ನೀರು ಬಿಡುವಂತೆ ಆದೇಶಿಸಿರುವ ಸರ್ವೋಚ್ಚ ನ್ಯಾಯಾಲಯದ ಕ್ರಮವು ಸೂಕ್ತವಾದುದು ಎಂದೂ ಹೇಳುತ್ತಿಲ್ಲ.

ಇಂತಹ ಪ್ರಶ್ನೆಗಳಿಗೆ ಉತ್ತರಿಸುವ ವಿವೇಕ, ಲೋಕಜ್ಞಾನಗಳು ನನಗಿವೆ ಎಂದೂ ನಾನು ಭಾವಿಸಿಲ್ಲ. ಆದರೆ ವಾಸ್ತವ ಇದು. ಈ ವರ್ಷ ಮಳೆ ಎಷ್ಟೇ ಬಂದಿರಲಿ. ನಮ್ಮ ಜಲಾಶಯಗಳಲ್ಲಿ ನೀರಿನ ಸಂಗ್ರಹ ಎಷ್ಟೇ ಇರಲಿ. ತಮಿಳುನಾಡು ಸರ್ಕಾರವು ಅರ್ಜಿ ಸಲ್ಲಿಸುತ್ತಿದ್ದಂತೆ, ಸರ್ವೋಚ್ಚ ನ್ಯಾಯಾಲಯವು ಸಂಕಷ್ಟವಿದ್ದರೂ ಸ್ವಲ್ಪವಾದರೂ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚನೆ ನೀಡುತ್ತಿತ್ತು.

ನಮ್ಮಲ್ಲಿ ಒಂದು ಬಿಂದಿಗೆ ಮಾತ್ರ ನೀರಿದೆ ಎಂದಿದ್ದರೆ, ಅದರಲ್ಲೆ ಒಂದು ಚೊಂಬು ನೀರು ಕೊಡುವಂತೆ ಹೇಳುತ್ತಿತ್ತು. ನಮ್ಮಲ್ಲಿ ಒಂದು ಚೊಂಬು ಮಾತ್ರ ನೀರಿದೆ ಎಂದಿದ್ದರೆ, ಅದರಲ್ಲೆ ಒಂದು ಲೋಟ ಕೊಡುವಂತೆ ಸೂಚಿಸುತ್ತಿತ್ತು. 

ಇದರಿಂದ ತಮಿಳುನಾಡಿಗೆ ಎಷ್ಟು ಸಹಾಯವಾಗಬಹುದು ಎನ್ನುವ ಪ್ರಶ್ನೆಯಾಗಲಿ, ಕರ್ನಾಟಕಕ್ಕೆ ಯಾವ ಸಂಕಷ್ಟ ಒದಗಬಹುದು ಎನ್ನುವುದು ಮುಖ್ಯವಾಗುತ್ತಿರಲಿಲ್ಲ.

ಹಾಗಾಗಿ ನಾವಂದುಕೊಂಡಿರುವಂತೆ ನಮ್ಮ ಸಮಸ್ಯೆಗಳು ಉದ್ಭವಿಸಿರುವುದು ಅಸಮರ್ಥ ವಕೀಲರಿಂದ ಇಲ್ಲವೇ ರಾಜಕೀಯ ಇಚ್ಛಾಶಕ್ತಿ ಹೊಂದಿಲ್ಲದ ರಾಜ್ಯ ಸರ್ಕಾರಗಳಿಂದಲ್ಲ. ಕರ್ನಾಟಕದ ಪರವಾಗಿ ಕಳೆದ 1970ರ ದಶಕಗಳಿಂದಲೂ ವಾದಿಸುತ್ತಿರುವ ಫಾಲಿ ಎಸ್. ನಾರಿಮನ್ ಭಾರತದ ಅತ್ಯುತ್ತಮ ವಕೀಲರಲ್ಲೊಬ್ಬರು. ಅವರ ತಂಡದಲ್ಲಿ ಕರ್ನಾಟಕ ಮೂಲದ ಅನುಭವಿ ವಕೀಲರೂ ಇದ್ದಾರೆ.

ಇವರೆಲ್ಲರಿಗೆ ಕರ್ನಾಟಕ ಸರ್ಕಾರವು ಕೈತುಂಬ ಶುಲ್ಕ ನೀಡಿದೆ. ಇವರ ಬದಲಿಗೆ ಮತ್ತಾರನ್ನು ನಾವು ಕರ್ನಾಟಕದ ಪರವಾಗಿ ವಾದಿಸಲು ನೇಮಿಸಿದರೂ, ಅಂತಹ ನ್ಯಾಯವಾದಿಯು ಕರ್ನಾಟಕದ ಜಲಾಶಯಗಳಿಂದ ನೀರು ಬಿಡಲು ಸಾಧ್ಯವಿಲ್ಲ ಎನ್ನುವ ವಾದವನ್ನು ಬಹುಶಃ ಮಂಡಿಸಲಾರರು.

ಏಕೆಂದರೆ ಈ ವಾದವನ್ನು ಮಂಡಿಸಲು ನದಿ ಕಣಿವೆಯ ಮೇಲಿನ ರಾಜ್ಯಕ್ಕೆ ತನ್ನ ಮೂಲಕ ಹರಿಯುವ ನೀರಿನ ಮೇಲೆ ಸಂಪೂರ್ಣ ಹಕ್ಕಿದೆ ಎನ್ನುವ ನ್ಯಾಯ
ಸಿದ್ಧಾಂತವನ್ನು ಮುಂದಿಡಬೇಕಾಗುತ್ತದೆ. ಅಥವಾ ಕುಡಿಯಲು ಮತ್ತು ದಿನನಿತ್ಯದ ಬಳಕೆಗೆ ಸಾಕಾಗುವಷ್ಟು ಮಾತ್ರ ನೀರು ಕರ್ನಾಟಕದ ಜಲಾಶಯಗಳಲ್ಲಿದೆ ಎಂದರು ಎಂದಿಟ್ಟುಕೊಳ್ಳಿ.

ಆಗ ಕಾವೇರಿ ನೀರನ್ನು ಯಾವ ಪ್ರಮಾಣದಲ್ಲಿ ಬೆಂಗಳೂರು ಮತ್ತಿತರ ನಗರಗಳ ಅಗತ್ಯಗಳ ಪೂರೈಕೆಗೆ ಟ್ರಿಬ್ಯುನಲ್ ಹಂಚಿದೆ ಎನ್ನುವುದನ್ನು ಉಪೇಕ್ಷಿಸಿ, ಇರುವ ನೀರೆಲ್ಲ ನಮಗೇ ಬೇಕು ಎಂದು ವಾದಿಸಬೇಕಾಗುತ್ತದೆ. ನನ್ನ ಅನುಮಾನವೆಂದರೆ ಅಂತಹ ವಾದಗಳನ್ನು ಮುಂದಿಡಲು ನಾರಿಮನ್ ಆಗಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ವಾದಿಸುವ ಮತ್ತಾವ ವಕೀಲನಾಗಲಿ ಹಿಂಜರಿಯುತ್ತಾರೆ. ಸ್ಥಾಪಿತ ನ್ಯಾಯಸಿದ್ಧಾಂತದಲ್ಲಿ ಸ್ವಲ್ಪ ಮಟ್ಟಿಗಾದರೂ ತಳಹದಿ ಹೊಂದಿಲ್ಲದ ವಾದವನ್ನು ಯಾರೂ ಮಾಡುವುದಿಲ್ಲ.

ಹಾಗಾಗಿಯೆ ನಾರಿಮನ್ ತಂಡವು ಸ್ವಲ್ಪ ನೀರನ್ನು ಬಿಡುವುದಾಗಿ ಒಪ್ಪಲು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದು ಮತ್ತು ರಾಜ್ಯ ಸರ್ಕಾರವೂ ಆರು ದಿನಗಳ ಮಟ್ಟಿಗೆ ದಿನಕ್ಕೆ 10 ಸಾವಿರ ಕ್ಯುಸೆಕ್‌ನಂತೆ ನೀರು ಬಿಡುವುದಾಗಿ ಪ್ರಮಾಣಪತ್ರವನ್ನು ಕೊಟ್ಟಿತ್ತು. ಚಳವಳಿ ನಡೆಸುವ ಕನ್ನಡಿಗನಿಗೆ ತನ್ನ ಸರ್ಕಾರವೇಕೆ ಅಧಿಕಾರವನ್ನು ತ್ಯಜಿಸಿ ಬೀದಿಗೆ ಇಳಿಯುತ್ತಿಲ್ಲ ಎನ್ನುವ ಪ್ರಶ್ನೆಯೇಳಬಹುದು. ಸರ್ಕಾರವೇ ಬೀದಿಗಿಳಿದರೆ ಸಾಂವಿಧಾನಿಕ ಬಿಕ್ಕಟ್ಟಲ್ಲದೆ ಮತ್ತೆ ಯಾವ ಫಲಿತಾಂಶವೂ ಆಗದು ಎನ್ನುವ ಅರಿವು ಆಡಳಿತ, ವಿರೋಧ ಪಕ್ಷದವರೆಲ್ಲರಿಗೂ ಇದೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವಿದೆ. ನೀರು ಬಿಡುವಂತೆ ಕೇಳುವಾಗ, ತಮಿಳುನಾಡು ಸರ್ಕಾರವು ಕರ್ನಾಟಕವು ಜಲಾಶಯಗಳಿಂದ ನೀರನ್ನು ಕೆರೆಗಳಿಗೆ ಹರಿಸಿ, ಶೇಖರಿಸಿಕೊಳ್ಳುತ್ತಿದೆ ಎನ್ನುವ ವಾದವನ್ನು ನ್ಯಾಯಾಲಯದ ಮುಂದಿಡುತ್ತಿದೆ.

2003ರಿಂದಲೇ ‘ಕಾವೇರಿ ಕುಟುಂಬ’ ಎಂಬ ಸಂಘಟನೆಯನ್ನು ರೂಪಿಸಿ, ಎರಡೂ ರಾಜ್ಯಗಳ ನಡುವಿನ ಸಂಘರ್ಷವನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದ ಅರ್ಥಶಾಸ್ತ್ರಜ್ಞ ಎಸ್. ಜನಕರಾಜನ್ ಅಂತಹವರೂ ಇಂದು ಕರ್ನಾಟಕವು ಕಾವೇರಿ ನದಿಯ ನೀರನ್ನು ತನ್ನ ಕೆರೆಗಳಿಗೆ ಸಾಗಿಸಲು ಒಳಚರಂಡಿಯಾಗಿಸಿಕೊಂಡಿದೆ ಎಂದು ನಂಬುತ್ತಾರೆ.

ಅಂದರೆ ನೀರನ್ನು ನದಿಯಲ್ಲಿ ಸ್ವಾಭಾವಿಕವಾಗಿ ಹರಿಯಲು ಬಿಡುತ್ತಿಲ್ಲ, ಜಲಾಶಯಗಳಲ್ಲದೆ ಇತರ ನೀರು ಶೇಖರಣೆಯ ತಾಣಗಳಲ್ಲಿ ಸಹ ಸಂಗ್ರಹಣೆ ನಡೆಯುತ್ತಿದೆ ಎನ್ನುವುದು ತಮಿಳುನಾಡಿನ ವಾದ. ಇದೇನೂ ಸಂಪೂರ್ಣವಾಗಿ ಸುಳ್ಳಲ್ಲ. ಹಾಗಾಗಿ ಹೂಳು ತುಂಬಿರುವ ನಮ್ಮ ಜಲಾಶಯಗಳಲ್ಲಿ ಹೆಚ್ಚಿನ ನೀರಿಲ್ಲ, ಇರುವ ನೀರು ಕುಡಿಯಲು ಮಾತ್ರ ಸಾಕು ಎಂದು ನಾವು ವಾದಿಸುವುದು ಕಷ್ಟವಾಗುತ್ತಿದೆ.

ಓದುಗರಲ್ಲಿ ನನ್ನ ಸರಳ ಸಲ್ಲಿಕೆಯೆಂದರೆ, ನೀರು ಹಂಚಿಕೆಗೆ ಸಂಬಂಧಿಸಿದ ನ್ಯಾಯಸಿದ್ಧಾಂತವನ್ನು, ನೀರಿನ ಹಕ್ಕುಗಳಿಗೆ ಸಂಬಂಧಿಸಿದ ನಮ್ಮ ಗ್ರಹಿಕೆಗಳನ್ನು ಮರುಚಿಂತನೆ ಮಾಡಬೇಕಾದ ಸವಾಲನ್ನು ಎದುರಿಸುತ್ತಿದ್ದೇವೆ.

ಇದೊಂದು ಬೌದ್ಧಿಕ, ರಾಜಕೀಯ ಮತ್ತು ನೈತಿಕ ಸವಾಲು. ಇದು ತಮಿಳುನಾಡಿನೊಡನೆ ಮತ್ತು ರಾಜ್ಯದೊಳಗೆ ಕಾವೇರಿ ನೀರಿನ ಮೇಲೆ ಯಾರಿಗೆ ಯಾವ ಬಗೆಯ ಹಕ್ಕುಗಳು ಇವೆ ಎನ್ನುವುದನ್ನು ನಿರ್ಧರಿಸಲು, ಸಂಕಷ್ಟ ಬಂದಾಗ ಹೇಗೆ ನೀರಿನ ಹಂಚಿಕೆಯಾಗಬೇಕು ಎನ್ನುವುದನ್ನು ತೀರ್ಮಾನಿಸಲು ಅತ್ಯಗತ್ಯವಾಗಿರುವ ಕ್ರಮ. ಅಂದರೆ ನೀರಿನ ಮೇಲಿನ ಹಕ್ಕುಗಳ ವರ್ಗಶ್ರೇಣಿಯೊಂದು ನಿಗದಿಯಾಗಬೇಕಿದೆ.

ಇದು ಕೃಷಿ ಮತ್ತು ಕುಡಿಯುವ ನೀರಿನ ಪೂರೈಕೆಗಳೆರಡಕ್ಕೂ ಅನ್ವಯವಾಗುವುದು. ಉದಾಹರಣೆಗೆ, ನೀರಿನ ಮೊದಲ ಬಳಕೆಯ ತತ್ವದ (ಪ್ರಿಯಾರ್ ಅಪ್ರಾಪ್ರಿಯೇಶನ್ ಪ್ರಿನ್ಸಿಪಲ್) ಆಧಾರದ ಮೇಲೆ ತಮಿಳುನಾಡು ತನ್ನ ನೀರಿನ ಹಕ್ಕನ್ನು ಸ್ಥಾಪಿಸುತ್ತಿದೆ. ಹಾಗೆಯೆ ಮಂಡ್ಯದ ರೈತರು ಇದೇ ತತ್ವದ ಆಧಾರದ ಮೇರೆಗೆ ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಾರೆ.

ಬೆಳೆಯುತ್ತಿರುವ ಬೆಂಗಳೂರಿಗೆ ಪ್ರತಿ ತಿಂಗಳು ಕಾವೇರಿ ಕಣಿವೆಯಿಂದ 1.5 ಟಿಎಂಸಿ ನೀರು ಸರಬರಾಜಾಗಬೇಕಾದರೆ, ಬೆಂಗಳೂರಿನ ಗೃಹಬಳಕೆಗೆ ನೀರಿನ ಅಗತ್ಯವು ಮಂಡ್ಯದ ರೈತರ ಕೃಷಿ ಪೂರೈಕೆಗಿಂತ ಹೆಚ್ಚಿನ ಆದ್ಯತೆಯನ್ನು ಈಗಿರುವ ನ್ಯಾಯಸಿದ್ಧಾಂತದ ಪ್ರಕಾರ ಪಡೆಯದು. ಅದಕ್ಕಾಗಿಯೆ ಟ್ರಿಬ್ಯುನಲ್‌ನ ತೀರ್ಪಿನಲ್ಲಿ ಬೆಂಗಳೂರಿಗೆ ಕೇವಲ 1.75 ಟಿಎಂಸಿ ನೀರನ್ನು ಕಾವೇರಿಯಿಂದ ನೀಡಿದ್ದು. ಸರಾಸರಿ ಮಳೆಯಾದ ವರ್ಷಗಳಲ್ಲಿ ಬೆಂಗಳೂರಿಗೆ ನೀರು ಒದಗಿಸುವುದು ದೊಡ್ಡ ಸಮಸ್ಯೆಯಲ್ಲ. ಆದರೆ ಸಂಕಷ್ಟದ ವರ್ಷಗಳಲ್ಲಿ ಬೆಂಗಳೂರಿಗೆ ನೀರು ಬೇಕೆಂದರೆ, ಅದರ ಪೂರೈಕೆಯಿಂದ ಮಂಡ್ಯದ ಕೃಷಿ ಅಗತ್ಯಗಳ ಪೂರೈಕೆಗೆ ಅಡ್ಡಬರುವುದಾದರೆ, ಅಂತಹ ವರ್ಷಗಳಲ್ಲಿ ರೈತರಿಗೆ ಪರಿಹಾರ ನೀಡಬೇಕಾಗುತ್ತದೆ. ಇದನ್ನು ಸ್ಪಷ್ಟವಾಗಿ, ಮುಕ್ತವಾಗಿ ಹೇಳಲೇಬೇಕು.

ಇದರ ಜೊತೆಗೆ ಕಾವೇರಿ ಕೊಳ್ಳದುದ್ದಕ್ಕೂ ಕೃಷಿಗೆ ಬಳಸುವ ನೀರನ್ನು ಎಚ್ಚರದಿಂದ ಬಳಸಬೇಕಿದೆ. ಹಿಂದಿನಂತೆ ನೀರನ್ನು ಕಟ್ಟಿ ಕಬ್ಬು, ಭತ್ತ ಬೆಳೆಯುವ ಅಭ್ಯಾಸವನ್ನು ಕರ್ನಾಟಕದಲ್ಲಾಗಲಿ, ತಮಿಳುನಾಡಿನಲ್ಲಾಗಲಿ ಮುಂದುವರೆಸುವುದು ಅಸಾಧ್ಯ. ನಮ್ಮ ಬೆಳೆ ಮಾದರಿಗಳು (ಕ್ರಾಪ್ ಪ್ಯಾಟರ್ನ್) ಬದಲಾಗಬೇಕು, ತುಂತುರು ಮತ್ತು ಹನಿ ನೀರಾವರಿ ಪದ್ಧತಿಗಳನ್ನು ಎಲ್ಲೆಡೆ ಅಳವಡಿಸಿಕೊಳ್ಳಬೇಕು.

ನೀರನ್ನು ಜಲಾಶಯಗಳಿಂದ ಹೊಲ- ಗದ್ದೆಗಳವರೆಗೆ ತೆಗೆದುಕೊಂಡು ಹೋಗುವ ವ್ಯವಸ್ಥೆಯಲ್ಲಿ ಆದಷ್ಟೂ ಕಡಿಮೆ ನೀರು ನಷ್ಟವಾಗುವಂತೆ ಮ ಡಿಕೊಳ್ಳಬೇಕಿದೆ.

ಮೇಕೆದಾಟುವಿನಲ್ಲಿ ಕೃಷ್ಣರಾಜಸಾಗರಕ್ಕಿಂತ ದೊಡ್ಡ  ಜಲಾಶಯವನ್ನು ಕಟ್ಟುವ ಯೋಜನೆಯನ್ನು ಮುಂದಿಟ್ಟಿರುವ ರಾಜ್ಯ ಸರ್ಕಾರವು ಕೃಷಿಯಲ್ಲಾಗಲಿ, ಗೃಹಬಳಕೆಯಲ್ಲಾಗಲಿ ನೀರನ್ನು ಎಚ್ಚರಿಕೆಯಿಂದ ಬಳಸುವ ಬಗ್ಗೆ ಏನೂ ಮಾಡುತ್ತಿಲ್ಲ. ಇಂತಹ ಸೌಕರ್ಯಗಳನ್ನು ಕಟ್ಟಿಕೊಳ್ಳಲು ನಮ್ಮಲ್ಲಿ ತಾಂತ್ರಿಕತೆಯ ಅಥವಾ ಸಂಪನ್ಮೂಲಗಳ ಅಭಾವವಿಲ್ಲ.

ಲಕ್ಷಾಂತರ ಜನರು ಬೀದಿಗಿಳಿದು, ಕೋಟ್ಯಂತರ ಜನರ ದಿನನಿತ್ಯದ ಬದುಕು ಅಸ್ತವ್ಯಸ್ತವಾದಾಗಲೂ ನಮ್ಮ ನಾಯಕರು ಗಳಾರೂ ಮುಕ್ತವಾಗಿ ಸತ್ಯವನ್ನು ಮಾತನಾಡುವ ಧೈರ್ಯ ತೋರಿಸದಿರುವುದು, ಅಗತ್ಯವಿರುವ ಪರ್ಯಾಯಗಳೇನು ಎಂದು ಗುರುತಿಸಿ ಅನುಷ್ಠಾನಗೊಳಿಸದಿರುವುದು ನಮ್ಮ ಪಾಲಿನ ದುರಂತವೇ ಸರಿ. ಇಲ್ಲಿ ದೂರದರ್ಶಿತ್ವ, ಮುತ್ಸದ್ದಿತನ ಮತ್ತು ರಾಜಕೀಯ ಇಚ್ಛಾಶಕ್ತಿಗಳ ಕೊರತೆ ಎದ್ದುಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT